ನೆನಪಿನ ಚಿತ್ರಕಲಾ ಶಾಲೆ: ಭಾಗ ೪ -ನೇತಾಡುವ ಕುಂಡ

ನೆನಪಿನ ಚಿತ್ರಕಲಾ ಶಾಲೆ: ಭಾಗ ೪ -ನೇತಾಡುವ ಕುಂಡ

 

 (೧೧)

ಪರಿಷತ್ತಿನ ನಮ್ಮ ತರಗತಿಯಲ್ಲಿ ಒಂಬತ್ತು ವಿದ್ಯಾರ್ಥಿಗಳು, ನಾಲ್ವರು ಹೈಕ್ಲಾಸ್ ಹುಡುಗಿಯರು ಐವರು ಮಿಡ್ಲ್‌ಕ್ಲಾಸ್ ಹುಡುಗರು. ಮಿಡ್ಲ್‌ಕ್ಲಾಸ್ ಎಂದರೆ ಮಧ್ಯಪ್ರದೇಶವೆಂತಲೂ, "ಆಗ ಜನಪ್ರಿಯಳಾಗಿದ್ದ ’ತೇಝಾಬ್’ನ ಏಕ್ ದೋ ತೀನಿನ ಮಾಧುರಿ ದೀಕ್ಷಿತಳು ಹೆಣ್ಣಿನಾಕಾರದ ಮೇಲು-ಕೀಳನ್ನು ಮೀರಿ, ನಡುವಣ ಹೆಣ್ಣಿನಾಕಾರದ ಮಧ್ಯಪ್ರದೇಶ ಅಥವ ಮಿಡ್ಲ್‌ಕ್ಲಾಸಿಗೆ ಕಂಗಳನ್ನು ಸ್ಥಳಾಂತರಿಸುವ ದೃಷ್ಟಿಕ್ರಾಂತಿಯನ್ನುಂಟು ಮಾಡಿದ್ದಳೆಂಬುದನ್ನು ಆನಂತರವಷ್ಟೇ ನಾವೆಲ್ಲ ಗಂಭೀರ ಸಾಹಿತ್ಯದಿಂದ ಅರಿತುಕೊಂಡಿದ್ದರಿಂದ ನಾವು ಐವರು ಮಿಡ್ಲ್‌ಕ್ಲಾಸ್ ವಿದ್ಯಾರ್ಥಿಗಳು ಎಂದದ್ದನ್ನು ಅನ್ಯತಾ ಭಾವಿಸಬೇಖಾಗಿ ವಿನಂತಿ," ಎಂದು ಅನೇಖ ಅನೇಕ ವಿಧದಲ್ಲಿ ತಮಾಷೆಯಾಗಿ ನಮಗೆ ತನ್ನ ತರ್ಕವನ್ನು ಪದರು ಪದರಾಗಿ, ಸುಲಿದು, ಬಿಡಿಸಿ ಹಲವು ವರ್ಷಗಳ ನಂತರ ವಿವರಿಸಿದ್ದ.
 
ಸರಿ, ಮಾವಿನ ಹಣ್ಣಿನ ಆಕರ್ಷಣೆಗಾಗಿ ಕ್ಲಾಸಿಗೆ ಬರುತ್ತಿದ್ದೆವೋ, ಅಥವ ಅಲ್ಲಿ ಬಂದ ನಂತರ ದಿನವಿಡಿಯ ಮಾವಿನ ವಾಸನೆಯಿಂದ ತರಗತಿಗೆ ಅಂಟಿ ಕುಳಿತಿರುತ್ತಿದ್ದೆವೋ, ಅಂತೂ ಬೇರೆ ತರಗತಿಗಳ ಗೆಳೆಯರು ಮತ್ತು ಅಲ್ಲದವರೂ ಗೆಳೆಯರಂತಾಡುತ್ತ ನಮ್ಮಲ್ಲಿಗೆ, ನಮ್ಮ ತರಗತಿಗೆ ಬರುವುದು ಹೆಚ್ಚಾಗತೊಡಗಿತು, ಮಾವಿನಕಾಯಿಯ ಆಕರ್ಷಣೆ ಕಡಿಮೆಯಾಗತೊಡಗಿತು. ಸನ್ಯಾಸಿ ಬೆಕ್ಕಿನಂತ ನಾವೆಲ್ಲ ನಿರಾಸಕ್ತರಂತೆಯೂ, ನಮ್ಮ ಕೋಣೆಯಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯ ತಂದೆಗೂ ನೂರಾರು ಎಕರೆ ಮಾವಿನ ತೋಪಿನ ಜಮೀನಿದೆಯೆಂತಲೂ ಅಣ್ತಮ್ಮನೆದುರಿಗೆ ಕೊಚ್ಚಿಕೊಳ್ಳುತ್ತಿದ್ದೆವು. ಎಷ್ಟೋ ಗೆಳೆಯರ ಮನೆಯ ಸ್ಥಿತಿ ’ತೋಪಾಗಿದ್ದರೂ’ ಕೊಚ್ಚಿಕೊಳ್ಳಲೇನೂ ಖರ್ಚಿರುತ್ತಿರಲಿಲ್ಲವಲ್ಲ, ಅಥವ ಅನೇಖ ಹೇಳುವಂತೆ "ಖರ್ಚಿರುತ್ತಿರಲಿಲ್ಲವಲ್ಲ"!
 
ಸಂಜೆಯಾದರೆ ಸಾಕು ಮೇಷ್ಟ್ರ ಅತ್ಯಂತ ನಿಷ್ಠಾವಂತ ಶಿಷ್ಯ ಗಂಧಯ್ಯ ಗೋಣಿತಾಟು ತಂದು, ಎಣಿಸಿಕೊಂಡು ಮಾವಿನಹಣ್ಣುಗಳನ್ನು ತುಂಬಿಕೊಂಡು ಹೋಗಿ-ಆ ನಂತರ ಅದೆಲ್ಲೆಲ್ಲಿಗೋ ಸಾಗಹಾಕುತ್ತಿದ್ದ, ಹಿರಿಯರ ಆಣತಿಯಂತೆ. "ಇರ್ಲಿ ಗಂಧಯ್ಯ, ಓಗು ಓಗು. ಗೋಣೀತಾಟಲ್ಲಿ ಹಣ್ಣು ತಗೊಂಡಿದ್ದೀಯೋ, ಹೆಣ್ಣು ತಗೊಂಡಿದ್ದೀಯೋ, ಮುಟ್ಕಂಡು ಎತ್ಕೊಂಡು ಹೋಗ್ತಿರೋ ನಿನಗೇ ಗೊತ್ತಾಗಬೇಕಷ್ಟೇ," ಎಂದು ಮಮಾ ಆತನನ್ನು ಛೇಡಿಸುತ್ತಿದ್ದ. "ಅಟ್ಲಂಟ ನೂವು ಅಡಗೇಯಪ್ಟು ಲೇದು, ನೇನು ಚೆಪ್ಪೇಯಟ್ಲು ಲೇದು" ಎಂದು ಕೇಳಿಸುವಂತೆ ಗಂಧಯ್ಯ ನಿಗೂಢ ಪೋಲಿ ನಗೆ ನಗುತ್ತಿದ್ದ. ನನಗೆ ಆಗ ಕೇಳಿಸುತ್ತಿದ್ದುದನ್ನು ಈಗ ಬರೆಯುವಷ್ಟರಲ್ಲಿ ನನ್ನ ತೆಲುಗು ಎಕ್ಕುಟ್ಟೋಗುತ್ತಿದ್ದರೂ, ಅದರ ಭಾವವನ್ನು ಮಾತ್ರ ಸರಿಯಾಗಿ ಹಿಡಿಯುತ್ತಿದ್ದೆ. ಇಲ್ಲದ ನಿಗೂಢತೆಯನ್ನು, ತಮ್ಮ ತಮ್ಮ ದೈಹಿಕ ವಾಂಛೆಗಳನ್ನು ಪರಸ್ಪರ ’ಬಹಿರಂಗ’ ಪ್ರದರ್ಶನ ಮಾಡುವುದೆಂದರೆ ಮಮಾ ಮತ್ತು ಗಂಧಯ್ಯರ ’ಅಂತರಂಗ’ಕ್ಕೆ ಎಲ್ಲಿಲ್ಲದ ಖುಷಿ. 
 
ಕಲಾ ವಿದ್ಯಾರ್ಥಿಗಳ ವತಿಯಿಂದ ಒಂದೂ ಹಣ್ಣು ತಿನ್ನಲಾಗದೆ, ನೂರಾರು ಹಣ್ಣುಗಳ ವಾಸನೆಯನ್ನು ಸ್ವಾದಿಸದೇ ಇರಲಾಗದೆ ಅದೊಂತರಾ ವಿರಹವೇದನೆ ಶುರುವಾಗಿಬಿಟ್ಟಿತ್ತು ತರಗತಿಯಲ್ಲಿದ್ದವರಿಗೆಲ್ಲ. ಒಮ್ಮೊಮ್ಮೆ ಅಣ್ತಮ್ಮನಿಗೆ ಸಾಕುಬೇಕಾಗುವಂತೆ ಮಾಡಿಬಿಡುತ್ತಿದ್ದರು ನಮ್ಮ ತರಗತಿಯ ವೀರಾ ಮತ್ತು ಪಕ್ಕದ ಶಿಲ್ಪಕಲಾ ವಿಭಾಗದ ಮಮಾ. ಉದಾಹರಣೆಗೆ ಮಮಾನ ತರಗತಿಗೂ ನಮ್ಮದಕ್ಕೂ ಇದ್ದ ಗೋಡೆಯಲ್ಲಿ, ಸುಮಾರು ಎಂಟಡಿ ಎತ್ತರದಲ್ಲಿ ಮೂರಡಿ ಅಗಲ ಒಂದೂವರೆ ಅಡಿ ಎತ್ತರದ ಕಿಂಡಿಯೊಂದಿತ್ತು. ಒಂದು ದಿನ ಅಚಾನಕ್ಕಾಗಿ ಯಾರೋ ಕರೆದಂತಾಗಿ ಯಾರನ್ನು ಯಾರು ಕರೆದದ್ದು ಎಂದು ಎಲ್ಲರೂ ಕಿಂಡಿಯೆಡೆ ನೋಡಿದರೆ, ಶಿಲ್ಪಕಲೆಯ ಭಾಗದಿಂದ, ಕಿಂಡಿಯಲ್ಲಿ ಅಂಡಿನ ಭಾಗವೊಂದು ನಮ್ಮ ತರಗತಿಯ ಗೋಡೆಯ ಮೇಲೆ, ಕಿಂಡಿಯಿರಬೇಕಿದ್ದೆಡೆ ಓಲಾಡುತ್ತಿತ್ತು. ಆ ದೇಹದ ಉಳಿದರ್ಧ ಭಾಗವು ಶಿಲ್ಪಕಲಾ ವಿಭಾಗದ ಕಡೆ ಇತ್ತು ಎಂದು ಕಾಣುತ್ತದೆ ಎನಿಸುತ್ತಿತ್ತು, ಆ ಭಾಗ ಕಾಣದಿದ್ದರೂ ಸಹ. 
 
ಒಮ್ಮೆಲೆ ವೀರಾನಿಗೆ ಒಂದು ಐಡಿಯಾ ಬಂದುಬಿಟ್ಟಿತು. ಮಾನವದೇಹಗಳನ್ನು ನೋಡಿದರೆ ಸಾಕು ವೀರಾನಿಗೆ ದೇಹಾತೀತವಾದ, ಮಾನವಾತೀತವಾದ ಐಡಿಯಾಗಳು ಹೊಳೆದುಬಿಡುತ್ತಿದ್ದವು. ಅದರಲ್ಲೂ ಕಣ್ಣೆದುರಿಗಿರುವುದು ಗಂಡಿನ ದೇಹದಂತಿಲ್ಲದಿದ್ದರಂತೂ ಹೆಚ್ಚು ತೀವ್ರವಾಗಿ ಐಡಿಯಾಗಳು ಹುಟ್ಟಿಕೊಳ್ಳುತ್ತಿರುತ್ತವೆ ಎಂದು ತಪ್ಪೊಪ್ಪಿಗೆಯನ್ನೂ ನಾಚಿಕೆಯಿಲ್ಲದಂತೆ ಅವನೇ ಬಹಿರಂಗಗೊಳಿಸುತ್ತಿದ್ದ. "ಇವನೊಬ್ಬನಿಗೇ ಈ ವೀಕ್ನೆಸ್ ಇರೋದು ಅಂದುಕೊಂಡುಬಿಟ್ಟಿದ್ದಾನೆ, ಮಗ," ಎಂದು ಆ ದಿನಗಳಲ್ಲೇ ಲಂಕೇಶರು ತಮ್ಮ ಪತ್ರಿಕೆಯ ಪ್ರಶ್ನೋತ್ತರದಲ್ಲಿ ಕನ್ನಡ ನಟನೊಬ್ಬನ ಇದೇ ವಿಷಯಕ್ಕೆ ಸಂಬಂಧಿಸಿದ ವೀಕ್ನೆಸ್ಸಿನ ತಪ್ಪೊಪ್ಪಿಗೆಯ ಬಗ್ಗೆ ಸ್ಟ್ರಾಂಗಾಗಿ ರಿಯಾಕ್ಟ್ ಮಾಡಿದ್ದ ಬಲವಾದ ನೆನಪು. ಹಾಗಾಯಿತಿದು.
 
     ಈಗ, ಶಿಲ್ಪಕಲೆ ಮತ್ತು ಚಿತ್ರಕಲೆಯನ್ನು ವಿಭಾಗಿಸುವ ಗೋಡೆಯ ಕಿಂಡಿಯಿದ್ದೆಡೆ, ದೇಹವೊಂದರ ಕೆಳಗಿನ ಅರ್ಧಭಾಗ ಇರುವುದನ್ನು ಕಂಡು, "ಯಾರ್-ಕುಂಡಿ, ಇಕ್ಕಡ ವಚ್ಚಿಂಡಾವು ಯಾಕಂಡಿ?" ಎಂದು ಜೋರಾಗಿ ಗದ್ದಲವೆಬ್ಬಿಸತೊಡಗಿದ ವೀರಾ. ಇನ್ನೂ ಯಾರೂ ಎಂಟಡಿ ಮೇಲಿನ ಆ ದಿವ್ಯದರ್ಶನದಿಂದ ಸಾವರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲೇ ವೀರಾ, ವೀರಾವೇಷದಿಂದ ನುಡಿದ, "ಮನುಷ್ಯ ದೇಹದಲ್ಲಿ ರುಂಡ ಮತ್ತು ಮುಂಡಾದ ಜೊತೆ ಕುಂಡಾವು ಇರಬೇಕಲ್ಲವೆ. ಆಗಲೇ ಅನಾಟಮಿ ಸಂಪೂರ್ಣವಾಗುವುದು ಅಲ್ಲವೆ?" ಎಂದುಬಿಟ್ಟ. ಅಣ್ತಮ್ಮ ಎಲ್ಲಿ ತಾನು ನಕ್ಕಿಬಿಟ್ಟರೆ ಆ ತೂಗಾಡುತ್ತಿರುವ ಕುಂಡಾವು ಕೆಳಗೆ ಒಣಗಿಹಾಕಿರುವ ಮಾಗಿದ ಮಾವಿನಹಣ್ಣುಗಳ ಮೇಲೆ ಬಿದ್ದುಬಿಟ್ಟೀತೋ ಎಂಬ ಗಾಭರಿಯಿಂದ ಗಂಭೀರನಾದ, ಗಾಬರಿಯಿಂದ ನಿಂತಿದ್ದೆಡೆಯೇ ತರತರ ನಡುಗತೊಡಗಿದ. ನಂತರ ಆ ಕುಂಡಾ-ದೇಹಕ್ಕೂ, ನೆಲದ ಮೇಲೆ ಒಣಗಿಹಾಕಲಾಗಿದ್ದ ಮಾವಿನಹಣ್ಣುಗಳಿಗೂ ನಡುವೆ ತನ್ನ ರುಂಡ-ಮುಂಡವನ್ನಿರಿಸಿ, ನಡುಗುವುದನ್ನು ನೃತ್ಯದಂತೆ ಮುಂದುವರೆಸತೊಡಗಿದ. 
 
ಅಣ್ತಮ್ಮನ ಫಜೀತಿ ಅಥವ ರುಂಡ-ಮುಂಡ ಕಾಣದ ಕುಂಡದ ದರ್ಶನ, ಇವೆರಡರಲ್ಲಿ ಯಾವುದನ್ನು ನೋಡಿ ನಗಬೇಕೋ ತಿಳಿಯದಾಗಿತ್ತು ನಮಗೆಲ್ಲ. "ಅದು ಹೆಣ್ಣೋ ಗಂಡೋ?" ಎಂದು ಕೇಳಿದ ವೀರಾನಿಗೆ, "ಆತ್ಮಕ್ಕೆ ಹೆಣ್ಣು-ಗಂಡೆಂಬ ಬೇಧವಿಲ್ಲ ಕಾಣ," ಎಂದು ಆಧ್ಯಾತ್ಮಿಕ ಉತ್ತರ ನೀಡಿದ ಬಾಕ್ಸ್‌ಫರ್ಡ್ ಪಾಜು ರಟೇಲ್ ಅಥವ ’ಪಾರ’. ಆತ ನಿಧಾನಕ್ಕೆ ಹೊರಹೋದ, ಪಕ್ಕದ ಸ್ಕಲ್ಫ್‌ಚರ್ ವಿಭಾಗದಿಂದ ಇಳೆಬಿದ್ದಿರಬಹುದಾದ ವ್ಯಕ್ತಿಯ ಮುಖವು ಯಾರದ್ದೆಂಬ ಕುತೂಹಲವನ್ನು ತಣಿಸಿಕೊಳ್ಳುವ ಸಲುವಾಗಿ. ಅಷ್ಟರಲ್ಲಿ ಮೇಷ್ಟ್ರು ಅಚಾನಕ್ಕಾಗಿ ಒಳಬಂದುಬಿಟ್ಟರು. ಗಂಭೀರವದನರಾದ ಅವರನ್ನು ಕಂಡು ಎಲ್ಲರೂ ಗಂಭೀರರಾದರು. ಎಂಟಡಿ ಮೇಲಿನ ಗೋಡೆಯೆಡೆಗೆ ಹೋಗಲು ಎಲ್ಲರ ಕಣ್ಣುಗಳೂ ನಿರಾಕರಿಸಿದವು. ಎಲ್ಲರೂ ಮೇಷ್ಟ್ರನ್ನು ಒಮ್ಮೆ ನೋಡುವುದು, ಅವರು ನಮ್ಮನ್ನು ನೋಡುತ್ತಿದ್ದರೆ ದೃಷ್ಟಿಯನ್ನು ಅಲ್ಲೇ ಫ್ರೀಜ್ ಮಾಡುವುದು. ಇಲ್ಲದಿದ್ದಲ್ಲಿ, ಅವರ ದೃಷ್ಟಿ ತಪ್ಪಿಸಿ ಎಂಟಡಿ ಮೇಲೆ ಸರಕ್ಕನೆ ನೋಡಿಬಿಡುವುದು. ಬಹಳ ಹೊತ್ತು ಹೀಗೆಯೇ ಆಯಿತು ದೃಷ್ಟಿಯುದ್ಧ. 
 
ನೇತಾಡುತ್ತಿದ್ದ ಅನಾಮಿಕಳ/ನ ಕುಂಡ ಮತ್ತು ಮಾವಿನಹಣ್ಣುಗಳ ನಡುವೆ ಬಾಗಿ, ಗೋಡೆಯಂತೆ ಫ್ರೀಜ್ ಆಗಿದ್ದ ಅಣ್ತಮ್ಮನು, ಬಾಗಿ ಹಣ್ಣುಗಳನ್ನು ಎಣಿಸುವ ನಟನೆ ಮಾಡುತ್ತ, ಆಗಷ್ಟೇ ಮೇಷ್ಟ್ರನ್ನು ನೋಡಿದಂತೆ ಮೇಲೆದ್ದವನು, ಮತ್ತೆ ನೆಲದ ಮಟ್ಟಿಗೆ ಬಾಗಿಬಿಟ್ಟಿದ್ದ ಅವರ ಬಗ್ಗೆ ಮಹಾನ್ ಗೌರವ ಇದ್ದವನಂತೆ. ಆತನಲ್ಲಿ ಆಗ, ಯಾವಾಗಲೂ ಇದ್ದಂತೆ, ಇದ್ದದ್ದು ಮಾತ್ರ ಒಂದು ತೆರನಾದ ಭಯಭೀತ ಆಪ್ತತೆ. ಕೆಲವರಿಗೆ ಭಾರತವು ದಾಸ್ಯದಿಂದ ಮುಕ್ತಿ ಪಡೆದು ದಶಕಗಳೇ ಕಳೆದಿರುವ ಸುದ್ಧಿಯನ್ನು ಇನ್ನೂ ತಿಳಿಸಲು ವ್ಯವಧಾನವಿಲ್ಲ. ಅಂತಹ ಸ್ವಾತಂತ್ರ್ಯದ ನಿರಾಕರಣೆಯನ್ನು ಸ್ವೀಕರಿಸಿದ್ದವರಲ್ಲಿ ಅಣ್ತಮ್ಮನೂ ಒಬ್ಬನಾಗಿದ್ದ.
 
ಮೇಷ್ಟ್ರಿಗೆ ಮಾತ್ರ ಎಂಟಡಿ ಮೇಲೆ ಒಂದು ರುಂಡಮುಂಡವಿಲ್ಲದ ಪಿಂಡವು ನೇತಾಡುತ್ತಿರುವುದರ ಅರಿವು ಇತ್ತೆಂದು ಕಾಣುತ್ತದೆ, ಆದರೆ ಅದನ್ನವರು ಕಣ್ಣೆತ್ತಿಯೂ ನೋಡಿಲ್ಲವೆಂಬ ಅರಿವು ನಮಗಿದೆ ಎಂದವರಿಗೆ ತಿಳಿದಿದೆ ಎಂಬುದು ನಮಗೆ ಗೊತ್ತಿದ್ದೂ ಗೊತ್ತಿಲ್ಲದಂತಿದ್ದೇವೆ ಎಂಬುದವರ ಆರನೇ ಇಂದ್ರೀಯಕ್ಕೆ ಗೋಚರವಾಗಿ, ಅವರು ಹಾಗೆಯೇ ಏನನ್ನೂ ಹೇಳದೆ ಹೊರಟುಬಿಟ್ಟಿದ್ದರು!
 
ಅವರು ಹೋಗುತ್ತಲೇ ಅವರ ಹಿಂದೆಯೇ ಓಡಿದ್ದ ಅಣ್ತಮ್ಮ. ನಾವೆಲ್ಲ ಒಳಗಿನಿಂದಲೇ ಕಿವಿಯಾನಿಸಿ ಅವರಿಬ್ಬರ ಡೈಲಾಗುಗಳನ್ನು ಕೇಳಿಸಿಕೊಳ್ಳುವ ಶತಪ್ರಯತ್ನ ಅಥವ ಶತಪಥ ಪ್ರಯತ್ನ ಮಾಡಿದ್ದೆವು: 
ಯಾರಯ್ಯ ಅದು? 
ಯಾರು ಸಾ?
ಅದೇ ಕಾಣಯ್ಯ ಆಕಾಶದಲ್ಲಿ ನೇತಾಡ್ತಿರೋರು?
ಯಾರಾದ್ರೆ ನಮಗೇನ್ ಸಾ. ಅವ್ರು ಮಾವಿನಹಣ್ಣುಗಳ ಮೇಲೆ ನೇತಾಡ್ತಿರ್ಬೋದು, ಆದ್ರೆ ಅದ್ನ ಟಚ್ ಮಾಡ್ನಿಲ್ವಲ್ಲ ಸಾ. ಅದಕ್ಕೆಲ್ಲ ನಾನು ಅವ್ಕಾಸ ಕೊಡಾಕಿಲ್ಲ ಸಾ.
ಯೋವ್, ನಿನ್ ಮಾವಿನ್‌ಕಾಯ್ ಮನೆ ಹಾಳಾಗ, ಆ ಬಾಡಿ ಬಿದ್‌ಗಿದ್ರೆ, ಕಾಲ್‌ಗೀಲ್ ಮುರ್ಕಂಡ್ರೆ ಯಾರಯ್ಯಾ ಜವಾಬ್ದಾರಿ?
ಒಂದೈದಾರು ಹಣ್ಗಳು ಜಜ್ಜೋಗ್ಬೋದು ಸಾ. ಅದ್ನ ನನ್ನ್ ಸಂಬ್ಳದಾಗೆ ಮುರ್ಕಂಬುಡಿ ಸಾ.
ಅಲ್ಲಯ್ಯಾ, ಆ ವ್ಯಕ್ತಿ ಆರೋಗ್ಯದ ಕಥೆ ಏನಯ್ಯಾ?
ಅವ್ರು ಬಿದ್ದು ಆಸ್ಪತ್ರೆ ಸೇರಿದ್ರೆ, ಆಸ್ಪತ್ರೆಗೆ ನೀವು ಓದ್ರೆ, ಇದೇ ಹಣ್ಗೊಳ್ನ ಒಂದಷ್ಟು ತಗೊಂಡೋಗಿ ಕೊಟ್ಬನ್ನಿ ಸಾ, ಪಾಪ.
 
ದಪ್ಪನೆ ಬಿದ್ದ ಸದ್ದಾಯಿತು. ಮೇಷ್ಟ್ರು ಗುದ್ದಿರಬೇಕು ಅಣ್ತಮ್ಮನಿಗೆ ಎಂದು ಒಂದಿಬ್ಬರು ಮುಸಿಮುಸಿ ನಗತೊಡಗಿದರು. ಒಂದೆರೆಡು ಕ್ಷಣಗಳ ನಂತರ ಹೊರಬಂದು ನೋಡಿದರೆ ಮೆಷ್ಟ್ರು ಅದಾಗಲೇ ಅಷ್ಟು ದೂರದಲ್ಲಿದ್ದರು. ಬಿದ್ದ ಸದ್ದು ಅಣ್ತಮ್ಮನಿಗೆ ಗುದ್ದು ಬಿದ್ದದ್ದಲ್ಲ. ಶಿಲ್ಪಕಲಾ ವಿಭಾಗದಲ್ಲಿ, ರುಂಡ ಮುಂಡಗಳೆರಡನ್ನೂ ವಿಕ್ರಮನ ಹೆಗಲ ಮೇಲೆ ಬೇತಾಳವು ಇಳೇ ಬಿದ್ದಂತೆ ಇಳೇ ಬಿಟ್ಟುಕೊಂಡಿದ್ದ ವ್ಯಕ್ತಿಯನ್ನು ಕಂಡು ಸ್ಪೂರ್ತಿಗೊಂಡು, ಆ ವ್ಯಕ್ತಿಯು ಕೆಳಗಿಳಿದು ಬರುವ ಮೊದಲೇ ಅದರದ್ದೊಂದು ಮಣ್ಣಿನ ಮಕೆಟ್-ಶಿಲ್ಪವನ್ನು ರಚಿಸಿಬಿಡಬೇಕು ಎಂದು ಮಲ್ಲು ಮೋಗನ ತನ್ನ ಶಿಲ್ಪಕಲಾ ಪರಿಕರಗಳನ್ನು ಚಕಚಕನೆ ವ್ಯವಸ್ಥೆಗೊಳಿಸಿಬಿಡುವ ಆವೇಗದಲ್ಲಿ ಕಬ್ಬಿಣದ ಆರ್ಮೇಚರಿನ ಸ್ಟ್ಯಾಂಡನ್ನೇ ತನ್ನ ಕಾಲ ಮೇಲೆ ಬೀಳಿಸಿಕೊಂಡುಬಿಟ್ಟಿದ್ದ!//