ನೆಲದ ಮೇಲೆ ಹೂ ಹರಡಿದವರಾರು?

ನೆಲದ ಮೇಲೆ ಹೂ ಹರಡಿದವರಾರು?

ಬರಹ

ಬೆಳಗ್ಗೆ ಆಫೀಸ್ ಕಡೆ ಮುಖ ಮಾಡಿದಾಗ ದಾರಿಯಲ್ಲಿ ಹೂವಿನ ರಾಶಿ. ಹಳದಿ, ಕೆಂಪು, ನೀಲಿ ಹೂಗಳು. ಮರಗಳನ್ನೆಲ್ಲ ಅಲ್ಲಾಡಿಸಿ ಇಷ್ಟೋಂದು ಹೂಗಳನ್ನ ಯಾರನ್ನೂ ಕೇಳದೆ ಧರೆಗಿಳಿಸಿದವರಾರು ಅನ್ನಿಸ್ತು.

ಇದ್ದಕ್ಕಿದ್ದಂತೆ ಮನಸ್ಸು ನನ್ನ ಹೈ ಸ್ಕೂಲಿನ ದಿನಗಳತ್ತ ಸರಿದು, ಮಹಾಲಕ್ಷ್ಮೀ ಪುರದ ಆಂಜನೇಯನ ಗುಡಿಯ ಹಿಂದಿರುವ ಪಾರ್ಕಿನಲ್ಲಿ ನಮ್ಮ ಟೀಚರ್ ಮರದ ಕೆಳಗೆ ಪಾಠ ಮಾಡ್ತಿದ್ದ ನೆನಪುಗಳು ಮೂಡಿದವು. ಅಲ್ಲಿ ಬೇಸಿಗೆ ಅಂದ್ರೆ ತಣ್ಣನೆಯ ಗಾಳಿ, ಅಲ್ಲಿ ಇಲ್ಲಿ ಹರಡಿದ್ದ ಹೂಗಳು ಮತ್ತೆ ಯುಗಾದಿ, ಮಾವಿನ ಹಣ್ಣು ಇತ್ಯಾದಿಗಳ ಕಾಲ ಬಂದಾಗ ಕುಹು ಗುಟ್ಟುತ್ತಿದ್ದ ಕೋಗಿಲೆ, ಆಗ ತಾನೆ ಹಳ್ಳಿಯಿಂದ ಬಂದು ಶಾಲೆ ಸೇರಿದ್ದ ನಮ್ಮ ಗೆಳೆಯ ಚಡ್ಡಿ ಹಾಕ್ಕೊಂಡು ಬಂದಾಗ ನಮ್ಮ ಕನ್ನಡ ಮೇಸ್ಟ್ರು ಅವನನ್ನ ರೇಗ್ಸಿದ್ದು ಇತ್ಯಾದಿ ಕಣ್ಮುಂದೆ ಹಾದು ಹೋಗ್ಬೇಕಾದ್ರೆ, "ಕೋಗಿಲೆ" ಹಾ! ಇದ್ದಕ್ಕಿಂದ್ದಂತೆ ನೆನಪಿಗೆ ಬಂದದ್ದು "ವಸಂತ" ಅವನೇ ಇರ್ಬೇಕಲ್ವಾ ಹೂ ಉದುರಿಸಿದವನು!

ನಮ್ಮ ಅಣ್ಣಾವ್ರು ಹಾಡಿದ ಹಾಡು "ವಸಂತ ಕಾಲ ಬಂದಾಗ ಕೋಗಿಲೆ ಹಾಡಲೆ ಬೇಕು" ನಾಲಗೆಯ ಮೇಲೆ ಹೊರಡ ಬೇಕಾದಾಗ, ಪ್ರಕೃತಿ ಕೂಡ ಹಸಿರು ಎಲೆಗಳು, ಹೂಗಳು ಇತ್ಯಾದಿಗಳಿಂದ ತನ್ನನ್ನ ತಾನು ಸಿಂಗರಿಸಿ ಕೊಂಡಿರೋದನ್ನ ಕಂಡು ಮನಸ್ಸು ಖುಷಿ ಪಟ್ರೆ, ಅದೇ ರಸ್ತೆಯಲ್ಲಿದ್ದ ಇನ್ನೆಷ್ಟೋ ಮರಗಳನ್ನ ಕಡಿದವರ ಬಗ್ಗೆ ನಿಮಿಷಾರ್ದದಲ್ಲಿ ಕೋಪ ಉಕ್ಕಿ ಬಂತು. ಬಡವನ ಕೋಪ ದವಡೆಗೆ ಮೂಲ ಅಂದಂತೆ, ನಾನೊಬ್ನೆ ಇದಕ್ಕೇನೂ ಮಾಡಕ್ಕಾಗಲ್ಲ ಅನ್ನಿಸ್ತು. ನೆನ್ನೆನೋ ಮೊನ್ನೆನೋ ಒಂದು ಗುಂಪು ನಂದ ರೋಡನ್ನ ಉಳಿಸಿ ಅನ್ನೋ ಕೂಗು ಹಾಕಿದ್ದು ನೆನಪಿಗೆ ಬಂತು.

ಇಲ್ಲಿದೆ ನೋಡಿ ಅದರ ಕೊಂಡಿ. http://www.savenandaroad.com/

ವಸಂತ ನಮ್ಮೆಲ್ಲರ ಕಣ್ಮುಂದೆ ಪ್ರಕೃತಿಯ ಸೌಂದರ್ಯವನ್ನ ಇಮ್ಮಡಿಗೊಳಿಸೋದು ನಮ್ಮ ಮುಂದಿನ ಪೀಳಿಗೆಗೂ ಬೇಕಲ್ಲಾ? ಇಲ್ಲಾಂದ್ರೆ ಪ್ರತಿ ರೂಪಾಯಿಗೂ ಯೋಚಿಸುವ, ಅಥವಾ ಪ್ರತಿ ರುಪಾಯಿಯಲ್ಲೂ ಇನ್ನಷ್ಟು ದುಡ್ಡು ಮಾಡುವ ಪ್ಲಾನ್ ಗಳೇ ತಲೆಯಲ್ಲಿ ತುಂಬಿ ಕೊಳ್ತಿರೋ ಮನುಷ್ಯ ಮುಂದೆ ಕಾಸ್ ಕೊಟ್ಟು ಮಾನವ ನಿರ್ಮಿತ ವಸಂತ ಕಾಲದ ಪರಿಸರ ಕೊಂಡ್ ಕೊಳ್ಳೋ ಕಾಲ ಬಂತಂದ್ರೆ ಹ್ಯಾಗಿರತ್ತೆ ಯೋಚಿಸಿ.

-- ಚಿಂತಿಸುತಿದೆ ಈ ನನ್ನ ಮನ, ನೀವೇನನ್ತೀರಾ?