ನೆನಪುಗಳು ನಕ್ಯಾವೆ ಈ ಪದ್ಗಳಲ್ಲಿ

ನೆನಪುಗಳು ನಕ್ಯಾವೆ ಈ ಪದ್ಗಳಲ್ಲಿ

ಕವಿಯಾಗಿಯೂ ನಾ ಸೋತೆ ...

ಪುಸ್ತಕದೊಳಗಿನ ಬಿಳೀ ಹಾಳೆಗಳಲ್ಲಿ
ಕೊಡಲಾಗದೆ ಉಳಿದ ತುಂಡು ಚೀಟಿಗಳಲ್ಲಿ
ಕೊರೆದಿದ್ ಅಕ್ಷರಗಳೆಲ್ಲ ನರ್ತನ ಮಾಡುತ್ತ
ಇಂದ್ಯಾಕೋ ಹರಿದ್ಯಾವೆ ಈ ಪದ್ಗಳಲ್ಲಿ

ಹೃದಯದ ಒಳಗೆ ಬಚ್ಚಿಟ್ ಭಾವನೆಗಳು
ಆಳದಲೆಲ್ಲೋ ಹುಗಿದಿದ್ದ ಪ್ರೇಮದ್ ಮಿಡಿತಗಳು
ರಕ್ತದ ಕಣಕಣದಾಗೆ ಸೇರಿಹೋದ ಸೆಳೆತಗಳು
ಇಂದ್ಯಾಕೋ ಚೆಲ್ಯಾವೆ ಈ ಪದ್ಗಳಲ್ಲಿ

ಹೇಳೋಕ್ ಬಾಯಿ ಬರಲಿಲ್ಲ ನಿನ್ಮುಂದೆ ಅಂದು
ಹೇಳೋಣ ಅಂದರೆ ಕಾಲ ಮೀರ್ಯಾವೆ ಇಂದು
ಮುಚ್ಚಿದ್ ಬಾಯಿ, ತೆರೆದಿಟ್ಟ ಹೃದಯದಿಂದ
ನೆನಪುಗಳು ಹರಿದ್ಯಾವೆ ಈ ಪದ್ಗಳಲ್ಲಿ

ನುಡಿದಿದ್ರೆ ಕಳ್ಕೊಳ್ಳೋ ಭಯವು ಎದೆಯಾಗೆ ಅಂದಿತ್ತು
ಹೃದಯದ್ ಭಾರ ತಗ್ಗಿಸೋ ಇಂಗಿತ ಇಂದಾಯ್ತು
ಸೂರ್ಯನಿಳಿವ ಚಂದ್ರನೇರುವ ಈ ಸಮಯದಿ
ನೆನಪುಗಳು ನುಗ್ಯಾವೆ ನನ್ ಪದ್ಗಳಲ್ಲಿ

ನೀನಿಂದು ಎಲ್ಲಿದ್ದೀ ಎಂದು ನಾನರಿಯೆ
ನಾನಿಂದು ಇಲ್ಲಿರುವೆ ಎಂದು ನೀನರಿಯೆ
ಎನ್ನೆದೆ ಅಂಗಳದಲ್ಲಿ ನಿನ್ ನೆನಪೇ ರಂಗೋಲಿ
ನೆನಪುಗಳು ನಕ್ಯಾವೆ ಈ ಪದ್ಗಳಲ್ಲಿ

ಅಂದು, ಕಳೆದುಕೊಳ್ಳೋ ಭಯ ಮನದಲ್ಲಿ ನುಗ್ಗಿತ್ತು
ಇಂದು ಕಳ್ಕೊಂಡ್ ಮೇಲೆ, ಇಲ್ಲದ ಧೈರ್ಯ ಬಂದಾಯ್ತು
ಎಂದೂ ಇಲ್ಲದೇ ಇರೋದ, ಕಳ್ಕೊಳ್ಳೋದು ಹೇಗೆ ಎನಿಸಿತ್ತು
ನೆನಪುಗಳು ಮೌನವಾಗಿವೆ ಈ ಪದ್ಗಳಲ್ಲಿ

ಮುಸ್ಸಂಜೆ ಹೊತ್ತಲ್ಲಿ ನೀರವತೆಯ ಚಿಪ್ಪಲ್ಲಿ
ಗುಂಗುರು ಮುಂಗುರುಳ ತೀಡ್ಕೊಳ್ತ ನಿನ್ ಬೆರಳಲ್ಲಿ
ಈ ಕವನ ಹಾಡಾಗಿ ಕೇಳಿಸಿಕೊಂಡಾಗ ಬಾನಲ್ಲಿ
ನೆನಪುಗಳು ಹರಿದೀತೇನೋ ನಿನ್ ಹೃದಯದಲ್ಲಿ

ಹೃದಯ ಸೋತಿಹುದು ಅರಿಯದೆ ಹೇಗೆಂದು ಅಳಲು
ಹೊರಹಾಕಲು ಎನ್ನೆದೆಯಾಳದಿ ಹುದುಗಿಹ ಅಳಲು
ಆಗಿಹೆನು ಇಂದು ರವಿ ಕಾಣದ್ದ ಕಾಣುವನಾಗಿ
ಆದರೂ ಹರಿಸಲಾಗುತ್ತಿಲ್ಲ ಆ ನೆನಪುಗಳು
ಈ ನನ್ನ ಪದ್ಗಳಲ್ಲಿ
ಈ ನನ್ನ ಪದ್ಗಳಲ್ಲಿ
 

Comments