ನೆನೆಸಿಟ್ಟ ಒಣ ದ್ರಾಕ್ಷಿಯ ನೀರು ಸೇವನೆ ಉತ್ತಮವೇ?

ನೆನೆಸಿಟ್ಟ ಒಣ ದ್ರಾಕ್ಷಿಯ ನೀರು ಸೇವನೆ ಉತ್ತಮವೇ?

ಈಗಿನ ಯಾಂತ್ರಿಕ ಜೀವನದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಬಹು ಕಡಿಮೆ ಗಮನ ನೀಡುತ್ತಾರೆ. ಸಮಯದ ಅಭಾವ ಎಂದು ಹೆಚ್ಚಾಗಿ ಹೊರಗಿನ ತಿಂಡಿಗಳನ್ನು ಮತ್ತು ಪಾನೀಯವನ್ನು ಸೇವಿಸುತ್ತಾರೆ. ಯುವಕರಾಗಿರುವ ಸಮಯದಲ್ಲಿ ಆರೋಗ್ಯದ ವಿಷಯ ಅಷ್ಟಾಗಿ ಕಾಡದೇ ಹೋದರೂ, ವಯಸ್ಸಾಗುತ್ತಾ ಆರೋಗ್ಯದ ಸಮಸ್ಯೆ ಪೆಡಂಭೂತದಂತೆ ನಮ್ಮ ಎದುರು ಬಂದು ನಿಲ್ಲುತ್ತದೆ. ವಯಸ್ಸು ೪೦ ಕ್ಕೆ ತಲುಪುತ್ತಲೇ ಮಧುಮೇಹ, ರಕ್ತದೊತ್ತಡ, ಹೊಟ್ಟೆಯಲ್ಲಿ ಅಜೀರ್ಣದಂತಹ ಸಮಸ್ಯೆಗಳು ಕಾಡತೊಡಗುತ್ತವೆ. ಹೀಗಾಗಿ ಬಹಳಷ್ಟು ಮಂದಿ ಈಗ ಆರೋಗ್ಯದಾಯಕ ಜೀವನ ಸಾಗಿಸಲು ಮುಂದಾಗುತ್ತಿದ್ದಾರೆ.

ಸಮಯಕ್ಕೆ ಸರಿಯಾಗಿ ಊಟ-ತಿಂಡಿ, ಕಡಿಮೆ ಎಣ್ಣೆ ತಿಂಡಿಗಳು, ಯೋಗ-ಪ್ರಾಣಾಯಾಮ-ವ್ಯಾಯಾಮದಂತಹ ಅಭ್ಯಾಸಗಳು, ಆರೋಗ್ಯದಾಯಕ ಆಹಾರ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಒಣ ಹಣ್ಣುಗಳ (ಡ್ರೈಫ್ರುಟ್ಸ್) ಸೇವನೆಯೂ ಈ ರೀತಿಯ ಉತ್ತಮ ಅಭ್ಯಾಸಗಳಲ್ಲಿ ಒಂದು. ಒಣ ಹಣ್ಣುಗಳು ಮತ್ತು ನಟ್ಸ್ ಗಳು ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ಇವುಗಳು ಸ್ವಲ್ಪ ದುಬಾರಿ ಎಂದು ಅನಿಸಿದರೂ ಪ್ರತೀ ದಿನ ಕನಿಷ್ಟ ಪ್ರಮಾಣದ ಸೇವನೆಯೂ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಒಣ ದ್ರಾಕ್ಷಿಯು ಆರೋಗ್ಯಕ್ಕೂ ಉತ್ತಮ ಮತ್ತು ಇದು ತುಂಬಾ ದುಬಾರಿಯೂ ಅಲ್ಲ. ಇದು ಮೊದಲಿನಿಂದಲೂ ನಮ್ಮ ತಿಂಡಿ ತಿನಸುಗಳಲ್ಲಿ ಅವಿಭಾಜ್ಯ ಅಂಗವಾಗಿದೆ. ನಾವು ಮಾಡುವ ಸಿಹಿ ತಿಂಡಿಗಳು, ಪಾಯಸ, ಬಿರಿಯಾನಿ, ಪಲಾವ್ ಮುಂತಾದವುಗಳಿಗೆ ಒಣ ದ್ರಾಕ್ಷಿ ಬೇಕೇ ಬೇಕು. ಇದರಲ್ಲಿ ಅಪಾರ ಪ್ರಮಾಣದ ಪೌಷ್ಟಿಕಾಂಶ ಮತ್ತು ಆರೋಗ್ಯದಾಯಕ ಅಂಶಗಳು ಇವೆ. ಪ್ರತೀ ದಿನ ನಿಯಮಿತವಾಗಿ ಒಣ ದ್ರಾಕ್ಷಿಯ ಸೇವನೆ ನಿಮ್ಮ ಜೀರ್ಣ ಕ್ರಿಯೆಯನ್ನು ಹೆಚ್ಚಿಸಿ ಅಜೀರ್ಣದ ತೊಂದರೆಯನ್ನು ನಿವಾರಿಸಬಲ್ಲದು. ಇದರ ಸೇವನೆಯಿಂದ ಹಸಿವು ಹೆಚ್ಚುತ್ತದೆ. ದೇಹಕ್ಕೆ ಅಧಿಕ ಪ್ರಮಾಣದ ಶಕ್ತಿ ದೊರೆಯುತ್ತದೆ.

ಒಣದ್ರಾಕ್ಷಿಯನ್ನು ನೇರವಾಗಿ ಸೇವಿಸುವುದರ ಬದಲಾಗಿ ಅದನ್ನು ಸ್ವಲ್ಪ ನೀರಿನಲ್ಲಿ ರಾತ್ರಿ ಹೊತ್ತು ನೆನೆಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಸಹಿತವಾಗಿ ಸೇವನೆ ಮಾಡುವುದು ಒಂದು ಆರೋಗ್ಯದಾಯಕ ಕ್ರಮ. ಇದರಿಂದ ದೇಹದಲ್ಲಿನ ರಕ್ತದ ಶುದ್ಧೀಕರಣ ಜೊತೆಗೆ ಯಕೃತ್ ನ ಕಾರ್ಯ ಕ್ಷಮತೆಯೂ ಉತ್ತಮಗೊಳ್ಳುವ ಮೂಲಕ ಜೀರ್ಣಕ್ರಿಯೆಯೂ ಬಹುಬೇಗನೇ ಆಗುತ್ತದೆ. ನೀವು ಕುಡಿಯುವ ಒಣ ದ್ರಾಕ್ಷಿಯನ್ನು ನೆನೆಹಾಕಿದ ನೀರು ಜೀರ್ಣರಸಗಳನ್ನು ಪ್ರತ್ಯೇಕಿಸಿ ಆಹಾರಗಳು ಸುಲಭವಾಗಿ ಜೀರ್ಣವಾಗುವಂತೆ ಮತ್ತು ಪೋಷಕಾಂಶಗಳು ಶೀಘ್ರವಾಗಿ ರಕ್ತಕ್ಕೆ ಲಭಿಸುವಂತೆ ಮಾಡುತ್ತದೆ. ಇದರ ಪರಿಣಾಮವನ್ನು ನೀವು ಈ ಅಭ್ಯಾಸ ಪ್ರಾರಂಭಿಸಿದ ಒಂದು ವಾರದಲ್ಲೇ ಕಾಣಬಹುದು. ಒಣದ್ರಾಕ್ಷಿ ನೆನೆಸಿದ ನೀರಿನ ಸೇವನೆಯಿಂದ ಹೃದಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಈ ನೀರಿನ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ (ಕೊಬ್ಬು) ಪ್ರಮಾಣ ರಕ್ತದಲ್ಲಿ ಕಡಿಮೆಯಾಗುತ್ತದೆ. ಮಲಬದ್ಧತೆಯನ್ನು ನಿವಾರಿಸಬಹುದು. ನಿರಂತರ ಒಣದ್ರಾಕ್ಷಿಯನ್ನು ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಕರುಳು ಕಲ್ಮಶ ರಹಿತವಾಗುತ್ತದೆ. ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸುವಾಗ ಅದರ ಜೊತೆಗೆ ಸ್ವಲ್ಪ ಮೆಂತ್ಯೆ ಕಾಳುಗಳನ್ನೂ ಹಾಕಿದರೆ ಆರೋಗ್ಯಕ್ಕೆ ಬಹಳ ಉತ್ತಮ. ಇದು ನಿಮ್ಮ ಕೂದಲು ಸೊಂಪಾಗಿ ಬೆಳೆಯುವುದಕ್ಕೂ ಸಹಕಾರಿಯಾಗುತ್ತದೆ. 

ದ್ರಾಕ್ಷಿಯನ್ನು ಬಿಸಿಲಿನಲ್ಲಿ ಒಣಗಿಸಿದಾಗ ಅದರಲ್ಲಿರುವ ಬಯೋಫ್ಲೇವನಾಯ್ಡುಗಳು ಹೆಚ್ಚು ಸಾಂದ್ರಗೊಳ್ಳುತ್ತವೆ. ಈ ಸಾಂದ್ರ ಗುಣ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ದೇಹವನ್ನು ಹಲವು ಬಗೆಯ ಕ್ಯಾನ್ಸರ್ ಕಾರಕ ಅಂಶಗಳಿಂದ ರಕ್ಷಿಸುತ್ತದೆ. ಆದುದರಿಂದ ಎಲ್ಲರೂ ರಾತ್ರಿ ಹೊತ್ತು ಒಣ ದ್ರಾಕ್ಷಿಯನ್ನು ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಸಹಿತ ಸೇವನೆ ಮಾಡಿರಿ. ಇದು ನಿಮ್ಮ ಆರೋಗ್ಯಕ್ಕೆ ಬಹು ಪ್ರಯೋಜನಕಾರಿ.  

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ