ನೆನಪಿನ ಚಿತ್ರಕಲಾ ಶಾಲೆ: ಭಾಗ ೨೩ - ದೃಶ್ಯದೊಡಲಿಗೆ ತಾತ್ವಿಕ ಆಹಾರ
(೬೮)
ಪ್ರಸ್ತುತದಲ್ಲಿ ತರುಣ್ ಉದ್ದನೆಯ ಸಣ್ಣ ಕೋಲೊಂದರ ತುದಿಯಲ್ಲಿ ಮೊಳೆಯೊಂದನ್ನು ಬಡಿದು ಆ ತುದಿಯನ್ನು ಗ್ರಿಲ್‌ಗಳ ನಡುವೆ ನಿಧಾನವಾಗಿ ಕ್ಯಾಂಟೀನಿನ ಒಳಕ್ಕೆ ತೂರಿಸಿದ. ಕರ್ನಾಟಕದಲ್ಲೇ ತಯಾರಿಸಲಾದ ಕೇರಳ ಚಿಪ್ಸ್‌ನ ಪ್ಲಾಸ್ಟಿಕ್ ಕವರಿಗೆ ಅದನ್ನು ಚುಚ್ಚಿ ಅದನ್ನು ಮೇಲ್ಮುಖಗೊಳಿಸಿದ. ಉದ್ದನೆ ಕೋಲು, ಅದರ ಮೊಳೆಯುಳ್ಳ ತುದಿಯು ಗ್ರಿಲ್‌ಗಳ ಮೂಲಕ ಕ್ಯಾಂಟೀನಿನ ಒಳಭಾಗದಲ್ಲಿ ಮೇಲ್ಮುಖವಾಗಿ ತಿರುಗಿದ್ದನ್ನು ಕ್ರಮೇಣ ಹಿಂದಕ್ಕೆಳೆದುಕೊಂಡ. ಬೆರಳಿಗೆ ಎಟುಕುವಂತಾದಾಗ ನಾಮುಂದು ತಾಮುಂದು ಎಂದು ಎಲ್ಲರೂ ಪ್ಲಾಸ್ಟಿಕ್ ಪೊಟ್ಟಣವನ್ನು ಬೆರಳುಗಳ ಯುದ್ಧಕ್ಕೆ ಒಳಪಡಿಸಿದಾಗ, ಅದು ಹರಿದು ಚಿಪ್ಸೆಲ್ಲಾ ಕ್ಯಾಂಟೀನಿನ ಒಳಕ್ಕೇ ಚೆಲ್ಲಾಪಿಲ್ಲಿಯಾಗಿ ಬಿದ್ದು, ಎಲ್ಲರ ಕೈಗಳಿಗೂ ಚಿಕ್ಕನಾಯ್ಕನಳ್ಳಿ ಚಿಪ್ಪುಗಳನ್ನು ಕೊಟ್ಟಂತಾಗಿ, ಎಲ್ಲರ ಮುಖಭಾವಗಳೂ ಚಿಪ್ಸ್‌ನಂತೇ ಒಣಗಿ ಹೋದವು. "ಈಗ ನಾವು ತಿನ್ಲೀ ಬಿಡ್ಲಿ, ನಾಳೆ ಕ್ಯಾಂಟಿನ್ ಪಾಂಡು ಬಂದು ಚಿಪ್ಸು ಬಿದ್ದಿರುವುದನ್ನು ನೋಡಿ ಉಗಿಯೋದ್ ನೆನೆಸಿಕೊಂಡ್ರೆ, ಈಗ್ಲೇ ಮುಖ ಒರ್ಸಿಕೊಳ್ಳೋಣ ಅನ್ಸೋಲ್ವ, ನನ್ ಮಕ್ಳಾ, ಯಾವ್ದಾದ್ರೂ ಕೆಲ್ಸಾ ಮಾಡೋವಾಗ-ಅದು ಕಳ್ತನ ಆದ್ರೂ ಸರಿ--ಶ್ರದ್ಧೆ, ಭಕ್ತಿ ಮತ್ತು ನಂಬಿಕೆ ಇರ್ಬೇಕೂ ಕಣ್ರೋ, ತಿರ್ಬೋಕಿಗಳ," ಎಂದು ಹೊಸದೊಂದು ಸಮಸ್ಯೆಯನ್ನು ಎದುರಿಗಿಟ್ಟುಬಿಟ್ಟ ಮಮಾ.
ಮುಂದೊಂದು ದಿನ ಬಾಯ್ಸ್ ಕಲಾಶಾಲೆಯಲ್ಲಿ ’ಸಿಸ್’ ಎಂಬ ಕೆಟ್ಟ ಟೀಚರ್ ನಮಗೆ ಪಾಠ ಹೇಳುವುದು ಬೇಡವೆಂತಲೂ, ಏಕೆಂದರೆ ಆತ ಪಾಠ ಹೇಳಿಕೊಡುವುದೇ ಇಲ್ಲವೆಂದು, ಆತನ ವಿರುದ್ಧ ಪ್ರಾಂಶುಪಾಲರಿಗೆ ದೂರು ಒಯ್ಯಬೇಕೆಂದು ತರಗತಿಯೊಂದರೆ ಎಲ್ಲ ವಿದ್ಯಾರ್ಥಿಗಳು ನಿರ್ಧಾರಮಾಡಿದ ಐದೇ ನಿಮಿಷದಲ್ಲಿ ಅರ್ಧ ತರಗತಿ ಅದಕ್ಕೊಪ್ಪಲಿಲ್ಲವಾಗಿ, ಉಳಿದರ್ಧಕ್ಕೆ ತಾವು ಈಗ ಆರೋಪ ಮಾಡಲಿ ಬಿಡಲಿ, ತಾವು ಹಾಗೆ ನಿರ್ಧರಿಸಿದ್ದನ್ನಂತೂ ಉಳಿದರ್ಧ ತರಗತಿಯವರು sಸಿಸ್ ಎಂಬ ಉಪಾಧ್ಯಾಯರಿಗೆ ಇಡಿಯ ಪ್ರಸಂಗವನ್ನು ಕುರಿತು ಹೇಳಿಬಿಡುವುದು ನಿಶ್ಚಿತವೆಂತಲೂ ಗಾಭರಿಯಾದಾಗ, ಆಗಿದ್ದಾಗಲಿ ಎಂದು ದೂರು ನೀಡಿ, ಸಿಸ್‌ನನ್ನು ಪಾಠ ಹೇಳುವುದನ್ನು ಬಿಡಿಸಿ, ಪರೀಕ್ಷಾ ವಿಭಾಗದ ಮೇಲ್ವಿಚಾರಣೆಗೆ ವರ್ಗಾಯಿಸಿಬಿಟ್ಟಿದ್ದರು. ಸಿಸ್ ಎಂದರೆ ಎಸ್.ಐ.ಎಸ್ ಅಂದರೆ ’ಸೌತ್ ಇಂಡಿಯನ್ ಸರ್ದಾರ್ಜಿ’ ಎಂದರ್ಥ. ದೂರು ನೀಡಿದವರೆಲ್ಲರೂ ಫೇಲ್ ಆಗಿಬಿಡುವ ಸಾಧ್ಯತೆಯ ಬಗ್ಗೆ ಅನುಮಾನ ಪಡುವ ಆವಶ್ಯಕತೆಯೇ ಇರಲಿಲ್ಲ. ಅರ್ಧ ಜೀವ ಹೋದ ಹಾವಿನ ಸ್ಥಿತಿಯನ್ನು ಕುರಿತೇ ಈ ಪ್ರಸಂಗದ ಕಥನ. ಅಥವ ದೊಡ್ಡಯ್ಯ ತೋಳ ಎಂದು ಭಾವಿಸಿ ಅರ್ಧಜೀವ ಮಾಡಿದ್ದ ಹುಲಿಯನ್ನು, ಹುಲಿ ಎಂದೇ ಅರಿತು ಪೂರ್ಣವಾಗಿ ಆಹುತಿ ತೆಗೆದುಕೊಂಡ ಕಥನವನ್ನು ಹೋಲುತ್ತಿತ್ತು. ಹಾಗಾಗಿತ್ತು ಕ್ಯಾಂಟೀನಿನ ಒಳಗೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದ ಕರ್ನಾಟಕದಲ್ಲಿ ತಯಾರಾದ ಕೇರಳ ಚಿಪ್ಸಿನ ಕಥೆ! ಕದ್ದು ತಿನ್ನಲಿ ಬಿಡಲಿ, ಕದಿಯಲು ಹೋಗಿ ಬಿಟ್ಟ ಸಾಕ್ಷಿಯನ್ನಂತೂ ಅಕ್ಷರಶಃ ಗುಡಿಸಿಹಾಕಬೇಕಿತ್ತು. ಇಲ್ಲದಿದ್ದಲ್ಲಿ ಕ್ಯಾಂಟೀನ್ ಪಾಂಡು ವಾಚ್‌ಮನ್ ದೊಡ್ಡಯ್ಯನ ಮೇಲೆ ಆರೋಪ ಹೊರಿಸಿ, ಆತ ಹುಡುಗರ ಮೇಲೆ ಅದನ್ನು ಸಾಗಹಾಕಿ, ಹುಡುಗರು ತಮ್ಮ ಒಟ್ಟಾರೆ ಪಾಪದ ಮೂಟೆಗಳ ಭಾರವನ್ನೆಲ್ಲಾ (ಮಾವು ಕದ್ದದ್ದು, ಪ್ರಶ್ನಾಮೂರ್ತಿ ಗಂಟೆಗಟ್ಟಲೆ ತ್ರಿಶಂಕುಸ್ಥಿತಿಯನ್ನನುಭವಿಸಿದ್ದು, ತೆಂಗಿನ ಮರದಲಿ ಇಟ್ಟಿಗೆ ಹಣ್ಣು ಇದ್ದದ್ದು ಎಲ್ಲಕ್ಕೂ ಮಿಗಿಲಾಗಿ ಆ ಕಾಲದ ಚಲನವಲನವನ್ನೇ ಅನುಮಾನಿಸುವ ಸೋಕುಮಾರಿಯೊಂದಿಗಿನ ಸಾಮೂಹಿಕ ಪತ್ರೋತ್ತರ) ತಡೆದುಕೊಳ್ಳಲಾಗದೆ ಮೇಷ್ಟ್ರ ಎದಿರು ಎಲ್ಲವನ್ನೂ ಒಪ್ಪಿಕೊಂಡುಬಿಟ್ಟಲ್ಲಿ-ಒಬ್ಬರಲ್ಲ ಒಬ್ಬರು ಬಾಯಿಬಿಟ್ಟುಬಿಡುವ ಸಾಧ್ಯತೆ ಇತ್ತು--ಅತ್ತ ಕಳ್ಳರಾಗಿ, ಇತ್ತ ಮೂರ್ಖರಾಗಿ ಕಾಣುವ ಎಲ್ಲ ಸಾಧ್ಯತೆಯೂ ಇತ್ತು.
ತರುಣ್ ಮತ್ತೂ ಉಪಾಯವಾಗಿ, ಪ್ರಥಮ ಚುಂಬನಂ ದಂತ ಭಗ್ನಂ, ಮತ್ತು ದಂತಕ್ಕೆ ಆಹಾರವಾಗಬೇಕಾದ ಕೇರಳ ಚಿಪ್ಸ್ ಭಗ್ನಂ ಆದರೂ ಸಹ, ಪ್ಲಾಸ್ಟಿಕ್ ಪೊಟ್ಟಣಗಳನ್ನು ಗ್ರಿಲ್‌ಗಳ ಬಳಿ ಮೊಳೆ-ಅಂಟಿತ-ಕೋಲಿನ ಮೂಲಕ ಮತ್ತೆ ಮತ್ತೆ ಎಳೆದುಕೊಂಡು, ಬೆರಳುಗಳ ಚಾಕಚಕ್ಯತೆಯಿಂದ ಪೊಟ್ಟಣಗಳನ್ನು ಒಂದೊಂದೇ ಹಂತವಾಗಿ ಮೇಲಕ್ಕೆತ್ತುತ್ತ, ಮೇಲ್ಛಾವಣೆ ಮತ್ತು ಗ್ರಿಲ್-ಗೋಡೆಯ ನಡುವೆ ಎತ್ತರದಲ್ಲಿ ಅರ್ಧ ಅಡಿ ಖಾಲಿಯಿದ್ದ ಜಾಗದಿಂದ ಹೊರಕ್ಕೆ ಎಗುರಿಸಿಕೊಂಡು ಎಲ್ಲರಿಗೂ ತಿನ್ನಲು ಕೊಡತೊಡಗಿ, ಕ್ಯಾಂಟೀನಿನ ಒಳಭಾಗವನ್ನು ಸಾಫುಗೊಳಿಸತೊಡಗಿದ್ದ. "ಈ ತರ ಖಾಲಿ ಮಾಡುವುದು ಸುಲಭ. ಆದರೆ ಒಳಗೆ ಬಿದ್ದಿರುವ ಚೆಲ್ಲಾಪಿಲ್ಲಿ-ಚಿಪ್ಸ್‌ಗಳ ಕಥೆಯೇನು, ಅದನ್ನು ಸಾಫ್ ಮಾಡುವುದು ಹೇಗೆ?" ಎಂದಿದ್ದರು ಗಾಭರಿಗೊಂಡ ಕೆಲವರು.
ಖಾರ, ಮಸಾಲೆ ತಿಂದ ಮೇಲೆ ಜೀವ ತಣ್ಣಗಾಗಬೇಕಲ್ಲ. ಕೋಲಿನ ತುದಿಗೆ ದಾರ ಕಟ್ಟಿ, ದಾರದ ಮತ್ತೊಂದು ತುದಿಯನ್ನು ಕುಣಿಕೆಯನ್ನಾಗಿಸಿ, ಆ ಮೇಲ್ಛಾವಣೆ ಮತ್ತು ಗ್ರಿಲ್-ಗೋಡೆಯ ನಡುವೆ ಇದ್ದ ಖಾಲಿ ಜಾಗದಿಂದ ನೇಣು ಕುಣಿಕೆ ಇದ್ದ ದಾರದ ತುದಿಯನ್ನು ಒಳಕ್ಕೆ ಇಳೆಬಿಟ್ಟ ತರುಣ್. ಆ ಕುಣಿಕೆ ಕೆಳಕ್ಕೆ ಬರುತ್ತಲೇ, ಬೆರೆಳುಗಳ ಜಾದೂವಿನಿಂದ ಅದನ್ನು ಸಾಫ್ಟ್‌ಡ್ರಿಂಕ್ ಬಾಟಲಿಗಳ ಕುತ್ತಿಗೆಗೆ ಕಟ್ಟಿ, ಬಿಗಿಗೊಳಿಸಿ ಕೋಲಿನಿಂದ ಅದನ್ನು ಎಳೆದು, ಬಾಟಲಿಯು ಗ್ರಿಲ್ ಹತ್ತಿರ ಬಂದಾಗ, ನಿಧಾನಕ್ಕೆ ಕೋಲಿನ ದಾರದಿಂದ ಅದನ್ನು ಬಿಡಿಸಿಕೊಂಡು, ಎರಡೂ ಕೈಗಳಲ್ಲಿ ಹೊರಕ್ಕೆಳೆದು, ಮೇಲ್ಚಾವಣೆಯಿಂದ ಕೆಳಕ್ಕಿಳಿಸಿ, ಎಲ್ಲರೂ ಕುಡಿದಾದ ಮೇಲೆ ಪರಿಷತ್ತಿನ ಪಶ್ಚಿಮ ಭಾಗಕ್ಕಿದ್ದ, ವೃದ್ಧಾಶ್ರಮದ ಪಕ್ಕದ ತೋಟಕ್ಕೆ ಎಸೆಯುತ್ತಿದ್ದರು. ಮಂತ್ರಿಗಳ ಮನೆಯ ನಾಯಿ ಬೊಗಳೀತು ಜೋಕೆ ಎಂದದಾರೋ ಹೇಳುತ್ತಿದ್ದಂತೆಯೇ, ನಾಯಿಗಳು ಬೊವ್ ಬೊವ್ ಎನ್ನುವ ಬದಲು ಕುಯ್‌ಗುಡುತ್ತಿರುವುದು ಕೇಳಿಸಿತ್ತು! "ನಮ್ಮ ತರುಣ ಒಂಥರಾ ಏಕಲವ್ಯನೇ ಗುರುವೆ. ಬೊಗಳಲು ಬಾಯಿ ತೆರೆದ ನಾಯಿ ಬಾಯಿ ಮುಚ್ಚುವ ಮುನ್ನ ಸಾಫ್ಟ್‌ಡ್ರಿಂಕ್ ಬಾಟಲಿ ಅದರೊಳಕ್ಕೆ ಹೊಗುವಂತೆ ಬೀಸಿದ್ದಾನೆ ನೋಡ್ರೋ," ಎಂದು ಮಮಾ ಹೇಳಿದ ವಾಕ್ಯದಲ್ಲಿ ಗೂಢಾರ್ಥವಿದ್ದು; ಆ ತೆರನಾದ ವಾಚಾಳಿತನದಿಂದಾಗಿ ಆತನಿಗೆ ತುಂಬಾ ಇಂಟಲೆಕ್ಚುಯಲ್ ವ್ಯಕ್ತಿತ್ವ ದೊರಕಿಸಿಬಿಡುತ್ತದೆಂಬ ಗಾಭರಿಯಿಂದ ಮುಂದುವರೆದು, "ರಂದ್ರವಿರುವೆಡೆಯಲ್ಲಿಲ್ಲಾ ಬಾಯಿತೂರಿಸುವುದರಲ್ಲಿ ತರುಣ್ ಎಕ್ಸ್‌ಪರ್ಟ್. ಬಡ್ಡೀಮಗ, ಸಾಫ್ಟ್‌ಡ್ರಿಂಕ್ ಬಾಟಲಿಯ ರಂದ್ರಕ್ಕೆ ಹೇಗೆ ಬಾಯಿ ಹಾಕುತ್ತಿದ್ದಾನೆ ನೋಡಿ," ಎಂದು ಮತ್ತೆ ಥಿಯರಿಟಿಕಲ್ ಮಾತುಗಳನ್ನುದುರಿಸುವುದರಲ್ಲಿ ದೊಡ್ಡದಾಗಿ ಕಣ್ಣುಬಿಟ್ಟಿದ್ದ ತರುಣ್‌ನ ಬೆದರಿಕೆಯ ಎಚ್ಚರಿಕೆ ಕೆಲಸ ಮಾಡಿತ್ತು.
(೬೯)
ಇಡಿಯ ಕ್ರೇಟ್ ತುಂಬಾ ಇದ್ದ ಹದಿನಾರು ಬಾಟಲಿ ಫಾಂಟಾ, ಬಿಜಾಯ್ಸ್, ಮಾಝಾ, ಸುಮಾರು ನಲವತ್ತು ಪ್ಯಾಕೆಟ್ ಕರಿದ ಪದಾರ್ಥಗಳು ಕ್ಯಾಂಟೀನಿನಿಂದ ಪರಿಷ್ಕರಿತ ರೂಪದಲ್ಲಿ ಮಂತ್ರಿಗಳ ಮನೆಗಳ ತೋಟ ಸೇರಲು ಹಿಡಿದ ಒಟ್ಟಾರೆ ಸಮಯ ಕೇವಲ ನಲವತ್ತು ನಿಮಿಷ! ನಂತರ ಎಲ್ಲರೂ ಕ್ಯಾಂಟೀನಿನಿಂದ ಗ್ರಾಫಿಕ್ ವಿಭಾಗದೆಡೆ ಇದ್ದ ನಲ್ಲಿಯಲ್ಲಿ ನೀರು ಕುಡಿದು ತೇಗಿದರೂ ವೀರಾನಿಗೆ ಚಿತೆಯಂತಹ ಚಿಂತೆ. ಆಗಾಗ ಎಂ.ಎಸ್.ಸತ್ಯು ಪರಿಷತ್ತಿನ ಕಲಾಪ್ರದರ್ಶನಗಳನ್ನು ನೋಡಲು ಬರುತ್ತಿದ್ದುದ್ದರಿಂದ ಅವರ ಸಿನೆಮಾದ ಶೀರ್ಷಿಗೆ ನೆನೆಸಿಕೊಂಡ ವೀರಾನಿಗೆ, ಆ ನೆನಕೆಯಿಂದಾಗಿ ಕ್ಯಾಂಟೀನಿನ ಒಳಗಿನ ಚಿಪ್ಸುಗಳು ಕಾಡತೊಡಗಿದರ ಹಿಂದಿನ ಸಂಕೀರ್ಣ ಮನಸ್ಥಿತಿಯನ್ನು--ಯಾವುದೋ ಪದವು ಮತ್ಯಾವುದೋ ಸಮಸ್ಯೆಯನ್ನು ನೆನಪಿಸುವ ಕ್ರಮವನ್ನು--ಸ್ವತಃ ಆ ಮನಸ್ಸೇ ಅರ್ಥೈಸದೆ ಹೋಯಿತು.
"ನೋಡ್ರಯ್ಯಾ, ಏನಾದ್ರೂ ಸರಿ, ಒಳಗಿನ ಚಿಪ್ಸನ್ನ ಗುಡಿಸಿಹಾಕಿಬಿಡಬೇಕು," ಎಂದ ಮಮ ಯಾರನ್ನೂ ಉದ್ದೇಶಿಸದೆ, ಎಲ್ಲರನ್ನೂ ನೋಡುತ್ತ.
"ಬೆಳಿಗ್ಗೆಗೆ ಹೊಟ್ಟೆಯಿಂದ ಗುಡಿಸಿಹಾಕಲಾಗುತ್ತದೆ ಬಿಡು ಗುರುವೆ," ಎಂದ ಅನೇಖ.
"ನಿಜವಾಗಿಯೂ ನಮಗೀಗ ಮುಖ್ಯವಾಗಿರುವ ಹಸಿವೆ ಯಾವುದು ಗೊತ್ತೆ?" ಎಂದಿದ್ದ ಹತ್ತಾರು ಸ್ಕೆಚ್‌ಗಳನ್ನು ಆ ಕಗ್ಗತ್ತಲಲ್ಲೂ ರಚಿಸಿ ಬೇಸತ್ತಿದ್ದ ರಮಾನಾಥ.
"ಯಾವುದು?" ಎಂದು ಅಷ್ಟೇ ಗಂಭೀರವಾಗಿ ಕೇಳಿದ್ದ ಬಿಡಾ.
"ಅದೇ ’ಈ ಚಿತ್ರ ಯಾಕೆ ಬಿಡಿಸಬೇಕು?’ ಅನ್ನೋ ಪ್ರಶ್ನೆಯನ್ನು ಆಧರಿಸಿ ನಿಂತಿರುತ್ತದೆ ’ಯಾವ ರೀತಿ ಚಿತ್ರಬಿಡಿಸಬೇಕು?’ ಎಂಬ ಹಸಿವೆ."
"ಕುಳಿತಿರುವ ಚಿತ್ರ ಬರೆದಾಗಲೂ ಈ ಪ್ರಶ್ನೆ ನಿಂತಿರುತ್ತದೆಯೆ ಮಹಾಶಯರೆ? ಡಸ್ ದಿಸ್ ಕ್ವಶನ್ ಸ್ಟಾಂಡ್ ಈವನ್ ವೆನ್ ಯು ಡ್ರಾ ಅ ಸೀಟೆಡ್ ಫಿಗರ್?" ಎಂದು ಕಿಚಾಯಿಸಿದ ವಿರಾ.
"ಮೊದಲು ನೈಜ ಚಿತ್ರ ಬಿಡಿಸುವುದನ್ನು ಕಲಿತ ನಂತರ ಅಮೂರ್ತ ಚಿತ್ರ ಬಿಡಿಸಬೇಕು ಅನ್ನುತ್ತಾರಲ್ಲ"
"ಹೌದು!!"
"ನೈಜ ಚಿತ್ರ ಅನ್ನೋದೇ ಸ್ವತಃ ಅಮೂರ್ತವಲ್ಲವೆ? ನಿಜ ಜಗತ್ತಿನಲ್ಲಿ ರೇಖೆಗಳೆಲ್ಲಿವೆ? ಜಲವರ್ಣ, ತೈಲವರ್ಣದ ಚರ್ಮವುಳ್ಳ ಮನುಷ್ಯರೆಲ್ಲಿದ್ದಾರೆ? ನಾವೆಷ್ಟೇ ಅತಿ-ನೈಜ ಅಥವ ಹೈಪರ್-ರಿಯಲ್ ಚಿತ್ರ ರಚಿಸಿದರೂ ಅದರ ಚರ್ಮವು ತೈಲವರ್ಣದ ವಾಸನೆ ಸೂಸುತ್ತದೆಯೇ ಹೊರತು ಬೆವರಿನ ವಾಸನೆಯನ್ನಲ್ಲ. ನಾವ್ಯಾಕೆ ನೈಜಚಿತ್ರರಚನೆ ಮಾಡಬೇಕು?"
"ಆಸ್ತಿಕರ ಪ್ರಕಾರದ ದೈವಸೃಷ್ಟಿಯನ್ನು ಮತ್ತು ನಾಸ್ತಿಕರ ಪ್ರಕಾರದ ಪ್ರಕೃತಿಸೃಷ್ಟಿಯನ್ನು ಪೂರ್ಣವಾಗಿ ’ಪುನರ್-ಸೃಷ್ಟಿ’ ಮಾಡಲಾಗದ ಮಾನವನ ಆತ್ಮೀಯ ಕ್ರಿಯೆಯನ್ನೇ ’ಕಲೆ’ ಅನ್ನೋದು. ಸುಮ್ಮನೆ ಮಾಡುತ್ತಿರಬೇಕಪ್ಪ ನಿನ್ನ ಹಾಗೆ. ಸಾವಿರಾರು ಸ್ಕೆಚಸ್ ರಚಿಸಿದ ಮೇಲೆ (ಮತ್ತು ಮೇಲಾದರೂ) ಈ ಪ್ರಶ್ನೆ ಕೇಳುತ್ತಿದ್ದೀಯಲ್ಲ!"
"ಸಾವಿರ ಚಿತ್ರ ರಚನೆಯಿಂದಲೇ ಅದನ್ನು ಪ್ರಶ್ನಿಸುವ ಅರಿವು ಬಂದದ್ದು. ಇಲ್ಲದಿದ್ದರೆ ಈ ಅರಿವು ಬರುತ್ತಿರಲಿಲ್ಲ," ಎಂದ ರಮಾನಾಥ.
"ಅಂದರೆ ಕಲಾಶಾಲೆಯಲ್ಲಿ ಸೃಜನಶೀಲತೆಯನ್ನು ಹೇಳಿಕೊಡುವುದಿಲ್ಲ ಎಂಬುದು ನಿನ್ನ ಈ ಮಾತಿನ ಅರ್ಥವೋ?" ಎಂದು ಅಡ್ಡಗಾಲು ಹಾಕಿದ ವಿಕ್ಷಿಪತ.
"ಹೇಳಿಕೊಡುತ್ತಾರೆ, ಪೆನ್ಸಿಲ್ ಜೀವುವುದು ಹೇಗೆ, ವರ್ಣ, ಪ್ಲಾಸ್ಟರ್, ಸಿಮೆಂಟು, ಪಂಚಲೋಹಗಳನ್ನು ಬಳಸುವುದು ಹೇಗೆ ಎಂಬುದನ್ನು, ಅಷ್ಟೇ. ’ಹೇಗೆ’ ಚಿತ್ರ ಬಿಡಿಸಬೇಕು ಅನ್ನುವುದು ಹೇಳಿಕೊಡುವ ಬದಲು ’ಯಾಕೆ’ ಎಂಬುದನ್ನು ಹೇಳಿಕೊಟ್ಟಿದ್ದರೆ ಚೆನ್ನಿತ್ತು?"
"ಅದೆಲ್ಲಾ ನಾವು ನಾವೇ ಅರಿತುಕೊಳ್ಳಬೇಕಷ್ಟೇ. ’ಯಾಕೆ’ ಅನ್ನೋ ಪ್ರಶ್ನೆಗೆ ಕಲಾಗುರುಗಳು ಉತ್ತರ ನೀಡಲು ಸಾಧ್ಯವೇ ಇಲ್ಲ."
"ಯಾಕೆ?"
"ಎಗ್ಸಾಟ್ಲಿ. ಉತ್ತರ ಬಂದ ತಕ್ಷಣ ಹಾಗೇಕೆ? ಎಂದು ಮತ್ತೆ ಪ್ರಶ್ನಿಸುತ್ತೇವಲ್ಲ ಅದಕ್ಕೆ.
ನಾವು ನಾವೇ ಕಲಿತುಕೊಳ್ಳಬೇಕು ಎಂಬುದನ್ನು ಕಲಾಶಾಲೆಗಳು ಕಲಿಸಿಕೊಡುತ್ತವೋ?" ಎಂದು ಸಹಜ ಹಾಗೂ ಲೇವಡಿ ಎರಡೂ ಒಮ್ಮೆಲೆ ಅನ್ನಿಸಿಬಿಡುವ ಪ್ರಶ್ನೆಯನ್ನು ಕೇಳುವ ಸರದಿ ರಮಾನಾಥನದ್ದಾಗಿ ಆತ ಮುಂದುವರೆಸಿದ್ದ, "ಅದಕ್ಕೇ ನಾನು ಹೇಳಿದ್ದು ಈ ಸೃಜನಶೀಲತೆಯ ಕಲಿಕೆ ಅನ್ನೋದು ಒಂದು ನಿರಂತರ ಮರೀಚಿಕೆ ಎಂದು. ಕಥೆ ಕವನ ಬರೆವುದನ್ನು ಸಾಧಾರಣವಾಗಿ ವಿಶ್ವವಿದ್ಯಾಲಯಗಳು ಹೇಳಿಕೊಡೋಲ್ಲ, ಅದರ ಇತಿಹಾಸ ಮತ್ತು ಚರಿತ್ರೆಯನ್ನು ಮಾತ್ರ ತಿಳಿಸಿಕೊಡುತ್ತಾರೆ--ಬೆಂದ್ರೆಯ ಹಕ್ಕಿಯನ್ನ, ಕುವೆಂಪುರ ಗುತ್ತಿಯನ್ನ, ಗೋರೂರರ ಹಳ್ಳಿಯನ್ನ, ತೇಜಸ್ವಿಯವರ ಕಿವಿಯನ್ನ. ಅಂತಹುದ್ದರಲ್ಲಿ ದೃಶ್ಯಕಲಾ ಸೃಷ್ಟಿಯನ್ನು ಹೇಳಿಕೊಡುತ್ತೇವೆಂಬುದು ಎಂತಹ ವೈರುಧ್ಯ, ವಿಪರ್ಯಾಸ ಅಲ್ಲವೆ. ಈ ಹಸಿವೆಯನ್ನು ನೀಗಿಸಿಕೊಳ್ಳಲಾಗದಿರುವುದರಿಂದಲೇ, ನಾವು ಹೆಚ್ಚು ಹೆಚ್ಚು ತಿನ್ನುವುದು, ಕೊಬ್ಬುವುದು ಮತ್ತು ಬರೆದದ್ದನ್ನೆಲ್ಲಾ ಕಲೆ ಅಂದುಬಿಡೋ ಅವಸರಕ್ಕೆ ಇಳಿದುಬಿಡುವುದು," ಎಂದ.
"ರಮಾನಾಥ ಹೇಳಿದ್ದೆಲ್ಲಾ ಅರ್ಥವಾಯಿತು. ಆದರೆ ಈ ’ತೇಜಸ್ವೀ ಕಿವಿ’ ಅಂದರೇನು?" ಎಂದ ಮಲ್ಲುಮೋಗನ.
"ಅವ್ರತ್ರ ಕಿವಿ ಶೇಪಿನ ನಾಯಿ ಇತ್ತಂತೆ. ಕನ್ನಡ ಸಾಯಿತ್ಯ ಓದಿದೋರ್ಗೆ ಅದು ಬೆಂಗಾವಲಂತೆ" ಎಂದ ಅರ್ಧಂಬರ್ದ ಕನ್ನಡ ಸಾಹಿತ್ಯ ಕೇಳಿತಿಳಿದುಕೊಂಡಿದ್ದ ನಲ್ಲಸಿವ. ಕಿವಿ ನಾಯಿಯೆಂಬುದು ಅರ್ಧ ಸತ್ಯವಾದರೆ, ಅದು ಕಿವಿ ಶೇಪಿನಲ್ಲಿತ್ತೆಂಬುದು ಅಷ್ಟೇ ಸುಳ್ಳು.
ವಿಕ್ಷಿಪತನಿಗೆ ಕ್ಯಾಂಟೀನಿನಿಂದ, ತರುಣನ ಮೂಲಕ ಹೊಟ್ಟೆ ತುಂಬಿದ್ದರಿಂದ ಮುಂದುವರೆಸಿದ್ದ, "ನಿನ್ನನ್ನ ಯಾರಯ್ಯಾ ಕಲೆ ಸೃಷ್ಟಿಸು ಅಂತ ಹೇಳಿದ್ದಾರೆ. ಬಿಟ್ಟಿಬಿಡು!"
"ಅದೇ ನೋಡು ನನಗೂ ನಿನಗೂ ಇರೋ ವ್ಯತ್ಯಾಸ."
"ನಿಜ ಹೇಳು ರಮಾನಾಥ. ಈ ಪಾಟಿ ಸ್ಕೆಚಸ್ ಮಾಡ್ತೀಯ ಹುಚ್ಚು ಹಿಡಿದವನ ಹಾಗೆ. ಅದರ ಮೂಲಕ ನೀನು ಇಲ್ಲೀವರೆಗೂ ಕಂಡುಕೊಂಡ ಸತ್ಯ ಏನು?"
"ಸತ್ಯ ಅನ್ನೋದು ಅಲ್ಲಿದೆ. ಚಿತ್ರರಚಿಸೋ ಮೂಲಕ ಅದನ್ನು ಹುಡುಕುತ್ತೇನೆ ಅಂತ ಹೊರಡೋದು ಒಂದು ಭ್ರಮೆ. ಇರುವುದರಲ್ಲೇ ತೃಪ್ತನಾದರೆ ಹೇಗೆ?"
"ಹಾಗಾದರೆ ಮುಂದಿನ ಒಂದೇ ಒಂದು ಸ್ಕೆಚ್ಚನ್ನು ನೀನು ಯಾಕಾದರೂ ಬರೆಯಬೇಕು ಹೇಳು?"
"ಇನ್ನು ಮುಂದೆ ಏನೂ ಇಲ್ಲ ಅನ್ನೋದನ್ನ ಕನ್‌ಫರ್ಮ್ ಮಾಡಿಕೊಳ್ಳಲಾದರೂ ಚಿತ್ರ ರಚಿಸಿದರೆ ಹೇಗೆ?"
"ಕಂಡೋರ ಮಕ್ಕಳನ್ನ ಬಾವಿಗೆ ನೂಕಿ ಅದರ ಆಳ ಅಳೆದಂತೆ, ಚಿತ್ರವನ್ನು ಮುಂದೂಡಿ ನಿನ್ನ ಬದುಕಿನ ಅರ್ಥ ಹುಡುಕಿಕೊಳ್ಳುವ ತವಕದಿಂದ ನೀನು ಸ್ವಾರ್ಥಿಯಾಗಲಾರೆಯ?"
"ಇಲ್ಲ ಅಂದೋರು ಯಾರು. ಆದರೆ ಸ್ವಾರ್ಥ ಕೆಟ್ಟದ್ದು ಅಂದೋರ‍್ಯಾರು? ಅದು ಸೃಜನಶೀಲತೆಯ ಅಡಿಪಾಯವಲ್ಲವೆ?"
"ಏನಂದೆ? ಸ್ವಾರ್ಥವು ಕ್ರಿಯಾತ್ಮಕತೆಯ ಅಡಿಪಾಯವೆ?" ಎಂದು ಗಾಭರಿಬಿದ್ದಂತಾಡಿದ ಮೆಲುದನಿಯ ಬಾಯ್ಸ್ ಕಲಾಶಾಲೆಯ ಮತ್ತೊಬ್ಬ ಔಟ್‌ಸ್ಟಾಂಡಿಂಗ್ ವಿದ್ಯಾರ್ಥಿ ’ತರ್ಜುಮೆ’. ಈತ ಯಾವಾಗಲೂ ಕ್ಯಾಂಪಸ್ಸಿಗೆ ಬಂದು ಎಂದೂ ತರಗತಿಗೆ ಬರದಿದ್ದುದ್ದರಿಂದ ಈತ ’ಔಟ್‌ಸ್ಟಾಂಡಿಂಗ್’ ಎಂದೇ ಪರಿಗಣಿತನಾಗಿದ್ದ. ಟೈಮ್ಸ್ ಆಫ್ ಇಂಡಿಯಾದಲ್ಲಿ ಬಿಡಾ ಕಲಾವಿಮರ್ಶೆ ಬರೆವಾಗ ಈತನ ಬರವಣಿಗೆಯ ಮೂಲಕ ಪ್ರದರ್ಶನದ ಗುಣಮಟ್ಟವನ್ನು ಅಳೆದು ಸಂಪಾದಕ ವರ್ಗವು ನಕ್ಷತ್ರಗಳನ್ನು (ಸ್ಟಾರ‍್ಸ್) ನೀಡುತ್ತಿದ್ದುದ್ದರಿಂದ ಬಿಡಾ ’ಸ್ಟಾರ್-ವಿಮರ್ಶಕ’ನೆನ್ನಿಸಿಕೊಂಡಂತೆ ಈ ಔಟ್‌ಸ್ಟಾಂಡಿಂಗು ಭಲೆ ಡಿಂಗಾಗಿತ್ತು. ಅದರ ಒಳತಿರುಳು ತಿಳಿಯದಷ್ಟು ದಿನ ಅಥವ ತಿಳಿವ ದಿನದವರೆಗೂ ಬಿಡಾ ತನ್ನ ತಂದೆತಾಯಿಯರಿಗೆಲ್ಲಾ ತಾನು ’ಸ್ಟಾರ್ ಕಲಾವಿಮರ್ಶಕ’ ಎಂದು ಪರಿಗಣಿತನಾದುದರ ಬಗ್ಗೆ ವಿನೀತನಾಗಿ ಅರುಹಿ, ಶ್ರವಣಕುಮಾರನ ಭಕ್ತಿಯನ್ನು ಪ್ರದರ್ಶಿಸಿದ್ದ. ನಕ್ಷತ್ರದ ಹಿಂದಿನ ಖಾಲಿ ಆಕಾಶದ ಅರ್ಥವನ್ನು ಅದಾರೋ ಯಾವುದೋ ಸೇಡಿನ ಕ್ರಿಯೆಯಾಗಿ ಆತನಿಗೆ ಹೇಳಿಬಿಟ್ಟಾಗ, ಆತ ಸಪ್ಪಗಾಗಿದ್ದ ಆದರೆ ಸುಮ್ಮನಾಗಿದ್ದ. ಯಾರಿಗೂ ಆ ಒಳತಿರುಳನ್ನು ಸುಲಿದು ಹೇಳಿರಲಿಲ್ಲ. ಈಗಲೂ ಆತ ’ಪ್ರಸಿದ್ಧ’ನೆಂಬ ಕಾರಣದಿಂದಾಗಿ ಆತನಿಗೆ ’ಸ್ಟಾರ್ ವಿಮರ್ಶಕ’ಗಿರಿ ಬಂದಿದೆ ಎಂದು ಬಹುಮಂದಿ ಭಾವಿಸುತ್ತಿದ್ದರು.
ಈ ತರ್ಜುಮೆಯ ಕಥೆಯೂ ಹಾಗೆಯೇ. ಎಲ್ಲವನ್ನೂ ಇಂಗ್ಲೀಷ್-ಮತ್ತು ಕನ್ನಡದಲ್ಲಿ ಭಾಷಾಂತರ ಮಾಡಿ ಮಾತನಾಡುವುದೇ ಸಾಧನೆ ಎಂಬಂತೆ ಆಡುತ್ತಿದ್ದ, ಸಂಸ್ಕೃತ ಶ್ಲೋಕಗಳನ್ನು ಉರುಹೊಡೆದು ಭಾಷಣಗಳಲ್ಲಿ ಅರುಹುವ ಹಿಂದೂ-ಮುಂದಲ್ಲದ ಮಂತ್ರಿಗಳು, ವಿದ್ವಾಂಸರುಗಳು ಚಪ್ಪಾಳೆ ತಟ್ಟಿಸಿಕೊಳ್ಳುವುದಿಲ್ಲವೆ, ಹಾಗೆ. ಉದಾಹರಣೆಗೆ ತರ್ಜುಮೆ, "ಮೂರು ರೂಪಾಯಿ ಅಂದರೆ ಮೀನಿಂಗ್ ತ್ರೀ ರುಪೀಸ್ ಈ ಪೆನ್ಸಿಲ್, ಈ ಲೇಖನಿ," ಎಂದು ಹೆಚ್ಚೂ ಕಡಿಮೆ ಪ್ರತೀ ಮಾತಿನಲ್ಲೂ ಅರ್ಧ ಇಂಗ್ಲೀಷು ಮಿಕ್ಕ ಫಿಫ್ಟಿ ಪರ್ಸೆಂಟ್ ಕನ್ನಡ ಮಾತನಾಡುತ್ತಿದ್ದ. ಆದ್ದರಿಂದ ಮಮಾ ಆತನಿಗೆ ’ಮೂರುತ್ರಿ’ ಎಂದು ಮೊದಲು ಹೆಸರಿಟ್ಟು (’ಮೂರು ಅಂದ್ರೆ ತ್ರೀ ಅಂತ’), ಅದನ್ನು ಎಲ್ಲರೂ ’ಮೂತ್ರಿ’ ಎಂದು ಗಬ್ಬೆಬ್ಬಿಸಿ, ಆತನ ಮೇಲಿನ ಕರುಣೆಯಿಂದಾಗಿ ಮೂತ್ರಿಯಾತೀತವಾದ ’ತರ್ಜುಮೆ’ ಎಂದು ಪುನರ್-ಪುನರ್ ನಾಮಕರಣ ಮಾಡಿದ್ದ ಮಮಾ.
ಅಂತಹ ತರ್ಜುಮೆ ಈಗ ರಾತ್ರಿಯಲ್ಲಿ ಕ್ಯಾಂಟೀನಿನ ಕರಿದಪದಾರ್ಥ ಮತ್ತು ಮೃದುಪಾನೀಯಗಳು ದೇಹದ ಮಧ್ಯಪ್ರದೇಶವನ್ನು ಸೇರುತ್ತಲೇ ಜಗಳ ಶುರುಹಚ್ಚಿಕೊಂಡ, "ಯಾರು ಹೇಳಿದ್ದು ಸ್ವಾರ್ಥ ಮತ್ತು ಅಹಮಿಕೆ ಅನ್ನೋದು ಸೃಜನಶೀಲತೆಗೆ ಅನಿವಾರ್ಯ ಅಂತ? ಎಂದು ಯಾರದನ್ನು ಹೇಳಿದ್ದು," ಎಂಬುದನ್ನು, ಹೇಳಿದವನನ್ನೂ ಒಳಗೊಂಡಂತೆ, ಮರೆತುಬಿಟ್ಟಿದ್ದವರನ್ನು ಕೇಳಿದ.
"ಸ್ವಾರ್ಥವು ಕ್ರಿಯಾತ್ಮಕತೆಗೆ ಅಡಿಪಾಯ ಅಂತ ಹೇಳಿದ್ದೇ ಹೊರತು ಸ್ವಾರ್ಥ ಮತ್ತು ಅಹಮಿಕೆ ಅನ್ನೋದು ಅನಿವಾರ್ಯ ಅಂತ ಹೇಳಿಲಿಲ್ಲ," ಎಂದು ಸಮಾಧಾನ ಮಾಡಿದ ಬಿಡಾ.
"ಅಂಗಾದ್ರೆ ನೀನೇ ಅದನ್ನ ಹೇಳಿದ್ದು. ಯು ಸೆಡ್ ಇಟ್. ಸತ್ಯ ಟ್ರೂತ್ ಈಚೆ ಕಮ್ಲಿ ಅಂತಲೇ ನಾನು ಅದನ್ನು ತಿರುಚಿ, ಟ್ವಿಸ್ಟ್ ಮಾಡಿ ಕೇಳಿದ್ದು. ನೀನೆಂತಾ ವಿಮರ್ಶಕನಯ್ಯ! ವಾಟ್ ಕೈಂಡ್ ಹಾಫ್ ಆರ್ಟ್ ಕ್ರಿಟಿಕ್ ಯು ಐ ಸೇ! ಯಾವ ಕರುಣಾಜನಕ ಅರ್ಧ ಕಲಾ ವಿಮರ್ಶಕ ನೀನಯ್ಯಾ?" ಎಂದು ಕಿಚಾಯಿಸಿದ್ದ ತರ್ಜುಮೆ.
"ಮಿಕ್ಕೋಗಿರೋ ಊಟನ ತೊಟ್ಟಿಗೆಸೆದಾಗ ಅದನ್ನು ಆಯ್ದು ತಿನ್ನೋರು ವಿಮರ್ಶಕರು, ವಿಮರ್ಶಕ ಈಸ್ ಅ ಫೈಲ್ಡ್ ಆರ್ಟಿಸ್ಟ್," ಎಂದುಬಿಟ್ಟ. ಆತನ ಮಾತಿನಲ್ಲಿ ಈ ಅರ್ಥವಿದ್ದರೆ ಆ ಮಾತಿನಿಂದಿನ ಭಾವದಲ್ಲಿ, ಬಿಡಾ ವಿದ್ಯಾರ್ಥಿಯಾಗಿರುವಾಗಲೇ ಪತ್ರಿಕೆಗಳಿಗೆ ಸ್ಟಾರ್ ವಿಮರ್ಶಕನಾಗಿಬಿಟ್ಟಿರುವುದರ ಬಗ್ಗೆ ತರ್ಜುಮೆಗೆ ಬ್ಲಾಕ್‌ಹೋಲಿನ ಗುರುತ್ವದಷ್ಟು ಸಿಟ್ಟಿತ್ತು. ಏಕೆಂದರೆ ಆತನೂ ಆಗಾಗ ಕಲೆಯ ಬಗ್ಗೆ, ವಿಮರ್ಶೆಯ ಹೆಸರಿನಲ್ಲಿ ತನ್ನ ಕನ್ನಡ ಕಾಗುಣಿತದ ತಿಳಿವಳಿಕೆಯ ಜ್ಞಾನ ಪ್ರದರ್ಶಿಸಲು ಲೇಖನಗಳನ್ನು ಬರೆದುಬಿಡುತ್ತಿದ್ದ. ಮತ್ತು ಆತನಿಗೆ ಇಂಗ್ಲೀಷ್ ಬರುತ್ತಿರಲಿಲ್ಲ ಎಂಬುದು ಈ ಸಿಟ್ಟಿಗೆ ಮೂಲ ’ಕಾರಣವಾದರೆ’, ಬಿಡಾನಿಗೆ ಇಂಗ್ಲೀಷ್ ಬರುತ್ತದೆಂಬುದು ಈ ಸಿಟ್ಟಿಗೆ ಮೂಲ ’ಪ್ರೇರಣೆಯಾಗಿತ್ತು’. ತರ್ಜುಮೆ ಪರಿಷತ್ತಿನ ಗ್ಯಾಲರಿಯೊಂದರ ಪ್ರದರ್ಶನವೊಂದರ ಕನ್ನಡ ಲೇಖನವೊಂದನ್ನು ಬರೆದು ಕರ್ನಾಟಕ ಲಲಿತಕಲಾ ಅಕಾಡೆಮಿಯ ’ಕಲಾವಾರ್ತೆ’ಗೆ ಪ್ರಕಟಣೆಯ ಕೃಪೆಗಾಗಿ, ಫಾರ್ ಪಬ್ಲಿಕೇಷನ್ ಕೈಂಡ್‍ನೆಸ್"ಎಂದು ಕಳಿಸಿದ್ದು ಅದು ಹಿಂತಿರುಗಿ ಬಂದಿತ್ತು. "ಕಲಾವಾರ್ತೆಯಲ್ಲಿ ಇಂಗ್ಲೀಷ್ ಭಾಷೆಯ ಲೇಖನವನ್ನು ಪ್ರಕಟಿಸಲಾಗದು," ಎಂದಿತ್ತು ಸಂಪಾದಕರ ಒಕ್ಕಣಿ!
(೭೦)
ಪರಿಷತ್ತಿನ ಬಿಡಾ ಮತ್ತು ಬಾಯ್ಸ್ ಕಲಾಶಾಲೆಯ ತರ್ಜುಮೆಗೆ ಕ್ಯಾಂಟೀನಿನ ಸುತ್ತಲೇ, ಆ ನಡುರಾತ್ರಿಯಲ್ಲೇ ವಿತಂಡವಾದದ ಕಾವು ಹತ್ತಿತು.
"ಅಂಗಾದ್ರೆ ಹೇಳು, ರಮಾನಾಥ ಕ್ರಿಯಾತ್ಮಕ ಹಸಿವೆ ಅಂದದ್ದು ಏನನ್ನ, ಟೆಲ್ ಮಿ ಐ ಸೆ ಎಂದು ಆಬ್ಜೆಕ್ಟೀವ್ ಟೈಪ್ ಕ್ವಶನ್ಸ್," ಕೇಳಿದ ತರ್ಜುಮೆ. ಬಿಡಾ ಬರುತ್ತಿದ್ದ ನಗುವನ್ನು ತಡೆದುಕೊಂಡ, ಇಂಗ್ಲೀಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ, ಅವ್ನು ಹೇಳಿದ್ದೇನಂದ್ರೆ, "ನಾನು ಕಲಾವಿಮರ್ಶೆ ಬರೀತಿನಲ್ಲ ಪೇಪರಿನಲ್ಲಿ, ಅದು ಒಳ್ಳೆ ಅಥವ ಕೆಟ್ಟ ವಿಮರ್ಶೆಯಾಗಿರಬಹುದು, ಅದು ಕೃತಿಯನ್ನು ಹೊಗಳಿರಬಹುದು ಅಥವ ತೆಗಳಿರಬಹುದು, ಎಲ್ಲಕ್ಕೂ ಮೊದಲಿಗೆ ಕಲಾವಿದನ ಬಗ್ಗೆ ನಾನು ಬರೆವ ಲೇಖನವು ಕಲಾವಿದನ ಹಸಿವೆಯನ್ನು ನೀಗಿಸಲು ಒಂದು ಬಿಟ್ಟಿ ಅಡ್ವರ್‌ಟೈಸ್‌ಮೆಂಟು," ಎಂದಾಗ ತರ್ಜುಮೆಯ ಪಿತ್ಥವನ್ನು ನೆಲದಿಂದ ನೆತ್ತಿಗೇರಿಸಿಬಿಟ್ಟ.
"ಏನು, ವಾಟ್. ಕಲಾವಿದರಿಗೆ ಎಂಥಾ ಅವಮಾನ. ವಾಟ್ ಎ ಶೇಮ್. ವಿಮರ್ಶೆ ಅಂದ್ರೆ ಆರ್ಟಿಸ್ಟ್‌ಗೆ ಅಡ್ವರ್‌ಟೈಸ್‌ಮೆಂಟಾ? ಹಾಗಂತ ಬರ್ದುಕೊಡ್ತೀಯಾ, ಕೆನ್ ಯು ಸ್ಕ್ರಿಪ್ಟ್ ಇಟ್ ಅಂಡ್ ಗೀವ್ ಮಿ ಐ ಸೇ?"
"ಆಯ್ತು ತಗೋ ಬರ್ದುಕೊಡ್ತೇನೆ. ಆದ್ರೆ ಅದನ್ನ ಸೋಕುಮಾರಿ-೨೦೧೧ಗೆ ಪೋಸ್ಟ್ ಮಾಡಿಬಿಡಬೇಡ. ಆಮೇಲೆ ಅದು ವಾಪಸ್ ಸಿಕ್ಕೋಲ್ಲ." ಎಂದಿದ್ದ ಬಿಡಾ.
"ಏನಯ್ಯಾ ನಿಂದು ಪ್ರಾಬ್ಲಮ್ಮು, ’ದೃಶ್ಯ’ಕಲಾವಿದರು ಸಾಹಿತಿಗಳ ಮದ್ಯೆ ’ಕಾಣೆ’ಯಾಗಿರುವುದರಿಂದ ಈ ವಿಮರ್ಶೆ ಎಂಬ ಬಿಟ್ಟಿಜಾಹಿರಾತು ಕೊಡೋದರಲ್ಲಿ ತಪ್ಪೇನಿಲ್ಲ ಬಿಡು. ಈಗೊಂದು ವೇಳೆ ಯಾವನೋ ಹೊಟ್ಟೆತುಂಬಿದ ಕಲಾವಿದನಿದ್ದಾನೆ ಅಂತ ನನಗನ್ನಿಸಿಬಿಟ್ಟಿದೆಯೆಂಬುದು ನಿನಗೆ ಗೊತ್ತಾಗಬೇಕು ಅಂತಿಟ್ಟುಕೋ. ನಾನು ಯಾರ ಬಗ್ಗೆ ಬರೆಯೋದಿಲ್ಲವೋ ಅವರೇ ಈ ಹೊಟ್ಟೆತುಂಬಿದವರು. ಕಟುವಿಮರ್ಶೆ ಮಾಡುವ ಸುಲಭೋಪಾಯವೆಂದರೆ ಅವರ ಬಗ್ಗೆ ಬರೆಯಲೇ ಬೇಡ, ಡೋಂಟ್ ಜಸ್ಟ್ ರೈಟ್ ಅಬೌಟ್ ದೆಮ್," ಎಂದು ತರ್ಜುಮೆಯ ಭಾಷೆಯಲ್ಲಿ ಮಾತು ಮುಂದುವರೆಸಿದ್ದ ಬಿಡಾ.
ತಜುಮೆಗೆ ಮೈಯಲ್ಲಾ ’ಬರ್ನ್’ ಆಗಿ ’ಸುಟ್ಟಿ’ ಹೋಯಿತು,"ಆಗ ಕಲಾವಿದನ ನೈತಿಕತೆ ಅನ್ನೋದು ಏನಾಗುತ್ತೆ ಮಹಾಶಯರೆ?" ಎಂದು ನಾಟಕೀಯವಾಗಿ ಎಗರಿಬಿದ್ದ ವಿಕ್ಷಿಪತನ ಮೇಲೆ. ಇವನು ಹೇಳಿದ್ದನ್ನು ಅವನಿಗೆ, ಅವನದಲ್ಲಿ ಇವನಿಗೆ ಇರಿಸಿ ನೋಡುವ ಚಟವಿತ್ತು ತರ್ಜುಮೆಗೆ. ಬಿಡಾ ಹೇಳಿದ್ದಕ್ಕೆ ವಿಕ್ಷಿಪತ ಸಮರ್ಥನೆ ನೀಡಬೇಕಿತ್ತು.
"ಲೋ ವಿಕ್ಷಿಪತ, ಅಣ್ಣಾವ್ರು ’ಹಿರಣ್ಯಕಶ್ಯಪು’ ಸಿನೆಮದಲ್ಲಿ ’ಏಯ್ ನಾರದರೆ, ಇತ್ತ ಬನ್ನಿ’ ಅಂತ ಏಕಬಹುವಚನಗಳ ಸವ್ಮುಶ್ರಣದಂತಿದೆಯಲ್ಲೋ ನಿನ್ನ ವಾಕ್ಯ ಬಳಕೆ," ಎಂದು ನಕ್ಕಿದ್ದ ವಿರಾ.
"ನೈತಿಕತೆ ಅನ್ನೋದು ಕೇವಲ ಮನುಷ್ಯ ಸೃಷ್ಟಿ ಮಾತ್ರ ಅಲ್ಲವೇನೋ! ಆದ್ದರಿಂದಲೇ ಮನುಷ್ಯ ಸೃಷ್ಟಿಸಿದ್ದು ಮಾತ್ರ ಕಲೆಯಾಗುತ್ತದೆ. ಅದು ಅನುಕರಿಸುವ ಪ್ರಕೃತಿಯ ಸೃಷ್ಟಿಯನ್ನು ಯಾರೂ ಕ್ರಿಯಾತ್ಮಕ ಅನ್ನಲಾರರು ಅಲ್ಲವೆ?"
"ಆವಯ್ಯ, ಅಂದ್ರೆ ದೇವ್ರು ’ನನಗೆ ಪ್ರಶಸ್ತಿಗಳು ಸಾಕು, ನನಗೇ ಕಾಂಪಿಟೇಷನ್ನಾ?’ ಅಂದಿರೋದ್ರಿಂದ ಮನುಷ್ಯ ಸೃಷ್ಟಿ ಮಾತ್ರ ಕ್ರಿಯಾತ್ಮಕ," ಎಂದು ವಾದಕ್ಕೆ ’ಕುಂತಿದ್ದವನು’ ವಾದಕ್ಕೆ ’ಎದ್ದುನಿಂತುಬಿಟ್ಟ’ ರಮಾನಾಥ. ಎಲ್ಲರೂ ಆತನ ಸಿಟ್ಟನ್ನು ಬಲ್ಲವರಾಗಿದ್ದು, ಆತನನ್ನು ಹಿಡಿದು ಬಲವಂತವಾಗಿ ಕುಳ್ಳಿರಿಸಿದರು, ಆತನ ಸಿಟ್ಟಿನ ಮೂಟೆಯ ಸಮೇತ. ಎಲ್ರೂ ಕುಂಡ್ರಿಸಿದ್ದರಿಂದ, "ಆರಾಮವಾಗಿ ಕುಂತಿದ್ದೇನೆ ಆದರೆ ನನ್ನ ಪ್ರಶ್ನೆಗಳು ಮಾತ್ರ ನಿಂತೇ ಇವೆ," ಎಂದು ಸುಮ್ಮನೆ ಕುಳಿತ ರಮಾನಾಥ.
"ಬೇಜಾರು ಮಾಡ್ಕೋಬೇಡ ರಾಮಿ, ’ಲಂಡನ್ ಪ್ರವಾಸಕಥನ’ದ ಆರನೇ ಮತ್ತು ಏಳನೇ ಭಾಗವನ್ನು ಭವಿಷ್ಯಕಾಲದಲ್ಲಿರುವ ಸೋಕುಮಾರಿ ಅಂಚೆಯಲ್ಲಿ ಕಳಿಸಿಕೊಟ್ಟಿದ್ದಾಳೆ. ಈ ಬಾರಿ ಅದು ನಿನಗೇ ಸೇರಿದ್ದು ಓದು," ಎಂದು ಲಕೋಟೆಯೊಂದನ್ನು ರಮಾನಾಥನ ಎದಿರು ಹಿಡಿದಿದ್ದ ಮಮಾ. "ಒಳ್ಳೆ ಸಿನೆಮ ನಡೆವಾಗ ಮಧ್ಯದಲ್ಲಿ ಅಡ್ವರ್‌ಟೈಸ್‌ಮೆಂಟ್, ಅದೂ ಬಿಟ್ಟಿ ಜಾಹಿರಾತು ಕೊಟ್ಟಂತಾಗುತ್ತಿದೆಯಲ್ಲ ಈ ಲಂಡನ್ ಪ್ರವಾಸಕಥನಗಳು," ಎಂದು ಗೊಣಗುತ್ತಲೇ, ಆಸಡ್ಡೆಯಿಂದೆಂಬಂತೆ ರಮಾನಾಥ ಆ ಲಕೋಟೆಯನ್ನು ಕಿತ್ತುಕೊಂಡುಬಿಟ್ಟ. "ಯಾವುದು ಮೈನ್ ಸಿನೆಮಾವೋ ಯಾವುದು ಜಾಹಿರಾತೋ, ಯಾರಿಗೆ ಗೊತ್ತು? ಕೊಡು ಜೊತೇಲೇ ಓದುವ, ಗಿವ್ ಟುಗೆದರ್ ರೀಡಿಂಗ್. ಓದಿದ್ರೆ ಯಾರಪ್ಪನದ್ದು ಏನ್ ಹೋಯ್ತು, ಹೂಸ್ ಫಾದರ್ಸ್ ವಾಟ್ ಗೋಸ್," ಎಂದು ಅನೇಖ ರಮಾನಾಥನೊಂದಿಗೆ, ಬೆಳಕಿದ್ದೆಡೆಗೆ ಬರತೊಡಗಿದರು ಕಾರ್ಗತ್ತಲ ಕ್ಯಾಂಟೀನಿನ ಕಡೆಯಿಂದ. "ಏಯ್ ಅದು ಅಂಗಲ್ಲ, ಹೂಸ್ ಅಪ್ಪನ ಮನೆ ಗಂಟೋಯ್ತು, ಫಾರ್ಟ್ ಫಾದರ್ಸ್ ಹೌಸ್ ನಾಟ್ ಗೋಸ್. ಅಂತ," ಎಂದು ತರ್ಜುಮೆಯನ್ನು ನೋಡುತ್ತ, ಮಿಕ್ಕವರಿಗೆ ಕಣ್ಣು ಹೊಡೆಯುತ್ತ ಹೇಳಿದ ಮಮಾ, "ಮಿರ್ ಫಿಲೇಂಗೆ" ಎಂದು ಹೊಸದಾಗಿ ಕಲಿಯುತ್ತಿದ್ದ ಹಿಂದಿ ಭಾಷೆಯನ್ನು ತಿರುವುಮರುವು ಮಾಡುತ್ತ ದೊಡ್ಡಯ್ಯನ ಕಡೆ ಓಡತೊಡಗಿದ, ಬೀಡಿಯೊಂದನ್ನು ಹಚ್ಚಿ ಎಳೆದುಹಾಕಲು.
ಕುತೂಹಲದಿಂದ ರಮಾನಾಥ ಮೊದಲೇ ಹೊಡೆಯಲಾಗಿದ್ದ ಲಕೋಟೆಯನ್ನು ತೆಗೆದು ಓದತೊಡಗಿದ. ಬಿಡಾ ಅದನ್ನು ಕಿತ್ತುಕೊಂಡು, "ತಗೋ ಭಾಗ ಆರು ನಿಂಗೆ ಏಳು ನಂಗೆ. ನೀನು ಓದುವುದನ್ನು ನನಗೆ ಹೇಳಬೇಕು, ನಾನು ಓದಿದ್ದನ್ನು ನಿನಗೆ ಹೇಳುವೆ. ಆಯ್ತಾ?" ಎಂದು ಮಕ್ಕಳಾಟ ಆಡುವಂತೆ ನುಡಿದ. ಸುತ್ತಲೂ ಸುತ್ತುವರಿದಿದ್ದವರಿಗೆ ’ಲಂಡನ್ ಪ್ರವಾಸಕಥನ’ದ ಆರು ಮತ್ತು ಏಳನೇ ಭಾಗಗಳು ’ಗಾಡ್ಸ್ ಮಸ್ಟ್ ಬೀ ಕ್ರೇಝಿ’ ಸಿನೆಮದ ಬಾಟಲಿಯಂತೆ ಕಾಣತೊಡಗಿತ್ತು. ಭೂಮಿಯಾಚೆ ಅದನ್ನು ಹೇಗೆ ಎಸೆಯುವುದು ಎಂಬುದೇ ಆ ಸಿನೆಮದಾದ್ಯಂತದ ಪ್ರೊಟೊಗೊನಿಸ್ಟನ ಆತಂಕವಾದಂತೆ ಈ ಕಥನವು. ಈ ಭವಿಷ್ಯಕಾಲದಿಂದ ಬಂದಂತೆನಿಸುತ್ತಿದ್ದ ಕಥನವು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಮಾಯವಾಗುವುದು, ಅದಕ್ಕೆ ಮುನ್ನ ಅದನ್ನು ಓದಿ ನೆನಪಿಟ್ಟುಕೊಳ್ಳುವುದು, ಅದರ ವಿವರವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವಾಗ ಅದರ ವಿವರವೆಲ್ಲ ಕಲಸುಮಲೋಗರವಾಗುವುದು, ಇದೆಲ್ಲ ತಲೆ ನೋವು ಇದ್ದರೂ ಅದನ್ನು ಯಾರಿಗೂ ಓದದೇ ಇರಲಾಗದಿರುವುದು--ಇವೆಲ್ಲ ನಿರಂತರವಾಗಿ ಹಲವು ವಾರಗಳಿಂದ ಪರಿಷತ್ತಿನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳಾಗಿದ್ದವು.
. ಕನ್ನಡ ಓದಲು ಬರದ ಪರಿಷತ್ತಿನ ವಿದ್ಯಾರ್ಥಿಗಳಿಗೆ ಹೇಗಿದ್ದರೂ ಅನೇಖ, ಮಮಾ, ಬಿಡಾ, ನಲ್ಲಸಿವ ಮುಂತಾದವರು ಅದನ್ನು ತಮಗೆ ವಿವರಿಸುತ್ತಾರೆಂದೂ, ಆ ಕಥನವು ’ಕೇಳ’ಲಿಕ್ಕೆ ಮಾತ್ರ ಇರುವ ವಾಚ್ಯ ಸಂಪ್ರದಾಯದ್ದೆಂದೂ, ಆದ್ದರಿಂದಲೇ ಓದಲು ಬರದ ತಮಗೇ ಆ ವಾಚ್ಯ ಕಥನದ ಮೇಲೆ ಹಕ್ಕಿದೆಯೆಂದೂ ಮಳ್ಳನಗು ನಕ್ಕು ಕಾಯತೊಡಗಿದರು. (ಓದಿ: ಲಂಡನ್ ಪ್ರವಾಸಕಥನ: ಭಾಗ ೬ - http://sampada.net/article/7785
ಮತ್ತು ಭಾಗ ೭ -- http://sampada.net/article/8910)//