ನೆನಪಿನ ಸಂಕ್ರಾಂತಿ

ನೆನಪಿನ ಸಂಕ್ರಾಂತಿ

ಇನ್ನೂ ನಿದ್ದೆಯ ಮಂಪರು.  ಬೆಳಗಿನ ಗಡ ಗಡ ಚಳಿಯಲ್ಲವೆ ಈ ಸಂಕ್ರಾಂತಿ ಮಾಸ.  ಹೀಗಂತ ನಾ ಕರೆಯೋದು ಇನ್ನೂ ಬಿಟ್ಟಿಲ್ಲ.  ಅಷ್ಟೊಂದು ಸವಿ ಸವಿಯಾದ ನೆನಪು ಈ ಸಂಕ್ರಾಂತಿ.  ಹೊದ್ದ ಹೊದಿಕೆ ಇನ್ನೂ ಬಿಗಿಯಾಗಿ ಹಿಡಿದು ಹೊರಳಿ ಮಲಗುತ್ತಿದ್ದೆ ಅಜ್ಜಿ ಎದ್ದೇಳೆ ಅಂದರೂ.  ಅವಳ ಮನೆಯಲ್ಲಿ ವಾಸ ಮೂರು ವರ್ಷ ಫ್ರಾಕು ಲಂಗ ಹಾಕಿ ಕುಣಿಯೊ ವಯಸ್ಸಿನಲ್ಲಿ.  ಆದರೀ ಸಂಕ್ರಾಂತಿ ಹಬ್ಬ ಇಷ್ಟೆಲ್ಲಾ ಸಡಗರ ಮಾಡುತ್ತಾರೆಂಬುದು ಅಲ್ಲಿರುವಾಗಲೇ ತಿಳಿದುಕೊಂಡಿದ್ದು.  ಈ ಹಬ್ಬದ ನೆನಪಿನ ಬುತ್ತಿ ಕಟ್ಟಿಕೊಟ್ಟವಳು ನನ್ನಜ್ಜಿ. ಅದಕ್ಕೇ ಇಷ್ಟು ವರ್ಷಗಳ ನಂತರವೂ ಪ್ರತೀ ಸಂಕ್ರಾಂತಿಯ ದಿನ ನೆನಪಿಸಿಕೊಳ್ಳುತ್ತೇನೆ ಅವಳು ಕಾಲವಾದರೂ ;  ಅಂದಿನ ಸಂಕ್ರಾಂತಿಯ ಸಡಗರ, ಅಜ್ಜಿಯೊಂದಿಗೆ ಕಳೆದ ಹಬ್ಬಗಳ ಸಾಲು ಮಾತು,ನಗು,ಅಜ್ಜಿಯ ಕೋಪ ಅವಳ ತಲೆ ತಿನ್ನೋ ಮಾತಿಗೆ ಇತ್ಯಾದಿ.
 
ಆ ಊರಿಗೆ ಇರುವುದೇ ಮೂರು ಮನೆ ಒಂದೇ ಕೋಳು,(ಅಂಕಣ)  ಒಂದೇ ಕುಟುಂಬ ಮೂರು ಭಾಗವಾಗಿ.  ಆದರೂ  ಸಂಧಿಯಲ್ಲಿ ಒಬ್ಬರ ಮನೆಯಿಂದ ಇನ್ನೊಬ್ಬರ ಮನೆಗೆ ಹೋಗಲು ಚಿಕ್ಕ ಬಾಗಿಲಿನ ಅವಕಾಶ ಕಲ್ಪಿಸಿಕೊಂಡಿದ್ದರು.  ಸದಾ ಮೂರೂ ಮನೆ ಸುತ್ತಾಡೋದು ನನ್ನ ಚಾಕರಿ, ನನ್ನದೇ ಮನೆ ಅನ್ನೋ ತರಾ.  ಹೀಗಿರುವಾಗ ಒಬ್ಬರ ಮನೆಯಲ್ಲಿ ಸಂಕ್ರಾಂತಿ ತಯಾರಿ ನಡೀತಾ ಇತ್ತು.  ಅವರು ಹೇಳ್ತಿದ್ದರು ಬೆಳಗಿನ ನಾಲ್ಕು ಗಂಟೆಗೆಲ್ಲಾ ಎದ್ದು ಸಂಕ್ರಾಂತಿ ಕಾಳು ಮಾಡಬೇಕು ಮುಳ್ಳು ಬರುತ್ತದೆ ಚೆನ್ನಾಗಿ ಚಳಿಯಲ್ಲಿ.  ನನಗೋ ತಲೆ ಬುಡ ಅರ್ಥ ಆಗದೆ ಬೇಡಾದ ಪ್ರಶ್ನೆ ಕೇಳಿ ಬಯ್ಸಿಕೊಂಡೆ ನನ್ನಜ್ಜಿ ಹತ್ರ.  " ಹೋಗೆ ಅದೆಂತಾ ಆ ನಮ್ನಿ ಪ್ರಶ್ನೆ ಕೇಳ್ತೆ?  ಅಷ್ಟು ಕುತೂಹಲ ಇದ್ರೆ ನೀನೂ ಬೆಳಗ್ಗೆ ನಾಕ್ಕಂಟೀಗೆ ಎದ್ಕಂಡು ಅಲ್ಲಿ ಹೋಗಿ ಕೂತ್ಕಂಡು ನೋಡು "ಎಂದು ಸವಾಲಾಕಿದರು.  ಕೆಟ್ಟ ಕುತೂಹಲ ಮುಳ್ಳು ಅಂದರೆ ಅದು ಹೇಗೆ, ಏನು, ಎತ್ತಾ?  ಬಿಡ್ತೀನಾ?  ಸರಿ ಅಜ್ಜಿ ಸವಾಲಿಗೆ ನಾನೂ ಸವ್ವಾ ಸೇರು. 
 
ಅಜ್ಜಿಗೆ ಹೇಳಿದೆ "ಬೆಳಗ್ಗೆ ನಾಕ್ಗಂಟೀಗೆ ಎಬ್ಸು.  ಆನೂ ನೋಡವು."  ಅಜ್ಜಿ ನಕ್ಕಳು ಸಣ್ಣದಾಗಿ.
 
ಮಾರನೇ ದಿನ ಬೆಳಿಗ್ಗೆ ನಾಲ್ಕಕ್ಕೆಲ್ಲಾ ಎದ್ದು ಸೀದಾ ಅವರ ಮನೆಗೆ ಹೋಗಿ ನೋಡ್ತೀನಿ.  ಆಗಲೇ ಒಂದಿಬ್ಬರು ಎದ್ದು ಬಟ್ಟಲಲ್ಲಿ ಕೈ ಆಡಿಸ್ತಿದ್ದಾರೆ!  ಪಕ್ಕದಲ್ಲಿ ನಿಗಿ ನಿಗಿ ಕೆಂಡದ ಒಲೆ.  ಅದರ ಮೇಲೆ ಒಂದು ದೋಸೆ ಹೆಂಚು.  ನನ್ನ ನೋಡಿ,
 
"ನೀ ಎಂತಕ್ಕೆ ಇಷ್ಟ ಲಗೂನೆ ಎದ್ಕಂಡು ಬಂಜೆ?  ಈನಮನಿ ಚಳಿ ಹೋಗ್ ಮಲಕ್ಕ ನಡಿ" ಅಂದರೂ ಬಿಡದೆ
 
 "ಅದೆಂತದು ಕೈ ಆಡಿಸೋದು ಅಂದೆ." 
 
"ಅದಾ... ಯಳ್ಳು ಒಂದು ಸ್ವಲ್ಪ ಜೀರಿಗೆ"
 
"ಎಂತಾ ಮಾಡಲ್ಲೆ ಇದು?  ಹೀಂಗೆಂತಕ್ಕೆ ಮಾಡ್ತೆ?"
 
ಅವರ ಮನೆಯಲ್ಲಿ ಮದುವೆ ವಯಸ್ಸಿನ ಚಂದದ ಅಕ್ಕ ಇದ್ದಳು.  ನಾವೆಲ್ಲ ಅವಳನ್ನು "ಅಕ್ಯಾ" ಎಂದೇ ಕರೆಯೋದಾಗಿತ್ತು.  ಅವಳು ಪ್ರತಿಯೊಂದು ಕೆಲಸದಲ್ಲೂ ನಿಪುಣೆ,ಎಲ್ಲರ ಬಾಯಲ್ಲಿ ಅವಳ ಹೊಗಳಿಕೆ.  ಅವಳ ಜೊತೆ ನನಗೂ ಸಲಿಗೆ ಜಾಸ್ತಿ ಇತ್ತು.  ನನ್ನನ್ನು ಹತ್ತಿರ ಕೂಡಿಸಿಕೊಂಡು ಅವಳು ಮಾಡುವ ಈ ಯಳ್ಳಿನ ಸಮಾಚಾರ ಎಲ್ಲಾ ಹೇಳುತ್ತ 
 
"ನೀನೂ ಮಾಡ್ತ್ಯ? ಆ ಹೇಳ್ಕೊಡ್ತಿ. ಬಾ ಕೂತ್ಕ ಇಲ್ಲಿ. "
 
ಸರಿ ನನ್ನ ಕೈಗೂ ಒಂದು ಚಿಕ್ಕ ಬಟ್ಟಲು ಬಂದಿತು.  ಉತ್ಸಾಹದಲ್ಲಿ ಕಣ್ಣು ನಿದ್ದೆ ಸರಿಸಿತ್ತು.  ದಿನಾ ಬೆಳಿಗ್ಗೆ ನಾಲ್ಕಕ್ಕೆಲ್ಲಾ ಎದ್ದೇಳದು, ಅವಳ ಜೊತೆ ಕೂತು ನನಗೆ ಕೊಟ್ಟ ಬಟ್ಟಲಲ್ಲಿ ಅವಳು ಹೇಳಿಕೊಟ್ಟಂತೆ ಕೈ ಆಡಿಸೋದು.   ಹೀಗೆ ಸುಮಾರು ಏಳೆಂಟು ದಿನ ಆಗಿರಬಹುದು ಎಳ್ಳು ಜೀರಿಗೆ ಬಿಳಿ ಬಣ್ಣ ತಳೆದು ಕ್ರಮೆಣ ನಕ್ಷತ್ರದಂತೆ ತನ್ನ ಮೈ ಸುತ್ತ ಚೂಪು ಚೂಪಾದಂತ ಆಕೃತಿಗಳು ಮೂಡಲು ಶುರುವಾಯಿತು.  ಮೊದಲೆಲ್ಲ ಅಂಗಡಿಯಲ್ಲಿ ಸಿಗೊ ಸಂಕ್ರಾಂತಿ ಕಾಳು ನೋಡಿದ್ದೆ  ಆದರೆ ಸಂಕ್ರಾಂತಿ ಕಾಳು ಹೀಗೆ ಮಾಡುವುದು ಗೊತ್ತೇ ಇರಲಿಲ್ಲ.  
 
 " ಈಗ ಸಾವಕಾಶ ಕೈ ಆಡಿಸು.  ಮುಳ್ಳು ಮುರಿದು ಹೋಗಲಾಗ ಗೊತ್ತಾತನೆ?"
 
ನನಗೊ ಕುಣಿಯೋದೊಂದು ಬಾಕಿ.  ಮುಳ್ಳು ಅಂದರೆ ಗುಲಾಬಿ ಮುಳ್ಳು, ಕೌಳಿಕಾಯಿ ಮುಳ್ಳು ಇಷ್ಟೇ ಗೊತ್ತಿತ್ತು.  ಈ ಮುಳ್ಳು ಹೊಸದು.  ಮುಳ್ಳಂತೆ ಚೂಪಾಗಿದ್ದರೂ ಕೈಗೆ ಚುಚ್ಚೋ ಮುಳ್ಳಲ್ಲ.  ಆಶ್ಚರ್ಯ ಬೇರೆ.  "ಎಷ್ಟು ಚಂದ ಕಾಣ್ತಲೆ ಈಗಾ ಅಕ್ಯಾ?  ಅಜ್ಜಿಗೆ ತೋರ್ಸಿಕ್ಕೆ ಬರಲ" ಅಂದೆ. 
 
 " ಇರೆ , ನಾಳೆನೂ ಒಂದಿನ ಮಾಡನ.  ಕಡಿಗೆ ತೋರ್ಸಲಕ್ಕಡೆ."
 
ಮಾರನೇ ದಿನ ಅಜ್ಜಿ ನಾ ಮಾಡಿದ ಸಂಕ್ರಾಂತಿ ಕಾಳು ಕಂಡು ಮುಖ ಊರಗಲ ಆಗಿತ್ತು. ಅಜ್ಜನ ಹತ್ತಿರ ಹೇಳಿದಾಗ ಬಕ್ಷಿಸ್ ಜಾಸ್ತಿ ಸಿಕ್ಕಿತ್ತು .  ಅಜ್ಜಿ ಕಂಜೂಷಿ ಅಂತ ಬಯ್ಕೊಂಡಿದ್ದೆ ಬರೀ ಎಂಟಾಣೆ ಕೊಟ್ಟಿದ್ದರು.  ಅಜ್ಜ ಎಂಟಾಣೆದು ಎರಡು ನಾಣ್ಯ ಕೊಟ್ಟಿದ್ದ.
 
ಮತ್ತೆ ಮುಂದಿನ ವರ್ಷ ಈ ರೀತಿ ಸಂಕ್ರಾಂತಿ ಕಾಳು ಮಾಡಲು ಅವಕಾಶ ಆಗಲೇ ಇಲ್ಲ.  ಏಕೆಂದರೆ ಆ ಅಕ್ಕನಿಗೆ ಮದುವೆ ಆಗೋಯ್ತು.  ಅದೇ ಮೊದಲು ಅದೇ ಕೊನೆ.  ಮತ್ತೆ ಆ ಸಂಕ್ರಾಂತಿ ಕಾಳು ನಾನು ಮಾಡಲೇ ಇಲ್ಲ.
 
ಹೀಗೆ ಶುರುವಾದ ಮುಳ್ಳಿನ ಕುತೂಹಲ ನಾನು ಆರನೇ ಕ್ಲಾಸಿನಲ್ಲಿ ಇರುವಾಗಲೇ ಸಂಕ್ರಾಂತಿ ಕಾಳು ಮಾಡಿ ಜಯಿಸಿದ್ದೆ.  ಒಂದೆಳೆ ಸಕ್ಕರೆ ಪಾಕ ಮಂದವಾಗಿ ಮಾಡಿಕೊಂಡು ತೊಟ್ಟು ತೊಟ್ಟೇ ಎಳ್ಳು ಜೀರಿಗೆ ಮಿಶ್ರಣಕ್ಕೆ ಹಾಕುತ್ತ ಮಧ್ಯೆ ಮಧ್ಯೆ ಬೆಚ್ಚಗೆ ಮಾಡಿಕೊಳ್ಳುತ್ತ ನಂತರ ಸ್ವಲ್ಪ ಸ್ವಲ್ಪ ಜಾಸ್ತಿ ಸಕ್ಕರೆ ಪಾಕದ ಹುಂಡುಗಳನ್ನು ಹಾಕಿ ನಿಧಾನವಾಗಿ ಮುಳ್ಳು ಬಂದ ಮೇಲೆ ಅದು ಮುರಿಯದಂತೆ  ಕೈ ಆಡಿಸುತ್ತ  ಮಾಡಬೇಕು.  ಸಂಕ್ರಾಂತಿ ಕಾಳು ಮಾಡುವುದು ಕಷ್ಟ ; ಆದರೆ ನೋಡಲ ಅತೀ ಸುಂದರ.  ಇದಕ್ಕೆ ಕೆಲವು ಕಡೆ ಕುಸುರೆಳ್ಳು ಎಂದು ಹೇಳುತ್ತಾರೆ.  ಇದನ್ನು ಬೆಳಗಿನ ಜಾವದ ಚಳಿಯಲ್ಲಿ ಕೂತು ಮಾಡಿದರೆ ಚೆನ್ನಾಗಿ ಮುಳ್ಳು ಬರುತ್ತದೆ ಎಂಬುದು ಪ್ರತೀತಿ.
 
ನಮ್ಮ ಮಲೆನಾಡಿನಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಈ ರೀತಿ ಸಂಕ್ರಾಂತಿ ಕಾಳು ಮಾಡುವ ಪದ್ಧತಿ ಇದೆ.  ಅಲ್ಲಿ ಕೊಬ್ಬರಿ ಬೆಲ್ಲ ತುಂಡರಿಸಿ ಮಾಡುವ ಪದ್ಧತಿ ಇಲ್ಲ.  ಸಕ್ಕರೆ ಅಚ್ಚು ಮಾಡುವುದಿಲ್ಲ. ಆದರೆ ಹಬ್ಬದ ದಿನ ಎಳ್ಳು, ಕೊಬ್ಬರಿ, ಬೆಲ್ಲ, ಏಲಕ್ಕಿ, ತುಪ್ಪ ಎಲ್ಲಾ ಹಾಕಿ ಎಳ್ಳು ಉಂಡೆಮಾಡಿ, ಹೊಸ ಅಕ್ಕಿ ಹಾಲು ಪಾಯಸ ಮಾಡಿ ಜೊತೆಗೆ ಕಬ್ಬು ಸಿಗಿದು ಹೋಳುಗಳನ್ನು ಮಾಡಿ ತಟ್ಟೆಯಲ್ಲಿ ಇಟ್ಟು ಹಣ್ಣು ಕಾಯಿಯೊಂದಿಗೆ ಮಾಡಿದ ಇನ್ನಿತರ ಭಕ್ಷಗಳೊಂದಿಗೆ ಹಬ್ಬದ ದಿನ ದೇವರಿಗೆ ನೈವೇದ್ಯ ಮಾಡುವ ಪದ್ಧತಿ ಇದೆ. 
 
ಇಂದಿನಿಂದ  ಉತ್ತರಾಯಣ ಪುಣ್ಯ ಕಾಲ ಶುರು.  ಸ್ವರ್ಗದ ಬಾಗಿಲು ತೆಗೆಯುತ್ತದೆ.  ಹೆಚ್ಚು ಹೆಚ್ಚು ಶೃದ್ಧೆಯಿಂದ ಪೂಜೆ ದಾನ ಧರ್ಮ ಮಾಡುವುದರಿಂದ ಮಾಡಿದ ಪಾಪವೆಲ್ಲ ಕಳೆದು ಸತ್ತ ನಂತರ ಸ್ವರ್ಗ ಸೇರುತ್ತಾರೆಂಬ ನಂಬಿಕೆ.  ಮಹಾಭಾರತ ಯುದ್ಧ ನಡೆದಾಗ ಇಶ್ಚಾ ಮರಣಿಯಾದ ಭೀಷ್ಮ ಪಿತಾಮಹ ಮುಳ್ಳಿನ ಮಂಚದ ಮೇಲೆ ಮಲಗಿ ಪ್ರಾಣ ಬಿಡಲು ಈ ದಿನಕ್ಕಾಗಿ ಕಾಯುತ್ತಿದ್ದನೆಂದು ಕಥೆ ಹೇಳುತ್ತದೆ.    
 
ಇದೇ ಕಾರಣಕ್ಕಾಗಿ ಹೆಚ್ಚಿನ ಮನೆಗಳಲ್ಲಿ ಸತ್ಯನಾರಾಯಣ ಕಥೆ ಪೂಜೆ ಮಾಡಿ ಕೆಲವರು ಗೋ ದಾನ, ದವಸ ಧಾನ್ಯ ಇತ್ಯಾದಿ ದಾನ ಮಾಡುವ ರೂಢಿ ಇಟ್ಟುಕೊಂಡಿದ್ದಾರೆ.  ಯಾವುದೇ ಹಬ್ಬ ಬರಲಿ ಮಾಡಿದ ಅಡಿಗೆಯಲ್ಲಿ "ಗೋಗ್ರಾಸ" ಅಂತ ಎಲ್ಲ ಸ್ವಲ್ಪ ಸ್ವಲ್ಪ ಕುಡಿ ಬಾಳೆಯ ಎಲೆಯಲ್ಲಿ ಎತ್ತಿಟ್ಟು ಸಾಯಂಕಾಲ ಹಸುಗಳು ಮೆಂದು ಮನೆಗೆ ಬಂದಾಗ ಅವುಗಳಿಗೆ ತುತ್ತು ನೀಡುವ ಪದ್ಧತಿ ಈಗಲೂ ಮುಂದುವರಿದಿದೆ.  
 
ಹೊಸ ಬಟ್ಟೆ ತೊಟ್ಟು ಮನೆ ಮಂದಿಗೆ ಅಕ್ಕ ಪಕ್ಕದವರಿಗೆಲ್ಲ ಸಂಕ್ರಾಂತಿ ಕಾಳು ಕೊಟ್ಟು "ಸಂಕ್ರಾಂತಿ ಹಬ್ಬದ ಶುಭಾಶಯಗಳು, ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡು" ಎಂದು ನಗೆಯ ಹೂರಣ ಮೆಲ್ಲೋದು.  ಹಿರಿಯರಿಂದ ಬರುವ ಶಹಬ್ಬಾಸ್ಗಿರಿ  ಅವರಿಂದ ಏನಾದರೂ ಬಕ್ಷಿಸ್ ಹಬ್ಬಕ್ಕೆ ಸಿಕ್ಕರೆ ಮತ್ತೊಂದಷ್ಟು ಖುಷಿಯ ಲೆಕ್ಕಾಚಾರ ಆ ವರ್ಷ ಮಾರಿಕಾಂಬಾ ಜಾತ್ರೆ ಇದ್ದರೆ ದುಡ್ಡು ಒಟ್ಟಾಕೊ ಬುದ್ಧಿ ಸತ್ಯನಾರಾಯಣ ಕಥೆಯಲ್ಲಿ ಸಿಗುವ ಭೋಜನ ದಕ್ಷಿಣೆಯನ್ನೂ ಬಿಡದೆ ಲೆಕ್ಕಾಚಾರ ತಲೆಯಲ್ಲಿ .  ಎಲ್ಲರ ಮನೆ ಪೂಜೆಗೆ ತಪ್ಪದೇ ಹಾಜರಾಗೋದು ದೇವರ ಹೂವಿನ ಪ್ರಸಾದ, ತೀರ್ಥಕ್ಕಿಂತ ಸತ್ಯನಾರಾಯಣ ಕಥೆಗೆ ಮಾಡುವ ಪ್ರಸಾದ ತೆಗೆದುಕೊಳ್ಳಲು ಮುಂದೆ ಹೋಗಿ ನಿಲ್ಲೋದು.  ಹಬ್ಬ ಕಳೆದ ಮೇಲೆ ಡಬ್ಬದಲ್ಲಿ ಉಳಿದಿರುವ ಸಂಕ್ರಾಂತಿ ಕಾಳು ಮೇಲಿರುವ ನಾಗಂತ್ಕೆ (ಶೆಲ್ಪ) ಯಿಂದ ತೆಗೆಯಲು ಹೋಗಿ ಡಬ್ಬಾನೇ ಬಿದ್ದು ಸಂಕ್ರಾಂತಿ ಕಾಳೆಲ್ಲ ಅಡಿಗೆ ಮನೆಯೆಲ್ಲ ಹರಡಿ ಮತ್ತೆ ಅಜ್ಜಿ ಹತ್ತಿರ ಬಯ್ಸಕಂಡಿದ್ದಂತೂ ಮರೆಯೋಕೆ ಸಾಧ್ಯ ಇಲ್ಲ. ಸಖತ್ ಉಡಾಫೆ ಬುದ್ಧಿ !!
 
" ಆ ಎಂತಾರು ಬೇಜಾರು ಮಾಡಿದ್ರೆ ಮನಸಲ್ಲಿ ಇಟ್ಕಳಡಾ.  ಇಬ್ಬರೂ ಮರೆತು ಬಿಡನ ಅಕಾ" ಹೀಗೆ ಹೇಳುವುದು ಮಾರನೇ ದಿನ ಅದೇ ಹೊಸಾ ಲಂಗದಲ್ಲಿ ಶಾಲೆಗೆ ಹೋದಾಗ ಕ್ಲಾಸಲ್ಲಿ ಎಲ್ಲರಿಗೂ ಸಂಕ್ರಾಂತಿ ಕಾಳು ಕೊಟ್ಟು ಶುಭಾಶಯ ಹೇಳಿ ಪಂಚರಿಲ್ಲದ ರಾಜಿ ಪಂಚಾಯಿತಿ.  ಮತ್ತದೇ ಜಗಳ ಮಾರನೇ ದಿನ ಶುರುವಾದರೂ ಆ ದಿನ ಮಾತ್ರ ಎಲ್ಲರೂ ಒಂದೇ.  ಏಕೆಂದರೆ ಹೊಸ ಲಂಗದ ವರ್ಣನೆ. ನೀ ಎಷ್ಟು ದುಡ್ಡು ಒಟ್ಟಾಕಿದ್ದೆ?  ಮಾರಿ ಜಾತ್ರೆಯಲ್ಲಿ ಎಂತಾ ತಂಗಂಬನ? " ಇಂತದ್ದೆ ಮಾತು.  ಆ ದಿನ ಇಡೀ ಇದೇ ಸಡಗರ ಓಡಾಟ ಶಾಲೆ ತುಂಬ.  ಅದಕ್ಕೆ ಸರಿಯಾಗಿ ಶಿಕ್ಷಕರೂ ಸಾಥ್ ಕೊಡುತ್ತಿದ್ದರು.   ಹಬ್ಬದ ದಿನವಂತೂ ಶಾಲೆಗೆ ರಜೆ ಗ್ಯಾರಂಟಿ ಆಗಿತ್ತು.
 
ನಾವಂದುಕೊಳ್ಳುತ್ತೇವೆ ಒಮ್ಮೊಮ್ಮೆ ದೇವರು ಯಾಕೆ ಈ ನೆನಪನ್ನು ಕೊಟ್ಟಿದ್ದಾನೊ ಏನೊ?  ಕಹಿ ಗಳಿಗೆ ಬೇಡಾ ಬೇಡಾ ಅಂದರೂ ನೆನಪಿಗೆ ಬರುತ್ತದೆ.  ಮರೆಯೋಕ್ಕೇ ಆಗುತ್ತಿಲ್ಲ.  ಏನು ಮಾಡೋದಪ್ಪಾ ಅಂತ ವ್ಯಥೆ ಪಡುತ್ತೇವೆ.  ಆದರೆ ಇಂತಹ ಸುಂದರ ನೆನಪುಗಳು ನೆನಪಾಗಿ ಉಳಿದು ಆಗಾಗ ನೆನಪಾಗಿ ಮನಸ್ಸು ಮತ್ತೆ ಬಾಲ್ಯಕೆ ಕಾಲಿಟ್ಟು ಹೃದಯ ಖುಷಿಯಿಂದ  ಹಕ್ಕಿಯಂತಾಗುವುದು ನಿಶ್ಚಿತ.
 
13-1-2017  4.13pm