ನೆಲೆ ನಿಂತ ನೆಲವ ನೀ ಬೆಳಗು
‘ನೆಲೆ ನಿಂತ ನೆಲವ ನೀ ಬೆಳಗು' ಪುಸ್ತಕವನ್ನು ಬರೆದವರು ಡಾ.ಎಚ್.ವಿ.ಚಂದ್ರಶೇಖರ್ ಇವರು. ಪುಸ್ತಕದ ಮುನ್ನುಡಿಯಲ್ಲಿ “ನಮ್ಮ ಮಕ್ಕಳಿಗೆ ಶಿಕ್ಷಣ ಬೇಕೇ? ಮಕ್ಕಳು ಶಾಲೆಗೆ ಹೋಗಬೇಕೇ? ಅವರಿಗೆ ಯಾವ ತರಹದ ಶಿಕ್ಷಣ ಬೇಕು? ಈ ತರಹದ ಪ್ರಶ್ನೆಗಳು ಸಮಾಜದ ಎಲ್ಲ ಚಿಂತಕರನ್ನು ದಶಕಗಳಿಂದ ಕಾಡಿವೆ. ಶಿಕ್ಷಣ ಎಂದರೆ ಪ್ರಮಾಣಪತ್ರವೇ? ಪ್ರಮಾಣ ಪತ್ರ ಪಡೆದವರೆಲ್ಲ ಶಿಕ್ಷಿತರೇ? ಸುತ್ತಮುತ್ತ ನೋಡಿದರೆ ಹಾಗೆ ಕಾಣುವುದಿಲ್ಲ. ಸಾಮಾನ್ಯವಾಗಿ ಜನ ಹೇಳುತ್ತಾರೆ. ನಿರಕ್ಷರತೆಯಿಂದ ಭಾರತಕ್ಕೆ ಹಿನ್ನಡೆಯಾಗುತ್ತಿದೆ, ಸಾಕ್ಷರತೆ ಹೆಚ್ಚಬೇಕು. ಖಂಡಿತವಾಗಿಯೂ, ನಮ್ಮಲ್ಲಿಯ ಅನಕ್ಷರತೆ ಹೋಗಬೇಕು. ನನ್ನ ಪ್ರಕಾರ ನಿರಕ್ಷರಿಗಳಿಂದ ಆಗುವ ಅಪಾಯಕ್ಕಿಂತ ಸಹಸ್ರಪಾಲು ಅಪಾಯವಿರುವುದು ಮೋಸದ ಮನಸ್ಸುಳ್ಳ ಅಪ್ರಾಮಾಣಿಕ ಸಾಕ್ಷರರಿಂದ. ಅದಕ್ಕೆ ಸಂಸ್ಕೃತದಲ್ಲಿ ಮಾತೊಂದಿದೆ. ‘ಸಾಕ್ಷರಾ ವಿಪರೀತಾಶ್ಚೇತ್ ರಾಕ್ಷಸಾ ಏವ ಕೇವಲಂ’ ಅಕ್ಷರವನ್ನು ಬಲ್ಲ ಸಾಕ್ಷರ ವಿಪರೀತನಾದರೆ ರಾಕ್ಷಸನೇ ಆಗಿಬಿಡುತ್ತಾನೆ. ಅತ್ಯಂತ ಹೆಚ್ಚಿನ ಶಿಕ್ಷಣ ಪಡೆದ ಅನೇಕ ವೈದ್ಯರಿದ್ದಾರೆ. ಆದರೆ ಕೆಲವರು ರೋಗಿಗಳಿಗೆ ತಿಳಿಯದಂತೆ ಮೂತ್ರಪಿಂಡವನ್ನು ತೆಗೆದುಕೊಳ್ಳುತ್ತಾರೆ. ಅವಶ್ಯಕವಿಲ್ಲದಿದ್ದರೂ ಪರೀಕ್ಷೆಗಳನ್ನು ಮಾಡಿಸಿ ಹಣ ಕೀಳುತ್ತಾರೆ. ಬಿಲ್ ತೀರ್ಮಾನವಾದೊಡನೆ ಸೇತುವೆಗಳು ಬೀಳುವುದನ್ನು ಕಂಡಿದ್ದೇವೆ. ಈ ಕಳಪೆ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸುವವರು ಪರಿಣಿತರಾದ ಇಂಜಿನಿಯರುಗಳು. ಅನೇಕ ಬ್ಯಾಂಕ್ ಲೂಟಿಯಾದದ್ದು ನಿರಕ್ಷರಿಗಳಿಂದಲ್ಲ. ಅತ್ಯಂತ ಉತ್ತಮ ಮಟ್ಟದ ತರಭೇತಿ ಪಡೆದ ಚಾರ್ಟರ್ಡ್ ಅಕೌಂಟೆಂಟುಗಳಿಂದ. ಶ್ರೇಷ್ಟ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆದ ಕೆಲವು ನ್ಯಾಯವಾದಿಗಳು, ಕಾನೂನನ್ನೇ ತಿರುಚಿ ಅನ್ಯಾಯಿಗಳಿಗೆ ನ್ಯಾಯಕೊಡಿಸಿದ್ದು ನಮ್ಮ ಕಣ್ಣ ಮುಂದಿವೆ. ಒಂದು ವೃತ್ತಿ ಎಂಬುವುದಿಲ್ಲ. ಈ ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ. ಆದರೆ ಅತ್ಯಂತ ದುಃಖದ ಸಂಗತಿಯೆಂದರೆ ಇವೆಲ್ಲ ಅನ್ಯಾಯಗಳ ಕೇಂದ್ರಬಿಂದುವಾಗಿ ಒಬ್ಬ ಸಾಕ್ಷರನಿದ್ದಾನೆ.
ಹಾಗಾದರೆ ನಮ್ಮ ಶಿಕ್ಷಣ ಏನು ಸಾಧಿಸಿದಂತಾಯಿತು? ಬಹುತೇಕ ನೌಕರರು ಹಣದ ಹಿಂದೆಯೇ ಓಡುವುದನ್ನು ಕಂಡಾಗ, ನಮ್ಮ ಶಿಕ್ಷಣ ಅವರಿಗೆ ಮೌಲ್ಯಗಳನ್ನು ಹೇಳಿಕೊಡದೆ, ಹಣವೇ ಮುಖ್ಯ ಎಂದು ಕಲಿಸಿತೇ? ಶಿಕ್ಷಣ, ಸಮಾಜದ ಒಂದು ಅಂಗ. ಸಮಾಜದಲ್ಲಿ ಏನಿದೆಯೋ ಅದು ಶಿಕ್ಷಣ ಕ್ಷೇತ್ರಕ್ಕೂ ಬರುತ್ತದೆ ಎಂಬ ಮಾತನ್ನು ನಾನು ಒಪ್ಪುತ್ತೇನೆ. ಇಡೀ ಸಮಾಜ ಭ್ರಷ್ಟವಾದರೆ ಶಿಕ್ಷಣ ಕ್ಷೇತ್ರ ಮಾತ್ರ ಹೇಗೆ ಅದರಿಂದ ದೂರ ಉಳಿಯುವುದು ಸಾಧ್ಯ ಎಂಬ ವಾದವನ್ನು ಕೇಳಿದ್ದೇನೆ. ಜಗತ್ತಿನಲ್ಲೆಲ್ಲಾ ಕಳ್ಳರಿದ್ದಾರೆ ನಾವೇನು ಮಾಡಬಹುದು ಎಂದು ಉಳಿದವರು ಹೇಳಬಹುದು. ಆದರೆ ಪೋಲೀಸ್ ಇಲಾಖೆಯವರು ಹಾಗೆ ಹೇಳಬಾರದು. ಅವರ ಕೆಲಸವೇ ಅದನ್ನು ತಡೆಯುವುದು. ಅಂತೆಯೇ ಶಿಕ್ಷಣ ಕಾರ್ಯ ಕೇವಲ ತಲೆಯಲ್ಲಿ ಮುಂದೆ ಮರೆತೇ ಹೋಗುವ, ವಿಷಯಗಳನ್ನು ತುಂಬಿ, ಪ್ರಮಾಣ ಪತ್ರ ಕೊಟ್ಟುಬಿಡುವುದಲ್ಲ. ನಮ್ಮ ಮುಂದಿರುವ ಮಕ್ಕಳಲ್ಲಿ ಆ ಮೌಲ್ಯಗಳ ಪ್ರಚೋದನೆ ಮಾಡಿ ಅವು ಅನುಷ್ಟಾನಕ್ಕೆ ಬರುವ ಹಾಗೆ ನೋಡಿಕೊಳ್ಳುವುದು ಶಿಕ್ಷಣದ ಮುಖ್ಯ ಗುರಿ. ಶಿಕ್ಷಣ ಸೋತರೆ ಇಡೀ ವ್ಯವಸ್ಥೆ ಸೋಲುತ್ತದೆ. ದೇಶ ಸೋಲುತ್ತದೆ, ಮಾನವತೆ ಸೋಲುತ್ತದೆ" ಎಂದು ಗಂಭೀರ ಚಿಂತನೆಯನ್ನು ಮಾಡಿ ಪುಸ್ತಕ ಓದುವಂತೆ ಕುತೂಹಲ ಕೆರಳಿಸಿದ್ದಾರೆ...