ನೆನಪಿನಿಂದ ಮರೆಯಾಗದ 'ಪತ್ತೇದಾರ' -ಎನ್. ನರಸಿಂಹಯ್ಯ


ಆ ದಿನಗಳು ಬಹಳ ಚೆನ್ನಾಗಿದ್ದುವು. ನಾನಿನ್ನೂ ಒಂಬತ್ತನೇ ತರಗತಿಯಲ್ಲಿದ್ದೆ ಎಂದು ನೆನಪು. ಬೇಸಿಗೆ ರಜೆಯ ಕಾಲ. ಆಗಿನ್ನೂ ದೂರದರ್ಶನದ ಹಾವಳಿ ಅಷ್ಟಾಗಿ ಸುಳಿದಿರಲಿಲ್ಲ. ೯೦ರ ದಶಕದಲ್ಲಿ ನಮಗೆ ಕಥೆ, ಕಾಮಿಕ್ಸ್ ಪುಸ್ತಕ, ಅದು ಬಿಟ್ಟರೆ ಕ್ರಿಕೆಟ್ ಆಟವೇ ಸ್ವರ್ಗ. ನನ್ನ ತಂದೆಯವರು ಇಂದ್ರಜಾಲ ಕಾಮಿಕ್ಸ್, ಅಮರಚಿತ್ರ ಕಥೆ, ಚಂದಮಾಮ, ಬಾಲಮಿತ್ರ, ಪುಟಾಣಿ ಮೊದಲಾದ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಆಗಂತೂ ಓದುವ ಹಸಿವು ಬಹಳ ಜೋರಾಗಿತ್ತು. ಯಾವ ಪುಸ್ತಕವೇ ಆದರೂ ಓದಿ ಮುಗಿಸುತ್ತಿದ್ದೆ. ಒಮ್ಮೆ ಯಾರೋ ‘ಸ್ಪೈ’ ಎಂಬ ಒಂದು ಮಾಸ ಪತ್ರಿಕೆ ತಂದುಕೊಟ್ಟರು. ಅದರಲ್ಲಿ ಸೊಗಸಾದ ಒಂದು ಪತ್ತೇದಾರಿ ಕಾದಂಬರಿ ಇತ್ತು. ಬರೆದವರು ಯಾರು ಎಂದು ನೆನಪಿಲ್ಲ. ಒಂದು ಕೊಲೆಯ ಸುಳಿವನ್ನು ಹುಡುಕಾಡಿ ಹೋಗುವ ಪತ್ತೇದಾರ ಕೊನೆಗೆ ಕೊಲೆ ಮಾಡಿದವನನ್ನು ಹಿಡಿಯುವುದು ಆ ಕಥೆಯ ಸಾರ. ಮೊದಲಿಂದ ಕೊನೆಯವರೆಗೆ ರೋಚಕತೆ ಕಾದುಕೊಂಡಿದ್ದ ಕಥೆ ಅದು. ಹೀಗೆ ಪರಿಚಯವಾದ ಪತ್ತೇದಾರಿ ಸಾಹಿತ್ಯ ನನ್ನನ್ನು ಬಹುಬೇಗನೇ ಪತ್ತೇದಾರಿ ಸಾಹಿತ್ಯದ ಪಿತಾಮಹ ಎಂದೇ ಹೆಸರಾದ ಎನ್.ನರಸಿಂಹಯ್ಯರ ಬಳಿ ತಂದು ನಿಲ್ಲಿಸಿತು.
ರಜೆಯಲ್ಲಿ ನಾನು ನನ್ನ ದೊಡ್ಡಪ್ಪನ ಮನೆಗೆ ಹೋಗುತ್ತಿದ್ದೆ. ಅಲ್ಲಿ ನನ್ನ ಅಕ್ಕ ಸಹಾ ನನ್ನಂತೇ ಪುಸ್ತಕದ ಹುಳ. ಅವಳು ಮತ್ತು ಅವಳ ತಮ್ಮಂದಿರು ಎಲ್ಲರೂ ಇಂಗ್ಲೀಷ್ ಮೀಡಿಯಂ ವಿದ್ಯಾರ್ಥಿಗಳಾದುದರಿಂದ ಇಂಗ್ಲಿಷ್ ಕಥೆ, ಕಾಮಿಕ್ಸ್ ಪುಸ್ತಕಗಳನ್ನು ಓದುತ್ತಿದ್ದರು. ನಾನು ಕನ್ನಡ ಮಾಧ್ಯಮ. ನನಗೆ ಇಂಗ್ಲೀಷ್ ಕಬ್ಬಿಣದ ಕಡಲೆ. ಅವರ ಪುಸ್ತಕ ಓದುವ ಆಸೆ. (ಆಗ ಟಿಂಕಲ್ ಎಂಬ ಪುಸ್ತಕ ಬರುತ್ತಿತ್ತು ಎಂದು ನನ್ನ ನೆನಪು) ಆದರೆ ಅರ್ಥ ಆಗುತ್ತಿರಲಿಲ್ಲ. ನನ್ನ ಅಕ್ಕ ಗ್ರಂಥಾಲಯಕ್ಕೆ ಹೋಗಿ ಇಂಗ್ಲೀಷ್ ಕಾದಂಬರಿಗಳನ್ನು ತರುತ್ತಿದ್ದಳು. ನನಗಾಗಿ ಒಮ್ಮೆ ಕನ್ನಡ ಪತ್ತೇದಾರಿ ಕಾದಂಬರಿ ತಂದಳು. ಹೆಸರು ನೆನಪಿಲ್ಲ. ಆದರೆ ಆ ಕಾದಂಬರಿ ಬರೆದದ್ದು ಎನ್ .ನರಸಿಂಹಯ್ಯ. ಪುಸ್ತಕ ಬಹಳ ರೋಚಕವಾಗಿತ್ತು. ಓದುತ್ತಾ ಓದುತ್ತಾ ಕೊಲೆ ಮಾಡಿದ ಆ ಪಾತಕಿಯನ್ನು ಪತ್ತೇದಾರ ಹಿಡಿಯಬೇಕೆನ್ನುವಷ್ಟರಲ್ಲಿ ಆ ಪುಸ್ತಕದ ಕೊನೆಯ ಎರಡು ಹಾಳೆಗಳು ಕಣ್ಮರೆಯಾಗಿದ್ದವು. ನಾನು ಅತ್ತದ್ದೇ ಅತ್ತದ್ದು. ನಾನು ಓದಿದ್ದು ವ್ಯರ್ಥವಾಯಿತಲ್ಲಾ ಎಂಬ ನೋವು ಬಹಳ ಸಮಯ ಕಾಡಿತ್ತು. ಆ ಘಟನೆ ನಡೆದು ಮೂವತ್ತು ವರ್ಷಗಳು ಸಂದರೂ ಈಗಲೂ ಅಕ್ಕ ನನಗೆ ಆ ಘಟನೆ ನೆನಪು ಮಾಡಿಸಿ ಚುಡಾಯಿಸುತ್ತಾಳೆ. ಆಗಿನ ಅಸಕ್ತಿ ಹಾಗೆ ಇತ್ತು.
ನಂತರದ ದಿನಗಳಲ್ಲಿ ನನ್ನನ್ನೂ ಅಕ್ಕ ಆ ಗ್ರಂಥಾಲಯದ ಸದಸ್ಯನನ್ನಾಗಿ ಮಾಡಿದಳು. ಮಂಗಳೂರಿನ ಹಳೆಯ ಪುಸ್ತಕಾಸಕ್ತರಿಗೆ ಬೆಂದೂರಿನಲ್ಲಿರುವ ಸೈಂಟ್ ಆಗ್ನೆಸ್ ಶಾಲೆಯ ಬಳಿ ‘ನಂದನ್' ಎಂಬ ಗ್ರಂಥಾಲಯ ಇತ್ತು. ಅಲ್ಲಿ ಎನ್. ನರಸಿಂಹಯ್ಯನವರ ಬಹುತೇಕ ಎಲ್ಲಾ ಕಾದಂಬರಿಗಳ ಸಂಗ್ರಹ ಇತ್ತು. ಪುಸ್ತಕದ ಬಾಡಿಗೆ ವಾರಕ್ಕೆ ೨೫ ಪೈಸೆ ಯೋ ೫೦ ಪೈಸೆಯೋ ಇರುತ್ತಿತ್ತು. ಒಂದೇ ಸಲ ೫ ಪುಸ್ತಕಗಳನ್ನು ತರುತ್ತಿದ್ದೆ. ಓದಿ ಮುಗಿಸುತ್ತಿದ್ದೆ. ನಿಧಾನವಾಗಿ ನರಸಿಂಹಯ್ಯರು ನನ್ನನ್ನು ಆವರಿಸುತ್ತಾ ಬಂದರು. ಪತ್ತೇದಾರರಾದ ಪುರುಷೋತ್ತಮ, ಅರಿಂಜಯ, ಮಧುಸೂದನ, ಗಾಳಿರಾಯರು ನನ್ನ ಸುತ್ತಲೇ ಸುತ್ತಲು ಪ್ರಾರಂಭಿಸಿದರು. ಕಳೆದ ವಾರ ಯಾವುದೋ ಪುಸ್ತಕ ಹುಡುಕಾಡುತ್ತಿರುವಾಗ ಎನ್. ನರಸಿಂಹಯ್ಯನವರ ‘ಭಯಂಕರ ಭೈರಾಗಿ' ಪುಸ್ತಕ ಸಿಕ್ಕಿತು. ಹಿಂದಿನ ಇವೆಲ್ಲಾ ಘಟನೆಗಳು ನೆನಪಾದವು.
ಆ ಸಮಯದಲ್ಲಿ ನನಗೆ ಪತ್ತೇದಾರಿ ಸಾಹಿತ್ಯದ ಹುಚ್ಚು ಹಿಡಿಸಿದ ಕೀರ್ತಿ ನಿಸ್ಸಂಶಯವಾಗಿಯೂ ನರಸಿಂಹಯ್ಯನವರಿಗೆ ಸಲ್ಲಬೇಕು. ನಂತರದ ದಿನಗಳಲ್ಲಿ ಕಾಕೋಳು ರಾಮಯ್ಯ, ಜಿ.ಪ್ರಕಾಶ್, ಮಾ,ಭೀ,ಶೇ., ಬಿ.ವಿ. ಅನಂತರಾವ್, ಸುದರ್ಶನ ದೇಸಾಯಿ, ಕೌಂಡಿನ್ಯ, ಟಿ.ಕೆ.ರಾಮರಾವ್ ಮೊದಲಾದವರೆಲ್ಲಾ ಪತ್ತೇದಾರಿ ಸಾಹಿತ್ಯವನ್ನು ಬರೆದರೂ ಎನ್.ನರಸಿಂಹಯ್ಯನವರು ಕಾಡಿದಷ್ಟು ಬೇರೆ ಯಾರೂ ನನ್ನನ್ನು ಕಾಡಲಿಲ್ಲ. ಕಾಡಿಸಿ ಓದಿಸಲಿಲ್ಲ. ಅಂತಹ ಪತ್ತೇದಾರಿ ಸಾಹಿತ್ಯದ ಪಿತಾಮಹರನ್ನು ನೆನೆದುಕೊಳ್ಳುತ್ತಾ ಅವರ ಬಗ್ಗೆ ಒಂದೆರಡು ಮಾಹಿತಿಗಳನ್ನು ನಿಮ್ಮಜೊತೆ ಹಂಚಿಕೊಳ್ಳಲು ಬಯಸುವೆ.
ಎನ್.ನರಸಿಂಹಯ್ಯ ಇವರು ಹುಟ್ಟಿದ್ದು ೧೯೨೫ರ ಸೆಪ್ಟೆಂಬರ್ ೧೮ರಂದು ಬೆಂಗಳೂರಿನಲ್ಲಿ. ಅವರ ತಂದೆ ಸಿ.ನಂಜಪ್ಪ ಹಾಗೂ ತಾಯಿ ಯಲ್ಲಮ್ಮ. ಇವರ ಅಜ್ಜ ಹಾಗೂ ತಂದೆಯವರು ಕವಿಯಾಗಿದ್ದರು. ಹೀಗೆ ಸಾಹಿತ್ಯದ ರುಚಿ ನರಸಿಂಹಯ್ಯನವರಿಗೆ ಬಾಲ್ಯದಲ್ಲೇ ಸಿಕ್ಕಿತ್ತು. ನರಸಿಂಹಯ್ಯನವರು ನಾಲ್ಕನೇ ತರಗತಿಯಲ್ಲಿದ್ದಾಗ ಅವರ ತಂದೆಯವರ ನಿಧನವಾಗುತ್ತದೆ. ಮುಂದಿನ ವರ್ಷವೇ ಅವರ ಚಿಕ್ಕಪ್ಪನವರೂ ಇಹಲೋಕ ತ್ಯಜಿಸಿದಾಗ ಬೇರೆ ದಾರಿಯಿಲ್ಲದೇ ಇವರ ವಿದ್ಯಾಭ್ಯಾಸವು ಮೊಟಕಾಗುತ್ತದೆ. ನಂತರ ಜೀವನನೋಪಾಯಕ್ಕಾಗಿ ಹೋರಾಟ ಪ್ರಾರಂಭವಾಗುತ್ತದೆ. ತಾಯಿಯ ತವರೂರಾದ ಚಿಕ್ಕಮಗಳೂರಿಗೆ ವಲಸೆ ಬರುತ್ತದೆ ಇವರ ಕುಟುಂಬ. ನರಸಿಂಹಯ್ಯನವರು ಸಣ್ಣ ಪ್ರಾಯದಲ್ಲೇ ಕಾಫಿತೋಟದ ಕೆಲಸ ಮಾಡುತ್ತಾರೆ, ಪ್ರಿಂಟಿಂಗ್ ಪ್ರೆಸ್ ಕೆಲಸ, ಟೈಲರ್ ಕೆಲಸ ಎಲ್ಲಾ ಮಾಡುತ್ತಾರೆ. ನಂತರ ಬಸ್ ಕ್ಲೀನರ್ ಆಗಿಯೂ ಕೆಲಸ ಮಾಡುತ್ತಾ ಕೊನೆಗೆ ಕಂಡೆಕ್ಟರ್ ಆಗುತ್ತಾರೆ. ಪ್ರಿಂಟಿಂಗ್ ಪ್ರೆಸ್ ನಲ್ಲಿ ಮೊಳೆಜೋಡಿಸುವ ಸಮಯದಲ್ಲಿ ಸಾಹಿತಿ ಮ. ರಾಮಮೂರ್ತಿಯವರ ಪತ್ತೇದಾರಿ ಕಾದಂಬರಿಯನ್ನು ಓದುತ್ತಾರೆ. ಇದು ಅವರ ಒಳಗೆ ಅಡಗಿದ್ದ ಪತ್ತೇದಾರನನ್ನು ಹೊರತರುತ್ತದೆ.
ಬಸ್ ಕಂಡಕ್ಟರ್ ಆಗಿದ್ದ ಸಮಯದಲ್ಲಿ ಕೇಸ್ ಬಿದ್ದಾಗ ಅದಕ್ಕಾಗಿ ಕೋರ್ಟ್ ಹೋದಾಗ ಅಲ್ಲಿನ ಬೆಂಚ್ ನಲ್ಲಿ ಕುಳಿತು ಅಲ್ಲಿಯ ಕಲಾಪಗಳನ್ನೆಲ್ಲಾ ಗಮನಿಸುತ್ತಾರೆ. ಕೋರ್ಟ್ ಕಲಾಪಗಳ ಜ್ಞಾನ, ಅಪರಾಧಿಯ ಬಗ್ಗೆ ಮಾಹಿತಿ, ಅವನು ಮಾಡಿದ ಅಪರಾಧ, ಸಿಕ್ಕಿಬಿದ್ದ ಕಾರಣಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ಇವೆಲ್ಲವನ್ನೂ ಒಂದೆಡೆ ನೋಟ್ ಮಾಡಿಡುತ್ತಾರೆ. ೧೯೪೭ರಲ್ಲಿ ಇವರು ನಾಗರತ್ನಮ್ಮನವರ ಜೊತೆ ವಿವಾಹವಾದ ಬಳಿಕ ಅವರ ಸಾಹಿತ್ಯಕ ಒಲವು ಇನ್ನಷ್ಟು ಅಧಿಕವಾಗುತ್ತದೆ. ತಮ್ಮ ಪತಿಯ ಪ್ರತಿಭೆಯ ಬಗ್ಗೆ ನಾಗರತ್ನಮ್ಮನವರಿಗೆ ವಿಶೇಷ ನಂಬಿಕೆ. ಅದಕ್ಕಾಗಿ ಅವರು ತಮ್ಮ ಪತಿಯಲ್ಲಿ ‘ಎಷ್ಟು ಕಷ್ಟವಾದರೂ ತೊಂದರೆಯಿಲ್ಲ. ಸಂಸಾರವನ್ನು ನಾನು ನೋಡಿಕೊಳ್ಳುತ್ತೇನೆ ನೀವು ಒಂದು ಕಾದಂಬರಿಯನ್ನು ಬರೆಯಿರಿ” ಎಂದು ಹುರಿದುಂಬಿಸುತ್ತಾರೆ. ಆಗಿನ ಕಾಲಕ್ಕೆ ಸಣ್ಣದು ಅಂದರೆ ಕೇವಲ ೨೪-೩೦ ಪುಟಗಳ ಪತ್ತೇದಾರಿ ಕಾದಂಬರಿ ಹೊರ ಬರುತ್ತಿತ್ತು. ಅವುಗಳನ್ನು ಗಮನಿಸಿದಾಗ ನರಸಿಂಹಯ್ಯನವರಿಗೆ ಆ ಪುಸ್ತಕಗಳಿಗಿಂತ ತಾನು ಎಷ್ಟೋ ಚೆನ್ನಾಗಿ ಬರೆಯಬಲ್ಲೆ ಎಂದು ಅನಿಸುತ್ತಿತ್ತಂತೆ. ತಮ್ಮ ಅನಿಸಿಕೆಯನ್ನು ಪ್ರಕಾಶಕರಾದ ಟಿ.ನಾರಾಯಣಯ್ಯಂಗಾರ್ ಅವರ ಬಳಿ ತೋಡಿಕೊಂಡಾಗ, ನೀವು ಬರೆದು ಕೊಡಿ. ನಾನು ಪ್ರಕಟಿಸುವೆ ಎನ್ನುತ್ತಾರೆ. ಎನ್. ನರಸಿಂಹಯ್ಯನವರು ಕೂಡಲೇ ಪಟ್ಟಾಗಿ ಕುಳಿತು ‘ಪತ್ತೇದಾರ ಪುರುಷೋತ್ತಮ' (ಪುರುಷೋತ್ತಮನ ಸಾಹಸಗಳು) ಎಂಬ ೨೦೦ ಪುಟಗಳ ಪತ್ತೇದಾರಿ ಕಾದಂಬರಿಯನ್ನು ಬರೆದುಕೊಡುತ್ತಾರೆ. ಅದು ಮುದ್ರಣವಾದ ೧೫ ದಿನಕ್ಕೇ ಪ್ರತಿಗಳು ಮುಗಿದು ಹೋಗುತ್ತವೆ. ಜನರು ಎನ್.ನರಸಿಂಹಯ್ಯನವರ ಬರಹದಲ್ಲಿನ ಹೊಸತನ ಗುರುತಿಸಲು ಪ್ರಾರಂಭಿಸಿದರು. ನಂತರ ಒಂದರ ಹಿಂದೆ ಒಂದು ಪುಸ್ತಕ ಬರೆದರು. ವಿವಿಧ ಪ್ರಕಾಶಕರು ಮುದ್ರಿಸಿ ಹಣ ಮಾಡಿಕೊಂಡರೂ ನರಸಿಂಹಯ್ಯನವರಿಗೆ ಕಿಂಚಿತ್ತೂ ಗೌರವ ಧನ ಕೊಡಲಿಲ್ಲ. ತಮ್ಮ ಗೆಳೆಯ ಮ. ರಾಮಮೂರ್ತಿಯವರ ಸಲಹೆ ಮೇರೆಗೆ ಪ್ರಕಾಶಕರಲ್ಲಿ ಹಣ ಕೇಳಿದಾಗ ಒಬ್ಬೊಬ್ಬರಾಗಿ ಹಿಂದೆ ಸರಿದು ಬಿಟ್ಟರು. ಅದರೆ ಇದು ಹೆಚ್ಚು ದಿನ ಉಳಿಯಲಿಲ್ಲ. ಮಾರುಕಟ್ಟೆಯಲ್ಲಿ ಇವರ ಕಾದಂಬರಿಗಳಿಗೆ ಬೇಡಿಕೆ ಇತ್ತು. ಭೂತ-ಪಿಶಾಚಿ, ಮಾಟ ಮಂತ್ರ, ಕೊಲೆ-ಕಳ್ಳತನ ಯಾವ ವಿಷಯದ ಬಗ್ಗೆ ಬೇಕಾದರೂ ಓದುಗರ ಆಸಕ್ತಿಯನ್ನು ಕೆರಳಿಸುವ ರೀತಿಯಲ್ಲಿ ಬರೆದುಕೊಡಬಲ್ಲ ಛಾತಿ ಇದ್ದ ನರಸಿಂಹಯ್ಯನವರನ್ನು ಬಿಟ್ಟು ಬಿಡಲು ಪ್ರಕಾಶಕರಿಗೆ ಆಗಲಿಲ್ಲ. ಮತ್ತೆ ಹಿಂದೆ ಅವರ ಬಳಿ ಬಂದು ಗೌರವ ಧನ ಕೊಟ್ಟು ಕಾದಂಬರಿಗಳನ್ನು ಪ್ರಕಟಿಸತೊಡಗಿದರು.
‘ನೀವು ಕೇವಲ ಪತ್ತೇದಾರಿ ಕಾದಂಬರಿ ಬರೆಯಲು ಮಾತ್ರ ಲಾಯಕ್ಕು, ಸಾಮಾಜಿಕ ಕಾದಂಬರಿ ಬರೆದು ತೋರಿಸಿ’ ಎಂದು ಹೇಳಿದ ಒಬ್ಬರ ಮಾತನ್ನು ಚಾಲೆಂಜ್ ಆಗಿ ತೆಗೆದುಕೊಂಡ ನರಸಿಂಹಯ್ಯನವರು ಕೇವಲ ಹತ್ತು ದಿನಗಳಲ್ಲಿ ಸಾಮಾಜಿಕ ಕಾದಂಬರಿಯನ್ನು ಬರೆದು ಕೊಟ್ಟರು. ಇವರ ಕಾದಂಬರಿಗಳು ಸಾಮಾನ್ಯ ಜನರಿಗೂ ಅರ್ಥವಾಗುವ ಭಾಷೆಯಲ್ಲಿ ಇರುತ್ತಿದ್ದವು. ಇವರಿಗೆ ಆಂಗ್ಲ ಭಾಷೆಯ ಪರಿಚಯ ಕಮ್ಮಿ ಇದ್ದ ಕಾರಣದಿಂದ ಇವರ ಕಾದಂಬರಿಗಳಲ್ಲಿ ವಿದೇಶೀ ಶೈಲಿ ಕಾಣುವುದು ಕಮ್ಮಿ. ಭೂತ ಪ್ರೇತ, ಮಾಟ ಮಂತ್ರಗಳನ್ನು ಇವರು ಬಹುವಾಗಿ ನಂಬುತ್ತಿದ್ದರು ಎಂಬುವುದು ಇವರ ಬರಹಗಳಲ್ಲಿ ವ್ಯಕ್ತವಾಗುತ್ತದೆ. ಸುಮಾರು ೫೨೦ ಕಾದಂಬರಿಗಳನ್ನು ಬರೆದ ಖ್ಯಾತಿ ಇವರದ್ದು. ಪತ್ತೇದಾರ ಪುರುಷೋತ್ತಮ, ಮಧುಸೂದನ ಇವರ ನೂರಕ್ಕೂ ಮಿಕ್ಕಿದ ಸಾಹಸಗಳು, ಚಿತ್ರ ವಿಚಿತ್ರ ಹೆಸರಿನ ಕಾದಂಬರಿಗಳು ಇವರಿಗೆ ೭೦-೮೦ರ ದಶಕದಲ್ಲಿ ಬಹಳ ಪ್ರಸಿದ್ಧಿಯನ್ನು ತಂದುಕೊಟ್ಟವು.
ಭಯಂಕರ ಭೈರಾಗಿ ಹಾಗೂ ಭಯಂಕರ ಭವಾನಿ ಇವರಿಗೆ ಬಹಳ ಹೆಸರು ತಂದು ಕೊಟ್ಟ ಕಾದಂಬರಿಗಳು. ಇವರ ಕಾದಂಬರಿಯ ಶೀರ್ಷಿಕೆಗಳು ಬಹಳ ರೋಚಕವಾಗಿರುತ್ತಿತ್ತು. ಉದಾಹರಣೆಗೆ ವಿಚಿತ್ರ ವಿಲಾಸಿನಿ, ಮಾಯಾಂಗನೆಯ ಮರ್ಮ, ವಿಲಕ್ಷಣ ವಾರಾಂಗನೆ, ಎಂಟು ಕೊಲೆಯ ಭಂಟ, ರಾಗಿಣಿಯ ರಂಗಾಟ, ಅನುರಾಗದ ಅಂಬುಜ, ಪ್ರೇತವನದ ಪುಷ್ಪ, ಮಾರ್ಜಾಲ ಮಾಯ, ಕಣ್ಣಿಲ್ಲದ ಕೊಲೆಗಾರ, ಹೆಣ್ಣುಹುಲಿಯ ಹಸಿವು, ಗುಟ್ಟಿನ ಗುಲಾಮ, ರೂಪವಿಲ್ಲದ ಭೂಪ. ಈ ಶೀರ್ಷಿಕೆಗಳನ್ನು ಗಮನಿಸಿದಾಗಲೇ ಕಾದಂಬರಿ ಓದಬೇಕೆಂಬ ಕುತೂಹಲವಾಗುತ್ತಿತ್ತು.
ದೂರದರ್ಶನ ಹಾಗೂ ಹೊಸ ಹೊಸ ಲೇಖಕರ ಆಗಮನದಿಂದ ಇವರ ಹಳೆಯ ಶೈಲಿ ಹೊಸ ಓದುಗರಿಗೆ ಮೆಚ್ಚುಗೆಯಾಗಲಿಲ್ಲ. ಈ ಕಾರಣದಿಂದ ೯೦ರ ದಶಕದಲ್ಲಿ ಇವರು ನಿಧಾನವಾಗಿ ನೇಪಥ್ಯಕ್ಕೆ ಸರಿಯಬೇಕಾಯಿತು. ಕೆಲವೊಮ್ಮೆ ಮಾತ್ರ ಯಾರಾದರೂ ಪತ್ರಿಕೆಯವರು ಇವರನ್ನು ನೆನಪು ಮಾಡಿ ಇವರಿಂದ ಕೆಲವು ಪತ್ತೇದಾರಿ ಕಾದಂಬರಿಗಳನ್ನು ಬರೆಸಿದ್ದು ಉಂಟು. ಈ ಕಾರಣದಿಂದ ಇವರ ಕಾದಂಬರಿ ಜನರನ್ನು ತಲುಪಿದರೂ ಇವರು ಮಾತ್ರ ಬಡವರಾಗಿಯೇ ಉಳಿದರು. ಇವರ ಸಂಕಷ್ಟದ ಪರಿಸ್ಥಿತಿಯನ್ನು ಗಮನಿಸಿ ೨೦೧೦-೧೧ರಲ್ಲಿ ಸಪ್ನ ಬುಕ್ ಹೌಸ್ ಅವರು ಇವರ ಬಹಳಷ್ಟು ಪತ್ತೇದಾರಿ ಕಾದಂಬರಿಗಳನ್ನು ಮರು ಮುದ್ರಿಸಿದರು. ಈ ಕಾರಣದಿಂದ ಇವರ ಪ್ರತಿಗಳು ಲಭ್ಯವಿಲ್ಲದ ಕಾದಂಬರಿಗಳು ಓದುಗರಿಗೆ ದೊರೆತವು. ನರಸಿಂಹಯ್ಯನವರಿಗೂ ಸ್ವಲ್ಪ ಆರ್ಥಿಕ ಸಹಾಯ ದೊರೆಯಿತು. ೨೦೧೧ರ ಡಿಸೆಂಬರ್ ೨೫ರಂದು ನರಸಿಂಹಯ್ಯನವರು ನಿಧನ ಹೊಂದಿದರು. ೧೯೯೭ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ಹಾಗೂ ೫೦೦ ರೂ. ಮಾಶಾಸನ ನೀಡಿದ್ದು ರಾಜ್ಯ ಸರಕಾರದ ಸಾಧನೆ ಅಷ್ಟೇ.
ಈಗಲೂ ಪತ್ತೇದಾರಿ ಸಾಹಿತ್ಯ ಎಂದಾಕ್ಷಣ ನನ್ನ ನೆನಪಿಗೆ ಬರುವುದು ಎನ್. ನರಸಿಂಹಯ್ಯನವರೇ. ಒಂದು ರೀತಿಯಲ್ಲಿ ಅವರು ಕನ್ನಡದ ಸರ್ ಅರ್ಥರ್ ಕಾನನ್ ಡಯಲ್ (ಶೆರ್ಲಾಕ್ ಹೋಮ್ಸ್ ಸೃಷ್ಟಿಕರ್ತ) ಎಂದೇ ಹೇಳಬಹುದು. ಸತ್ಯಶೋಧನೆಯಲ್ಲಿ 'ಕನ್ನಡದ ಜೇಮ್ಸ್ ಬಾಂಡ್' ಎನ್ನಬಹುದು ಇವರನ್ನು. ಆಗಿನ ಕಾಲಕ್ಕೆ ನಮ್ಮನ್ನೆಲ್ಲಾ ಓದಲು ಹಚ್ಚಿದ ಮಹಾನುಭಾವನನ್ನು ಈಗಲೂ ನಾನು ನೆನೆಸಿಕೊಳ್ಳುತ್ತೇನೆ.
ಚಿತ್ರದಲ್ಲಿ ನರಸಿಂಹಯ್ಯನವರ ಹಳೆಯ ಕೆಲವು ಕಾದಂಬರಿಗಳು (ಪುಸ್ತಕದ ವಿನ್ಯಾಸ ಗಮನಿಸಿ)