ನೆಲದ ಕೂಗು-ಮನದ ಮಾತು ಎರಡೂ ಕೇಳದ ಕಿವುಡರಾದೆವು ನಾವು

ನೆಲದ ಕೂಗು-ಮನದ ಮಾತು ಎರಡೂ ಕೇಳದ ಕಿವುಡರಾದೆವು ನಾವು

ಸುಮ್ಮನೆ ಯೋಚಿಸಿ, ನಾವೆಲ್ಲಿದ್ದೇವೆ? ನಮ್ಮ ಭವಿಷ್ಯವೇನು? ಕಾಲಕ್ಕನುಗುಣವಾಗಿ ಇಲ್ಲವೇ ಕಾಲಾತೀತವಾಗಿ ಬಾಳಲಾಗದೆ ತೊಳಲಾಟದ ತ್ರಿಶಂಕು ಸ್ವರ್ಗಕ್ಕೆ ನಾವೇಕೆ ಹೊಸದಾಗಿ ನಾಮಿನೇಟ್ ಆಗಿದ್ದೇವೆ?

ಎಲ್ಲರಿಗೂ ಕೆಲವು ಆಸೆಗಳಿರುತ್ತವೆ. ನನಗೂ ಇದೆ, ನಿಮಗೂ ಇದೆ. ವೈಯಕ್ತಿಕ ಆಸೆಗಳೊಡನೆ, ನಾವು ಸಹಬಾಳ್ವೆಯ, ಸಧೃಡ, ಸಮೃದ್ಧ, ಪ್ರಾಮಾಣಿಕತೆಯ ನಾಡಿನಲ್ಲಿ ಬಾಳಬೇಕು, ನಮ್ಮ ಮಕ್ಕಳ ಭವಿಷ್ಯ ಭದ್ರವಾಗಿರಬೇಕು ಎಂಬ ಕೆಲವು ಸಾಮಾಜಿಕ ಆಸೆಗಳೂ ಇರುತ್ತವೆ. ಹೀಗಾಗಿಯೇ ಅಣ್ಣಾ ಎಂಬ ೭೦ರ ಹರೆಯದ ವ್ಯಕ್ತಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದಾಗ ಲಕ್ಷಾಂತರ ಜನರು ನಾನು ಅಣ್ಣಾ, ನೀನು ಅಣ್ಣ, ನಿಮ್ಮ ಹೋರಾಟಕ್ಕೆ ಇದೆ ನಮ್ಮ ಬೆಂಬಲ ಎಂದು ಮನೆಯಿಂದ ಹೊರಬಂದಿದ್ದು. ನಮ್ಮ ಇಂದಿನ ತಾಳ್ಮೆರಹಿತ ಜೀವನದಲ್ಲಿ, ಒಂದು ಕರೆ ಮಾಡಿದರೆ ೧೦ ನಿಮಿಷದಲ್ಲಿಯೇ ಮನೆ ಮುಂದೆ ಪಿಜ್ಜಾ ಬರುತ್ತದೆ. ಫೋನು ಬಿಲ್ಲಿನಿಂದ ಹಿಡಿದು ಮನೆಯ ಶಾಪಿಂಗ್‌ನವರೆಗೆ, ಬ್ಯಾಂಕ್ ಅಕೌಂಟ್ ತೆರೆಯುವುದರಿಂದ- ಸಾಲವನ್ನು ಪಡೆಯುವವರೆಗೆ, ಇನ್ಶುರನ್ಸ್ ಕಟ್ಟುವುದರಿಂದ- ಅಟಚಿim ಮಾಡುವವರೆಗೆ, ಅಷ್ಟೇ ಏಕೆ ಬಾಳ ಸಂಗಾತಿಯನ್ನು ಹುಡುಕುವುದರಿಂದ- ಸಮಯವನ್ನು ಕಳೆಯಲು ಸಂಗಾತಿಯನ್ನು ಹುಡುಕುವವರೆಗೆ ಎಲ್ಲವೂ ಇಂಟರ್‌ನೆಟ್ ಬೆರಳತುದಿಯಲ್ಲಿ ಫಟಾಫಟ್ ಅಂತ ನಡೆಯಬೇಕು. ಏಕೆಂದರೆ ಸಮಯದ ಅಭಾವ, ತಾಳ್ಮೆಯ ಅಭಾವ, ಇದು ಕಾರ್ಪೋರೆಟ್ ಆಫೀಸಿನಲ್ಲಿಯ ತಂಪನೆಯ ಏಸಿಯಲ್ಲಿ ಕುಳಿತು ತಲೆಬಿಸಿ ಮಾಡಿಕೊಳ್ಳುವ ನವಭಾರತದ ಒಂದು ಮುಖ.

ಈಗ ನಾವು ಮನೆಯ ಅಥವಾ ನಿವೇಷನದ ನೊಂದಣಿ ಮಾಡಿಸಿಕೊಳ್ಳಬೇಕು ಎಂದುಕೊಳ್ಳಿ. ಹೇಗೋ ಕಷ್ಟಪಟ್ಟು ನಿಮ್ಮ ಮೇಲಧಿಕಾರಿಗಳಿಂದ ರಜೆಯನ್ನು ಪಡೆದು, ಉಪನೊಂದಣಾಧಿಕಾರಿ ಕಛೇರಿಗೆ ಹೋಗುತ್ತೀರಿ, ಗತ್ತಿನಿಂದ, ಧಿಮಾಕಿನಿಂದ ಅದರಲ್ಲೂ ಎಲ್ಲ ಕಾಗದಪತ್ರಗಳು ಸರಿ ಇರುವ ಪ್ರಾಮಾಣಿಕತೆಯಿಂದಲೇ ಎಂದುಕೊಳ್ಳಿ, ಆದರೆ ಕಛೇರಿ ಪ್ರವೇಶಿಸುತ್ತಿದ್ದಂತೆ ನಿಮ್ಮನ್ನಿನ್ನು ತಿಂದೇ ಬಿಡುವ ಎಂಬಂತಹ ಠೇಂಕಾರದಿಂದ ಅಲ್ಲಿಯ ಗುಮಾಸ್ತ ಸಾಹೇಬರು ಬಂದಿಲ್ಲ ನಾಳೆ ಬನ್ನಿ ಎನ್ನುತ್ತಿದ್ದಂತೆ ನವ ಕಾರ್ಪೋರೇಟ್ ಭಾರತದ ಪರದೇ ಒಂದೇ ಏಟಿಗೆ ಹಾರಿ ಹೋಗಿರುತ್ತದೆ. ಇನ್ನು ಜೀವಂತವಾಗಿರುವ ಅಲ್ಲಿಯ ಅನೇಕ ಜವಾಬ್ದಾರಿರಹಿತ ಅಧಿಕಾರಶಾಹಿ, ಲಂಚದ ವಾಸನೆ ಬರದೇ ಎಚ್ಚರಗೊಳ್ಳದೇ ಇರುವ ಸಿಬ್ಬಂದಿಗಳು, ಸಾರ್ ತಲೆಕೆಡಿಸಿಕೊಳ್ಳಬೇಡಿ ಕಡಿಮೆ ವ್ಯಾಲುವೇಶ್‌ನಲ್ಲಿಯೇ ಆದಷ್ಟು ಬೇಗ ನೊಂದಣಿ ಮಾಡಿಸಿಕೊಡುತ್ತೇನೆ, ಸಾಹೇಬರೇನೋ ತುಂಬ ಒಳ್ಳೆಯವರು, ಆದರೆ ಅವರಮೇಲಿನವರಿಗೆ ಸ್ವಲ್ಪ ಮುಟ್ಟಿಸದಿದ್ದರೆ ಅವರಿಗೇ ಉಳಿಗಾಲವಿರಲ್ಲ, ಅಲ್ಲವಾ? ಎಂದು ಮಾತನಾಡುತ್ತ ಆ ಸಮಯದಲ್ಲಿ ಸಾಕ್ಷಾತ್ ದೈವೀ ಸಂಭೂತರಂತೆಯೇ ತೋರುವ ಏಜೆಂಟರು, ಒಂದು ನಿಮಿಷದ ಕಾರ್ಯವನ್ನು ತಿಂಗಳುಗಟ್ಟಲೇ ಎಳೆಯುವ ವ್ಯವಸ್ಥೆ, ಅಲ್ಲಿ ಕಾಣುತ್ತದೆ ನೈಜ ಭಾರತದ ಇನ್ನೊಂದು ಮುಖ. ಸಹಜವಾಗಿ ಆಗ ಕೋಪವೂ ಬರುತ್ತದೆ, ಇದಕ್ಕೆ ಕಾರಣವಾದವರನ್ನು ಸಿಗಿದು ಹಾಕಬೇಕು ಎಂಬಂತಹ ರೋಷವೂ ಉಕ್ಕುತ್ತದೆ.

ಕೆಲವು ದಿನಗಳಿಂದ, ನನ್ನ ಒಂದು ಲೇಖನಕ್ಕಾಗಿ, ಫುಡ್ ಸೇಫ್ಟಿ ಕಮಿಷನರ್ ಒಬ್ಬರನ್ನು ಭೇಟಿಯಾಗಬೇಕಿತ್ತು. ಈ ಕುರಿತಂತೆ ತುಂಬ ಆಸಕ್ತಿಯನ್ನು ಹೊಂದಿದ್ದ ಕಮೀಷನರ್ ಅವರು ಒಪ್ಪಿಗೆಯನ್ನು ಸೂಚಿಸಿ ಅವರ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ಸಮಯವನ್ನು ನಿಗದಿ ಪಡಿಸಿಕೊಂಡು ಬರಲು ಸೂಚಿದರು. ಹೀಗಾಗಿ ತುಂಬ ಖುಷಿಯಿಂದಲೇ ಅವರ ಕಾರ್ಯದರ್ಶಿಗೆ ಈ ಕುರಿತು ಮಾತನಾಡಲು ದೂರವಾಣಿ ಕರೆ ಮಾಡಿದೆ. ಆದರೆ ಆಗ ತಾನೆ ನಿದ್ದೆಯಿಂದ ಎದ್ದವರಂತೆ ಮಾತನಾಡುತ್ತಿದ್ದ ಆ ಪುಣ್ಯಾತ್ಮ, ನನ್ನ ಮಾತನ್ನು ಪೂರ್ಣ ಕೇಳುವ ವ್ಯವಧಾನವನ್ನೂ ತೋರದೇ, ಕಮೀಷನರ್ ಅವರು ಊರಲ್ಲಿಲ್ಲ, ಎರಡು ದಿನ ಬಿಟ್ಟು ಫೋನ್ ಮಾಡುವಂತೆ ತಿಳಿಸಿದ. ಸರಿ, ಎಂದು ಎರಡು ದಿನಗಳ ನಂತರ ಫೋನ್ ಮಾಡಿ, ಅವನೇ ಎಂದು ಧೃಡೀರಿಸಿಕೊಂಡು ಅವನಿಗೆ ಮುಂದೆ ಮಾತನಾಡಲು ಅವಕಾಶವನ್ನೇ ನೀಡದೇ ನಡೆದ ಸಂಗತಿಯನ್ನೆಲ್ಲ ವಿವರಿಸಿದೆ. ಆಗ ಹೋ ಹಾಗ, ಆಯಿತು ಅದಕ್ಕೂ ಮೊದಲು ಅವರೊಂದಿಗೆ ಏನು ಮಾತನಾಡಲು ಬಯಸಿದ್ದೀರಿ ಎಂಬುವುದನ್ನು ಮೇಲ್ ಮಾಡಿ ಎಂದ, ನಾನೂ ಆಗಲೇ ಮೇಲ್  ಮಾಡಿ ಕಮಿಷನರ್ ಅವರ ಅನುಮತಿಯನ್ನು ಪಡೆದ್ದನ್ನೂ ತಿಳಿಸಿದರೂ ಕೇಳದ ಆ ವ್ಯಕ್ತಿ, ತನಗೂ ಒಂದು ಮೇಲ್  ಮಾಡುವಂತೆ ತಿಳಿಸಿದ. ಮತ್ತೇನು ಮಾಡುವುದು ಎಂದು ಯೋಚಿಸಿ ಅವನ ಮೇಲ್  ಐಡಿಯನ್ನು ಕೇಳಿದೆ. ಆಗ ಆ ವ್ಯಕ್ತಿ ಹೇಳಿದ್ದು "ನನಗೆ ನನ್ನ ಮೇಲ್ ಐಡಿಗೊತ್ತಿಲ್ಲ, ಅದನ್ನು ಉಪಯೋಗಿಸಲೂ ನನಗೆ ಬರುವುದಿಲ್ಲ, ಹೀಗಾಗಿ ಸ್ವಲ್ಪ ಸಮಯದ ನಂತರ ಕರೆ ಮಾಡಿ ನನ್ನ ಪಿಎ ಬರುತ್ತಾನೆ, ಅವನಿಗೆ ಕೊಡಲು ಹೇಳುತ್ತೇನೆ" ಎಂದು. ಇವನ ಮಾತನ್ನು ಕೇಳಿ ನಗಬೇಕೋ ಅಳಬೇಕೋ ತಿಳಿಯದ ನಾನು ತಲೆಯನ್ನು ಚಚ್ಚಿಕೊಳ್ಳುತ್ತಾ ಆಯಿತು ಎಂದು ತಿಳಿಸಿದೆ. ಆಮೇಲೆ ನಾನು ದೂರವಾಣಿ ಮಾಡಿದ್ದು ಆಯಿತು, ಮೇಲ್  ಕಳಿಸಿದ್ದು ಆಯಿತು. ನಂತರ ಹೊಸ ವರಸೆ ತೆಗೆದ ಆತ ನಿಮ್ಮ ಮೇಲೇ ಬಂದಿಲ್ಲ, ಇನ್ನೊಂದು ಸಾರಿ ಕಳಿಸಿ ಎಂದ. ಇವೆಲ್ಲ ಘಟನೆಗಳು ಸುಮಾರು ೧೫ ದಿನಗಳಿಂದ ನಡೆಯುತ್ತಿವೆ, ಆದರೂ ಅವರ ಭೇಟಿಯನ್ನು ನಿಗದಿಮಾಡುತ್ತಿಲ್ಲ. ಕೊನೆಗೆ ಇಂದು ಸ್ವತಃ ಕಮೀಷನರ್ ಅವರೇ ಏನು? ಇಷ್ಟು ದಿನಗಳಾದರೂ ನಿಮ್ಮ ಸುದ್ದಿಯೇ ಇಲ್ಲವಲ್ಲ, ಸುಮ್ಮನೇ ನನ್ನ ಸಮಯವನ್ನು ವ್ಯರ್ಥಮಾಡುತ್ತಿರುವಿರಿ ಎಂದು ಮೇಲ್ ಕಳಿಸಿದ್ದನ್ನು ನೋಡಿ ನನ್ನ ಪರಿಸ್ಥಿತಿ ಹೇಗಾಗಿರಬೇಕು ಯೋಚಿಸಿ! ನನಗೂ ಕೋಪ ಬಂತು, ಈ ವ್ಯವಸ್ಥೆಗೆ ಕಾರಣವಾದವರನ್ನು ಶಿಕ್ಷಿಸಲೇಬೇಕು ಎಂಬಂತಹ ರೋಷವೂ ಉಕ್ಕಿತು.

ಹೌದು ಸಹಜವಾಗಿ ಇಂತಹ ಸಂಗತಿಗಳನ್ನೆಲ್ಲ ಕಂಡಾಗ ಅನುಭವಿಸಿದಾಗ ರೋಷ ಉಕ್ಕುತ್ತದೆ. ಉಕ್ಕಲೇಬೇಕು. ಆಗ ನಾವೇನು ಮಾಡುತ್ತೇವೆ ಯೋಚಿಸಿ, ನಮ್ಮ ಸ್ನೇಹ ಸಂಬಂಧಿಗಳ ಮುಂದೆ ಇವರನ್ನು ಹಳಿಯುತ್ತೇವೆ, ಆಡಿಕೊಳ್ಳುತ್ತೇವೆ, ಈ ದೇಶದ ಕಥೆಯೇ ಇಷ್ಟು ಎಂದು ಕೈಕಟ್ಟಿ ಕೂಡುತ್ತೇವೆ, ಇನ್ನೂ ಕೆಲವರು ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕುವುದರ ಮೂಲಕ, ಟ್ಟಿಟಿಸುವುದರ ಮೂಲಕ ತಮ್ಮ ಭಾವನೆಯನ್ನು ವ್ಯಕ್ತಪಡಿಸಿ, ನಮ್ಮಿಂದೇನು ಮಾಡಲು ಸಾಧ್ಯ, ಈ ವ್ಯವಸ್ಥೇಯೇ ಹೀಗಿದೆ, ನಮ್ಮ ರಾಜಕಾರಣಿಗಳೇ ಹೀಗೆ ಎಂದು ನಮ್ಮಲ್ಲೇ ನಮಗೆ ಸಮಾಧನವನ್ನು ಹುಡುಕುತ್ತ ಮನಸ್ಸಿನಲ್ಲಿ ಭುಗಿಲೆದ್ದ ಆಕ್ರೋಶವನ್ನು, ಮನಸ್ಸಿನ ಮಾತನ್ನು ತಣ್ಣನೇ ನಿರುತ್ಸಾಹದ ಭಾವದಿಂದ ಆರಿಸಿಕೊಳ್ಳುತ್ತೇವೆ. ಮತ್ತೆ ನಮ್ಮ ದೈನಂದಿನ ತಾಳ್ಮೆರಹಿತ ಜೀವನಕ್ಕೆ ಹಾರುತ್ತೇವೆ. ಇಲ್ಲಿಗೆ ಮನಸಿನ ಮಾತುಗಳಿಗೆ ಜಾಣ ಕಿವುಡುತನ ಪ್ರದರ್ಶನ ಯಶಸ್ವಿಯಾಗಿ ನೆರವೇರಿಸುತ್ತೇವೆ.

ಇತರೆ ದೇಶಗಳು ನಮ್ಮ ನೆಲವನ್ನು ತಮ್ಮ ಆಟದ ಮೈದಾನಗಳನ್ನಾಗಿ ಮಾಡಿಕೊಂಡು, ನಮ್ಮಲ್ಲಿ ರಕ್ತದ ಕೋಡಿಯನ್ನು ಹರಿಸುತ್ತಿದ್ದರೆ ನಮಗೇನು, ಸಂಬಂಧ ಅಲ್ಲವೇ? ಮೊನ್ನೆ ಇಲ್ಲಿ ದೆಹಲಿಯಲ್ಲಿ ನಡೆದ ಇಸ್ರೇಲ್ ರಾಯಭಾರಿ ಕಛೇರಿಯ ವಾಹನವನ್ನು ಮ್ಯಾಗ್ನೇಟಿಕ್ ಬಾಂಬನ್ನು ಬಳಸಿ ಸ್ಫೋಟಿಸಲಾಯಿತು ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ. ಅದರಲ್ಲಿ ಗಾಯಗೊಂಡವರಲ್ಲಿ ಭಾರತೀಯರು ಇದ್ದಾರೆ, ಇಸ್ರೇಲ್ ಮಹಿಳೆಯೂ ಇದ್ದಾರೆ. ಆದರೆ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ಇಸ್ರೇಲ್ ಇದು ಇರಾನ್‌ನ ಕೈವಾಡವೆಂದೇ ಧೃಡವಾಗಿ ಪ್ರತಿಪಾದಿಸಿತು, ಅಲ್ಲದೇ ಈ ಘಟನೆಯ ಕುರಿತು ಅದರ ಪ್ರಧಾನ ಮಂತ್ರಿಗಳೇ ಹೇಳಿಕೆಯನ್ನು ಇತ್ತರು. ಅಲ್ಲದೇ ಈಗಾಗಲೇ ತನ್ನ ಉನ್ನತ ತನಿಖಾ ತಂಡವನ್ನು ಕಳಿಸಿ ಅಪರಾಧಿಗಳ ಪತ್ತೆಗೆ ಬಲೆ ಬೀಸಿದೆ. ಆದರೆ, ನಮ್ಮವರ ಬಗ್ಗೆ ಮಾತನಾಡುವುದು ಸಮಯದ ವ್ಯರ್ಥ ಅದನ್ನು ಬಿಡಿ. ಆದರೆ ನಾವು ಯೋಚಿಸಬೇಕಾಗಿರುವ ಗಂಭೀರ ಸಂಗತಿಯೆಂದರೆ ಒಂದು ವೇಳೆ ಆ ಧಾಳಿಯನ್ನು ಇರಾನ್ ಮಾಡಿದ್ದೇ ಆದಲ್ಲಿ, ಇರಾನ್‌ನಂತಹ ದುರ್ಬಲ (ಭಾರತದ ರಕ್ಷಣಾ ಮತ್ತು ಅರ್ಥವ್ಯವಸ್ಥೆಗೆ ಹೋಲಿಸಿದಲ್ಲಿ) ರಾಷ್ಟ್ರವೂ ಕೂಡ ಭಾರತವನ್ನು ಆಟದ ಮೈದಾನವಾಗಿ ಉಪಯೋಗಿಸಿಕೊಳ್ಳುವಷ್ಟು ನಾವು ಸೋತಿದ್ದೇವೆಯೇ? ಎಂಬ ಸಂಗತಿ. ಅಂದರೆ ಉಗ್ರಗಾಮಿಗಳನ್ನು ಹತ್ತಿಕ್ಕಲಾಗದಂತಹ ಭಾರತದ ಮನಸ್ಥಿತಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಇತರೆ ರಾಷ್ಟಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವಂತಹ ಅವಕಾಶವನ್ನು ಕಲ್ಪಿಸಿಕೊಡುತ್ತಿದ್ದೆಯೇ? ಇಲ್ಲ, ನಾವು ಇವುಗಳನ್ನೆಲ್ಲ ಯೋಚಿಸಲು ಹೋಗುವುದಿಲ್ಲ. ನಮ್ಮ ಮಾಧ್ಯಮಗಳಂತೆ ಯಾವುದಾದರೂ ಉಗ್ರರ ಘಟನೆಗಳು ನಡೆದಾಗ ಸ್ವಲ್ಪ ಹಾರಾಡಿ, ನಾನಿದ್ದರೇನೆ ನೀವು, ನನ್ನಲ್ಲಿ ಅನಾಥ ಪ್ರಜ್ಞೆ ಮೂಡದಂತೆ ನೀವು ನೋಡಿಕೊಳ್ಳಬೇಕು ಎಂದು ಕೂಗಿಹೇಳುತ್ತಿರುವ ನೆಲದ ಕೂಗೂ ಕೇಳಲಾಗದಂತಹ ಜಾಣ ಕಿವುಡು ನಮ್ಮದು. ಅಲ್ಲವೇ?

ಈಗ ನಡೆಯುತ್ತಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ, ಮೊನ್ನೆ ತಾನೇ ಪೂರ್ಣಗೊಂಡಿರುವ ಕೆಲವು ರಾಜ್ಯಗಳ ಚುನಾವಣೆಗಳಲ್ಲಿ, ಮುಂಬಯಿಯಂತಹ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ನಡೆದ ಮತದಾನದ ಪ್ರಮಾಣವನ್ನು ಗಮನಿಸಿದರೆ ಸಾಕು, ನಾವೆಷ್ಟು ನಮ್ಮ ಜವಾಬ್ದಾರಿಯನ್ನು ನೆರವೇರಿಸುತ್ತಿದ್ದೇವೆ? ಎಂಬುದನ್ನು ತಿಳಿಯಲು ಮತ್ತು ಈ ವ್ಯವಸ್ಥೆಗೆ ಕಾರಣ ಬೇರೆ ಯಾರು ಅಲ, ವಾವೇ ಪ್ರಮುಖವೆಂದು ಅರಿಯಲು.

(This is also published in:    http://thesundayindian.com/kn/story/are-we-are-deaf-to-our-inner-voice/1500/   )

Comments