ನೆಕ್ಕರೆ ಮಾವು ಕಂಡೀರಾ?

ನೆಕ್ಕರೆ ಮಾವು ಕಂಡೀರಾ?

ಎಪ್ರಿಲ್-ಮೇ ತಿಂಗಳು ಬಂತೆಂತಾದರೆ ಹಣ್ಣುಗಳ ಸೀಸನ್. ಅದರಲ್ಲೂ ಹಣ್ಣುಗಳ ರಾಜ ಮಾವಿನ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಮೊದಲಾದರೆ ನಮ್ಮ ದಕ್ಷಿಣ ಕನ್ನಡದಾದ್ಯಂತ ಸ್ಥಳೀಯ ಮಾವಿನ ಹಣ್ಣುಗಳದ್ದೇ ಕಾರುಬಾರು. ಮರದಿಂದ ಕೊಯ್ದು ಅಲ್ಲೇ ಕೆಳಗಡೆ ಮಾರಿ ಹಣ ಹಿಡಿದುಕೊಂಡು ಮನೆಗೆ ಹೋಗುವುದಷ್ಟೇ ಮಾರಟ ಮಾಡುವವನ ಕಾಯಕವಾಗಿತ್ತು. ಈಗೀಗ ದಿನಕಳೆದಂತೆ ಮಾವಿನ ಮರಕ್ಕೆ ಹತ್ತುವವರ ಸಂಖ್ಯೆಯೂ ಕಮ್ಮಿ ಆಯಿತು. ಹಳೆಯ ದೊಡ್ಡದಾದ ಮರದಲ್ಲಿ ಇಳಿವರಿಯೂ ಕಮ್ಮಿ ಆಯಿತು. ಕಡೆಗೊಮ್ಮೆ ಅಧಿಕ ಕೂಲಿ ನೀಡಿ ಮರಕ್ಕೆ ಹತ್ತಿಸಿದರೂ ಅದರಲ್ಲಿ ಸಿಗುವ ಮಾವಿನ ಹಣ್ಣುಗಳು ಮಾರಿದರೆ ಕೊಯ್ಯುವವನ ಕೂಲಿಯೂ ಬಾರದು. ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದೆ. 

ಈಗ ಪೇಟೆಯಲ್ಲಿ ಜನರು ನೇರವಾಗಿ ಮಾರುಕಟ್ಟೆಗೆ ಹೋಗುತ್ತಾರೆ ತಮಗೆ ಇಷ್ಟದ ಹೈಬ್ರೀಡ್ ಮಾವಿನ ಹಣ್ಣು ಅದೂ ಕೃತಕವಾಗಿ ಮಾಗಿದ್ದು, ದುಬಾರಿ ಹಣ ತೆತ್ತು ತೆಗೆದುಕೊಂಡು ಬಂದು ತಿನ್ನುತ್ತಾರೆ. ಹೀಗಾಗಿದೆ ಪರಿಸ್ಥಿತಿ.

ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಂಡು ಬರುತ್ತಿದ್ದ ಒಂದು ವಿಶಿಷ್ಟ ಮಾವಿನ ತಳಿಯೇ ನೆಕ್ಕರೆ ಮಾವಿನ ಹಣ್ಣು. ಸ್ಥಳೀಯವಾಗಿ ಕದ್ರಿ, ಮುಂಡಪ್ಪ, ಬೆಳ್ಳಾರಿ, ಕಾಟು ಮಾವಿನಹಣ್ಣುಗಳು ಇದರ ಸಾಲಿಗೆ ಸೇರುವ ಹಣ್ಣು ಇದು. ಇದಕ್ಕೆ ರೋಗ ಭಾದೆ ತುಂಬಾ ಕಡಿಮೆ. ಒಂದು ಮಾವಿನ ಹಣ್ಣು ಸಾಧಾರಣವಾಗಿ ೧೦೦ ಗ್ರಾಂ ಭಾರವಿರುತ್ತದೆ. ನೆಕ್ಕರೆ ಮಾವಿನ ಮರದಲ್ಲಿ ಹೆಣ್ಣು ಹೂವುಗಳ ಸಂಖ್ಯೆ ಅಧಿಕವಾಗಿರುವುದರಿಂದ ಕಾಯಿ ಹಿಡಿಯುವ ಪ್ರಮಾಣವೂ ಅಧಿಕ. ಸುವಾಸನಾ ಭರಿತ ಹಣ್ಣಿನ ರುಚಿಯೂ ಮಧುರ. ಹಣ್ಣಿನ ಸಿಪ್ಪೆಯನ್ನೂ ಸರಾಗವಾಗಿ ತಿನ್ನ ಬಹುದು.

ಎಲ್ಲರ ಹಿತ್ತಲಿನ ಅವಿಭಾಜ್ಯ ಅಂಗವಾಗಿದ್ದ ಈ ತಳಿ ರಸ್ತೆ ಅಗಲೀಕರಣ, ಕೃಷಿ ವಿಸ್ತರಣೆ, ಬದನಿಕೆಯ ಸಮಸ್ಯೆ ಮತ್ತು ಸೌದೆಗಾಗಿ ಮರ ಕಡಿದುದರ ಪರಿಣಾಮವಾಗಿ ರುಚಿ ನೋಡಲು ಸಿಗುವುದೇ ವಿರಳವಾಗಿದೆ. ಕೆಲವು ಕಡೆ ಈ ತಳಿಗೆ ಕಸಿ ಕಟ್ಟುವ ಪ್ರಯತ್ನವೂ ನಡೆದಿದ್ದು, ಬೇಗದಲ್ಲಿ ಸುಧಾರಿತ ನೆಕ್ಕರೆ ತಳಿಯ ರುಚಿಯೂ ಸವಿಯಲು ಸಿಗುವ ಸಾಧ್ಯತೆ ಇದೆ.