ನೆನಪಿನ ಚಿತ್ರಕಲಾ ಶಾಲೆ: ಭಾಗ ೨೧ - ಹುಲಿಯ ತೋಳವೆಂದು ಕೊಂದನಯ್ಯ!
(೬೦)
ಪರಿಷತ್ತಿನ ರಾತ್ರಿಗಳದ್ದೇ ಒಂದು ಸರ್ರಿಯಲ್ ಅನುಭವ. ಬೆಳಗಿನದ್ದೆಲ್ಲ ಕಂಬೈನ್ಡ್ ಕ್ಲಾಸ್ಗಳಾದರೆ ರಾತ್ರಿಗಳೆಲ್ಲಾ ಬ್ರಹ್ಮಚಾರಿಗಳ, ’ಹೆಂಕಾಗಂ’ಗಳ (ಹೆಣ್ಣು ಕಾಣದ ಗಂಡುಗಳ) ಜಗತ್ತು. ರಾತ್ರಿಯ ಹೊತ್ತಿನಲ್ಲಿ ವಿದ್ಯಾರ್ಥಿಗಳನ್ನು ಕಣ್ಣಾರೆ ನೋಡದೆಯೂ, ಕೇವಲ ಅಲ್ಲಿ ಆಡಲಾಗುತ್ತಿದ್ದ ಮಾತುಗಳನ್ನು ಕೇಳಿದವರಿಗೂ ಇದು ವೇದ್ಯವಾಗುತ್ತದೆ. ಅಲ್ಲಿನ ಕಾವಲುಗಾರ ಆಗಲೇ ಅರವತ್ತರ ಆರಂಭದ ಅಥವ ಅಂತ್ಯದ ಅಂಚಿನಲ್ಲಿದ್ದ ದೊಡ್ಡಯ್ಯ. ಆತ ಹುಲಿಹೊಡೆವ ಕಥೆಯನ್ನು ಆ ಕತ್ತಲಲ್ಲಿ, ಪರಿಷತ್ತಿನ ಕ್ಯಾಂಟೀನಿನ ಸುತ್ತಲಿದ್ದ ಮರಗಳ ನಡುವೆ ಕೇಳುವುದು ರೋಮಾಂಚಕವಾಗಿರುತ್ತಿತ್ತು. ಆತ ಹುಲಿ ಕೊಂದದ್ದು ತನ್ನ ನಲವತ್ತು ವರ್ಷದಷ್ಟು ಹಿಂದೆ, ತನ್ನ ಹಳ್ಳಿಯಲ್ಲಿ. ನಾವು ಅದನ್ನು ಪುನರ್-ಅನಾವರನಗೊಳಿಸಿದ್ದು ಪರಿಷತ್ತಿನ ಕಾಡಿನಲ್ಲಿ. ಅದೆಷ್ಟು ಬಾರಿ ಆತ ಆ ಹುಲಿ ಕೊಂದ ಕಥೆ ಹೇಳಿದ್ದನೆಂದರೆ, ಪರಿಷತ್ತಿನ ವಾಚ್ಮನ್ನನಾಗಿ ದೊಡ್ಡಯ್ಯ ಏನಿಲ್ಲವೆಂದರೂ ಒಂದೈವತ್ತು ಹುಲಿಗಳನ್ನು ಅಥವ ಒಂದೇ ಹುಲಿಯನ್ನು ಐವತ್ತು ಸಲವಾದರೂ ಸಾಯಿಸಿರಬಹುದು! "ಕಲೆಯನ್ನು ಕುರಿತು ನಾವುಗಳು ಕೊಂದಿರಬಹುದಾದ ನಮ್ಮಗಳ ಅನುಮಾನಗಳ ಮೊತ್ತವೂ ಅಷ್ಟೇ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು," ಎಂದಿದ್ದ ದೊಡ್ಡಯ್ಯನ ಬಯೋಡೇಟ ಕೇಳಿದ ಸ್ಕೆಚಿಂಗ್-ಕಿಂಗ್ ರಮಾನಾಥ್.
ಹಾಸನದ ಕಲಾವಿದ ಕೆ.ಟಿ.ಶಿವಪ್ರಸಾದ್ ಅವರು ಹೇಳಿದ ರಂಗಪ್ಪನದ್ದೋ ಮತ್ಯಾರದ್ದೋ ಹುಲಿಭೇಟೆಯ ಕಥೆಯೂ ಅಂತಹದ್ದೇ ಆಗಿತ್ತು. ರಾತ್ರಿಯ ಹೊತ್ತು ಕಾಡಲ್ಲಿ, ಕಾರ್ಗತ್ತಲಲ್ಲಿ ನಿಶ್ಚಿತವಾಗಿಯೂ ಹುಲಿಯೊಂದು ಪ್ರತ್ಯಕ್ಷವಾದುದು ರಂಗಪ್ಪನಿಗೆ ಭಯಭೀತಗೊಳಿಸಲಿಲ್ಲ, ಆದರೆ ಅದು ನಿಂತ ಭಂಗಿಯು ಹಾಗೆ-ಗೊಳಿಸಿತ್ತು. ಕತ್ತಲಲ್ಲಿ ಕಾಣದಂತಾಗಿದ್ದ ದೇಹವುಳ್ಳ ಅ ಹುಲಿಯ ಕಾಣುವ ಭಾಗವಾಗಿದ್ದ ಆ ಎರಡು ಕಣ್ಣುಗಳ ನಡುವೆ ಹತ್ತಡಿ ವ್ಯತ್ಯಾಸವಿತ್ತಂತೆ! ಅಂದರೆ ಎರಡು ಹುಲಿಗಳು ಅಡ್ಡಡ್ಡಲಾಗಿ, ತಮ್ಮ ತಮ್ಮ ಬುಡಗಳನ್ನು ಪರಸ್ಪರ ಅಂಟಿಸಿದಂತೆ ನಿಂತಿದ್ದು, ಆ ತುದಿ, ಈ ತುದಿಗೆ ಮುಖಮಾಡಿ ನಿಂತಿದ್ದವಂತೆ. ರಂಗಪ್ಪ ನೋಡಿದ್ದು ತನ್ನೆಡೆಗೆ ಮುಖಮಾಡಿದ್ದ ಆ ಎರಡು ಹುಲಿಗಳ ತಲಾ ಒಂದೊಂದು ಕಣ್ಣು-ಅವೆರಡರ ನಡುವಣ ವ್ಯತ್ಯಾಸ ಹತ್ತಡಿ! "ನಾವು ಕಲಾತರಗತಿಗಳಲ್ಲಿ ರಚಿಸುವ ಸ್ಟಿಲ್ ಲೈಫಿಗೂ, ಲೈಫ್ ಸ್ಟಡಿಗೂ ಮತ್ತು ಕ್ರಿಯಾತ್ಮಕ ಚಿತ್ರಗಳಿಗೂ ಇರುವ ವ್ಯತ್ಯಾಸಕ್ಕಿಂತಲೂ ಕಡಿಮೆಯೇ ಈ ವ್ಯತ್ಯಾಸ," ಎಂದೂ ತನ್ನ ತೊಡಕನ್ನು ಮನೋರಂಜನಾತ್ಮಕ ಕಥನಕ್ಕೆ ತಾಳೆಹಾಕುತ್ತಿದ್ದ ರಮಾನಾಥ್. ಆತನ ಬುದ್ಧಿಯೇ ಹೀಗೆ, ಸ್ಕೆಚ್ ಒಂದನ್ನು ರಚಿಸಿದಾಗ, ಅದು ಅಂತಿಮವಾಗಿ ಹೇಗೆ ಕಾಣುತ್ತದೆಯೋ ಅದಕ್ಕಿಂತಲೂ ಅದನ್ನು ರಚಿಸುವಾಗ ತನ್ನ ಮನದಲ್ಲಾದ ತುಮುಲಗಳ ದಾಖಲೆ ಆ ಸ್ಕೆಚ್ ಎಂದು ಆತ ಭಾವಿಸುತ್ತಿದ್ದ. ಉದಾಹರಣೆಗೆ ತಾನು ರಚಿಸಿದ ಸುಂದರಿಯೊಬ್ಬಳ ಸ್ಕೆಚ್ ತೋರಿಸಿ, "ನೋಡು, ನನಗೆ ಹಸಿವೆಯಾಗಿ ಅದೇ ಕಾಲಕ್ಕೆ ಪ್ರಕೃತಿಯ ಕರೆಗೆ ಅವಸರವಾಗಿ, ಎರಡರಲ್ಲಿ ಯಾವುದನ್ನು ಮೊದಲು ಮಾಡಲಿ ಎಂಬ ತುಮುಲದ ’ಸಮಯದಲಿ’ ರಚಿಸಿದ್ದು ಈ ಸ್ಕೆಚ್. ಆದ್ದರಿಂದ ಈಕೆಯನ್ನು ಸುಂದರಿ ಎಂದು ನೋಡುವುದು ಮಹಾನ್ ತಪ್ಪು. ಈ ಹೆಣ್ಣಿನಾಕಾರವು ಕಲಾವಿದ್ಯಾರ್ಥಿಯೊಬ್ಬನ ಎರಡು ಪರಸ್ಪರ ವೈರುಧ್ಯಮಯ ದೈಹಿಕ ತುರ್ತಿನ ನಡುವನ ಸಂಘರ್ಷದ ಮೂರ್ತರೂಪ! ದೇಶಕ್ಕೆ, ಧರ್ಮಕ್ಕೆಲ್ಲಾ ಮೂರ್ತರೂಪಗಳಿರಬಹುದಾದರೆ ಈ ರೀತಿಯ ವೈಯಕ್ತಿತ ಅವಸರಗಳಿಗೂ ಮೂರ್ತರೂಪಗಳಿರಬಾರದೆ. ಬಲಕ್ಕೆ ತಿರುಗಿ ಎಂದು ಸೂಚಿಸಲಾಗುವ ಬಾಣದ ಗುರುತನ್ನು ಬಾಣವೆಂದು ಕರೆವುದು ತಪ್ಪಲ್ಲವೆ?!" ಎಂದೆಲ್ಲಾ ಅದ್ಭುತವಾಗಿ ದೃಶ್ಯ ಅಂತರಂಗಗಳನ್ನು ಕುರಿತು ವ್ಯಾಖ್ಯಾನಿಸುತ್ತಿದ್ದ ರಮಾನಾಥ್.
ಹೀಗೆ ಕಥೆ ಹೇಳುತ್ತ ರಂಗಪ್ಪ ಮತ್ತೊಂದು ಬೆಳಗಿನ ಬೇಟೆಯ ಬಗ್ಗೆ ಹೇಳಿದ್ದನಂತೆ, "ನನ್ನನ್ನ ಒಮ್ಮೆ ಒಂದು ಹುಲಿ ನುಂಗಿಬಿಟ್ಟಿತ್ತು ಸಾಮೇ. ಒಳಕ್ಕೋದೋನು ನಾನೇನು ಸುಮ್ನಿದೆ? ಒಳಗಿನಿಂದಲೇ ಹಿಂದಕ್ಕೆ ಕೈ ಹೊರಕ್ಕಾಕಿ, ಅದರ ಬಾಲವನ್ನು ಒಳಕ್ಕೆಳೆದುಕೊಂಡು, ಅದನ್ನು ಹಿಡಿದುಕೊಂಡೇ ಹುಲಿಯ ಬಾಯಿಂದ ಹೊರಕ್ಕೆ ಜಾರಿ, ಆ ಹುಲಿಯನ್ನ ’ಇನ್ಸೈಡ್-ಔಟ್’ ಮಾಡಿಬಿಟ್ಟೆ ದಣಿ. ನಂತರ ಅದರ ಬಾಲದಿಂದಲೇ ಅದನ್ನು ಗಿರಗಿರ ತಿರುಗಿಸಿ ಬೀಸಿಬಿಟ್ಟೆ," ಎಂದ ರಂಗಪ್ಪ ಮುಂದುವರೆದು, ಪಂಚ್ ಲೈನ್ ನೀಡುತ್ತಿದ್ದನಂತೆ, "ಈಗ್ಲೂ ಆ ಹುಲಿ ಅಲ್ಲಿ ಇಲ್ಲಿ, ಮಧುಗಿರಿಯ ಬಾರ್ಡರಿನ ಕಾಡಲ್ಲಿ ಓಡಾಡಿಕೊಂಡಿರ್ತದೆ," ಎಂದು ಸಮಾಪ್ತಿಗೊಳಿಸುತ್ತಿದ್ದನಂತೆ! ಅದು ಹಾಗೆ ಓಡಾಡುತ್ತಿರುವುದು ಇನ್ಸೈಡ್-ಔಟಾಗಿಯೋ ಅಥವ ನೇರವಾಗಿಯೋ ಎಂದು ಮಾತ್ರ ಆತ ಸ್ಪಷ್ಟಪಡಿಸುತ್ತಿರಲಿಲ್ಲ!
ಅಂದಹಾಗೆ ಮೀಸೆ ರಂಗಪ್ಪ ಶಿವಪ್ರಸಾದರ ತೈಲವರ್ಣದ ಕ್ಯಾನ್ವಾಸೊಂದರ (’ಮೀಸೆ ರಂಗಪ್ಪ’ ಹೆಸರಿನ) ಮುಖ್ಯ ವ್ಯಕ್ತಿ. ತೇಜಸ್ವಿಯವರ ಕಥೆಗಳ ಪಾತ್ರಗಳು ಅವರ ಎದುರಿಗೇ ಪ್ರತ್ಯಕ್ಷವಾದಂತೆ ರಂಗಪ್ಪ ಆಗಾಗ ತನ್ನನ್ನು ಕುರಿತಾದ ಪೈಂಟಿಂಗ್ ಅನ್ನು ಕುರಿತು ಅದರ ಕರ್ತೃವಿನ ಎದುರಿಗೇ ಮೀಸೆ ತಿರುವುತ್ತಾ, "ಎಂಗೆ, ಸಾಮಿ?!" ಎನ್ನುತ್ತಿದ್ದನಂತೆ. ಆ ಮೆಚ್ಚುಗೆ ತನ್ನನ್ನು ಕುರಿತಾದ ಚಿತ್ರದ ಬಗ್ಗೆಯೋ ಅಥವ ತನ್ನ ಮೀಸೆಯ ಬಗ್ಗೆಯೋ ಎಂದು ಇಂದಿಗೂ ಸ್ಪಷ್ಟವಾಗಿಲ್ಲದಿರುವುದರಿಂದ ಅದು ಈ ಎರಡನ್ನೂ ಕುರಿತಾದುದೆಂದು ಭಾವಿಸುವುದರಲ್ಲಿ ಯಾರಿಗೆ ಏನೂ ನಷ್ಟವಿಲ್ಲ, ಬಿಡಿ.
(೬೧)
ಪರಿಷತ್ತಿನ ವಾಚ್ಮನ್ ದೊಡ್ಡಯ್ಯನಿಗೆ ರಂಗಪ್ಪನ ಮೀಸೆಯೂ ಇರಲಿಲ್ಲ, ಹಾಸ್ಯಪ್ರಜ್ಞೆಯೂ ಇರಲಿಲ್ಲ. ಸ್ವಲ್ಪ ಕುಂಟಿಕೊಂಡು ನಡೆಯುತ್ತಿದ್ದ ಆತ, ಅದಕ್ಕೂ ಹುಲಿಯನ್ನೇ ಕಾರಣವನ್ನಾಗಿಸಿದ್ದ. ಹಳ್ಳಿಯಲ್ಲಿ ದನದ ಕೊಟ್ಟಿಗೆಯಲ್ಲಿ ಮಲಗಿದ್ದ ದೊಡ್ಡಯ್ಯನಿಗೆ ಒಮ್ಮೆಲೆ ಮದ್ಯರಾತ್ರಿ ಎಚ್ಚರವಾದಾಗ, ಯಾವುದೋ ತೋಳವು ಕೊಟ್ಟಿಗೆ ಪ್ರವೇಶಿಸಿರುವುದು ಗಮನಕ್ಕೆ ಬಂದಿತಂತೆ. ಮೆಲ್ಲನೆ ಇನ್ನಿತರರನ್ನೂ ಎಬ್ಬಿಸಿ ತೋಳವನ್ನು ಅಟ್ಯಾಕ್ ಮಾಡಿದರಂತೆ. ದೊಣ್ಣೆ, ಸಲಾಕೆ, ಬೊಂಬುಗಳಿಂದ ನಾಲ್ಕೇಟು ಹಾಕಿದ ಮೇಲೇ ಗಮನಕ್ಕೆ ಬಂದದ್ದು ತಾವು ಹೊಡೆಯುತ್ತಿರುವುದು ತೋಳವನ್ನಲ್ಲ, ಅದರಪ್ಪನಂತಹ ಹುಲಿಯನ್ನ ಎಂಬ ವಿಷಯ. ಅದಕ್ಕೆ ಮೊದಲು ಹೊಡೆತ ಹೊಡೆತಗಳೆಲ್ಲಾ ವಿಶ್ವಾಸದ್ದಾದರೆ ನಂತರದ್ದೆಲ್ಲಾ ಜೀವ ಉಳಿಸುವ ಸಲುವಾಗಿಯಂತೆ. ಜೀವ ಹೊಡೆಯುತ್ತಿದ್ದವರದ್ದು, ಉಳಿಸಬೇಕಾಗಿದ್ದದ್ದು ಆ ಹುಲಿರಾಯ! "ಮಗಂದು ನನ್ನ ಕಾಲಮೇಲೇ ಮಲಗಿ ಪ್ರಾಣಬಿಡ್ತು ನೋಡಿ, ಯಾವ್ದೋ ಸಿನ್ಮಾದಾಗ ಯೀರೋ ಕೊನೇ ಸೀನಲ್ಲಿ ಅವ್ರಮ್ಮನ್ ಕಾಲ್ಮೇಲೆ ಬಿದ್ದು ಪ್ರಾಣಬಿಟ್ಟಂಗೆ," ಎಂದು ಹುಲಿಯ ಅಂತ್ಯವನ್ಮು ಮುಕ್ತಾಯಗೊಳಿಸುತ್ತಿದ್ದ ದೊಡ್ಡಯ್ಯ. ಯಾವ ಪುಣ್ಯಕೋಟಿ ವಂಶದ ಹುಲಿಯೋ ಅದು!
ದೊಡ್ಡಯ್ಯನನ್ನು ದೃಶ್ಯಕಲಾಶಾಲೆಗೇ ನಿರ್ದಿಷ್ಟವಾದ ವಾಚ್ಮನ್ ಎಂದು ನಾವೆಲ್ಲ ಗುರ್ತಿಸಿದ್ದೆವು. ಆತ ಈ ಘಟನೆಯನ್ನು ವಿವರಿಸುವಾಗ ಆತನ ದೇಹಭಾಷೆ (ಬಾಡಿ ಲ್ಯಾಂಗ್ವೇಜ್)ಯನ್ನು ಗಮನಿಸದಿದ್ದಲ್ಲಿ ಪೂರ್ತಿ ಕಥೆಯ ರಸಾನುಭವ ನಮಗೆ ದಕ್ಕುತ್ತಿರಲಿಲ್ಲ. ’ಕಾಲ ಮೇಲೆ ಹುಲಿ ಬಿದ್ದ’ ವಾಕ್ಯ ಆತನ ಬಾಯಿಂದ ಉದುರುವಾಗ, ಆತನ ಕುಂಟಾದ ಕಾಲ ಸಹಜವಾಗಿ, ಇನ್ವಾಲಂಟರಿ ಎನ್ನುತ್ತೇವಲ್ಲ, ಹಾಗೆ ಅದುರುತ್ತಿದ್ದುದು ನೋಡಲೇ ಒಂದು ಮಜ ಎನ್ನಿಸುತ್ತಿತ್ತು. ಅವನ ಕಾಲು ಆ ಘಟನೆಯನ್ನು ಅಕ್ಷರಶಃ ಸ್ವತಃ ರೀ-ಟೆಲಿಕಾಸ್ಟ್ ಮಾಡಿಬಿಡುತ್ತಿತ್ತು!
(೬೨)
ಎಲ್ಲ ಕಾಡುಮೇಡು ಬೆಟ್ಟಗಳನ್ನು ಹಗಲುರಾತ್ರಿಗಳಲ್ಲೆಲ್ಲ ಜಾಲಾಡಿ ಬಂದಿದ್ದ ದೊಡ್ಡಯ್ಯನದ್ದು ಪರಿಷತ್ತಿನಲ್ಲಿ ರಾತ್ರಿಯ ಪಾಳಿಯಾಗಿದ್ದು, ಪರಿಷತ್ತಿನ ಪೂರ್ವದಿಕ್ಕಿಗೆ, ಈಗ ಕುಮಾರ ಕೃಪ ಗೆಸ್ಟ್ ಹೌಸ್ ಇರುವೆಡೆಯ ಕಾಂಪೌಂಡಿನ ದೊಡ್ಡ ಮರದ ಕಡೆ ಮಾತ್ರ ಗಸ್ತು ತಿರುಗುತ್ತಿರಲಿಲ್ಲ ಆತ. "ಅಲ್ಲೆಲ್ಲ ಯಾಕ್ ಹೋಗ್ಬೇಕು, ಅತ್ಲಾಗ್ ಮಿನಿಟ್ರು, ರಾಜ್ಕಾರ್ಣಿಗಳೆಲ್ಲ ಇರೋವಾಗ ಪೋಲೀಸ್ರಿರೋಲ್ವ? ಅವ್ರೇ ನಮ್ ಕಾಂಪೌಂಡೂ ಕಾವಲಿದ್ದಂತಾಯ್ತು ಬಿಡಿ," ಎಂದು ಸಮರ್ಥಿಸಿಕೊಳ್ಳುತ್ತಿದ್ದ. ನಾವೂ ಹೆಚ್ಚು ಕೆದಕುತ್ತಿರಲಿಲ್ಲ. ಆದರೂ ಆತನ ಬಾಯಿಂದ ’ಅಲ್ಲೇನೋ ಓಡಾಡ್ದಂಗಿರ್ತದೆ’ ಎಂತಲೋ, ’ಅಲ್ಲೆಲ್ಲಾ ಗಾಳಿ ಮುನೇಶ್ವರನ ಸಂಚಾರ ಇರುತ್ತೆ’ ಅಂತಲೋ ಒಂದು ಥ್ರಿಲ್ಲಿಂಗ್ ಅನುಭವ ಕೇಳಲು ಆಗಿನ ಕಾಲಕ್ಕೇ ಎಲ್ಲರಿಂದ ಒಟ್ಟುಗೂಡಿಸಲಾದ ಹತ್ತು ರೂಪಾಯಿ ಕೊಡಲೂ ನಾವು ಹಿಂಜರಿಯುತ್ತಿರಲಿಲ್ಲ. ಆದರೆ ದೊಡ್ಡಯ್ಯ ಒಂದು ಆರ್ಟ್ ಸಿನೆಮ ಇದ್ದಂಗಿದ್ದ, ಒಂದು ಮಜಾ ಕೊಡುವ ಫೈಟು ಡಾನ್ಸ್ಅನ್ನೂ ಒಳಗೊಂಡಂತಹ ಒಂದು ಮೋಹಿನಿ ಸಿನೆಮದ ಅನುಭವವಿರಲಿ, ಕಡೇ ಪಕ್ಷ ಒಂದು ಹಾಡಿನ ಸೀಕ್ವೆನ್ಸಿನಂತಹ ಬೆಂಕಿದೆವ್ವದ ಅನುಭವವೂ ಇರುತ್ತಿರಲಿಲ್ಲ ಆತನ ಒಣವಿವರಗಳಲ್ಲಿ. ಭಯ ಬೀಳಲು ನಾವೆಲ್ಲಾ ರೆಡಿ ಇದ್ದರೂ ಸಹ ಅದಕ್ಕೆ ಸಾಕಷ್ಟು ಪ್ರೋತ್ಸಾಹ ಮತ್ತು ಧೈರ್ಯವನ್ನು ಆತ ಮಾತ್ರ ನೀಡಲು ತಯಾರಿರುತ್ತಿರಲಿಲ್ಲ. ಆತನ ವಯಸ್ಸಿಗೆ, ಸ್ಥಾನಮಾನಕ್ಕೆ, ಜಾತಿಯ ಹಿನ್ನೆಲೆಯನ್ನು ಪರಿಗಣಿಸಿದರೆ ವಿಚಿತ್ರ ನಿಯತ್ತಿನ ಮನುಷ್ಯನಾಗಿದ್ದನಾತ. ಅದೇ ಗುಣವೇ ಆತನ ಜಾತಿಯಾಗಿದ್ದು, ಜಾತಿವಾದದಿಂದ ಬಹಳ ದೂರವಿದ್ದ ಪರಿಷತ್ತಿನ ವಿದ್ಯಾರ್ಥಿಗಳಿಗೆಲ್ಲಾ ಈ ಜಾತಿವಾದವು ಒಂದಿಷ್ಟೂ ಅರ್ಥವಾಗುತ್ತಿರಲಿಲ್ಲ.
(೬೩)
ಒಂದು ರಾತ್ರಿ ನಮ್ಮ ಪರಿಷತ್ತಿನ ಅನ್-ಅಫೀಶಿಯಲ್ ಛಾಯಾಗ್ರಾಹಕ ವೀರಾ ತನ್ನ ಚಾಲಾಕಿತನ ತೋರಿಸಲು ಸಿದ್ದವಾಗೇ ಬಂದಿದ್ದ. ನಾಟಕಗಳಲ್ಲಿ ಧರಿಸುವ, ಅಡಿಯಿಂದ ಮುಡಿಯವರೆಗೂ ಕ್ಲೌನ್ಗಳು ಹಾಕುವಂತಹ ಕಪ್ಪುಬಟ್ಟೆ, ಅದರ ಮೇಲೆ ಪ್ಲೋರೋಸೆಂಟ್ ವರ್ಣದಲ್ಲಿ ಅಸ್ಥಿಪಂಜರದ ಚಿತ್ತಾರ. ಅದನ್ನು ಧರಿಸಿ ಆತ ಅದೇ ಆ ಕುಮಾರಕೃಪ ಗೆಸ್ಟ್ ಹೌಸಿನ ದೊಡ್ಡ ಮರದಡಿಯಲ್ಲಿ ಹೋಗಿನಿಲ್ಲುವುದು, ನಾವೆಲ್ಲಾ ಅಲ್ಲಿ ಕೆಲಸಕ್ಕಿದ್ದ ಹುಡುಗ ರಾಮಾಯ್ಣಾನನ್ನು ಏನೋ ನೆಪಮಾಡಿ ಅಲ್ಲಿಗೆ ಆ ಕತ್ತಲಲ್ಲಿ ಕಳಿಸುವುದು, ಅಲ್ಲಿ ವೀರಾನ ಅಸ್ಥಿಪಂಜರದ ಕುಣಿತ ನೋಡಿ ಈ ಹುಡುಗ ಕಿರುಚುತ್ತಾ ಒಡಿಬರುವುದು-ಇಷ್ಟನ್ನಾದರೂ ನಿರೀಕ್ಷಿಸುತ್ತಾ ತಯಾರಿ ನಡೆಸಿದೆವು. ಆದರೆ ಅಲ್ಲಿ ಹೋದ ರಾಮಾಯ್ಣ ಮತ್ತು ವೀರಾ ಒಮ್ಮೆಲೆ, ಒಟ್ಟಿಗೆ ಕಿರುಚುತ್ತಾ ಓಡಿಬಂದಿದ್ದರು! ಹುಡುಗ ಅಲ್ಲೆಲ್ಲೋ ಬಿದ್ದಿರಬಹುದಾದ ಕ್ರಿಕೆಟ್ ಬ್ಯಾಟ್-ಅದನ್ನು ತರಲಿಕ್ಕಾಗಿಯೇ ಆತನನ್ನು ನಾವುಗಳು ಕಳಿಸಿದ್ದಿದ್ದು--ಸಿಗದೆ ಹಿಂದಿರುಗುವ ಕೊನೆಯ ನಿಮಿಷದಲ್ಲಿ ಅಸ್ಥಿಪಂಜರದ ರೂಪಿ ವೀರಾನನ್ನು ನೋಡಿ, ಆತನ ಕೀರಲು ದನಿಯನ್ನು ಕೇಳಿ, ಓಡಿಬಂದಿದ್ದ. ಆದರೆ ನಮಗೆ ಸಮಸ್ಯೆಯಾಗಿದ್ದದ್ದು ವೀರಾನೂ ಏಕೆ ಕಿರುಚುತ್ತ ಓಡಿಬಂದಿದ್ದ ಎಂಬುದೇ! ಇದೇ ವೀರಾ ಸ್ವಲ್ಪ ತಿಂಗಳುಗಳ ಕೆಳಗೆ ಇತ್ತಕಡೆಯ ಕಟ್ಟಡದ ಮೇಲೆ ಇಂತಹದ್ದೇ ರಾತ್ರಿಯಲ್ಲಿ ಅನೇಖನ ಫೋಟೋ ತೆಗೆಯಲು ಹೋಗಿ, ಕಣ್ಣಿಗೆ ಕಂಡದ್ದು, ಫೋಟೋ ಆಗಿ ಮೂಡಿಬಂದದ್ದು-ಇವೆರಡೂ ಬೇರೆಯಾಗಿಬಿಟ್ಟು, ಅದರಿಂದ ಜ್ವರ ಬರಿಸಿಕೊಂಡಿದ್ದ. ಕಂಡದ್ದು ಮೂಡದೆ ಇಲ್ಲದ್ದನ್ನು ಕಾಣುವುದನ್ನೇ ಅಸ್ವಸ್ಥತೆ ಎನ್ನುವುದಲ್ಲವೆ. ಜೊತೆಗೆ ತಾನೇ ಹಾಕಿದ್ದ ಜಾಪಾಡ್ ಮಾತ್ರೆಯ ಚಹಾ ಸೇವಿಸಿ, ಹೊಟ್ಟೆಕೆಟ್ಟಿದ್ದು ಮತ್ತು ಭಯ ಬಿದ್ದದ್ದು-ಎರಡಕ್ಕೂ ಒಂದೇ ಕರ್ಚಿನಲ್ಲಿ ತಪಾಸಣೆ ಮಾಡಿಸುವ ಮೂಲಕ ಒಳ್ಳೆಯ ಸೇವಿಂಗ್ಸ್ ಬೇರೆ ಮಾಡಿದ್ದ!
ಪ್ರಸ್ತುತದಲ್ಲಿ ಅಗಿದ್ದದ್ದಿಷ್ಟು. ವೀರಾ ಅಸ್ಥಿಪಂಜರದ ವೇಷತೊಟ್ಟು ’ವೀರಾವೇಷ’ದವನಾಗಿದ್ದ. ಅದೇ ಮೂಡಿನಲ್ಲಿ ಆ ದೊಡ್ಡಾಲದ ಮರಕ್ಕೆ ಒರಗಿ, ನಾವುಗಳೆಲ್ಲಾ ರಾಮಾಯ್ಣನನ್ನು ಅಲ್ಲಿಗೆ ಕಳಿಸುವ ಘಳಿಗೆಗೆ, ತಾನು ಆತನನ್ನು ಹೆದರಿಸುವ ಸೊಬಗಿಗೆ ಒಂದರೆಕ್ಷಣ ಮೈಮರೆತು ನಿಂತಿದ್ದನಂತೆ. ಅಷ್ಟರಲ್ಲಿ ರಾಮಾಯ್ಣ ಅಲ್ಲಿ ಬಂದದ್ದು ಕಂಡು, ಹೆದರಿಸಲು ’ಹೋ’ ಎಂದು ಸದ್ದು ಮಾಡುತ್ತ ಮುಂದಕ್ಕೆ ನುಗ್ಗಿದನಂತೆ. ಇಬ್ಬರಿಗೂ ನಡುವೆ ಹತ್ತಡಿ, ರಾಮಯ್ಣ ಆತನನ್ನಿನ್ನೂ ನೋಡಿರಲಿಲ್ಲವಂತೆ. ಆದರೆ ವೀರಾವೇಷಿಗೆ ಒಂದೆಜ್ಜೆಯೂ ಎತ್ತಿಡಲಾಗಲಿಲ್ಲವಂತೆ. ಯಾರೋ ಆತನ ಕುತ್ತಿಗೆಯನ್ನು ಹಿಡಿದು ಎಳೆಯುತ್ತಿರುವಂತೆ ಭಾಸವಾಯಿತಂತೆ. ಕೈಯನ್ನು ಹಿಂದಕ್ಕೆ ಸರಿಸಿನೋಡಲಾಗಿ, ಕೈಗೆ ಸಿಕ್ಕಿದ ಆ ಸಿಕ್ಕೂ ಸಹ ಆತನ ಕಲ್ಪನೆಗೆ ತಕ್ಕಂತೆ ಏನೇನೋ ಆಕಾರಪಡೆಯತೊಡಗಿತಂತೆ. ಇಂತಲ್ಲೇ ಬದುಕಿನ ಅತಿ ಮುಖ್ಯ ಪ್ರಶ್ನೆ ಪ್ರಸ್ತುತವಾಗುವುದು: ನಂಬಿಕೆಯ ಪ್ರಕಾರ ವಸ್ತುಗಳು ಗೋಚರಿಸುತ್ತವೋ, ಅಥವ ಗೋಚರಿತ ವಸ್ತುಗಳ ಪ್ರಕಾರ ನಂಬಿಕೆಗಳು ಹುಟ್ಟಿಕೊಳ್ಳುತ್ತವೋ ಎಂಬುದು. ಬಾಡೂಟ ತಿಂದು, ಕಟ್ಟಿಸಿಕೊಂಡು ಕಗ್ಗತ್ತಲಲ್ಲಿ ಅಗೆಲ್ಲಾ ಊರಿಂದೂರಿಗೆ ಹೋಗುವವರಿಗೆ ಕೆಲವು ಮರಗಳ ಬಳಿ ಅಗೋಚರ ತಡೆಗಳು ಉಂಟಾಗುತ್ತಿತ್ತಂತಲ್ಲ, ಏನು ಮಾಡಿದರೂ ಹೆಜ್ಜೆ ಮುಂದಿಡಲಾರದವರು, ಕೈಯಲ್ಲಿದ್ದ ಬಾಡೂಟದ ಪೊಟ್ಟಣವನ್ನು ಬಿಸಾಕಿದ ತಕ್ಷಣ ಮುಂದೆ ಹೋಗಲು ಅಗೋಚರ ಅನುಮತಿ ದೊರಕಿಬಿಡುತ್ತಿತ್ತಂತಲ್ಲ. ಅದೆಲ್ಲಾ ನೆನಪಿಗೆ ಬಂದು ವೀರಾವೇಷಿಗೆ, "ಈಗ ಉಳಿದಿದ್ದಿದ್ದು ಒಂದೇ ದಾರಿ. ಆದರೆ ನಾನ್ವೆಜ್ ಪ್ರೇತಕ್ಕೆ ಎಸೆಯಲು ಕೈಯಲ್ಲಿ ಬಾಡೂಟದ ಪಾಕೆಟ್ಟೂ ಇಲ್ಲವಲ್ಲ! ಅದರಿಂದ, ಆ ಕತ್ತಲಲ್ಲೂ ನನಗೆ ಎರಡು ಪಾಠ ಕಲಿತಂತಾಯ್ತು: ಒಂದು, ಎಲ್ಲಾ ಪ್ರೇತಗಳೂ ಶಾಕಾಹಾರಿಗಳು ಮತ್ತು ಅವುಗಳಿಗೆ ರಾತ್ರಿಕುರುಡು ಕಾಡುತ್ತದೆ,"ತಾವು ಹಿಡಿದಿರುವವನ ಕೈಯಲ್ಲಿ ಬಾಡೂಟದ ಪಾಕೆಟ್ ಇಲ್ಲವೆಂತಲೂ ಕಾಣದು ಆ ಮುಂಡೇವಕ್ಕೆ," ಎಂದು ವೀರಾ ಮುಂದೊಮ್ಮೆ ಆ ನಿರ್ದಿಷ್ಟ ಘಟನೆಯ ಬಗ್ಗೆ ನಾವೆಲ್ಲಾ ಲೇವಡಿ ಮಾಡುವ ಸಮಯಕ್ಕೆ ಆತ ಸಮರ್ಥಿಸಿಕೊಳ್ಳುವ ಸಮಯಕ್ಕೆ, ಆತನ ಮುಖಭಾವವು ಮಿನ್ಸ್ಮೀಟ್ (ಖೈಮಾ) ಆಗಿಬಿಡುತ್ತಿದ್ದುದನ್ನು ದೃಶ್ಯವಿದ್ಯಾರ್ಥಿಗಳಾಗಿದ್ದ ಎಲ್ಲರ ಕಂಗಳು ಗಮನಿಸದೇ ಹೋಗಲಿಲ್ಲ.
ಸ್ವಲ್ಪ ಸುಧಾರಿಸಿಕೊಂಡ ನಂತರ, ವೀರಾವೇಷಿಗೆ ’ಗಂಧದಗುಡಿ’ಯಿಂದ ಹಿಡಿದ ಆತನ ಫೇವರಿಟ್ ಜಂಗ್ಲಿ ಶಮ್ಮೀಕಪೂರನವರೆಗಿನ ಸಿನೆಮಗಳ ಅನೇಕ ದೃಶ್ಯಗಳು ಮನಸ್ಸಿನಲ್ಲಿ ಮೂಡಿ, ತನ್ನ ವೇಷವು ಮರಕ್ಕೆ ತಗುಲಿಹಾಕಿಕೊಂಡಿರುವುದರಿಂದಲೇ ಯಾರೋ ನನ್ನನ್ನು ಎಳೆದಂತೆ ಭಾಸವಾಗುತ್ತಿದೆ ಎಂದರಿತವನಂತೆ ನಿರಾಳನಾದನಂತೆ.
ಕಥೆಯ ಟ್ವಿಸ್ಟ್ ಇರುವುದೇ ಇಲ್ಲಿ. "ರೀ ಯಾರ್ರೀ ನೀವು? ಇಷ್ಟೊತ್ತಲ್ಲಿ ಇಲ್ಲೇನು ಮಾಡ್ತಾ ಇದ್ದೀರಿ?" ಎಂದು ವೀರಾವೇಷಿಯ ಕುತ್ತಿಗೆಪಟ್ಟಿಯನ್ನು, ಅಸ್ಥಿಪಂಜರದ ವಸ್ತ್ರದ ಕುತ್ತಿಗೆ ಪಟ್ಟಿಯನ್ನು ಹದಿನೇಳದಿನೆಂಟತ್ತೊಂಬತ್ತರ ವಯೋಮಾನದ ಅಂಚಿನಲ್ಲಿದ್ದ ರಾಮಾಯ್ಣ ಹಿಡಿದು ಜಗ್ಗುತ್ತಿದ್ದನಂತೆ. ಬ್ಯಾಟ್ ಹುಡುಕಿ ಹೋಗಿದ್ದ ಈತ ತಲೆಬಗ್ಗಿಸಿಕೊಂಡು ಮರದವರೆಗೂ ಹೋಗಿದ್ದಾನೆ, ಮರದ ಹಿಂದಕ್ಕೆ ಹೋಗಿದ್ದಾನೆ, ಅದನ್ನು ಒಂದು ಸುತ್ತು ಬಂದಿದ್ದಾನೆ. ತುಮಕೂರಿನ ಧಡಿಯ ಕಲಾವಿದನೊಬ್ಬನ ಅಳತೆ ತೆಗೆದುಕೊಳ್ಳಲು ಒದ್ದಾಡುತ್ತಿದ್ದನಂತೆ ಹುಡುಗನೊಬ್ಬ, ಒಮ್ಮೆ. ಆ ಧಡಿಯನ ಗೆಳೆಯ ಹುಡುಗನಿಗೆ ಹೇಳಿದನಂತೆ, ’ಲೋ ಮಗಾ, ಯಾಕಷ್ಟು ಒದ್ದಾಡ್ತೀಯ. ಕೊಡಿಲ್ಲಿ ಅಳತೆ ಟೇಪು, ಆತನ ಹೊಟ್ಟೆಯ ಬಳಿ ಹಿಡಿದಿರುತ್ತೇನೆ, ನೀನು ಈತನ ಸುತ್ತ ಟೇಪ್ ಹಿಡಿದು ಒಂದು ಪ್ರದಕ್ಷಿಣೆ ಬಂದುಬಿಡು ಸಾಕು, ಕೆಲಸ ಆಯಿತು, ಎಂದು ವೇಸ್ಟ್-ಪ್ರಾಬ್ಲಂ ಅನ್ನು ಪರಿಹರಿಸಿದಂತಾಗಿತ್ತು. ಸುತ್ತು ಬರುವಾಗ ವೀರಾವೇಷಿಯ ಬೆನ್ನು ರಾಮಾಯ್ಣನಿಗೆ ಕಂಡಿದೆ. ಅದೇ ಆಗ ಆತ ವೀರಾನ ಕುತ್ತಿಗೆಗೆ ಕೈ ಹಾಕಿದ್ದಾನೆ. ಪರಸ್ಪರ ಕಗ್ಗತ್ತಲಲ್ಲಿ ಕಂಡವರು, ಕಿರುಚಿ ಒಮ್ಮೆಲೆ, ಒಟ್ಟಿಗೆ ಪರಿಷತ್ತಿನ ಗ್ಯಾಲರಿ ಬಿಲ್ಡಿಂಗಿನ ಕಡೆ ಓಡಿಬಂದಿದ್ದಾರೆ!
"ಆದ್ರೆ ಒಂದ್ ಮಾತು ಅರ್ಥವಾಗುತ್ತಿಲ್ಲ ವೀರಾ ," ಎಂದು ವಿಚಾರಿಸಿದ್ದ ಮಮಾ, "ಪೋಸ್ಟ್-ಪ್ರೊಡಕ್ಷನ್ನಿನಂತಹ ಅಥವ ಈ ಘಟನೆಯ ಎಡಿಟಿಂಗ್ ಘಳಿಗೆಯಲ್ಲಿ, ರಾಮಾಯ್ಣ ಹತ್ತಡಿ ದೂರದಲ್ಲಿ ಕಾಣುವಾಗಲೇ ನೀನು ಮುನ್ನುಗ್ಗಿದ್ದೆಯಲ್ವ?"
"ಹೌದು?"
"ಆತ ಕಣ್ಣೆದುರಿಗೇ ಅಷ್ಟು ದೂರದಲ್ಲಿರುವಾಗಲೇ ನಿನ್ನ ಕುತ್ತಿಗೆಪಟ್ಟಿಯನ್ನು ಯಾರೋ ಹಿಡಿದೆಳೆಯುತ್ತಿದ್ದರಲ್ಲವೆ?"
"ಹೌದು, ಇಲ್ಲ!?"
"ರಾಮಾಯ್ಣ, ನೀನು ವೀರಾನ ಕುತ್ತಿಗೆಗೆ ಕೈ ಹಾಕುವಾಗ, ಆತ ಏನು ಮಾಡುತ್ತಿದ್ದ?"
"ಆಗ್ಲೇ ಯಾರೋ ಎಳೀತಿದ್ದಂಗೆ ಬಿಡಿಸಿಕೊಳ್ಳೋಕೆ ಟ್ರೈ ಮಾಡ್ತಾ ಇದ್ರು ವೀರಾ."
"!, !, !."
"ಸರಿ. ವೀರಾ ಕಿರುಚಿಕೊಂಡು ಬರಲು ಕಾರಣ ಅಷ್ಟೋಇಷ್ಟೋ ಗೊತ್ತಾಯ್ತು. ನೀನೇಕೆ ಕಿರುಚುತ್ತಾ ಬಂದೆ?"
"ಸುಮ್ನೆ, ಕಂಪ್ನಿ ಕೊಡೋಕೆ. ವೀರಾ ತಮಾಷೆಗೆ ಕಿರುಚ್ತಿದ್ದಾರೆ ಅಂದುಕೊಂಡು ಅದಕ್ಕೆ ನಾನು ಗಂಟಲುಗೂಡಿಸಿದೆ, ಅಷ್ಟೇ. ಆಮೇಲೆ ನೋಡಿದ್ರೆ ನನ್ನನ್ನು ಹೆದರಿಸಲು ಅಸ್ಥಿಪಂಜರ ತೊಟ್ಟ ವೀರಾನೇ ಹೆದರಿಕೊಂಡಿರುವುದನ್ನು ಕಂಡು ನನಗೂ ಒಂದರೆಕ್ಷಣ ಅಳುಕಾಯಿತು!" ಎಂದ ರಾಮಾಯ್ಣ. ಅನೇಖನಿಗೆ ತಲೆನೋವು ಬಂದಾಗ ಓಡಿಹೋಗಿ ಅಡಗಿಕೊಳ್ಳುತ್ತಿದ್ದ ತಾಣವದಾಗಿತ್ತು. ಆತ ಇದನ್ನೆಲ್ಲಾ ಕೇಳಿ ಸುಮ್ಮನೆ ಒಂದು ನಗೆ ಸೂಸಿದ--ಪುಣ್ಯಕ್ಕೆ ಯಾರೂ ತನ್ನ ನಗುವಿನ ಹಿಂದೊಂದು ಅವ್ಯಕ್ತ ಕಾರಣವನ್ನು ಆರೋಪಿಸಿ, ಇದಕ್ಕೆಲ್ಲಾ ತನನ್ನೇ ದೋಷಿಯನ್ನಾಗಿಸಲಿಲ್ಲವಲ್ಲ ಎಂಬ ಸಮಾಧಾನದಿಂದ.
(೬೪)
ಅಂತಹದ್ದೇ ರಾತ್ರಿಯೊಂದರ ಮಾರನೇ ದಿನ ಪೂಜೆ ಇರಿಸಿಕೊಂಡಿದ್ದರು ಮೇಷ್ಟ್ರು. ಮುಂಚಿನ ರಾತ್ರಿಯೆಲ್ಲಾ ಒಬ್ಬಟ್ಟು ಅಡುಗೆಯ ತಯಾರಿ, ಅಲ್ಲಿದ್ದ ಹುಡುಗರಿಗೆಲ್ಲಾ ದೇವರಿಗೆ ಸಲ್ಲುವ ಮುನ್ನವೇ ನೈವೇಧ್ಯವಾಗಿರುತ್ತಿತ್ತು, ಒಬ್ಬಟ್ಟಿನದ್ದು. ಪ್ರತಿಯೊಬ್ಬನಲ್ಲೂ ಭಗವಂತನನ್ನು ಕಾಣುವ ಬುದ್ಧಿಯ ಅಡುಗೆಯವ ಬೀಡಿ ಸೇದುತ್ತ, ಆ ಬೀಡಿಯ ಘಮಟು ಇರುವ ಓಳಿಗೆಗಳನ್ನು ಈ ಯುವ-ಭಗವಂತರಿಗೆ ಉಣಬಡಿಸಿದ್ದ. ರಾತ್ರಿಯ ಹೊತ್ತಿನಲ್ಲಿ ಮಾತ್ರ ಕೆಲವರಿಗೆ ಇಂತಹ ದೈವದರ್ಶನದ ಭಾಗ್ಯ ದೊರಕುತ್ತದಂತೆ. ಕುಡಿದು ಚಿತ್ತಾದ್ದರಿಂದ ಅಡುಗೆಯವನಿಗೆ ಪರಿಷತ್ತಿನ ಹುಡುಗರೂ, ತಮಗೆ ಹೆಚ್ಚಿನ ಒತ್ತಾಯವಿಲ್ಲದೆ ತಿನ್ನಲು ಒಬ್ಬಟ್ಟು ನೀಡಿದ ಅಡುಗೆಯವ ಹುಡುಗರಿಗೂ--ಪರಸ್ಪರ ದೇವರ ದರ್ಶನವಾಗಿತ್ತು ಅಂದು. ’ಯಾವ ಹುತ್ತದಲ್ಲಿ .. .. ಎಂಬಂತೆ ’ಯಾವ ಹೋಳಿಗೆಯಲ್ಲಿ ಯಾವ ದೇವರಿರುವನೋ’ ಎಂದುಕೊಂಡು, ಕೊಳ್ಳದೆ ತಿಂದು, ತೇಗಿದ್ದರು ಕಾವಲಿಗೆ ಮತ್ತು ಚಿತ್ರಕಲಾ ರಚನೆಯಲ್ಲಿ ಬ್ಯುಸಿಯಾಗಿದ್ದ ಹುಡುಗರು. ಮಧ್ಯರಾತ್ರಿಯಲ್ಲಿ ಬಂದ ಮೇಷ್ಟ್ರು, "ಮೊದಲು ದೇವರು ಆಮೇಲೆ ಮನುಷ್ಯರು," ಎಂದು ಸೂಕ್ಷ್ಮವಾಗಿ ಹೇಳಿಹೋದದ್ದು ಈ ನೈವೇದ್ಯವನ್ನು ಮೊದಲು ಭಕ್ತರಿಗೊಪ್ಪಿಸುವ ತಿರುವುಮರುವುಗಳ ಶೃಂಖಲೆಯನ್ನು ಕುರಿತದ್ದೇ ಆಗಿತ್ತು. ಮಳೆಗಾಲದಲ್ಲಿ (ಅಲ್ಲದಿದ್ದರೂ ಸಹ) ಸಿಡಿಲು ಮಿಂಚು ಬರುವಂತಾದರೆ ಸಾಕು ತಿಳಿವಳಿಕಸ್ಥ ವಿದ್ಯಾರ್ಥಿಗಳೆಲ್ಲರೂ ಬಾಯ್ಸ್ ಶಾಲೆಯ ಡೀನ್ ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಹೋಗಿಬಿಡುತ್ತಿದ್ದರು. ಕಾರಣ: ಸಿಡಿಲು ಬಡಿದರೆ ’ಆ’ ಮೆಷ್ಟ್ರ ದೇಹ ಅದುರುತ್ತಿತ್ತು, ಇನ್ವಾಲಂಟರಿಯಾಗಿ, ದೊಡ್ಡಯ್ಯ ಹುಲಿಕೊಲ್ಲುವ ಘಟನೆಯ ವಿವರದ ಕಾಲಕ್ಕೆ ಆತನ ಕಾಲುಗಳು ಅದುರುವಂತೆ.
(೬೫)
ಒಂದು ದಿನ ರಾತ್ರಿ ಎಲ್ಲರೂ ಭವಿಷ್ಯದಿಂದ, ೨೦೧೧ರ ಸೋಕುಮಾರಿಯಿಂದ ಬಂದದ್ದೆಂದು ಭಾವಿಸುತ್ತಿದ್ದ ಲಂಡನ್ ಪ್ರವಾಸಕಥನವನ್ನು ಇನ್ನಿತರ ಸ್ವಾಧಯುಕ್ತ ವಿಷಯಗಳನ್ನು ಚರ್ಚೆಮಾಡುವುದರೊಂದಿಗೆ ಸೇರಿಸಿಕೊಂಡು ಮೆಲುಕು ಹಾಕುತ್ತಿದ್ದೆವು. ಅಲ್ಲಿ ಬಾಯ್ಸ್ ಶಾಲೆಯ ಪ್ರಾಧ್ಯಾಪಕಿ ’ಡಾ. ಚೋಮ’ ಅಥವ ಚೋಳಮಂಡಲಗಿತ್ತಿಯವರ ಮಾತುಗಳಲ್ಲಿನ ವರ್ಣನೆಯನ್ನು ಬಿಟ್ಟರೆ, ಉಳಿದಂತೆ ಲಂಡನ್ನಿಗೆ ಹೋಗಿಬಂದವರ್ಯಾರೂ ನಮಗ್ಯಾರಿಗೂ ಗೊತ್ತಿರಲಿಲ್ಲ. "ನಾನು ಮಾತ್ರ ಪ್ರತಿದಿನ ಬೆಳಿಗ್ಗೆ ಲಂಡನ್ನಿಗೆ ಹೋಗಿಬರುತ್ತೇನೆ," ಎಂದು ದಿನನಿತ್ಯದ ಜೋಕ್ ಹೊಡೆಯುತ್ತಿದ್ದ ವೀರಾ, ಯಾರೂ ನಗದಿದ್ದರೂ ಸಹ. "ಅದನ್ನೆಲ್ಲಾ ಲಂಡನ್ ಪ್ರವಾಸ ಅನ್ನೋದಾದರೆ ನಾನು ದಿನಕ್ಕೆ ಮೂರ್ನಾಲ್ಕು ಬಾರಿಯಾದರೂ ಲಂಡನ್ಗೆ ಹೋಗಿಬರುತ್ತಿರುತ್ತೇನೆ, ಅದರಲ್ಲೇನು ಮಹಾ, ಬಿಡ್ರೋ," ಎಂದುತ್ತರಿಸಿದ್ದ ಹಂಚಿಕಡ್ಡಿಯಂತಿದ್ದ ಪ್ರಶ್ನಾಮೂರ್ತಿ.
ಅಳಿಸಿಹೋಗುವ ಲಿಪಿಯ ಸ್ಮರಿಸಿಕೊಳ್ಳದೇ ಇರಬಾರದು ಎಂಬಂತೆ ಎಲ್ಲರೂ ಪ್ರವಾಸಕಥನದ ವಿವರಗಳನ್ನು ನೆನಪಿಸಿಕೊಳ್ಳುವಾಗ, ಅದನ್ನು ಯಾಕೆ ನೆನಪಿಟ್ಟುಕೊಳ್ಳಬೇಕು ಅಂತಲೂ ಕೇಳಲು ಶುರುಹಚ್ಚಿಕೊಳ್ಳುತ್ತಿದ್ದರು. ’ರ್ಯಾಡಿಕಲ್’ ಎಂದು ತಮ್ಮನ್ನು ತಾವೇ ಕರೆದುಕೊಳ್ಳುತ್ತಿದ್ದ ಬಹುಪಾಲು ಬಾಯ್ಸ್ ಶಾಲೆಯ ವಿದ್ಯಾರ್ಥಿಗಳು ಒಮ್ಮೆ ಇದನ್ನೇ ಒಂದು ದೊಡ್ಡ ಜಗಳವನ್ನಾಗಿಸಿದ್ದರು." ಆ ಲಂಡನ್ ಪ್ರವಾಸಕಥನದಲ್ಲಿ ಕ್ರಾಂತಿಯ ಅಗತ್ಯದ ಬಗ್ಗೆ ಒತ್ತಿಲ್ಲ, ಅದೊಂದು ಏಕಾಂಗಿ ಬೂರ್ಜ್ವಾ ಪಯಣ. ಆದ್ದರಿಂದ ಅದನ್ನು ನೆನಪಿಟ್ಟುಕೊಳ್ಳುವ ಅವಶ್ಯಕತೆ ಇಲ್ಲ," ಎಂದು ವಿಕ್ಷಿಪತ ಮತ್ತು ಮಲ್ಲುಮೋಗನರು ನಲ್ಲಸಿವನೊಂದಿಗೆ ವಾದಕ್ಕಿಳಿದರು.
"ಆ ನಾಲ್ಕೂ ಕಂತುಗಳ ಬರವಣಿಗೆಯಲ್ಲಿ ಯಾವ ಭಾಗದಲ್ಲಿ ನಿಮಗೆ ಹಾಗನ್ನಿಸಿದೆ ಹೇಳಿ?" ಎಂದು ಜಗಳಕ್ಕಿಳಿದಿದ್ದ ಸೀನಿಯರ್ ನಲ್ಲಸಿವ. ಆತ ನಮಗೆಲ್ಲರಿಗೂ ಸೀನಿಯರ್ ಆಗಿದ್ದನೇನೋ ನಿಜ, ಆದರೆ ತೀರ ಹತ್ತಿರದಿಂದ ಮಾತ್ರ ಕಾಣುವ ಮಯೋಪಿಕ್ ಕಣ್ಣ ತೊಂದರೆಯಿಂದಾಗಿ ಆತನಿಗೆ ’ಸೀ-ನಿಯರ್’ ನಲ್ಲಸಿವ ಅಥವ ’ಸೀನಿಯರ್ ಕಣ್ಣ’ ಎಂದೇ ಹೆಸರಿಟ್ಟು, ಅದನ್ನು ಕರೆಯುತ್ತಲೂ ಇದ್ದೆವು, ಅದೂ ಆತನ ಕಣ್ಣೆದುರಿಗೇ!
"ಏನೋ, ನಿನ್ನದೇ ಬರಹ ಎಂಬಂತೆ ಜಗಳಕ್ಕಿಳಿದಿದ್ದೀಯಲ್ಲ, ನೀನಾ ಬರೆದದ್ದು ಅವುಗಳನ್ನು?" ಎಂದು ಕಾಲು ಎಳೆದಿದ್ದ ವೀರಾ.
"ಇಂತಿಂತ ಕಡೆ ಇಂತಿಂತಾ ಡೀಟೈಲ್ ಇದೆಯಲ್ಲಿ ಅಂತಂತಾ ಕಡೆಯೆಲ್ಲಾ, ತನ್ನ ನಡುವಯಸ್ಸಿನಲ್ಲಿ ಈ ಬರಹಗಾರ (?) ಲಂಡನ್ನಿನಲ್ಲಿ ವಾರಕ್ಕರ್ಧ ಭಾಗ ರಾಯಲ್ ಕಲಾಶಾಲೆಯಲ್ಲಿ, ಮಿಕ್ಕರ್ಧ ಭಾಗವನ್ನು ಬೀದಿ ಬೀದಿ ಅಲೆಯುವುದನ್ನು ನಿರೂಪಿಸುತ್ತದೆ," ಎಂದು ಮಲ್ಲುಮೋಗನ ಮತ್ತು ವಿಕ್ಷಿಪತ ನಿರೂಪಿಸಿದರು.
"ಅಲ್ಲೇ ಇರೋದು ಪಾಯಿಂಟ್. ಈ ಒಂದೇ ದಿನದಲ್ಲಿ ಅಳಿಸಿಹೋಗಿಬಿಡುವ, ಅಥವ ತನ್ನನ್ನು ತಾನೇ ಅಳಿಸಿಕೊಳ್ಳುವ ಪ್ರವಾಸಕಥನದ ವಿವರವು ಉಳಿದುಕೊಂಡಿರುವುದು ನಮ್ಮ ಸ್ಮೃತಿಗಳಲ್ಲಿ, ಸ್ಮರಣೆಗಳಲ್ಲಿ; ಮತ್ತು ಅವುಗಳಲ್ಲಿ ಮಾತ್ರ. ’ನೀವು ಹೇಳುವುದು ಸರಿ’ ಎಂಬ ವಾಕ್ಯಕ್ಕೆ ಈ ಸ್ಮರಣೆಯ ಆಟದಲ್ಲಿ ಒಮ್ಮತದ ಆವಶ್ಯಕತೆ ಇರುತ್ತದೆ. ಅಂದರೆ ನೀನು ನನಗೆ ಹಿಡಿಸಿದಲ್ಲಿ ಮಾತ್ರ ನೀನು ನೆನಪಿನಿಂದ ಹೇಳುವುದು ನನಗೆ ಸರಿ ಎನ್ನಿಸುತ್ತದೆ. ಅಥವ ನೀನು ಹೇಳುತ್ತಿರುವುದು ಸರಿ ಎನ್ನಿಸಿದರೆ ಮಾತ್ರ ನೀನು ನನಗೆ ಗೆಳೆಯನಾಗುತ್ತೀಯ. ವಿಚಿತ್ರ ಅಲ್ಲವೆ?" ಎಂದ ನಲ್ಲಸಿವ.
"ಅದು ಸರಿ. ಆದರೆ ಇದೊಂದು ಪಕ್ಕಾ ಏಕಾಂಗಿಯೊಬ್ಬನ ಬೂರ್ಜ್ವಾ ಟೆಕ್ಸ್ಟ್-ಈ ಲಂಡನ್ ಪ್ರವಾಸಕಥನ ಐದು ಭಾಗಗಳು. ಸ್ಕಾಲರ್ಶಿಪ್ ಇಲ್ಲದಿದ್ದಲ್ಲಿ ಆ ಬರಹಗಾರ ಅಷ್ಟು ನಿರಾಳವಾಗಿ, ತನ್ನ ೩೭ನೇ ವಯಸ್ಸಿನಲ್ಲಿ ಅಲ್ಲಿಗೆ ಓದಲು ಹೋಗುತ್ತಿದ್ದನೆ, ಹೋಗಿ ದೃಶ್ಯಕಲೆ ಎಂಬ ವಿಷಯದ ಬಗ್ಗೆ ಬರೆಯುವುದನ್ನು ಬಿಟ್ಟು ಅದರ ಸುತ್ತಲೂ ಬರೆಯುತ್ತಿದ್ದನೇ ಹೇಳು?"
"ಇಂಟರೆಸ್ಟಿಂಗ್, ವಿಷಯಕ್ಕೊಂದು ’ತಿರುಳು’, ಮತ್ತು ಅದರ ’ಸುತ್ತಲೂ’ ಎಂಬ ನಿನ್ನ ವಿಭಜನೆ. ಅಂದರೆ ಈ ಕಥನವನ್ನು ’ನೆನಪಿಟ್ಟುಕೊಳ್ಳುವುದು’ ತಪ್ಪಲ್ಲವೆ, ನಿನ್ನ ಪ್ರಕಾರ?"
"ಹೌದು, ಅವುಗಳನ್ನು ನೆನಪಿಟ್ಟುಕೊಳ್ಳುವುದನ್ನು ಹೊರತುಪಡಿಸಿ, ಬೇರಿನ್ನಾವ ರೀತಿಯಲ್ಲೂ ಅದನ್ನು ಉಳಿಸಲಾಗದು."
"ಏನು ತಮಾಷೇನ? ಇಪ್ಪತ್ತು ವರ್ಷದ ಭವಿಷ್ಯದಿಂದ, ಮುಂದಿನಿಂದ ಬಂದು, ಬಂದೊಂದು ದಿನದಲ್ಲೇ ಮಾಯವಾಗುತ್ತಿರುವ, ಇಮರಿಹೋಗುತ್ತಿರುವ ಲೇಖನಗಳವು. ಆದರೆ ಏನನ್ನಾದರೂ ನೆನಪಿಟ್ಟುಕೊಳ್ಳಬೇಕೆಂದರೆ ಸ್ಮರಣೆಯು ಕಾಲದ ರೂಪದಲ್ಲಿ ಭೂತದಿಂದ ಭವಿಷ್ಯಕ್ಕೆ ಮಾತ್ರ ಪಯಣಿಸಬೇಕಲ್ಲವೆ?" ಎಂದಿದ್ದ ನಲ್ಲಸಿವನ ಮಾತು ಮತ್ತೆ ವಿಕ್ಷಿಪತನಿಗೆ ನಿಯೋ-ಕ್ಯಾಪಿಟಲ್, ಬಂಡವಾಳಶಾಹಿ, ಮಿಡಲ್ ಕ್ಲಾಸ್ ವಿರಾಮೀ (’ಹರಾಮೀ’ ಅರ್ಥಕ್ಕೆ ಸಂವಾದಿಯಾಗಿ) ಜೀವನದೊಂದಿಗೆ ತಾಳೆಹಾಕುವಂತೆ ಮಾಡಿತ್ತು.
"ಆಯ್ತಪ್ಪ. ಆ ಪ್ರವಾಸಕಥನ ಬಂಡವಾಳಶಾಹಿ, ಒಪ್ಪಿಕೊಂಡೆ. ಏನಿವಾಗ?"
"ಹೌದು"
"ಅದನ್ನು ಉಳಿಸಬಾರದ?"
"ಹೌದು"
"ಅದನ್ನು ಉಳಿಸಬಾರದೆಂದರೆ, ಅದನ್ನು ನೆನಪಿಟ್ಟುಕೊಳ್ಳಬಾರದು?"
"ಹೌದು."
"ಆದರೆ ಯಾವುದನ್ನು ಅಳಿಸಬೇಕು, ಯಾವ್ಯಾವ ಘಟನೆಗಳನ್ನು ನೆನಪಿಟ್ಟುಕೊಳ್ಳಬಾರದು ಎಂಬ ವಿವರವು ನಿನಗೆ ನೆನಪಿದೆಯೇ?"
"ಹೌದು"
"ಇದನ್ನೇ ಪ್ಯಾರಡಾಕ್ಸ್, ವೈರುಧ್ಯ ಎನ್ನುವುದು. ಪ್ರವಾಸಕಥನವು ನಿನ್ನನ್ನು ಸಾಕಷ್ಟು ಕಾಡಿದೆ. ಯಾವ್ಯಾವುದನ್ನೂ ಸ್ಪಷ್ಟವಾಗಿ ಮರೆಯಬೇಕು ಎಂದುಕೊಂಡಿದ್ದೀಯೋ ಅದನ್ನೆಲ್ಲಾ ಸ್ಪಷ್ಟವಾದ ಚೌಕಟ್ಟೊಂದರಲ್ಲಿ ನೆನಪಿಟ್ಟುಕೊಂಡಿರುವ ವೈರುಧ್ಯವು ನಿನ್ನ ವ್ಯಕ್ತಿತ್ವವನ್ನು ಬಟಾಬಯಲುಗೊಳಿಸುವುದಿಲ್ಲವೆ ಎಂದು ಗೆಲುವಿನ ನಗೆ ಸೂಸಿ ಕೈ ಎತ್ತಿದ್ದ," ವಾದದಲ್ಲಿ ಗೆದ್ದ ನಲ್ಲಸಿವ.
ಎಲ್ಲರೂ ಹೋ ಎಂದು ಚಪ್ಪಾಳೆ ತಟ್ಟಿದ್ದರು, ಆತನ ವಾದ ಅರ್ಥವಾಗದಿದ್ದರೂ, ಆತ ಕೈ ಎತ್ತಿದ್ದರಿಂದ ಆತ ಆ ಅರ್ಥವಾಗದ ವಾದದಲ್ಲಿ ಗೆದ್ದಿದ್ದಾನೆ ಎಂಬ ತಿಳುವಳಿಕೆಯಿಂದ.
"ಗುರು, ಇಷ್ಟೊತ್ತೂ ವಾದಿಸಿದ್ದನ್ನು ಒಂದು ವಾಕ್ಯದಲ್ಲಿ ಹೇಳಬಲ್ಲೆಯ? ಕೇಳಿದ," ಮಲ್ಕರ್ಣಿ ನಲ್ಲಸಿವನನ್ನು.
"ಸುಲಭ. ಯಾವುದನ್ನು ಮರೆಯಬೇಕೆಂದುಕೊಳ್ಳುತ್ತೇವೋ ಅದನ್ನು ನೆನೆಸಿಕೊಂಡ ಕಾರಣದಿಂದ ಅಳಿಸಲು ಹೋಗಬಾರದು, ಹೋಗಲಾಗದು."
"ಇನ್ನೂ ಸಿಂಪಲ್ ಮಾಡು ಗುರುವೆ, ನೀನು ಹೇಳುವುದು ಅಷ್ಟು ಅರ್ಥವಾಗ್ತಿಲ್ಲ. ಆದ್ದರಿಂದ ನಾನಿದನ್ನು ಮತ್ಯಾರಿಗಾದರೂ ಇದನ್ನು ಹೇಳಬೇಕಾದರೆ ಅದು ನೆನಪೂ ಇರುವುದಿಲ್ಲ."
"ವೆರಿಗುಡ್ ಅಬ್ಸರ್ವೇಷನ್. ನೆನಪಿಟ್ಟುಕೊಳ್ಳಲಾಗದುದನ್ನು ಮತ್ತೊಬ್ಬರಿಗೆ ಸಂವಹಿಸಲಾಗದು. ಚೆನ್ನಾಗಿದೆ ಈ ವಾಕ್ಯ, ಮಲ್ಕರ್ಣಿ," ಎಂದ ನಲ್ಲಸಿವ.
"ವಾಹ್. ವಂಡರ್ಫುಲ್. ಇದು ನೆನಪಿರುತ್ತೆ, ಕೇವಲ ಮೂರು ಪದಗಳಲ್ಲವೆ. ಥ್ಯಾಂಕ್ಯೂ
ಮಲ್ಕರ್ಣಿ, ಗ್ಯಾರಂಟಿ ನೆನಪಿಟ್ಟುಕೊಳ್ಳುತ್ತೀಯಲ್ಲ?"
"ಖಂಡಿತ."
’ಇದನ್ನು ಯಾರು ಹೇಳಿಕೊಟ್ಟಿದ್ದು ಅಂತ ಯಾರಾದ್ರೂ ಕೇಳಿದ್ರೆ ಏನು ಹೇಳ್ತೀಯ?"
"ನೀನೇ ಅಲ್ವ?"
"ಅಯ್ಯೋ ಪೆದ್ದ. ನೀನೇ, ಈಗಷ್ಟೇ ಹುಟ್ಟಿಹಾಕಿದ ವಾಕ್ಯವಲ್ಲವೇನೋ ಇದು. ನಿನಗೇ ನೆನಪಿಲ್ಲವಲ್ಲೋ. ಮತ್ತೊಬ್ಬರಿಗೆ ಇದನ್ನು ಸಂವಹಿಸಬಾರದು ಎಂದು ನೀನೇ ಪರಿಗಣಿಸಿಬಿಟ್ಟಿರುವುದರಿಂದ, ನೀನೇ ಹುಟ್ಟಿಹಾಕಿದ ಐಡಿಯಾವನ್ನು ನೀನೇ ನೆನಪಿಟ್ಟುಕೊಳ್ಳುತ್ತಿಲ್ಲವಲ್ಲ!"
"ನನ್ನ ವಿಷಯ ಬಿಡಪ್ಪ. ನೀನು ವಿಕ್ಷಿಪತನನ್ನು ವಾದದಲ್ಲಿ ಕಟ್ಟಿಹಾಕಿದೆಯಲ್ಲ, ಅದನ್ನು ಒಂದು ವಾಕ್ಯದಲ್ಲಿ ಹೇಳು."
"ಈಗಾಗಲೇ ಹೇಳಿದ್ದಾಯ್ತದು. ಸ್ಮೃತಿಯಲ್ಲಿರಿಸಲಾಗದ್ದನ್ನು ಸಂವಹಿಸಲಾಗದು. ಮತ್ತು ಇದನ್ನು ಹುಟ್ಟಿಹಾಕಿದ್ದು ನಿನ್ನದೇ ಪದಗಳು. ಇದನ್ನು ತಿರುವು ಮರೆವು ಮಾಡು ನೋಡುವ," ಎಂದ ನಲ್ಲಸಿವ.
"ಅದೆಲ್ಲಾ ನನ್ನ ಕೈಲಿ ಆಗೋಲ್ಲ, ಬಾಯಲ್ಲೂ ಆಗೋಲ್ಲ. ನಾನೊಂದು ಮಾತ್ ಹೇಳ್ತೇನೆ. ಎರಡು ಮೂರು ಪದಗಳಲ್ಲಿ ಹೇಳಬಹುದಾದುದನ್ನು ಗಂಟೆಗಟ್ಟಲೆ ವಾದವಿವಾದದಲ್ಲಿ ತುಂಬಿಸಿಟ್ಟುಕೊಳ್ಳೋ ನಿಮ್ಮ ಮಾತಿನ ಚಟ ಎಂಥಾ ಟೈಮ್ ವೇಸ್ಟ್ ಕಣಯ್ಯ."
"ಬೇಜಾರು ಮಾಡ್ಕೋಬೇಡ ಮಲ್ಕರ್ಣಿ. ನಾಲ್ಕು ರೋಟಿ ತಿಂದ ಮೇಲೆ ಹೊಟ್ಟೆತುಂಬಿದವನೊಬ್ಬ, ನಾಲ್ಕನೇ ರೋಟಿಯನ್ನು ಮೊದಲೇ ತಿಂದಿದ್ದರೆ ಉಳಿದ ಮೂರನ್ನೂ ಉಳಿಸಬಹುದಾಗಿತ್ತಲ್ಲ ಎಂದು ಕೊರಗಿದನಂತೆ."
"ವಾಹ್ ಫನ್ನಿ. ಎಂಥಾ ಸ್ಟುಪಿಡ್ ಫೆಲೋ ಆತ," ಎಂದ ಕರ್ಣಿ.
"ನಮ್ಮ ವಾದವಿವಾದಗಳ ನಂತರ ನಿನ್ನ ಮಾತುಗಳನ್ನು ಕೇಳಿದಾಗ ನಮಗೆಲ್ಲಾ ಹಾಗೇ ಅನ್ನಿಸುತ್ತಿದೆ! ಕುಂಬಾರನಿಗೊಂದು ವರುಷ ದೊಣ್ಣೆಗೊಂದು ನಿಮಿಷ," ಎಂದು ಎದ್ದು ಹೋಗಿದ್ದ ನಲ್ಲಸಿವ. ವಿಕ್ಷಿಪತನ ಪತನದಿಂದ ಕೇಕೆಯಾಕಿದ್ದ ಮಲ್ಕರ್ಣಿಯ ಸೋಲಿಗೆ ವಿಕ್ಷಿಪತ ಖುಷಿಗೊಂಡು ಕೇಕೆ ಹಾಕಿದ. ಆತನ ಕೈಯಲ್ಲಿ ’ಲಂಡನ್ ಪ್ರವಾಸಕಥನ’ದ ಐದನೇ ಭಾಗವು ಕವರಿನಿಂದ ಹೊರಕ್ಕೆ ತಲೆಹಾಕಿ, ಕುನ್ನಿಮರಿಯಂತೆ ಆತನ ಕೈಗಳು ಚಲಿಸಿದಂತೆಲ್ಲಾ ಓಲಾಡುತ್ತಿತ್ತು!
(www.sampada.net/article/7657 --
ಬರೆದ ದಿನಾಂಕ
March 1, 2008 - 11:54am).//