ನೆಲ್ಸನ್ ಮಂಡೇಲಾ- ಜೀವನ ಚರಿತ್ರೆ

ನೆಲ್ಸನ್ ಮಂಡೇಲಾ- ಜೀವನ ಚರಿತ್ರೆ

ಪುಸ್ತಕದ ಲೇಖಕ/ಕವಿಯ ಹೆಸರು
ಎಂ ವೆಂಕಟಸ್ವಾಮಿ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. 350.00, ಮುದ್ರಣ: 2023

“ಅನಗತ್ಯ ಮತ್ತು ಕುತೂಹಲ ಇಲ್ಲದ ಸಾಕಷ್ಟು ಸಂಗತಿಗಳನ್ನು ಬಿಟ್ಟು ಮಂಡೇಲಾ ಅವರ ಬದುಕಿನ ಎಲ್ಲ ಮುಖ್ಯ ಘಟ್ಟಗಳನ್ನು ಮತ್ತು ಸ್ವಾರಸ್ಯಕರವಾದ ವಿಷಯಗಳನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಮಂಡೇಲಾ ಅವರು ಬರೆದಿರುವ ಆತ್ಮಕಥೆಯ ಶೈಲಿ ಅಸಾಧಾರಣವಾಗಿದೆ. ಅವರ ಬದುಕು ಕೂಡ ಕತ್ತಲ ಖಂಡ ಆಫ್ರಿಕಾದ ಇತಿಹಾಸದ ಒಂದು ಮುಖ್ಯ ಅಧ್ಯಾಯವಾಗಿದೆ,” ಎನ್ನುತ್ತಾರೆ ಲೇಖಕ ಎಂ. ವೆಂಕಟಸ್ವಾಮಿ. ಅವರು ತಮ್ಮ ‘ನೆಲ್ಸನ್ ಮಂಡೇಲಾ ಜೀವನಚರಿತ್ರೆ’ ಕೃತಿಗೆ ಬರೆದಿರುವ ಲೇಖಕರ ಮಾತು ನಿಮ್ಮ ಓದಿಗಾಗಿ...

“ನೆಲ್ಸನ್ ಮಂಡೇಲಾ ಅವರ ಆತ್ಮಕಥೆ ಜಗತ್ತಿನ ಪ್ರಖ್ಯಾತ ಆತ್ಮಕಥೆಗಳ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಯೂರೋಪ್ ಅಥವಾ ಬಿಳಿಯ ಜನರು ದಕ್ಷಿಣ ಆಫ್ರಿಕಾದ ನೋಡಬಹುದಾಗಿದೆ. ಅದು ಆಫ್ರಿಕಾ, ಅಮೇರಿಕಾ, ಏಷ್ಯಾ, ಭರತ ಖಂಡ, ಜಗತ್ತಿನ ಇನ್ನ್ಯಾವುದೇ ದೇಶವಾಗಿರಬಹುದು, ಅದೇಗೆ ಈ ಬಿಳಿಯರು ಹೀಗಲ್ಲ, ಇಷ್ಟು ಕ್ರೂರವಾಗಿ ನಡೆದುಕೊಂಡರು ಎನ್ನುವ ಆಲೋಚನೆ ಬರದೆ ಇರುವುದಿಲ್ಲ. ದಬ್ಬಾಳಿಕೆ ಎನ್ನುವರು ಇಂದಿಗೂ ಪ್ರಪಂಚದ ಮೂಲೆಮೂಲೆಯಲ್ಲೂ ಯಾವುದೋ ಒಂದು ರೀತಿಯಲ್ಲಿ ಜನಾಂಗ ಇನ್ನೊಂದು ಜನಾಂಗವನ್ನು ತುಳಿಯುತ್ತಲೇ ಬಂದಿರುವುದು, ಬರುತ್ತಿರುವುದು ಇಂದಿಗೂ ನಿಂತಿಲ್ಲ. ಬಿಳಿಯ, ಕರಿ, ಮೇಲು, ಕೀಳು, ಉಚ್ಚ, ನೀಚ, ಮೇಲ್ತಾತಿ, ಕೆಳಜಾತಿ, ವರ್ಣಭೇದ ಅಸ್ಪೃಶ್ಯ ಇತ್ಯಾದಿ ತೀರತಮ್ಯಗಳು ಇನ್ನೂ ಎಷ್ಟು ವರ್ಷಗಳು ನಡೆಯುವವೂ ತಿಳಿಯದು, ಬಹುಶ ಮನುಷ್ಯ ಜನಾಂಗಗಳು ಇರುವವರೆಗೂ ಇದು ನಿಲ್ಲಲಾರದೇನೋ!

ಇದರ ಬಹಳಷ್ಟು ಬೇರುಗಳನ್ನು ಮಂಡೇಲಾ ಅವರ ಆತ್ಮಕಥೆಯಲ್ಲಿ ನೋಡಬಹುದು. ಪ್ರಪಂಚದ ಬಗ್ಗೆ ಕಳಕಳಿ ಇರುವವರೆಲ್ಲ ಮಂಡೇಲಾರವರ ಆತ್ಮಕಥೆಯನ್ನು ಓದಬೇಕಿದೆ. ಅವರ ಆತ್ಮಕಥೆಯನ್ನು ಓದುತ್ತಿದ್ದಂತೆ ಅದು ಗಾಢವಾಗಿ ನನ್ನನ್ನು ಆವರಿಸಿಕೊಂಡುಬಿಟ್ಟಿತು. ಇದು 2,45,915 ಪದಗಳಿರುವ ಬೃಹತ್ ಗ್ರಂಥ. ಇದನ್ನ ಸಂಪೂರ್ಣವಾಗಿ ಅನುವಾದಿಸಿದರೆ ಹೆಚ್ಚು ಜನರು ಓದಲಾರರು. ಆಧುನಿಕ ತಂತ್ರಜ್ಞಾನ ಜಗತ್ತನ್ನು ಸಣ್ಣದಾಗಿಸಿರುವ ಕಾರಣ ಜನರಿಗೆ ಸಮಯವಿಲ್ಲ. 'Long Walk to Freedom's ಜೊತೆಗೆ ಮಂಡೇಲಾ ಸ್ವತಃ ಬರೆದಿರುವ ಮತ್ತು ಇತರ ಲೇಖಕರು 'ಮಂಡೇಲಾ' ಬಗ್ಗೆ ಬರೆದಿರುವ ಹಲವು ಕೃತಿಗಳನ್ನು ಎರಡು ವರ್ಷಗಳ ಕಾಲ ಓದಿ ಟಿಪ್ಪಣಿಗಳನ್ನು ಮಾಡಿಕೊಂಡೆ. ಅನಂತರ ಕಂಪ್ಯೂಟರ್‌ನಲ್ಲಿ ಎಲ್ಲವನ್ನೂ ಸ್ವತಃ ಟೈಪ್ ಮಾಡಿದೆ. ಮಂಡೇಲಾ ಬಗ್ಗೆ ಕನ್ನಡದಲ್ಲಿ ಮೂರು ಸಣ್ಣ ಸಣ್ಣ ಕೃತಿಗಳು ಬಂದಿದ್ದು ಬೆಂಗಾಲಿ, ಮಲಯಾಳಿ, ತೆಲುಗು ಹೀಗೆ ಜಗತ್ತಿನ ಅನೇಕ ಭಾಷೆಗಳಲ್ಲಿ ನೂರಾರು ಕೃತಿಗಳು ಬಂದಿವೆ.

ಮಂಡೇಲಾರ ಈ ಕೃತಿಯನ್ನು ಬರೆಯುವ ಸಮಯದಲ್ಲಿ ನನ್ನನ್ನು ಕಾಡಿದ ವಿಷಯವೆಂದರೆ ಭಾರತದಲ್ಲಿ ಮಹಾತ್ಮ ಗಾಂಧಿ, ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ, ಅಮೇರಿಕಾದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಬಿಳಿಯರ ಸರ್ಕಾರಗಳ ವಿರುದ್ಧ ನಡೆಸಿದ ಅಹಿಂಸಾ ಚಳುವಳಿಗಳಿಂದ ಲಕ್ಷಾಂತರ ಜನರು ಪ್ರಾಣ ಉಳಿಸಿಕೊಂಡರು ಎನ್ನುವುದು. ಶೂದ್ರ, ಅತಿಶೂದ್ರರ ವಿರುದ್ಧ ಸವರ್ಣೀಯ ಹಿಂದೂಗಳು; ಕರಿಯರ ವಿರುದ್ಧ ಬಿಳಿಯರು; ಜರ್ಮನ್ ನಾಝಿಗಳು ಯಹೂದಿಗಳ ಮೇಲೆ ನಡೆಸಿದ ದಬ್ಬಾಳಿಕೆ ಇವು ಕೇವಲ ಕೆಲವು ಉದಾಹರಣೆಗಳು, ಜಗತ್ತಿನ ಮೂಲೆಮೂಲೆಯಲ್ಲೂ ಇಂದಿಗೂ ಅನೇಕ ರೀತಿಯಲ್ಲಿ ಮನುಷ್ಯರಿಂದ ಮನುಷ್ಯರ ಮೇಲೆ ದಬ್ಬಾಳಿಕೆಗಳು ಯಾವುದಾದರೊಂದು ರೀತಿಯಲ್ಲಿ ನಡೆಯುತ್ತಲೇ ಇವೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳ ಪ್ರಮಾಣ ಕಡಿಮೆಯೇನೂ ಆಗಲಿಲ್ಲ. ಆದರೆ ಪರಿಸ್ಥಿತಿ ಕಾಲಕಾಲಕ್ಕೆ ಬದಲಾವಣೆಗಳನ್ನು ಕಾಣುತ್ತಾ ಬಂದಿದೆ. ಇನ್ನೂ ಬಹಳಷ್ಟು ಬದಲಾವಣೆಗಳು ಆಗಬೇಕಿವೆ.

ಅನಗತ್ಯ ಮತ್ತು ಕುತೂಹಲ ಇಲ್ಲದ ಸಾಕಷ್ಟು ಸಂಗತಿಗಳನ್ನು ಬಿಟ್ಟು ಮಂಡೇಲಾ ಅವರ ಬದುಕಿನ ಎಲ್ಲ ಮುಖ್ಯ ಘಟ್ಟಗಳನ್ನು ಮತ್ತು ಸ್ವಾರಸ್ಯಕರವಾದ ವಿಷಯಗಳನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಮಂಡೇಲಾ ಅವರು ಬರೆದಿರುವ ಆತ್ಮಕಥೆಯ ಶೈಲಿ ಅಸಾಧಾರಣವಾಗಿದೆ. ಅವರ ಬದುಕು ಕೂಡ ಕತ್ತಲ ಖಂಡ ಆಫ್ರಿಕಾದ ಇತಿಹಾಸದ ಒಂದು ಮುಖ್ಯ ಅಧ್ಯಾಯವಾಗಿದೆ. ಮಂಡೇಲಾ ಅವರು ಬಿಳಿಯರ ನ್ಯಾಯಾಲಯದಲ್ಲಿ ಬಿಳಿಯರ ಎದುರಿಗೆ ಸೆಟೆದು ನಿಲ್ಲುವ ರೀತಿ ಮತ್ತು ಅವರು ವಾದಿಸುವ ರೀತಿ ಎಂತಹವರನ್ನೂ ಬೆಚ್ಚಿಬೀಳಿಸುತ್ತದೆ. ಸವರ್ಣೀಯ ಹಿಂದೂಗಳು ಶೂದ್ರ ಮತ್ತು ಅತಿಶೂದ್ರರನ್ನು ನಡೆಸಿಕೊಂಡ ರೀತಿ ಮಾನವ ಚರಿತ್ರೆಯಲ್ಲಿ ಅತ್ಯಂತ ಹೀನಾಯವಾದದ್ದು. ಎಲ್ಲಕ್ಕಿಂತ ಮಿಗಿಲಾಗಿ ದಕ್ಷಿಣ ಆಫ್ರಿಕಾದ ನೆಲದ ಮಂಡೇಲಾರ ಜೀವನ ಕಥೆಯನ್ನು ಬರೆಯುವಾಗ ಭಾರತದ ಅಂಬೇಡ್ಕರ್ ಎಲ್ಲಾ ಕಡೆಯೂ ಧುತ್ತೆಂದು ನನ್ನ ಎದುರಿಗೆ ಬಂದು ನಿಂತುಕೊಂಡುಬಿಡುತ್ತಿದ್ದರು. ಮಂಡೇಲಾ ತನ್ನ ಯೌವ್ವನವನ್ನು ಜೈಲುಗೋಡೆಗಳ ಒಳಗೆ ಕಳೆದರೆ ಅಂಬೇಡ್ಕರ್ ಅವರು ಭಾರತ ದೇಶವೆಂಬ ತಾರತಮ್ಯದ ಜೈಲಿನ ಮಧ್ಯೆ ಇಡೀ ಬದುಕನ್ನು ಕಳೆಯಬೇಕಾಯಿತು.

ಮಾನವಕುಲ/ ಜಗತ್ತಿನ ಇತಿಹಾಸದ ಒಂದು ತುಣುಕಿನಂತಿರುವ 'ನೆಲ್ಸನ್ ಮಂಡೇಲಾ' ಜೀವನ ಕಥೆ, ಬಿಳಿಯರು ಮತ್ತು ವರ್ಣಭೇದದ ವಿರುದ್ಧ ಹೋರಾಡಿದ ದಕ್ಷಿಣ ಆಫ್ರಿಕಾದ ಕಪ್ಪು ಜನರ ರೋಚಕ ಕಥನವಾಗಿದೆ. 'ಲಾಂಗ್ ವಾಕ್ ಟು ಫ್ರೀಡಮ್' ಮತ್ತು ಇತರ ಕಠಿಣ ಇಂಗ್ಲಿಷ್ ಕೃತಿಗಳನ್ನು ಓದಿಕೊಂಡು ಕನ್ನಡಕ್ಕೆ ಒಗ್ಗಿಸಿ ತರುವುದು ನನಗೊಂದು ಸವಾಲೇ ಆಗಿತ್ತು. ಆದರೆ, ಕೊನೆಗೂ ಈ ಕೃತಿ ಅದ್ಭುತವಾಗಿ ಮೂಡಿಬಂದಿದೆ ಎನ್ನುವುದು ನನ್ನ ಅನಿಸಿಕೆ. ಉಳಿದಂತೆ, ಸಹೃದಯ ಓದುಗರು ಮತ್ತು ವಿಮರ್ಶೆಕಾರರು ತೀರ್ಮಾನಿಸಬೇಕಿದೆ.” 

-ನಿರಂಜನ್ ಕುಮಾರ್, ಮುಕ್ಕ