ನೆಟ್ಟು ಬೆಳೆಸುವ ಹುಲ್ಲನ್ನು ವೇಗವಾಗಿ ಬೆಳೆಸುವ ಕ್ರಮ

ನೆಟ್ಟು ಬೆಳೆಸುವ ಹುಲ್ಲನ್ನು ವೇಗವಾಗಿ ಬೆಳೆಸುವ ಕ್ರಮ

ಹಸು ಸಾಕಣಿಕೆ ಮಾಡುವವರು ಮೇವಿನ ಉದ್ದೇಶಕ್ಕಾಗಿ ಹಸಿರು ಹುಲ್ಲು ಬೆಳೆಸುವುದು ಸಾಮಾನ್ಯ. ಹಸಿರು ಹುಲ್ಲು ಬೆಳೆಸಿದರೆ ಬೇಕಾದಾಗ ಬೇಕಾದಷ್ಟು ಹಸಿರು ಹುಲ್ಲು ಪಡೆಯಬಹುದು.ನೆಟ್ಟು ಬೆಳೆಸುವ ಈ ಹುಲ್ಲಿನ ಸಸ್ಯ ಧೀರ್ಘಾವಧಿಯಾಗಿದ್ದು, ಯಾವ ರೀತಿಯಲ್ಲಿ ಬೆಳೆದರೆ ಅದನ್ನು ಧೀರ್ಘ ಕಾಲದ ತನಕ ಉಳಿಸಿಕೊಂಡು ಕಠಾವು ಮಾಡುತ್ತಿರಬಹುದು ಎಂಬ ಬಗ್ಗೆ ವಿಸೃತ ಮಾಹಿತಿ ಇಲ್ಲಿದೆ.

ಹಸಿರು ಹುಲ್ಲು ಪಶು ಸಂಗೋಪನೆಯಲ್ಲಿ ಬಹಳ ಮಹತ್ವ ಪಡೆದಿದೆ. ಹಸುಗಳು ಇರಲಿ, ಮೇಕೆಗಳಿರಲಿ, ಎಮ್ಮೆಗಳಿರಲಿ, ಅವುಗಳಿಗೆ  ಕೊಡಬೇಕಾದ ಪ್ರಾಮುಖ್ಯ ಆಹಾರ ಎಂದರೆ ಹಸುರು ಮೇವು. ಹಸುರು ಮೇವು ಎಂಬುದು ಪಶುಗಳಿಗೆ  ದೇಹ ಪೋಷಣೆಗೆ ಬೇಕಾಗುವ ನಾರಿನ ಅಂಶವನ್ನು ಒದಗಿಸಿಕೊಡುವ ಪ್ರಮುಖ ಆಹಾರ. ಹಾಗಾಗಿ ಯಾರೇ ಆಗಲಿ ಮೇವು ಇಲ್ಲದೆ ಹೈನುಗಾರಿಕೆ ಮಾಡುವುದು ಕಷ್ಟ.ಕೆಲವರು  ತಮ್ಮ ಹಸು ಎಮ್ಮೆಗಳಿಗೆ ತೋಟದಲ್ಲಿ ಬೆಳೆದ ವೈವಿದ್ಯಮಯ ಹುಲ್ಲುಗಳನ್ನು ಮೇವಾಗಿ ಕೊಡುತ್ತಾರೆ. ಕೆಲವರು ಹುಲ್ಲನ್ನು ನೆಟ್ಟು ಬೆಳೆಸಿ ಅದನ್ನು ಕೊಡುತ್ತಾರೆ. ಅನಾದಿ ಕಾಲದಿಂದಲೂ ತೋಟದಲ್ಲಿ ಅಥವಾ ಹೊಲದಲ್ಲಿ ಬೆಳೆಯುವ ಹುಲ್ಲನ್ನು ಮೇವಾಗಿ ಕೊಡುವುದು ವಾಡಿಕೆ. ಆದರೆ ಇತ್ತೀಚೆಗೆ ಹೈನುಗಾರರಿಗೆ ಸುಲಭವಾಗಲು ಮತ್ತು ಪೌಷ್ಟಿಕಾಂಶ ಭರಿತ ಮೇವು ದೊರೆಯುವಂತಾಗಲು ಬೇರೆ ಬೇರೆ ತಳಿಯ ನೆಟ್ಟು ಬೆಳೆಸುವ ಹುಲ್ಲನ್ನು ಪರಿಚಯಿಸಲಾಗಿದೆ. ಇವೆಲ್ಲಾ ಬೇಗ ಬೇಳೆಯುತ್ತವೆ. ಅಧಿಕ ಮೇವಿನ ಉತ್ಪಾದನೆ ಆಗುತ್ತದೆ. ಕೆಲಸ ಸರಳವಾಗುತ್ತದೆ.

ಮೇವು ಹುಲ್ಲು ಹೇಗೆ ನೆಡಬೇಕು?: ಮೇವಿನ ಹುಲ್ಲನ್ನು ಕಡ್ಡಿಗಳನ್ನು ನಾಟಿ ಮಾಡುವ ಮೂಲಕ ಸಸ್ಯಾಭಿವೃದ್ದಿ ಮಾಡಲಾಗುತ್ತದೆ. ಬೀಜದಿಂದಲೂ ಇದು ಸಸ್ಯಾಭಿವೃದ್ದಿಯಾಗುತ್ತದೆ. ಕೆಲವು ಬೀಜ, ಹೂವು ಆಗದ ಹುಲ್ಲುಗಳೂ ಇವೆ.  ಕಡ್ಡಿಗಳ ಮೂಲಕ ನಾಟಿ ಮಾಡಿದರೆ ಕಡಿಮೆ ಖರ್ಚಿನಲ್ಲಿ ಬೇಗ ಹುಲ್ಲಿನ ಸಸ್ಯಾಭಿವೃದ್ದಿ ಆಗುತ್ತದೆ. ಕಡ್ಡಿಗಳನ್ನು ನಾಟಿ ಮಾಡುವಾಗ ಬಲಿತ ಗಂಟುಗಳುಳ್ಳ ಕಡ್ಡಿಯನ್ನು ಬಳಸಬೇಕು. ಕಡ್ಡಿಗಳನ್ನು ೧ ಅಡಿಯಷ್ಟು ದೊಡ್ಡದಿರುವಂತೆ ತುಂಡು ಮಾಡಿ ನೆಲದಲ್ಲಿ ಅಡ್ಡಕ್ಕೆ ಮಲಗಿಸಿ ಮೇಲು ಭಾಗದಲ್ಲಿ ಮೆತ್ತನೆಯ ವಸ್ತು ಕೊಟ್ಟಿಗೆ ಗೊಬ್ಬರ ಅಥವಾ ಕಳಿತ ತರಗೆಲೆ ಇತ್ಯಾದಿಗಳನ್ನು ತೆಳ್ಳಗೆ ಕಡ್ಡಿ ಮುಚ್ಚುವಂತೆ ಹಾಕಬೇಕು. ನೆಡುವ ಸಮಯ ಬೇಸಿಗೆಯ ದಿನಗಳಾದರೆ ಉತ್ತಮ. ಮುಂಗಾರು ಪೂರ್ವದ ಮಳೆಗಾಲದಲ್ಲೂ ನೆಡಬಹುದು. ನೆಲವನ್ನು ಒಮ್ಮೆ ತೇವ ಮಾಡಿಕೊಂಡು ಅದರ ಮೇಲೆ ಕಡ್ಡಿಗಳನ್ನು ಮಲಗಿಸಬೇಕು. ಹೀಗೆ ಮಾಡಿದರೆ ಕಡ್ಡಿಗಳ ಗಂಟುಗಳಲ್ಲಿ ಬೇರು ಬರಲು ಅನುಕೂಲವಾಗುತ್ತದೆ. ಮಲಗಿಸಿದ ಮೇಲೆ ಅದರ ಮೇಲೆ ಸಾವಯವ ತ್ಯಾಜ್ಯಗಳನ್ನು ತೆಳ್ಳಗೆ ಹಾಕಿ ಅದಕ್ಕೂ ನೀರು ಚಿಮುಕಿಸಿದರೆ ಕಡ್ಡಿಗಳು ಒಣಗುವುದಿಲ್ಲ.

ಮಲಗಿಸಿ ನೆಡುವುದರಿಂದ ಗಂಟುಗಳಲ್ಲಿ ಎರಡು ಮೂರು ಮೊಳಕೆಗಳು ಮೂಡುತ್ತವೆ. ಗಂಟಿನ ಕೆಳಭಾಗದಲ್ಲಿ ಬರುವ ಬೇರುಗಳು ತಕ್ಷಣ ಮಣ್ಣನ್ನು ಸಂಪರ್ಕಿಸಿ ಆಹಾರವು ಸಿಗುವಂತೆ ಮಾಡುತ್ತದೆ. ಹಾಗಾಗಿ ಗಿಡ ವೇಗವಾಗಿ ಬೆಳೆಯುತ್ತದೆ. ಕೆಲವರು ಕಡ್ಡಿಗಳನ್ನು ನೇರವಾಗಿ ನಾಟಿ ಮಾಡುತ್ತಾರೆ. ಇಂತಹ ಕಡ್ಡಿಗಳಲ್ಲಿ ಬರುವ ಮೊಳಕೆ ಸಧೃಢವಾಗಿರುವುದಿಲ್ಲ. ಹೆಚ್ಚು ಹೆಚ್ಚು ಮೊಳಕೆಗಳು ಬರಬೇಕಾದರೆ ಧೀರ್ಘಾವಧಿಯ ತನಕ ಹುಲ್ಲು ಸಸ್ಯ ಫಲ ಕೊಡುತ್ತಾ ಇರಬೇಕಾದರೆ ಅಡ್ದಕ್ಕೆ ಮಲಗಿಸುವುದು ಹೆಚ್ಚು ಸೂಕ್ತ.

ಯಾವಾಗ ಕೊಯಿಲು ಮಾಡಬೇಕು?: ಹುಲ್ಲು ಅಥವಾ ಮೇವು ಮೃದುವಾಗಿದ್ದರೆ ಹಸುಗಳು ಅದನ್ನು ಚೆನ್ನಾಗಿ ತಿನ್ನುತ್ತವೆ. ಗಟ್ಟಿಯಾದರೆ ಹೆಚ್ಚು ನಷ್ಟವಾಗುತ್ತದೆ. ಬರೇ ಎಲೆಗಳನ್ನು ಮಾತ್ರ ತಿನ್ನುತ್ತದೆ. ಆದಕ್ಕಾಗಿ ತಿಂಗಳಿಗೊಮ್ಮೆ ಕಟಾವು ಮಾಡುತ್ತಾ ಇರಬೇಕು. ಆದ ದಂಟು ಗಟ್ಟಿಯಾಗಿರುವುದಿಲ್ಲ. ಹಸುಗಳು ಅದನ್ನು ಪೂರ್ತಿಯಾಗಿ ತಿನ್ನುತ್ತವೆ. ಕೊಚ್ಚಿ ಹಾಕುವುದಿದ್ದರೂ ಸುಲಭವಾಗುತ್ತದೆ. ಮೃದುವಾದ ಮೇವಿನಲ್ಲಿ ಸತ್ವಗಳು ಹೆಚ್ಚು ಇರುವ ಕಾರಣ ಅಧಿಕ ಹಾಲಿಗೂ ಒಳ್ಳೆಯದಾಗುತ್ತದೆ. ಕೆಲವರು ಹೂ ಬರುವ ತನಕ ಬೆಳೆಸುತ್ತಾರೆ. ಅಂತಹ ಹುಲ್ಲಿನಲ್ಲಿ ೫೦% ಹುಲ್ಲು ನಷ್ಟವಾಗುತ್ತದೆ. ೫-೬ ಅಡಿ ಎತ್ತರದ ಮನುಷ್ಯನಷ್ಟು ಎತ್ತರಕ್ಕೆ ಬೆಳೆದ ತಕ್ಷಣ ಕೊಯಿಲು ಮಾಡಬೇಕು. ಕೆಲವು ಇನ್ನೂ ಗಿಡ್ಡ ಸಸ್ಯಗಳಿರುತ್ತವೆ. ನೆಲದಲ್ಲಿ ಮಲಗಿಸಿ ನೆಟ್ಟ ಹುಲ್ಲಿನಲ್ಲಿ ನಿರಂತರ ಮೊಳಕೆಗಳು ಬರುತ್ತಾ ಇರುವ ಕಾರಣ ಗಿಡ್ಡ ಇರುವ ಹುಲ್ಲನ್ನು ಉಳಿಸಿ ಉದ್ದದ ಹುಲ್ಲನ್ನು ಮಾತ್ರ ಕಟಾವು ಮಾಡಿದರೆ ಮತ್ತೆ ಪುನಃ ಅದು ಕಠಾವಿಗೆ ಸಿಗುತ್ತದೆ.

ಹೇಗೆ ಕಠಾವು ಮಾಡಬೇಕು?: ಅಧಿಕ ಹುಲ್ಲಿನ ಉತ್ಪಾದನೆ ಆಗಬೇಕಿದ್ದರೆ ಹೆಚ್ಚು ಹೆಚ್ಚು ಮೊಳಕೆಗಳು ಬರುತ್ತಾ ಇರಬೇಕು. ಹಾಗೆ ಆಗಬೇಕಿದ್ದರೆ ಕಟಾವು ಮಾಡುವಾಗ ಬುಡದಿಂದ ಅರ್ಧ ಅಥವಾ ಒಂದುದು ಇಂಚಿನಷ್ಟು ಮಾತ್ರ ಉಳಿಸಿ ಕಟಾವು ಮಾಡಬೇಕು. ಬೇರಿನ ಸಮೀಪವೇ ತುಂಡು ಮಾಡಬೇಕು. ಹೆಚ್ಚು  ಎತ್ತರ ಬಿಟ್ಟು ತುಂಡು ಮಾಡಿದರೆ ಅದರ ಮೊಳಕೆಗಳು ಸಧೃಢವಾಗಿರುವುದಿಲ್ಲ. ನೆಲಮಟ್ಟಕೆ ಹತ್ತಿರ ಇರುವಂತೆ ಕಟಾವು ಮಾಡಿದರೆ ಅಲ್ಲಿನ ಗಂಟಿನಲ್ಲಿ ಬರುವ ಮೊಳಕೆಯ ಜೊತೆಗೆ ಇರುವ ಬೇರುಗಳು ತಕ್ಷಣ ನೆಲವನ್ನು ತಲುಪುತ್ತವೆ. ಹಾಗಾಗಿ ಬೇಗ ಬೆಳೆಯುತ್ತದೆ. ಈ ರೀತಿ ತುಂಡು ಮಾಡಿದರೆ ಒಂದೊಂದು ಬುಡದಲ್ಲಿ ೮-೧೦ ಕಂದುಗಳು ಮೊಳಕೆಯೊಡೆಯುತ್ತವೆ. ಉದ್ದ ಕಡ್ಡಿ ಬಿಟ್ಟು ತುಂಡು ಮಾಡಿದರೆ ಅದರ ಮೊಳಕೆಗೆ ಶಕ್ತಿ ಇಲ್ಲದೆ ಅದು ಕೃಷವಾಗಿ ಬೆಳೆಯುವುದನ್ನು ಕಾಣಬಹುದು. ಇಂತಹ ಹುಲ್ಲು ಸಸ್ಯ ಹೆಚ್ಚೆಂದರೆ ಒಂದು- ಎರಡು ವರ್ಷ ಬಾಳ್ವಿಕೆ ಬರಬಹುದು.

ಸಾಮಾನ್ಯವಾಗಿ ಹುಲ್ಲು ಬೆಳೆಸುವರ ಸಮಸ್ಯೆ ಎಂದರೆ ಹುಲ್ಲಿನ ಸಸ್ಯ  ಮೇಲೆ ಮೇಲೆ ಬರುವುದು (ಬುಡ ಮೇಲೆ ಬರುವುದು). ಹಾಗೆ ಅದರೆ ಬಾಳ್ವಿಕೆ ಕಡಿಮೆ. ಬುಡದ ಸಮೀಪವೇ ಕತ್ತರಿಸಿ ವರ್ಷವರ್ಷವೂ ಬುಡಕ್ಕೆ ಸ್ವಲ್ಪ ಮಣ್ಣು ಇಲ್ಲವೇ ಸಾವಯವ ತ್ಯಾಜ್ಯಗಳನ್ನು ಹಾಕುತ್ತಾ ಇದ್ದರೆ ಗಡ್ಡೆ ಮೇಲೆ ಬರುವ ಸಮಸ್ಯೆ ಉಂಟಾಗಲಾರದು. ಕಟಾವು ಮಾಡಿದ ತಕ್ಷಣ ಅದಕ್ಕೆ ಗೊಬ್ಬರವನ್ನು ಕೊಡಬೇಕು. ಮಣ್ಣಿನಲ್ಲಿರುವ ಪೋಷಕವನ್ನು ಬೆಳವಣಿಗೆಗೆ ಬಳಸಿಕೊಂಡ ಹುಲ್ಲು ಮತ್ತೆ ಮತ್ತೆ  ಪೋಷಕವನ್ನು ಬಯಸುತ್ತದೆ. ಸಗಣಿ ದ್ರಾವಣ ಅದರ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಯೂರಿಯಾ ಮಿಶ್ರಣ ಮಾಡಿ ಕೊಡುವುದರಿಂದ ಹುಲ್ಲು ಚೆನ್ನಾಗಿ ಬೆಳೆಯುತ್ತದೆ. ಹೆಚ್ಚಿನ ಹೈನುಗಾರರು ಹುಲ್ಲು ಚೆನ್ನಾಗಿ ಬೆಳೆಯಬೇಕು ಎಂಬ ಕಾರಣಕ್ಕೆ ಈ ರೀತಿ ಗೊಬ್ಬರ ಕೊಡುತ್ತಾರೆ. ಆದರೆ ಸಂಶೋಧನೆಗಳ ಪ್ರಕಾರ ಹುಲ್ಲಿನಲ್ಲಿ ಬರೇ ಸಾರಜನಕ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದರೆ ಆ ಮೇವು ಸಪ್ಪೆಯಾಗಿರುತ್ತದೆ. ಜೊತೆಗೆ ಇತರ ಪೋಷಕಾಂಶಗಳಾದ ರಂಜಕ ಮತ್ತು ಪೊಟ್ಯಾಶ್ ಕೊಡುವುದರಿಂದ ಆ ಮೇವಿನ ಸತ್ವ ವೃದ್ದಿಸುತ್ತದೆ. ಇದರಿಂದ ಹಸುಗಳು ಬೇಗ ಮತ್ತು ಸಮಯಕ್ಕೆ ಸರಿಯಾಗಿ ಬೆದೆಗೆ ಬರುತ್ತವೆ. ಆರೋಗ್ಯವೂ ಚೆನ್ನಾಗಿರುತ್ತದೆ. ಹಾಲಿನ ಗುಣಮಟ್ಟವೂ ಉತ್ತಮವಾಗಿರುತ್ತದೆ. ಇದನ್ನು ಹುಲ್ಲು ಬೆಳೆಸುವವರು ಗಮನಿಸಬೇಕು.

ತೋಟದ ಹುಲ್ಲು ಮತ್ತು ಪೋಷಕಾಂಶಗಳು: ಪಶು ವೈದ್ಯರುಗಳ ಪ್ರಕಾರ ತೋಟದಲ್ಲಿ ಬೆಳೆಯುವ ಕಳೆ ಹುಲ್ಲುಗಳಿಂದ ಹೆಚ್ಚಿನ ದೇಹ ಪೋಷಕ ವಸ್ತುಗಳು ಲಭ್ಯವಾಗುವುದಿಲ್ಲ ಎನ್ನುತ್ತಾರೆ. ಆದರೂ ಈ ಹುಲ್ಲು ಪಶುಗಳಿಗೆ ಶ್ರೇಷ್ಟವೇ ಆಗಿರುತ್ತದೆ. ತರಾವಳಿಯ ಹುಲ್ಲುಗಳನ್ನು ಮೇವಾಗಿ ಕೊಡುವುದರಿಂದ ಕೆಲವು ಔಷಧೀಯ ಸತ್ವವೂ ಪಶುಗಳಿಗೆ ಲಭ್ಯವಾಗುತ್ತದೆ. ಇದರಿಂದ ಹಾಲಿನ ಗುಣಮಟ್ಟ ಉತ್ತಮವಾಗುತ್ತದೆ. ತೋಟದ ಕಳೆ ಹುಲ್ಲುಗಳು ಸಹ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಕಾರಣ ನಾವು ಬೆಳೆಗಳಿಗೆ ಕೊಡುವ ಗೊಬ್ಬರಗಳನ್ನು ಅವೂ ಬಳಸಿಕೊಂಡು ಬೆಳೆಯುವಂತವುಗಳು. ಸಮತೋಲನ ಗೊಬ್ಬರವನ್ನು ಬೆಳೆಗಳಿಗೆ ಕೊಡುವ ಕಾರಣ ಈ ಮೇವು ನೆಟ್ಟು ಬೆಳೆಸಿದ ಹುಲ್ಲಿಗೆ ಸಮನಾಗಿಯೇ ಇರುತ್ತದೆ. ಇದಲ್ಲದೆ ಬೆಳೆ ಉಳಿಕೆ ಅಡಿಕೆ ಹಾಳೆ, ತಿನ್ನುವುದಿದ್ದರೆ ಸೋಗೆ ಇತ್ಯಾದಿಗಳನ್ನು ಮೇವಾಗಿ ಕೊಡುವುದರಿಂದ ಕಡಿಮೆ ಪ್ರಮಾಣನ ಮೇವಿನಲ್ಲಿ ಹೊಟ್ಟೆ ತುಂಬುತ್ತದೆ.

ಮುಂದಿನ ದಿನಗಳಲ್ಲಿ ಹಸು ಸಾಕಾಣೆ ಮಾಡಬೇಕಿದ್ದರೆ ಮೇವಿನ ಹುಲ್ಲನ್ನು ನೆಟ್ಟು ಬೆಳೆಸುವುದು ಅನಿವಾರ್ಯ. ತೋಟದ ಹುಲ್ಲನ್ನು ಕಿತ್ತು ತರುವ ಮಜೂರಿ ಬಹಲ ದುಬಾರಿ. ಹೊಸ ತಲೆಮಾರಿನ ಜನರಿಗೆ ಹುಲ್ಲು ಕೀಳುವ ಕೆಲಸದಲ್ಲಿ ನೈಪುಣ್ಯತೆ ಇಲ್ಲ. ಹಾಗಾಗಿ ಮೇವಿನ ಹುಲ್ಲನ್ನು ನೆಟ್ಟು ಬೆಳೆಸುವುದೇ ಸೂಕ್ತ.

ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ