ನೆನಪಿನ ಚಿತ್ರಕಲಾ ಶಾಲೆ ೧೦ --’ನಾನು ಸೋ.ಕು ಉರುಫ್ ಕಲಾ.ಕೆ’
(೨೬)
ಸೋಕುಮಾರಿ ಉರುಫ್ ಕಲಾ.ಕೆ, ೨೦೧೧:
ಇತ್ತೀಚೆಗೆ ಫೇಸ್‌ಬುಕ್ಕಿನಲ್ಲಿ ಒಂದು ಅಸಹಜ ಬೇಡಿಕೆ ಬಂದಿತ್ತು ನನ್ನ ಅಕೌಂಟಿಗೆ. ಅನಾಮಿಕರು ಕಳಿಸುವ ದರ್ಶನ-ರಹಿತ ಬೇಡಿಕೆಗಳ ಹಿಂದೆ ಸದಾ ಒಂದು ಹೆಣ್ತನವನ್ನು ಕುರಿತ ಆದಿಮ ಆಕರ್ಷಣೆಯೊಂದಿರುತ್ತದೆ. ಅಂದರೆ, ಅನಾಮಿಕವಾದ ಚಿತ್ರ-ಪತ್ರಗಳಿಗೆ ತನ್ನದೇ ಆದ ಒಂದು ಎರೋಟಿಕ್ ಗುಣ ಬಂದುಬಿಡುತ್ತದೆ. ಜಾನ್ ಬರ್ಜರ್ ಬರೆಯುತ್ತಾನಲ್ಲ ಹಾಗೆ. ಹೆಣ್ಣಿರಲಿ ಗಂಡಿರಲಿ, ನೋಡುತ್ತಿರುವ ಕಣ್ಣು ಗಂಡಿನಂತೆ ವರ್ತಿಸುತ್ತದೆ (ಅಥವ ಫ್ರಾಯ್ಡ್ ಹೇಳುವಂತೆ ಶಿಶ್ನದಂತೆ ನಿಲುವು ತಾಳಿಬಿಡುತ್ತದೆ) ಮತ್ತು ನೋಡಲ್ಪಡುತ್ತಿರುವುದು ಹೆಣ್ಣಿನಂತಾಗಿರುತ್ತದೆ (ಫ್ರಾಯ್ಡ್ ಹೇಳುವಂತೆ, ಅದೇ..). ಹೆಣ್ಣಾಗಿ ನನಗೆ ಹಾಗನ್ನಿಸುವುದಿಲ್ಲ. ಪ್ರತಿಯೊಂದನ್ನೂ ಗಮನಿಸುವಲ್ಲಿ ಕಣ್ಣಂಚಿನಲ್ಲೇ ಬೈನಾಕ್ಯುಲರ್‌ಗಳನ್ನು ಇರಿಸಿಕೊಂಡಿರುವ ಸಾಮರ್ಥ್ಯ ಹೆಣ್ಣಿಗೆ ಮಾತ್ರವೇ ಸಾಧ್ಯ ಅನ್ನಿಸುತ್ತದೆ. ಇದು ನನ್ನ ಆಗಿನ ಕಲಾಶಾಲೆಯ ದಿನಗಳ ಅನುಭವದ ಒಟ್ಟಾರೆ ಮೊತ್ತ. ಈಗ ಬರ್ಜರನಿಗೂ ಫ್ರಾಯ್ಡನಿಗೂ ಏನೇ ವ್ಯತ್ಯಾಗಳಿವೆ ಎನ್ನಿಸಿದರೂ ಸಹ ಅವರಿಬ್ಬರಿಗೂ ಮೀರಿ, ನನಗೇ ದಕ್ಕಿದ ಒಂದು ಅನುಭವವಿದೆ. ಅದೇನೆಂದರೆ, ಜಗತ್ತನ್ನು ನೋಡುವುದೇ ಒಂದು ವಸಾಹತೀಕರಣ ಕ್ರಿಯೆ, ಮತ್ತು ಲಿಂಗಾತೀತತೆಯನ್ನು ಬಯಸುವುದೇ, ’ನಾವು ಲಿಂಗ-ವಸಾಹತೀಕರಣಕ್ಕೆ ಒಳಗಾಗಿದ್ದೇವೆ’ ಎಂದು ಒಪ್ಪಿಕೊಂಡಂತೆ ಎಂಬುದೂ ಹೌದು ಎಂಬ ಅಂಶ. ಹೆಣ್ಣಿಗೇ ನಿರ್ದಿಷ್ಟವಾದ ನೋಟ ಸಾಧ್ಯ ಎಂಬ ಸ್ತ್ರೀವಾದಿ ನಂಬಿಕೆಗಳ (ಲಿಂಡಾ ನಾಕ್ಲಿನ್ ಮುಂತಾದವರ ಬರವಣಿಗೆಗಳಲ್ಲಿರುವಂತೆ) ಹಿಂದೆ ಇಂತಹ ಹೊಳಹು ನನಗೆ ಸಿಕ್ಕಿದೆ. ಆದರೆ ನನಗೆ, ಇಲ್ಲಿನವಳಲ್ಲದ ಆಕೆಯ ನಂಬಿಕೆಯೂ ಸಹ ನನ್ನ ಮೇಲೊಂದು ನವೀನ ತೆರನಾದ ವಸಾಹತು ಆಕ್ರಮಣ ಎಂದೇ ಅನ್ನಿಸುತ್ತದೆ. ಹೆಣ್ಣು ಹೆಣ್ಣನ್ನು ಆಕ್ರಮಿಸುವ ಕ್ರಮವೇ ಇದು? ಇಲ್ಲಿನವಳಲ್ಲದ ಆಕೆ ಎಂದು ನಾನು ಕರೆದದ್ದು ಚಾರ್ವಾಕಿಯನ್ನು. ಆಕೆಗೆ ಆ ಹೆಸರನ್ನಿಟ್ಟವಳೂ ನಾನೇ. ಆಕೆಯ ವಿಷಯವನ್ನು ಮುಂದೆ ಹೇಳುತ್ತೇನೆ.
ಮೊದಲು ಆ ಫೇಸ್‌ಬುಕ್ ಮೆಸೇಜಿನ ಕಥೆ ಹೇಳಿಬಿಡುತ್ತೇನೆ. ನನ್ನ ಅಕೌಂಟಿಗೆ ಅದು ಬಂದಿತ್ತು. ಅದರ ಒಕ್ಕಣೆ ಹೀಗಿತ್ತು. ಡಿಯರ್ ಸೋಕು (ಉರುಫ್ ಕಲಾ ಕೆ) ನಾನು ಚಿತ್ರಕಲಾ ಪರಿಷತ್ತಿನಲ್ಲಿ ನಿನ್ನ ಕ್ಲಾಸ್‌ಮೆಟ್ ಆಗಿರುವೆ. ನನ್ನ ಹೆಸರನ್ನು ಹೇಳಿದರೆ ನಿನಗೆ ಗುರ್ತು ಸಿಗಲಾರದು. ಆದರೆ ’ಕ್ಯಾಂಡಿಮನ್’ ಎಂದರೆ ಅರ್ಥವಾಗಬಹುದು. ಈಗ ನಾವೊಂದಷ್ಟು ಮಂದಿ ಸೇರಿ ಬೆಂಗಳೂರಿನ ಕಳೆದೆರೆಡು ದಶಕಗಳ ಕಾಲದ-೬೦ ಹಾಗೂ ೭೦ರ ದಶಕದ--ದೃಶ್ಯಕಲೆಯ ಆಗುಹೋಗುಗಳ ಬಗ್ಗೆ ಒಂದು ಚಿತ್ರಕಲೆಯನ್ನು ಕುರಿತಾದ ಒಂದು ಕಮ್ಮಟವನ್ನು ಏರ್ಪಡಿಸಬೇಕೆಂದಿದ್ದೇವೆ. ಅದರ ಹೆಸರು ’ಬ್ಲಾಕಂಡೈ’ ಎಂದು. ಅದು ’ಬ್ಲಾಕ್ ಅಂಡ್ ಐ’ ಎಂಬರ್ಥ ನೀಡುತ್ತದೆ. ’ಐ’ ಎಂಬಲ್ಲಿ ನಾನೂ ಇದೆ ಮತ್ತು ’ಕಣ್ಣು’ ಸಹ ಇದೆ. ಪರಿಷತ್ತಿನ ಪಕ್ಕದಲ್ಲಿದ್ದ ಮತ್ತೊಂದು ಕಲಾಶಾಲೆ ’ಬಾಯ್ (ಬಿ.ಓ.ವೈ--ಬ್ಲಾಕ್ ಅಂಡ್ ವೈಟ್) ಅಂಡರ್‌ಗ್ರೌಂಡ್ ವರ್ಣಕಲಾಶಾಲೆ’ ನಿನಗೆ ಪರಿಚಿತವಿರಬೇಕು. ಏಕಿಲ್ಲ! ಪರಿಷತ್ತಿಗಿಂತಲೂ ಅತಿ ಹೆಚ್ಚು ಕಾಲ ಆ ’ಬಾಯ್’ ಕಲಾಶಾಲೆಯವರ ಸಹವಾಸದಲ್ಲಿ ಬದುಕಿದವಳು ’ಗರ್ಲು’ ನೀನು. ಕಮ್ಮಟವು ಆ ಕಲಾಶಾಲೆಯಲ್ಲಿಯೇ ನಡೆಯುವುದು. ಈಗ ಈ ’ಪತ್ರ’ ಬರೆಯಲು ಕಾರಣವೇನೆಂದರೆ, ವಿಚಾರಸಂಕಿರಣವು ಕಲಾಬರವಣಿಗೆಯ ಬಗೆಗಿದ್ದು, ಈ ವಿಷಯವನ್ನು ಕುರಿತಾದ ನಿಮ್ಮ ಲೇಖನವನ್ನು ಆದಷ್ಟೂ ಶೀಘ್ರವಾಗಿ ಕಳಿಸಿಕೊಡಬೇಕೆಂದೂ (೧೯೮೮ ಸೆಪ್ಟೆಂಬರ್ ೫ರ ಒಳಗೆ), ಲೇಖನ ತಲುಪಿದ ನಂತರ, ಕೂಡಲೆ ನಿಮಗೆ ಸಂಕಿರಣದ ದಿನಾಂಕವನ್ನು ತಿಳಿಸಲಾಗುತ್ತದೆ. ನನಗೆ ಗೊತ್ತು ನಿಮಗೆ ಬರವಣಿಗೆಯ, ಮಾತಿನ ಸಾಮರ್ಥ್ಯವಿದೆ ಎಂದು. ನಿರಾಶೆಗೊಳಿಸುವುದಿಲ್ಲ ಎಂಬ ಆಶಾವಾದದೊಂದಿಗೆ, ವಿಶ್ವಾಸಿ, ’ಹೆಸರಲ್ಲೇನಿದೆಮಹಾ’.
(೨೭)
ಫೇಸ್‌ಬುಕ್ಕಿನಲ್ಲಿ ಬಂದ ಈ ಮೆಸೇಜ್ ಸ್ವಲ್ಪ ಇರಿಟೇಟ್ ಆಗುವಂತೆಯೇ ಇತ್ತು. ತಾರೀಕು ನೋಡಿದರೆ ೧೯೮೮, ಇಂಟರ್‌ನೆಟ್ ಇರಲಿ ಅದನ್ನು ಈಗ ಪಂಟರುಗಳಂತೆ ಬಳಸುವ ಇಂದಿನ ಬಚ್ಚಾಗಳೇ ಆಗ ಹುಟ್ಟಿರಲಿಲ್ಲ. ಮತ್ತು ಬರವಣಿಗೆಯ ಶೈಲಿ, ಅಭಿವ್ಯಕ್ತಿ ಮುಂತಾದ ಲಕ್ಷಣಗಳೆಲ್ಲಾ ಪಕ್ಕಾ ಒಬ್ಬ ಟೀನೇಜರನು ಟೀನೇಜರಳಿಗೆ ಅಂದಕಾಲತ್ತಿಲೆ ಲೈನ್ ಹೊಡೆವ ಒಂದೇ ಉದ್ದೇಶದಿಂದ ಬರೆದಂತಿದೆ, ಅ.ಮು.ಮೊ (’ಅವ್ನಜ್ಜಿ ಮುಂಡಾ ಮೋಚ’ ಅಂತ, ಚಾಟ್ ಮತ್ತು ಫೇಸ್‌ಬುಕ್ ಭಾಷೆಗಳಿರುತ್ತವಲ್ಲ, ಲಾಲ್ (ಲಾಫ್ ಔಟ್ ಲೌಡ್), ಓ.ಎಂ.ಜಿ (ಓಹ್ ಮೈ ಗಾಡ್) ಇತ್ಯಾದಿಯ ಹಾಗೆ, ಹಾಗೆ ನಾನೇ ರೂಪಿಸಿದ್ದ ಹೆಸರಿನಿಂದ ಈತನನ್ನು ಬಯ್ದುಕೊಂಡೆ. ಫೇಸ್‌ಬುಕ್‌ನಲ್ಲಿ ಬರೆದ ಟಿಪ್ಪಣಿಯನ್ನು ’ಪತ್ರ’ ಎನ್ನುತ್ತಾನಲ್ಲ ಈಡಿಯಟ್. ಆದರೆ ೫ನೇ ಸೆಪ್ಟೆಂಬರ್ ೧೯೮೮ರ ತಾರೀಕು ಎಂದು ನಮೂದಿಸಲಾಗಿದ್ದದ್ದು ಸ್ವಲ್ಪ ನನ್ನಲ್ಲಿ ಏನೋ ಒಳಗಿನಿಂದ ಅಲುಗಿದಂತಾಯಿತು. ಕಾಲದ ವ್ಯತ್ಯಯ-೧೯೮೮ರ ’ಪತ್ರವು’ ಇಲ್ಲಿ ೨೦೧೧ರ ’ಫೇಸ್‌ಬುಕ್ ಮೆಸೇಜ್’ ಆಗಿ ರೂಪಾಂತರವಾಗಿದ್ದದ್ದು ತಮಾಷೆ ಎನ್ನಿಸುತ್ತಿತ್ತು. ಉಹ್ಞೂಂ, ಹಾಲಿವುಡ್ ಸಿನೆಮಗಳಂತೆ ಅಂದು ಯಾರೂ ಒಬ್ಬರು ಸತ್ತು, ಅದಕ್ಕೆ ಅಸಹಾಯಕ ಸಾಕ್ಷಿಯಾಗಿದ್ದ ಗೆಳೆಯರೆಲ್ಲನ್ನೂ ಒಬ್ಬೊಬ್ಬರನ್ನೇ ಆ ಸತ್ತವನ/ಳ ಅಪ್ಪ ಒಬ್ಬೊಬ್ಬರನ್ನಾಗಿ ಕೊಲ್ಲುತ್ತ ಬರುತ್ತಾನಲ್ಲ, ಅಂತಹ ಪ್ರಕರಣದ ಭೀತಿಯಲ್ಲವದು. ಅಂದಹಾಗೆ ಸತ್ತವನ ಅಪ್ಪನೇ ವಿಲನ್ ಎಂದು ತಿಳಿದಿದ್ದರೂ ಸಹ ಸಿನೆಮ ಪೂರ್ತಿ ಮುಖವಾಡವನ್ನು ಹಾಕಿಕೊಂಡೇ ಇರುತ್ತಾನಲ್ಲ ಆ ವ್ಯಕ್ತಿ. ತನ್ನ ಮುಖವನ್ನು ಕ್ಯಾಮರಾಕ್ಕೆ ತೋರಿಸಲಾಗದ ಆ ಪಾತ್ರಧಾರಿ ನಟನ ಬಗ್ಗೆ ’ಅಯ್ಯೋ’ ಎನ್ನಿಸುತ್ತದೆ, ಆತ ಕೊಂದವರೆಲ್ಲ ’ಅಯ್ಯಯ್ಯೋ’ ಎನ್ನುವಾಗ.
ಈ ಪತ್ರರೂಪದ ಮೆಸೇಜು ಅಥವ ಮೆಸೇಜು ರೂಪದ ಪತ್ರದ ಬಗ್ಗೆ ಸಾಕಷ್ಟು ಅಥವ ಬೇಕಾದಷ್ಟು ತಲೆಕೆಡಿಸಿಕೊಳ್ಳಲಿಲ್ಲ. ವಿಶೇಷವೆಂದರೆ ಅದು ಫೇಸಿಮಿಲಿ ಪತ್ರವಾಗಿತ್ತು. ಕಾಗದವೊಂದರಲ್ಲಿ ಕೈಬರಹದಲ್ಲಿ ಬರೆದು, ಅದನ್ನು ಸ್ಕ್ಯಾನ್ ಮಾಡಿ, ಅದನ್ನು ಅಟ್ಯಾಚ್ ಮಾಡಿ ನನ್ನ ಫೇಸ್‌ಬುಕ್ಕಿಗೆ ಕಳಿಸಿದ ಈ ’ಹೆಸರಲ್ಲೇನಿದೆಮಹಾ’ ಭೂಪ ಎಂತಹ ಮನೋಭಾವದವನಿರಬಹುದು ಎಂದು ಯೋಚಿಸುತ್ತಿದ್ದಾಗ, ನನ್ನ ಗೆಳತಿಯರು ಯಾರಾದರೂ ಪ್ರಾಕ್ಟಿಕಲ್ ಜೋಕ್ ಮಾಡುತ್ತಿರಬಹುದೇ ಎಂಬ ಅನುಮಾನವನ್ನೂ ನನ್ನಲ್ಲಿ ನಾನೇ ಹುಟ್ಟಿಹಾಕಿಕೊಂಡೆ. ಏಕೆಂದರೆ ಓನಾಮಿ ಕುಟ್ಟಿ ಅಡ್ಯಾರ್, ಶೃತಿ ಮೆಹತಾ ಮುಂತಾದ ಹೆಸರಿನಲ್ಲಿ ಅನಾಮಿಕವಾಗಿ ಅನೇಕರು ’ಅನೇಖ’ನ ಶೈಲಿಯಲ್ಲಿ ಈಗಾಗಲೆ ಬರೆಯತೊಡಗಿದ್ದಾರೆ ಫೇಸ್‌ಬುಕ್ಕಿನಲ್ಲಿ. ಅನಾಮಿಕವಾಗಿ ಬರೆವ ತವಕವು ಕಂಪ್ಯೂಟರ್ ಯುಗದಿಂದಲೇ ರೋಮಾಂಚಕಾರಿಯಾಗಿ ಪರಿಣಮಿಸಿದ್ದು ಎಂದು ಈ ಇಬ್ಬರೂ ಭಾವಿಸಿರಬಹುದು. ಆದರೆ ಈಗೆಲ್ಲಾ ಐ.ಪಿ ವಿಳಾಸ ಹುಡುಕಿ ಯಾರು ಯಾವ ಹೆಸರಿನಲ್ಲಿ ಬರೆಯುತ್ತಿದ್ದಾರೆ ಎಂದು ಪತ್ತೆಹಚ್ಚಬಹುದಂತಲ್ಲ. ಈ ’ಹೆಸರಲ್ಲೇನಿದೆಮಹಾ’ನ ಜಾತಕವನ್ನು ಟೆಕ್ನೋ-ಸಾವಿ ಸ್ನೇಹಿತರ ಸಹಾಯದಿಂದ ಹೊರಗೆಳೆಯಬೇಕು ಎಂದುಕೊಂಡು ಲಾಗ್‌ಆಫ್ ಆಗಿದ್ದೆ.
(೨೮)
ನೆಟ್ ಎಂಬುದು ಎಂತಹ ನೆಟ್‌ಲೂಸ್ ಮತ್ತು ಎರೋಟಿಕ್ ಎಂಬುದನ್ನು ಅರಿಯಬೇಕಾದರೆ ಈ ಸೋಕು ಅಥವ ಕೃತಿ ಕೆಯನ್ನೇ ಕೇಳಬೇಕು ನೀವು. ಕಲಾಶಾಲೆಯಲ್ಲಿ ನನ್ನ ಜ್ಯೂನಿಯರ್ ಆಗಿದ್ದ ಪ್ರಶ್ನಾಮೂರ್ತಿ ತನ್ನ ಪೆದ್ದುತನದ ಕೌಮಾರ್ಯ ಕಳೆದುಕೊಂಡ ನಂತರ, ಪರಿಷತ್ತಿನಲ್ಲಿ ಬಿ.ಎಫ್.ಎ (ಬ್ಯಾಚ್ಯುಲರ್ ಆಫ್ ಫೈನ್ ಆರ್ಟ್ಸ್) ಡಿಗ್ರಿ ಪಡೆದ ನಂತರ, ಮಲೇಷಿಯದಲ್ಲೋ ಅಥವ ಮತ್ತೆಲ್ಲೋ, ಇಂಟರ್‌ನೆಟ್ ಮೂಲಕ, ಈಮೇಲ್ ಚಾಟ್‌ಗಳಲ್ಲಿ ಆತನಿಗೆ ಹುಡುಗಿಯೊಬ್ಬಳ ಪರಿಚಯವಾದಾಗಿನ ಈ ಘಟನೆಯೇ ಇದಕ್ಕೆ ಸಾಕ್ಷಿ. ಯಾವುದೋ ಮಸ್ತು ಫಿಗರ್ ಎಂದುಕೊಂಡು ಬಡ್ಡೀಮಗ ಆಕೆಯನ್ನು ಮಾಲ್ ಒಂದರ ಬಳಿ ಭೇಟಿಯಾಗಲು ಆಹ್ವಾನಿಸಿದನಂತೆ. ಭೇಟಿ ನಿಜವಾಗುವ ಕ್ಷಣದಲ್ಲಿ, ಎದುರಿನಿಂದ ಬರುತ್ತಿದ್ದ ಆ ಹುಡುಗಿ ಈತನನ್ನು ಈತನ ನಿಜವಾದ ಹೆಸರು ಹಿಡಿದು ಕರೆದಳಂತೆ. ಹುಡುಗಿಯರು ಯಾಕೆ ತಮ್ಮ ನಿಜ ಹೆಸರು ಅಥವ ಫೋಟೋವನ್ನು, ಫೇಸ್‌ಬುಕ್ ಬರುವ ಮುನ್ನ, ಇಂಟರ್‌ನೆಟ್ ಚಾಟಿನಲ್ಲಿ ಹಾಕುತ್ತಿರಲಿಲ್ಲ ಗೊತ್ತೆ? ತಮ್ಮ ಬಗ್ಗೆ ತಮಗೇ ಇದ್ದ ಅವಿಶ್ವಾಸದ ಮೂರ್ತರೂಪ ಆ ಸೂಡೋನಿಮ್‌ಗಳು. ತನ್ನ ರೂಪ ಆಕೆಗೆ ಗೊತ್ತಿದ್ದು, ಆಕೆ ತನ್ನನ್ನು ಕರೆದದ್ದನ್ನು ನೋಡಿ ಪ್ರಶ್ನಾಮೂರ್ತಿ, ಮತ್ತು ಆಕೆಯ ನಿಜರೂಪವನ್ನು ಕಾಣುವ ಸಲುವಾಗಿ ಹತ್ತಡಿ ದೂರದಿಂದಲೇ ಗಮನಿಸಿ ನೋಡಿದನಂತೆ. ಅಷ್ಟೇ. ಡುಮ್ಮಕ್ಕೆ, ಕಪ್ಪಗೆ ಇದ್ದಾಳೆಂ ಒಂದೇ ಕಾರಣಕ್ಕೆ ಈ ಸಣಕಲ ಪ್ರಶ್ನಾಮೂರ್ತಿಯು ಏನನ್ನೋ ಮರೆತವನಂತೆ, ಏನೋ ಕಳೆದುಕೊಂಡವನಂತೆ, ಗುಂಪಿನಲ್ಲಿ ಯು-ಟರ್ನ್ ಮಾಡಿ ಗುಂಪಲ್ಲಿ ಎದ್ದೂಬಿದ್ದೂ ತಪ್ಪಿಸಿಕೊಂಡಿದ್ದನಂತೆ. ಅದೇ ಕೊನೆ. ಆಕೆ ಚಾಟಿಗೆ ಸಿಕ್ಕಾಗೆಲ್ಲ, ಚಾಟಿ ಏಟು ತಿಂದವನಂತೆ ಲಾಗ್‌ಆಫ್ ಆಗಿಬಿಡುತ್ತಿದ್ದನಂತೆ, ಪಾಪಿ.
ಅಲ್ಲೋ, ಸುಮ್ನೆ ಸುತ್ತಾಡಿ, ಒಂದೆರೆಡು ದಿನ ಖುಷಿಯಾಗಿರ್ಬೇಕಿತ್ತೋ ಇಲ್ವೋ? ಎಂದು ಕೇಳಿದ್ದೆ ನಾನು.
ಅದೂ ಸರಿ. ನಿನ್ನಷ್ಟಾದ್ರೂ ಬೇಡ್ವಾ ಎಣ್ಣೇಗೆಂಪು ಬಣ್ಣ ಆಕೆಗೆ? ಎಂದು ಉತ್ತರಿಸಿ, ಬೀಳುವ ಹೊಡೆತ ತಪ್ಪಿಸಿಕೊಳ್ಳುವವನಂತೆ ತನ್ನೆರೆಡೂ ಕೈಗಳನ್ನು ಅಡ್ಡಲಾಗಿರಿಸಿಕೊಂಡಿದ್ದ.
ಯಾಕೆ, ಆಫ್ರಿಕನ್ಸ್‌ಗೆ ಮಕ್ಳಾಗಲ್ವ? ದೇಹಗಳು ಬೆಸೆವಾಗ, ಆ ಕತ್ಲಲ್ಲಿ ಮೈಬಣ್ಣ ಎಲ್ಲಿರುತ್ತೆ, ಅಂತ ಟೈಮಲ್ಲಿ ಇರೋದೆಲ್ಲಾ ಬರೀ ವಾಸನೆ, ಬೆವರು ಅಷ್ಟೇ ಅಲ್ವ ಎಂದು ತಿರುಗಿಬೀಳುವ ಡಯಲಾಗು ನನ್ನ ಮನಸ್ಸಿನಲ್ಲಿ ಸಿದ್ದವಾಗೇನೋ ಇತ್ತು. ಆದ್ರೆ ಈ ಸ್ತ್ರೀವಾದ ತನ್ನ ಸುತ್ತಲೆ ಹುಟ್ಟಿಹಾಕಿಕೊಂಡಿರೋ ಹುತ್ತದಿಂದ ಹೊರಬರುವುದಾದರೂ ಹೇಗೆ? ಇಲ್ಲ ಗಂಡು ವಿರೋಧಿಯಾಗಿರಬೇಕು, ಇಲ್ಲವೇ ಅನುಕೂಲಸತಿಯಾಗಿರಬೇಕು. ಪರಿಷತ್ತಿರಲಿ, ಆ ರ‍್ಯಾಡಿಕಲ್ ಎಂದು ಮೊದಲೆಲ್ಲ ನನ್ನಲ್ಲಿ ಭರವಸೆ ಮೂಡಿಸಿದ್ದ ಮಲ್ಲುಗೆಳೆಯರೇ ತುಂಬಿದ್ದ ’ಕಪ್ಪುಬಿಳುಪು ವರ್ಣಕಲಾಶಾಲೆ’ಯ ಸಹವರ್ತಿಗಳು ಕೂಡ ಇದಕ್ಕೆ ಪರಿಹಾರ ದೊರಕಿಸಿಕೊಟ್ಟಿರಲಿಲ್ಲವಲ್ಲ. ಯಾರೂ ಬದುಕಿನ ಮೂಲಭೂತ ಪ್ರಶ್ನೆಗಳನ್ನೇ ಕೇಳಲು ಏಕೆ ಅಷ್ಟು ಅಂಜುತ್ತಾರೋ ಅರ್ಥವಾಗುವುದಿಲ್ಲ. ಅನೇಖನಿಗೂ ನನಗೂ ಇದ್ದ ಸಾಮ್ಯತೆ ಅದೇ-ಅದ್ಭುತವಾದ ತಲೆನೋವು ಬಂದುಬಿಡುತ್ತಿತ್ತು ಇಬ್ಬರಿಗೂ--ಸಾಂಕೇತಿಕವಾದ ಹಾಗೂ ಅಕ್ಷರಶಃವಾದಂತಹದ್ದು. ಜಗತ್ತಿನಲ್ಲಿ ಅದನ್ನು ಮೀರಿದ ಯಾವ ತೆರನಾದ ಭೌದ್ದಿಕ, ತಾತ್ವಿಕ ಮತ್ತು ದೃಶ್ಯಾತ್ಮಕ ಸಮಸ್ಯೆಗಳೂ ಮಿಗಿಲೆನಿಸುತ್ತಿರಲಿಲ್ಲ. ನನಗಂತೂ, ಪರಿಷತ್ತಿನ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ಈ ಎಲ್ಲ ಸಾಂಸ್ಕೃತಿಕ ಸಂವಾದಕ್ಕೆ ಸಂವಾದಿಯಾಗಿಯೇ ಕಾಣುತ್ತಿತ್ತು ನನ್ನ ಮೈಗ್ರೇನ್ ತಲೆನೋವು.
ಎಷ್ಟೋ ಸಲ ನಾನು ಸಹಜವಾಗಿರುವುದೆಂದರೆ, ಅದು ತಲೆಯ ನೋವು ಇಲ್ಲದ ದಿನ ಎಂದೇ ಭಾವಿಸುತ್ತಿದ್ದೆನೇ ಹೊರತು, ಸಹಜ ಬದುಕಿನಲ್ಲಿ ಆಗಾಗ ತಲೆನೋವು ಎಂಬುದು ಬರುತ್ತಿರಲಿಲ್ಲ. ಡಾಕ್ಟರು-ಆಗೆಲ್ಲಾ ಸ್ಪೆಷೆಲಿಸ್ಟ್‌ಗಳ ಪರಿಕಲ್ಪನೆ ಇದ್ದದ್ದು ದುಡ್ಡಿದ್ದವರಿಗೆ, ಮಾರಣಾಂತಿಕ ಖಾಯಿಲೆ ಬಂದಾಗ ಮಾತ್ರವಲ್ಲವೆ--ಹೇಳಿದ್ದು ಇಷ್ಟು ನನಗೆ. ಹೊಟ್ಟೆ ಎಕ್ಸರ್‌ಸೈಜ್ ಹೆಚ್ಚು ಮಾಡಿ. ಬಹುಪಾಲು ಸಣ್ಣಪುಟ್ಟ ತಲೆನೋವು, ಮಂಡಿನೋವುಗಳು, ವಾತಪಿತಕಫಗಳಿಗೆಲ್ಲ ಹೊಟ್ಟೆಗೆ ವ್ಯಾಯಾಮ ಇಲ್ಲದಿರುವುದೇ ಕಾರಣ ಎಂದಿದ್ದರು. ನೆಗಡಿ ಬಂದರಂತೂ, ತಲೆಭಾರವಾಗಿ ಡ್ರಾಯಿಂಗೂ ಬೇಡ ಈ ಕಲೆಯೇ ನಾನ್ಸೆನ್ಸ್ ಎನ್ನಿಸಿಬಿಡುತ್ತಿತ್ತು. ಆದರೆ ಆಗಿನಿಂದ ಒಂದು ಅಭ್ಯಾಸವನ್ನು ಮಾತ್ರ ಸರಿಮಾಡಿಕೊಂಡುಬಿಟ್ಟೆ. ಯಾವಕಾರಣಕ್ಕೂ ನನ್ನ ಹೊಟ್ಟೆ ಉಬ್ಬುವುದಕ್ಕೆ-ಎಲ್ಲಾ ರೀತಿಯಲ್ಲೂ-ಅವಕಾಶ ಕೊಡುತ್ತಿರಲಿಲ್ಲ. ಫ್ರೊಫೆಷನಲ್ ಕಲಾವಿದೆಯಾದ ನಂತರವೂ ಅಷ್ಟೇ, ಸಂಬಂಧಗಳು ಉಬ್ಬುವಿಕೆಗೆ ದಾರಿಯೂ ಮಾಡಿಕೊಡಲಿಲ್ಲ, ಉಬ್ಬುವಂತಹ ಸಂಬಂಧಕ್ಕೂ ಅವಕಾಶವಾಗಲಿಲ್ಲ. ಫೈನಲ್ ಬಿ.ಎಫ್.ಎಯಲ್ಲಿದ್ದಾಗ ಎಂದು ಕಾಣುತ್ತದೆ, ಕಣ್ಣುಮುಚ್ಚುವಂತೆ ಹಿಂದಿನಿಂದ ಬಂದ ಒಂದು ಜೊತೆ, ಬಳೆಗಳಿಂದಾವೃತ್ತವಾಗಿದ್ದ ಮೃದು ಕೈಗಳು ನನ್ನ ಕಣ್ಣುಮುಚ್ಚಿ, ಆಕಸ್ಮಿಕವಾಗಿ ಅವು ಅರ್ಧ ಅಡಿ ಕೆಳಕ್ಕೆ ಕುಸಿದಾಗಲೇ ಉಂಟಾದ ಪುಳಕವು ಇಂದಿಗೂ ನನ್ನ ಬದುಕಿನ ಅರ್ಧ ದೈಹಿಕವಾಂಛೆಗೆ ಕಾರಣವಾದರೆ, ಮತ್ತರ್ಧವು ಮೊದಲೇ ಇದ್ದದ್ದು: ಸಹಜ ಹುಡುಗಿಯರಿಗೆ ಹುಡುಗರು ಇಷ್ಟವಾಗುವಂತೆ ನನಗೂ ಆಗುತ್ತಿತ್ತು. ಸೊಂಟದ ಕೆಳಗಿನ ಮಾಸಿಕ ತೊಂದರೆಗಳಿಗೇ ಗಂಡಿರಲಿ ಹೆಣ್ಣು ಡಾಕ್ಟರುಗಳ ಬಳಿಯೂ ಹೇಳಿಕೊಳ್ಳಲಾಗದಷ್ಟು ಇಂಟ್ರೋವರ್ಟ್ ಆಗಿದ್ದ ನನಗೆ, ಈ ಹರಿಹರನ ರಗಳೆಯನ್ನು ಹೇಳಿಕೊಳ್ಳುವುದಾದರೂ ಹೇಗೆ? ಎಲ್ಲ ಭಾರತೀಯರಂತೆ ನಾನು ಹುಟ್ಟಿಬೆಳೆದ ಪರಿಸರದಲ್ಲಿ ದೈಹಿಕ-ಮಾನಸಿಕವಾದ ಖಾಯಿಲೆಗಳಿಗೆ ಆಸ್ಪತ್ರೆ ಎಂಬ ಕಲ್ಪನೆ ಇದೆಯೇ ಹೊರತು, ಮಾನಸಿಕ ಸಮಸ್ಯೆಗಳಿಗೆ ಇಲ್ಲವಲ್ಲ. ಜೊತೆಗೆ ಇದೊಂದು ಅನಾರೋಗ್ಯ ಎಂದು ಎಂದೂ ಅನ್ನಿಸಿದ್ದಿಲ್ಲ. ಹೆಣ್ಣು, ಗಂಡು-ಎರಡೂ ಓಕೆ ಎಂದು ನನ್ನ ದೇಹ ಹೇಳಿದ್ದನ್ನು ನಾನು ಸ್ವೀಕರಿಸಿದಂತೆ, ಅದೇಕೆ ಹಾಗೆ ಎಂದು ತೋಡಲು ಹೋಗಿಲ್ಲ. ನಮ್ಮ ಡಿಗ್ರಿಗಳೆಲ್ಲ ಮುಗಿದು ಹಲವು ವರ್ಷಗಳ ನಂತರ ಕಬಾಬು ಒಮ್ಮೆ ಲೆಸ್ಬಿಯನಿಸಂ ಬಗ್ಗೆ ಹೇಳಿದ್ದನಲ್ಲ, ಪೋರ್ನೋಗಳಲ್ಲೂ ಲೆಸ್ಬಿಯನ್ ಪೋರ್ನೋ ಎಂದರೆ ಅವಳಿ-ಸ್ವಾದವಿದ್ದಂತೆ, ಒಬ್ಬರ ಬದಲು ಇಬ್ಬರ ದರ್ಶನ ಎಂದು. ಮಮಾ ಕೂಡ ಒಮ್ಮೆ ಹೇಳಿದ್ದನಲ್ಲ, ಹೆಂಗಸರನ್ನು ಕುರಿತಾದ ಪೋಲಿ (ಮಲ್ಟಿಪಲ್--ಬಹುಮುಖಿ) ಜೋಕನ್ನು, ಹೆಂಗಸರೆಲ್ಲರೂ, ಗಂಡಸರ ದಬ್ಬಾಳಿಕೆಗೆ ಕಾರಣ ಹುಡುಕಿದ್ದು ಹೀಗಂತೆ: ಹೆಂಗಸರಾದ ನಮ್ಮಲ್ಲೇ ಏನೋ ಬಿರುಕಿರಬೇಕು. ಅದಕ್ಕೇ ಅವರು ನಮ್ಮ ಮೇಲೆ ಸವಾರಿ ಮಾಡುವುದು ಎಂದು.//