ನೂರೆಂಟು ವಿಘ್ನಗಳನ್ನು ದಾಟಿ ಹೊರ ಬಂದಿದ್ದ ‘ಭಕ್ತ ಕುಂಬಾರ'

ನೂರೆಂಟು ವಿಘ್ನಗಳನ್ನು ದಾಟಿ ಹೊರ ಬಂದಿದ್ದ ‘ಭಕ್ತ ಕುಂಬಾರ'

ನೀವು ಅಂದುಕೊಳ್ಳುತ್ತಿರುವುದು ಸುಳ್ಳು ಎಂದು ಮೊದಲೇ ಹೇಳಿ ಬಿಡುತ್ತೇನೆ. ಏಕೆಂದರೆ ಇದು ವರನಟ ಡಾ. ರಾಜಕುಮಾರ್ ನಟಿಸಿದ ‘ಭಕ್ತ ಕುಂಬಾರ' ಚಿತ್ರದ ಕಥೆ ಅಲ್ಲ. ಇದು ಸುಮಾರು ೭೫ ವರ್ಷಗಳ ಹಿಂದೆ ಅಪ್ರತಿಮ ಸಾಹಸಿ, ಸುಂದರ ಕಲಾವಿದ ಹೊನ್ನಪ್ಪ ಭಾಗವತರ್ ಅವರು ನಿರ್ಮಿಸಿ, ನಟಿಸಿದ ಕನ್ನಡ ಚಲನಚಿತ್ರ. ಅಂದಿನ ಸಮಯದಲ್ಲಿ ಈ ಚಿತ್ರವನ್ನು ನಿರ್ಮಿಸಲು ಮತ್ತು ತೆರೆಗೆ ತರಲು ಭಾಗವತರು ಮಾಡಿದ ಸಾಹಸ ಒಂದೇ ಎರಡೇ? ಅವರಿಗೆ ಬಂದ ವಿಘ್ನಗಳು ಹಲವಾರು. ಆದರೆ ಅವನ್ನೆಲ್ಲಾ ‘ಭಕ್ತ ಕುಂಬಾರ' ನಂತೆಯೇ ಮೆಟ್ಟಿ ನಿಂತ ಇವರ ಸಾಧನೆ ಎಲ್ಲರಿಗೂ ಮಾರ್ಗದರ್ಶಕ ಎಂದರೆ ತಪ್ಪಾಗಲಾರದು. ಹೊನ್ನಪ್ಪ ಭಾಗವತರ್ ಅವರ ಕಥೆ-ವ್ಯಥೆಯನ್ನು ಓದೋಣ ಬನ್ನಿ…

೭೫ ವರ್ಷಗಳ ಹಿಂದೆ ಒಂದು ಚಲನ ಚಿತ್ರ ನಿರ್ಮಾಣ ಮಾಡುವುದು ಎಂದರೆ ಸುಲಭದ ಮಾತಾಗಿರಲಿಲ್ಲ. ಕರ್ನಾಟಕದಲ್ಲಿ ಈಗಿನಂತೆ ಸ್ಟುಡಿಯೋ ಸೌಲಭ್ಯಗಳೂ ಇರಲಿಲ್ಲ. ಮದ್ರಾಸಿಗೆ (ಈಗಿನ ಚೆನ್ನೈ) ಹೋಗಿ ಅಲ್ಲಿ ಚಿತ್ರೀಕರಣ, ರೆಕಾರ್ಡಿಂಗ್ ಎಲ್ಲಾ ಮುಗಿಸಿ ಬೆಂಗಳೂರಿಗೆ ಫಿಲ್ಮ್ ಗಳನ್ನು ತಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡಬೇಕಿತ್ತು. ಸುಂದರ ವದನದ ಚೆಲುವ ಎಂದೇ ಖ್ಯಾತಿಯನ್ನು ಪಡೆದಿದ್ದ ಹೊನ್ನಪ್ಪ ಭಾಗವತರು ಈ ಚಿತ್ರದ ನಿರ್ಮಾಣಕ್ಕೆ ತೆಗೆದುಕೊಂಡ ಸಮಯ ಬರೋಬ್ಬರಿ ಎರಡು ವರ್ಷಗಳು. ಈ ಎರಡು ವರ್ಷಗಳಲ್ಲಿ ಅವರು ಅನುಭವಿಸಿದ ನೋವು-ಕಷ್ಟಗಳು ನೂರಾರು. 

ಆ ಸಮಯದಲ್ಲಿ ಹೊನ್ನಪ್ಪ ಭಾಗವತರು ಕನ್ನಡ ಚಿತ್ರಗಳಲ್ಲಿ ಮಾತ್ರವಲ್ಲದೆ ತಮಿಳು ಚಿತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಅವರು ಯಾವ ಸಮಯಕ್ಕೆ ‘ಭಕ್ತ ಕುಂಬಾರ' ಚಿತ್ರ ನಿರ್ಮಿಸಲು ಮನಸ್ಸು ಮಾಡಿದರೋ ದೇವರೇ ಬಲ್ಲ. ಆದರೆ ಆ ಸಮಯ ಪೌರಾಣಿಕ ಚಿತ್ರಗಳಿಗೆ ಬಹಳ ಬೇಡಿಕೆ ಇತ್ತು. ಭಕ್ತ ಕುಂಬಾರ ಬಹಳ ಮನಮಿಡಿಯುವ ಭಕ್ತಿ ಪ್ರಧಾನ ಕಥೆ. ಅದಕ್ಕಾಗಿ ಅದರ ಸಂಭಾಷಣೆಯನ್ನು ಬರೆಯುವ ಹೊಣೆಯನ್ನು ಭಾಗವತರು ಅಂದಿನ ಖ್ಯಾತ ಸಂಭಾಷಣೆಕಾರರಾಗಿದ್ದ ಹುಣಸೂರು ಕೃಷ್ಣಮೂರ್ತಿಯವರಿಗೆ ಒಪ್ಪಿಸಿದರು. ಬೆಂಗಳೂರಿನಲ್ಲಿ ನೆಲೆಸಿದ್ದ ಹುಣಸೂರು ಅವರನ್ನು ಮದ್ರಾಸಿಗೆ ಕರೆಸಿಕೊಂಡು ಸಂಭಾಷಣೆ ಬರೆಯುವಂತೆ ಒಪ್ಪಿಸಿದರು. ಆದರೆ ಅದೇನಾಯಿತೋ ಇವರಿಬ್ಬರ ನಡುವೆ ಯಾವುದೋ ವಿಚಾರಕ್ಕೆ ತಕರಾರು ಕಂಡುಬಂದು ಹುಣಸೂರು ಕೃಷ್ಣಮೂರ್ತಿಯವರು ಮರಳಿ ಬೆಂಗಳೂರಿಗೆ ತೆರಳಿದರು. ಇದರಿಂದ ವಿಚಲಿತರಾದ ಹೊನ್ನಪ್ಪರು ಈ ಚಿತ್ರಕ್ಕೆ ಗೀತೆ ರಚನೆ ಮಾಡಲು ಬಂದಿದ್ದ ಕು.ರ.ಸೀತಾರಾಮ ಶಾಸ್ತ್ರಿಗಳಿಗೆ ಸಂಭಾಷಣೆ ಬರೆಯುವ ಹೊಣೆಯನ್ನು ಹೊರಿಸಿದರು. ಆದರೆ ಏನೋ ಕಾರಣಗಳಿಂದ ಚಿತ್ರೀಕರಣ ಪ್ರಾರಂಭವಾಗುವುದು ತಡವಾಯಿತು. ಇದನ್ನೇ ಕಾದು ಕೂತಿದ್ದ ಪತ್ರಿಕೆಗಳು ಹೊನ್ನಪ್ಪ ಭಾಗವತರ ಮೇಲೆ ಇಲ್ಲ ಸಲ್ಲದ ಆಪಾದನೆ ಮಾಡಿ ವರದಿ ಬರೆಯಲು ಪ್ರಾರಂಭಿಸಿದರು. ಇದನ್ನೆಲ್ಲಾ ಓದಿ ರೋಸಿಹೋದ ಭಾಗವತರು ಈ ಚಿತ್ರದ ನಿರ್ಮಾಣವನ್ನೇ ಕೈಬಿಡುವ ಯೋಚನೆ ಮಾಡಿದರು. ಆದರೂ ಅವರ ಮನಸ್ಸು ಚಿತ್ರ ಮಾಡಲೇ ಬೇಕು ಎಂದು ಹಠ ಹಿಡಿದಿತ್ತು. ಮತ್ತೆ ನಿರ್ಮಾಣ ಪ್ರಾರಂಭ ಮಾಡಿದರು. 

ಮದ್ರಾಸಿನಲ್ಲಿದ್ದ ತಮಿಳು ಕಲಾವಿದರಿಂದ ಸಂಗೀತ ನೀಡಲು ಮನಸ್ಸು ಮಾಡದ ಭಾಗವತರು ಬೆಂಗಳೂರಿನಿಂದ ಮದ್ರಾಸಿಗೆ ೧೫ ಮಂದಿ ಕನ್ನಡಿಗರ ವಾದ್ಯ ತಂಡವನ್ನು ಕರೆಯಿಸಿಕೊಂಡರು. ಅವರನ್ನು ಮದ್ರಾಸಿಗೆ ಕರೆಸಿಕೊಂಡು ಸುಮಾರು ಎರಡು ತಿಂಗಳ ಕಾಲ ಸಮಯ ವ್ಯರ್ಥ ಮಾಡಿಕೊಂಡದ್ದಕ್ಕಾಗಿ ಹೊನ್ನಪ್ಪ ಭಾಗವತರು ಕಳೆದುಕೊಂಡ ಹಣ ಬರೋಬ್ಬರಿ ೩೦ ಸಾವಿರ ರೂಪಾಯಿಗಳು. ಅಂದಿನ ಕಾಲಕ್ಕೆ ಇದು ಬಹುದೊಡ್ಡ ಮೊತ್ತವಾಗಿತ್ತು ಆದರೂ ಹಠ ಬಿಡದ ಭಾಗವತರು ಮರಳಿ ಬೆಂಗಳೂರಿಗೆ ಬಂದು ರಾಘವೇಂದ್ರ ರಾವ್, ಪಂಡರೀಬಾಯಿ, ಲಕ್ಷ್ಮೀಬಾಯಿ ಮೊದಲಾದ ಅಂದಿನ ಖ್ಯಾತ ಕಲಾವಿದರುಗಳಿಗೆ ಮುಂಗಡ ಹಣ ನೀಡಿ ಮದ್ರಾಸಿಗೆ ಕರೆಯಿಸಿಕೊಂಡರು. ಅವರಿಗಾಗಿ ಒಂದು ಬಂಗಲೆಯನ್ನೂ ಕಾದಿರಿಸಿದರು. 

ಭಾಗವತರು ತಮ್ಮ ಈ ಕನಸಿನ ಚಿತ್ರಕ್ಕೆ ಬೊಮ್ಮನ್ ಡಿ ಇರಾನಿ ಎಂಬ ನಿರ್ದೇಶಕರಕನ್ನು ಆಯ್ಕೆ ಮಾಡಿಕೊಂಡರು. ಇವರನ್ನು ಆರಿಸಿದಕ್ಕೂ ಒಂದು ಕಾರಣವಿದೆ. ಬೊಮ್ಮನ್ ಇರಾನಿಯವರ ಬಳಿ ಹಣಕಾಸಿನ ನೆರವು ಕೇಳಿ ಅದರಿಂದ ಚಿತ್ರವನ್ನು ಮುಗಿಸಬೇಕೆಂದು ಹೊನ್ನಪ್ಪರ ಆಸೆಯಾಗಿತ್ತು. ಆದರೆ ಬೊಮ್ಮನ್ ಇರಾನಿಯವರು ಭಾಗವತರಿಗೆ ಯಾವುದೇ ಹಣಕಾಸಿನ ಸಹಕಾರ ನೀಡಲಿಲ್ಲ. ಇದರಿಂದ ಭಾಗವತರಿಗೆ ಬಹಳ ಆರ್ಥಿಕ ಸಂಕಷ್ಟ ಉಂಟಾಯಿತು. ಬೊಮ್ಮನ್ ಇರಾನಿಯವರು ಹಣಕಾಸಿನ ನೆರವು ನೀಡುವ ಯಾವುದೇ ಲಕ್ಷಣ ಕಂಡು ಬರದೇ ಇದ್ದುದರಿಂದ ಭಾಗವತರು ಅವರನ್ನು ನಿಧಾನವಾಗಿ ಚಲನ ಚಿತ್ರದ ಕುರಿತಾದ ಚರ್ಚೆಗಳಿಂದ ದೂರವಿರಿಸಿದರು. ಇದರಿಂದ ಕೋಪಗೊಂಡ ಬೊಮ್ಮನ್ ಇರಾನಿ ಚಿತ್ರದ ನಿರ್ದೇಶನವನ್ನೇ ಬಿಟ್ಟು ಹೋದರು. ನಂತರ ಅವರ ಬದಲು ನಿರ್ದೇಶನದ ಹೊಣೆ ಪಿ.ಪುಲ್ಲಯ್ಯನವರ ಹೆಗಲೇರಿತು. ಈ ವಿಷಯವನ್ನೂ ಮುಂದಿಟ್ಟು ಪತ್ರಿಕೆಗಳು ಹೊನ್ನಪ್ಪ ಭಾಗವತರ ನಿಲುವನ್ನು ಟೀಕಿಸಲು ತೊಡಗಿದವು. ಆದರೆ ಭಾಗವತರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. 

ಮದರಾಸಿನ ಎಂ ವಿ ಎಂ ಸ್ಟುಡಿಯೋದಲ್ಲಿ ಭಕ್ತ ಕುಂಬಾರ ಚಿತ್ರದ ಚಿತ್ರೀಕರಣ ಪ್ರಾರಂಭವಾಯಿತು. ಸಮಸ್ಯೆಗಳೆಲ್ಲಾ ಮುಗಿಯಿತು ಎಂದು ಅಂದುಕೊಳ್ಳುತ್ತಿರುವಾಗಲೇ ಮತ್ತೊಂದು ಭಯಂಕರ ಸಮಸ್ಯೆ ಅವರ ಮುಂದೆ ಎದ್ದು ನಿಂತಿತು. ಅದು ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆ. ಚಿತ್ರದಲ್ಲಿ 'ಭಕ್ತ ಕುಂಬಾರ'ನು ಕಾಲಿನಿಂದ ಮಣ್ಣನ್ನು ತುಳಿಯುತ್ತಾ ಹಾಡುವ ಸನ್ನಿವೇಶ ಬರುತ್ತದೆ. ಆ ಸನ್ನಿವೇಶದ ಚಿತ್ರೀಕರಣವಾಗುತ್ತಿರುವಾಗ ಹೊನ್ನಪ್ಪ ಭಾಗವತರ ಕಾಲಿಗೆ ಆ ಮಣ್ಣಿನಲ್ಲಿದ್ದ ತುಕ್ಕು ಹಿಡಿದ ಕಬ್ಬಿಣದ ತುಂಡೊಂದು ಚುಚ್ಚಿಬಿಟ್ಟಿತು. ಬಟ್ಟೆಯಿಂದ ಕಟ್ಟಿದರೂ ರಕ್ತ ಬರುವುದು ನಿಲ್ಲಲಿಲ್ಲ. ಚಿತ್ರೀಕರಣ ನಿಲ್ಲಿಸಿ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ಈ ಕಾರಣದಿಂದ ಒಂದು ವಾರ ಚಿತ್ರೀಕರಣ ನಡೆಯಲಿಲ್ಲ. 

ಒಂದು ವಾರ ಬಿಟ್ಟು ಹೇಗೂ ಚಿತ್ರೀಕರಣ ಪ್ರಾರಂಭವಾಯಿತಾದರೂ ಬೆನ್ನು ಬಿದ್ದ ದುರಾದೃಷ್ಟ ಹೊನ್ನಪ್ಪರನ್ನು ಬಿಡಲಿಲ್ಲ. ಆ ಚಿತ್ರದಲ್ಲಿ ಕಾಲ್ತುಳಿತಕ್ಕೆ ಮಣ್ಣಿನಲ್ಲಿ ಹೂತು ಹೋಗುವಂತೆ ನಟಿಸಬೇಕಿದ್ದ ಪುಟ್ಟ ಮಗುವಿಗೆ ಜ್ವರ ಬಾಧೆ ಕಾಣಿಸಿಕೊಂಡಿತು. ಮತ್ತೆ ಚಿತ್ರೀಕರಣ ನಿಂತಿತು. ಒಂದು ವಾರದ ಬಳಿಕ ಮತ್ತೆ ಪ್ರಾರಂಭವಾದಾಗ ಚಿತ್ರದ ಪ್ರಮುಖ ಪಾತ್ರದಲ್ಲಿದ್ದ ನಟಿ ಲಕ್ಷ್ಮೀಬಾಯಿಯವರ ಕಾಲ್ ಶೀಟ್ ನ ಸಮಸ್ಯೆ ಎದುರಾಯಿತು. ಆಗ ಅನಿವಾರ್ಯವಾಗಿ ಹಳೆಯ ಶಾಟ್ ಗಳ ನಡುವೆ ಹೊಸ ಶಾಟ್ ಗಳನ್ನು ಸೇರಿಸಿ ಸಂಕಲನ ಮಾಡಿಸಿ ಹೇಗೂ ಚಿತ್ರ ಮುಗಿಸಿದರು ಹೊನ್ನಪ್ಪ ಭಾಗವತರು. ಚಿತ್ರದ ಚಿತ್ರೀಕರಣ ಎಲ್ಲಾ ಮುಗಿದು ಚಿತ್ರ ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಬೆನ್ನು ಬಿಡದ ದುರಾದೃಷ್ಟದ ಬೇತಾಳ ಮತ್ತೆ ಹೊನ್ನಪ್ಪ ಭಾಗವತರ ಹಿಂದೆ ಬಿದ್ದ.

ಚಿತ್ರೀಕರಣದ ಸಮಯದಲ್ಲಿ ಕೈಕೊಟ್ಟು ಹೋಗಿದ್ದ ನಿರ್ದೇಶಕ ಬೊಮ್ಮನ್ ಇರಾನಿ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋದರು. ಚಿತ್ರ ಬಿಡುಗಡೆ ಮಾಡಬಾರದು ಎಂದು ಕೋರ್ಟ್ ಸ್ಟೇ ನೀಡಿತು. ಅಷ್ಟರಲ್ಲಾಗಲೇ ಹೊನ್ನಪ್ಪ ಭಾಗವತರು ಈ ವಿಷಯಗಳಲ್ಲಿ ಪಳಗಿ ಬಿಟ್ಟಿದ್ದರು. ಅವರು ಕೂಡಲೇ ಕೋರ್ಟ್ ಗೆ ರಿಸೀವರ್ ಒಬ್ಬನನ್ನು ನೇಮಿಸಿ, ಅನುಮತಿ ಪಡೆದು ಚಿತ್ರವನ್ನು ಬೆಂಗಳೂರಿನ ‘ಸ್ಟೇಟ್ಸ್' ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಅನುವಾದರು. ಆಗ ಬಂತು ಮತ್ತೊಂದು ಸಮಸ್ಯೆ. ಅದೇ ಸಮಯಕ್ಕೆ ‘ಭಕ್ತ ಕುಂಬಾರ' ಚಿತ್ರ ಕಥೆಯನ್ನೇ ಹೋಲುವ ‘ಚಕ್ರಧಾರಿ' ಎಂಬ ತಮಿಳು ಚಿತ್ರ ಬಿಡುಗಡೆಗಾಗಿ ಕಾಯುತ್ತಿತ್ತು. ತಮಿಳು ಚಿತ್ರಕ್ಕೆ ‘ಸ್ಟೇಟ್ಸ್' ಸಿನೆಮಾ ಮಂದಿರ ಸಿಕ್ಕಿತು. ಆದರೆ ಹೊನ್ನಪ್ಪ ಭಾಗವತರ ಕನ್ನಡ ಚಿತ್ರಕ್ಕೆ ಸಿಗಲಿಲ್ಲ. (ಇಂದೂ ತಮಿಳು, ತೆಲುಗು ಮುಂತಾದ ಅನ್ಯ ಭಾಷೆಗೆ ಸಿಗುವಷ್ಟು ಪ್ರಾಧಾನ್ಯತೆ ಕನ್ನಡ ಚಿತ್ರಗಳಿಗೆ ಕರ್ನಾಟಕದ ಚಿತ್ರಮಂದಿರದಲ್ಲಿ ಸಿಗುತ್ತಿಲ್ಲ) ಚಿತ್ರ ಮಂದಿರದವರು ಕೈಕೊಟ್ಟರೂ ಪ್ರೇಕ್ಷಕರು ಕೈಬಿಡಲಿಲ್ಲ. ‘ವಿಜಯಲಕ್ಷ್ಮೀ’ ಚಿತ್ರಮಂದಿರದಲ್ಲಿ ಬಿಡುಗಡೆಯಾದ ‘ಭಕ್ತ ಕುಂಬಾರ' ಚಿತ್ರ ಜನಮನ್ನಣೆ ಪಡೆದು ಅದ್ಭುತ ಯಶಸ್ಸು ಪಡೆಯಿತು. ಅದಕ್ಕೆ ಪ್ರತಿಸ್ಪರ್ಧಿಯಾಗಿದ್ದ ‘ಚಕ್ರಧಾರಿ' ಚಿತ್ರ ಸೋತು ಸುಣ್ಣವಾಗಿ ಹೋಯಿತು.

ಸುಮಾರು ನಾಲ್ಕು ಲಕ್ಷ (ಅಂದಿನ ಕಾಲಕ್ಕೆ) ವೆಚ್ಚದಲ್ಲಿ ತಯಾರಾದ ‘ಭಕ್ತ ಕುಂಬಾರ' ಚಲನ ಚಿತ್ರವು ಕರ್ನಾಟಕದಾದ್ಯಂತ ಹತ್ತು ಕೇಂದ್ರಗಳಲ್ಲಿ ಬಿಡುಗಡೆಯಾಗಿ ಬಹು ಯಶಸ್ಸನ್ನು ಕಂಡಿತು. ಹೊನ್ನಪ್ಪ ಭಾಗವತರ ಹೆಸರು ಕರ್ನಾಟಕದಾದ್ಯಂತ ಮನೆಮಾತಾಯಿತು. ನೂರೆಂಟು ಸಂಕಷ್ಟಗಳನ್ನು ಎದುರಿಸಿ ಗೆದ್ದ ಹೊನ್ನಪ್ಪ ಭಾಗವತರು ನಂತರದ ದಿನಗಳಲ್ಲಿ ಬಹಳಷ್ಟು ಯಶಸ್ಸನ್ನು ಕಂಡರು. ಇವರ ವಿರುದ್ಧ ಮೊಕದ್ದಮೆ ಹೂಡಿದ್ದ ಬೊಮ್ಮನ್ ಇರಾನಿ ನ್ಯಾಯಾಲಯದಲ್ಲಿ ಸೋತು ಹೋದರು. ಅವರಿಂದ ಪರಿಹಾರವನ್ನು ವಸೂಲು ಮಾಡುವ ಅವಕಾಶವಿದ್ದರೂ ಹೊನ್ನಪ್ಪ ಭಾಗವತರು ಉದಾರ ಮನಸ್ಸಿನಿಂದ ಆ ಕೆಲಸ ಮಾಡಲು ಹೋಗಲಿಲ್ಲ. ಬೊಮ್ಮನ್ ಅವರನ್ನು ಕ್ಷಮಿಸಿ ಬಿಟ್ಟರು. ಅವರಿಂದ ಆದ ನಷ್ಟಕ್ಕೆ ಪ್ರತಿಯಾಗಿ ಒಂದು ಪೈಸೆಯನ್ನೂ ಪಡೆಯದೇ ಕರ್ನಾಟಕದವರು ಹೃದಯ ಶ್ರೀಮಂತರು ಎಂಬ ಮಾತನ್ನು ನಿರೂಪಿಸಿಬಿಟ್ಟರು. ಆದರೆ ಬಹಳ ಬೇಸರದ ಸಂಗತಿ ಎಂದರೆ ಮದರಾಸಿನ ಲ್ಯಾಬೋರೇಟರಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಈ ಚಿತ್ರದ ನೆಗೆಟಿವ್ ಗಳೆಲ್ಲಾ ಸುಟ್ಟುಹೋದವು. ಆದರೆ ಬಹಳಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದರೂ ಹೊನ್ನಪ್ಪ ಭಾಗವತರೆಂಬ ಸೋಲರಿಯದ ಸರದಾರ ಉತ್ತಮ ನಟ ಎಂಬ ಹೆಸರು ಪಡೆದುಕೊಂಡು ಜನಜನಿತರಾದರು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ