ನೆಲಕಡಲೆ 65

ನೆಲಕಡಲೆ 65

ಬೇಕಿರುವ ಸಾಮಗ್ರಿ

ನೆಲಕಡಲೆ (Groundnut) ೨ ಬಟ್ಟಲು, ಶುಂಠಿ ೧ ಸಣ್ಣ ತುಂಡು, ಸ್ವಲ್ಪ ಪುದೀನಾ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ನೀರುಳ್ಳಿ  ೧, ಗೋಬಿ 65 ಮಸಾಲಾ ೩ ಚಮಚ, ಕರಿಯಲು ಎಣ್ಣೆ, ಲಿಂಬೆ ರಸ ೧ ಚಮಚ, ಸ್ವಲ್ಪ ಉಪ್ಪು, ಕಾರ್ನ್ ಫ್ಲೋರ್ ೧ ಚಮಚ, ಅರಸಿನ ಹುಡಿ ಕಾಲು ಚಮಚ

 

ತಯಾರಿಸುವ ವಿಧಾನ

ಚಿಕನ್ 65, ಗೋಬಿ 65 ಮುಂತಾದ ಖಾದ್ಯಗಳಂತೆ ನೆಲಕಡಲೆಯಿಂದಲೂ ಇದೇ ರೀತಿಯ ತಿನಸನ್ನು ತಯಾರಿಸಬಹುದು. ಇಲ್ಲಿದೆ ನೋಡಿ ಸುಲಭ ವಿಧಾನ.

ರಾತ್ರಿ ನೆನೆಸಿಟ್ಟ ನೆಲಕಡಲೆ ಬೀಜದ ಜೊತೆಗೆ ಸಣ್ಣ ತುಂಡು ಶುಂಠಿ, ಸ್ವಲ್ಪ ಪುದೀನಾ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪನ್ನು  ಸೇರಿಸಿ ಮಿಕ್ಸಿಗೆ ಹಾಕಿ, ನೀರು ಹಾಕದೇ ತರಿ ತರಿಯಾಗಿ ರುಬ್ಬಿಕೊಂಡಿರಿ. ಒಂದು ನೀರುಳ್ಳಿಯನ್ನು ಸಣ್ಣಗೆ ತುಂಡರಿಸಿ (ಮುಕ್ಕಾಲು ಕಪ್) ಅದನ್ನು ಮೊದಲು ರುಬ್ಬಿಕೊಂಡ ಮಿಶ್ರಣದೊಂದಿಗೆ ಬೆರೆಸಿ. ಈ ಮಿಶ್ರಣಕ್ಕೆ ಅರಸಿನ ಹುಡಿ, ಗೋಬಿ 65 (ಚಿಕನ್ 65 ಮಸಾಲಾ ಆಗುತ್ತದೆ) ಮಸಾಲಾ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ (ಗೋಬಿ ಮಸಾಲಾದಲ್ಲಿ ಉಪ್ಪು ಇರುವುದರಿಂದ ಬೇಕಾದಲ್ಲಿ ಮಾತ್ರ ಉಪ್ಪು ಸೇರಿಸಿ). ಕಾರ್ನ್ ಫ್ಲೋರ್ ಹಾಗೂ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 

ಎಣ್ಣೆಯನ್ನು ಕಾಯಲು ಇಡಿ. ಚೆನ್ನಾಗಿ ಕಲಸಿಕೊಂಡ ಹಿಟ್ಟನ್ನು ವಡೆಯಾಕಾರ ಮಾಡಿ ಚೆನ್ನಾಗಿ ಬಿಸಿಯಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ. ಮೀಡಿಯಂ ಫ್ಲೇಮ್ ನಲ್ಲಿ ಡೀಪ್ ಫ್ರೈ ಆಗಿ ಕಾಯಿಸಿ, ಆಗ ಒಳಗಡೆ ಚೆನ್ನಾಗಿ ಬೇಯುತ್ತದೆ. ಎರಡೂ ಬದಿಯನ್ನು ಚೆನ್ನಾಗಿ ಕರಿಯಿರಿ. ಚೆನ್ನಾಗಿ ಕರಿದ ನೆಲಗಡಲೆ ವಡೆಯನ್ನು ಎಣ್ಣೆಯಿಂದ ಹೊರತೆಗೆದು ಬಿಸಿಯಾಗಿರುವಾಗಲೇ ಟೊಮ್ಯಾಟೋ ಸಾಸ್ ಜೊತೆ ತಿನ್ನಲು ಕೊಡಿ.

-ವಾಣಿಶ್ರೀ ವಿನೋದ್, ಪೇರ್ಲಗುರಿ, ಮಂಗಳೂರು