ನೂರ್ಕಾಲ ಬಾಳೋಣ!
ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರುತಿಹುದು ಸಾವು |
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ ||
ಸಾವಿಲ್ಲದ ಜೀವಿಗಳು ಇವೆಯೇ? ಸಾವು ಖಚಿತವೆಂಬ ಸತ್ಯವನ್ನು ಒಪ್ಪದವರು ಇದ್ದಾರೆಯೇ? ಯಾವುದೇ ಸಿದ್ಧಾಂತ, ತತ್ವ, ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದೀತು, ಆದರೆ ಎಲ್ಲರೂ ಸಾಯುತ್ತಾರೆ ಎಂಬ ಬಗ್ಗೆ ಭಿನ್ನಾಭಿಪ್ರಾಯವಿರಲಾರದು. ಸಾಯುವುದು ಗೊತ್ತಿದ್ದರೂ ಮನುಷ್ಯರು ಚಿರಂಜೀವಿಗಳಂತೆ ವರ್ತಿಸಿ, ಎಲ್ಲವೂ ಬೇಕು, ತಮಗೊಬ್ಬರಿಗೇ ಬೇಕು ಎಂದು ಏಕೆ ಹಪಹಪಿಸುತ್ತಾರೆಂಬುದು ಚೋದ್ಯವೇ ಸರಿ. ತರ್ಕಿಸುತ್ತಾ ಹೋದರೆ ಬೇಕು ಎಂಬುದು ಪ್ರತಿ ಜೀವಿಯ ಅಂತರ್ಗತ ಸ್ವಭಾವವೆಂಬುದನ್ನು ಒಪ್ಪಲೇಬೇಕು. ಇರುವ ಸ್ಥಿತಿಗಿಂತ ಮೇಲೇರಬೇಕು ಎಂಬ ಪ್ರಬಲ ಇಚ್ಛೆ ಎಲ್ಲರಿಗೂ ಸಹಜ. ಈ ಬೇಕು ಅನ್ನುವುದು ಯಾವ ಹಂತದಲ್ಲೇ ಆಗಲಿ, ಸಾಕು ಎಂಬ ಭಾವನೆ ಮೂಡಲು ಬಿಡುವುದಿಲ್ಲ. ಅಂದುಕೊಂಡಿದ್ದಂತೆ ಬಯಸಿದ್ದು ಸಿಕ್ಕಿದ ತಕ್ಷಣದಲ್ಲೇ ಅದಕ್ಕಿಂತ ಮೇಲಿನ ಬೇಕು ಧುತ್ತೆಂದು ಆ ಸ್ಥಾನವನ್ನು ಆಕ್ರಮಿಸಿಬಿಡುತ್ತದೆ. ಮನುಷ್ಯೇತರ ಜೀವಿಗಳಿಗಿಂತ ವಿವೇಚನೆ ಮಾಡುವ ಶಕ್ತಿ ಹೊಂದಿರುವ ಮಾನವಜೀವಿಗಳಲ್ಲಿ ಈ ಬೇಕುವಿನ ಪ್ರಮಾಣ ಜಾಸ್ತಿ. ಈ ಬೇಕುವಿನಿಂದಲೇ ಜೀವಚಕ್ರ ತಿರುಗುತ್ತಿದೆ. ಬೇಕುಗಳನ್ನು ಮೀರಿ ಯಾವುದೂ ಬೇಡವೆಂದು ವಿರಾಗಿಗಳಾದವರಿಗೂ ಮೋಕ್ಷ ಸಾಧಿಸಬೇಕೆಂಬ ದೊಡ್ಡ ಬೇಕು ಇರುತ್ತದೆ. ಈ ಬೇಕುವಿಗಾಗಿಯೇ ಅವರು ಇತರ ಪ್ರಾಪಂಚಿಕ ಬೇಕುಗಳನ್ನು ದೂರಮಾಡಿರುತ್ತಾರೆ!
ಜೀವ ಹೋಗಲು ಈಗಲೋ ಆಗಲೋ ಎನ್ನುತ್ತಿರುವಾಗಲೂ ಆ ಜೀವ ಬದುಕಲು ತುಡಿಯುತ್ತಿರುತ್ತದೆ. ಇಷ್ಟಾದರೂ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರೂ ಇರುತ್ತಾರೆ. ಬಹುಷಃ ಅದಕ್ಕೆ ಕಾರಣ ಈ ಜನ್ಮದಲ್ಲಿ ಸಿಗದಿದ್ದುದು ಮುಂದಿನ ಜನ್ಮದಲ್ಲಾದರೂ ಸಿಗಲಿ ಎಂಬ ಭಾವವೂ ಇದ್ದಿರಬಹುದು. ಬಡತನ, ಸಾಂಸಾರಿಕ ಸಮಸ್ಯೆಗಳು, ಇತ್ಯಾದಿಗಳಿಂದ ರೋಸಿಹೋದವರು, ಭಗ್ನಪ್ರೇಮಿಗಳು, ಮುಂತಾದವರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಡೆದು, ಸಾಯುವುದರಿಂದ ಸಮಸ್ಯೆ ಪರಿಹಾರವಾಗುವುದೇ ಎಂದು ವಿಚಾರಿಸಿದರೆ ಅವರು ಬಹುಷಃ ಸಾಮಾನ್ಯವಾಗಿ ಹೇಳುವುದೇನೆಂದರೆ ಅವರು ಬಯಸಿದ್ದುದು ಈ ಜನ್ಮದಲ್ಲಿ ಸಿಗುವುದೇ ಇಲ್ಲ, ಅದು ಇಲ್ಲದೇ ಜೀವನ ವ್ಯರ್ಥ, ತಮ್ಮ ಸಮಸ್ಯೆಗೆ ಈ ಜನ್ಮದಲ್ಲಿ ಪರಿಹಾರ ಸಿಕ್ಕುವುದೇ ಇಲ್ಲ, ಇತ್ಯಾದಿ ಕಾರಣಗಳನ್ನು ಕೊಟ್ಟಾರು. ಗಮನಿಸಬೇಕಾದುದೇನೆಂದರೆ, ಅವರ ಬೇಕುಗಳಿಗಾಗಿಯೇ ಅವರು ಸಾಯುತ್ತಾರೆ. ಏಕೆಂದರೆ ಅದು ಅವರಿಗೆ ಬೇಕಾಗಿದೆ, ಬೇಕೆನಿಸಿದಂತೆ ಬದುಕುವುದು ಅವರಿಗೆ ಬೇಕಿದೆ!
ಬಯಸಿದರು ಸಾವೆ ಬಯಸದಿದ್ದರು ಸಾವೆ
ಬೇಡವೆಂದರೆ ನೀನು ಬರದಿಹುದೆ ಸಾವು |
ಬೇಡದಿರು ಮನವೆ ಬೇಡದಿಹ ಸಾವ
ಅಡ್ಡದಾರಿಯಲಿ ನುಗ್ಗದಿರು ಮೂಢ ||
ಈ ಸಾವಿಗೆ ನಾಚಿಕೆಯಿಲ್ಲ; ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಿರುವಾಗ ಬಯಸಿ ಏಕೆ ಕರೆಯಬೇಕು? ಅದು ಬರುವವರೆಗೂ ಬದುಕಿರೋಣ. ತಾನಾಗಿ ಬಂದಾಗ ಸಂತೋಷದಿಂದ ಹೋಗೋಣ. ನಗುತ್ತಾ ಸಾವನ್ನು ಅದು ಬರುವಾಗ ಮಿತ್ರನಂತೆ ಬರಮಾಡಿಕೊಳ್ಳೋಣ. ೮೪ ಲಕ್ಷ ವಿವಿಧ ಜೀವಿಗಳ ಪೈಕಿ ವಿರಳವಾದ ಮಾನವಜನ್ಮ ಹೊಂದುವುದು ಆ ಪರಮಾತ್ಮನ ಕರುಣೆಯಲ್ಲವೇ? ವೇದಗಳ ಪ್ರಕಾರ ಮತ್ತು ಭಾರತೀಯರ ನಂಬಿಕೆಯಂತೆ ಹುಟ್ಟು-ಸಾವುಗಳ ಚಕ್ರ ಸದಾ ತಿರುಗುತ್ತಿದ್ದು ಜೀವಿಗಳು ಹುಟ್ಟುತ್ತಾ, ಸಾಯುತ್ತಾ ಇದ್ದರೂ ಈ ಜೀವಿಗಳಿಗೆ ಚೈತನ್ಯದಾಯಕವಾದ ಆತ್ಮ ಮಾತ್ರ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ; ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಆದರೆ, ಇಲ್ಲಿ ಒಂದು ವಿಶೇಷ ಅಂಶವಿದೆ. ಮುಂದೆ ಪಡೆಯುವ ಜನ್ಮ ಈ ಜನ್ಮದಲ್ಲಿ ಮಾಡಿದ ಕರ್ಮಗಳ ಸಂಚಿತಾರ್ಜಿತಫಲವೆಂದು ವೇದ ಸಾರಿದೆ.
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮.)
ಪರಮಾತ್ಮನ ನ್ಯಾಯವಿಧಾನದಲ್ಲಿ ಒಡಕಾಗಲೀ, ದೋಷವಾಗಲೀ ಇಲ್ಲ. ಅವನು ಜೀವಿಗಳಲ್ಲಿ ಇಟ್ಟಿರುವ ಗೂಢವಾದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು (ಕರ್ಮಫಲವಿಪಾಕ) ತಯಾರು ಮಾಡಿದವರೇ ಉಣ್ಣಬೇಕಿದೆ. ಇತರರ ಸಹಾಯದಿಂದ, ಅಡ್ಡಮಾರ್ಗದಿಂದ ಇದನ್ನು ತಪ್ಪಿಸಿಕೊಳ್ಳಬಹುದೆಂಬ ಅವಕಾಶ ಇಲ್ಲಿಲ್ಲ ಎಂಬುದು ಇದರ ಅರ್ಥ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಹೀಗಿರುವಾಗ ಪುಣ್ಯವಶಾತ್ ಪಡೆದಿರುವ ಮಾನವ ಜನ್ಮವನ್ನು ಇರುವವರೆಗೂ ಸಾರ್ಥಕ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
ಸಾಯುವುದು ಸುಲಭ, ಬದುಕುವುದು ಕಷ್ಟ. ಸುಲಭವೆಂದು ಸಾಯಲಾಗುವುದೇ? ಕಷ್ಟವಾದರೂ ಬದುಕಬೇಕು. ಬದುಕಬೇಕೆಂಬ ಅದ್ಭುತ ಇಚ್ಛಾಶಕ್ತಿಗೆ ದುರ್ಯೋಧನ ಸಾಕ್ಷಿಯಾಗಿದ್ದಾನೆ. ಅವನ ಕಣ್ಣೆದುರಿಗೇ ಭೀಷ್ಮ, ದ್ರೋಣ ಮೊದಲಾದ ಅತಿರಥ, ಮಹಾರಥರು ಹೋದರು. ಕರ್ಣ ಹೋದ, ಸೋದರರು ಹೋದರು, ಆದರೆ ಅವನಿಗೆ ಇನ್ನೂ ವಿಶ್ವಾಸವಿತ್ತು. ಶಲ್ಯ ಇದ್ದಾನೆ, ತಾನೂ ಇದ್ದೇನೆ. ಯುದ್ಧದಲ್ಲಿ ಗೆಲ್ಲುತ್ತೇನೆ, ಬದುಕುತ್ತೇನೆ ಎಂಬ ವಿಶ್ವಾಸ ಸಾಯುವವರೆಗೂ ಇತ್ತು. ಮನುಷ್ಯ ಕನಸು ಕಾಣುವುದನ್ನು ನಿಲ್ಲಿಸಿದಾಗ ಸಾಯತೊಡಗುತ್ತಾನೆ. ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದಂತೆ, ಆಶಾವಾದವೇ ಜೀವನ, ನಿರಾಶಾವಾದವೇ ಮರಣ. ಪರಮಾತ್ಮ ಯಾವ ಜೀವಿ ಎಷ್ಟು ಬದುಕಬೇಕು, ಎಷ್ಟು ಬಾಳಬೇಕು ಎಂಬುದನ್ನು ನಿರ್ಧರಿಸಿರುತ್ತಾನೆ. ಅದಕ್ಕೆ ಮೊದಲು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ. ಸಾಯಲು ಬಯಸುವ ದುರಾಸೆ ಜೀವಿಯ ಇಚ್ಛಾಶಕ್ತಿಯನ್ನೇ ಹಾಳುಮಾಡುತ್ತದೆ. ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಿರುವವರ ಬಹಳಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಈಗಲೂ ನೂರು ವರ್ಷಗಳನ್ನು ಮೀರಿ ಜೀವಿಸಿರುವ ಹಲವರು ನಮ್ಮ ನಡುವೆ ಇದ್ದಾರೆ. ಅದಮ್ಯ ಜೀವನೋತ್ಸಾಹದ ಚಿಲುಮೆ, ನಾಲ್ಕು ವೇದಗಳನ್ನು ಸಂಪೂರ್ಣ ಅಧ್ಯಯನ ಮಾಡಿ ಚತುರ‍್ವೇದಿ ಎಂಬ ಸಾರ್ಥಕ ಹೆಸರನ್ನು ಪಡೆದಿರುವ, ವೇದದ ಸಾರ ಮತ್ತು ಉದ್ದೇಶಗಳನ್ನು ಈಗಲೂ ಸಾರುತ್ತಿರುವ, ಬೆಂಗಳೂರಿನ ೧೧೯ ವರ್ಷಗಳ ಅನುಪಮ ಸಾಧಕ ಮಾರ್ಗದರ್ಶಿ ಪಂ. ಸುಧಾಕರ ಚತುರ‍್ವೇದಿಯವರು ಇಚ್ಛಾಶಕ್ತಿಗೆ ಜ್ವಲಂತ ಉದಾಹರಣೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದ, ಅಲ್ಲಿ ಹುತಾತ್ಮರಾದವರ ಸಾಮೂಹಿಕ ಸಂಸ್ಕಾರಕಾರ್ಯದಲ್ಲಿ ಭಾಗಿಯಾಗಿದ್ದ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದು ಸುಮಾರು ೧೪ ವರ್ಷಗಳ ಕಾಲ ಸೆರೆವಾಸ ಕಂಡಿದ್ದ, ಈಗಲೂ ಸತ್ಸಂಗಗಳನ್ನು ನಡೆಸುತ್ತಾ, ರೂಢಿಗತ ಅಂಧ ಸಂಪ್ರದಾಯಗಳನ್ನು ವಿರೋಧಿಸಿ ವೇದದ ಬೆಳಕಿನಲ್ಲಿ ಸತ್ಯಾನ್ವೇಷಣೆಗೆ ಕರೆ ಕೊಡುತ್ತಿರುವ, ನಿಜವಾಗಿ ಬದುಕಲು ಪ್ರೇರಿಸುತ್ತಿರುವ ಅವರ ಬದುಕು ಅನುಸರಣೀಯ.
ಎಲ್ಲರೂ ಸಾಯುತ್ತಾರೆ, ಆದರೆ ಎಲ್ಲರೂ ಬದುಕುತ್ತಾರೆಯೇ ಎಂಬುದು ಕೇಳಬೇಕಾದ ಪ್ರಶ್ನೆ. ಬದುಕುವ ರೀತಿಯಲ್ಲಿ ಬದುಕಿದವರು ಸತ್ತ ಮೇಲೂ ಬದುಕಿರುತ್ತಾರೆ. ನೂರಾರು ವರ್ಷಗಳ ನಂತರವೂ, ಇಂದಿಗೂ ನಾವು ನೆನಪಿಸಿಕೊಳ್ಳುವ, ಗೌರವಿಸುವ, ದೇವರಂತೆ ಕಾಣುವ ರಾಮ, ಕೃಷ್ಣ, ವ್ಯಾಸ, ವಾಲ್ಮೀಕಿ, ಶಂಕರಾಚಾರ್ಯ, ವಿವೇಕಾನಂದ, ಬುದ್ಧ, ಬಸವ, ಮುಂತಾದ ನೂರಾರು, ಸಾವಿರಾರು ಮಹಾನ್ ವ್ಯಕ್ತಿಗಳು ಈ ಮಾತಿಗೆ ಪುಷ್ಟಿ ಕೊಡುತ್ತಾರೆ. ಹೇಗೋ ಹುಟ್ಟಿ, ಹೇಗೋ ಬದುಕಿ, ಹೇಗೋ ಕಂತೆ ಒಗೆದು ಹೋಗುವವರ ನೆನಪು ಅವರ ಮಕ್ಕಳು, ಮೊಮ್ಮಕ್ಕಳುಗಳಿಗೇ ಇರುವುದಿಲ್ಲ. ಮಸುಕಾಗಿ ಮರೆಯಾಗುವುದಕ್ಕಿಂತ ಜ್ಯೋತಿಯಾಗಿ ಉರಿದು ನೆನಪು ಉಳಿಸುವುದು ಉತ್ತಮ. ಯೋಗ್ಯವಾಗಿ ಬದುಕಬೇಕೆಂಬ ಮಾರ್ಗದರ್ಶನ ನೀಡುವುದೇ ಸಾವು! ಭಗತ್ ಸಿಂಗ್, ರಾಜಗುರು, ಸುಖದೇವರಂತೆ, ಚಂದ್ರಶೇಖರ ಆಜಾದರಂತೆ ಇನ್ನೊಬ್ಬರ ಬದುಕಿಗಾಗಿ, ಒಳಿತಿಗಾಗಿ ಸಾಯಲು ಸಿದ್ಧರಿರುವವರ, ಸಾಯುವವರ ಬದುಕುಗಳು ಬದುಕಬೇಕಾದ ರೀತಿಗೆ ಉದಾಹರಣೆಗಳು. ಈ ವೇದಮಂತ್ರ ಬದುಕಿನ ರೀತಿಗೆ ಅದ್ಭುತ ಮಾರ್ಗದರ್ಶಿಯಾಗಿದೆ: 'ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಗ್ಂ ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಂ ಶತಮದೀನಾ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್ ||'
ಅರ್ಥ: ಶುಭವ ನೋಡುತಲಿ, ಶುಭವ ಕೇಳುತಲಿ, ಶುಭವ ನುಡಿಯುತಲಿ ನೂರ್ಕಾಲ ಬಾಳೋಣ. ದೈನ್ಯತೆಯಿಲ್ಲದೆ ಸ್ವಾಭಿಮಾನದಿಂದ ಸ್ವತಂತ್ರರಾಗಿ ನೂರ್ಕಾಲ ಬಾಳೋಣ. ನೂರು ವರ್ಷಗಳಿಗಿಂತ ಹೆಚ್ಚಾಗಿಯೂ ಬಾಳಿಕೊಂಡಿರೋಣ.
-ಕ.ವೆಂ.ನಾಗರಾಜ್.