ನೆಮ್ಮದಿಯ ನೆರೆಗೆ ಹೊಸ ಸೇರ್ಪಡೆ
ಸುತ್ತಲೂ ಮಲ್ಲಿಗೆ ತೋಟದ ಪರಿಮಳ. ಮಾವು, ಹಲಸು, ಪೇರಳೆ, ಚಿಕ್ಕು, ಪಪ್ಪಾಯ ಮೊದಲಾದ ಹಣ್ಣುಗಳ ಸವಿ, ಇವುಗಳ ನಡುವೆ ಗುಡ್ಡದಿಂದ ಬೀಸಿ ಬರುವ ಗಾಳಿ. ಆ ಗಾಳಿ ಹೊತ್ತು ತರುತ್ತಿದ್ದ ಹಸಿರು ತುಂಬಿದ ಸುವಾಸನೆ. ಆ ಗುಡ್ಡಗಳು ಕಾಪಿಕಾಡು ರಸ್ತೆಯ ಬದಿಯ ಮನೆಗಳ ಹಿಂಬದಿ ಎತ್ತರೆತ್ತರಕ್ಕೆ ಇದ್ದು ದಟ್ಟ ಮರಗಳಿಂದ ಕೂಡಿತ್ತು. ಎಲ್ಲ ಮನೆಯವರಿಗೂ ಇಂತಹ ಗುಡ್ಡ ಇತ್ತು. ಈ ಗುಡ್ಡಗಳಲ್ಲಿ ನನಗೆ ಸಸ್ಯವಿಜ್ಞಾನದ ಪರಿಚಯವೇ ಆಗಿತ್ತು. ತೇಗ, ಗಂಧ, ಈಚಲು, ದಾಲ್ಚಿನಿ, ಗೇರು, ಮಂಜೊಟ್ಟಿ, ಕರಿಮರ, ಪುನರ್ಪುಳಿ, ನೇರಳೆ, ಮಾವು, ಹಲಸು, ಬಿದಿರುಗಳು ಎತ್ತರೆತ್ತರಕ್ಕೆ ಬೆಳೆದು ನಿಂತಿದ್ದರೆ ಬುಡಗಳಲ್ಲಿ ಅನೇಕ ವಿಧದ ಗಿಡಮೂಲಿಕೆಗಳು. ಮಳೆಗಾಲದಲ್ಲಿ ಕಾಲು ಹಾಕಲು ಸಾಧ್ಯವಾಗದಂತೆ ಉಂಟಾಗುವ ತರಗೆಲೆಯ ಗೊಬ್ಬರ. ಹಾಗೆಯೇ ಮಳೆಗಾಲದಲ್ಲೇ ಹುಟ್ಟುವ ಅಣಬೆಗಳು. ವಿಶೇಷವಾದ ಕೇನೆ ಗಿಡಗಳು, ಮೊಳಕೆಯೊಡೆದ ಗೇರುಬೀಜಗಳು, ಕಾಡುತೊಂಡೆ ಬಳ್ಳಿ, ಕುಂಟಲ ಹಣ್ಣು, ಕೇಪಳ ಹಣ್ಣು, ಬೆಕ್ಕಿನ ಹಣ್ಣು ಇವುಗಳನ್ನು ಅಡುಗೆ ಮಾಡುವ, ಹಸಿ ಯಾಗಿಯೇ ರುಚಿ ನೋಡುವುದನ್ನು ಹಾಗೆಯೇ ಅವುಗಳನ್ನು ಪರಿಚಯಿಸಿದವರು ನನ್ನ ಅಪ್ಪ. ಇಲ್ಲಿ ಬೆಳೆದ ಔಷಧ ಗಿಡಗಳನ್ನು ಔಷಧಕ್ಕಾಗಿ ಕಿತ್ತು ತಂದು ಊರವರಿಗೆ ಔಷಧ ತಯಾರಿಸಿ ನೀಡುತ್ತಿದ್ದವರು ನನ್ನಜ್ಜಿ. ಅಪ್ಪನ ಅಮ್ಮ.
ಇಲ್ಲಿ ಪರಿಚಯಿಸಿಕೊಂಡ ಔಷಧ ಗಿಡಗಳು ಹಲವು. ಶತಾವರಿ, ಸರ್ಪಗಂಧಿ, ನೈಕಂರ್ಬು (ಪುಷ್ಕರ), ತಾಲಿ ಎಲೆ(ಕಣ್ಣಿನ ತಂಪಿಗೆ), ಕಡೀರಬೇರು, ಒಳ್ಳೆ ಕುಡಿ, ಕುದುಕ ತಪ್ಪು(ನರಿ ಸೊಪ್ಪು), ರಂಗ್‍ದ ಕೆತ್ತೆ(ಬಣ್ಣದ ತೊಗಟೆ) ಇನ್ನೂ ಹತ್ತು ಹಲವು. ಹೊಟ್ಟೆ ನೋವಿಗೆ, ಹಲ್ಲು ನೋವಿಗೆ, ತಲೆನೋವಿಗೆ, ಕಾಲುನೋವಿಗೆ ಎನ್ನುತ್ತಾ ಎಲ್ಲಕೂ ಮನೆ ಔಷಧಕ್ಕೆ ಬೇಕಾದ ಮರಗಿಡ ಬಳ್ಳಿ ಪೊದೆ, ಹುಲ್ಲುಗಳೆಲ್ಲವೂ ಸಿದ್ಧವಾಗಿರುತ್ತಿತ್ತು. ಇಂತಹ ಕೈಗೆಟಕಿದ ತಿಳುವಳಿಕೆ ಇಂದು ನಶಿಸಿಹೋಗಿ ಎಲ್ಲದಕ್ಕೂ ಡಾಕ್ಟರುಗಳನ್ನೇ ಅವಲಂಬಿಸಿ, ಅಗತ್ಯಕ್ಕಿಂತ ಹೆಚ್ಚಿನ ಔಷಧಗಳನ್ನು ಸೇವಿಸಿ ಮತ್ತೆ ಅವುಗಳಿಂದ ಹೊಸ ರೋಗಗಳನ್ನು ತಂದುಕೊಳ್ಳುವ ಮನುಷ್ಯನ ಅವಿವೇಕಕ್ಕೆ ನಗು ಬರುವುದರೊಂದಿಗೆ, ಮನುಷ್ಯ ಪ್ರಕೃತಿಯಿಂದ ದೂರವಾದಷ್ಟು ತನ್ನ ರೋಗ ನಿರೋಧಕ ಶಕ್ತಿ ಕಳಕೊಂಡಿದ್ದಾನೆ ಎನ್ನುವುದು ಖಚಿತ. ಹಾಗೆಯೇ ಇಂದಿನ ಜಲಮಾಲಿನ್ಯ, ವಾಯುಮಾಲಿನ್ಯಕ್ಕೆ ನಾವು ಕಳಕೊಂಡಿರುವ ಹಸಿರಿನ ಪರಿಸರ ಕಾರಣವೆಂದು ಒಪ್ಪಿಕೊಂಡರೂ ಬದುಕಿನ ಮೋಜಿನ ಮುಂದೆ, ಹಣದ ಆಸೆಯ ಮುಂದೆ ಹಸಿರು, ನಮ್ಮ ಉಸಿರು ಎಲ್ಲವೂ ಮರೆತು ಹೋಗುತ್ತಿರುವುದು ನಮ್ಮ ದೌರ್ಭಾಗ್ಯ. ನಾವು ಹಸಿರಲ್ಲಿ ಉಸಿರಾಡಿದ್ದೇವೆ. ನನ್ನೂರಿನ ಜನ ಹಸುರನ್ನು ಬೆಳೆಸಿದ್ದರು, ಉಳಿಸಿದ್ದರು ಎನ್ನುವುದಕ್ಕಾಗಿಯೇ ಅವರು ಕೃತಜ್ಞತೆಗೆ ಯೋಗ್ಯರು.
ಸಂಜೆಯ ಹೊತ್ತು ಏಳು ಗಂಟೆಯ ಸುಮಾರಿಗೆ ಎಲ್ಲ ಕ್ರಿಶ್ಚಿಯನ್ನರ ಮನೆಯ ಮಕ್ಕಳು ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸುವ ಹೊತ್ತು. ದೊಡ್ಡವರೂ ಅವರ ಜೊತೆ ಸೇರುತ್ತಿದ್ದರು. ಸಣ್ಣಗಿನ ದನಿಯಲ್ಲಿ ಎಲ್ಲರೂ ಹಾಡುತ್ತಿದ್ದುದು ನಮಗೆ ಕೇಳಿಸುತ್ತಿತ್ತು. ನನ್ನ ಅಮ್ಮನಿಗೆ ಕ್ರಿಶ್ಟಿಯನ್ನರ ಕೊಂಕಣಿ ಭಾಷೆ ಚೆನ್ನಾಗಿ ಬರುತ್ತಿತ್ತು. ಭಾಷೆ ಮಾತ್ರವಲ್ಲ ಅವರ ಪ್ರಾರ್ಥನೆಯೂ ಬರುತ್ತಿತ್ತು. ಚರ್ಚ್ ಶಾಲೆಯ ವಿದ್ಯಾರ್ಥಿನಿಯಾದ ನನ್ನ ಅಮ್ಮ ಅವರ ಸಹಪಾಠಿಗಳೊಂದಿಗೆ ಚರ್ಚ್‍ಗೆ ಹೋಗುತ್ತಿದ್ದರಂತೆ. ಆದ್ದರಿಂದ ಅವರ ಪ್ರಾರ್ಥನೆ ಯಾವುದು ಎಂದು ತಿಳಿದಿರುತ್ತಿದ್ದ ನನ್ನ ಅಮ್ಮ ತಾನೂ ಹೇಳುತ್ತಿದ್ದರು. ನಮ್ಮ ಮನೆಯಲ್ಲಿದ್ದ ದೇವರಿಗೆ ಅದು ಸಲ್ಲುತ್ತಿತ್ತಲ್ಲವೇ? ಅವರ ಪ್ರಾರ್ಥನೆ ಮುಗಿದ ಬಳಿಕ ಅಮ್ಮ, ನಾವು ಮಕ್ಕಳು ಸೇರಿ ಭಜನೆ ಮಾಡುತ್ತಿದ್ದೆವು. ಹೀಗೆ ನಮ್ಮ ಮನೆಯಲ್ಲಿ ದೇವರೊಬ್ಬನೇ ನಾಮ ಹಲವು ಎಂಬ ತತ್ತ್ವಕ್ಕೆ ಗೌರವ ಸಲ್ಲುತ್ತಿತ್ತು. ಎಲ್ಲರೂ ಒಬ್ಬನೇ ದೇವರ ಸೃಷ್ಟಿ ಎನ್ನುವುದರ ಜೊತೆಗೆ ಜಾತಿ, ಧರ್ಮಗಳೆಲ್ಲ ಮನುಷ್ಯರ ಸೃಷ್ಟಿ ಎಂದು ನನ್ನ ಹೆತ್ತವರ ಬಲವಾದ ನಂಬಿಕೆಯಾಗಿತ್ತು. ರೂಢಿಯಿಂದ ಬಂದ ಧಾರ್ಮಿಕ ಆಚರಣೆಗಳು ಸರಳವಾಗಿ ನಡೆಯುತ್ತಿತ್ತೇ ವಿನಃ ಅದೊಂದು ಭಯದಿಂದ ಕೂಡಿದ ಕಟ್ಟುಪಾಡಾಗಿರಲಿಲ್ಲ ಎನ್ನುವಂತೆಯೇ ನಾವು ಸಹಜವಾಗಿ ಮನುಷ್ಯರು, ಆದ್ದರಿಂದ ಮನುಷ್ಯ ಧರ್ಮವೇ ಮೊದಲು, ಬಳಿಕ ಅವರವರ ಮನೆಯಲ್ಲಿ ಅವರವರ ಹಬ್ಬ ಹರಿದಿನಗಳ ಆಚರಣೆ. ಅದನ್ನು ನೋಡಿ ಇತರರು ಸಂತೋಷಪಡಬೇಕೇ ಹೊರತು ಇಂದಿನಂತೆ ಅವುಗಳಿಗೆ ಏನೇನೋ ನೆಪಗಳನ್ನು ಹುಡುಕಿ ವಿಘ್ನವೊಡ್ಡುವ ಕಲ್ಪನೆಗಳೂ ಇರಲಿಲ್ಲವೆಂದರೆ ಅವರೆಲ್ಲರೂ ಅಜ್ಞಾನಿಗಳೇ? ಖಂಡಿತ ಅಲ್ಲ. ಅವರು ಸೌಹಾರ್ದದಿಂದ ಶಾಂತಿಯಿಂದ ಮನೆಯೊಳಗೂ, ಸಮಾಜದೊಳಗೂ ಬದುಕಿದವರು ಎಂದಾದರೆ ಇಂದು ನಮಗೆ ಹಾಗೆ ಬದುಕಲು ಸಾಧ್ಯವಿಲ್ಲವೇ? ಹಿರಿಯರು ತಮ್ಮ ಮಕ್ಕಳಿಗೆ ಹಾಗೆ ತಿಳಿಸಿ ಹೇಳುವುದು, ಹಾಗೆ ಬದುಕಲು ಕಲಿಸುವುದು ಯಾಕೆ ಸಾಧ್ಯವಿಲ್ಲ? ಇದು ಸಾಧ್ಯವಿಲ್ಲದ ವಿಚಾರವೇನೂ ಅಲ್ಲ. ಆದರೆ ಮನುಷ್ಯನ ವಿಕಾಸ ಇಂದು ಮನುಷ್ಯರ ನಡುವೆ ದಿನದಿನಕ್ಕೂ ಹೊಸ ಹೊಸ ಬಿರುಕುಗಳನ್ನು ನಿರ್ಮಿಸಿ, ಬಳಿಕ ಅದನ್ನು ಶಮನ ಮಾಡುವ, ಸೌಹಾರ್ದ ಸೃಷ್ಟಿಸುವ ಪ್ರಹಸನಗಳನ್ನು ನೋಡಿದರೆ ಜಿಗುಪ್ಸೆ ಉಂಟಾಗುತ್ತದೆ. ಚಿಕ್ಕಮಕ್ಕಳಲ್ಲಿ ಜಾತಿ, ಮತ, ಧರ್ಮಗಳ ಭೇದಗಳನ್ನು ಹುಟ್ಟು ಹಾಕುವ ಹಿರಿಯರು ಎಂತಹ ಸಮಾಜವನ್ನು ಸೃಷ್ಟಿಸುತ್ತಿದ್ದಾರೆ? ಮಕ್ಕಳು ಶುದ್ಧ ಮನಸ್ಸಿನವರು. ಅವರನ್ನು ಸುತ್ತಲಿನ ಸಮಾಜದ ಆಗುಹೋಗುಗಳೇ ರೂಪಿಸುತ್ತವೆ. ಈ ಹಿನ್ನೆಲೆಯಲ್ಲಿ ನನ್ನೂರಿನ ಜನ, ಶಾಂತಿಯಿಂದ ಬಾಳಿದ, ನಮ್ಮನ್ನು ಬಾಳಿಸಿದ ಎಲ್ಲ ಹಿರಿಯರು ನನ್ನ ಮನಃಪಟಲದ ಮೇಲೆ ಹಾದು ಹೋಗುತ್ತಿದ್ದಾರೆ. ಇಂದು ಸಮಸ್ಯೆಯಾಗಬಹುದಾದ ಚಿಂತನೆಗಳು, ವಿಚಾರಗಳು ಆಗ ಇರಲಿಲ್ಲವೇ? ಆದರೆ ಅಂತಹ ವಿಚಾರಗಳು ವೈಯಕ್ತಿಕ ಬದುಕಿಗೆ, ಸಮಾಜಕ್ಕೆ ಅಗತ್ಯವಾದವುಗಳು ಅನ್ನಿಸದೆ ಇದ್ದುದೇ ಸರಿಯಾದ ತಿಳುವಳಿಕೆ ಅಲ್ಲವೇ? ಅದರಿಂದ ಒಳಿತೇ ಆಗಿದೆ. ಇಂತಹ ಹಿರಿಯರು ನಮಗೆ ಮಾದರಿಯಾಗ ಬೇಕಿತ್ತಲ್ಲವೇ?
ನೆಮ್ಮದಿಯ ನೆರೆಕರೆಗೆ ಹೊಸ ನೆರೆಯವರಾಗಿ ಸೇರ್ಪಡೆಯಾಗಲು ಬಂದವರು ಸಾಹೇಬರ ಮನೆಯವರು. ನಾವು ಕರೆಯುತ್ತಿದ್ದುದು ಮನೆಯ ಹಿರಿಯ ಮಗುವಿನ ಹೆಸರಿನ ಮೂಲಕ. ಅಂದರೆ ಹಬೀಬುಲ್ಲನ ಮನೆ. ಅವನ ಅಮ್ಮ ಖುಲ್ಸುಮಾಬಿಯವರನ್ನು `ಹಬಿನಮ್ಮ' ಎಂದೇ ಕರೆಯುತ್ತಿದ್ದರೆ ಅವರ ಉಳಿದ ಮಕ್ಕಳು ಅವರು ನಮ್ಮ ಅಮ್ಮ ಅಲ್ವಾ? ಅವನಿಗೆ ಮಾತ್ರ ಅಮ್ಮನಾ? ಎಂದು ಕೇಳುತ್ತಿದ್ದರು. ಹಾಗೆ ಅವರ ಮನೆಯ ಮಕ್ಕಳು ಕೂಡ, ನನ್ನ ಅಮ್ಮನನ್ನು ನನ್ನ ಹೆಸರಿಂದ `ಕಲಾನಮ್ಮ' ಎಂದೇ ಎನ್ನುತ್ತಿದ್ದರು. ಅದುವರೆಗೆ ನಮ್ಮ ನೆರೆಯಲ್ಲಿ ನನ್ನ ಅಮ್ಮನನ್ನು ಎಲ್ಲರೂ ಹೆಸರು ಹಿಡಿದೇ ಕರೆಯುತ್ತಿದ್ದರು. ಅಲ್ಲದೆ ಅಮ್ಮ ಚಿಕ್ಕ ವಯಸ್ಸಿನವರಾಗಿದ್ದುದರಿಂದ ಏಕವಚನದಲ್ಲಿ ಕರೆಯುತ್ತಿದ್ದರೆ ಅವರ ಮನೆಯ ಮಕ್ಕಳು `ಸುಂದರಿಯಕ್ಕ' ಎನ್ನುತ್ತಿದ್ದರು. ನಾವೆಲ್ಲರೂ ಅವರ ಹೆಸರಿನ ಜೊತೆಗೆ ಬಾಯಿ ಸೇರಿಸಿ, ಲೂಸಿ ಬಾಯಿ, ರೋಸಿಬಾಯಿ, ಮೇರಿ ಬಾಯಿ ಹೀಗೆ ಕರೆಯುತ್ತಿದ್ದುದೇ ಹೆಚ್ಚು. ಹೀಗೆ ಮಕ್ಕಳ ಹೆಸರಿನೊಂದಿಗೆ ಅಮ್ಮನನ್ನು ಸೇರಿಸಿ ಹೇಳುವ ಕ್ರಮ ಹೊಸದಾಗಿತ್ತು. ಈ ಹಬಿನಮ್ಮನವರು ನನ್ನ ಪ್ರಾಥಮಿಕ ಶಾಲೆಯ ಕೊನೆಯ ವರ್ಷಗಳಲ್ಲಿ ಬಿಡಾರ ಬಂದರು. ನನ್ನ ಮನೆಯ ಓಣಿಯಲ್ಲಿದ್ದ ಪಾರಿವಾಳದ ಮನೆಯವರು ಆ ಮನೆ ಹಿತ್ತಿಲು ಮಾರಾಟ ಮಾಡುವ ಸಂದರ್ಭದಲ್ಲಿ ಅದರ ಪಕ್ಕದಲ್ಲಿದ್ದ ಹಿತ್ತಲಿನವರ ಮಗಳು ಗ್ರೆಟ್ಟಾಬಾಯಿ ಗಲ್ಫ್ ದೇಶದಲ್ಲಿದ್ದವರು ಈ ಮನೆ ಹಿತ್ತಿಲು ಕೊಂಡುಕೊಂಡಿದ್ದರು. ದೊಡ್ಡ ಮನೆಯನ್ನು ಸರಕಾರಿ ಕಚೇರಿ ಅಂದರೆ ರಿಮಾಂಡ್ ಹೋಮ್‍ಗಾಗಿ ಬಾಡಿಗೆ ಕೊಟ್ಟಿದ್ದರು. ಹಾಗೆಯೇ ರಸ್ತೆಯ ಬದಿಯ ಕಟ್ಟಡಗಳಲ್ಲಿದ್ದ ಹೊಟೇಲು ಅಂಗಡಿಗಳು ಹಾಗೆಯೇ ಮುಂದುವರಿಯಿತು. ಹಿತ್ತಲಿನ ಹಿಂಬದಿಯಲ್ಲಿದ್ದ ಒಂದು ಸಣ್ಣ ಮನೆಗೆ ಬಾಡಿಗೆಗೆ ಬಂದ ಸಾಹೇಬರು ಕರ್ನಾಟಕ ಪೊಲಿಟೆಕ್ನಿಕ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಸಾಹೇಬರು ಬಹಳ ಶಿಸ್ತಿನವರು. ಅವರು ಸೇವಾ ಇಲಾಖೆಯಿಂದ ನಿವೃತ್ತರಾದವರಾಗಿದ್ದರು. ಮಾತು ಅಗತ್ಯವಿಲ್ಲದೆ ಮಾತು ಆಡಲಾರರು. ಆಡಿದರೂ ಎಷ್ಟು ಬೇಕೋ ಅಷ್ಟೆ! ಮನೆಯನ್ನು ದಿನಕ್ಕೆ ಎರಡು ಮೂರು ಬಾರಿ ಗುಡಿಸಿ ಒರಸಿ ಇಡುತ್ತಿದ್ದ ಅವರ ಶುಚಿತ್ವವನ್ನು ನೆರೆಯವರು ಆಡಿಕೊಳ್ಳುವಂತಾಯಿತು. ನಮಗೂ ಇದು ಹೊಸದು. ನಮ್ಮ ಮನೆಯಲ್ಲಿ ಬೆಳಗ್ಗೆ ಗುಡಿಸಿ ಒರಸಿದ ಬಳಿಕ ಸಂಜೆ ಗುಡಿಸುವ ಕ್ರಮ ಇತ್ತು. ಆದರೆ ಇವರ ಮನೆಯಲ್ಲಿ ನೆಲ ಒರಸಿ ಕನ್ನಡಿಯಂತೆ ಹೊಳೆಯುತ್ತಿದ್ದುದು ಸುಳ್ಳಲ್ಲ. ಇವರ ಮನೆಯಲ್ಲಿ ಹಬಿನಮ್ಮನ ತಮ್ಮ ಉಮರಣ್ಣನೂ ಇದ್ದರು. ಇವರು ರಿಕ್ಷಾಚಾಲಕರಾಗಿದ್ದು ಅವಿವಾಹಿತರಾಗಿದ್ದರು. ಹಬೀಬುಲ್ಲಾ ಹಾಗೂ ಅವನ ತಂಗಿಯಂದಿರನ್ನು, ತಮ್ಮಂದಿರನ್ನು ನಾನು ಹೋಗುತ್ತಿದ್ದ ಕಾಪಿಕಾಡು ಶಾಲೆಗೆ ಸೇರಿಸಿದರು. ಈ ಕಾರಣದಿಂದ ನಮ್ಮ ಸ್ನೇಹ ಪ್ರಾರಂಭವಾಯಿತು. ನಾವು ಶಾಲೆಗೆ ಹೋಗುವಾಗ ಅವರ ಮಕ್ಕಳೂ ನಮ್ಮ ಜೊತೆಗೆ ಬರುತ್ತಿದ್ದರು. ಚಿಕ್ಕವರನ್ನು ಕೈಹಿಡಿದು ಶಾಲೆಗೆ ಕರೆದೊಯ್ಯುವುದು ನನ್ನ ಸ್ವಭಾವವಾಗಿತ್ತು. ಈ ಸ್ನೇಹದಿಂದ ನಮಗೆ ಆಟವಾಡಲು ಜೊತೆ ಸಿಕ್ಕಿದಂತಾಯ್ತು. ಒಂದೇ ಶಾಲೆಗೆ ಹೋಗುತ್ತಿದ್ದುದರಿಂದ ಒಟ್ಟಿಗೆ ರಜೆ ಸಿಗುತ್ತಿತ್ತು. ಆಗೆಲ್ಲಾ ಕ್ರಿಶ್ಚಿಯನ್ ಶಾಲೆಗಳಿಗೆ ಗುರುವಾರ ಮಧ್ಯಾಹ್ನ ರಜೆ ಇರುತ್ತಿತ್ತು. ಶನಿವಾರ ಇಡೀ ದಿನ ಶಾಲೆ ಇರುತ್ತಿತ್ತು. ಇದರಿಂದ ಉಳಿದ ಮನೆಯ ಮಕ್ಕಳ ಜೊತೆ ಆಟವಾಡಲು ಸಾಧ್ಯವಿರಲಿಲ್ಲ. ಅಲ್ಲದೆ ಉಳಿದ ದಿನಗಳಲ್ಲಿ ಅವರಿಗೆಲ್ಲ ಅವರವರ ಮನೆಯ ದನಕರುಗಳ, ತೋಟಗಳ, ಇಲ್ಲವೇ ಮನೆಕೆಲಸಗಳು ಇರುತ್ತಿತ್ತು. ಅವರು ಆಟವಾಡಲು ಸಿಗುತ್ತಿದ್ದುದು ಬಹಳ ಅಪರೂಪ. ಹಬೀಬುಲ್ಲಾ, ಮುಮ್ತಾಝ್, ಮೆಹತಾಬ್, ಅಸ್ಮತ್ ಇವರು ನಮ್ಮ ಮನೆಗೆ ಬಂದು ಆಡುವುದಕ್ಕೆ ಸಾಧ್ಯವಿರಲಿಲ್ಲ. ಯಾಕೆಂದರೆ ಸಾಹೇಬರು ಮನೆಗೆ ಬರುವಾಗ ಮಕ್ಕಳೆಲ್ಲರೂ ಓದುತ್ತಾ ಬರೆಯುತ್ತಾ ಇರಬೇಕಿತ್ತು. ಈ ಕಾರಣದಿಂದ ನಾವು ಕೂಡ ಅಷ್ಟರೊಳಗೆ ಆಟ ಮುಗಿಸಿ ವಾಪಸಾಗುತ್ತಿದ್ದೆವು.
ಸಣ್ಣ ಸಂಬಳವಿರುವ ಆ ಕುಟುಂಬಕ್ಕೆ ಸಾಹೇಬರ ಸಂಪಾದನೆ ಸಾಕಾಗುತ್ತಿರಲಿಲ್ಲ. ಆಗ ಹಬಿನಮ್ಮ ತನ್ನದೇ ಸಂಪಾದನೆಯ ದಾರಿ ಕಂಡುಕೊಂಡರು. ಅದೇ ಎಮ್ಮೆ ಸಾಕಣೆ. ಧನಿಗಳಾದ ಗ್ರೆಟ್ಟಾ ಬಾಯಿಯ ಅಡ್ಡಿ ಇಲ್ಲದ್ದರಿಂದ ಸಣ್ಣ ಮನೆಯ ಗೋಡೆಗೆ ಇಳಿಸಿ ಕಟ್ಟಿದ ಕೋಣೆ ಹಟ್ಟಿ ಆಯಿತು. ಹಟ್ಟಿ ಅಂದ ಮೇಲೆ ಸೆಗಣಿ ಗಂಜಳಗಳಿಂದ ನೊಣ, ನುಸಿಗಳೊಟ್ಟಿಗೆ ವಾಸನೆ ತುಂಬುವುದು ಸಹಜ ತಾನೇ? ಆದರೆ ಆ ಹಟ್ಟಿ ಹಟ್ಟಿಯಂತಿರದೆ ಮನೆಯ ಇನ್ನೊಂದು ಕೋಣೆ ಎನ್ನುವಷ್ಟು ಸ್ವಚ್ಛ. ಅಲ್ಲಿ ಜನರ ಬದಲು ಪ್ರಾಣಿಗಳು ಅಷ್ಟೇ ವ್ಯತ್ಯಾಸ. ಅಂತಹ ಸ್ವಚ್ಛ ಹಟ್ಟಿಯನ್ನು ಬೇರೆಲ್ಲೂ ಕಾಣುವುದು ಸಾಧ್ಯವೇ ಇರಲಿಲ್ಲ. ಹಬಿನಮ್ಮನ ಈ ವೃತ್ತಿ ಲೂವಿಸ್ ಪೊರ್ಬುಗಳಿಗೆ ಎದುರಂಗಡಿ ಯಂತಾಯಿತು. ಆದರೆ ದುಡಿದು ತಿನ್ನುವವರಿಗೆ ಅವರವರ ಆ ದಿನದ ಸಂಪಾದನೆಯನ್ನು ಆ ದೇವರೇ ಒದಗಿಸುತ್ತಾನೆ ಎಂಬ ನಂಬಿಕೆಯುಳ್ಳ ಹಬಿನಮ್ಮ ಚಿಂತಿಸಲಿಲ್ಲ. ಹಾಲಿನ ಮಾರಾಟದ ವ್ಯವಸ್ಥೆಯನ್ನು ಅವರಿಗೆ ತೊಂದರೆಯಾಗದಂತೆ ಮಾಡಿಕೊಂಡರು. ಹಾಗೆಯೇ ದೂರದ ಮನೆಗಳಿಗೆ ಹಾಲು ಕೊಡುತ್ತಿದ್ದರು. ಇಷ್ಟರಲ್ಲೇ ನಮ್ಮ ಮನೆಗೂ ಅವರ ಮನೆಯಿಂದ ಹಾಲು ತರಲು ಪ್ರಾರಂಭವಾಯಿತು. ಇದರಿಂದ ಲೂಯಿಸ್ ಪೊರ್ಬುಗಳಿಗೆ ನಮ್ಮಲ್ಲಿ ಅಸಮಾಧಾನವಾದುದು ಸತ್ಯವೇ! ಆದರೆ ನಾವು ಯಾಕೆ ಬದಲಾಯಿಸಿದೆವು ಎನ್ನುವುದಕ್ಕೂ ಕಾರಣವಿತ್ತು. ಹಬಿನಮ್ಮ ಬೆಳಗ್ಗೆ ಬೇಗ ಎದ್ದು ಹಾಲು ಕರೆದು 6 ಗಂಟೆಯೊಳಗೆ ಅಡಿಗೆಗೆ ಶುರು ಮಾಡುತ್ತಿದ್ದರು. ನಾನೀಗ ದೂರದ ಹೈಸ್ಕೂಲಿಗೆ ಹೋಗ ಬೇಕಾಗಿದ್ದುದರಿಂದ ನಮಗೂ ಹಾಲು ಬೇಗನೆ ಬೇಕಾಗಿತ್ತು. ಆದ್ದರಿಂದ ಹಾಲು ತರಬೇಕಾದ ನನಗೆ ಸುಲಭವಾಗುತ್ತಿತ್ತು. ನಾನು ಮುಂದಿನ ತರಗತಿಗಳಿಗೆ ಹೋಗುತ್ತಿದ್ದಂತೆ ನನಗೆ ಮನೆ ಕೆಲಸಗಳು, ಗುಡಿಸಿ ಒರೆಸುವ ಕೆಲಸ, ಅಂಗಳ ಗುಡಿಸುವ ಕೆಲಸಗಳೆಲ್ಲ ಪ್ರಾರಂಭವಾದಾಗ ಹಬಿನಮ್ಮ ನಮ್ಮ ಮನೆಗೆ ಅವರ ಹೆಣ್ಣುಮಕ್ಕಳಾದ ಮುಮ್ತಾಝ್ ಅಥವಾ ಮೆಹತಾಬ್‍ನಲ್ಲಿ ಕೊಟ್ಟು ಕಳುಹಿಸುತ್ತಿದ್ದರು. ಇವರು ಹಾಲು ತರುವಾಗ ನಮ್ಮ ಅಪ್ಪ ತಮಾಷೆಯಾಗಿ ಮುಮ್ತಾಝ್ ಬಂದಾಗ ತಾಜ್‍ಮಹಲ್‍ನಿಂದ ಎಂದೂ, ಮೆಹತಾಬ್ ಬಂದಾಗ ಕೃಷ್ಣಭವನದಿಂದ ಹಾಲು ಬಂತು ಎನ್ನುತ್ತಿದ್ದರು. ಮುಂದೆ ಅದೇ ಹೆಸರುಗಳಲ್ಲಿ ಅಂದರೆ ನಿಮ್ಮ ತಾಜ್‍ಮಹಲ್, ನಿಮ್ಮ ಕೃಷ್ಣಭವನ ಹೇಗಿದ್ದಾರೆ ಎಂದು ಮಾತನಾಡುತ್ತಿದ್ದುದು ಇತ್ತು. ಇಂದಿಗೂ ಅವರು ಭೇಟಿಯಾದಾಗ ಅವರ ಈ ಹೆಸರಿನ ಕುರಿತು ನೆನಪು ಮಾಡಿಕೊಂಡು ಖುಷಿಪಡುತ್ತಾರೆ. ಆದರೆ ಈ ಹೆಸರು ನಮ್ಮ ಎರಡು ಮನೆಗಳಲ್ಲಿ ಮಾತ್ರವೇ ಹೊರತು ಬೇರೆ ಕಡೆಗಳಲ್ಲಿ ಹೇಳುವಂತಿರಲಿಲ್ಲ ಎನ್ನುವುದು ನಮ್ಮ ಮನೆಯ ಶಿಸ್ತು ಆಗಿತ್ತು. ಮುಂದೆ ಈ ಇಬ್ಬರೂ ನನ್ನ ಅಪ್ಪನ ಶಿಷ್ಯೆಯರಾದರು. ಲೇಡಿಹಿಲ್ ವಿಕ್ಟೋರಿಯಾ ಗಲ್ರ್ಸ್ ಶಾಲೆಯಲ್ಲಿ. ಹೀಗೆ ಮಕ್ಕಳ ಮೂಲಕ, ಹಾಲಿನ ಮೂಲಕ ಹಬಿನಮ್ಮನ ಮನೆ ಮಂದಿ ನಮಗೆಲ್ಲ ಆತ್ಮೀಯರಾದರು. ಆಪ್ತರಾದರು. ಆತ್ಮೀಯತೆಗೆ ಧರ್ಮ ಅಡ್ಡಿಯಾಗುತ್ತದೆಯೇ?