ನೆತ್ತರು ದೆವ್ವ (ವಿಶ್ವಕಥಾಕೋಶ -೧೧)

ನೆತ್ತರು ದೆವ್ವ (ವಿಶ್ವಕಥಾಕೋಶ -೧೧)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಹನ್ನೊಂದನೆಯ ಸಂಪುಟ ‘ನೆತ್ತರು ದೆವ್ವ'. ವಿಶ್ವಕಥಾಕೋಶದ ೧೧ನೇ ಸಂಪುಟದಲ್ಲಿ ಚೆಕೊಸ್ಲೊವಾಕಿಯ, ಪೋಲೆಂಡ್ ದೇಶದ ಕಥೆಗಳಿವೆ. ಈ ಸಂಪುಟದಲ್ಲಿ ಯಾನ್ ನೆರೂದಾನ ‘ನೆತ್ತರು ದೆವ್ವ' ದಿಂದ ಮೊದಲಾಗಿ ಹೊಸ ಬರಹಗಾರ ಪಾವೆಲ್ ಪ್ರಾಂತೌಸಾಜ್ ನ ‘ಕೊಳೆಯ ಹೊಲ' ದ ತನಕ ಚೆಕೊಸ್ಲೊವಾಕಿಯಾದ ಎಂಟು ಕಥೆಗಳು ಮತ್ತು ಕಳೆದ ಶತಮಾನದ ಹಿರಿಯ ಕಥೆಗಾರ ಆಡಮ್ ಸೈಮನ್ಸ್ಕಿಯಾ ‘ಒಂದು ಚಿಟಿಕೆ ಉಪ್ಪು' ಮೊದಲ್ಗೊಂಡು ಈಚಿನ ಕಾಲಾವಧಿಯ ಕಥೆಗಾರ್ತಿ ಜೋಪಿಯ ನಲ್ಕೊವ್ ಷ್ಕಾ ಬರೆದ ‘ರೈಲು ರಸ್ತೆಯ ಬದಿಯಲ್ಲಿ' ವರೆಗೆ ಪೋಲೆಂಡಿನ ಐದು ಕಥೆಗಳು ಇವೆ. ಒಂದೇ ಬುಡಕಟ್ಟಿಗೆ ಸೇರಿದರೂ ಎರಡು ವಿಶಿಷ್ಟ ದಾರಿಗಳಲ್ಲಿ ಸಾಗಿ ಬಂದಿರುವ ಜನಾಂಗಗಳ ಸ್ಥಿತಿಗತಿಗಳ ವಿವರಗಳು ಈ ಕಥೆಗಳಲ್ಲಿ ಕಂಡು ಬರುತ್ತವೆ.

ಈ ಪುಸ್ತಕದಲ್ಲಿ ಇರುವ ೧೩ ಕಥೆಗಳೆಂದರೆ, ನೆತ್ತರು ದೆವ್ವ (ಯಾನ್ ನೆರೂದಾ), ಫೋಲ್ಟೀನನ ಡಮರು (ಸ್ವತೋಪಲುಕ್ ಚೇಖ್), ಮಹಾಯುದ್ಧದಲ್ಲಿ ಶ್ವೀಕ್ ಮಧ್ಯಪ್ರದೇಶ (ಯಾರೊಸ್ಲಾವ್ ಹಾಶೆಕ್), ಉಪವಾಸ ಕಲಾಕಾರ (ಫ್ರಾಂಜ್ ಕಾಫ್ಕ), ಆರ್ಕಿಮಿಡೀಸನ ಮರಣ (ಕಾರೆಲ್ ಚಾಪೆಕ್), ನೀರವ ತಡೆಗಟ್ಟೆ ( ಯಾನ್ ದರದಾ), ಆರು ಹುಡುಗರ ಕಥೆ ( ಜೂಲಿಯಸ್ ಫೂಚಿಕ್), ಕೊಳೆಯ ಹೊಲ (ಪಾವೆಲ್ ಫ್ರಾಂತೌಜ್), ಒಂದು ಚಿಟಿಕೆ ಉಪ್ಪು (ಆಡಮ್ ಸೈಮನ್ ಸ್ಕಿ), ಆಸ್ಪಿನ್ ವಾಲ್ ದೀಪಸ್ತಂಭದ ಕಾವಲುಗಾರ (ಹೆನ್ರಿಕ್ ಸಿಯೆಂಕಿವಿಚ್), ಅವಳ ಮುದ್ದುಮರಿ (ಗಾಬ್ರಿಯೆಲಾ ಜಪೋಲ್ ಸ್ಕಾ), ಮಾನವ ತಂತಿ (ಬೊಲಿಸ್ಲಾವ್ ಪ್ರೂಶ್), ರೈಲು ರಸ್ತೆಯ ಬದಿಯಲ್ಲಿ (ಜೋಫಿಯಾ ನಲ್ಕೋವ್ ಶ್ಕಾ) 

ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ಎಚ್.ಕೆ.ರಾಮಚಂದ್ರಮೂರ್ತಿ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೧೪೦ ಪುಟಗಳನ್ನು ಹೊಂದಿದೆ. ಚೆಕೊಸ್ಲೊವಾಕಿಯಾ ಹಾಗೂ ಪೋಲೆಂಡ್ ದೇಶದ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.