ನೆನಪಿನ ದೋಣಿಯಲಿ

ನೆನಪಿನ ದೋಣಿಯಲಿ

ಹಾಗೇ ಸುಮ್ಮನೆ

ಮಾನವೀಯತೆಯ ಸಾಕಾರ ಮೂರ್ತಿ
ಯತಿರಾಜಮಠದ ಜೀಯರ್ ಸ್ವಾಮಿಗಳು(ಪೂರ್ವಾಶ್ರಮ-ತಿರು ಸ್ವಾಮಿಗಳು) ನಾಡಿನ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.
ಜೀಯರ್ ಸ್ವಾಮಿಗಳು ಪೂರ್ವಾಶ್ರಮದಲ್ಲಿಯೂ ಇದ್ದುದು ಸನ್ಯಾಸ ಜೀವನದಲ್ಲಿಯೇ. ಅವರಲ್ಲಿ ಎಲ್ಲದರ ಬಗ್ಗೆಯೂ ಆಸಕ್ತಿ ಜೊತೆಗೆ ನಿರ್ಲಿಪ್ತತೆ ಇತ್ತು. ಎಲ್ಲವೂ ಭಗವಂತನ ಅಣತಿ, ಶ್ರೀ ರಾಮಾನುಜರ ಕೃಪೆ ಎಂದೆ ತಿಳಿದು ಬದುಕುತಿದ್ದ ಆಧ್ಯಾತ್ಮ ಜೀವಿಯವರು. ಬಹುಶ: ಅವರಲ್ಲಿದ್ದ ಮಾನವೀಯತೆಯ ಗುಣಗಳನ್ನು ಹತ್ತಿರದಿಂದ ನೋಡಿ ಅನುಭವಿಸಿದವರು ಹಲವರಿದ್ದಾರೆ. ಅಂತಹ ಹಲವು ಅನುಭವಗಳನ್ನು ಕಾಣುವ ಸೌಭಾಗ್ಯ ನನ್ನದಾಗಿದೆ. ಜೀಯರ್ ಸ್ವಾಮಿಗಳಿಗೆ ಪೂರ್ವಾಶ್ರಮದಲ್ಲಿಯೂ ಪ್ರಚಾರ ಇಷ್ಟವಿರಲಿಲ್ಲ. ಈಗಲೂ ಇಲ್ಲ.

ಸುಮಾರು 4 ವರ್ಷಗಳ ಹಿಂದಿನ ಮಾತು… ಆಗಿನ್ನೂ ನಾನು ಪ್ರಜಾವಾಣಿ ಪತ್ರಿಕೆಯ ಕಡೂರು ವರದಿಗಾರನಾಗಿ ಪ್ರವೃತ್ತಿ ಜೀವನ ಆರಂಭಿಸಿದ್ದೆ. ಅದೊಂದು ದಿನ ನನಗೊಂದು ದೂರವಾಣಿ ಕರೆ ಬಂದಿತು. ಅದು ತಿರು ಸ್ವಾಮಿಗಳ ಕರೆ. ತಿಪಟೂರಿಗೆ ಬರುತ್ತಿದ್ದೇನೆ. ನೀವು ಅಲ್ಲಿಗೆ ಬನ್ನಿ ಎಂದು. ಕೂಡಲೇ ಕಡೂರಿನಿಂದ ಹೊರಟೆ. ತಿಪಟೂರಿಗೆ ಹೋದೆ. ಸ್ವಲ್ಪ ಸಮಯದಲ್ಲಿ ತಿರು ಸ್ವಾಮಿಗಳ ಆಗಮನವಾಯಿತು. ಅವರು ಸೀದಾ ಕರೆದುಕೊಂಡು ಹೋದದ್ದು ಅಲ್ಲಿ ತಿಪಟೂರಿನ ಒಂದು ಕಿರಿದಾದ ಗಲ್ಲಿಗೆ. ಅಲ್ಲಿನ ಪುಟ್ಟ ಮನೆಯೊಂದರಲ್ಲಿ ಒಂದು ಕುಟುಂಬ. ಅದರ ಯಜಮಾನನನ್ನು ಮಾತನಾಡಿಸಿದ ತಿರು ಸ್ವಾಮಿಗಳು ಆತನಿಗೆ ಧನ ಸಹಾಯ ಮಾಡಿ ಆತ್ಮೀಯವಾಗಿ ಮಾತನಾಡಿ ಆತ್ಮಸ್ಥೈರ್ಯ ತುಂಬಿದ ರೀತಿ ನಿಜಕ್ಕೂ ತಾಯಿ ಮಗುವಿಗೆ ಧೈರ್ಯ ಹೇಳುವ ರೀತಿಯಲ್ಲಿತ್ತು.
ನನಗೆ ಅಯೋಮಯ. ಇವರು ಯಾರು..ಇಲ್ಲಿಗೆ ತಿರು ಸ್ವಾಮೀಜಿ ಬಂದಿದ್ದೇಕೆ? ನಂತರ ತಿಳಿದಿದ್ದು ಈ ಮನೆಯ ಯಜಮಾನ ರಂಗಸ್ವಾಮಿ. ಇವರ ಮಗ ರಾಜ್ಯದ ಪ್ರತಿಷ್ಟಿತ ಮಠವೊಂದರ ಪೀಠಾಧಿಪತಿಯಾಗಿದ್ದವರು. ಅವರು ನಿಧನರಾಗಿದ್ದರೂ ಆ ಜಗದ್ಗುರುಗಳ ತಂದೆಯಾದ ಇವರು ಗಾಡಿ ಎಳೆಯುವ ಕಾಯಕ ಮಾಡುತ್ತ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ದೊಡ್ಡ ಮಗಳ ಮದುವೆಗೆ ಮಾಡಿದ ಸಾಲ ತಲೆಯ ಮೇಲಿತ್ತು. ಎರಡನೇ ಮಗಳು ಮದುವೆಗೆ ಬಂದಿದ್ದಳು. ಹಾಗಾಗಿ ರಂಗಸವಾಮಿಯ ಬದುಕು ದುರ್ಭರವಾಗಿತ್ತು. ಈ ವಿಚಾರ ತಿಳಿದ ತಿರುಸ್ವಾಮಿಗಳು ತಾವೇ ಸ್ವಯಂ ತಿಪಟೂರಿಗೆ ಬಂದು ರಂಗಸ್ವಾಮಿಯ ಮನೆ ಹುಡುಕಿ ಆತನಿಗೆ ಒಂದಿಷ್ಟು ಸಹಾಯ ಮಾಡಿ, ಆತ್ಮಸ್ಥೈರ್ಯ ತುಂಬಿದ ರೀತಿಗೆ ನಾನು ಮೂಖನಾದೆ !
ಈ ವಿಚಾರ ನಡೆದ ನಂತರ ಅನೇಖ ರಾಜಕೀಯ ನಾಯಕರು ರಂಗಸ್ವಾಮಿಗೆ ಭರಪೂರ ಭರವಸೆಗಳನ್ನು ನೀಡಿದ್ದಾರೆ. ಆದರೆ ಇಂದಿಗೂ ರಂಗಸ್ವಾಮಿ ಅದೇ ಕೂಲಿ ಕಾಯಕ ದಲ್ಲಿ ನಿರತರಾಗಿದ್ದಾರೆ. ತಾವೇ ಸ್ವಯಂ ಬಂದು ನೊಂದ ಜೀವಿಗೆ ಸಾಂತ್ವನ ಹೇಳಿದ ತಿರು ಸ್ವಾಮಿಗಳ ರೀತಿ ಈ ನಾಟಕೀಯ ಯುಗದಲ್ಲಿ ಅದೆಷ್ಟು ಜನಗಳಿಗಿದೆ ಎಂಬ ಚಿಂತನೆ ನನ್ನಲ್ಲಿ ಹುಟ್ಟು ಹಾಕಿತ್ತು.
ನಂತರದಲ್ಲಿ ತಿರುಸ್ವಾಮಿಗಳು ಯತಿರಾಜಮಠದ ಪೀಠಾಧಿಪತಿಯಾಗಿ ವಿರಾಜಮಾನರಾದರು. ಇಂದಿಗೂ ತಮ್ಮ ಪೂರ್ವಾಶ್ರಮದ 40 ವರ್ಷಗಳ ಸಮಾಜಿಕ ಸೇವೆಯನ್ನು, ನೊಂದವರ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ನಾಡಿಗೆ ಬರ ಬಂದು ರೈತರು ಹತಾಶೆಯಲ್ಲಿರುವ ಈ ಸಮಯದಲ್ಲಿ ರಾಜ್ಯದ ರೈತರ ಸುಭಿಕ್ಷೆಗಾಗಿ ಏಳುಗಿರಿಯೊಡಯನನ್ನು ರಾಜ್ಯಕ್ಕೆ ಬಿಜಯಮಾಡಿಸಿಕೊಂಡು ಪ್ರಾರ್ಥಿಸಲಿದ್ದಾರೆ. ಅವರ ನಿಷ್ಕಲ್ಮಷ ಬೇಡಿಕೆಗೆ ಭಗವಂತ ಇಲ್ಲವೆಂದಾನೆಯೇ?
ಯಾಕೋ ಇದೆಲ್ಲ ನೆನಪಾಯಿತು…ಹಾಗೇ ಸುಮ್ಮನೆ…