ನೆನಪಿನ ಚಿತ್ರಕಲಾ ಶಾಲೆ: ಭಾಗ ೮ ’ಹ್ಯಾಂಡ್ಸ್ ಫ್ರೀ ಸಂಗೀತೋತ್ಸವ
(೨೦)
ಕಥೆಗೂ ವ್ಯಾಖ್ಯೆಗೂ ಇರುವ ವ್ಯತ್ಯಾಸವೆಂದರೆ, ಎರಡನೆಯದರಲ್ಲಿ ಎಲ್ಲವನ್ನೂ ಸ್ಪಷ್ಟಗೊಳಿಸುತ್ತಿದ್ದೇವೆಂದು ಮತ್ತೆ ಮತ್ತೆ ಹೇಳುತ್ತಿರಬೇಕು. ಕಥೆ-ಕಾದಂಬರಿಗಳು ತಾವೇತಾವಾಗಿ ಅದನ್ನು ಮಾಡುವುದರಿಂದ ಅವುಗಳಲ್ಲಿ, ನನ್ನ ಮಾತಿನ ಅರ್ಥವೇನಪ್ಪಾ ಅಂದ್ರೆ ಎಂಬಂತಹ ವಾಕ್ಯಗಳು ಕಡಿಮೆಯೇ. ಆದರೆ ಇವೆರಡರ ನಡುವಣ ವ್ಯತ್ಯಾಸವು ತಾತ್ವಿಕವಾಗಿ ಮಾಯವಾಗಿ ಕಾಲವೇ ಸರಿದಿವೆ. ಇಲ್ಲಿಯವರೆಗಿನ ಈ ಕಥೆಯಲ್ಲಿನ ನನ್ನ ಮಾತುಗಳ ಅರ್ಥ ಏನಪ್ಪಾ ಅಂದ್ರೆ, ಅನೇಖನಿಗೆ ’ತೆಂಗಿನ ಮರದಲಿ ಇಟ್ಟಿಗೆ ಹಣ್ಣು’ ಮತ್ತು ಇನ್ನೂ ಕಿಂಡಿಯಲ್ಲಿ ನೇತಾಡುತ್ತಿದ್ದ ಪ್ರಶ್ನಾಮೂರ್ತಿ ಇವರಿಬ್ಬರೂ ವಿದ್ಯಾರ್ಥಿಗಳಾಗಿದ್ದ ’ನಮ್ಮ ತವಕ ತಲ್ಲಣಗ’ಳಿಗೆ ಒಳ್ಳೆಯ ಉಪಮೆಗಳಾಗಿ ಒದಗಿಬಂದಿದ್ದವು, ಈ ಎರಡೂ ಸಿಂಗಲ್-ಕೋಟ್ಸಿನ ಕನ್ನಡದ ಪುಸ್ತಕಗಳು ಆಗ ಇನ್ನೂ ಪ್ರಕಟವಾಗಿಲ್ಲದಿದ್ದರೂ ಸಹ.
ಓದುವುದಕ್ಕೆ ಹೆದರಿ ಚಿತ್ರಬಿಡಿಸಲು ಬಂದಿದ್ದವರೇ ಹೆಚ್ಚಿದ್ದರು ನಮ್ಮ ಗೆಳೆಯರಲ್ಲಿ ಎಂಬ ಸುದ್ದಿಯನ್ನು ಅರಹುವ ಈ ವಾಕ್ಯವನ್ನು ಓದುವಂತೆ ಬರೆಯುವ ಸಾಮರ್ಥ್ಯದ ಈ ’ಯು’ಟರ್ನ್ ಹಂತದ ಹತ್ತಿರ ಬರಲು ಏಳೇಳು ಜಗತ್ತು ಸುತ್ತಿ ಬಂದಂತಹ ಹಿಂಸೆಯನ್ನು ಅನುಭವಿಸಿರುವುದು ಸುಳ್ಳಲ್ಲ. ಕಲಾವಿದರನ್ನು ಬಹುವಾಗಿ ಕಾಡಿಸುವ ದೆವ್ವವೆಂದರೆ ಅದು ಬರವಣಿಗೆಯೇ. ಇಂದಿಗೂ ಪರಿಷತ್ತಿನ ಪಕ್ಕದಲ್ಲಿ, ಬೆಂಗಳೂರಿನಲ್ಲಿಯೇ ಅಂದೊಮ್ಮೆ ಇದ್ದಂತಹ ’ಕಪ್ಪುಬಿಳುಪು ವರ್ಣಕಲಾ ಶಾಲೆ’ಯಲ್ಲಿ ಇನ್ನೂ ಪಾಠ ಹೇಳುತ್ತಿರುವ ಕಲಾ ಉಪಾಧ್ಯಾಯರನೇಕರು, ಇಂದಿಗೂ ಸಹ ಕನ್ನಡದಲ್ಲಿ ಸಾಲೊಂದನ್ನು ಬರೆದರೆ ಅದರಲ್ಲಿ ಎರಡು ತಪ್ಪಿರುತ್ತವೆ, ಅದೇ ಇಂಗ್ಲೀಷಿನಲ್ಲಿ ಬರೆದರೆ ಸಾಲೊಂದಕ್ಕೆ ಮೂರು ತಪ್ಪುಗಳಿರುತ್ತವಷ್ಟೇ. ಸಾಹಿತಿಗಳು ಚಿತ್ರಬರೆದಂತೆ ಇದು.
(೨೧)
ಆ ಕಡೆಯಿಂದ ವೀರಾ, ನೇತಾಡುತ್ತಿದ್ದ ಪ್ರಶ್ನೆಯ ಕುಂಡದ ಸುತ್ತಲೂ ವಿಕ್ರಮನ ಚಿತ್ರವನ್ನು ಬಿಡಿಸಿಟ್ಟಿದ್ದ, ಇದ್ದಲಿನಲ್ಲಿ, ಗೋಡೆಯ ಮೇಲೆ. ಕೂಡಲೇ ನೋಡಿದವರಿಗೆ ವಿಕ್ರಮನ ಹೆಗಲ ಮೇಲಿನ ಬೇತಾಳವಾಗಿತ್ತು ಪ್ರಶ್ನಾಕುಂಡಿ. ಇದು ಚಿತ್ರಕಲಾ ವಿಭಾಗದ ಸ್ಟುಡಿಯೋದೊಳಗೆ ನಡೆಯುತ್ತಿದ್ದ ಕಥೆ.
’ಉಫ್’ ಎಂದರೆ ಉದುರಿ ಹೋಗುವ ಇದ್ದಿಲು, ಕಲಾಮಾಧ್ಯಮಗಳಲ್ಲೇ ಅತ್ಯಂತ ’ನಶ್ವರ’ವಾದುದು. ಜಲ, ತೈಲ, ಆಕ್ರಲಿಕ್, ಕ್ರೇಯಾನ್-ಯಾವುದೇ ಕಲಾಮಾಧ್ಯಮವಿರಲಿ ಅವಕ್ಕೆ ಅಂಟುಗುಣವಿರಬೇಕು (ಫಿಕ್ಸೆಟಿವ್). ಮಾನವರಿಗೆ ಗುರುತ್ವಾಕರ್ಷಣೆ ಇದ್ದಂತೆ ಇದು. ಇಲ್ಲದಿದ್ದಲ್ಲಿ ಬರೆದ ನಂತರವೂ ಹಾಳೆಯ ಮೇಲೆ, ಕ್ಯಾನ್ವಾಸಿನ ಮೇಲೆ ದೃಶ್ಯಜಗತ್ತಿರುವುದಿಲ್ಲ, ಉದುರಿಹೋಗಿಬಿಟ್ಟಿರುತ್ತದೆ, ತಳಭದ್ರವಿಲ್ಲದ ಮಾನವರು ತಮ್ಮೊಳಗಿನ ಆಂತರಿಕ ತುಮುಲಕ್ಕೆ ಉತ್ತರ ಹುಡುಕುತ್ತ ಯಾವ್ಯಾವದೋ ಗ್ರಹಗಳಿಗೆ (ನವಗ್ರಹ, ಗುರುಬಲ ಇತ್ಯಾದಿ) ಹಾರಿಹೋಗುತ್ತಿಲ್ಲವೆ, ಹಾಗೆ ಇದು ಎಂದು ಕಲಾಮಾಧ್ಯಮಗಳನ್ನು ಹೇಗೆ ಬಳಸುವುದು ಎಂಬುದರ ಬಗ್ಗೆ ನೇತಾಡುತ್ತಿರುವ ಪ್ರಶ್ನಾಮೂರ್ತಿಗೆ, ಆತ ಇದ್ದಂತೆಯೇ, ಇರುವಲ್ಲಿಯೇ ಪಾಠ ಹೇಳತೊಡಗಿದ ಆತನ ಸೀನಿಯರ್ ನಲ್ಲಸಿವನ್ ಭಾಯ್. ಸೀ-ನಿಯರ್ ಅಂದರೆ ಹತ್ತಿರದಿಂದ ನೋಡು ಎಂದರ್ಥ. ಕಲಾಶಾಲೆಗಳಲ್ಲಿ ಸೀನಿಯರ್ಗಳೇ ನಿಮ್ಮ ನಿಜವಾದ ಗುರುಗಳು ತಿಳಿಯಿತೇ? ಎಂದ ’ನಸೀಬ್’ (ನಲ್ಲಸಿವನ್ ಭಾಯ್).
ಪ್ರಶ್ನೆಗೆ ಸಿಟ್ಟು ನೆತ್ತಿಗೇರಿ, ನೆತ್ತಿಯಿದ್ದ ಬುರುಡೆಯು ಕಿಂಡಿಯ ಮೇಲುಭಾಗಕ್ಕೆ ಒಡೆದು, ಆತ ಕಿರುಚಿದ್ದು ಹೀಗೆ, ಏಯ್, ನಸೀ. ನಿನ್ನ ನಸೀಬು ಬರಕಸ್ತಾಗುತ್ತದೆ, ನಾನು ಕೆಳಗಿಳಿದರೆ. ನನ್ ಮಗ್ನೆ. ನನಗೇ, ಕರಿ ಇದ್ದಲಿನಂತಿರುವವನಿಗೇ ಚಾರ್ಕೋಲಿನ ಗುಣಲಕ್ಷಣ ಹೇಳಿಕೊಡ್ತೀಯಾ. ಹಸಿ ಹಸಿಯಾಗಿ ಒದ್ದು ಕೊಲ್ತೇನೆ ನಿನ್ನ ನಸಿ ಎಂದ.
ನಸಿಯ ಭಾವವನ್ನು ಕೆದಕಲು ಸಾಧ್ಯವಿರಲಿಲ್ಲ; ಅಂದರೆ ನಸಿಬ್ ಯಾವುದೇ ಭಾವವನ್ನು ಪ್ರಕಟಪಡಿಸಿದ್ದನ್ನು ಯಾರೂ ಎಂದೂ ನೋಡಿದ ಉದಾಹರಣೆಯೇ ಇರಲಿಲ್ಲ. ಆತ ಸಹಜವಾಗಿ ಎಂಬಂತೆ ಮಾತನ್ನು ಮುಂದುವರೆಸಿದ್ದ, ಇದ್ದಿಲು ಅಥವ ಚಾರ್ಕೋಲ್ಗೆ ಮಾತ್ರ ಅಂಟುಗುಣವಿಲ್ಲ. ದೇಹಾತೀತ’ವಾದ’ ಮಾಡುವವರೂ ಸಹ ಅದರಾಚೆಗಿನ ’ಆತ್ಮ’ವೆಂಬ ಅಂತಿಮ ಗುರುತ್ವಾಕರ್ಷಣೆಗೆ ಒಳಗಾಗಲಿಲ್ಲವೆ? ಹಾಗಲ್ಲ ಇದ್ದಿಲು ಮಾಧ್ಯಮ. ಅದನ್ನು ರಚಿಸಿ, ಬೇಕಾದಂತೆ ಬರೆದು, ಚಿತ್ರವಿರುವ ಕಾಗದವನ್ನು ಒಮ್ಮೆ ಒದರಿ ನೋಡಿ. ಇದ್ದೂ ಇಲ್ಲದಂತೆ, ಅಥವ ನಾವು ಶಾಲಾ ವಿದ್ಯಾರ್ಥಿಗಳಾಗಿದ್ದಾಗ ಪ್ರಸಿದ್ದವಾಗಿದ್ದ ’ಇರಬೇಕು, ಇರಬೇಕು, ಅರಿಯದ ಕಂದನ ತರಹ’ ಕನ್ನಡ ಚಲನಚಿತ್ರದ ತರಹ ಈ ಮಾಧ್ಯಮ, ಎಂದು ನಿರ್ವಿಘ್ನವಾಗಿ ತಲೆ ಎತ್ತಿಕೊಂಡು, ದಾಡಿ ನೀವುತ್ತ, ನಾಟಕೀಯವಾಗಿ ಶಿಲ್ಪಕಲಾವಿಭಾಗದಲ್ಲೇ ಇದ್ದ ದೊಣ್ಣೆಯೊಂದನ್ನು ಹಿಡಿದು ಆಕಾಶದೆಡೆ ತೋರಿಸುತ್ತ, ’ಟೆನ್ ಕಮಾಂಡ್ಮೆಂಟ್’ ಸಿನೆಮದ ಮೋಸಸನಂತೆ ಪ್ರಶ್ನೆಯೆಡೆಗೇ ಗಮನವನ್ನು ಕೇಂದ್ರೀಕರಿಸಿ ಮಾತುಗಳನ್ನು ಮೇಲೆ ತೇಲಿಬಿಟ್ಟಿದ್ದ ನಸೀಬ್. ಪ್ರಶ್ನೆ ಸಣಕಲನೇನೋ ಸರಿ, ಆದರೆ ನಸೀಬ್ ಮಾತ್ರ ಪ್ರಶ್ನಾತೀತನಂತೆ, ಬೆದರುಬೊಂಬೆಗೇ ಅಂಗವಸ್ತ್ರ ಧರಿಸಿದಂತಿದ್ದ. ’ಆತನ ಹೊಟ್ಟೆಗೆ ಕೈಹಾಕಿದರೆ ಬೆನ್ನ ಮೂಳೆಯ ಸ್ಪರ್ಶ ಗ್ಯಾರಂಟಿ’ ಎಂಬುದು ಆತನ ಬಗೆಗೆ ಪರಿಷತ್ತಿನಲ್ಲಿಯೇ ಜಗತ್ಪ್ರಸಿದ್ಧವಾಗಿದ್ದ ನಾಣ್ಣುಡಿಯಾಗಿತ್ತು.
ಪ್ರಶ್ನೆಯ ಮುಖವಿದ್ದ ಶಿಲ್ಪಕಲಾ ವಿಭಾಗದಲ್ಲಿ ಹಬ್ಬವೋ ಹಬ್ಬ. ಚಿತ್ರಬಿಡಿಸುವವರ್ಯಾರೋ, ಶಿಲ್ಪರಚಿಸುವವರ್ಯಾರೋ. ಪ್ರಶ್ನೆಯು ತನ್ನ ಮೇಲೆ ಎಲ್ಲರ ಗಮನ ಹರಿದಿರುವುದು, ಅದೂ ಆ ಗಮನ ಇನ್ನೂ ಹರಿದು ಹೋಗದೇ ಇರುವುದನ್ನು ಕಂಡು ಒಳಹೊರಗೆಲ್ಲಾ ಖುಷಿಪಡುತ್ತಿದ್ದ. ಹಾಲಿವುಡ್ ಸಿನೆಮದಲ್ಲಿ ಕಾಡುಮನುಷ್ಯರು ಕಾಡಿಗೆ ಬಂದ ಪ್ಯಾಟೇ ಹೈದನ್ನ ಹಿಡಿದು ಕಟ್ಟಾಕಿ ಕುದಿವ ನೀರಿನಲ್ಲಿ ಬೇಯಿಸುತ್ತಿರುವಂತಿದೆ ನಿನ್ನ ಬಗ್ಗೆ ನಾನು ರಚಿಸಿರುವ ರೇಖಾಚಿತ್ರ, ಮತ್ತು ಎದುರಿಗಿರುವ ದೃಶ್ಯ ಎಂದು ಅಚಾನಕ್ಕಾಗಿ ಎದ್ದು ನಿಂತುಬಿಟ್ಟ, ಧೂಳುಕೊಡವಿಕೊಂಡು ’ರಮಾನಾಥೆಮ್ಮೆಸ್’. ಆತನ ನಿಜದ ಹೆಸರು ರ.ಮಾ.ನಾ.ಥೆಮ್ಮೆಸ್ಸ ಅಥವ ರಮಾನಾಥ್.ಎಮ್.ಎಸ್ಸ ಎಂಬ ಬಗ್ಗೆ ಕಲಾವಿದರ ಗುಂಪಿನಲ್ಲಿಯೇ ಇಂದಿಗೂ ಎರಡು ಅಭಿಪ್ರಾಯವಿರುವುದರ ಬಗ್ಗೆ ಎಲ್ಲರೂ ನೆಮ್ಮದಿಯಾಗಿದ್ದಾರೆ. ಆದರೆ ಆತನ ಸ್ಕೆಚ್ ಮಾಡುವ ನೈಪುಣ್ಯತೆ, ಅದನ್ನು ನಿರಂತರವಾಗಿ ಮಾಡುವ ಆತನ ಹಠಮಾರಿತನವನ್ನು ನೋಡಲು ಆತನ ಸಹಪಾಠಿಗಳೇ ಆತನ ಸುತ್ತಲೂ ನಿಂತುಬಿಡುತ್ತಿದ್ದರು.
ಆತನಿಗೂ ಅದರ ಅಭ್ಯಾಸದಮೆಲಭ್ಯಾಸವು ಅದೆಷ್ಟು ಆಗಿಹೋಯಿತೆಂದರೆ, ಒಂದು ದಿನ ಆತ ಗಿಡವೊಂದರ ಪಕ್ಕ ಚಕ್ಕಂಬಕ್ಕಲ ಹಾಕಿಕೊಂಡು, ಸ್ಕೆಚ್ ಪುಸ್ತಕ, ಪೆನ್ಸಿಲ್ ಹಿಡಿದು ಸುಮ್ಮನೆ ಕುಳಿತುಬಿಟ್ಟಿದ್ದ. ಆತನ ಸುತ್ತಲೂ ಇಬ್ಬರು ನಿಂತಿದ್ದರು. ಏನು ವಿಷಯ ಎಂದು ಪ್ರಾಧ್ಯಾಪಕರೊಬ್ಬರು ವಿಚಾರಿಸಲಾಗಿ, ಮಿನಿಮಂ ಮೂರು ಜನ ನೋಡದೇ ಇದ್ದಲ್ಲಿ ಆತ ಸ್ಕೆಚ್ ಪ್ರಾರಂಭಿಸುವುದೇ ಇಲ್ಲವಂತೆ ಮೇಡಂ ಎಂದಿದ್ದಳು ಸುತ್ತಲಿದ್ದವರಲ್ಲೊಬ್ಬಾಕೆ. ಯಾಕಯ್ಯಾ, ನೀನೇನು ದೊಡ್ಡ ಹುಸೇನೋ ಪಿಕಾಸೋನೋ ಅಂದುಕೊಂಡುಬಿಟ್ಟೆಯಾ, ಡೆಮಾನ್ಸ್ಟ್ರೇಷನ್ ಮಾಡೋಕೆ? ಎಂದು ಸಿಟ್ಟಾದರು ಪ್ರಾಧ್ಯಾಪಕಿ.
ಓಕೆ ಮೇಡಂ, ನಿಮ್ಮನ್ನೂ ಸೇರಿ ಈಗ ಮೂವರಾದಿರಿ. ಈಗ ಸ್ಕೆಚಸ್ ಶುರು ಮಾಡಿಬಿಡ್ತೀನಿ ಮೇಡಂ. ಒಂದತ್ತು ನಿಮಿಷ ಹಾಗೇ ನಿಂತಿರಿ ಎಂದು ರಪರಪನೆ ಚಿತ್ರಣಕ್ಕೆ ತೊಡಗಿದ್ದ ರಮಾನಾಥೆಸ್ಸೆಮ್. ಸ್ವತಃ ಉಪಾಧ್ಯಾಯರುಗಳೇ ರಮಾನಾಥೆಸ್ಸೆನ್ ಅಥವ ’ರಸ್ಸೆನ್’ ಅಥವ ’ರಶ್ಯೆನ್’ ಎಂಬ ವಿದ್ಯಾರ್ಥಿಯ ಸ್ಕೆಚಿಂಗ್ ಸಾಮರ್ಥ್ಯದ ಅಭಿಮಾನಿಗಳಾಗಿಹೋಗಿದ್ದರು, ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ ಸಹ. ಆಗೆಲ್ಲಾ ಸೋವಿಯಟ್ ರಷ್ಯ ಜೀವಂತವಿದ್ದುದ್ದರಿಂದ, ರಷ್ಯದ ರಾದುಗ ಪ್ರಕಟಣೆಗಳು ಕನ್ನಡದಲ್ಲೂ ಸಚಿತ್ರ ಪುಸ್ತಕವನ್ನು ಪ್ರಕಟಿಸುತ್ತಿದ್ದರಿಂದ, ಅವುಗಳೆಲ್ಲ ಅತ್ಯಂತ ಕಡಿಮೆ ಬೆಲೆಗೆ ಪರಿಷತ್ತಿನ ಸಮೀಪ ಈಗಲೂ ಇರುವ ನವಕರ್ನಾಟಕ ಪ್ರಕಟಣೆಯಲ್ಲಿ ದೊರಕುತ್ತಿದ್ದರಿಂದ, ಈ ’ರಶ್ಯೆನ್’ ಹೆಸರು ಆತನಿಗೆ ಹೆಚ್ಚು ಅಂಟಿಕೊಂಡುಬಿಟ್ಟಿತು. ಸೋವಿಯಟ್ ರಷ್ಯ ಬಿದ್ದ ಕಾಲಕ್ಕೆ, ಅದು ಬಿದ್ದ ಕಾರಣದಿಂದೇನಲ್ಲದೆ ನಮ್ಮ ರಶ್ಯನ್, ಉತ್ತರಭಾರತದ ಖ್ಯಾತ ಕಲಾಶಾಲೆಯೊಂದರಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಮುಗಿಸಿ, ಬಂದು ಕೆಲವೇ ವರ್ಷಗಳಲ್ಲಿ ಕಲಾಸೃಷ್ಟಿಯನ್ನು ನಿಲ್ಲಿಸಿ, ಕಲಾಬೋಧನೆಯನ್ನು ಕೈಗೊಂಡ. ಈಗಲೂ ರಶ್ಯನ್ ಚಿತ್ರ ಬಿಡಿಸಿದರೂ ಸಹ, ಕಲಾಭ್ಯಾಸವನ್ನು ಆತ ನಿಲ್ಲಿಸಿ ಯುಗಗಳೇ ಆದವು. ಆ ರೇಖಾಚಿತ್ರ ರಚನೆಯ ಕೈಚಳಕ, ಆ ಬೃಹತ್ ಬ್ರೌನ್-ಮಕ್ಕಳ ಪುಸ್ತಕಗಳಿಗೆ ರ್ಯಾಪರ್ ಹಾಕುತ್ತೇವಲ್ಲ ಅವು--ಶೀಟುಗಳನ್ನು ಯುದ್ಧದಲ್ಲಿನ ಶತ್ರುಗಳು ಎಂದು ಭಾವಿಸಿ ಆತ ತನ್ನ ಇದ್ದಿಲು, ಪೆನ್ಸಿಲುಗಳೆಂಬ ಶಸ್ತ್ರಾಸ್ತ್ರಗಳಿಂದ ಅದನ್ನು ಅಟ್ಯಾಕ್ ಮಾಡುತ್ತಿದ್ದ ಕಲಾತ್ಮಕತೆ ಈಗ ಮುಗಿದ ಅಧ್ಯಾಯ. ಆದ್ದರಿಂದಲೇ ಇರಬೇಕು, ಆಗಿನ ಆತನ ಚಿತ್ರರಚನೆಯ ನೈಪುಣ್ಯತೆಯ ಇಂದಿನ ನೆನಪು ಹೆಚ್ಚು ಅಪ್ಯಾಯಮಾನ!
(೨೨)
ಆ ವಿಶೇಷ ದಿನದಂದು ಅಥವ ಪ್ರಶ್ನಾರೂಪದ ರಾತ್ರಿ ೮.೩೦ರ ಸಮಯ: ಪ್ರಶ್ನೆಯ ಭೂಸ್ಪರ್ಷವು ಪ್ರಶ್ನೆಯಾಗೇ ಉಳಿಯತೊಡಗಿ ಗಂಟೆಗಳೇ ಕಳೆದುಹೋಗತೊಡಗಿದವು. ಅಣ್ತಮ್ಮ ಎಲ್ಲರಿಗೂ ಚಾಯ್ ತಂದುಕೊಟ್ಟು, ಶ್ಯಾಗಿ (ಶೇಷಗಿರಿ) ಮೂಲಕ ಪ್ರಶ್ನೆಗೂ ನೇತಾಡುತ್ತಿದ್ದಲ್ಲೇ ಒಂದಷ್ಟು ಕುಡಿಸಿದ್ದರು. ಹಳ್ಳಿಗಳ ಕಡೆ ದಿನರಾತ್ರಿಗಟ್ಟಲೆ ನೆಲಕ್ಕೆ ಕಾಲಿಡದೆ ಸೈಕಲ್ ಹೊಡೆಯುತ್ತಿದ್ದವನನ್ನು ನೋಡಲು ಜನ ತೂಕಡಿಸಿಕೊಂಡೇ ನೋಡುವ ಪ್ರಸಂಗದಂತಾಗಿಬಿಟ್ಟಿತ್ತು ’ಪ್ರಶ್ನಾರ್ಥಕತೆ’.
ಪ್ರಶ್ನೆ ನೇತಾಡುತ್ತಿದ್ದಲ್ಲೇ ಸತ್ತಲ್ಲಿ ಆತನ ಸಂಸ್ಕಾರಕ್ಕಾಗಿ ಕೆಳಕ್ಕಿಳಿಸುವುದು ಹೇಗೆ, ಆತನನ್ನು ಸುಡಬೇಕಾದರೆ ದೇಹ ಬಾಗಿಯೇ ಸೆಟೆದುಕೊಂಡಿರಬಹುದಾದ ಸಾಧ್ಯತೆ ಹೆಚ್ಚಿರುವುದರಿಂದ ಹಳ್ಳ ತೋಡುವಾಗ ಯಾವ ಶೇಪಿನಲ್ಲಿರಬೇಕು, ಅದೇ ಸುಡಬೇಕಾಗಿ ಬಂದ ಪಕ್ಷದಲ್ಲಿ, ಹರಿಶ್ಚಂದ್ರ ಘಾಟಿನ ಕರಂಟು ಒಲೆಯ ಚೌಕದೊಳಕ್ಕೆ ಈ ’ವಿ’ ಆಕಾರದಲ್ಲಿರುವ ದೇಹವನ್ನು ತಳ್ಳುವುದು ಹೇಗೆ, ಆತ ಸತ್ತಲ್ಲಿ ಆತನನ್ನು ಅಥವ ಆತನ ಶವವನ್ನು ಕೆಳಕ್ಕೆ ಇಳಿಸುವುದಾದರೂ ಏಕೆ, ಇದ್ದಲ್ಲೇ ಅಥವ ನೇತಾಡುತ್ತಿರುವಲ್ಲಿಯೇ ಕ್ರೈಸ್ತ ಧರ್ಮದಂತೆ ಒಂದು ಮರದ ಪೆಟ್ಟಿಗೆಯನ್ನು ರುಂಡ, ಮುಂಡವಿದ್ದೆಡೆ ಶಿಲ್ಪಕಲಾವಿಭಾಗದಲ್ಲಿ ಗೋಡೆಗೆ ಹಾಕುವುದೆಂತಲೂ, ಕುಂಡವಿದ್ದೆಡೆ ಒಂದು ಮಕ್ಕರಿಯನ್ನು ಗೋಡೆಗೆ ಗುಬ್ಬರಾಕಿ, ಬೌದ್ಧರ ಸ್ತೂಪದಂತೆಯೂ ಚಿತ್ರಕಲಾವಿಭಾಗದಲ್ಲಿ ಮಾಡಿಬಿಟ್ಟರೆ, ಪ್ರಶ್ನೆಯ ಮೇಲಿನರ್ಧ ಭಾಗವು ಕ್ರೈಸ್ತರ ನರಕಕ್ಕೂ, ಕೆಳಗಿನದ್ದು ಬೌದ್ಧರ ’ಇಲ್ಲದ ನರಕ’ಕ್ಕೂ ಹೋಗುತ್ತದೆ ಎಂಬ ಗಾಢ ಚರ್ಚೆಯು ಸ್ಕೆಚಿಂಗ್, ಡ್ರಾಯಿಂಗುಗಳ ನಡುವಿನ ಮಾತುಕತೆಗಳಲ್ಲಿ ನಡೆಯುತ್ತಲೇ ಇತ್ತು.
ಕಬಾಬು ಮಾತ್ರ ಟೆಕ್ನೋಸಾವಿ ಆದ್ದರಿಂದ ಅದೆಲ್ಲಿಂದಲೋ ’ಹ್ಯಾಂಡ್ಸ್ ಫ್ರೀ’ ತಂದು, ಇಂದಿನ ಟಿವಿಗಿಂತಲೂ ದೊಡ್ಡದಾಗಿದ್ದ ಆತನ ಪುಟ್ಟ ಟೇಪ್ ರೆಕಾರ್ಡರಿನಲ್ಲಿ ಆಗತಾನೇ ರಿಲೀಜ್ ಆಗಿದ್ದ ’ಪ್ರೇಮಲೋಕ’ ಸಿನೆಮದ ಹಾಡುಗಳನ್ನು ನೂರೊಂದನೇ ಬಾರಿ ಕೇಳುತ್ತಿದ್ದ. ಎಲ್ಲರ ಜೇಬಿನ ಎಟುಕಿಗೆ ಇಲ್ಲದ್ದರಿಂದ, ಮಿಕ್ಕವರ್ಯಾರೂ ಸಹ ’ಹ್ಯಾಂಡ್ಸ್ ಫ್ರೀ’ ಕೊಳ್ಳಲಾಗದೆ, ಅದರ ಬದಲಿಗೆ ಪರಸ್ಪರ ಮಾತುಕತೆಗಳಲ್ಲೇ ಕಾಲವನ್ನು ನಿಭಾಯಿಸತೊಡಗಿದ್ದರು, ಬಬಾಬು ತಮ್ಮ ಬಗ್ಗೆ ಕರುಣೆ ತೋರಿ ಒಂದರ್ಥ ಗಂಟೆ ಹ್ಯಾಂಡ್ಸ್ ಫ್ರೀಯನ್ನು ತಮಗೆ ಕೊಟ್ಟಾನೆಯೇ ಎಂದು. ಹಳ್ಳಿಗಳಲ್ಲಿ ಸಗಣಿ ನೆಲದಲ್ಲಿ ಕುಳಿತು ಬಡೂಟ ತಿನ್ನುವಾಗ, ಕೈಬಾಯಿಗಳನ್ನೇ ಕಡೆಗೇ ತಮ್ಮ ಕಣ್ಣುಗಳನ್ನು ಪೆಂಡುಲಮ್ಮಿನಂತೆ ಓಡಾಡಿಸುತ್ತ, ನೋಡುತ್ತ ಕೂರುವ ಕಂತ್ರಿನಾಯಿಗಳಂತೆ ನಾವೆಲ್ಲ ಕಬಾಬು ಸುತ್ತಲೂ ಆಗೆಲ್ಲಾ ಹ್ಯಾಂಡ್ಸ್ ಫ್ರೀಯನ್ನು ನಮಗೂ ಕೇಳಿಸಿಕೊಳ್ಳಲು ಕೊಟ್ಟಾನು ಎಂದು ನಿರೀಕ್ಷಿಸುತ್ತಿದ್ದುದು, ಇಂದು ಆತನ ಬಳಿ ಇರಬಹುದಾದ ಈಗಷ್ಟೇ ಮಾರುಕಟ್ಟೆಗೆ ಬಂದಿರುವ ಐಪಾಡಿನಾಣೆಗೂ ಸತ್ಯ.
ಕಬಾಬು ಮಾತ್ರ ಪ್ರಶ್ನೆಯ ಬಗ್ಗೆ, ಅಥವ ಆತನ ನೇತಾಡುತ್ತಿರುವ ಪೋಸಿನ ಬಗ್ಗೆ ಕರುಣೆ ಬಂದವನಂತೆ ಸ್ಟೂಲೊಂದರ ಮೇಲೆ ನಿಂತು, ಹ್ಯಾಂಡ್ಸ್ ಫ್ರೀ ಸೆಟ್ಟನ್ನು ಪ್ರಶ್ನೆಯ ಎರಡೂ ಕಿವಿಗೆ ಒಂದೇ ಕೈಯಲ್ಲಿ ಸಿಕ್ಕಿಸಿ, ಮತ್ತೊಂದು ಕೈಯಿಂದ ಟೆಲಿವಿಷನ್ ಸೆಟ್ಟಿನ ಗಾತ್ರದಲ್ಲಿದ್ದ ತನ್ನ ಟೇಪ್ ರೆಕಾರ್ಡರಿನಲ್ಲಿ ’ನಿಂಬೇ ಹಣ್ಣಿನಂತ ಹುಡುಗೀ ಬಂತೂ ನೋಡು’ ಹಾಡನ್ನು ತಡಕಾಡಿ ಆನ್ ಮಾಡಿ, ಪ್ರಶ್ನೆಯಿಂದ ’ಶಹಬ್ಬಾಸ್ ಕಬಾಬು’ ಎನ್ನಿಸಿಕೊಂಡು ಒಂದರೆಕ್ಷಣ ಹಾಡನ್ನು ಕೇಳಿಸಿಕೊಂಡು, ದೇಹವಿಸರ್ಜನೆಯ ಸ್ವಾಧವನ್ನನುಭವಿಸುವನಂತೆ ಅಥವ ನಿತ್ಯಾನಂದದಲ್ಲಿರುವವನಂತೆ ಮುಖಭಾವ ಪ್ರಕಟಿಸಿದ್ದ ಪ್ರಶ್ನೆ. ಮರುಕ್ಷಣವೇ ಅಯ್ಯಯ್ಯೋ, ಓಯ್ತೋ, ನನ್ನ ಕಿವಿ ಓಯ್ತೋ ಎಂದು ತಲೆಯನ್ನು ದೆವ್ವ ಹಿಡಿದವರಂತೆ ಸಾಧ್ಯವಿರುವ ದಿಕ್ಕುಗಳಲ್ಲೆಲ್ಲಾ ಅಲ್ಲಾಡಿಸತೊಡಗಿದ, ಇಯರ್ ಫೋನ್ ಅಥವ ಹ್ಯಾಂಡ್ಸ್ ಫ್ರೀ ಸೆಟ್ಟಿನಿಂದ ಬೇಗ ಬಿಡುಗಡೆ ಪಡೆಯಲು.
ಆಗಿದ್ದಿದ್ದಿಷ್ಟು. ಟೀವಿಯಷ್ಟು ಭಾರವಿದ್ದ ಟೇಪ್ ರೆಕಾರ್ಡರಿನಲ್ಲಿ ಹಾಡು ಹಾಡಿಸಿ, ಅದನ್ನು ವಯರ್ ಮೂಲಕ ಪ್ರಶ್ನೆಯ ಕರ್ಣಾನಂದಕ್ಕೆ ಕಾರಣನಾದ ಕಾರಣಕ್ಕೇ ದಿವ್ಯಾನಂದಿತನಾದ ಕಬಾಬು, ಆ ಖುಷಿಯಲ್ಲಿ ಟೇಪ್ ರೆಕಾರ್ಡರನ್ನು ಸ್ಟೂಲಿನ ಮೇಲಿರಿಸಿ ತಾನು ಅದರಿಂದ ಕೆಳಗಿಳಿದಿದ್ದ, ಅಥವ ಕೆಳಗಿಳಿದ ಮೇಲೆ ಅದೇ ಸ್ಟೂಲಿನ ಮೇಲೆ ರೆಕಾರ್ಡರನ್ನಿರಿಸಿದ್ದ, ಅಥವ ಈ ಎರಡರಲ್ಲೊಂದನ್ನು ಮಾಡಿರುವೆ ಎಂದು ಭಾವಿಸಿಬಿಟ್ಟಿದ್ದ. ರೆಕಾರ್ಡರ್ ಇರಿಸಿದ್ದೇನೆಂದು ಭಾವಿಸಿ, ಚೇರಿಗೆ ಬೆನ್ನು ತಿರುಗಿಸಿ ಶಿಲ್ಪಕಲಾ ವಿಭಾಗದ ಬಾಗಿಲಿನೆಡೆಗೆ ನಡೆಯತೊಡಗಿದ್ದ. ಆದರೆ ವಯರ್ ಸಾಲದೆ ರೆಕಾರ್ಡರ್ ಮತ್ತು ಕುರ್ಚಿಯ ನಡುವೆ ಕೇವಲ ಅರ್ಧ ಇಂಚಿನ ವ್ಯತ್ಯಾಸ ಹಾಗೆ ಉಳಿದುಬಿಟ್ಟಿತು. ಇಡೀ ಟಿವಿಯ ಅಥವ ರೆಕಾರ್ಡರಿನ ಭಾರವು ಪ್ರಶ್ನಾಮೂರ್ತಿಯ ಎರಡೂ ಕಿವಿಗಳ ಒಳಗಿದ್ದ ವಯರುಗಳಿಗೆ ವರ್ಗಾಯಿಸಲ್ಪಟ್ಟು, ಗೋಡೆಗೆ ಅದುಮಿ ಹಿಡಿದಿದ್ದ ಕೈಗಳಿಂದ ವಯರನ್ನು ತೆಗೆಯಲಾಗುತ್ತಿರಲಿಲ್ಲ. ಕಿವಿಗಳಿಗೆ ದಾರಕಟ್ಟಿಕೊಂಡು ಐದಾರು ಕೇಜಿ ಗುಂಡುಕಲ್ಲುಗಳನ್ನು ಎತ್ತುವ ಸಾಹಸವನ್ನು ಆಗಿನ ಕಪ್ಪುಬಿಳುಪು ಟಿವಿಯಲ್ಲಿ ತೋರಿಸುತ್ತಿದ್ದರಲ್ಲ, ಹಾಗೆ ಕಾಣುತ್ತಿದ್ದ ಪ್ರಶ್ನಾಮೂರ್ತಿ ಸದ್ಯದ ಅವತಾರದಲ್ಲಿ. ವ್ಯತ್ಯಾಸವಿಷ್ಟೇ: ಕುಂಗ್ ಫೂ ಮಾಸ್ಟರನಂತೆ ಯರ್ರಾಬಿರ್ರಿ ಆತ ನೋವಿನಿಂದ ಕಿರುಚುತ್ತಿದ್ದರೆ, ಸುತ್ತಲಿನ ವಿದ್ಯಾರ್ಥಿಗಳೆಲ್ಲರೂ ಆತ ಎಷ್ಟು ಹೊತ್ತು ಹಾಗೇ ಇರಬಲ್ಲ ಎಂಬುದರ ಬಗ್ಗೆ ಬಾಜಿ ಕಟ್ಟತೊಡಗಿದ್ದರು. ಸೋತವರೂ ಕೂಡ, ಆತ ಎಷ್ಟು ಹೊತ್ತು ಕಿರುಚುತ್ತಾನೆ ಎಂದು ನಾನು ಬಾಜಿ ಮಾಡಿದ್ದು, ಎಷ್ಟು ಹೊತ್ತಿ ರೆಕಾರ್ಡರನ್ನು ಕಿವಿಯಿಂದ ಎತ್ತಿಹಿಡಿಯಬಲ್ಲ ಎಂಬುದರ ಬಗ್ಗೆ ಅಲ್ಲ ಎಂದೆಲ್ಲ ಖ್ಯಾತೆ ತೆಗೆಯತೊಡಗಿದರು. ಯಾರಿಗೂ ಸೋಕದಂತಿದ್ದ ಕುಮಾರಿ ಸೋಕು (ಸೋಡಾಬುಡ್ಡಿ ಕುವರಿ) ಎಂದಿನಂತೆ ಇಡೀ ಸಂದರ್ಭವನ್ನು ತಪ್ಪರ್ಥಮಾಡಿಕೊಂಡು, ಕರುಣೆಯಿಂದ, ಟೇಪ್ ರೆಕಾರ್ಡರಿನ ಬಳಿ ಓಡಿಹೋಗಿ, ವಾಲ್ಯೂಮ್ ತಿರುಗಿಸಿದ್ದಳು. ಅದು ಕಡಿಮೆಯಾಗಲೆಂಬ ಸೋದ್ದಿಶ್ಯವು ವಿರುದ್ಧಾರ್ಥಕವಾಗಿ ಹೆಚ್ಚಿದ ಸವಂಡಾಗಿ, ಕಿವಿಗಳ ತೂಕದೊಂದಿಗೆ ಸದ್ದಿನ ತೂಕವೂ ಹೆಚ್ಚಾಯಿತು ಪ್ರಶ್ನಾಮೂರ್ತಿಗೆ. ನಿಲ್ಲಿಸ್ರೋ, ಜೊತೆಗೆ ಕಿವಿಯಿಂದ ಕಿತ್ತಾಕ್ರೋ ಈ ವೈರುಗಳನ್ನ ಎಂದ ಪ್ರಶ್ನೆಗೆ ತನ್ನ ಸಮಸ್ಯೆಗಳಿಗೆ ಪರಿಹಾರದ ತುರ್ತು ಅಗತ್ಯವಾಗಿತ್ತೇ ಹೊರತು, ಸಮಸ್ಯೆಗಳು ಯಾವ್ಯಾವು ಎಂದು ಸ್ಪಷ್ಟವಾಗಿ ಗ್ರಹೀತವಾಗುತ್ತಿರಲಿಲ್ಲ. ಸಿನೆಮದಲ್ಲಿ ಬಾರಿ ಗಲಭೆಯ ಸೀನೊಂದು, ಎಡಿಟರನ ಕೈಚಳುಕದಿಂದ ಹಾಗೇ ಕ್ರಮೇಣ ಸದ್ದು-ದೃsಶ್ಯವು ಇಮರಿ ಹೋಗುತ್ತದಲ್ಲ, ಮುಂದಿನ ಸೀನಿಗೆ, ಹಾಗೆ ಆ ಘಟನೆ ಇಮರಿದ ನೆನಪು ಈಗ ನನಗೆ.///