ನೆನಪಿನ ಚಿತ್ರಕಲಾ ಶಾಲೆ- ಭಾಗ ೩
(೭)
ತೆಂಗಿನಮರದಲಿ ಇಟ್ಟಿಗೆಹಣ್ಣಿನ ಪ್ರಕರಣವು ವಿಚಿತ್ರ ತಿರುವುಗಳನ್ನು, ಅರ್ಥಾನುಭವಗಳನ್ನು ಪಡೆದುಕೊಳ್ಳುತ್ತಿತ್ತು. ತರಗತಿಯಲ್ಲಿ ಸ್ಟಿಲ್ಲೈಫ್ ವಿಷಯವಿದ್ದ ದಿನಗಳಂದು, ಇನ್ನು ಮುಂದೆ ತಿಂಡಿ, ಹಣ್ಣುಗಳು ಟೇಬಲ್ಲಿನ ಮೇಲಿನಿಂದ, ಯಾರೂ ಇಲ್ಲವಾದಾಗ ಮಾಯವಾದಲ್ಲಿ, ಯಾರನ್ನು ಆರೋಪಿಗಳಾಗಿಸಬೇಕೆಂಬ ಗೊಂದಲವಂತೂ ನಿವಾರಣೆಯಾಯಿತು. ಏರಿಯವೊಂದರಲ್ಲಿ ಕಳ್ಳತನವಾದ ಕೂಡಲೆ ಅದರ ತೀವ್ರತೆ ಅಥವ ಪೆಡಸುತನವನ್ನು ಗುರ್ತಿಸಿದ ಕೂಡಲೇ ಪೋಲೀಸರಿಗೆ ಯಾವ ಕಳ್ಳ ಅದನ್ನು ಮಾಡಿದ್ದು ಎಂದು ಹೇಗೆ ಕೂಡಲೆ ಗೊತ್ತಾಗಿಬಿಡುತ್ತಿತ್ತೋ, ಹಾಗಾಯಿತಿದು. ಅನಿಷ್ಟಕ್ಕೆಲ್ಲ ಮಮಾ, ಬೀಡಾ, ಅನೇಖ, ಪ್ರಶ್ನಾಮೂರ್ತಿ, ವೀರಾ, ಬಾಕ್ಸ್ಫರ್ಡ್ ಪಾರ ಅವರುಗಳಿದ್ದ ಗ್ಯಾಂಗೇ ಕಾರಣವೆಂಬುದಂತೂ ನಿರ್ಧಾರವಾಯಿತು. ಈಗ ಈ ಗ್ಯಾಂಗಿನ ಮತ್ತವರ ಅಭಿಮಾನಿಗಳ ತಲೇನೋವು ಏನಾಗಿಹೋಯಿತೆಂದರೆ, ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವಂತೆ ಮತ್ತೂ ಕಳ್ಳತನಗಳನ್ನು ಹರಯದ ಬಿಸಿಯ ನೆಪದಲ್ಲಿ ಮಾಡಬೇಕೋ ಬೇಡವೋ ಎಂಬುದು.
ಅನೇಖ ಮಾತ್ರ ಅದನ್ನು ಖಲಾಸೃಷ್ಟಿಗೆ ಅವಶ್ಯವಿರುವ ಸಮಾಜೋ-ರಾಜಕೀಯ ಸ್ಪೂರ್ತಿ ಎಂದು ತಾತ್ವಿಕವಾಗಿ ಪರಿಗಣಿಸುತ್ತ, ಅಂತಹ ಚೇಷ್ಟೆಗಳು ಎಷ್ಟು ಅನಿವಾರ್ಯ ಎಂಬುದನ್ನು ವಿವರಿಸತೊಡಗಿಬಿಡುತ್ತಿದ್ದ. ಇತರರಿಗೆ ಅದು, ಬಾಥ್ರೂಮಿನಿಂದ ಹೊರಬರುವವರನ್ನು ಊಟ ಆಯಿತೆ? ಎಂದು ಕೇಳಿದಂತಿರುತ್ತಿತ್ತು. ಹೌದು, ಇಲ್ಲ ಎಂಬ ಎರಡೂ ಉತ್ತರಗಳೂ ನಿಷಿದ್ಧವಾದ್ದರಿಂದ. ಆದರೂ ಹೀಗೆಲ್ಲ ಮಾತನಾಡುವ ಮೂಲಕ ಖರಾಬು ಕೆಲಸಕ್ಕೆ ಗಾಂಭೀರ್ಯದ ಚೌಕಟ್ಟು ಕೊಡುತ್ತಿದ್ದಾನೆ ಅನೇಖ ಎಂಬ ಕಾರಣಕ್ಕೆ ಎಲ್ಲರೂ ಆತನನ್ನು ತಾತ್ವಿಕವಾಗಿ ಸಹಿಸಿಕೊಂಡಿದ್ದರು, ಖರಾಬಾಗಿ ಬಡಿದು ಹಾಕದೆ.
ಕೆಲವರು ಮಾಡದಿದ್ದರೂ, ಇವರ ಹೆಸರಿನಲ್ಲಿ ಕಳ್ಳತನ ಮಾಡಲು ತಯಾರಾದವರಿದ್ದರು. ಆಗ ಎರಡು ರೀತಿಯ ಅಪಮಾನವಾಗುತ್ತಿತ್ತು. ಬೆಟ್ಟದ ಹುಲಿ ಸಿನೆಮದಲ್ಲಾಗುವಂತೆ ತಮ್ಮ ಹೆಸರಿನಲ್ಲಿ ನಮ್ಮನ್ನೇ ಮೀರಿಸುವ ಕಳ್ಳರು ಹುಟ್ಟಿಕೊಂಡಾರು ಎಂಬುದು ಅಣ್ಣಾವ್ರ ಅಭಿಮಾನಿಯಾದ ಮಮಾನ ಚಿಂತೆಯಾಗಿಬಿಟ್ಟಿತ್ತು. ಮಾಡು, ಇಲ್ಲವೆ ತಮ್ಮ ಹೆಸರಿನಲ್ಲಿ ಮಾಡುವವರನ್ನು ಮಾಡಲು ಬಿಡು ಎಂಬಂತಾಯ್ತು.
ಈ ಹರಯದ ಕಳ್ಳರ ದೆಸೆಯಿಂದಾಗಿ ಸ್ಟಿಲ್ ಲೈಫ್ ವಿಷಯವನ್ನು ಚಿತ್ರಿಸಬೇಕಾಗಿ ಬಂದಾಗ ಅದರೊಳಗಿರುತ್ತಿದ್ದ ವಸ್ತುಗಳು ಬದಲಾಗಿ, ಚಿತ್ರಣ ತಂತ್ರವೂ ಬದಲಾಗಬೇಕಾಗಿ, ಬಣ್ಣಗಳ ಬಳಕೆ ಬದಲಾಗಿ, ಕೆಲವು ದೊರಕದ ವರ್ಣಗಳನ್ನು ಕೊಂಡುಕೊಳ್ಳುವುದು ಕಷ್ಟ ಅಥವ ಅಸಾಧ್ಯವಾಗಿ, ಇಡಿಯ ತರಗತಿಯೇ ಇವರಿಗೆ ಶಾಪ ಹಾಕುವುದು ಅಥವ ಕೊಂಡಾಡುವಂತಾಗಿ ಹೋದುದು ಒಟ್ಟಿಗೆ ಆಗಿ, ಇವರ ಪುಣ್ಯದ ಮೊತ್ತವನ್ನು ಇವರ ಪಾಪದ ಒಟ್ಟಾರೆ ಅಕೌಂಟ್ ಕ್ಯಾನ್ಸಲ್ ಮತ್ತು ಡಿಲೀಟ್ ಮಾಡಿಬಿಡುತ್ತಿತ್ತು.
ಉದಾಹರಣೆಗೆ, ಟೊಮೊಟೋವನ್ನು ಸ್ಟಿಲ್ ಲೈಫ್ ವಿಷಯದ ದಿನ ನಮ್ಮ ಮುಂದೆ ಇರಿಸುವ ಬದಲಿಗೆ, ಇಟ್ಟಿಗೆ ಪ್ರಕರಣದ ನಂತರ, ನಿಂಬೆ ಹಣ್ಣನ್ನು ಇರಿಸಲಾಗಿತ್ತು. ಸ್ಟಿಲ್ ಲೈಫ್ ಚಿತ್ರಣವಾಗಿ ಇರಿಸಲಾಗಿದ್ದ ಟೊಮೋಟೋವನ್ನು ತಿಂದಷ್ಟೇ ಸಲೀಸಾಗಿ ನಿಂಬೆಯನ್ನು ತಿನ್ನುವವರು ಕಡಿಮೆಯಿದ್ದು, ನಿಂಬೆಯು ಆರಾಮವಾಗಿ ಆತಂಕವಿಲ್ಲದೆ ಸ್ಥಿರಚಿತ್ರಣದ ವಿಷಯವಾಗಿ, ತನ್ನ ಆಯುಷ್ಯದ ಪೂರ್ಣ ಕೋಟಾವನ್ನು ಮುಗಿಸಿಕೊಂಡುಈ ಪಟಿಂಗ ಗ್ಯಾಂಗಿನ ಬಾಯಿಗೆ ಸಿಲುಕಿ ಅಕಾಲಿಕ ಮರಣವನ್ನಪ್ಪದೆಪರಿಷತ್ತಿನ ನೈರುತ್ಯದ ಗೊಬ್ಬರವಾಗಿ ಹೋಗುವ ಮುತ್ತೈದೆಸಾವಿನ ಭಾಗ್ಯ ಹೊಂದತೊಡಗಿತ್ತು.
ಅನಾನಸ್ ಹಣ್ಣನ್ನು ಇರಿಸಿದ್ದಲ್ಲಿ, ನೋಡಲು ಅದು ಹಾಗೇ ಇರುತ್ತಿತ್ತು, ಒಳಗಿನ ತಿರುಳು ಮಾತ್ರ ತಿರುಳಿಲ್ಲದಂತಾಗಿಬಿಟ್ಟಿರುತ್ತಿತ್ತು. ಮಾವಿನ ಹಣ್ಣುಗಳನ್ನು ಮಾತ್ರ ದಂಡಿಯಾಗಿ ಚಿತ್ರಿಸಲು ಇರಿಸಲಾಗುತ್ತಿತ್ತು, ಏಕೆಂದರೆ ಪರಿಷತ್ತಿನ ಮರಗಳಲ್ಲಿ ಮಾವು ಸಾಕಷ್ಟು ದೊರಕುತ್ತಿದ್ದವು. ಅನಾನಸ್ ಮಾತ್ರ, ತನ್ನ ಮೈವಳಿಕೆಯ (ಟೆಕ್ಸ್ಚರ್) ತೋರಿಕೆಯ ಸಂಕೀರ್ಣತೆಯಿಂದಾಗಿ ಯಾರಿಗೂ ಬೇಡದ ಹಣ್ಣಾಗಿತ್ತು. ಆದರೆ ತನ್ನ ತಿರುಳಿನ ಸ್ವಾದದಿಂದಾಗಿ ಬೇಕಾದಂತಹದ್ದೂ ಆಗಿರುತ್ತಿತ್ತು. ಬ್ರೌನ್, ಡಾರ್ಕ್ ಗ್ರೀನ್, ಕೊಬಾಲ್ಟ್ ಬ್ಲೂ, ಎಲ್ಲೋ ಓಕರ್, ಸ್ಯಾಪ್ ಗ್ರೀನ್ ಮುಂತಾದ ಕನ್ನಡದಲ್ಲಿ ತರ್ಜುಮೆ ಮಾಡಲಸಾಧ್ಯವಾದ ವರ್ಣಗಳನ್ನು ನಿರ್ದಿಷ್ಟ ರೀತಿಯಲ್ಲಿ ಸೇರಿಸಿದಾಗ ಮಾತ್ರ ಅನಾನಸ್ ಆಗುತ್ತಿತ್ತು, ಇಲ್ಲದಿದ್ದಲ್ಲಿ ಅನಾಸಿನ್ ಬೇಕಾಗುತ್ತಿತ್ತು, ಚಿತ್ರಿಸುವವರಿಗೆ. ಇಂತಹ, ಸಿದ್ಧವರ್ಣಗಳಿಂದ ಹೊರತಾದ ವಯಲೆಟ್, ಪರ್ಪಲ್ ಮುಂತಾದ ರೆಡಿಮೇಡ್ ವರ್ಣಗಳನ್ನು ಹೊಂದಿಸುವುದು ಗೋಳಿನ ವಿಷಯವಾಗಿರುತ್ತಿತ್ತು ಏಕೆಂದರೆ ಅಂತಹ ವರ್ಣಗಳು ಚಿತ್ರಣಗೊಂಡ ಕೂಡಲೆ ಕಾಗದ, ಕ್ಯಾನ್ವಾಸುಗಳು ಬಿರುಕು ಬಿಡುತ್ತಿದ್ದವು. ಕೆಂಪು ಹಾಗೂ ನೀಲಿಯನ್ನು ಬೆರೆಸಿ ಪರ್ಪಲನ್ನು ತಯಾರಿಸುವವರ ವರ್ಣದ ಗುಣಮಟ್ಟ ಬಿರುಕು ಬಿಡುತ್ತಿರಲಿಲ್ಲವೆಂಬುದೇನೋ ನಿಜ ಆದರೆ ಎಲ್ಲರಿಗೂ ಒಂದೇ ತೆರನಾದ ನೇರಳೆ ವರ್ಣ ದೊರಕದೆ, ಅನಾನಸ್ ಹಣ್ಣು ನೇರಳೇ ಗೊಂಚಲಾಗಿ ಗೋಚರವಾಗತೊಡಗಿತ್ತು, ಅವುಗಳು ಎಲ್ಲರ ಕಾಗದದ ಮೇಲಿನ ಚಿತ್ರಗಳಾದಾಗ.
(೮)
ಹೀಗಿರಲು, ಕಲಾವಿದ್ಯಾರ್ಥಿಗಳಾದ ನಮ್ಮದು ಕಳ್ಳಬುದ್ಧಿ ಅಲ್ಲವೆಂತಲೂ, ಅದು ಕ್ರಿಯಾತ್ಮಕತೆಯ ಅನಿವಾರ್ಯ ಅಂಶ ಎಂಬುದನ್ನು ಸಾಬೀತು ಪಡಿಸುವ ಅನಿವಾರ್ಯತೆಯು ನಮಗೆ ಅರಿವಾಗತೊಡಗಿದ ಕಾಲಕ್ಕೆ, ನಮ್ಮ ತರಗತಿಗಳು (ನಾಲ್ಕನೆಯ ವರ್ಷ ಎಂದು ನೆನಪು, ಸುಮಾರು ೧೯೮೯ರಲ್ಲಿ) ಪರಿಷತ್ತಿನ ಈಗಿರುವ ಹಿಂದಿನ ಕಟ್ಟಡದ ನೆಲಮಾಳಿಗೆಯ ಮದ್ಯದ ಹಾಲಿನಲ್ಲಿತ್ತು. ಪೈಂಟಿಂಗ್ ಸ್ಪೆಷಲೈಸೇಷನ್ ತೆಗೆದುಕೊಂಡಿದ್ದ ನಮಗೆ, ಪಕ್ಕದಲ್ಲೇ ಬೃಹದಾಕಾರದ ಶಿಲ್ಪಕಲಾ ವಿಭಾಗವಿರುವುದು--ಪುಟ್ಟ ಮನೆಯಲಿದ್ದು, ಮುಂದೆ ವಿಶಾಲ ತೋಟವನ್ನು ಹೊಂದಿರುವಂತಹ ಭಾವವುಕ್ಕಿಸುತ್ತಿತ್ತು. ಮನೆ ಚಿಕ್ಕದೆಂಬ ಗೊಣಗಾಟಕ್ಕೆ ತೋಟ ದೊಡ್ಡದೆಂಬ ಪರಿಹಾರ.
ಹೀಗಿರಲು, ಒಮ್ಮೆ ಹೀಗಾಯಿತು: ನಮ್ಮ ಲೈಫ್ ಸ್ಟಡಿ ಕ್ಲಾಸನ್ನು ಮುಂದೂಡಲಾಯಿತು. ಕಾರಣ: ಮರಗಳಿಂದ ಹಣ್ಣಾಗಿ ತಾವಾಗಿ ಬೀಳುವ ಮುನ್ನ ಹಣ್ಣುಗಳನ್ನು ಪರಿಷತ್ತಿನವರು ತಾವಾಗಿಯೇ ಉದುರಿಸಿದ ಮಾವಿನ ಸಂಖ್ಯೆ ವಿಫುಲವಾಗಿದ್ದು, ಕೆಲವು ಇನ್ನೊಂದೆರೆಡ್ಮೂರ್ನಾಲ್ಕೈದಾರು ದಿನ ಮಾಗುವ ಅವಶ್ಯಕತೆ ಇತ್ತು. ಪಕ್ಕದ ಮಿನಿಸ್ಟರರ ದೊಡ್ಡ ದೊಡ್ಡ ಮನೆಗಳ, ದೊಡ್ಡ ದೊಡ್ಡ ತೋಟಗಳಿಂದ ಬರುತ್ತಿದ್ದ ಗಡವ ಕೋತಿಗಳು (ಅಕ್ಷರಶಃ ಕೋತಿಗಳೇ; ಅಲ್ಲ, ನೀವಂದುಕೊಂಡಂತಹ ಮಂತ್ರಿಗಳ ರೂಪದವರಲ್ಲ. ಜೊತೆಗೆ ಆಗ ಯಾರು ಮಂತ್ರಿಯಾಗಿದ್ದರು ಎಂದು ಸಂಶೋಧಿಸುವ ಅವಶ್ಯಕತೆಯಿಲ್ಲ, ಏಕೆಂದರೆ ಅಲ್ಲಿಂದ ಪರಿಷತ್ತಿಗೆ ಗಡವ ಕೋತಿಗಳು ಬರುವುದು ನಿತ್ಯ ನಿರಂತರ, ಕಾಲಾತೀತ ಮತ್ತು ಪಕ್ಷಾತೀತ.) ಮರದಲ್ಲಿನ ಹಣ್ಣುಗಳನ್ನು ಹಣ್ಣು-ಕಾಯಿಯೆಂಬ ಬೇಧಭಾವವಿಲ್ಲದೆ ಉದುರಿಸಿ, ಅವುಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿ, ಅವುಗಳನ್ನು ಪಕ್ಷಿಗೊರವಂಕಿಗಳು ಚುಚ್ಚಿ, ಎಂಜಲು ಮಾಡಿ ಗೊಬ್ಬರವೆಬ್ಬಿಸಿಬಿಡುತ್ತಿದ್ದವು. ಅವುಗಳನ್ನು, ಅಂದರೆ ಹಣ್ಣುಗಳನ್ನು ಮರದಿಂದ ಸಂರಕ್ಷಿಸಿ ನಮ್ಮ ತರಗತಿಯ ಕೋಣೆಗೇ ತಂದು, ಒಂದು ಕಡೆ ಚೆಲ್ಲಿ, ಹರಡಿ ಮಾಗಲು ಬಿಟ್ಟಿದ್ದರು, ಮೇಷ್ಟ್ರ ಉಸ್ತುವಾರಿಯಲ್ಲಿ. ಆದ್ದರಿಂದ ಲೈಫ್ ಸ್ಟಡಿ ತರಗತಿಗಳು ಹಣ್ಣು ಮಾಗುವವರೆಗೂ ನಡೆಯುವಂತಿರಲಿಲ್ಲ! ನಿಸರ್ಗವು ಹೇಗೆ ಮಾನವನ ನಡಾವಳಿಗಳನ್ನು ನಿರ್ಧರಿಸುತ್ತವೆ ಎಂಬುದಕ್ಕೆ ಸಾಕ್ಷಿ ಈ ಹಣ್ಣುಮಾಗುವ ಕ್ರಿಯೆಯಲ್ಲಿ ಅಡಕವಾಗಿದ್ದು, ನಮಗೆಲ್ಲ ಒಳ್ಳೆ ಮಾರಲ್-ಸೈನ್ಸ್ ಪಾಠವಾಯಿತು.
ಲೈಫ್ ಸ್ಟಡಿ ಮಾಡಲು ಬೇಕಿದ್ದಷ್ಟು ಸ್ಥಳವನ್ನು ಹಣ್ಣುಗಳು ಆಕ್ರಮಿಸಿದ್ದರಿಂದ, ಹಣ್ಣುಗಳನ್ನು ಇರಿಸಿಕೊಂಡು ನಾವು ಸ್ಟಿಲ್ ಲೈಫ್ ಮಾಡಬೇಕಿತ್ತೇ ಹೊರತು ಲೈಫ್ ಸ್ಟಡಿ ಸಾಧ್ಯವಿರಲಿಲ್ಲ.
ಲೈಫ್ ಸ್ಟಡಿ ಅಂದ್ರೇನೇ ಜೀವಿಗಳ ನಗ್ನಾವತಾರವನ್ನು ರೇಖೆ-ವರ್ಣಗಳಲ್ಲಿ ಸೆರೆಹಿಡಿವುದಲ್ಲವೆ. ಈ ಮಾವಿನ ಹಣ್ಣುಗಳೂ ನಗ್ನವೇ ಅಲ್ಲವೆ, ಬಟ್ಟೆ ತೊಟ್ಟಿಲ್ಲವಲ್ಲ. ಆದ್ದರಿಂದ ಈ ಹಣ್ಣುಗಳನ್ನು ಬಿಡಿಸುವುದೂ ಒಂದು ತೆರನಾದ ಲೈಫ್ ಸ್ಟಡಿಯೇ. ಅಂದ್ರೆ, ಲೈಫ್ ಸ್ಟಡಿಗೂ ಸ್ಟಿಲ್ ಲೈಫಿಗೂ ವ್ಯತ್ಯಾಸವಿರಲ್ಲ ಗುರೂ. ಸುಮ್ನೆ ಆರ್ಟ್ ಹೇಳಿಕೊಡೋಕೆ ಇವೆಲ್ಲ ವ್ಯತ್ಯಾಸಗಳ ನೆಪವಷ್ಟೇ. ನೀನು ಮುಂದೆ ಕಲಾವಿದನಾಗಬೇಕಾದ್ರೆ, ನೀನು ಪೈಂಟರ್ರ, ಸ್ಕಲ್ಪ್ಟರ್ರ ಅಂತ ಯಾರೂ ಕೇಳೋಲ್ಲ. ಕೇವಲ ನೀನು ಕಲಾವಿದನ ಅಲ್ಲವ ಎಂಬುದನ್ನಷ್ಟೇ ನೋಡುತ್ತಾರೆ, ಎಂದಿದ್ದ ವೀರಾ (ವೀರ್ ರಾಜ). ಯಾರೂ ಎಂದೂ ಬರೆಯದುದನ್ನು, ಚಿತ್ರಿಸದಿರುವುದನ್ನು ಮೂಡಿಸುವುದೇ ಕ್ರಿಯಾಶೀಲತೆಯಾದರೆ, ಖಲಾಶಾಲೆಗಳು ಖಲೆಯನ್ನು ಖಲಿಸುವ ಆಶ್ವಾಸನೆ ನೀಡುವುದಾದರೆ, ಇವೆರಡರ ವೈರುಧ್ಯ ಗಮನಿಸಿದೆಯ? ಎಂದು ಅನೇಖ ಆತನೊಂದಿಗೆ ಖಕಾರದ ವಾದಕ್ಕಿಳಿದುಬಿಡುತ್ತಿದ್ದ. ಖಲೆಯ ಖಾಗುಣಿತ ನಿನಗೇನು ಗೊತ್ತು ಹೋಗೊಲೋ ಎಂದೂಬಿಡುತ್ತಿದ್ದ ಅನೇಖ. ವೀರಾ ಕಲಾವಿದರ ವಂಶಸ್ಥ. ಆರ್ಯವಂಶ ಸೋಮಕ್ಷತ್ರೀಯರೋ ಅಥವ ಸೋಮವಂಶದ ಆರ್ಯಕ್ಷತ್ರೀಯರೋ ವಿಜಯನಗರದ ಕಾಲದಲ್ಲಿ ಆಂದ್ರದಿಂದ ಮೈಸೂರು ಒಡೆಯರಲ್ಲಿ ಕಲಾಸೇವೆಗಾಗಿ ಬಂದು ನಿಂತು, ಕುಳಿತು ಚಿತ್ರಬಿಡಿಸಿದ್ದವರು ಇವರ ಪೂರ್ವಜರು. ಆದ್ದರಿಂದ ವೀರಾನಿಗೆ ಕಲಾಭ್ಯಾಸದಿಂದ ಮಾತ್ರವೇ ಕಲೆಯ ಕಲಿಕೆ ಸಾಧ್ಯವೆನಿಸುತ್ತಿತ್ತು. ಸ್ವಯಂ-ಕಲಾವಿದರ, ಯಂಭೂಗಳ ಬಗ್ಗೆ ಆತನಿಗೆ ಯಾವಾಗಲೂ ಆಸಡ್ಡೆಯೇ. ಸಾಹಿತ್ಯದ ಇತಿಹಾಸ ಹೇಳಿಖೊಡ್ತಾರೆಯೆ ಹೊರತು ಖತೆ, ಖಾವ್ಯ, ಖಾದಂಬರಿ ಬರ್ಯೋದನ್ನ ಹೇಳಿಖೊಡೊ ವಿಶ್ವವಿದ್ಯಾಲಯಗಳಿವೆಯೇ ಎಲ್ಲಾದರೂ, ವಿಫುಲವಾಗಿ, ಹೇಳಪ್ಪ? ಎಂದು ಕಾರವಾಗುತ್ತಿದ್ದ ಅನೇಖ. ಮಾವಿನ ಹಣ್ಣುಗಳು ಮಾತ್ರ ತಮ್ಮ ಹೊರರೇಖೆಗಳ ಮೂಲಕವೇ ತಮ್ಮ ಸೊಟ್ಟಮೋರೆಯನ್ನು ಸೂಚಿಸುತ್ತ, ಮನುಷ್ಯರು ಯಾಕೆ ಜಗತ್ತಿನ ಸೃಜನಶೀಲತೆಯ ಜವಾಬ್ದಾರಿಯನ್ನು ಕೇವಲ ತಮ್ಮ ಕುಲದ ಜವಾಬ್ದಾರಿ ಮಾತ್ರ ಎಂದು ಆರೋಪಿಸಿಕೊಳ್ಳುತ್ತವೆ ಎಂದು ಹುಳಿಮಾವಿನ ಮರಗಳೂ ಸಹ ಬೇಡದ ಜಟಿಲತೆಗಳ ಸಿಕ್ಕುಗಳನ್ನು ಬಿಡಿಸಲು ಅನುವಾಗಿಬಿಡುತ್ತಿದ್ದವು.
(೯)
ಹಣ್ಣುಗಳೋ, ಸ್ವತಃ ದಿನ ದಿನಕ್ಕೆ ಒಂದಷ್ಟು ವರ್ಣಬದಲಾವಣೆಯನ್ನು ಬಿಟ್ಟರೆ ತಮ್ಮ ಮೀಸೆದಾಡಿಗಳನ್ನು ಬೋಳಿಸಿಕೊಂಡು, ಉಡುಪುಗಳನ್ನು ಬದಲಾಯಿಸಿಕೊಂಡು ನಮ್ಮನ್ನು ಇಕ್ಕಟ್ಟಿಗೇನೂ ಸಿಲುಕಿಸುತ್ತಿರಲಿಲ್ಲವಲ್ಲ, ಲೈಫ್ ಸ್ಟಡಿ ಕ್ಲಾಸುಗಳಲ್ಲಿ ಆಗುವಂತೆ. ಆದರೆ ನಗ್ನ ಲೈಫ್ಸ್ಟಡಿ ಕ್ಲಾಸಿಗೂ ಈ ಒಣಗಿಹಾಕಲಾಗಿರುವ ಮಾವಿನ ಹಣ್ಣುಗಳನ್ನು ಚಿತ್ರಿಸುವುದಕ್ಕೂ ಒಂದು ಸಾಮ್ಯತೆಯಂತೂ ಇತ್ತು. ಎರಡರಲ್ಲೂ ದೊರಕಲಾಗದ ಅಂಶವೊಂದರ ಆಪ್ತತೆ ಉದ್ದೀಪಿತವಾಗಿಬಿಡುತ್ತಿತ್ತು. ಮಾವಿನಹಣ್ಣನ್ನು ಬಿಡದೆ ಚಿತ್ರಿಸತೊಡಗಿದೆವು. ಅದನ್ನು ನಾವು ಕೇವಲ ನೋಡಬಹುದಾಗಿತ್ತೇ ಹೊರತು ಮುಟ್ಟುವಂತಿರಲಿಲ್ಲ--ನಗ್ನ ಮಾಡೆಲ್ಗಳಂತಿವು ಈ ವಿಷಯದಲ್ಲಿ. ಕಾರಣ ಮೇಷ್ಟ್ರು ಅಣ್ತಮ್ಮನನ್ನು ಕುರ್ಚಿ ಹಾಕಿಸಿ, ಅಲ್ಲಿ ಕಾವಲು ಹಾಕಿಬಿಟ್ಟಿದ್ದರು. ಆತ ನಮ್ಮನ್ನು ಕಾಯುತ್ತಿದ್ದನೋ ಅಥವ ಮಾವಿನಹಣ್ಣುಗಳನ್ನೋ ಹೇಳಲಾಗುತ್ತಿರಲಿಲ್ಲ. ಆತ ಬೀಡಿ ಹೊಡೆಯಲು ಒಂದೆರೆಡು ನಿಮಿಷ ಅತ್ತ ಹೋಗಬೇಕೆಂದರೂ, ಆತನ ಹೆಂಡತಿಯನ್ನು ಕೈಬೀಸಿ ಕರೆವಾಗಲೂ, ಆತನ ಶಿರಮಾತ್ರ ಮಾವಿನ ಹಣ್ಣಿನೆಡೆಗೇ ಇರುತ್ತಿತ್ತು. ಆತನ ಗುಡಿಸಲು ಪರಿಷತ್ತಿನಲ್ಲಿಯೇ ಕುಮಾರಕೃಪ ಗೆಸ್ಟ್ಹೌಸಿನ ಭಾಗಕ್ಕೆ ಇದ್ದುದ್ದರಿಂದ, ಆತ ನಿದ್ರೆ ಮಾಡುವಾಗಲೂ ಸಹ ಆತನ ಕತ್ತು ನೂರಡಿ ದೂರದಲ್ಲಿದ್ದ ಮಾವಿನಹಣ್ಣುಗಳನ್ನು ಒಣಹಾಕಲಾಗಿದ್ದ ನಮ್ಮ ತರಗತಿಯ ದಿಕ್ಕಿನಲ್ಲೇ ಇರುತ್ತಿತ್ತು ಎಂದು ಮಾತನಾಡಿಕೊಳ್ಳುತ್ತಿದ್ದೆವು. ನಿದ್ರೆ ಬರದೇ ಇದ್ದಾಗ ಆತನ ಕತ್ತು ಯಾವ ದಿಕ್ಕಿನಲ್ಲಿರುತ್ತಿತ್ತು? ಎಂದು ನಿಗೂಢ-ಪೋಲಿ ಪ್ರಶ್ನೆ ಕೇಳಿದ್ದ ವೀರಾನ ಮಾತು ಬಾಕ್ಸ್ಫರ್ಡ್ ಪಾರನಿಗೆ (ಪಾಜು ರಟೇಲ್) ಅರ್ಥವಾಗಿರಲಿಲ್ಲ. ಯಾವುದಾದರೂ ಸಂದಿಯಲ್ಲಿ ತಲೆತೂರಿಸಿಕೊಳ್ಳೋ, ಆಗಾದ್ರೂ ಅರ್ಥವಾದೀತು ಎನ್ನುವ ಕ್ಲೂ ಕೊಟ್ಟಾಗಲೂ ಬಾಕ್ಸ್ಫರ್ಡ್ ಪಾರನಿಗೆ ಆ ಒಗಟಿನಂತಹ ಮಾತುಗಳನ್ನು ಬಿಡಿಸುವ ದಾರಿಯಾಗಲಿ, ಅವುಗಳ ನಡುವಣ ಸಂಧಿಯಾಗಲೀ ಗೋಚರಿಸಲಿಲ್ಲ. ಪಾರ ಬಾಕ್ಸ್ಫರ್ಡ್ ಆದುದರ ಕಾರಣವನ್ನು ಅರಿತುಕೊಳ್ಳಲು ಕೇಂಬ್ರಿಜಿನಲ್ಲಿ ಅಧ್ಯಯನ ಮಾಡುವ ಅವಶ್ಯಕತೆಯೇನೂ ಇಲ್ಲ. ಆದರೆ ಸಾವಿರಗಟ್ಟಲೆ ಪದಗಳ ನಂತರ ಅದರ ವಿವರವನ್ನು ನಿರೀಕ್ಷಿಸಬಹುದು.
ಅಣ್ತಮ್ಮನ ಕುತ್ತಿಗೆ ಯಾವಾಗಲೂ ಹಣ್ಣಿದ್ದ ಕಡೆಗೇ ಇರಲು ಕಾರಣ ಆತನಿಗೆ ಮೇಷ್ಟ್ರನ್ನು ಕುರಿತ ಭಯದ ತೀವ್ರತೆಯೇ. ಬೆಳಿಗ್ಗೆ, ಮಧ್ಯಾಹ್ನ ಊಟಕ್ಕೆ ಹಾಗೂ ಸಂಜೆ ಅಂಗಡಿ ಮುಚ್ಚುವಾಗಲೂ ಆತನೇ ಎಲ್ಲರನ್ನೂ ಹೊರಕ್ಕೆ ಕಳಿಸಿ ನಮ್ಮ ಕ್ಲಾಸ್ರೂಮಿನ ಬೀಗ ಹಾಕುತ್ತಿದ್ದ. ಹಣ್ಣುಗಳು ಮಾಗದಿಂತೆಲ್ಲ, ಪರಿಷತ್ತಿನ ಹಿತೈಷಿಗಳು ಬಂದಂತೆಲ್ಲ, ಅವರುಗಳಿಗೆ ಅಥವ ಅವರ ಮನೆಯವರಿಗೆ ಕೊಡುಗೆಯಾಗಿ ಪರಿಷತ್ತಿನ ಸೃಜನಶೀಲ ಬೆಳೆ ಇದು ಎಂಬ ಸಂದೇಶದಿಂದ, ಒಳ್ಳೆಯ ಉದ್ದೇಶದಿಂದಲೆ ರವಾನೆಯಾಗುತ್ತಿತ್ತು. ಪರಿಷತ್ತಿನ ಏಕೈಕ ಸೃಜನಶೀಲ ಬೆಳೆ ಎಂದರೆ ಮಾವು ಎಂದು ಸಿನಿಕರು ಹುಳಿಯಾಗಿ ಮಾತನಾಡಿಕೊಳ್ಳುತ್ತಲೂ ಇದ್ದರು. ನೆಲಗಳ್ಳರ ತಂತ್ರಗಾರಿಕೆಯನ್ನು ಬಳಸಿ ಮಮಾ, ಅನೇಖರಂತಹವರು ಅಣ್ತಮ್ಮನೊಂದಿಗೆ ಮಾಡಿಕೊಳ್ಳಲು ಪ್ರಯತ್ನಿಸಿದ ಒಡಂಬಡಿಕೆಗಳೆಲ್ಲ ಒಡೆದ ಮಡಿಕೆಗಳಂತಾಗಿ ಹೋಯ್ತು. ಇಲ್ಲಪ್ಪ, ಮೇಷ್ಟ್ರು ಎಣ್ಸಿಕೊಂಡು ಹೋಗಿದಾರೆ. ಒಂದೇ ಒಂದು ಹಣ್ಣು ಹೆಚ್ಚೂಕಮ್ಮಿಯಾದ್ರೂ ನನ್ನ ಆರೋಗ್ಣಾನೇ ಹೆಚ್ಚೂ ಕಮ್ಮೀ ಆಗೋಂಗೆ ವದೀತಾರೆ ಎಂದು ಆತ ಜಾರಿಕೊಂಡು ಬಿಡುತ್ತಿದ್ದ.
(೧೦)
ಒಮ್ಮೆ ಅಂತಹದ್ದೇ ಏನೋ ಎಡವಟ್ಟು ಮಾಡಿಕೊಂಡಿದ್ದ, ಅದಾಗಲೇ ಮುವತ್ತೈದರ ಸುಮಾರು ವಯಸ್ಸಿನ ಅಣ್ತಮ್ಮ, ಒದ್ದಿಸಿಕೊಂಡು, ಪರಿಷತ್ತಿನಿಂದ ಹೊರಗಾಗಿ, ತನ್ನ ಊರಾದ ಮಧುಗಿರಿಗೆ ಹೋಗಿ ತನಗಿಂತಲೂ ಕೇವಲ ನಲವತ್ತೈದು ವರ್ಷ ವಯಸ್ಸಾಗಿದ್ದ, ಎಂಬತ್ತರ ಹರಯದ ತನ್ನ ತಂದೆಯನ್ನು ಕರೆದುಕೊಂಡು ಬಂದಿದ್ದ, ಬರ್ದಿದ್ರೆ ಮೇಷ್ಟ್ರು ಬಯ್ತಾರೆ, ಬಾ ಎಂಬ ಹಠದಿಂದ. ಹಣ್ಣಣ್ಣು ಮುದುಕನ ಎದಿರಿಗೇ ಅಣ್ತಮ್ಮನನ್ನು ವಾಚಾಮಗೋಚರವಾಗಿ ಬಯ್ದ ಮೇಷ್ಟ್ರು, ಆತನನ್ನು ಯಾವುದೋ ಕೆಲಸದ ಮೇಲೆ ಕಳಿಸಿ, ಅವರಪ್ಪನಿಗೆ ನಗರದ ವಿಶೇಷತೆಗಳ ಸಣ್ಣ ಪರಿಚಯ ಮಾಡಿಸಿ, ರುಚಿಯುಣಿಸಿ, ಜೇಬಿಗಷ್ಟು ಹಣನೀಡಿ ಊರಿಗೆ ಸಾಗಹಾಕಿದ್ದರು. ಮೇಷ್ಟ್ರು ಏನುಕ್ಕಪ್ಪಾ ನಮ್ಮನ್ ಓಡಿಸ್ಟಾರೆ? ಜಯವಿಜಯ್ರನ್ನ ಇಷ್ಣು ಓಡಿಸ್ದಂಗೆ ಅದು. ಯಾವಾಗಿದ್ರೂ ವಾಪಸ್ ಬಂದೇ ಬರ್ತೀನಂತ ನನಗ್ಗೊತ್ತು. ಆಚೆ ಹೋಗ್ದಿದ್ರೆ ಒಳೀಕ್ ಬರದಾದ್ರೂ ಎಂಗ್ ಸಾಧ್ಯ ಯೋಳಿ? ನಿಮ್ ಪುಸ್ತಕದಾಗ ಇಂಗಲ್ದೇ ಬೇರೆ ಯೆಂಗಾದ್ರೂ ಎಲ್ಲಾದ್ರೂ ನಡ್ದದ್ದಿದೆಯ? ಎಂದು ಅಣ್ತಮ್ಮ ತನ್ನ ಎಚ್.ಎಂ.ಟಿಯನ್ನು (ಹೆಗಲ್-ಮೇಲೆ-ಟವಲ್) ಒದರುತ್ತ ಒಳಕ್ಕೆ ನಡೆದು ಬಂದುಬಿಡುತ್ತಿದ್ದ. ಅಪರಾಧಿಗಳು ಒಂದಷ್ಟು ದಿನ ಸೆರೆಮನೆವಾಸ ಅನುಭವಿಸಿ ಹೊರಬಂದಂತೆ ಈತ ಪರಿಷತ್ತಿನಿಂದ ಹೊರಕ್ಕೆ ದಬ್ಬಿಸಿಕೊಂಡು ಒಂದಷ್ಟು ದಿನ ಹೊರಗಾಗಿ, ನಂತರ ಒಳಬರುತ್ತಿದ್ದ.
ಕಳ್ಳರ ಹತ್ರಾನೇ ಗಂಟು ಭದ್ರ ಮಾಡೋಕ್ಕೆ ಇಟ್ಟಂಗಾಯ್ತಲ್ರೋ ಎಂದು ಎಲ್ಲರೂ ತಮಾಷೆ ಮಾಡುತ್ತಿದ್ದರು, ನಮ್ಮ ಕ್ಲಾಸಿನೊಳಗೇ ಮಾವಿನಕಾಯಿಯನ್ನು ಮಾಗಲು ಬಿಟ್ಟಿರುವುದನ್ನು ಕಂಡವರು, ಕಾಣದಿದ್ದಲ್ಲಿ ಕೇಳಿದವರೂ ಸಹ. ಚಿಕ್ಕವಯಸ್ಸಿನಲ್ಲಿ--ಅಥವ ಆಗಲೂ ಅಭ್ಯಾಸವಿದ್ದುದ್ದರಿಂದಓದಿದ ಚಂದಮಾಮಾ ಕಥೆಯೊಂದರಲ್ಲಿ ಚಿನ್ನದ ನಾಣ್ಯಗಳನ್ನು ಜೊತೆಗಿರಿಸಿಕೊಂಡಿದ್ದ ವ್ಯಾಪಾರಿಯೊಬ್ಬ ಪರಊರಿನಲ್ಲಿ ತಂಗಬೇಕಾಗಿ ಬಂದಾಗ, ಕೋಣೆಯಲ್ಲಿದ್ದ ಜೊತೆಗಾರ ಕಳ್ಳನೆಂದು ತಿಳಿದಾಗ, ಕಳ್ಳನ ದಿಂಬಿನ ಕೆಳಗೇ ತನ್ನ ನಾಣ್ಯದ ಚೀಲವನ್ನಿಟ್ಟು ತನ್ನ ನಾಣ್ಯಗಳನ್ನು ಕಾಪಾಡಿಕೊಳ್ಳುವ ಪರಿಯಂತಾಯಿತಿದು. ಇಂತಹ ನೀತಿಕಥೆಗಳನ್ನು ಮೀರಿದ ಸಂಕೀರ್ಣತೆಗಳನ್ನು, ಸರಳ ಕಥೆಗಳ ಹಿಂದಿನ ಅನುಭವಗಳ ಸಂಕೀರ್ಣತೆಗಳನ್ನು ಕಲಾಶಾಲೆಯಲ್ಲಿ ನಾವ್ಯಾರೂ ಮಾತಾಡುತ್ತಿರಲಿಲ್ಲ, ಹಾಗೆ ಮಾಡುವವರನ್ನು ಸ್ಕ್ರೂಲೂಸ್ ಎಂದು ಸರಳೀಕರಿಸಿಬಿಡುವುದನ್ನೂ ನಿಲ್ಲಿಸುತ್ತಿರಲ್ಲಿಲ್ಲ. ತೀರ್ಮಾನವೆಂಬುದು ಸುಸ್ತಾದ ಮನಸ್ಸಿನ ಗುರ್ತು ಎಂಬ ತೀರ್ಮಾನವನ್ನು ನಾವು ಆಗೆಲ್ಲ ಒಪ್ಪುತ್ತಲೂ ಇರಲಿಲ್ಲ.//