ನೆರೆಕರೆಯೇ ಹೊರತು ನೆರೆಹೊರೆಯಲ್ಲ

ನೆರೆಕರೆಯೇ ಹೊರತು ನೆರೆಹೊರೆಯಲ್ಲ

ಒಂದು ಊರಿನ ಜನರ ಅವಶ್ಯಕತೆಗಳನ್ನು ಊರವರೇ ಪೂರೈಸಲಾಗುವುದಿಲ್ಲ. ಆಗ ಬೇರೆ ಬೇರೆ ಊರುಗಳಿಂದ ಅಲ್ಲಿಗೆ ಬಂದು ಹೋಗುವ ವ್ಯವಸ್ಥೆ ಇರಬೇಕಾಗುತ್ತದೆ. ಓಡಾಡುವುದಕ್ಕೇ ಬಸ್ಸುಗಳೆ ಇಲ್ಲದ ಕಾಲಕ್ಕೆ ಜನ ದೂರದ ಊರುಗಳಿಂದ ನಡೆದೇ ಬಂದು ತಮ್ಮ ಬದುಕು ಸಾಗಿಸುತ್ತಾ ಈ ಊರಿನ ಜನರ ಬದುಕಿಗೆ ಅವಶ್ಯವಾದುದನ್ನು ಪೂರೈಸುತ್ತಿದ್ದರು. ಇಂತಹ ವ್ಯವಸ್ಥೆ ನಮ್ಮೂರಿಗೆ ಮಾತ್ರ ಸೀಮಿತವಾದುದೇನೂ ಅಲ್ಲವಾದರೂ ನಮ್ಮೂರಿಗೆ ಬರುತ್ತಿದ್ದವರ ಹೆಸರು ಗೊತ್ತಿಲ್ಲದಿದ್ದರೂ ಅವರ ನೆನಪು ಅವರ ನೆರವು ಮರೆಯುವುದು ಸಾಧ್ಯವಿಲ್ಲವಲ್ಲಾ?
ಕಾವೂರು ಕ್ರಾಸ್‍ನಲ್ಲಿದ್ದ ಬೇಕರಿಯಲ್ಲಿ ತಾಜಾ ಬ್ರೆಡ್ಡು, ಬನ್ನು, ಬಿಸ್ಕತ್ತುಗಳು ಸಿಗುತ್ತಿತ್ತು. ನಾವೇ ಅಲ್ಲಿ ಹೋಗಿ ತರಬೇಕಾಗುತ್ತಿತ್ತು. ಆದರೆ ಮನೆ ಮನೆಗೆ ಬ್ರೆಡ್, ರಸ್ಕ್, ಟೋಸ್ಟ್‍ಗಳನ್ನು ತಲೆಹೊರೆಯಲ್ಲೇ ತಂದು ಮಾರಾಟ ಮಾಡುತ್ತಿದ್ದವರು ಉರ್ವಾ ಚಿಲಿಂಬಿಯಲ್ಲಿದ್ದ ಕೋಸ್ಟಾ ಬೇಕರಿಯ ನೌಕರರು. ಓಣಿ ಓಣಿಗಳಲ್ಲಿ ಓಡಾಡಿ ಮನೆ ಮನೆಗಳಿಗೆ ಮಕ್ಕಳ ಸಂಜೆಯ ಕಾಫಿ ತಿಂಡಿಗಳಿಗೆ ಬ್ರೆಡ್ಡು ಒದಗಿಸುತ್ತಿದ್ದರು. ಹೀಗೆ ಮನೆಗಳಿಗೆ ಮಾರಾಟಕ್ಕೆ ಬರುತ್ತಿದ್ದವರಲ್ಲಿ ಬಜ್ಪೆಯ ತರಕಾರಿ ತರುತ್ತಿದ್ದ ಬಾಯಮ್ಮ ಒಬ್ಬರು. ವಾರಕ್ಕೊಮ್ಮೆ ಬರುವ ಇವರಲ್ಲಿ ಊರಲ್ಲೇ ನೆಟ್ಟು ಬೆಳೆಸುತ್ತಿದ್ದ ಬೆಂಡೆ, ಹೀರೆ, ಮುಳ್ಳುಸೌತೆ, ಹರಿವೆ, ಪಡುವಲಗಳು ಮಳೆಗಾಲದ ತರಕಾರಿಗಳಾದರೆ ಉಳಿದ ವೇಳೆಗಳಲ್ಲಿ ಬದನೆ, ಬಸಳೆ, ಸೌತೆ, ಕುಂಬಳ, ಬಾಳೆಕಾಯಿ, ಬಾಳೆದಿಂಡು, ಬಾಳೆಹೂಬೆ, ಮೆಣಸು, ಶುಂಠಿ ಇವುಗಳೆಲ್ಲಾ ಇರುತ್ತಿತ್ತು. ತಾಜಾ ತರಕಾರಿಗಳನ್ನು ತಿನ್ನುವ ಭಾಗ್ಯ ಆ ದಿನಗಳದ್ದು. ಇಂದು ತರಕಾರಿ ಬೆಳೆಯುವವರೇ ಊರಲ್ಲಿ ಇಲ್ಲವಾಗಿದ್ದಾರೆ. ಹಾಂ, ತರಕಾರಿ ಎಂದಾಗ ಇನ್ನೊಂದು ಬಹುಸಂತಸದ ಕ್ಷಣಗಳಿವೆ. ಅದುವೇ ಪಾೈಸರಗುಡ್ಡೆಯಲ್ಲಿ ತರಕಾರಿ ಬೆಳೆಸುತ್ತಿದ್ದ ದಾವೀದ್ ಪೊರ್ಬುಗಳದ್ದು. ಆ ಕಲ್ಲುಗುಡ್ಡೆಯಲ್ಲೂ ಅವರು ಬೆಳೆಸುತ್ತಿದ್ದ ತರಕಾರಿಗಳನ್ನು ನೆನಪಿಸಿಕೊಂಡರೆ ಖುಷಿಯೋ ಖುಷಿ. ಮಳೆಗಾಲದಲ್ಲಿ ಆ ಗುಡ್ಡದ ನಡುವೆ ಕೆಂಪು ಮಣ್ಣಿದ್ದಲ್ಲಿ ಅವರು ಎಲ್ಲಾ ರೀತಿಯ ತರಕಾರಿಗಳನ್ನು ಬೆಳೆಸುತ್ತಿದ್ದರು. ಅವರು ಬೆಳಗ್ಗೆ ತರಕಾರಿ ಕೊಯ್ಯುವ ವೇಳೆಗೆ ನಾವೇ ಅಲ್ಲಿ ಹೋಗಿ ಆ ಗಿಡಗಳ ನಡುವೆ ಓಡಾಡಿ ಅಲಸಂಡೆ ಕೊಯ್ಯುತಿದ್ದುದು. ಹಾಗೆಯೇ ಹಸಿ ಅಲಸಂಡೆ ತಿನ್ನುತ್ತಿದ್ದ ರುಚಿ ಈಗಲೂ ಬಾಯಲ್ಲಿ ನೀರೂರಿಸುತ್ತದೆ. ಹಾಗೆಯೇ ಇನ್ನೂ ಎಳೆಯ ಮುಳ್ಳುಸೌತೆಗಳ ಮಿಡಿಗಳನ್ನು ಕೊಯ್ದು ತಿನ್ನುವ ಸ್ವಾತಂತ್ರ್ಯ ನಮಗೆ. ಕೊಂಡು ಹೋದ ಬುಟ್ಟಿ ತುಂಬಾ ರಾಶಿ ರಾಶಿ ಹಸಿ ಹಸಿ ತಾಜಾ ತರಕಾರಿಗಳು ಇಂದು ನಮ್ಮ ಪಾಲಿಗೆ ಕನಸೇ ಅಲ್ಲವೇ. ಬಹುಶಃ ಈ ನನ್ನೂರು ಈ ದೃಷ್ಟಿಯಲ್ಲಿ ಅಂದರೆ ಬತ್ತ, ತೆಂಗು, ಕಂಗು, ತರಕಾರಿಗಳ ಕೃಷಿಗಳಲ್ಲಿ ಇಂದು ಕೊರತೆ ಕಾಣುತ್ತಿದೆಯೆಂದರೆ ತಪ್ಪಲ್ಲ. ಅಂದು ಕೃಷಿಯಿಂದ ತಮ್ಮ ಬದುಕು ಕಟ್ಟಿಕೊಂಡ ಮಂದಿ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ನೀಡಿದರು. ವಿದ್ಯಾಭ್ಯಾಸ ಪಡೆದ ಮಕ್ಕಳು ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದು ಊರು ಬಿಟ್ಟು ಪರವೂರು ಸೇರಿದರು. ಇದು ಎಲ್ಲಾ ಊರಿನ ಕತೆಯೂ ಹೌದು. ಆದರೆ ಉಣ್ಣಬೇಕಾದರೆ ಬೆಳೆಯಬೇಕಲ್ಲವೇ? ಎಂತಹ ಆಧುನಿಕತೆ ಬಂದರೂ ಕೃಷಿಯಿಲ್ಲದೆ ಬದುಕು ಹೇಗೆ ಸಾಧ್ಯ? ಜೊತೆಗೆ ಆಧುನಿಕ ಮಂದಿಗೆ ತಾವು ಮಾಡುವ ಕಚೇರಿ ಕೆಲಸಗಳು, ಇತರ ಹುದ್ದೆಗಳು, ಅಧಿಕಾರಿಗಳು ಎಂದರೆ ಶ್ರೇಷ್ಠತೆಯ ವ್ಯಸನ. ಕೃಷಿಯೆಂದರೆ ಅಸಡ್ಡೆ. ಕೃಷಿಕರೆಂದರೆ ಪೇಟೆಯ ಜನಕ್ಕೆ ತಾತ್ಸಾರ. ಕೃಷಿ ಪ್ರಧಾನವಾದ ದೇಶ ಎನ್ನುವುದು ಇಂದು ಅರ್ಥ ಕಳೆದುಕೊಂಡಿದೆ. ರೈತ ದೇಶದ ಬೆನ್ನೆಲುಬು ಎಂದ ದೇಶದಲ್ಲಿ ರೈತನಿಗೆ ಬೆನ್ನೆಲುಬೇ ಇಲ್ಲವಾಗಿದೆ. ಸರಕಾರದ ಯೋಚನೆ, ಯೋಜನೆಗಳಿಗಿಂತ ಪ್ರತಿಯೊಬ್ಬ ನಾಗರಿಕನೂ ತಾನು ಉಣ್ಣುವ ತಿನ್ನುವ ವಸ್ತುಗಳನ್ನು ಬೆಳೆಯುವ ರೈತನ ಬಗ್ಗೆ ಕನಿಕರ ತೋರಿಸಿದರೆ ಸಾಲದು. ಪ್ರಜ್ಞಾಪೂರ್ವಕವಾಗಿ ಗೌರವದಿಂದ ನಡೆಯ ಬೇಕಾದ್ದು ನಮ್ಮ ಕರ್ತವ್ಯವಾಗಬೇಕು. ಕೃಷಿಯಲ್ಲಿ ಆಸಕ್ತಿ ಇರುವ ಯುವ ಪೀಳಿಗೆಯನ್ನು ಪ್ರೋತ್ಸಾಹಿಸಬೇಕು. ಮನೆಯ ಸುತ್ತಮುತ್ತ ಸ್ವಲ್ಪವಾದರೂ ಅಂಗಳ, ಹಿತ್ತಿಲು ಇದ್ದರೆ ಏನನ್ನಾದರೂ ಬೆಳೆಯಬೇಕೆಂಬ ಕನಿಷ್ಠ ಪ್ರಜ್ಞೆಯನ್ನು ಬೆಳೆಸಬೇಕಾಗಿದೆ.
ಕೂಳೂರು, ಬಂಗ್ರ ಕೂಳೂರು ಎನ್ನುವುದು ಕಬ್ಬಿನ ಬೆಳೆಗೆ ಹೆಸರುವಾಸಿಯಾದುದು. ಚೌತಿ ಕಳೆದ ಬಳಿಕ ಅಲ್ಲಿಂದ ಕಬ್ಬುಗಳನ್ನು ಮನೆಮನೆಗೆ ತರುತ್ತಿದ್ದವರು ಕೂಳೂರಿನ ಪದ್ದಕ್ಕ. ಮನೆಗೆ ಬಂದವರು ನಮಗೆ ಬೇಕಾದಷ್ಟು ಕಬ್ಬಿನ ತುಂಡುಗಳನ್ನು ಕೊಟ್ಟು ಆಗಲೇ ತಿನ್ನುವುದಕ್ಕೆ ಸಿಪ್ಪೆಯನ್ನು ತೆಗೆದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕೊಯ್ದು ಕೊಡುವಷ್ಟು ಪ್ರೀತಿಯುಳ್ಳವರು. ಹೀಗೆ ಮಾರಾಟಕ್ಕೆ ಬರುವ ಮಹಿಳೆಯರಾಗಲಿ, ಗಂಡಸರಾಗಲಿ ಮಧ್ಯಾಹ್ನದ ವೇಳೆಗೆ ಹೋದ ಮನೆಯಲ್ಲಿ ಊಟ ಮಾಡುವುದಕ್ಕೆ ಅವರಿಗೆ ಸಂಕೋಚವಿರುತ್ತಿರಲಿಲ್ಲ. ಹಾಗೆಯೇ ಊಟ ನೀಡುವವರಿಗೂ ಇದು ಸಂತೋಷದ ವಿಷಯವೇ ಆಗಿತ್ತು. ಆಗೆಲ್ಲಾ ಈಗಿನಂತೆ ಅಲ್ಯೂಮಿನಿಯಂ ಪಾತ್ರೆಗಳು, ಸ್ಟೀಲ್ ಪಾತ್ರೆಗಳು ಇರಲಿಲ್ಲ. ಮಣ್ಣಿನ ಮಡಕೆಗಳೇ ಬಡವ ಶ್ರೀಮಂತರಾದಿಯಾಗಿ ಎಲ್ಲರಿಗೂ. ಕುಳಾಯಿ, ಬಾಳ ಎಂಬ ಊರುಗಳಿಂದ ಮಡಕೆ ಮಾಡುವವರು ಉದ್ದದ ಕೋಲಿಗೆ ಎರಡೂ ತುದಿಯಲ್ಲಿ ಮಡಕೆಗಳನ್ನು ಬಹುಜಾಗತ್ರೆಯಾಗಿ ಕಟ್ಟಿಕೊಂಡು ಒಬ್ಬರೇ ತಲೆಹೊರೆಯಲ್ಲಿ ತರುತ್ತಿದ್ದರು. ಶಾಲೆಯಲ್ಲಿ ಶ್ರವಣಕುಮಾರನ ಕತೆಯಲ್ಲಿ ಶ್ರವಣಕುಮಾರ ತನ್ನ ತಂದೆ ತಾಯಿಯನ್ನು ಹೀಗೆ ಹೊತ್ತುಕೊಂಡು ಹೋಗುತ್ತಿದ್ದ ಎಂದು ತಿಳಿದಿತ್ತು. ಆಗ ನನ್ನ ಕಣ್ಣ ಮುಂದೆ ಈ ಮಡಕೆ ತರುತ್ತಿದ್ದವರ ದೃಶ್ಯ ನೆನಪಿಗೆ ಬರುತ್ತಿತ್ತು. ಅವರು ಪ್ರತಿಯೊಂದು ಮಡಕೆಯನ್ನು ತಮ್ಮ ಉಂಗುರದ ಬೆರಳಿಂದ ಬಡಿದು ಬಡಿದು ತೋರಿಸುವಾಗ ಮಡಕೆ ಯಾಕೆ ಒಡೆಯುವುದಿಲ್ಲ ಎಂದು ಆಶ್ಚರ್ಯವಾಗುತ್ತಿತ್ತು. ಹಾಗೆಯೇ ಈ ತಲೆಹೊರೆಯನ್ನು ಹೊತ್ತುಕೊಂಡು, ಯಾವುದೇ ಓಣಿಯಾಗಲಿ, ಬೈಲಾಗಲಿ, ಗುಡ್ಡವಾಗಲಿ ಅವರು ಏರಿ ಇಳಿದು ಹೋಗುತ್ತಿದ್ದುದು ಸಾಹಸವೇ ಸರಿ.
ಇನ್ನುಳಿದಂತೆ ದಿನಾಲೂ ಈ ರಸ್ತೆಗಳಲ್ಲಿ ಓಡಾಡುತ್ತಿದ್ದವರು ಮೀನು ಮಾರಾಟದ ಸೀತಕ್ಕ, ಕಮಲಕ್ಕ. ರಸ್ತೆಯಲ್ಲಿ ಅಲ್ಲಲ್ಲಿ ನಿಂತು ಕೂಗಿ ಕರೆದರೆ ಹತ್ತಿರದ ಮನೆಯವರು ಇವರನ್ನೇ ಕಾದು ನಿಂತರೆ ರಸ್ತೆಯಿಂದ ದೂರ ಒಳಗೆ ಬೈಲುಗಳಲ್ಲಿ, ಗುಡ್ಡಗಳಲ್ಲಿದ್ದ ಮನೆಯವರು ಎಲ್ಲರೂ ಬಂದು ಒಟ್ಟು ಸೇರಿ ಮೀನು ವ್ಯಾಪಾರದಲ್ಲಿ ಚರ್ಚೆ ಮಾಡಿ ಮಾಡಿ ತಮಗೆ ಬೇಕಾದುದನ್ನು ಕೊಂಡು ಹೋಗುತ್ತಿದ್ದರು. ಇಬ್ಬರಿಗೂ ವ್ಯಾಪಾರವಾಗುತ್ತಿದ್ದುದು ವಿಶೇಷವೇ. ಮೀನು ಎಲ್ಲಾ ಮಾರಿ, ಕೊನೆಯ ಮನೆಯಲ್ಲಿ ಅವರೇ ಮೀನು ಕೊಯ್ದು ಶುಚಿ ಮಾಡಿ ಕೊಟ್ಟು, ಊಟ ಮಾಡಿ ಹೋಗುತ್ತಿದ್ದುದು ಸಾಮಾನ್ಯ. ಅಂದ ಹಾಗೆ ಆಗ ಸೈಕಲಿಲ್ಲ. ರಿಕ್ಷಾದಲ್ಲಿ ಮೀನು ವ್ಯಾಪಾರಕ್ಕೆ ಗಂಡಸರು ಯಾರೂ ಬರುತ್ತಿರಲಿಲ್ಲ. ಇನ್ನು ಅಪರೂಪಕ್ಕೆ ಬರುವ ಚರುಮುರಿ(ಮಂಡಕ್ಕಿ) ವ್ಯಾಪಾರಿಗಳು. ಇವರೂ ಮನೆ ಮನೆಗೆ ಬರುವುದು ಮಕ್ಕಳಿಗೆ ಬಹಳ ಖುಷಿ.
ವಿಶೇಷ ಸಂದರ್ಭಗಳಲ್ಲಿ ಮನೆ ಮನೆಗಳಿಗೆ ಬರುತ್ತಿದ್ದ ಗಿಳಿಶಾಸ್ತ್ರ ಹೇಳುವ, ಕೈ ಲಕ್ಷಣ ಹೇಳುವ ಹೆಂಗಸರು, ಗಂಡಸರು ಹಾಗೆಯೇ ಬುಡ ಬುಡಿಕೆಯವರು, ಕುರುಕುರು ಮಾಮಗಳು ಕುತೂಹಲದ ವ್ಯಕ್ತಿಗಳು. ಹಾಗೆಯೇ ಗ್ರಾಮದ, ಪಕ್ಕದ ಊರಿನ ದೇವಸ್ಥಾನಗಳ, ಹಬ್ಬ, ಹುಣ್ಣಿಮೆ, ಸಂಕ್ರಮಣಗಳೆಂದು ಮನೆಗೆ ಬರುವ ದಾಸಯ್ಯನವರು, ಶಂಖ ಊದಿ, ಜಾಗಟೆ ಬಾರಿಸಿ ಕೊಡುವ ಹಣ ಪಡೆದುಕೊಂಡು ಕುಂಕುಮ ನೀಡಿ ಹೋಗುವವರು ಇವರು. ಆಗೆಲ್ಲಾ ಮುತ್ತೈದೆಯರಿಗೆ ಕುಂಕುಮ ತಂದು ಕೊಡುವವರು ಇವರೇ. ಅಂಗಡಿಗಳಿಂದ ಕುಂಕುಮ ತರುವ ಕ್ರಮ ಇರಲಿಲ್ಲವೆಂದೇ ಅನ್ನಿಸುತ್ತದೆ. ಯಾವ ಗುಡ್ಡದ ಮೇಲಾಗಲಿ, ತೋಡು ದಾಟಿ ಹೋಗಬೇಕಾದ ಕಡೆಗಳಲ್ಲೇ ಆಗಲಿ ಭಿಕ್ಷುಕರು ಸನ್ಯಾಸಿಗಳು ತಪ್ಪದೇ ಭಿಕ್ಷೆಗಾಗಿ ಹೋಗುತ್ತಿದ್ದರು. ಬಂದವರಿಗೆ ಅವರ ಬೇಡಿಕೆಯಂತೆ ಊಟ, ತಿಂಡಿ, ಅಕ್ಕಿಯನ್ನು ನೀಡುವುದು ಧರ್ಮವೆಂದು ಆ ಕಾಲದಲ್ಲಿ ಜನ ನಂಬಿದ್ದರು. ಆದರೆ ಇಂದು ಹಣವನ್ನೇ ಪಡೆಯುವವರು ಶರಾಬು ಅಂಗಡಿಗಳಲ್ಲಿ ಕುಡಿದು ಬೀಳುತ್ತಿರುವುದನ್ನು ನೋಡಿದರೆ ಕೊಟ್ಟ ಭಿಕ್ಷೆಗೆ ಬೆಲೆಯೇ ಇಲ್ಲ ಅನ್ನಿಸುವುದು ಮಾತ್ರವಲ್ಲ ಅವರು ಮಾಡಿದ ಪಾಪದ ಕೆಲಸಗಳಲ್ಲಿ ನಾವು ಪರೋಕ್ಷವಾಗಿ ಭಾಗಿಯಾದಂತೆ ಅನ್ನಿಸುತ್ತದೆ. ಈ ಕಾರಣದಿಂದ ಯಾರಿಗೂ ಭಿಕ್ಷೆ ಹಾಕಬಾರದು ಎಂದನ್ನಿಸಿದರೂ ತಪ್ಪಲ್ಲ. ಬಗಲಲ್ಲಿ ಬಳೆಗಳ ಮಾಲೆ ಮಾಲೆಗಳನ್ನೇ ಹಾಕಿಕೊಂಡು ತಲೆಯಲ್ಲಿ ಪುಟ್ಟ ಟ್ರಂಕೊಂದನ್ನು ಹಿಡಿದು ಬರುವ ಬಳೆಗಾರ ಎಂದರೆ ಎಲ್ಲ ಮನೆಯ ಹೆಣ್ಣು ಮಕ್ಕಳಿಗೂ, ಹೆಂಗಸರಿಗೂ ಬಹಳ ಖುಷಿ. ಆಗ ಕ್ರಿಶ್ಚಿಯನ್ ಮಹಿಳೆಯರೂ, ಮುಸ್ಲಿಮ್ ಮಹಿಳೆಯರೂ ಬಳೆಗಳನ್ನು ಧರಿಸುತ್ತಿದ್ದರು. ಹಸಿರು, ಕೆಂಪು ಬಣ್ಣದ ಗಾಜಿನ ಬಳೆಗಳನ್ನು ಕೈತುಂಬಾ ಧರಿಸುವ ಅವಕಾಶ ಶಾಲೆಗೆ ಹೋಗುವಾಗ ಇರಲಿಲ್ಲವಾದರೂ ಹೆಚ್ಚು ಸದ್ದಾಗದಂತೆ ಎರಡೆರಡು ಬಳೆಗಳು ಕೈಗಳನ್ನು ಅಲಂಕರಿಸುತ್ತಿತ್ತು. ಅಮ್ಮಂದಿರ ಕೈಗಳ ಬಳೆ ಬಟ್ಟೆ ಒಗೆಯುವಾಗ ಒಡೆಯುವುದು ಸಾಮಾನ್ಯವಾದರೂ ಬಹಳ ಜಾಗ್ರತೆಯಿಂದ ಬಟ್ಟೆ ಒಗೆಯುವ ಹೆಂಗಸರ ಕೌಶಲವನ್ನು ನೋಡಿಯೇ ಮೆಚ್ಚಬೇಕು. ಅಂತಹ ಹಳೆಯ ಬಳೆಗಳು ಕೈಯಲ್ಲೇ ವರ್ಷಗಟ್ಟಳೆ ಉಳಿದಾಗ ಬಳೆಗಾರನೇ ಅದನ್ನು ತೆಗೆದು ಹೊಸ ಬಳೆ ತೊಡಿಸುತ್ತಿದ್ದನು. ಇಂದು ಸಣ್ಣ ಸಣ್ಣ ವಿಷಯಕ್ಕೂ ಅನುಮಾನಪಡುವ ಮನಸ್ಸು ಅಂದು ಇರಲಿಲ್ಲ. ಮನುಷ್ಯ ಮನುಷ್ಯರ ನಡುವೆ ವಿಶ್ವಾಸವಿದ್ದಾಗ, ಅನುಮಾನಕ್ಕೆ ಆಸ್ಪದವೇ ಇರುವುದಿಲ್ಲ. ವಿಶ್ವಾಸ ಮತ್ತು ಅನುಮಾನದ ನಡುವಿನ ಅಂತರ ಬಹಳ ತೆಳ್ಳಗಿನದ್ದೇ ಸರಿ. ಆದರೂ ಇಂದು ವಿಶ್ವಾಸ ಎನ್ನುವುದೇ ಮಾಯವಾಗಿದೆ. ಊರಿನ ಜನರ ನಡುವೆ ಎನ್ನುವುದನ್ನು ಬಿಡಿ, ಗಂಡ ಹೆಂಡಿರ ನಡುವೆ, ತಂದೆ ಮಕ್ಕಳ, ತಾಯಿ ಮಕ್ಕಳ, ಒಡ ಹುಟ್ಟಿದವರ ನಡುವೆಯೇ ಇಲ್ಲವಾಗುತ್ತಿರುವುದು ನಮ್ಮಿಂದಲೇ ಅಲ್ಲವೇ? ವಿಶ್ವಾಸವೆನ್ನುವುದು ಅಂಗಡಿಯಿಂದ ಕೊಂಡು ತರುವ ವಿಷಯವೂ ಅಲ್ಲ. ವಸ್ತುವೂ ಅಲ್ಲ. ಅದು ಮನುಷ್ಯತ್ವದ ಒಡಲಲ್ಲಿ ತನಗೇ ತಾನೇ ಹುಟ್ಟಬೇಕಾದ ಅಥವಾ ಹುಟ್ಟಿಸಿಕೊಳ್ಳ ಬೇಕಾದ ಜೀವನ ಮೌಲ್ಯ ತಾನೇ? ಹೀಗೆ ಮನೆಯೇ ಪ್ರಪಂಚವಾದರೂ ಪ್ರಪಂಚದೊಳಗೆ ಒಂದು ಮನೆ, ಒಂದು ಕುಟುಂಬ ಎನ್ನುವುದು ಅವಿನಾಭಾವವಾಗಿ ಊರು ಅನ್ನಿಸಿ ಕೊಳ್ಳುವುದು ತಾನೇ? ಒಬ್ಬರ ಬದುಕಿಗೆ ಒಬ್ಬರು ಎನ್ನುವುದು, ಒಬ್ಬರ ಸುಖ ದುಃಖಗಳಿಗೆ ಇನ್ನೊಬ್ಬರು ಆಗುವುದು ಇದನ್ನೇ ನೆರೆ ಎನ್ನುವುದು. ಅದು ಕರೆದರೆ ಬರುವಂತಹುದು ಮಾತ್ರವಲ್ಲ. ಕರೆಯದಿದ್ದರೂ ಅಗತ್ಯ ಎನಿಸಿದಾಗ ತಾನಾಗಿಯೇ ಬರುವಂತಹುದು. ಆದ್ದರಿಂದಲೇ ನೆರೆಕರೆ. ನೆರೆಕರೆ ಯಾವಾಗಲೂ ನೆರೆಹೊರೆ ಆಗಬಾರದು. ಇಂದಿನ ಬದುಕಿನ ಶೈಲಿಯಲ್ಲಿ ನೆರೆಯನ್ನು ಅವಲಂಬಿಸುವುದು ಇಷ್ಟವಾಗದ ವಿಚಾರವಾದರೂ ನೆರೆಯವರಿಗೆ ತೊಂದರೆಯಾಗದಂತೆ ಬದುಕುವುದು ನಾಗರಿಕ ಜೀವನದ ಕ್ರಮವಾಗ ಬೇಕಾಗಿದೆ.
ಅಂದು ಪಾನ ನಿಷೇಧವಿದ್ದ ದಿನಗಳಿರಬೇಕು. ಶರಾಬು ಕುಡಿಯುವುದು, ತಯಾರಿಸುವುದು ಇವು ಅಪರಾಧಗಳಾಗಿತ್ತು ಎಂದು ನೆನಪು. ಆದರೂ ನಮ್ಮ ಮನೆಯ ರಸ್ತೆಯ ಬದಿ ಮನೆಯಲ್ಲಿ ಶರಾಬು ತಯಾರಾಗುತ್ತಿತ್ತು. ಅಲ್ಲಿಗೆ ಆಗಾಗ ಪೊಲೀಸರು ದಾಳಿ ಮಾಡುತ್ತಿದ್ದರು. ಈ ಒಂದು ಘಟನೆಯನ್ನು ಬಿಟ್ಟರೆ ಯಾವ ಕೆಟ್ಟ ಘಟನೆಗಳನ್ನು ನಾನು ನನ್ನ ಬಾಲ್ಯದ ದಿನಗಳಲ್ಲಿ ಕಂಡಿಲ್ಲ, ಕೇಳಿಲ್ಲ, ಎಂದರೆ ಇದು ಅತಿಶಯೋಕ್ತಿಯ ಮಾತಲ್ಲ. ಬೇರೆ ಊರುಗಳಲ್ಲಿ ಜಗಳವಾಡಿದ, ಹೊಡೆದಾಡಿದ, ಕೊಲೆಯ ಪ್ರಯತ್ನಗಳ ಘಟನೆಗಳು ತಿಳಿಯುತ್ತಿತ್ತು. ಆ ಕಾರಣದಿಂದಲೇ ನನ್ನೂರಿನ ಜನ ಶ್ರೀಮಂತರಾಗಲಿ, ಬಡವರಾಗಲಿ, ಎಲ್ಲರೂ ಗೌರವಾನ್ವಿತರು. ಸಭ್ಯತೆಯ, ಸಜ್ಜನಿಕೆಯ ಮಂದಿ. ನಾನು ಈ ಊರಿನಲ್ಲಿ ಹುಟ್ಟಿದ್ದೇನೆ, ಬೆಳೆದಿದ್ದೇನೆ. ಸುಮಾರು ಹದಿನೇಳು ವರ್ಷಗಳ ನನ್ನ ಜೀವನದಲ್ಲಿ ಸೌಹಾರ್ದತೆ, ಮಾನವೀಯತೆ, ಶಾಂತಿಯ ವಾತಾವರಣವನ್ನು ಅನುಭವಿಸಿದ್ದೇನೆ ಎನ್ನುವುದನ್ನು ಸಂತೋಷದಿಂದ ನೆನಪಿಸಿಕೊಳ್ಳುತ್ತಿದ್ದೇನೆ.
ಈ ಊರಿನಲ್ಲೊಂದು ಐತಿಹಾಸಿಕ ಪ್ರವಾಸೀ ತಾಣವಿದೆ. ಅದುವೇ ಬಿಜೈ ಚರ್ಚ್ ರಸ್ತೆಯಲ್ಲಿರುವ ಸೀಮಂತೀಬಾಯಿ ಸ್ಮಾರಕ ವಸ್ತು ಸಂಗ್ರಹಾಲಯ. ಮಿರಾಜ್‍ಕರ್ ಎಂಬವರು ತಾನು ದೇಶ ವಿದೇಶಗಳಲ್ಲಿ ಸುತ್ತಾಡಿದಾಗ ಕೊಂಡು ತಂದ ವಸ್ತುಗಳನ್ನು ಅಂದವಾಗಿ ಜೋಡಿಸಿಟ್ಟು ಜೋಪಾನವಾಗಿ ಇರಿಸಿಕೊಂಡವರು. ವಿದ್ಯಾರ್ಥಿಗಳಿಗೆ ತಾನು ವಾಸ್ತವ್ಯವಿರುವಾಗಲೇ ಅವುಗಳನ್ನು ನೋಡುವುದಕ್ಕೆ ಅವಕಾಶ ನೀಡಿದವರು. ಮುಂದೆ ತನ್ನ ಬಂಗ್ಲೆ, ಹಿತ್ತಿಲು, ತೋಟ ಹಾಗೂ ಎಲ್ಲಾ ಸಂಗ್ರಹವನ್ನು ಪ್ರಾಚ್ಯ ವಸ್ತು ಸಂಗ್ರಹಾಲಯದ ವಶಕ್ಕೆ ಒಪ್ಪಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದವರು. ಇಂತಹ ಒಂದು ಸಂದರ್ಭವನ್ನು ಬೇರೆಲ್ಲೂ ನೋಡದ ನಮಗೆ ಮಣಿಪಾಲದ ಹಸ್ತಶಿಲ್ಪದ ವಿಜಯನಾಥ ಶೆಣೈಯವರು ಈ ಪರಂಪರೆಗೆ ಸೇರಿದವರು ಅನ್ನಿಸುತ್ತದೆ. ಅಮೇರಿಕದಲ್ಲಿ ಹೀಗೆ ಶ್ರೀಮಂತರು ತಮ್ಮ ಬಂಗ್ಲೆ, ವೈವಿಧ್ಯಮಯವಾದ ಹೂವಿನ ತೋಟ, ಅಲ್ಲದೆ ಅವರ ಆಸಕ್ತಿಗನುಗುಣವಾದ ಚಿತ್ರ ಶಾಲೆ ಅಥವಾ ಸಂಗೀತ ಶಾಲೆ ಅಥವಾ ಥಿಯೇಟರ್ ಗಳನ್ನು ಅವರವರ ಹೆಸರಿನೊಂದಿಗೆ ಸಾರ್ವಜನಿಕವಾಗಿ ಅರ್ಪಿಸಿದ ಸಂದರ್ಭಗಳು ಹಲವು ಇವೆ ಎನ್ನುವುದು ಇತ್ತೀಚೆಗೆ ನಾನು ನೋಡಿದ ವಿಷಯ. ನನ್ನೂರು ಹೀಗೆ ವೈವಿಧ್ಯತೆಯಿಂದ ಕೂಡಿದ, ವಿಶೇಷತೆಯಿಂದ ಕೂಡಿದ ಊರಾಗಿದೆಯಲ್ಲವೇ?