ನೆರೆದೇಶಕ್ಕೂ ಮಂಕಿಪಾಕ್ಸ್ : ಭಾರತಕ್ಕೆ ಎಚ್ಚರಿಕೆಯ ಗಂಟೆ

ನೆರೆದೇಶಕ್ಕೂ ಮಂಕಿಪಾಕ್ಸ್ : ಭಾರತಕ್ಕೆ ಎಚ್ಚರಿಕೆಯ ಗಂಟೆ

ಜಗತ್ತಿನ ೧೩೦ಕ್ಕೂ ಹೆಚ್ಚು ದೇಶಗಳಿಗೆ ಹರಡಿರುವ ಮಾರಕ ಮಂಕಿಪಾಕ್ಸ್ ವೈರಸ್ ಇದೀಗ ಪಾಕಿಸ್ತಾನಕ್ಕೂ ಪ್ರವೇಶಿಸಿದೆ. ಕೋವಿಡ್ ನ ಮಾರಕ ಹೊಡೆತದಿಂದ ಚೇತರಿಸಿಕೊಂಡ ಎರಡೇ ವರ್ಷದಲ್ಲಿ ಈ ಸೋಂಕು ಮತ್ತೆ ಜಗತ್ತನ್ನು ಕಾಡುವ ಭೀತಿ ಎದುರಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗಷ್ಟೇ ಈ ರೋಗ ದೊಡ್ಡ ಪ್ರಮಾಣದಲ್ಲಿ ಹರಡುತ್ತಿರುವ ಕಾರಣ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೊಷಿಸಿದೆ. ಆಫ್ರಿಕಾ ಖಂಡದಲ್ಲಿ ಈಗಾಗಲೇ ಈ ವರ್ಷ ಮಂಕಿಪಾಕ್ಸ್ ಗೆ ೫೦೦ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ೧೪,೦೦೦ಕ್ಕೂ ಹೆಚ್ಚು ಸೋಂಕಿತರು ಸದ್ಯ ಕಗ್ಗತ್ತಲ ಖಂಡದಲ್ಲಿ ಇದ್ದಾರೆ. ಅದು ಈಗ ಏಷ್ಯಾಕ್ಕೆ ಕಾಲಿಡುವ ಮೂಲಕ, ಅದರಲ್ಲೂ ಭಾರತದ ನೆರೆದೇಶಕ್ಕೇ ಕಾಲಿಡುವ ಮೂಲಕ, ಭಾರತವನ್ನು ಆತಂಕಕ್ಕೆ ನೂಕಿದೆ. ಪಾಕಿಸ್ತಾನದಲ್ಲಿ ಮೂವರಿಗೆ ಈ ರೋಗ ಧೃಢ ಪಟ್ಟಿದೆ.

ಮೈಮೇಲೆ ಸಿಡುಬು, ದಡಾರದಂತಹ ದೊಡ್ದ ದೊಡ್ಡ ಗುಳ್ಳೆಗಳು ಎದ್ದು, ಅವುಗಳಲ್ಲಿ ಕೀವು ತುಂಬಿಕೊಂಡು, ಅತಿಯಾದ ನೋವು, ಸ್ನಾಯು ದೌರ್ಬಲ್ಯ, ತೀವ್ರ ಜ್ವರ ಉಂಟಾಗಿ, ಕೊನೆಗೆ ನಿಯಂತ್ರಣಕ್ಕೆ ಬಾರದಿದ್ದರೆ ರೋಗಿ ಸಾಯಲೂಬಹುದಾದ ಮಾರಕ ರೋಗವಿದು. ಆಫ್ರಿಕಾದ ಕಾಂಗೋದಲ್ಲಿ ಇದು ಅತಿ ಹೆಚ್ಚಿನ ಪ್ರಮಾಣದಲ್ಲಿ ಹರಡಿದೆ. ಹಾಗೆ ನೋಡಿದರೆ ಆಫ್ರಿಕಾದಲ್ಲಿ ಮಂಕಿಪಾಕ್ಸ್ ವೈರಸ್ ೭೦ ವರ್ಷಗಳಿಂದ ಇದೆ. ಆದರೆ, ಈ ವರ್ಷ ಅದು ಕಳೆದ ವರ್ಷಕ್ಕಿಂತ ದುಪ್ಪಟ್ಟು ಜನರಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಚಿಂತೆಗೆ ಕಾರಣವಾಗಿದೆ. ಮಂಕಿಪಾಕ್ಸ್ ಸಾಮಾನ್ಯವಾಗಿ ಕೋತಿಗಳು, ಇಲಿಗಳು ಮತ್ತು ಅಳಿಲುಗಳಂತಹ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಕೋವಿಡ್ ಗಿಂತ ಹೆಚ್ಚು ಅಪಾಯಕಾರಿ ಎಂಬ ವಾದವೂ ಇದೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಪಾಕ್ ನಲ್ಲಿ ಮಧ್ಯಪ್ರಾಚ್ಯದಿಂದ ಬಂದವರಲ್ಲಿ ಪತ್ತೆಯಾಗಿದೆ. ಮಧ್ಯಪ್ರಾಚ್ಯದ ದೇಶಗಳ ಜೊತೆಗೆ ಭಾರತಕ್ಕೆ ನಿಕಟ ಪ್ರಯಾಣ ಸಂಪರ್ಕವಿದೆ. ಆಫ್ರಿಕನ್ ದೇಶಗಳಿಂದಲೂ ಭಾರತಕ್ಕೆ ಬಂದು-ಹೋಗಿ ಮಾಡುವವರ ಸಂಖ್ಯೆ ಹೆಚ್ಚೇ ಇದೆ. ಹೀಗಾಗಿ ಭಾರತಕ್ಕೆ ಮಂಕಿಪಾಕ್ಸ್ ಬಹಳ ಸುಲಭವಾಗಿ ಬರಬಹುದು. ೧೪೦ ಕೋಟಿಯಷ್ಟು ಬೃಹತ್ ಜನಸಂಖ್ಯೆಯ ದೇಶದಲ್ಲಿ ಇದು ಉಂಟು ಮಾಡಬಹುದಾದ ಅಪಾಯವನ್ನು ಈಗಾಗಲೇ ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಈ ವೈರಸ್ ಹರಡದಂತೆ ಕೇಂದ್ರ ಆರೋಗ್ಯ ಇಲಾಖೆ ಹಾಗೂ ವಿದೇಶಾಂಗ ಸಚಿವಾಲಯ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ, ಬಂದರು ಮತ್ತು ಗಡಿ ಪ್ರದೇಶದಲ್ಲಿ ಕಡ್ಡಾಯ ಪರೀಕ್ಷೆಗೆ ಆದೇಶಿಸುವ ಬಗ್ಗೆ ಈಗಾಗಲೇ ಚಿಂತನೆ ನಡೆಸಬೇಕಿದೆ. ಲಸಿಕೆಯ ಕುರಿತೂ ಗಮನ ಹರಿಸಬೇಕಿದೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೭-೦೮-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ