ನೆನಪಿನ ಪಯಣ – ಭಾಗ 3

ನೆನಪಿನ ಪಯಣ – ಭಾಗ 3

ಆಗ ವಿಚಿತ್ರ ಗಮನಿಸಿದೆ,
ಜ್ಯೋತಿಗೆ ಸಂದ್ಯಾಳ ಮಾತು ಕೇಳಿಸುತ್ತಿದೆ ಎಂದು ನನಗನ್ನಿಸಲಿಲ್ಲ. ಹೀಗೇಕೆ ಆಕೆಯನ್ನು ನಾನು ಹಿಪ್ನಾಟಾಯಿಸ್ ಏನು ಮಾಡಿಲ್ಲ, ಮೊದಲಿಗೆ ನನಗೆ ಆ ಹಿಪ್ನಾಟೈಸ್ ಅಥವ ಸಂಮೋಹನ
ವಿದ್ಯೆಯ ಬಗ್ಗೆ ಗೊತ್ತು ಇಲ್ಲ. ಆದರೆ ಇಲ್ಲಿ ಏನೋ ವಿಚಿತ್ರವಾದಂತಿದೆ
 ನಾನು.
’ ಜ್ಯೋತಿ ಸಮಾದಾನ ಪಟ್ಟುಕೊಳ್ಳಿ ಅದೇಕೆ ಎಲ್ಲ ದುಃಖದ ವಿಷಯವನ್ನೆ ನೆನೆಯುತ್ತಿರುವಿರಿ, ನೀವು ಎದ್ದೇಳಿ, ಸ್ವಲ್ಪ ಕಾಪಿ ಕುಡಿಯಿರಿ ಮತ್ತೆಂದಾದರು , ಈ ಪ್ರಯೋಗ ಮುಂದುವರೆಸೋಣ, ಇಂದಿಗೆ ಸಾಕು ಅಲ್ಲವೇ' ಎಂದೆ

' ಇಲ್ಲ ನನಗೇನು ಶ್ರಮ ಅನ್ನಿಸುತ್ತಿಲ್ಲ, ಅದೇನೊ ನೆನಪಿಗೆ ಬಂದಿತು ಅಷ್ಟೆ ,ನಾನು ಸರಿ ಇದ್ದೇನೆ '
ಜ್ಯೋತಿ ಉತ್ತರಿಸಿದರು.

ನನಗೆ ಅದೆಂತದೋ ಒಂದು ಅನುಮಾನ, ನಾನೇನಾದರು ಗೊತ್ತಿಲ್ಲದೆ ಆಕೆಗೆ ಸಂಮೋಹನ ಪ್ರಯೋಗದ ರೀತಿ ಏನಾದರು ತಪ್ಪು ಮಾಡಿರುವೆನಾ ಎಂದು,
ಹಾಗಾಗಿ ಮತ್ತೆ ಹೇಳಿದೆ
'ಜ್ಯೋತಿ ನೋಡಿ, ನಾನು ನಿಮ್ಮನ್ನು ಯಾವುದಕ್ಕೂ ಒತ್ತಡ ಹೇರುತ್ತಿಲ್ಲ, ನಾನು ನಿಮ್ಮ ಮೇಲೆ ಯಾವುದೇ ಹಿಪ್ನಾಟಿಕ್ ಸಜೆಶನ್ ಕೊಡುತ್ತಿಲ್ಲ. ನೀವು ಯೋಚಿಸಲು ಸ್ವತಂತ್ರ್ಯರಿದ್ದೀರಿ. ನಿಮಗೆ ಬೇಕಾದ ಯಾವುದೇ ನೆನಪನ್ನು ನೀವು ಕೆದಕಬಹುದು. ನಿಮಗೆ ಸಾಕು ಆನಿಸಿದಾಗ ಎದ್ದೇಳಬಹುದು. ನಿಮ್ಮ ಮನಸ್ಸು ನಿಮ್ಮ ವಶದಲ್ಲಿಯೆ ಇರಲಿ, ಈಗ ನಿಮ್ಮ ನೆನಪನ್ನು ಹಿಂದೆಕ್ಕೆ ಹಿಂದಕ್ಕೆ ತೆಗೆದುಕೊಂಡು ಹೋಗಿ' ಎಂದೆ .
ನಾನು ಹಿಪ್ನಾಟಿಕ್ ಸಜೆಶನ್ ಕೊಡುತ್ತಿಲ್ಲ ಎಂದು ಬಾಯಲ್ಲಿ ಹೇಳುತ್ತಿದ್ದರು, ಅದೇನೊ ತಪ್ಪು ಮಾಡುತ್ತಿರುವೆ ಅನ್ನಿಸುತ್ತಿತ್ತು. ಏನೆಂದು ಅರ್ಥವಾಗುತ್ತಿಲ್ಲ.
ಕಣ್ಣು ಮುಚ್ಚಿದ್ದ ಜ್ಯೋತಿ ನನ್ನ ಮಾತನ್ನು ಕೇಳಿಸಿಕೊಂಡರು, ಆದರೆ ನನ್ನಮಾತಿಗೆ ಹೆಚ್ಚು ಬೆಲೆಯೇನು ಕೊಡಲಿಲ್ಲ. ನಾನು ಗಮನಿಸುವಂತೆ ಆಕೆ ಈಗ ಸುತ್ತಲು ಇದ್ದ ಎಲ್ಲರ ಬಗ್ಗೆ ಮರೆತುಹೋಗಿದ್ದರು, ಕಡೆಗೆ ಅವರ ಪತಿ ಆನಂದ ಆಕೆಯ ಪಕ್ಕ ಕುಳಿತಿರುವರನು ಎನ್ನುವದನ್ನು ಮರೆತಂತೆ ಇತ್ತು.

’ನನ್ನ ಜೀವನದಲ್ಲಿ ಅತ್ಯಂತ ಸಂಭ್ರಮದ ಗಳಿಗೆ ಅಂದರೆ ಮದುವೆ ,
ಆಕೆ ಮತ್ತೆ ಪ್ರಾರಂಭಿಸಿದರು,
ಆನಂದ ನಾನು ಮೆಚ್ಚಿದ, ನಮ್ಮ ಅಪ್ಪ ಅಮ್ಮ ಹುಡುಕಿದ ಹುಡುಗ. ನನ್ನದೂ ಇನ್ನೂ ಚಿಕ್ಕವಯಸ್ಸೆ ಬಿಡಿ, ಅವರನ್ನು ಪೂರ್ಣ ಮನಸ್ಸಿನಿಂದ ಒಪ್ಪಿದ್ದೆ. ಮದುವೆ ಬೆಂಗಳೂರು ಜಯನಗರದ ಬೆಳಗೋಡು ಕಲ್ಯಾಣ ಮಂಟಪದಲ್ಲಿ ನಡೆಯಿತು. ಆಗೆಲ್ಲ ಬೆಳಗೋಡು ಅಂದರೆ ದೊಡ್ಡ ಛತ್ರ. ಅತ್ಯಂತ ವೈಭವ ಎಂದೇ ಲೆಕ್ಕ. ನಮ್ಮ ಅಪ್ಪ ತನ್ನ ಶಕ್ತಿ ಮೀರಿ ತನ್ನೆಲ್ಲ ಸೇವಿಂಗ್ಸ್ ಹಣವನ್ನು ಉಪಯೋಗಿಸಿ ಮದುವೆ ಮಾಡಿದರು. ಒಬ್ಬಳೇ ಮಗಳು ಎನ್ನುವ ಭಾವ ಅವರಿಗೆ. ಅಮ್ಮನಾಗಲಿ , ನನ್ನ ತಮ್ಮನಾಗಲಿ ಸಂಭ್ರಮದಲ್ಲಿಯೆ ಇದ್ದರು. ತಾಳಿ ಕಟ್ಟುವಾಗ ಅವರ ಮುಖವನ್ನೆ ಕದ್ದು ನೋಡುತ್ತಿದ್ದೆ, ಆನಂದರ ಮುಖದಲ್ಲಿ ಸಹ ನಗು ಸಂತಸ ತೇಲುತ್ತಿತ್ತು. ಅವರೂ ಸಹ ನನ್ನನ್ನು ಪೂರ್ಣ ಮನಸಿನಿಂದ ಒಪ್ಪಿದ್ದಾರೆ ಅನ್ನುವಾಗ ಎಂತಹುದೋ ನೆಮ್ಮದಿ.

ಮದುವೆಯ ಸಂಭ್ರಮದಲ್ಲಿ ಸಂಜೆ ಆರತಕ್ಷತೆ ಏರ್ಪಾಡಾಗಿತ್ತು. ಅದಕ್ಕೆ ಸಿದ್ದತೆಗಾಗಿ , ಸಂದ್ಯಾ ಹಾಗು ನಾನು ಬ್ಯೂಟಿಪಾರಲಲ್ ಗೆ ಹೊರಟೆವು. ಅವಳದೇ ಕಾರು ಅವಳಿಗೆ ಡ್ರೈವಿಂಗ್ ಚೆನ್ನಾಗಿಯೆ ಗೊತ್ತು. ಆದರೂ ಅಮ್ಮನಿಗೆ ಆತಂಕ ಮದುವೆಯ ಹುಡುಗಿ ಹೊರಗೆ ಹೋಗುತ್ತಾಳೆ ಎಂದು ಹಾಗಾಗಿ ನನ್ನ ತಮ್ಮನನ್ನು ಜೊತೆಗೆ ಕಳುಹಿಸಿದರು.
ನನಗೂ ಪ್ರಥಮ ಬಾರಿ ಪಾರ್ಲರ್ ಅನುಭವ, ಅಲ್ಲದೆ ರಿಸಿಪ್ಷನ್ ಗೆ ಸಿದ್ದವಾಗಬೇಕಾದ ಸಂಭ್ರಮ ಬೇರೆ , ಎಲ್ಲವೂ ಮುಗಿಸಿ ಹಣ ನೀಡಿ ಹೊರಡಬೇಕು, ಅಲ್ಲಿ ಹೊರಗೆ ಪೇಪರ್ ಓದುತ್ತ ಕುಳಿತ್ತದ್ದ ಯುವತಿ ನಮ್ಮ ಕಡೆ ಎದ್ದು ಬಂದಳು,
'ಈ ಹೇರ್‍ ಸ್ಟೈಲ್ ನಿಮಗೆ ಚೆನ್ನಾಗಿ ಒಪ್ಪುತ್ತದೆ ' ನಗುತ್ತ ಅಂದಳು
ನಾನು ಸಂತಸದಿಂದ  ಥ್ಯಾಂಕ್ಸ್ ಎಂದೆ
ಆದರೆ ಈ ಒಡವೆಗಳೆಲ್ಲ , ಅಷ್ಟೊಂದು ಸರಿ ಕಾಣುತ್ತಿಲ್ಲ ಎಂದಳು
ನನಗೂ ಒಡವೆಗಳೆಂದರೆ ಇಷ್ಟವೇನಿಲ್ಲ, ಆದರೆ ಈ ದಿನಕ್ಕಾಗಿ ಹಾಕಿದ್ದೇನೆ ಎಂದೆ
ಅದಕ್ಕವಳು
ಗೊತ್ತಿದೆ, ಈ ದಿನ ನಿಮ್ಮ ಮದುವೆ, ಬೆಳಗೋಡು ನಲ್ಲಿ ನಡೆಯುತ್ತಿದೆ, ನಿಮ್ಮ ಗಂಡನ ಹೆಸರು ಆನಂದ ಎಂದು
ನಾನು ಸ್ವಲ್ಪ ಆಶ್ಚರ್ಯಪಟ್ಟೆ
ಓ ನಿಮಗೆ ಅವರು ಮೊದಲೆ ಪರಿಚಿತರ, ಸ್ನೇಹಿತರ ?
ಆಕೆ ನಗುತ್ತಿದ್ದಳು
’ ಹೌದು ಪರಿಚಿತರು , ಅಂದರೆ ತೀರಾನೆ ಪರಿಚಿತರು, ಎಷ್ಟು ಅಂದರೆ ನೋಡಿ ಇಷ್ಟೆ, ನಾನು ಅವರು ಕೆ ಅರ್ ಎಸ್ ಎಂದೆಲ್ಲ ಸುತ್ತಡಿದ್ದೇವು. ಆದರೆ ಕಡೆಯಲ್ಲಿ ನನ್ನನ್ನು ನಿರಾಕರಿಸಿಬಿಟ್ಟರು'
ಆಕೆ ಒಂದಿಷ್ಟು ಪೋಟೋಗಳನ್ನು ಕೊಟ್ಟರು , ಆಕೆ ಹೇಳಿದ್ದು ನಿಜವಿತ್ತು ಆನಂದ ಹಾಗು ಆಕೆ ಸಂಭ್ರಮದಿಂದ ಅತ್ಯಂತ ಆಪ್ತವಾಗಿ ತೆಗಿಸಿರುವ ಪೋಟೋಗಳು. ಕೆ ಅರ್ ಎಸ್ ಪೋಟೋಗಳಂತು ಅವರಿಬ್ಬರ ನಡುವಿನ ಆತ್ಮೀಯತೆ ಸಾರುತ್ತಿದ್ದವು.
ಈಗ ನಂಬದೆ ಬೇರೆ ದಾರಿ ಇರಲಿಲ್ಲ,
ಸರಿ ನೀನು ಅಷ್ಟೊಂದು ಆತ್ಮೀಯಳು, ಅನ್ನುವದಾದರೆ ಅವರನ್ನು ಏಕೆ ಮದುವೆ ಆಗಲಿಲ್ಲ, ಮದುವೆಗೆ ಮೊದಲೆ ಬಂದು ನನ್ನನ್ನೇಕೆ ಕಾಣಲಿಲ್ಲ.
ಅವಳು ನಗುತ್ತಿದ್ದಳು,
ನೀನು ಬುದ್ದಿವಂತೆ ಗ್ರಹಿಸಿಬಿಟ್ಟೆ, ನಿಜ , ನನಗೆ ಈಗಲೂ ಆನಂದನನ್ನು ಮದುವೆ ಆಗಬೇಕೆನ್ನುವ ಹಂಬಲವೇನಿಲ್ಲ, ಆದರೆ ಈ ಪ್ರಪಂಚದಲ್ಲಿ ಯಾವುದೂ ಬಿಟ್ಟಿಯಾಗಿ ಸಿಗಬಾರದಲ್ಲವೆ. ನನ್ನೊಡನೆ ಸಾಕಷ್ಟು ಸುತ್ತಾಡಿದ ಕಡೆಯಲ್ಲಿ ಮದುವೆ ನಿರಾಕರಿಸಿಬಿಟ್ಟ ಅದಕ್ಕಾಗಿ ನನಗೆ ಪ್ರತಿಫಲಬೇಡವೇ ?
ನನಗೆ ಆಶ್ಚರ್ಯವಾಗಿತ್ತು
ಪ್ರತಿಫಲವೇ ? ಹೋಗಲಿ ನಿನ್ನನ್ನು ಅವನು ಮದುವೆಗೆ ನಿರಾಕರಿಸಲು ಕಾರಣವೇನು ?
ಅವಳು ನಗುತ್ತಿದಳು
ನಾನು ಬೇರೆಯವರ ಜೊತೆ ಸುತ್ತುವುದು ಅವನಿಗೆ ಇಷ್ಟವಾಗಲಿಲ್ಲ
ನನಗೆ ಸ್ವಲ್ಪ ಅರ್ಥವಾಗುತ್ತಿತ್ತು,
ಸರಿ ಬಿಡು, ಆದರೆ ಈಗ ನೀನು ಬಂದಿರುವ ಉದ್ದೇಶವೇನು?
ನಗುತ್ತ ನುಡಿದಳು
ಇನ್ನೂ ಅರ್ಥವಾಗಲಿಲ್ಲವೆ, ಅತ್ಯಂತ ಸರಳ, ಈಗ ನಿನ್ನ ಮೈಮೇಲೆ ಇರುವ ಎಲ್ಲ ಒಡವೆಗಳನ್ನು ನಿನ್ನ ಬಳಿ ಇರುವ ಹಣವನ್ನು ತೆಗೆದುಕೊಡುತ್ತೀಯ ಅಷ್ಟೆ
ಜೊತೆಯಲ್ಲಿದ್ದ ಸಂದ್ಯಾಳಿಗೆ ಕೋಪ ಏರುತ್ತಿತ್ತು
ನಿನಗೆ ಪೋಲಿಸ ಸ್ಟೇಷನ್ ತೋರಿಸಬೇಕಾ, ? ಸುಮ್ಮನೆ ಹೊರಟುಬಿಡು, ಇಲ್ಲದಿದ್ದರೆ ಬ್ಲಾಕ್ ಮೈಲ್ ಎಂದು ಪೋಲಿಸರಿಗೆ ಕಂಪ್ಲೇಟ್ ಮಾಡುತ್ತೀವಿ
ಅವಳು ನಕ್ಕಳು
ಸಂದ್ಯಾ ಅಲ್ಲವೇ ನೀನು , ಇವಳ ಸ್ನೇಹಿತೆ, ಪೋಲಿಸರ ಹೆಸರು ಹೇಳುತ್ತೀಯ, ಅವರು ನಮಗೆ ದಿನವೂ ಅವರ ಒಡನಾಟ ಇರುವುದೆ. ಇಲ್ಲಿಯ ಸ್ಟೇಷನಿನ್ನ ಎಸ್ ಐ ಅಂತೂ ನನಗೆ ಆತ್ಮೀಯ
ನಾವಿಬ್ಬರು ನಿರುತ್ತರ
ಆಕೆ ಹೇಳಿದಳು ನಿಮಗೆ ಹಣ ಒಡವೆ ಕೊಡದೆ ಬೇರೆ ದಾರಿಯಿಲ್ಲ ಯೋಚಿಸಿ
ಸಂದ್ಯಾ ನನ್ನ ಪರವಾಗಿ ಅನ್ನುವಂತೆ ದಬಾಯಿಸುತ್ತಿದ್ದಳು
ಒಂದು ವೇಳೆ ನಾವು ಒಡವೆ ಕೊಡಲಿಲ್ಲ ಅಂದರೆ ಏನುಮಾಡುತ್ತೀಯ
ಈಗ ನನಗೆ ಅರ್ಥವಾಗಿತ್ತು, ಇವಳಿಂದ ತಪ್ಪಿಸಿಹೋಗುವುದು ಸ್ವಲ್ಪ ಕಷ್ಟಾನೆ ಎಂದು,
ತುಂಬಾನೆ ಸಿಂಪಲ್, ಮದುವೆ ಮನೆಗೆ ಬರುವೆ , ರಿಸಿಪ್ಷನ್ ಅಂದರೆ ಸಾವಿರ ಜನರಾದರು ಸೇರಿರುತ್ತಾರೆ, ಅಲ್ಲಿ ನಿನ್ನ ಗಂಡನ ಮರ್ಯಾದೆ ಹೋಗುವುದು ನಿನಗೆ ಬೇಕಾ ? ಆನಂದನ ಹೆಂಡತಿಯಾಗಿ ಅವನ ಮರ್ಯಾದೆ ಕಾಪಾಡುವುದು ನಿನ್ನ ಕರ್ತ್ಯವ್ಯ ಅಲ್ಲವಾ
ಸಂದ್ಯಾ ನುಡಿದಳು ಅವಳ ಜೊತೆ, … , ನನ್ನನ್ನು ನೋಡುತ್ತ,
ನಾವು ಒಡವೆ ಹಣ ಎಲ್ಲಾ ಕೊಟ್ಟ ಮೇಲು, ನೀನು ಸುಮ್ಮನಿರುವೆ ಎಂದು ಗ್ಯಾರಂಟಿ ಏನು, ನಿನ್ನ ಬಳಿ ಇರುವ ನೆಗೆಟೀವಿ ನಿಂದ ಮತ್ತಷ್ಟು ಪೋಟೋ ಪ್ರಿಂಟ್ ಹಾಕಿಸಬಹುದು, ಮತ್ತೆ ಮತ್ತೆ ಬರಬಹುದು
ಅವಳು ನಕ್ಕಳು
ಈಗ ನೀವು ಸರಿಯಾಗಿ ವ್ಯವಹಾರಕ್ಕೆ ಇಳಿದಿರಿ,
ನಾನು ಆನಂದ ಮೈಸೂರಿಗೆ ಹೋದಾಗಿನ ಪೋಟೋಗಳು ಇವೆಲ್ಲ. ಕೆಅರ್ ಎಸ್ ನಲ್ಲಿ ಯಾರೋ ಪೋಟೋಗ್ರಾಫರ ತೆಗಿದಿದ್ದು, ಪಾಪ ಆನಂದನೆ ಹಣ ಕೊಟ್ಟಿದ್ದ. ಈ ನೆಗೆಟೀವ್ ಹಾಗು ಪೋಟೋ ಎರಡನ್ನೂ ನಿಮಗೆ ಹಿಂದಿರುಗಿಸುತ್ತೇನೆ. ನನಗೆ ಅದರಿಂದ ಏನು ಆಗಬೇಕಾಗಿಲ್ಲ. ನಾನು ಪದೇ ಪದೇ ಬಂದರೆ ನೀವು ಹಣ ಕೊಡಲ್ಲ ಅಂತ ಗೊತ್ತಿದೆ. ಇದು ಅವನಿಗೆ ಮದುವೆ ಅಲ್ಲವೇ , ರಿಸಿಪ್ಷನ್ ಅಂದರೆ ಕನಿಷ್ಠ ಸಾವಿರ ಜನ ಸೇರಿರುತ್ತಾರೆ ಅವರ ಎದುರಿಗೆ ನನ್ನ ಕೂಗಾಟಕ್ಕೂ ಒಂದು ಬೆಲೆ ಇರುತ್ತದೆ.

ನನಗೆ ಬೇರೆ ಯಾವ ದಾರಿಯೂ ಇರಲಿಲ್ಲ,
ಒಡವೆ ಹಾಗು ಹಣ ಎಲ್ಲ ತೆಗೆದುಕೊಟ್ಟೆ, ಸಂದ್ಯಾ ಬಳಿ ಇದ್ದ ಹಣವನ್ನು ಸಹ ಅವಳೂ ಕಿತ್ತುಕೊಂಡಳು. ತಾಳಿ ಮಾತ್ರ ಉಳಿಸಿದಳು. ನಂತರ ಮದುವೆ ಮನೆಗೆ ಹಿಂದಿರುಗಿದರೆ, ಅಮ್ಮ ಅಪ್ಪ ಎಲ್ಲರೂ ಕೇಳೋರೆ ಒಡವೆ ಎಲ್ಲ ಏನಾಯಿತು ಎಂದು. ಯಾರಿಗು ತಿಳಿಸುವ ಹಾಗಿಲ್ಲ, ಆನಂದನ ಮರ್ಯಾದೆ ಪ್ರಶ್ನೆ, ಹಾಗಾಗಿ, ಪಾರ್ಲರ್ ನಲ್ಲಿ ಅಲಂಕಾರ ಮಾಡುವಾಗ ಒಡವೆ ತೆಗೆದು ಇಟ್ಟಿದ್ದೆ, ಅಲ್ಲಿ ಕಳೆದುಹೋಯಿತು ಅಂತ ತಿಳಿಸಿದೆ. ಸಂದ್ಯಾ ಸಹ ಸಪ್ಪೆ ಮುಖ ಧರಿಸಿ ನಿಂತಳು. ಬೇಜವಾಬ್ಧಾರಿ ಹುಡುಗಿ ಎಂದು ಮದುವೆ ದಿನ ಸಹ ಎಲ್ಲರ ಕೈಲಿ ಅನ್ನಿಸಿಕೊಳ್ಳಬೇಕಾಯಿತು ನನ್ನ ಕಾರಣದಿಂದ ಸಂದ್ಯಾಳಿಗೆ ಸಹ ಮಾತು ಕೇಳುವ ದುರಾದೃಷ್ಟ. ಈ ವಿಷಯ ಅದೇಕೊ ಆನಂದನಿಗೆ ಯಾವತ್ತು ತಿಳಿಸಲೇ ಇಲ್ಲ
ಜ್ಯೋತಿ ಮಾತು ನಿಲ್ಲಿಸಿದಳು. ಆನಂದ ಆಶ್ಚರ್ಯಪಟ್ಟವನಂತಿದ್ದ, ಅವನು ಅಪರಾದಿ ಮನೋಭಾವದ ಮುಖದೊಂದಿಗೆ ಸಂದ್ಯಾಳ ಕಣ್ಣುಮುಚ್ಚಿದ್ದ ಮುಖ ನೋಡುತ್ತಿದ್ದ . ಅವನು ತುಟಿಯೊಳಗೆ ಮಾತನಾಡಿಕೊಂಡಿದ್ದು ಆ ನಿಶ್ಯಬ್ಧದಲ್ಲಿ ನನಗೆ ಸ್ವಷ್ಟವಾಗಿ ಕೇಳಿಸಿತು.
ಕಲ್ಪನ….
ನನಗೆ ಈಗ ಗೊಂದಲ , ಜ್ಯೋತಿಯನ್ನು ಮುಂದೆ ಏನು ಕೇಳುವದೆಂಬ ಗೊಂದಲ, ಕೇಳಿದೆ
ಆನಂದನಿಗೆ ಈ ವಿಷಯ ಏಕೆ ತಿಳಿಸಲಿಲ್ಲ ?
ತಿಳಿಸುವ ಅಗತ್ಯವಿದೆ ಎಂದು ಅನ್ನಿಸಲಿಲ್ಲ, ಅವನು ಎಂದೋ ಮಾಡಿದ್ದ ತಪ್ಪು ಅದು, ಅದನ್ನು ಸರಿಪಡಿಸಿಕೊಂಡಿದ್ದಾನೆ ಅನ್ನುವಾಗ ಏಕೆ ಕೆದಕಬೇಕು ಎಂದು ಸುಮ್ಮನಾದೆ. ಗಂಡನಿಗೆ ಎಲ್ಲ ವಿಷಯವನ್ನು ಹೇಳಲು ಆಗಲ್ಲ…..
ಅವಳು ಮತ್ತೆ ಅದೇನೊ ನೆನಪಿಸಿಕೊಳ್ಳುವಂತೆ ತೋರಿದಳು.
ನನಗೆ ಗಾಭರಿ ಅನ್ನಿಸುತ್ತಿತ್ತು, ಹೆಂಗಸರ ಮನದಲ್ಲಿ ಅದೇನು ಗುಟ್ಟುಗಳು ಇರುತ್ತವೋ. ಅದ್ಯಾರು ಮೂರ್ಖರು ಹೇಳಿದ್ದಾರೋ ಹೆಂಗಸರ ಬಾಯಲ್ಲಿ ಗುಟ್ಟು ಉಳಿಯುವದಿಲ್ಲ ಎಂದು. ಇಲ್ಲಿ ನೋಡಿದರೆ ಎಂತಹ ಗುಟ್ಟಿನ ವಿಷಯಗಳೆಲ್ಲ ಹೊರಬರುತ್ತಿದೆಯಲ್ಲ ಅನ್ನಿಸಿತು.
ಅಲ್ಲದೇ ಜ್ಯೋತಿ ನೆನಪಿನ ಈ ಪಯಣದಲ್ಲಿ ಸಿದ್ದವಾಗುವಾಗ ಇದ್ದ ಮನಸ್ಥಿತಿಯಲ್ಲಿ ಈಗ ಇರುವಂತಿಲ್ಲ. ಅವಳನ್ನು ಇದು ಹೇಳು ಇದು ಹೇಳಬೇಡ ಎನ್ನುವ ಸ್ಥಿತಿಯಲ್ಲಿ ನಾವ್ಯಾರು ಇಲ್ಲ. ಎಂತದೋ ಒಂದು ಸಿಕ್ಕಿನಲ್ಲಿ ಎಲ್ಲರೂ ಸಿಕ್ಕಿಬಿದ್ದಿದ್ದೇವೆ
ಈಗ ಸಂದ್ಯಾ ಸಹ ಕುತೂಹಲದಿಂದ ನೋಡುತ್ತಿದ್ದಳು, . ಆನಂದನ ಮುಖ ನಾನು ನೋಡಿದೆ, ಅವನು ತಡೆಯಬೇಡಿ, ಜ್ಯೋತಿ ಮುಂದುವರೆಸಲಿ ಅನ್ನುವಂತೆ ಸನ್ನೆ ಮಾಡಿದ.
ಜ್ಯೋತಿ ಮತ್ತೆ ನೆನಪಿಸಿಕೊಳ್ಳುತ್ತಿದ್ದಳು …………

 

Comments

Submitted by swara kamath Sun, 05/07/2017 - 20:07

ತುಂಬಾ ಕುತುಹಲಕಾರಿಯಾಗಿದೆ.ಮುಂದಿನ ಕಂತಿಗಾಗಿ ಕಾಯುತ್ತಿರುವೆ
ವಂದನೆಗಳು ಪಾರ್ಥರೆ.