ನೆನಪಿನ ಚಿತ್ರಕಲಾ ಶಾಲೆ: ಭಾಗ ೧೨ ’ಅನಂತ ವಿಶ್ವಕ್ಕೊಂದು ಖಡಕ್ ಬ್ರೇಕ್’

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೨ ’ಅನಂತ ವಿಶ್ವಕ್ಕೊಂದು ಖಡಕ್ ಬ್ರೇಕ್’

 

 
(೩೧)
ಸೋಕುಮಾರಿ ಉರುಫ್ ಕಲಾ.ಕೆ, ೨೦೧೧: 
 
ಇಲ್ಲಿಯವರೆಗೂ ನನಗೆ ಈ ನಿಗೂಢದ ಬಗ್ಗೆ ಸ್ಪಷ್ಟವಾಗಿದ್ದದ್ದು ಒಂದು ವಿಷಯ. ಅದು ನಾನು ಕಲ್ಪಿಸಿಕೊಳ್ಳಬಹುದಾದ್ದಕ್ಕಿಂತಲೂ ಹೆಚ್ಚಿನ ಫ್ಯಾಂಟಸಿಯನ್ನೊಳಗೊಂಡಿತ್ತು ಎಂಬುದೇ ಆ ವಿಷಯ. ವಿಷಯ ಇಷ್ಟೇ: ೨೦೧೧ರಲ್ಲಿ ನಾನು ಹಲವು ನಿಮಿಷಗಳ ಅಂತರದಲ್ಲಿ ಫೇಸ್‌ಬುಕ್ಕಿನಲ್ಲಿ ಬರೆಯುತ್ತಿದ್ದ ಸಂದೇಶಗಳು ಯಾವುದೇ ಭೌತಿಕವಸ್ತುಗಳ ಮೇಲೆ, ಭೌತಿಕ ವಸ್ತುಗಳಿಂದ ಬರೆದುದಾಗಿರಲಿಲ್ಲ. ಅಥಾರ್ತ್ ಪೆನ್ನು ಅಥವ ಪೆನ್ಸಿಲ್ಲಿನಿಂದ ಕಾಗದದ ಮೇಲೆ ಬರೆಯದೆ, ಬೇಕಾದ ಆಕಾರಕ್ಕೆ, ಬೇಕಾದ ವರ್ಣಕ್ಕೆ ಪರಿವರ್ತಿತವಾಗಬಲ್ಲ ’ಸಿಮ್ಯುಲೇಷನ್’ ಗುಣದ ನನ್ನ ಗಣಕದ ಅಕ್ಷರಗಳಿಗೆ ಒಂದು ಮಾಂತ್ರಿಕ ಗುಣ ದಕ್ಕಿಬಿಟ್ಟಿತ್ತು. ಕಂಪ್ಯೂಟರಿನಲ್ಲಿ ಏನೇ ಮೂಡಿಸಿದರೂ ಅದನ್ನು ’ಬರಹ’ ಮತ್ತು ’ಚಿತ’ ಎಂದು ಹಳೆಯ ಅರ್ಥದಲ್ಲಿ ವಿಭಾಗಿಸಲಾಗದು. ಅಕ್ಷರವನ್ನು ಚಿತ್ರದಂತೆ ದೊಡ್ಡದು, ಸಣ್ಣದು ಮಾಡಿ ತಿದ್ದಿ ತೀಡಿಬಿಡಬಹುದು, ಅದರ ಬಣ್ಣವನ್ನೇ ಅಕ್ಷರಶಃ ಅಕ್ಷರವನ್ನಾಗಿ ಬದಲಾಯಿಸಿಬಿಡಬಹುದು. ನಿಜದಲ್ಲಿ ಚಿತ್ರಕ್ಕೂ ಅಕ್ಷರಕ್ಕೂ ಅನೇಕ ವಾಗ್ವಾದಗಳ, ವಾಗ್ವುದ್ಯಗಳ, ಕ್ರಾಂತಿ, ಹಿಂಸೆ ಹಾಗೂ ಕೊಲೆಗಳ ಐತಿಹಾಸಿಕ ಸಂಬಂಧಗಳಿವೆ, ನಂಟೂ ಇದೆ. 
 
ಕ್ಷಮಿಸಿ, ನನ್ನೊಳಗಿನ ತಾತ್ವಿಕಳನ್ನು ಹೊರಗೆ ಬಿಟ್ಟರೆ ಸಾಕು, ಹೀಗೆಲ್ಲ ಅರ್ಥವಾಗದ, ಆದ್ದರಿಂದಲೇ ’ಅರ್ಥವಿಲ್ಲದು’ ಎನ್ನಿಸಿಬಿಡುವ ಮಾತುಗಳು ಹೊರಬಂದುಬಿಡುತ್ತವೆ. ಮೊನ್ನೆ ನನ್ನ ಮನೆಗೆಲಸದವಳಿಗೆ ಹೇಳಿದ್ದೆ, ಶ್ರೇಣೀಕರಣದ ಪರಿಧಿಯ ಹೊರನಿಂತು ಸಂವಾದಿಸುವುದು ಸಲೀಸಲ್ಲವೆ? ಆಕೆಗೆ ಇರುಸುಮುರಿಸು ಆಗಿತ್ತು. ಕನ್ನಡಾನೇ ನಾನೂ ಮಾತಾಡ್ತಿರೋದು. ನೀನೂ ಕನ್ನಡದವ್ಳು. ಹೇಳು ಏನು ಅರ್ಥವಾಯಿತು ನಿನಗೆ? ನನ್ನ ಭಾಷೆಯಲ್ಲಿ ಏನಾದರೂ ತಪ್ಪಿದೆಯ? ಎಂದೆಲ್ಲಾ ಕೇಳಿದ್ದೆ. ಆಕೆಯೂ ನನ್ನ ವಯಸ್ಸಿನವಳೇ: ಸುಮಾರು ನಲವತ್ತೈದು ವರ್ಷದವಳು. ಆಕೆ ಮನುಷ್ಯ ದೇಹದಲ್ಲಿ ಭೂತ ಕಂಡಂತೆ ಗಾಭರಿಬಿದ್ದಳು, ಪರಿಚಿತವೆನಿಸುವ ಕನ್ನಡ ಪದಗಳ ಮೂಲಕವೇ, ಪರಿಚಿತ ಅಕ್ಷರಜೋಡಣೆಯ ಮುಖೇನವೇ ಏನೂ ಅರ್ಥವಾಗದ ಶಬ್ದೋತ್ಪತ್ತಿಯನ್ನು ಕೇಳಿ! ಕೊನೆಗೆ ಆಕೆಯ ಭಾಷೆಯಲ್ಲಿಯೇ ಆಕೆಯನ್ನು ಸಮಾಧಾನ ಮಾಡಿದ್ದೆ, ಲಕ್ಷ್ಮೀ, ’ನಾನು ಆಂಟಿ, ನೀನು ಕೆಲಸದೋಳು’ ಅಂತ ಅಂದುಕೊಳ್ಳದೆ, ಹೆದರದೆ ಕಲಸ ಮಾಡೋಕಾಗಲ್ಲವೆ ನಿನಗೆ? ಅನ್ನೋದು ನನ್ನ ಮಾತಿನ ಅರ್ಥ, ಎಂದು. ಓ ಅಂಗಾ. ನಾನೆಲ್ಲೋ ನೀವು ಭೂತ ಬಿಡ್ಸೋ ಮಂತ್ರ ಏನನ್ನೋ ಹೇಳ್ತಿದ್ದೀರ ಅಂದುಕೊಂಡುಬಿಟ್ಟಿದ್ದೆ. ಯಾಕಂದ್ರೆ ಮಾಂತ್ರಿಕರು ಮಂತ್ರ ಹೇಳ್ವಾಗ ಪದ ಅರ್ಥಾಯ್ತದೆ, ವಿಷ್ಯ ಭಯ ಹುಟ್ಟಿಸ್ತದೆ, ಅರ್ಥ ಇಲ್ದಿರೋದ್ರಿಂದ ಎಂದು ತನ್ನದೇ ಕೊಟೇಶನ್ ಹುಟ್ಟುಹಾಕಿ, ನಗಾಡಿದ್ದಳು.     
 
ಕಾಲದ ಕೊಳವೆಯಲ್ಲಿ ಹಿಂದುಮುಂದಾಗಿ, ವಿಪರೀತ ವೇಗದಿಂದ ಚಲಿಸಿ, ಅದು ಅದಾವ ಕಾರಣಕ್ಕೋ ನನ್ನ ಫೇಸ್‌ಬುಕ್ಕಿನ ಮೆಸೇಜು ಇಪ್ಪತ್ತೊಂದು ವರ್ಷಗಳಷ್ಟು ಹಿಂದಕ್ಕೆ, ’ಈ’ ಫೇಸ್‌ಬುಕ್ಕಿಗೆ ’ಆಗ’ ಇದರ ಪರ್ಯಾಯವಾಗಿದ್ದ ಇನ್‌ಲ್ಯಾಂಡ್ ಪತ್ರದ ರೂಪತೆಳೆದು ೧೯೮೮ರ ಆಗಸ್ಟ್ ತಿಂಗಳಿಗೆ ಹೋಗಿಬಿಟ್ಟಿತ್ತು. ಭೂತವಾಗುವುದಕ್ಕೂ, ಭೂತಕ್ಕೆ ಹೋಗುವುದಕ್ಕೂ ವ್ಯತ್ಯಾಸವೇನೆಂಬುದು, ಕಾಲವು ಮುಖಮಾಡುವ ದಿಕ್ಕನ್ನು ಆಧರಿಸಿರುತ್ತದೆ. ಐನ್‌ಸ್ಟೈನೋ ನ್ಯೂಟನ್ನೋ ಹೇಳಿದ್ದನಲ್ಲ, ಟ್ರೈನಿನ ಒಳಗಿರುವವರುವವರಿಗೂ ಹೊರಗಿರುವವರಿಗೂ ಕಾಲದ ಅಳತೆಯು ವ್ಯತ್ಯಾಸವಾಗುತ್ತದೆಂದು. ಕಾಲವನ್ನು ತಿರುಗಿಸಲು ಇರುವ ಕಾಲ್ಪನಿಕ ಸಾಧನವೆಂದರೆ, ಗ್ರಾಫಿಕ್ ಪ್ರಿಂಟ್ ತೆಗೆವಾಗ ಮಾಡುತ್ತೇವಲ್ಲ ಅಂತಹದ್ದೇ. ಮನುಷ್ಯನೊಬ್ಬ ಕನ್ನಡಿಯಲ್ಲಿ ಎಡವು ಬಲವಾಗಿ ಕಾಣುವಂತೆ, ಕನ್ನಡಿಯೊಂದರಲ್ಲಿ ಕಾಲನ ಪಯಣವನ್ನು ಪ್ರತಿಫಲಿಸಿದ್ದಾದರೆ, ಆಗ ಮುಂದೆ ಹೋಗುತ್ತಿರುವ ಕಾಲವು ಹಿಮ್ಮುಖವಾಗಿ ಚಲಿಸತೊಡಗುತ್ತದೆ. ಆದರೆ ಈ ಅಸಂಗತವನ್ನು ಭೌತಿಕವಾಗಿ, ವೈಜ್ಞಾನಿಕವಾಗಿ, ಪುನರ್-ಮರುಕಳಿಸುವಂತೆ ಮಾಡುವುದು ಹೇಗೆ? ನಿಯಮಿತವಾದ ಪ್ರಯೋಗಕ್ಕೆ ನಿಯಮಿತವಾದ ಪರಿಣಾಮವೆಂಬ ವೈಜ್ಞಾನಿಕ ನಿಯಮವನ್ನು ಕನ್ನಡಿಯಲ್ಲಿ ಪ್ರತಿಫಲಿಸಿದರೆ ಸಾಕು-ಅದರೆ ವಿರುದ್ಧಾರ್ಥವಾದ ಅಸಂಗತತೆ ಹುಟ್ಟುತ್ತದೆ. ಅದರಲ್ಲಿ ಕಾಲನು ತಿರುವು ಮರುವಾಗುತ್ತಾನೆ. ಕಾಲದಲ್ಲಿ ಹಿಮ್ಮುಖವಾಗಿ ಚಲಿಸಲಿರುವ ಒಂದೇ ಸಾಧನವಿದು ಎಂದೆಲ್ಲಾ ಚಿಂತಿಸುತ್ತ, ನನ್ನ ಚಿಂತನೆಯ ಗಡಿಮೀರಿದ ದಾಹವನ್ನು ನಾನೇ ಊರ್ಜಿತಗೊಳಿಸಿದೆ.    
 
೧೯೮೮ರ ಅನೇಖ ವಿವರಿಸಿದಂತೆ ಅಲ್ಲಿ ತನ್ನ ’ಸಿಮ್ಯುಲೇಷನ್’ ಗುಣವನ್ನು ಕಳೆದುಕೊಂಡು ಭೌತಿಕ ಇನ್‌ಲ್ಯಾಂಡ್ ಲೆಟರಿನ ಮೇಲೆ ನನ್ನದೇ ಆದ ಹಸ್ತಪ್ರತಿಯಾಗಿ ಪರಿವರ್ತಿತವಾಗಿತ್ತು, ಕಂಪ್ಯೂಟರಿನಲ್ಲಿ ನಾನು ಕುಟ್ಟುತ್ತಿದ್ದ ಫೇಸ್‌ಬುಕ್ ಮೆಸೇಜು. ಕಾಲವೆಂಬ ಬಲೂನಿಗೆ ಸೂಜಿ ಚುಚ್ಚಿದಂತಾಗಿತ್ತು. ಅಷ್ಟೇ ಅಲ್ಲ ಸಿಮ್ಯುಲೇಷನ್ ಎಂಬುದು ಅದರ ವಿರುದ್ಧಾರ್ಥವಾದ ’ನೈಜ’ತೆಯಾಗಿಬಿಟ್ಟಿತ್ತು. ಯಾವುದಕ್ಕೆ ಅಸಲಿ ಎಂಬುದಿಲ್ಲವೋ, ಯಾವುದನ್ನು ನಕಲು ಮಾಡಲಾಗದೋ, ಪ್ರತಿಕೃತಿ ತೆಗೆಯಲಾಗದೋ ಅದನ್ನೇ ’ಸಿಮ್ಯುಲೇಷನ್’ ಎನ್ನುವುದು. ಅಸಲಿಯೇ ಅಲ್ಲದ್ದನ್ನು ಪ್ರತಿಕೃತಿ ತೆಗೆಯಲಾಗದು ಏಕೆಂದರೆ ಅದರೆ ಪ್ರತಿಕೃತಿಯೂ ಅಸಲಿಯಾಗಿಬಿಡುತ್ತದೆ, ಫೋಟೋ ಹಾಗೂ ಗ್ರಾಫಿಕ್ ಪ್ರಿಂಟ್‌ಗಳ ಮಲ್ಟಿಪಲ್-ಪ್ರಿಂಟ್‌ಗಳಂತೆ, ರಕ್ತಬೀಜಾಸುರನಂತೆ. ಇದಕ್ಕಿಲ್ಲದ ಈ ಮೂರೂ ಗುಣಗಳು ನೈಜತೆಗೆ ಇದೆ. 
(೩೨)
ಲಕ್ಷ್ಮಿ, ಹಿಂದಿನ ಕಾಲಕ್ಕೆ ಹೋಗಬಹುದಾ ಯಾರಾದ್ರೂ ಅಥವ ಏನಾದ್ರೂ? ಎಂದು ಕೆಲಸದವಳನ್ನು ಕಿಚಾಯಿಸಿದ್ದೆ. 
ಏನಾದ್ರೂ ಎಂಗೆ ಹಿಂದಕ್ಕೋಯ್ತದೆ, ನೆನಪೊಂದನ್ನು ಬಿಟ್ಟು? ಮನುಷ್ರು ಬೇಕಾದ್ರೆ ಎಷ್ಟೋ ಲಕ್ಷ ರೂಪಾಯಿ ಕೊಟ್ರೆ, ಸತ್ತೋರ್ನ ಐದು ನಿಮಿಷ ಬದುಕಿಸ್ತಾರೆ ಅಂತ ಎಷ್ಟೋ ವರ್ಷದ ಹಿಂದೆ ಕೇಳಿದ್ದೆ, ಕಣ್ರವ್ವ. ಆ ನೆನಪೂ ಹಿಂದಕ್ಕೋಗಿಬಿಡ್ತು. ನೆನಪು, ಸುದ್ದಿಗಳು ಹಿಂದಕ್ಕೋದಂತೆ ಕಾಲ ಎಂಗೋಗಕ್ಕೆ ಸಾಧ್ಯ ಯೋಳಿ? ಎಂದಿದ್ದಳು.
ಆಗೆಲ್ಲಾ ಲಕ್ಷ ಇದ್ದದ್ದು ಈಗ ಕೋಟಿ ಆಗಿರುತ್ತೆ. ಆದ್ರೆ ನೀನೇ ಕಣ್ಣಾರ ಯಾರಾದ್ರೂ ಹಿಂದಿನ ಕಾಲದೋರು ಈಗ ಮತ್ತೆ ಬಂದಿರೋದನ್ನ ಕಂಡಿದ್ದೀಯ ಅಥವ ನಂಬ್ತೀಯ?
ಕಂಡ್ರೆ ಮಾತ್ರ ನಂಬ್ತೀನಿ. ನಾನು ಚಿಕ್ ಹುಡುಗಿಯಾಗಿದ್ದಾಗ ನಮ್ಮನೆ ಪಕ್ಕದಲ್ಲಿದ್ದ ಅಯ್ನೋರು ಎಷ್ಟೋ ವರ್ಷ ಆದಮ್ಯಾಕೆ ಮೊನ್ನೆ ಸಿಕ್ಕಿದ್ರಲ್ಲ ಎಂದು ನಗತೊಡಗಿದಳು.
ಅದಲ್ಲ ನಾನು ಹೇಳಿದ್ದು.  ಆಗ ಅವರು ಹೇಗಿದ್ರೋ ಈಗ್ಲೂ ಹಾಗೇ ಇರೋದನ್ನು ಕಂಡಿದ್ದೀಯ?
ರಾಜ್‌ಕುಮಾರ ಸಾಯೋಗಂಟಾ ಅಂಗೇ ಇದ್ರಲ್ಲ ಎಂದು ಮತ್ತೆ ನಗತೊಡಗಿದಳು. ತನ್ನನ್ನೇ ಅಣಕಮಾಡುತ್ತ ನಗುವ ವ್ಯಕ್ತಿಯನ್ನು ನಾನು ನೋಡಿದ್ದು ಲಕ್ಷ್ಮಿಯಲ್ಲಿ ಮಾತ್ರ, ಅದೆಂಗ್ ಸಾಧ್ಯ. ಕಾಸು ಕೀಳೋಕೆ ದಾಸಯ್ಯನೋ, ಭವಿಷ್ಯ ನುಡಿಯೋನೋ ಒಂದಷ್ಟು ಮಂಕುಬೂದಿ ಎರಚಬೋದು. ಆದ್ರೆ ಒಂದ್ ಸಲ ಆಗಿಹೋದದ್ದು ಮತ್ತೆ ಬರದಾದ್ರೆ ನಮ್ ಟೇಮ್ ಚೆನ್ನಾಗಿಲಾ ಅಂತಲೇ ಅರ್ಥ ಎಂದು ’ಟೇಮ್ ಚೆನ್ನಾಗಿಲ್ಲದ’ ಆಕೆಯ ವರಸೆಯಲ್ಲಿ ಏನೋ ಹೊಳಹು ಕಂಡಿತು ನನಗೆ. ಕಾಲ ಹಿಂದುಮುಂದಾಗುವ ಕಿಂಡಿ ತೆಗೆದುಕೊಂಡರೆ ಟೇಮ್ ಚೆನ್ನಾಗಿರಾಕಿಲ್ಲ ಅನ್ನೋ ಅರ್ಥದ ಆಕೆಯ ಮಾತುಗಳನ್ನು ನನ್ನದೇ ಆದ ಹೊಸ ಕೊಟೇಷನ್ ಆಗಿಸಿಕೊಂಡು ಡೈರಿಯಲ್ಲಿ ಎಂಟ್ರಿ ಮಾಡಿಕೊಂಡೆ.
(೩೩)
ಯಾರಿಗೂ ಸಲ್ಲದ ಸಮಸ್ಯೆಗಳನ್ನು ಹಾಗೆ ಕರೆಯಲಾಗದು. ತಗೊಳ್ಳಿ, ಮತ್ತೊಂದು ಕೊಟೇಷನ್ನು. ಒಂದಿಡೀ ವಾರ, ಸಮಯ ಸಿಕ್ಕಾಗಲೆಲ್ಲ ಅನೇಖನೊಂದಿಗೆ ಫೇಸ್‌ಬುಕ್ಕಿನಲ್ಲಿ ಚಾಟ್ ಮಾಡಿದೆ, ಅಥವ ಆತನ ಭಾಷೆಯಲ್ಲಿ ಹೇಳಬಹುದಾದರೆ ’ಪತ್ರವ್ಯವಹಾರ’ ಮಾಡಿದ್ದೆ, ಏನನ್ನೋ ಮತ್ತು ಎಲ್ಲವನ್ನೂ ಪರೀಕ್ಷಿಸುವಂತೆ. ಆಕಸ್ಮಿಕವಾಗಿ ಈ ಆಗುಹೋಗುಗಳಲ್ಲಿ ಸತ್ಯವಿದ್ದಲ್ಲಿ ಅನೇಖನಿಗೆ ಅನೇಕ ವಿಧವಾದುದಲ್ಲದಿದ್ದರೂ ಆರ್ಥಿಕ ತೊಂದರೆಯಾಗದಿರಲಿ ಎಂದು ಸುದೀರ್ಘ ಪತ್ರಬರೆದಂತೆ ಆತನೊಂದಿಗೆ ಚಾಟ್ ಮಾಡುತ್ತಿದ್ದುದ್ದರಿಂದ, ನನಗೆ ತಿಳಿಯದೆಲೇ ನನ್ನ ಚಾಟ್, ಫೇಸ್‌ಬುಕ್ ಮುಖಾಂತರದ ಮಾತುಕತೆಯು ಪತ್ರವ್ಯವಹಾರವಾಗಿ ಹೋಯಿತು. ೧೯೮೮ರಲ್ಲಿ ನಮಗೆಲ್ಲಾ ಪಾಕೆಟ್ ಮನಿ ಸಿಗುತ್ತಿದ್ದುದು ದಿನಕ್ಕೆ ಹತ್ತು ರೂಗಳು ಮಾತ್ರ. ಅದರಲ್ಲೇ ಚಹಾ, ನಾಷ್ಟಾ, ಊಟ, ಬಸ್‌ಚಾರ್ಜ್ ಮುಂತಾದುವಾಗಬೆಕಿತ್ತಲ್ಲ, ಅಕಸ್ಮಾತ್ ಈ ಕಾಲದ-ಯುಟರ್ನ್ ನಿಜವಿದ್ದ ಪಕ್ಷದಲ್ಲಿ. ’ಫೇಸ್‌ಬುಕ್ಕನ್ನು ಪತ್ರವ್ಯವಹಾರವನ್ನಾಗಿಸುವುದೂ ಸಹ ಕಾಲದಲ್ಲಿ ಹಿಂದುಮುಂದು ಪ್ರಯಾಣಿಸಿದಂತೆ’ ಎಂಬ ಮತ್ತೊಂದು ಸುಲಭದ ಕೊಟೇಷನ್ ಹುಟ್ಟಿಹಾಕಿ ಖುಷಿಗೊಂಡೆ. 
 
ಆಗಿನ ಅನೇಖ ಮಾತ್ರ ಇದನ್ನು ಅನಾಮಿಕ ಪತ್ರವ್ಯವಹಾರವೆಂತಲೇ ಬಲವಾಗಿ ನಂಬಿದ್ದನೇ ಹೊರತು, ಕಾಲ ಜರ್ಕ್ ಹೊಡೆದಿರುವುದಾಗಲಿ, ಆತನಿಗೆ ಗೊತ್ತಿಲ್ಲದ ತಂತ್ರಜ್ಞಾನವಾಗಲಿ ಆತನ ಗ್ರಹಿಕೆಗೆ ಬರುವುದು ಸಾಧ್ಯವೇ ಇರಲಿಲ್ಲ, ಎಂದು ಕ್ರಮೇಣ ನಾನು ಭಾವಿಸತೊಡಗಿದೆ. ನೂರು ಬಾರಿ ಸುಳ್ಳನ್ನು ನಂಬತೊಡಗಿದರೆ ಅದು ಸತ್ಯವಾಗಿಬಿಡುತ್ತದಲ್ಲ, ಹಾಗೆ. ದೇವರು ದೆವ್ವಗಳೆಲ್ಲ ಹುಟ್ಟಿದ್ದು ಹೀಗೆಯೇ ಎಂದು ನನ್ನ ಅಗ್ನೋಸ್ಟಿಕ್ (ಅನಾಸ್ತಿಕ?) ಮನ ನುಡಿಯಲು ನನ್ನೊಳಗಿನ ನನಗೇ ಅನುಮತಿ ನೀಡಿದೆ. ಆತನದ್ದು ಒಂದೇ ಕಂಪ್ಲೇಂಟು ಏನೆಂದರೆ ಇಷ್ಟೆಲ್ಲಾ ಪ್ರೌಢವಾಗಿ ಬರೆವ ನಾನು, ಅಂದರೆ ಸೋಕುಮಾರಿ ಉರುಫ್ ಕಲಾ.ಕೆ, ೧೯೮೮ರಲ್ಲಿ (ಇದನ್ನು ’ಕಾಲ’ವೆಂದು ಭಾವಿಸದೆ ’ವಿಳಾಸ’ವೆಂದು ಓದಿಕೊಂಡಲ್ಲಿ ಈ ಬರವಣಿಗೆಯ ಅರ್ಥೈಸುವಿಕೆ ಸುಲಭವಾಗಬಹುದು) ಆತನ ಸಹಪಾಠಿಯಾಗಿದ್ದರೂ, ದಿನನಿತ್ಯ ಅನೇಖನನ್ನು ಭೇಟಿ ಮಾಡುತ್ತಿದ್ದಾಗ್ಯೂ, ಈ ಪತ್ರಗಳನ್ನು ನಾನೇ ಬರೆದದ್ದೆಂದು ಆಗಿನ ನಾನು ಒಪ್ಪಲು ತಯಾರಿಲ್ಲದಿರುವುದು! ಅಥವ ಹಾಗೆಂದು ಅನೇಖ ತಿಳಿಸಿದ್ದ. ಅಂದರೆ ೧೯೮೮ರ ನನ್ನ ಬಗ್ಗೆ, ೧೯೮೮ರ ಅನೇಖ ೨೦೧೧ರ ನನಗೆ ದೂರು ಸಲ್ಲಿಸುತ್ತಿದ್ದಾನೆ, ನಾನು ೨೦೧೧ರಲ್ಲಿದ್ದೆನೆಂಬ ವಿಷಯವನ್ನು ತಿಳಿಯದೆ. 
 
ಈಗ ಇದೆಲ್ಲ ನಿಜವೆಂದು ನಂಬಬಹುದಾದರೂ, ಒಬ್ಬನೇ ವ್ಯಕ್ತಿ ಎರಡು ಕಾಲಗಳಲ್ಲಿ ಅಸ್ತಿತ್ವದಲ್ಲಿರಬಹುದೆ ಎಂಬುದು. ಅದರ ಪರಿಣಾಮ ನೆನೆಸಿಕೊಳ್ಳ, ಈ ಜಗತ್ತಿನಲ್ಲಿ ಹುಟ್ಟಿದವರೆಲ್ಲರೂ, ಎಲ್ಲವೂ ಪ್ರತಿಕ್ಷಣವೂ ಜೀವಂತವಿರುವುದು ಮತ್ತದು ನಿರಂತರವಾಗಿರುವುದು ಸತ್ಯವಾದಲ್ಲಿ-ಅದು ಅಸಾಧ್ಯವೆನಿಸದು. ಆದರೆ ಆ ಅಗಾಧತೆಯನ್ನು ಕೇವಲ ಮನುಷ್ಯನಾದವನು, ಕೇವಲ ಪಂಚೇಂದ್ರೀಯದ ಮುಖೇನವೇ ವಿಶ್ವದ ಆಗುಹೋಗುಗಳನ್ನು ಹಿಡಿದಿರುಸುವ ಆತನ ಅಹಂಕಾರವುಳ್ಳವನಾದವನಿಗೆ ಜೀರ್ಣಿಸಿಕೊಳ್ಳಲಾರ. ಶ್ರೀಕೃಷ್ಣಪರಮಾತ್ಮನ ವಿಶ್ವರೂಪದರ್ಶನವನ್ನು ಕಂಡು ಅರ್ಜುನ ಮೂರ್ಛೆಬಿದ್ದಿರಲಿಕ್ಕೂ ಸಾಕು. ಜೊತೆಗೆ ೧೯೮೮ಕ್ಕೂ ೨೦೧೧ಕ್ಕೂ ಇರುವ ವ್ಯತ್ಯಾಸವೆಂದರೆ, ಆಗ ಮನುಷ್ಯ ಕಲ್ಪನೆಯಲ್ಲಿ ವಿಶ್ವವೇ (ಯೂನಿವರ್ಸ್) ಆತ್ಯಂತಕವಾಗಿತ್ತು. ಈಗ ಅಸಂಖ್ಯ-ವಿಶ್ವವಿದೆ (ಮಲ್ಟಿವರ್ಸ್). ಆದರೂ ಈ ಬದುಕಿನಲ್ಲಿ ನಾನು ಮಾಡಬಹುದಾದ, ನಾನೇ ಮಾಡಬಹುದಾದ ಒಂದೇ ಕೆಲಸವೆಂದರೆ, ಕಲೆಯ ಮೂಲಕವಾದರೂ ಸರಿ, ಈ ನಿಗೂಢಕ್ಕೊಂದು ಉತ್ತರ ಹುಡುಕಿಕೊಳ್ಳಬೇಕೆಂಬ ಆಶಯ.//