ನೆರಳು ಪ್ರತಿ ಯಂತ್ರದ ಕಥೆ
ನೆರಳು ಪ್ರತಿ ಯಂತ್ರ (Photocopy Machine), ಛಾಯಾ ಪ್ರತಿ ಅಥವಾ ನಾವು ಸಾಮಾನ್ಯವಾಗಿ ಕರೆಯುವ ಪದ ‘ಝೆರಾಕ್ಸ್' ಮೆಶೀನ್ ಆವಿಷ್ಕಾರ ಆದದ್ದು ಯಾವ ಕಾರಣಕ್ಕೆ ಗೊತ್ತೇ? ಯಾವುದೇ ಪತ್ರ ಅಥವಾ ದಾಖಲೆಗಳ ಮತ್ತೊಂದು ನಕಲು ಪ್ರತಿ ಮಾಡಲು ಹಿಂದೆಲ್ಲಾ ಬಹಳ ಕಷ್ಟವಿತ್ತು. ಆದರೆ ಈಗಂತೂ ಕ್ಷಣ ಮಾತ್ರದಲ್ಲಿ ಎಷ್ಟು ಪ್ರತಿಗಳನ್ನಾದರೂ ಮುದ್ರಿಸಿಕೊಡುವ ಯಂತ್ರಗಳಿವೆ. ಕಪ್ಪು ಬಿಳುಪು ಮಾತ್ರವಲ್ಲ, ಬಣ್ಣದ ನಕಲು ಪ್ರತಿ ತೆಗೆಯುವ ಯಂತ್ರಗಳು ಬಂದಿವೆ.
ಈ ನೆರಳು ಪ್ರತಿ ತೆಗೆಯುವ ಯಂತ್ರದ ಆವಿಷ್ಕಾರ ಆದದ್ದು ಹೇಗೆ ಗೊತ್ತೇ? ಕ್ಯಾಲಿಫೋರ್ನಿಯಾಗೆ ಸೇರಿದ ಚೆಸ್ಟರ್ ಎಫ್.ಕಾರ್ಲಸನ್ (೧೯೦೬-೧೯೬೮) ಇವರು ‘ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿಯಿಂದ ಪದವಿಯನ್ನು ಪಡೆದವರು. ಇವರು ‘ಪೇಟೆಂಟ್ ಲಾಯರ್' ಆಗಿ ಕೆಲಸ ಮಾಡುತ್ತಿದ್ದರು. ಆ ಕೆಲಸದಲ್ಲಿ ಇವರು ತಮ್ಮ ಗ್ರಾಹಕರಿಗೆ ಕೈಬರಹದ ಮೂಲಕವೇ ಪ್ರತಿಗಳನ್ನು ತಯಾರಿಸಿಕೊಡುತ್ತಿದ್ದರು. ಆದರೆ ಕೆಲವು ದಾಖಲೆ ಪತ್ರಗಳನ್ನು ಮರು ಪ್ರತಿಯನ್ನಾಗಿಸಲು ಇವರಿಗೆ ಬಹಳ ತ್ರಾಸವಾಗುತ್ತಿತ್ತು.
ಪೇಟೆಂಟ್ ತೆಗೆದುಕೊಂಡವರ ಬಳಿ ಒಂದು ಪ್ರತಿ ಹಾಗೂ ಕೊಟ್ಟವರ ಬಳಿ ಒಂದು ಪ್ರತಿ ಇರಬೇಕಾದ ಕಾರಣದಿಂದ ಪ್ರತಿಯೊಂದು ಪೇಟೆಂಟ್ ಗೆ ಎರಡು ಪ್ರತಿಗಳನ್ನು ಕೈ ಬರಹದಲ್ಲೇ ಬರೆಯಬೇಕಾಗುತ್ತಿತ್ತು. ಇದರಿಂದ ಬಹಳ ಸಮಯ ವ್ಯರ್ಥವಾಗುತ್ತಿದ್ದುದಲ್ಲದೇ, ಕೆಲಸವೂ ಅಧಿಕವಾಗುತ್ತಿತ್ತು. ಅದಕ್ಕಾಗಿ ಒಂದು ಪ್ರತಿ ಬರೆದು ಇನ್ನೊಂದು ಪ್ರತಿಯ ಫೋಟೋ ತೆಗೆದುಕೊಳ್ಳುತ್ತಿದ್ದರು. ಆ ಸಮಯದಲ್ಲಿ (೫೦ರ ದಶಕದಲ್ಲಿ) ಫೋಟೋಗ್ರಾಫಿ ತುಂಬಾ ದುಬಾರಿ ವ್ಯವಸ್ಥೆಯಾಗಿದ್ದ ಕಾರಣ ಇದನ್ನು ಪ್ರತೀ ಬಾರಿ ಮಾಡುವುದು ಕಷ್ಟ ಸಾಧ್ಯವಾಗಿತ್ತು. ಇದಕ್ಕೆ ಒಂದು ಶಾಶ್ವತ ಪರಿಹಾರ ಮಾಡಬೇಕೆಂದು ಯೋಚಿಸಿ ಚೆಸ್ಟರ್ ನೆರಳು ಪ್ರತಿ ತೆಗೆಯುವ ಯಂತ್ರವನ್ನು ಶೋಧಿಸಿದರು. ಇದನ್ನು ಎಲೆಕ್ಟ್ರೋ ಫೋಟೋಗ್ರಾಫಿ ಯಂತ್ರ ಎಂದೂ ಕರೆಯುತ್ತಾರೆ.
ಅವರು ಈ ಯಂತ್ರವನ್ನು ಶೋಧಿಸಲು ಬಹಳ ಕಷ್ಟ ಪಟ್ಟರು. ಯಂತ್ರ ತಯಾರಿಸಿದ ಬಳಿಕವೂ ಜನರು ಈ ಯಂತ್ರದ ಬಗ್ಗೆ ಅಷ್ಟೇನೂ ಆಸಕ್ತಿ ವಹಿಸಲಿಲ್ಲ. ಸಾಮಾನ್ಯ ಜನರಿಗೆ ಈ ಅಸಾಮಾನ್ಯ ಆವಿಷ್ಕಾರದ ಅರಿವು ಆಗಲಿಲ್ಲ. ಯಂತ್ರವನ್ನು ತಯಾರಿಸಿ, ಮಾರುಕಟ್ಟೆಗೆ ಒದಗಿಸಲು ಯಾವ ಕಂಪೆನಿಯೂ ಮುಂದೆ ಬರಲಿಲ್ಲ. ಬಹಳ ಹುಡುಕಾಟದ ಬಳಿಕ ಕೆಲವು ಮಂದಿ ಆ ಯಂತ್ರವನ್ನು ತಯಾರಿಸಲು ಮುಂದೆ ಬಂದರು. ಕಡೆಗೂ ೧೯೫೯ರ ಸೆಪ್ಟೆಂಬರ್ ೧೬ರಂದು ನೆರಳು ಪ್ರತಿ ತೆಗೆಯುವ ಯಂತ್ರ ಅಧಿಕೃತವಾಗಿ ಬಳಕೆಗೆ ಬಂತು.
ಕೊನೇ ಮಾತು: ನಾವು ನೆರಳು ಪ್ರತಿ ಅಥವಾ ಫೋಟೋ ಕಾಪಿ ತೆಗೆಯುವುದಕ್ಕೆ ಸಾಮಾನ್ಯವಾಗಿ ‘ಝೆರಾಕ್ಸ್' (Xerox) ಎನ್ನುತ್ತೇವೆ. ಇದು ತಪ್ಪು ಪ್ರಯೋಗ. ಝೆರಾಕ್ಸ್ ಎನ್ನುವುದು ನೆರಳು ಪ್ರತಿ ಯಂತ್ರ ತಯಾರಿಕಾ ಸಂಸ್ಥೆಯೊಂದರ ಹೆಸರು ಅಷ್ಟೇ. ಈ ರೀತಿಯ ಹಲವಾರು (ಕೆನಾನ್, ರಿಸೋ, ಬ್ರದರ್ ಇತ್ಯಾದಿ.) ಕಂಪೆನಿಯ ಯಂತ್ರಗಳು ಮಾರುಕಟ್ಟೆಯಲ್ಲಿವೆ. ಈ ಕಾರಣದಿಂದ ಝೆರಾಕ್ಸ್ ಎಂಬ ಪದವನ್ನು ಬಳಸದೇ ಫೋಟೋ ಕಾಪಿ ಎಂಬ ಪದವನ್ನು ಬಳಸುವುದು ಉತ್ತಮ.
ಚಿತ್ರ ಕೃಪೆ: ಅಂತರ್ಜಾಲ ತಾಣ