ನೆನಪಿನ ಹಾಯ್ಕುಗಳು

ನೆನಪಿನ ಹಾಯ್ಕುಗಳು

ಕವನ

 

 
(೧)
ನಮ್ಮೀ ಸಂಬಂಧದ 
ಅಗ್ನಿದಿವ್ಯಕ್ಕೆ 
ಪ್ರೀತಿಯ ನೆನಪುಗಳ 
ಹವಿಸ್ಸು.
(೨)
ನೆನಪಿನಂಗಳ 
ಗುಡಿಸ ಹೊರಟಿದ್ದೇನೆ 
ಆದರೆ ಜೊತೆಗಿರುವುದು 
ಪ್ಲಾಸ್ಟಿಕ್ ಕಸಪೊರಕೆಯಂಥ
ನಿನ್ನ ನೆನಪು -
ಎಂದು ಸವೆಯುವುದಿಲ್ಲ. 
(೩) 
ಕುಡಿದಿರಬೇಕಂತೆ ಯಾವಾಗಲು 
ವೈನ್, ಕಾವ್ಯ ಅಥವಾ ರುಜುತ್ವವನ್ನು 
ನಾನು ನಿನ್ನ ನೆನಪುಗಳನ್ನು 
ಹನಿ ಹನಿಯಾಗಿ ಗುಟುಕರಿಸುತ್ತಿದ್ದೇನೆ.
(೪)
ಬದುಕಿಗೆ ಉದಾತ್ತತೆಯ
ಹೊರಿಸಿ 
ಇನ್ನೂ ಪಾಪಗೈಯುತ್ತಿದ್ದಾನೆ 
ಮನುಷ್ಯ. 
(೫)
ಅರ್ಧ ಬೋಳಾದ 
ಹಲಸಿನ ಮರದಲಿ 
ಒಂಟಿ ಅಳಿಲು
ಮತ್ತು 
ಕಡು ಪ್ರೀತಿ 
ಕಾಷ್ಠ ಮೌನ 
ಹೊತ್ತ ಕವಿ. 
(೬) 
ಮೀರುವುದರಲ್ಲೇ 
ಅರ್ಧ ಬದುಕು 
ಸವೆಸಿದ ಕವಿ
ನೋವ ಮೀರಲು 
ಕುಡಿದು 
ಮಲಗಿದವನ 
ಕಂಡು ಮರುಗುತ್ತಾನೆ. 
(೭)
ನೆನಪಿನುಸಿರು ತುಂಬಿದ
ಬಣ್ಣದ ಬಲೂನು 
ನಮ್ಮ ಜೀವನ 
ಆ ಕಡೆ ನೀನು 
ಈ ಕಡೆ ನಾನು! 
(೮) 
ನನ್ನ ಎದೆಗಡಲಲಿ 
ದೋಣಿ ತೇಲಿ ಬಿಟ್ಟಿರುವೆ ನೀನು 
ಸಿಗಲಾರವು ಮುತ್ತು ರತ್ನ 
ಆದರೆ ಸಿಗಬಹುದು ನಿನಗೆ 
ಬಲೆಗೆ ಬೀಳಲು ನಿರಾಕರಿಸುವ 
ನಿನ್ನ ನೆನಪ  ಮೀನುಗಳು. 

Comments