ನೆಗಳಗುಳಿ ಗಜಲ್ಸ್…

ನೆಗಳಗುಳಿ ಗಜಲ್ಸ್…

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಸುರೇಶ ನೆಗಳಗುಳಿ
ಪ್ರಕಾಶಕರು
ಕಲ್ಲಚ್ಚು ಪ್ರಕಾಶನ, ಮಂಗಳೂರು
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ: ೨೦೨೦

ಡಾ. ಸುರೇಶ ನೆಗಳಗುಳಿ ಅವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಓರ್ವ ಕವಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ನೆಗಳಗುಳಿ ಅವರ ಗಜಲ್ ಎಂದರೆ ಬಹಳಷ್ಟು ಮಂದಿಯ ಮನ ಅರಳುತ್ತದೆ. ಏಕೆಂದರೆ ಮೂಲತಃ ಉರ್ದು ಭಾಷೆಯಲ್ಲಿನ ಒಂದು ಪ್ರಕಾರವಾದ ಗಜಲ್ ಗಳನ್ನು ಯಶಸ್ವಿಯಾಗಿ ಕನ್ನಡೀಕರಣಗೊಳಿಸಿದ್ದು ಇವರ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಗಜಲ್ ನ ಮೂಲ ಆಶಯ ಮತ್ತು ನಿಯಮಾವಳಿಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಇವರು ಗಜಲ್ ರಚನೆ ಮಾಡುತ್ತಾರೆ. ಸಾಮಾಜಿಕ ಜಾಲ ತಾಣಗಳ ಬಳಗಗಳಲ್ಲಿ ಇವರು ತಮ್ಮದೇ ಆದ ಅಭಿಮಾನಿಗಳನ್ನು ಮತ್ತು ಶಿಷ್ಯರನ್ನು ಹೊಂದಿದ್ದಾರೆ. 

ಕಲ್ಲಚ್ಚು ಪ್ರಕಾಶನದಿಂದ ಹೊರಬಂದಿರುವ ಡಾ. ಸುರೇಶ ನೆಗಳಗುಳಿ ಅವರ ‘ನೆಗಳಗುಳಿ ಗಜಲ್ಸ್...' ಎನ್ನುವ ಕೃತಿಯಲ್ಲಿ ೫೫ + ೧ ಗಜಲ್ ಗಳಿವೆ. ೫೫ ಕನ್ನಡ ಗಜಲ್ ಗಳೂ ಒಂದು ಆಂಗ್ಲಭಾಷೆಯ ಗಜಲ್ ಅನ್ನು ಈ ಕೃತಿ ಹೊಂದಿದೆ. ನೆಗಳಗುಳಿ ಅವರು ಗಜಲ್ ಬಗ್ಗೆ ‘ನೆಗಳಗುಳಿ ಲೇಖನಿಯಿಂದ...' ಎನ್ನುವ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ…

“ಇತ್ತೀಚೆಗೆ ಕನ್ನಡದ ಕಾವ್ಯಕ್ಷೇತ್ರದಲ್ಲಿ ಬಲು ಬಿರುಸಿನಿಂದ ಮುನ್ನುಗ್ಗುತ್ತಿರುವ ಕಾವ್ಯಗಳಲ್ಲಿ ಗಜಲ್ ಸಿಂಹ ಪಾಲು ಪಡೆಯುತ್ತಿದೆ. ಉರ್ದು ಕಾವ್ಯದ ರಾಣಿಯಾದ ಗಜಲ್ ಪ್ರಕಾರ ಈಗ ಕನ್ನಡದ ಸಿಂಹಾಸನದಲ್ಲೂ ವಿರಾಜಿಸತೊಡಗಿದೆ. ಆದರೆ ಪ್ರತಿ ಕಾವ್ಯ ಪ್ರಕಾರಕ್ಕೂ ತನ್ನದೇ ಆದ ನಿಯಮಾವಳಿಗಳಿವೆ ಅವುಗಳ ಪರಿಧಿಯನ್ನು ಮೀರಿ ಗಜಲ್ ಬರೆದನೆಂದರೆ ಅದು ಗಜಲ್ ಆಗದು.

ಮೂಲತಃ ಅರಬ್ಬಿ ಭಾಷೆಯಿಂದ ಬಂದ ಗಜಲ್ ನ ಮೂಲ ಹುಡುಕಿದರೆ ಧೀರರ ಹೊಗಳಿಕೆ, ದಾರ್ಶನಿಕತೆಯನ್ನು ತುಂಬಿ ಮಧುರ, ಪ್ರೀತಿ-ಪ್ರೇಮದ ಅನುಭೂತಿಗಳಿಂದ ಕೂಡಿದ ಯೌವನ, ಮಧು, ಮುಕ್ತತೆ, ಶೃಂಗಾರಭಾವಗಳಿಂದ ಕೂಡಿದ ಪೀಠಿಕೆಯ ದ್ವಿಪದಿಗಳನ್ನು ಹೊಂದಿರುವ ಕಸೀದ್ ಎನ್ನುವ ಕಾವ್ಯ ಪ್ರಕಾರದ ಬಳಿ ನಮ್ಮನ್ನು ತಂದು ನಿಲ್ಲಿಸುತ್ತದೆ. ಕಸೀದ್ ಕಾವ್ಯದಲ್ಲಿರುವ ಈ ಪೀಠಿಕೆ (ತಷಬೀಬ್) ಯ ಷೇರ್ (ದ್ವಿಪದಿ) ಗಳನ್ನು ಎತ್ತಿ ತಂದು ಅದನ್ನೇ ಗಜಲ್ ಮಾಡಲಾಯಿತು ಎನ್ನುವುದು ನಂಬಿಕೆ. ಯಾಕೆಂದರೆ ತಷಬೀಬ್ ಗೂ ಗಜಲ್ ನ ಮೊದಲ ಷೇರ್ ಮತ್ಲಾಕ್ಕೂ ರಚನೆ, ಕಾಫಿಯಾ, ರಧೀಪ್ ಗಳಲ್ಲಿ ವ್ಯತ್ಯಾಸವೂ ಕಾಣುವುದಿಲ್ಲ. ಕಸೀದ್ ಹಾಗೂ ಗಜಲ್ ನ ಮತ್ಲಾ, ಮುಕ್ತಾಗಳ ಆಂತರಿಕ ಹಾಗೂ ಬಾಹ್ಯ ರಚನಾ ವಿಧಾನಗಳಲ್ಲಿ ಒಂದಕ್ಕೊಂದು ಸಾಮ್ಯತೆಯನ್ನು ಹೊಂದಿದೆ. ಆದರೆ ಅರಬ್ಬರ ಗಂಭೀರತೆ ಹಾಗೂ ಶಿಷ್ಟತೆಯಿಂದ ಸೊರಗಿದ ಗಜಲ್ ಅರಬ್ಬರು ಇರಾನನ್ನು ವಶ ಪಡಿಸಿಕೊಂಡ ಮೇಲೆ ಪಾರ್ಸಿ ಭಾಷೆಯಲ್ಲಿ ತೀರಾ ವೈಶಿಷ್ಟ್ಯಪೂರ್ಣವಾಗಿ ಬೆಳೆದದ್ದನ್ನು ಕಾಣಬಹುದು.

ಗಜಲ್ ಉರ್ದು ಭಾಷೆಗೆ ಬಂದ ನಂತರ ಅದರ ಖದರ್ ಬದಲಾಗಿ ಹೋಯಿತು. ತನ್ನದೇ ಆದ ಸ್ವಂತ ವೈಶಿಷ್ಟ್ಯವನ್ನು ಉರ್ದು ಸಾಹಿತ್ಯದಲ್ಲಿ ಬೆಳೆಸಿಕೊಂಡ ಗಜಲ್ ಭಾರತೀಯ ಸಂಸ್ಕೃತಿಯನ್ನು ರೀತಿ ರಿವಾಜುಗಳನ್ನು ಇಲ್ಲಿನ ಪ್ರೇಮದ ಅಭಿವೃಕ್ತಿಯನ್ನು, ವಿರಹದ ಸಂವೇದನೆಯನ್ನು ತನ್ನದಾಗಿಸಿಕೊಂಡು ಸಶಕ್ತವಾಯಿತು. ಮೊದಲೇ ಎರಡು ಪದ ಹೆಚ್ಚಾಗಿ ನುಡಿದರೆ ಮಾತಿಗೇ ಇರುವೆ ಮುತ್ತುವಷ್ಟು ಸಿಹಿಯಾಗಿರುವ ಉರ್ದು ಭಾಷೆ ಗಜಲ್ ನ ಸಾಂಗತ್ಯದಿಂದಾಗಿ ಇನ್ನಷ್ಟು ಸಿಹಿಯನ್ನೂ ಮೃದುತ್ವವನ್ನೂ ನವಿರನ್ನೂ ಪಡೆದುಕೊಂಡಿತು. ಉರ್ದುವಿನಿಂದ ಭಾರತೀಕರಣಗೊಂಡ ಗಜಲ್ ಇಲ್ಲಿನ ಹತ್ತಾರು ಭಾವನಾತ್ಮಕ ವಿಷಯಗಳನ್ನು ಒಳಗೊಂಡು ಸಂಪೂರ್ಣವಾಗಿ ಭಾರತೀಯತೆಯನ್ನು ಪಡೆದುಕೊಂಡದ್ದು ಈಗ ಇತಿಹಾಸ.”

ಹೊಸದಾಗಿ ಗಜಲ್ ರಚನೆಯಲ್ಲಿ ಆಸಕ್ತಿ ಹೊಂದಿರುವವರಿಗೆ ನೆಗಳಗುಳಿಯವರ ಈ ಮುನ್ನುಡಿಯ ಮಾತುಗಳು ನಿಜಕ್ಕೂ ಉತ್ತಮ ಮಾರ್ಗದರ್ಶನ ನೀಡುತ್ತವೆ. ಮತ್ಲಾ, ಕಾಫಿಯಾ, ರಧೀಪ್, ಮಕ್ತಾ ಮುಂತಾದ ಎಲ್ಲಾ ವಿಷಯಗಳ ಬಗ್ಗೆ ಸವಿವರವಾಗಿ ಬರೆದಿರುವುದಲ್ಲದೇ ಅದನ್ನು ಸೂಕ್ತವಾಗಿ ಹೇಗೆ ಬಳಸಿಕೊಂಡರೆ ಉತ್ತಮ ಗಜಲ್ ರೂಪ ಪಡೆಯುತ್ತದೆ ಎನ್ನುವುದನ್ನು ವಿವರಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಒಂದು ಗಜಲ್ ಬರೆಯುವ ಪ್ರಯತ್ನವನ್ನೂ ಈ ಕೃತಿಯಲ್ಲಿ ಮಾಡಿದ್ದಾರೆ. 

ಪುಸ್ತಕದಲ್ಲಿರುವ ಒಂದು ಗಜಲ್ ಅನ್ನು ಇಲ್ಲಿ ಪ್ರಕಟಿಸಲಾಗಿದೆ. ಅದನ್ನು ಹಳೆಯ ಹಿಂದಿ ಚಲನಚಿತ್ರದ ಖ್ಯಾತ ಗೀತೆಯಾದ ‘ಸಜನ್ ರೇ ಜೂಟ್ ಮತ್ ಬೋಲೋ’ ಈ ಧಾಟಿಯಲ್ಲಿ ಹಾಡಿದರೆ ಬಹಳ ಸೊಗಸಾಗಿರುತ್ತದೆ ಎಂದು ಲೇಖಕರು ಹೇಳಿರುತ್ತಾರೆ.

ಗೆಳೆಯಾ ನಿಜವನೆ ಹೇಳುವೆನು ಬರಲೇ ಬೇಕು ನೀ ಜೊತೆಗೆ

ಹಾಲಿಲ್ಲ ಹಣ್ಣಿಲ್ಲ ಇದ್ದರೆ ಸಾಕು ನೀ ಜೊತೆಗೆ

 

ಒಲವಿನ ಮಹಲಲಿ ಇರು ನೀನು ಕೊಡುವೆ ನಿನ್ನೊಡೆ ನಾನು

ಸಂಶಯವೇತಕೆ ಓ ಚೆಲುವೆ ಪ್ರೇಮದ ಮಾಲೆಯ ಹಾಕು ನೀ ಜೊತೆಗೆ

 

ಬಯಸುವೆ ನಿನ್ನಯ ಸುಖವನ್ನೆ ಇರಿಸೆನು ನಿನ್ನಲಿ ಕೆಡುಕನ್ನೆ

ಮೋಹದ ಪಾಶದಿ ಬಂಧಿಸು ಬಾ ಒಲವನು ಜೀಕು ನೀ ಜೊತೆಗೆ

 

ನಿದಿರೆಯ ಬಾರದು ಇರುಳೆಲ್ಲ ಮುರಿಯುವ ಕನಸಿನ ಮನಸೆಲ್ಲ

ಇರಿವೆದೆ ಭಾವದ ತುಮುಲಗಳು ಬಗೆ ಹರಿಯುತ ಹೊಸಕು ನೀಜೊತೆಗೆ

 

ಇನಿಯಾ ವಿರಹದಿ ಬಳಲಿಹೆನು ಈಶನೆ ಬರೆನೀ ಹೊಸತು ಕಥೆ

ನಿಂತಿಲ್ಲ ಎದೆ ಗುಂದಿಲ್ಲ ಇದ್ದರೆ ಬೆಳಕು ನೀ ಜೊತೆಗೆ

ಹೀಗೇ ಸೊಗಸಾಗಿರುವ ೫೦ಕ್ಕೂ ಅಧಿಕ ಗಜಲ್ ಗಳು ಈ ಪುಸ್ತಕದಲ್ಲಿವೆ. ಸಾಹಿತಿ-ಪ್ರಕಾಶಕ ಮಹೇಶ್ ಆರ್ ನಾಯಕ್ ಇವರು ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ. ೫೬ ಪುಟಗಳ ಈ ಕೃತಿಯನ್ನು ಲೇಖಕರು ‘ಪ್ರೀತಿ, ಪ್ರೇಮ, ಪ್ರಣಯವೆಂಬ ಅದ್ಭುತ ಶಕ್ತಿಗೆ’ ಅರ್ಪಣೆ ಮಾಡಿದ್ದಾರೆ. ಗಜಲ್ ಪ್ರಿಯರು ಹಾಗೂ ಗಜಲ್ ಬರೆಯಲು ಹೊರಟ ಉದಯೋನ್ಮುಖರು ಈ ಕೃತಿಯನ್ನು ಖಂಡಿತವಾಗಿಯೂ ಒಮ್ಮೆ ಓದಲೇ ಬೇಕು.