ನೆನಪುಗಳ ಸುರುಳಿ ಬಿಚ್ಚಿ . . .

ನೆನಪುಗಳ ಸುರುಳಿ ಬಿಚ್ಚಿ . . .

ಬರಹ

ಹೀಗೇ ಸುಮ್ಮನೆ, ಓರ್ಕುಟ್ ನಲ್ಲಿ ಸುತ್ತು ಹಾಕ್ತಾ ಇದ್ದೆ. ಹಳೆಯ ಸ್ನೇಹಿತರು ... ಸಿಕ್ಕ ಹಾಗೇ ಹಳೆಯ ನೆನಪುಗಳು ಬಿಚ್ಚಿಕೊಂಡವು. ಓರ್ಕುಟ್ ನ ಒಂದು ಸೈಟ್ನಲ್ಲಿ ಸೈಂಟ್ ಆನ್ಸ್ ಹೈ ಸ್ಕೂಲ್ ನ ಕಮ್ಯುನಿಟಿ ಲಿಂಕ್ ಸಿಕ್ತು. ಅದ್ರಲ್ಲಿ ಯಾರೋ" ನಿಮ್ಮ ಫೇವರಿಟ್ ಟೀಚರ್ ಯಾರು " ಅಂತ ಪ್ರಶ್ನೆ ಕೇಳಿದ್ದ್ರು. ಸಂಧ್ಯಾ ಮಿಸ್, ಕಾರ್ಮ್ ಲೀಟಾ ಮಿಸ್, ಡೋರಿನ್ ಮಿಸ್ ... ಹೀಗೇ ಹಲವು ಹೆಸರುಗಳು ಕಂಡವು.

ನಾನು ಶಾಲೆ ಕಲಿತದ್ದು , ಮಂಗಳೂರಿನ ಸೈಂಟ್ ಆನ್ಸ್ ಕನ್ನಡ ಪೈಮರಿ ಶಾಲೆಯಲ್ಲಿ. ಆದ್ರೆ ನನಗೆ ಹೈಸ್ಕೂಲಿನ ಎಲ್ಲ ಟೀಚರ್ಸ್ ಪರಿಚಯ. ಯಾಕಂದ್ರೆ, ನನ್ನ ಅಪ್ಪ ಸೈಂಟ್ ಆನ್ಸ್ ಹೈಸ್ಕೂಲಿನಲ್ಲಿ ಟೀಚರ್ ಆಗಿದ್ರು. . ನಾನು ಮತ್ತು ನನ್ನ ತಮ್ಮ ಮಧ್ಯಾಹ್ನ ಅಪ್ಪನ ಸ್ಟಾಫ್ ರೂಮ್ಗೆ ಊಟ ಮಾಡಲು ಹೋಗ್ತಾ ಇದ್ದೆವಲ್ಲಾ, ಹಾಗಾಗಿ ಎಲ್ಲ ಟೀಚರ್ಸ್ ನಂಗೆ ಗೊತ್ತಿದ್ರು. ಹಾಗೇ ಓರ್ಕುಟ್ ನಲ್ಲಿ ನನ್ನ ಪ್ರೈಮರಿ ಶಾಲೆಯ ಲಿಂಕ್ ಸಿಗುತ್ತಾ ಅಂತ ಹುಡುಕಿದೆ. ಉ ಹೂಂ. ಇಲ್ಲ. ಆದ್ರೆ. ಅದೇ ನೆಪ ಆಯ್ತು.

ಹಾಗೇ ಕೂತು, ನನ್ನ ಹಳೆಯ ಟೀಚರ್ಸ್ ಗಳ ನೆನಪು ಮಾಡ್ದೆ. ನಾವು ಚಿಕ್ಕವರಿರುವಾಗ, ಟೀಚರ್ ಗಳ ಹೆಸರು ನಮಗೆ ಗೊತ್ತೇ ಇರಲಿಲ್ಲ. ಒಂದನೇ ಕ್ಲಾಸ್ ಟೀಚರ್ , ಎರಡನೇ ಕ್ಲಾಸ್ ಟೀಚರ್ , ಮೂರನೇ ಕ್ಲಾಸ್ ಟೀಚರ್ , ನಾಲ್ಕನೇ ಕ್ಲಾಸ್ ಟೀಚರ್ .... ಹೀಗೆ. ಯಾವಾಗ ಟೀಚರ್ ಗಳ ಹೆಸರು ನನಗೆ ಗೊತ್ತಾಯ್ತು ಅಂತ ನೆನಪಾಗ್ತಾ ಇಲ್ಲ. ಗ್ರೇಸಿ ಟೀಚರ್, ಲೀಟಾ ಟೀಚರ್, ಮೇರಿ ಟೀಚರ್ ... ಅಂತ ಅವರ ಹೆಸರುಗಳು. ಆದರೆ, ಅವರ ಹೆಸರು ಗಳೊಂದಿಗೆ ಅವರ ಮುಖಗಳು ತಳಕು ಹಾಕುವುದೇ ಇಲ್ಲ. ಒಂದನೇ ಕ್ಲಾಸ್ ಟೀಚರ್ ಅಂತ ಹೇಳಿದ ಕೂಡಲೇ, ಟೀಚರ್ ನೆನಪಾಗ್ತಾರೆ. ಶಾಲೆಯ ದಿನಗಳೆಲ್ಲ ಕಣ್ಮುಂದೆ ಓಡಾಡ್ತವೆ.

ನಾನು ನಾಲ್ಕನೇ ಕ್ಲಾಸ್ ನಲ್ಲಿ ದ್ದಾಗ ಸಿಸ್ಟರ್ ಕ್ಲೆರೆಟ್ಟಾ ಬಂದ್ರು. ನಾಲ್ಕನೇ ಕ್ಲಾಸಿಗೆ ಟೀಚರ್. ಹೆಡ್ ಮಿಸೆಸ್ ಕೂಡ. ಅವರು ನನ್ನ ತಮ್ಮನನ್ನ ಪ್ರೀತಿಯಿಂದ , ಬೊಕೊಲೊ ( ಕೊಂಕಣಿ ಪದ- ಆಡಿನ ಮರಿ ) ಅಂತ ಕರೀತಿದ್ರು. ಎರಡನೇ ಕ್ಲಾಸ್ ನಲ್ಲಿದ್ದಾಗ ಎನೋ, ನಕ್ಷತ್ರ, ಮೋಡ, ಆಕಾಶದ ಡ್ರೆಸ್ ನಲ್ಲಿ ಡಾನ್ಸ್ ಮಾಡಿದ್ದು ನೆನಪು. ಸ್ಕೂಲ್ ಡೇ ಗೆ. ನಂಗೆ ಸ್ಕೂಲ್ ಡೇಗಳು ಮಾತ್ರ ನೆನಪಲ್ಲಿ ಇರುತಿತ್ತು. ಯಾಕಂದ್ರೆ, ಪ್ರತಿ ವರ್ಷ ನಾನು ಯಾವುದಾದ್ರೂ ಡಾನ್ಸ್ ನಲ್ಲಿ ಇರ್ತಾ ಇದ್ದೆ. ನಾನು ಡಾನ್ಸ್ ಕ್ಲಾಸ್ ಗೆ ಹೋಗ್ತಾ ಇದ್ದೆ ಅಲ್ವಾ. ಅದಕ್ಕೆ ನಾನಿಲ್ಲದೆ ಯಾವ ಡಾನ್ಸ್ ಕೂಡ ಪೂರ್ತಿ ಆಗ್ತಿರ್ಲಿಲ್ಲ. ನಮ್ಮ ಟೀಚರ್ಸೇ ಡಾನ್ಸ್ ಹೇಳಿಕೊಡ್ತಾ ಇದ್ರು. ನಾನು ನಾಟಕದಲ್ಲಿ ಪಾರ್ಟ್ ಮಾಡಿದ್ದೇ ಇಲ್ಲ. ಆಮೇಲೆ ಐದನೇ ಕ್ಲಾಸ್ ಗೆ ಹೈಸ್ಕೂಲ್ ಕಟ್ಟಡಕ್ಕೆ ಶಿಫ್ಟ್ ಆದ್ವಿ. ಐದು , ಆರನೇ , ಏಳನೇ ಕ್ಲಾಸ್ , ಹೈಸ್ಕೂಲ್ ಜತೆಗೇ ಇತ್ತು. ಐದನೇ ಕ್ಲಾಸ್ ನ ರೂಬಿ ಟೀಚರ್, ಆರನೇ ಕ್ಲಾಸ್ ನ ರೀಟಾ ಟೀಚರ್, ಏಳನೇ ಕ್ಲಾಸ್ ನ ಮನೋರಮಾ ಟೀಚರ್. ಆರನೇ ಕ್ಲಾಸ್ ಗೆ ಮತ್ತೆ ಪ್ರೈಮರಿ ಶಾಲೆಯ ಕಟ್ಟಡಕ್ಕೇ ಬಂದ್ವಿ. ಸಿಸ್ಟರ್ ಕ್ಲೆರೆಟ್ಟಾ ಅವರ ಪ್ರಯತ್ನದಿಂದ , ನಮ್ಮ ಶಾಲೆ ಹೈಯರ್ ಪ್ರೈಮರಿ ಶಾಲೆ ಆಯ್ತು.

ನಮ್ಮ ಶಾಲೆಯಲ್ಲಿ ಅದೇನೋ ಉಂಡೆ ಅಂತ ಮಾಡ್ತಾ ಇದ್ರು. ಅದು ಸರಕಾರ ಕೊಡ್ತಾ ಇದ್ದದ್ದು . ಉಚಿತವಾಗಿ ಅಂತ ನೆನಪು. ಆ ಕಾಲದ ಸರಕಾರದ್ದೂ ಅದೇ ಗೋಳು. ಹಳೆಯ ಸ್ಟಾಕ್. ಅದೆಂಥದೋ ಒಂದು ರೀತಿಯ ವಿಚಿತ್ರ ರುಚಿ, ವಾಸನೆ. ನಾವು ಹಿಟ್ಟಿನಿಂದ ಉಂಡೆ ತಯಾರಿಸ್ತಾ ಇದ್ವಿ. ಐದು , ಆರು ಮತ್ತು ಏಳನೇ ಕ್ಲಾಸಿನ ಹುಡುಗಿಯರಿಗೆ ಈ ಕೆಲಸ. ಕೆಲವೊಮ್ಮೆ ಈ ಕೆಲಸ ಮಾಡೋ ಉತ್ಸಾಹ ಇದ್ದ ಹುಡುಗರೂ ಸಹಾಯ ಮಾಡ್ತಾ ಇದ್ರು. ಆದ್ರೆ ಟೀಚರ್ಸ್ ಬಿಡ್ಬೇಕಲ್ಲ. " ನಿಮ್ಗೆ ಇಲ್ಲಿ ಏನ್ ಕೆಲ್ಸ " ಅಂತ ಓಡಿಸ್ತಾ ಇದ್ರು . ಸ್ವಲ್ಪ ದಿನ ಉಂಡೆ ಹೇಗೋ ತಿಂದೆ. ಆಮೇಲೆ, ಶಾಲೆಯಲ್ಲಿ ಕೊಟ್ಟ ಉಂಡೆ ಮನೆಗೆ ಬಂದು ಕಸದ ಡಬ್ಬೆಗೆ ಬೀಳ್ತಾ ಇತ್ತು. ನನ್ನ ತಮ್ಮನಿಗೂ , " ನೀನು ಉಂಡೆ ತಿನ್ನಬೇಡ " ಅಂತ ಹೇಳಿದ್ದರೂ ಆತ ಸಂಕೋಚದಿಂದ, ಕೆಲವೊವ್ಮ್ಮೆ ಶಾಲೆಯಲ್ಲೇ ಉಂಡೆ ತಿಂತಿದ್ದ. ಮತ್ತೆ ಕೆಲವೊಮ್ಮೆ ಮನೆಗೆ ತರ್ತಾ ಇದ್ದ. ಕಸದ ಡಬ್ಬೆಗೆ ಹಾಕಲಿಕ್ಕೆ.

ಮನೆಯಿಂದ ಟಿಫಿನ್ ಕ್ಯರಿಯರ್ ತೆಗೊಂಡು ಹೋಗ್ತಾ ಇದ್ವಿ . ಶಾಲೆಯ ಕಟ್ಟಡದ ಪಕ್ಕದಲ್ಲೇ ಒಂದು ಷೆಡ್ ತರಹ ಇತ್ತು. ಮಧ್ಯಾಹ್ನ ಅಲ್ಲೇ ಎಲ್ಲರೂ ಕೂತ್ಕೊಂಡು ಊಟ ಮಾಡ್ತಾ ಇದ್ವಿ. ಅಬ್ಬಬ್ಬಾ... ಅದೆಷ್ಟು ಕಾಗೆಗಳು ಬರ್ತಿದ್ವು. ನಮ್ಮ ಜತೆ ಊಟಕ್ಕೆ. ಊಟ ಮಾಡಿದ ನಂತರ ಷೆಡ್ ಗೆ ನೀರು ಹಾಕಿ ತೊಳೆಯುವ ಕೆಲಸ. ಅದಾದ ಮೇಲೆ ಸಂಜೆ ಟಾಯ್ಲೆಟ್ ಕ್ಲೀನಿಂಗೂ ಇತ್ತು. ಎರಡೂ ಕೆಲಸ ಹುಡುಗಿಯರಿಗೇ ಮೀಸಲು. ಸದ್ಯ ಹುಡುಗರ ಟಾಯ್ಲೆಟ್ ಹುಡುಗರೇ ಕ್ಲೀನ್ ಮಾಡ್ತಾ ಇದ್ರು. ಕಸ ಗುಡಿಸುವ ಕೆಲಸದಲ್ಲಿ ಹುಡುಗರೂ ಸಹಾಯ ಮಾಡ್ತಾ ಇದ್ರು.

ಮಂಗಳೂರಿನ ಮಳೆ ಅಂದ್ರೆ ಹೇಳ್ಬೇಕಾ. ಅನುಭವಿಸಿದವ್ರಿಗೇ ಗೊತ್ತು. ಧಾರಾಕಾರ ಸುರಿಯುವ ಮುಂಗಾರು ಮಳೆ. ಶಾಲೆ ಶುರು ಆಯ್ತು ಅಂದ್ರೆ , ಮಳೇನೂ ಶುರು ಅಲ್ವಾ. ಜೂನ್ ತಿಂಗಳೇ. ಹೊಸ ಹೊಸ ಪಿಂಕ್ ಕಲರ್ ಸ್ಕರ್ಟ್ ಮತ್ತೆ ಅದಕ್ಕೆ ಬಿಳಿ ಶರ್ಟ್ , ಯುನಿಫಾರ್ಮ್. ಹೊಸ ಟೆಕ್ಸ್ಟ್ ಪುಸ್ತಕ , ಹೊಸ ಹೊಸ ನೋಟ್ಸ್ ಬುಕ್ಸ್. ಅವಕ್ಕೆ ಒಂದು ವಾರದ ಹಿಂದಿನಿಂದ ಬೈಂಡ್ ಹಾಕಿ , ಲೇಬಲ್ ಅಂಟಿಸುವ ಸಂಭ್ರಮ. ಆ ಹೊಸ ಪುಸ್ತಕಗಳ ಪುಟಗಳ ನಡುವಿಂದ ಬರ್ತಿದ್ದ ಪರಿಮಳ ... ಈಗಲೂ ನೆನಪಿದೆ. ಜತೆಗೆ ಹೊಸ ಸ್ಕೂಲ್ ಬ್ಯಾಗ್, ಹೊಸ ರೈನ್ ಕೋಟ್. ನಾನು ಏಳನೇ ಕ್ಲಾಸಿಗೆ ಬಂದ ಮೇಲೇ ನಂಗೆ ಕೊಡೆ ಸಿಕ್ಕಿದ್ದು. ರೈನ್ ಕೋಟ್ ಹಾಕ್ಕೊಂಡು ಬಸ್ನಲ್ಲಿ ನೇತಾಡ್ಕೊಂಡು ... ಒದ್ದೆ ಒದ್ದೆಯಾಗೇ ಸೀಟ್ನಲ್ಲಿ ಒಂದು ಗಂಟೆ ಕೂತ್ಕೊಂಡು... ಆಗ ನಾವಿದ್ದದ್ದು ಕೃಷ್ಣಾಪುರ ಅನ್ನೋ ಊರಿನಲ್ಲಿ . ಈಗ ಎಮ್ ಆರ್ ಪಿ ಎಲ್ ಇದೆಯಲ್ಲ. ಅಲ್ಲೇ ಹತ್ರ. ಮಂಗಳೂರಿನಿಂದ ಹದಿನೇಳು - ಇಪ್ಪತ್ತು ಕಿ.ಮೀ ದೂರ. ಬೆಳಗ್ಗೆ ಬೆಳಗ್ಗೆ ಪ್ರತೀ ಬಸ್ಸು, ರಷ್ಶೋ ರಷ್. ಬಹಳ ಸಲ ನಿಂತುಕೊಂಡೇ ಮಂಗಳೂರು ಸೇರಿದ್ದು ಇದೆ. ನಾವು ಸಣ್ಣ ಮಕ್ಕಳು ಅಂತ ತೊಡೆ ಮೇಲೆ ಕೂರಿಸ್ಕೊಳ್ತಿದ್ರು ಕೆಲವು ಪ್ರಯಾಣಿಕರು.
ನಾನು , ನನ್ನ ತಮ್ಮ ಕಲಿತದ್ದು ಕನ್ನಡ ಮೀಡಿಯಂ ನಲ್ಲಿ. ನಮ್ಮ ಅಪ್ಪ ಅಮ್ಮನನ್ನ ಎಲ್ರೂ ಕೇಳ್ತಿದ್ರು. " ಯಾಕೆ, ಕನ್ನಡ ಮೀಡಿಯಂಗೆ ಹಾಕಿದ್ದೀರಿ ಮಕ್ಕಳನ್ನ " ಅಂತ. ಆಗೆಲ್ಲಾ ... ಎಲ್ರಿಗೂ ಮಕ್ಕಳನ್ಮ್ನ ಇಂಗ್ಲಿಷ್ ಮೀಡಿಯಂಗೆ ಸೇರಿಸೋ ಹುಚ್ಚು. ಇಂಗ್ಲಿಷ್ ಮೀಡಿಯಂನಲ್ಲಿ ಕಲಿತರೆ ಮಕ್ಕಳು ಬುದ್ಧಿವಂತರಾಗ್ತಾರೆ. ಒಳ್ಳೇ ಕೆಲಸ ಸಿಗುತ್ತೆ. ಅಂತ ಏನೋ . ನನ್ನ ಅಮ್ಮ ಅಪ್ಪ ಇಬ್ರೂ ಟೀಚರ್ಸ್. ಡೊನೇಶನ್ ಕೊಟ್ಟು ಯಾಕೆ ಮಕ್ಕಳನು ಓದಿಸ್ಬೇಕು. ಮಕ್ಕಳು ಬುದ್ಧಿವಂತರಾಗಿದ್ರೆ ಯಾವ ಶಾಲೆ ಆದ್ರೆ ಏನಂತೆ . ಕಲ್ತೇ ಕಲೀತಾರೆ . ಮಕ್ಕಳ ಪ್ರಾಥಮಿಕ ಹಂತದ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು ಅನ್ನುವ ಪ್ರತಿಪಾದನೆ ಅವರದ್ದು. ಮೊದ ಮೊದಲು ಎಲ್ರೂ ಯಾಕೆ ಹಾಗೆ ಕೇಳ್ತಾ ಇದ್ರು ಅಂತ ಗೊತ್ತಿರ್ಲಿಲ್ಲ. ಆಮೇಲೆ ... ಕೆಲವೊಮ್ಮೆ ಇಂಗ್ಲಿಷ್ ಮೀಡಿಯಂ ಶಾಲೆಯ ಮಕ್ಕಳನ್ನು ನೋಡ್ತಿದ್ದಾಗ ... ಅನ್ನಿಸ್ತಿತ್ತು. ಓಳ್ಳೆ ಒಳ್ಳೆಯ ಕುರ್ಚಿ ಬೆಂಚುಗಳು... ಆಟದ ವಸ್ತುಗಳು... ಟಿ ವಿ ... ಪುಸ್ತಕದ ಲೈಬ್ರರಿ ... ನಾವು ಅವರ ಥರ ಯಾಕಿಲ್ಲ ಅಂತ ಅನ್ನಿಸೋದು . ಆಗ ... ಅಪ್ಪ ಅಮ್ಮ ಉಳಿದವರಿಗೆ ನಮ್ಮ ಮಕ್ಕಳು ಕನ್ನಡ ಮೀಡಿಯಂ ನಲ್ಲಿ ಕಲೀತಾ ಇದಾರೆ ಅಂತ ಹೆಮ್ಮೆಯಿಂದ ಹೇಳ್ತಾ ಇದ್ದಿದ್ದು ನೆನಪಾಗ್ತಿತ್ತು. ಆಗೆಲ್ಲಾ, ನಾವೇನೋ ಸಾಧನೆ ಮಾಡಿದ್ದೀವಿ ಅಂತ ಅನ್ನಿಸ್ತಿತ್ತು. ಆದ್ರೆ ಅದು ಅರ್ಥವಾಗಿದ್ದು ತುಂಬಾ ನಂತರದ ದಿನಗಳಲ್ಲಿ. ಕನ್ನಡ ಮೀಡಿಯಂ ನಲ್ಲಿ ಕಲ್ತು... ಒಳ್ಳೆಯ ಮಾರ್ಕ್ಸ್ ಪಡ್ದು ಖುಶಿ ಪಟ್ಟ ಮೇಲೆ. ... ನನಗಿಂತ ನನ್ನ ತಮ್ಮ ಬುದ್ಧಿವಂತ. ಕ್ಲಾಸ್ ನಲ್ಲಿ ಯಾವಾಗಲೂ ಫರ್ಸ್ಟ್ ರಾಂಕ್. ...ಈಗ ಅಪ್ಪ ಅಮ್ಮನಿಗೂ ಖುಷಿ ... ಜತೆಗೆ ಹೆಮ್ಮೆ.

ಫ್ರೆಂಡ್ಸ್ ಜತೆ , ಗೊತ್ತಿರೋರ ಜತೆ ಮಾತಾಡೋವಾಗ ... ಅವ್ರು ಕೇಳ್ತಾ ಇದ್ರು. " ಇಷ್ಟು ಚೆನ್ನಾಗಿ ಇಂಗ್ಲಿಷ್ ಮಾತಾಡ್ತೀರಲ್ಲ " ಅಂತ. ಅಥವಾ ... ಕನ್ನಡ - ಇಂಗ್ಲಿಷ್ ಮೀಡಿಯಂ ಬಗ್ಗೆ ಡಿಬೇಟ್ ಮಾಡೋವಾಗ... " ನಾನು ಕನ್ನಡ ಮೀಡಿಯಂನಲ್ಲೇ ಕಲ್ತಿರೋದು." ಅಂತ ನಾನು ಹೇಳ್ತಾ ಇದ್ದೆ. ಆಗೆಲ್ಲ ಎಷ್ಟೋ ಮಂದಿ ಹೇಳಿದ್ದಿದೆ. " ಗೊತ್ತೇ ಆಗಲ್ಲ. ಅಷ್ಟು ಚೆನ್ನಾಗಿ ಇಂಗ್ಲಿಷ್ ಬರುತ್ತೆ ನಿಮ್ಗೆ. " ಅಂತ. ಇಂಗ್ಲಿಷ್ ಮಾತಾಡೋದಕ್ಕೆ... ಇಂಗ್ಲಿಷ್ ಮೀಡಿಯಂನಲ್ಲೇ ಕಲೀಬೇಕಾಗಿಲ್ಲ... ಇಂಗ್ಲಿಷ್ ನ್ನು ಒಂದು ಭಾಷೆಯಾಗಿ ಕಲ್ತಾಗ ಸುಲಭವಾಗಿ ಮಾತಾಡೋದು ಬರುತ್ತೆ.

ನಾನು ಕಾಲೇಜ್ ನಲ್ಲಿದ್ದಾಗ, ಐದನೇ ಕ್ಲಾಸ್ ನ ಹುಡುಗನೊಬ್ಬ , ಟ್ಯೂಷನ್ ಗೆ ಬರ್ತಾ ಇದ್ದ. ಪಾಪ ... ಅವನಿಗೆ ಇಂಗ್ಲಿಷೇ ಅರ್ಥವಾಗ್ತಿರ್ಲಿಲ್ಲ. ಉಳಿದ ಸಬ್ಜೆಕ್ಟ್ ಗಳು ಹೇಗೆ ಅರ್ಥವಾಗ್ಬೇಕು. ಮನೆಯಲ್ಲಿ ಮಾತಾಡೋದು ತುಳು... ಹೊರಗೆ ಕೇಳೋದು ಕನ್ನಡ.. ಶಾಲೆಯಲ್ಲಿ ಬರೀ ಇಂಗ್ಲಿಷ್. ಇಂಗ್ಲಿಷ್. ಆ ಸಣ್ಣ ಹುಡುಗನ ತಲೆ ಗೊಂದಲದ ಗೂಡಾಗಿತ್ತು. ಮೂರು ಭಾಷೆಗಳನ್ನು ಒಂದೇ ಸಲ ಕಲಿ ಅಂದ್ರೆ. ಅವನಿಗೆ ಟ್ಯೂಷನ್ ಹೇಳಿಕೊಡೋದ್ರಲ್ಲಿ ನಾನು ಸುಸ್ತಾಗ್ತಾ ಇದ್ದೆ. ಯಾಕಂದ್ರೆ, ಶಾಲೆಯಲ್ಲಿ ಕಲಿಸೋ ಮೆಥಡ್ ಗಿಂತ ನಾನು ಬೇರೇನಾದ್ರೂ ಹೇಳೀದ್ರೆ ಆತ ಹೇಳ್ತಾ ಇದ್ದ. " ಟೀಚರ್ ಬೈತಾರೆ. ಹೋಮ್ ವರ್ಕ್ ಮಾಡಿ ಮುಗಿಸ್ಬೇಕು. " ಪ್ರತಿ ಸಂಜೆ ಪುಟ ಗಟ್ಟಲೆ ಹೋಮ್ ವರ್ಕ್ ಮಾಡೋದೇ ಆಯ್ತು ... ಇನ್ನು ಆತನ ಭಾಷಾ ಗೊಂದಲ ಸರಿ ಮಾಡೋದಕ್ಕೆ ಟೈಮ್ ಎಲ್ಲಿತ್ತು.

ದಿನಗಳು ಉರುಳ್ತಾ ಹೋದ ಹಾಗೆ ... ನಾವು ಯಾವ ಓಬೀರಾಯನ ಕಾಲದಲ್ಲಿದ್ವಿ ಅಂತ ಅನ್ನಿಸತ್ತೆ. ಈಗ ... ನಾನು 24 ಗಂಟೆ ಇಂಟರ್ ನೆಟ್ ಎದುರು ಕೂತ್ಕೊಂಡು ಪ್ರಪಂಚ ಸುತ್ತಿ ಬರ್ತೀನಲ್ಲ. ನಾನೇ ಏಕೆ. ಸಣ್ಣ ಸಣ್ಣ ಮಕ್ಕಳೂ ಗೂಗಲ್ ಅರ್ಥ್ ನಲ್ಲಿ ... ಹೇ ಇದು ಕೀನ್ಯಾ.. ಇದು ಹವಾಯಿ ಐ ಲಾಂಡ್ಸ್ ... ಗ್ರಾಂಡ್ ಕಾನ್ಯನ್... ಸಹಾರಾ ಡೆಸರ್ಟ್ ಸುತ್ತಿ ಬಂದು ಇಸ್ಸಪ್ಪಾ ... ಭೂಮಿ ಇಷ್ಟೇ ಚಿಕ್ಕದಾ ಅಂತ ಉದ್ಗಾರ ಹೊರಡಿಸ್ತಾರೆ. ಅಷ್ಟು ಸಣ್ಣ ವಯಸ್ಸಲ್ಲಿ ನಾನು ಬೆಂಗಳೂರು ನೋಡಿದ್ದೆ ದೊಡ್ದು ಆ ಕಾಲಕ್ಕೆ.

ಈ ಮೂವತ್ತು ವರ್ಷಗಳೇ ನಂಗೆ ಇಷ್ಟೊಂದು ಬದಲಾವಣೆಯನ್ನ ನೀಡಿದೆ ... ಅಂದ್ರೆ... ನನ್ನ ಅಪ್ಪ ಅಮ್ಮ ನ ಜನರೇಶನ್ , ಅಜ್ಜ ಅಜ್ಜಿಯ ಜನರೇಶನ್ ಎಷ್ಟು ರೀತಿಯ ಚೇಂಜಸ್ , ಬದಲಾವಣೆ ಗಳಿಗೆ ಮುಖಾಮುಖಿ ಯಾಗ್ಬೇಕಾಯ್ತು. ಅಲ್ವಾ?. ಅಪ್ಪ ಅಮ್ಮ ಶಾಲೆಗೆ ಹೋಗ್ತಾ ಇದ್ದ ಕಾಲದಲ್ಲಿ ... ಅಂದ್ರೆ ೬೦ ರ ಸುಮಾರಿಗೆ, ಬಸ್ಸುಗಳೇ ಇರ್ಲಿಲ್ವಂತೆ. ನಡೆದೇ ಶಾಲೆಗೆ ಹೋಗ್ತಾ ಇದ್ರಂತೆ. ಆಮೇಲೆ ಬಸ್ಸು ಬಂತು ... ಈಗ ಬಗೆ ಬಗೆಯ ಕಾರುಗಳು.

ಬರಿಯ ಸಾಮಾಜಿಕ ಸ್ತರಗಳಲ್ಲಿ ಅಷ್ಟೇ ಅಲ್ಲ. ನಮ್ಮ ಬದುಕಿನ ರೀತಿ ... ನಡವಳಿಕೆ ... ನಂಬಿಕೆಗಳು... ಆದರ್ಶ ... ಐಡಿಯೋಲಜಿಗಳು... ಎಲ್ಲಾ... ಬದಲಾಗಿವೆ. ನನ್ನ ಶಾಲೆ ಕೂಡ ಬದಲಾಗಿದೆ. ಈಗ ನಂಗೆ ಕಲಿಸಿದ ಟೀಚರ್ಸ್ ಗಳು ಅಲ್ಲಿ ಇಲ್ಲ . ಕೆಲವರು ರಿಟೈರ್ಡ್ ಆಗಿದ್ದಾರೆ. ಮತ್ತೆ ಕೆಲವರು ಬೇರೆ ಶಾಲೆಗೆ ವರ್ಗವಾಗಿದ್ದಾರೆ. ಹೊಸ ಕುರ್ಚಿ ಬೆಂಚು ಗಳು ಬಂದಿವೆ. ಸ್ಟಾಫ್ ರೂಂ ದೊಡ್ಡದಾಗಿದೆ. ಲೈಬ್ರರಿ , ಸಾಯನ್ಸ್ ಲಾಬ್ ಗಳು ಬಂದಿವೆ.

change is constant. ಆದ್ರೆ ... ಆಗಿದ್ದ ಮುಗ್ಧತೆ... ಆರ್ದ್ರತೆ ... ಅಪ್ಯಾಯವಾದ ಒಂದು ಫೀಲಿಂಗ್ ಈಗ ಇಲ್ಲ. ಇದು ವಿಷಾದ ಅಲ್ಲ.. ಆದ್ರೆ ಅನಿವಾರ್ಯವಾದ ನೋವಿನ ಒಂದು ಎಳೆ .

ನನ್ನ ವೈಯಕ್ತಿಕ ಬ್ಲಾಗ್ : www.smilingcolours.blogspot.com
ನನ್ನ ಫೋಟೋ ಬ್ಲಾಗ : www.daisyridgediary.blogspot.com