ನೇತ್ರಾವತಿಯಲ್ಲಿ ನೆತ್ತರು

ನೇತ್ರಾವತಿಯಲ್ಲಿ ನೆತ್ತರು

ಪುಸ್ತಕದ ಲೇಖಕ/ಕವಿಯ ಹೆಸರು
ನವೀನ್ ಸೂರಿಂಜೆ
ಪ್ರಕಾಶಕರು
ಕ್ರಿಯಾ ಪ್ರಕಾಶನ, ಸಂಪಂಗಿರಾಮನಗರ, ಬೆಂಗಳೂರು-೫೬೦೦೨೭
ಪುಸ್ತಕದ ಬೆಲೆ
ರೂ. ೧೮೫.೦೦, ಮುದ್ರಣ: ೨೦೨೨

ನವೀನ್ ಸೂರಿಂಜೆ ಅವರು ಬರೆದ ‘ನೇತ್ರಾವತಿಯಲ್ಲಿ ನೆತ್ತರು' ಕೃತಿ ರಕ್ತಸಿಕ್ತ ಹೋರಾಟದ ಸಮಗ್ರ ಚಿತ್ರಣವನ್ನು ನೀಡುತ್ತದೆ. ೧೮೪ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ನಿವೃತ್ತ ಎಸಿಪಿ ಬಿ.ಕೆ.ಶಿವರಾಂ ಅವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ... 

“ನವೀನ್ ಸೂರಿಂಜೆಯವರು ತಮ್ಮ `ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕಕ್ಕೆ ಮುನ್ನುಡಿ ಬರೆಯಲು ಹೇಳಿದಾಗ ಒಂದು ಕ್ಷಣ ತಬ್ಬಿಬ್ಬಾದೆ. ಈ ಪುಸ್ತಕವನ್ನು ಕರ್ನಾಟಕ ಕಂಡ ಮಾನವೀಯ ಮೌಲ್ಯಗಳ ಪ್ರತಿಪಾದಕ, ನೇರವಂತಿಕೆಯ ಐಪಿಎಸ್ ಅಧಿಕಾರಿ ಡಾ. ಕೆ. ಮಧುಕರ ಶೆಟ್ಟಿ, ಕೋಮುವಾದದ ವಿರುದ್ಧದ ಸುಧೀರ್ಘ ಹೋರಾಟಕ್ಕೆ ಬಲಿಯಾದ ಗೌರಿ ಲಂಕೇಶ್ ಮತ್ತು ಕೋಮುವಾದದ ಸಂತ್ರಸ್ತರಿಗೆ ಅರ್ಪಣೆ ಮಾಡಿರುವುದು ನನ್ನ ತಬ್ಬಿಬ್ಬಿಗೆ ಕಾರಣ.

ನಾನೊಬ್ಬ ಮಾಜಿ ಪೊಲೀಸ್ ಅಧಿಕಾರಿಯಾಗಿ ಈ ಪುಸ್ತಕವನ್ನು ಓದುತ್ತಾ ನಂತರ ಅಘಾತಗೊಂಡೆ. ಕಾರಣ ಈ ಪುಸ್ತಕದಲ್ಲಿ ಬರುವ ಕೆಲವು ಪೊಲೀಸ್ ಅಧಿಕಾರಿಗಳು ಈ ಕೋಮುಗಲಭೆಯ ಸಂಘಿ ಸೂತ್ರಧಾರಿಗಳಿಗಿಂತಲೂ ಭೀಕರ ಮತ್ತು ಕ್ರೂರವಾಗಿ ಕಾಣಿಸುತ್ತಿದ್ದರು.

ನಾವು ಒಂದು ದೇಶವಾಗಿ ವಿಶ್ವಭ್ರಾತೃತ್ವವನ್ನು ಪೋಷಿಸಿಕೊಂಡು ಬಂದವರು. ಹಿಂದೂ ಧರ್ಮವು `ವಸುದೈವ ಕುಟುಂಬಕಂ’ ಮತ್ತು `ಸರ್ವೇ ಜನಾಃ ಸುಖೀನೋ ಭವಂತು’ ಎಂಬ ವಾಕ್ಯಗಳಲ್ಲಿ ನಂಬಿಕೆ ಇಟ್ಟುಕೊಂಡು ಬೆಳೆದಿದೆ. ಕರ್ನಾಟಕವು ಶರಣ ಶ್ರೇಷ್ಠರ ಶರಣ ಸಾಹಿತ್ಯ, ದಾಸ ಶ್ರೇಷ್ಠರ ದಾಸ ಸಾಹಿತ್ಯ, ತೀರಾ ಇತ್ತೀಚೆಗೆ ಕುವೆಂಪು ಸಾರಿದ ವಿಶ್ವಮಾನವ ತತ್ವಗಳನ್ನು ರೂಢಿಸಿಕೊಂಡಿದೆ. ಆದ್ದರಿಂದ ನಾವು ಎಲ್ಲರನ್ನು ಒಳಗೊಂಡು, ಪ್ರೀತಿಸಿ ಬದುಕುವುದರಿಂದಷ್ಟೇ ದೇಶಪ್ರೇಮಿ, ಕನ್ನಡ ಪ್ರೇಮಿ, ಧರ್ಮ ಪ್ರೇಮಿ ಆಗಿರಲು ಸಾಧ್ಯ. ಈ ಸತ್ಯವನ್ನು ಹಿಂದೂ ಧರ್ಮದ ಪ್ರತಿಪಾದಕರು ಎಂದು ಹೇಳಿಕೊಳ್ಳುತ್ತಿರುವ ಧರ್ಮಾಂಧರು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕಿದೆ.

ನವೀನ್ ಸೂರಿಂಜೆಯವರ ಲೇಖನಗಳು ಬಹಳ ಕಟುವಾಗಿ ಕಂಡರೂ ವಾಸ್ತವ ಸತ್ಯ. ಒಬ್ಬ ಪತ್ರಕರ್ತ ಬಹಳ ಹತ್ತಿರದಿಂದ ಸಮಾಜದ ನಡುವೆ ಬೆರೆತುಕೊಂಡಾಗ ಮಾತ್ರ ಇಂತಹ ಸತ್ಯಗಳು ಕಾಣಲು ಸಾಧ್ಯ. ಈ ಪುಸ್ತಕದಲ್ಲಿ ದಾಖಲಾಗಿರುವ ಹಲವು ಘಟನೆಗಳಿಗೆ ನವೀನ್ ಪ್ರತ್ಯಕ್ಷ ಸಾಕ್ಷಿಯಾಗಿದ್ದರೆ, ಇನ್ನೂ ಹಲವು ಘಟನೆಗಳಲ್ಲಿ ನವೀನ್ ಸೂರಿಂಜೆ ಒಂದಲ್ಲಾ ಒಂದು ರೀತಿ ಸಂತ್ರಸ್ತರ ಜೊತೆ ನಿಂತು ಭಾಗಿಯಾಗಿದ್ದಾರೆ.

ಮಹಿಳೆಯರ ಮೇಲಿನ ಹಲ್ಲೆಯನ್ನು ವಿರೋಧಿಸಿ ಜಗತ್ತಿಗೆ ಹೇಳಿದ್ದಲ್ಲದೇ, ಹಲ್ಲೆಕೋರರಿಗೆ ಜಾಮೀನು ಆಗುವುದನ್ನು ತಪ್ಪಿಸಲು ತಾನು ನಿರೀಕ್ಷಣಾ ಜಾಮೀನು ಪಡೆಯದೇ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದಾಗ ನೋಡಿದ ವಿಷಯಗಳನ್ನು ಯಾವ ಅಳುಕೂ ಇಲ್ಲದೆ ಲೇಖನ ರೂಪಕ್ಕೆ ತಂದಿರುವುದು ಸಮಾಜಕ್ಕೆ ಸದಾ ಎಚ್ಚರಿಕೆಯ ಗಂಟೆಯಂತಿದೆ.

ಮತೀಯ ಗಲಭೆಗಳಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ ಮಾತ್ರ ಅದರ ನೋವು, ಸಂಕಷ್ಟಗಳು ಹಾಗೂ ಭವಿಷ್ಯದ ಕಾರ್ಗತ್ತಲು ಅರ್ಥವಾಗುತ್ತದೆ. ಕೋಮುಗಲಭೆಗಳನ್ನು ಪ್ರಚೋದಿಸುವ ಮೃಗೀಯ ಮನಸ್ಸಿನ ರಕ್ತಪಿಪಾಸು ಕುಂಕುಮಧಾರಿಗಳಿಗೋ, ಶ್ವೇತವಸ್ತ್ರಧಾರಿಗಳಿಗೋ ಅದು ಅರ್ಥವಾಗಲ್ಲ. ವಾಸ್ತವವಾಗಿ ಮತೀಯ ಗಲಭೆಯಲ್ಲಿ ರಕ್ತ ನೆಲಕ್ಕೆ ಬಿದ್ದಷ್ಟೂ ಭೂಮಿ ಮುಂದಿನ ರಾಜಕೀಯದ ಬೆಳೆ ಬೆಳೆಯಲು ಹದವಾಗಿದೆ ಎಂದು ಎಲ್ಲಾ ಕೋಮುರಾಜಕಾರಣಿಗಳು ಲೆಕ್ಕಾಚಾರ ಹಾಕುತ್ತಾರೆ.

ಧರ್ಮಾತೀತವಾಗಿ, ಜಾತ್ಯಾತೀತವಾಗಿ, ಸಂವಿಧಾನದ ಆಶಯಗಳನ್ನು ಜಾರಿ ಮಾಡುವ ಪೊಲೀಸ್ ಅಧಿಕಾರಿಗಳನ್ನು ಈ ನಾಡು ಕಂಡಿದೆ. ಹಿರಿಯ ಐಪಿಎಸ್ ಅಧಿಕಾರಿಗಳಾದ ಬಿ.ಎನ್.ಗರುಡಾಚಾರ್, ಪಿ.ಜಿ.ಹಲರ್ಂಕಾರ್, ಬಿ.ಎನ್.ನಾಗರಾಜ್, ಎಸ್.ಮರಿಸ್ವಾಮಿ, ಟಿ.ಜಯಪ್ರಕಾಶ್, ರಾಮಕೃಷ್ಣ, ಗಾಂವ್ಕರ್, ಕಸ್ತೂರಿ ರಂಗನ್, ಗೋಪಾಲ್ ಹೊಸೂರ್, ಡಾ.ಕೆ.ಮಧುಕರ ಶೆಟ್ಟಿ, ಡಾ.ಸುಬ್ರಹ್ಮಣ್ಯೇಶ್ವರ ರಾವ್, ಜಿ.ಬಿ.ಛಬ್ಬಿ, ಚಂದ್ರಶೇಖರ್ ಮುಂತಾದ ಸಾಲು ಸಾಲು ಪೊಲೀಸ್ ಅಧಿಕಾರಿಗಳು ಕೋಮುಗಲಭೆಗಳು ಮತು ಜಾತಿಯ ಅಸಮಾನತೆಗಳು ತಮ್ಮ ಸೇವಾವಧಿಯಲ್ಲಿ ನಡೆಯದಂತೆ, ನಡೆದರೂ ನಿಯಂತ್ರಿಸುವಂತೆ ನಡೆದುಕೊಂಡಿದ್ದಾರೆ. ಪೊಲೀಸರಿಗೆ ಪೊಲೀಸ್ ಮ್ಯಾನುವಲ್ ಮಾತ್ರ ಧರ್ಮಗ್ರಂಥವಾಗಬೇಕು. ತಮ್ಮ ವೈಯಕ್ತಿಕ ಬದುಕಿನ ಧರ್ಮಗ್ರಂಥವನ್ನು ಮನೆಯಲ್ಲಿಟ್ಟು ಬಂದು ಯೂನಿಫಾರಂ ಧರಿಸಬೇಕು. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡ ಪೊಲೀಸರ ಕ್ರೂರ ಬದುಕು ನವೀನ್ ಸೂರಿಂಜೆಯವರ ಪುಸ್ತಕದಲ್ಲಿ ದಾಖಲಾಗಿದೆ. ಕೋಮುಗಲಭೆಗಳಲ್ಲಿ ಯಾರೇ ಹುತಾತ್ಮ ಎನ್ನಿಸಿಕೊಳ್ಳಲಿ, ಬಲಿದಾನ ಎನ್ನಿಸಿಕೊಳ್ಳಲಿ, ಇನ್ನಾರಿಗೋ ಅದು ಮಾರಣಹೋಮ, ಕೊಲೆ, ಸಾವು ಎಂದೆನಿಸಿದರೂ ಕೋಮುಗಲಭೆ ಸೃಷ್ಟಿಸುವವರಿಗೆ ಮತ್ತು ಟಿವಿ ಮಾಧ್ಯಮಗಳಿಗೆ ಅದೊಂದು ಬೋನಸ್ ಇದ್ದಂತೆ. ಅವರ ಜೋಳಿಗೆಯನ್ನು ಇನ್ನಷ್ಟೂ ತುಂಬಿಸಿದಂತೆ. ಆದರೆ ಗಲಭೆಯಲ್ಲಿ ಮಗನನ್ನು ಕಳೆದುಕೊಂಡ ತಾಯಿಗೆ ಅದೊಂದು ಮಹಾಶಾಪ. ಜೀವನ ಪರ್ಯಂತ ತಣಿಯದ ವೇದನೆ. ಆಕೆಯ ಹೆರುವ ಒಡಲಷ್ಟೇ ಅನಾಥಗೊಳ್ಳುವ ಆಕೆಯ ನೋವನ್ನು ಅರಿಯಬಲ್ಲವರಾರು? ನವೀನ್ ಸೂರಿಂಜೆಯವರ ಲೇಖನಗಳಲ್ಲಿ, ಭೂಗತ ಪಾತಕಿ ಗಣೇಶ ಶೆಟ್ಟಿ ಮತ್ತಾತನ ಧರ್ಮದ ಆಚರಣೆ, ನಾನು ಟೆರರಿಸ್ಟ್ ಅಲ್ಲ ಎನ್ನುವ ಹಾಡು ಹಕ್ಕಿ ವೃದ್ದ ರೆಹಮಾನರ ಬದುಕಿನ ಕತೆ, ಕರ್ನಾಟಕ ಪೆÇಲೀಸ್ ಕಾಯ್ದೆ ಕಲಂ 96 ಅಸಹ್ಯಕರ ದುರುಪಯೋಗ... ಇವೆಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟು `ಯೂನಿಫಾರಂ ಕೋಮುವಾದ’ದ ಇನ್ನೊಂದು ಮುಖವನ್ನು ಬಯಲು ಮಾಡಿದ್ದಾರೆ. ಇದು ಇತ್ತೀಚೆಗೆ ಇತ್ತೀಚಿನ ದಿನಗಳಲ್ಲಿ ಪುಸ್ತಕ ರೂಪದಲ್ಲಿ ಬಂದಂತಹ ಒಂದು ಕಟುವಾದ, ಅಂತೆಯೇ ಸಮಾಜದೆದುರು ಕೋಮುವಾದದ ಕಟು ಸತ್ಯಗಳನ್ನು ಬಿಚ್ಚಿಟ್ಟಂತಹ ಪುಸ್ತಕ.

ಮೇಲ್ವರ್ಗದ ಶೂದ್ರರು, ಹಿಂದುಳಿದ ವರ್ಗ ಮತ್ತು ದಲಿತರು ಕೋಮುವಾದ, ಮನುವಾದದ ಅಪಾಯಗಳನ್ನು ಅರಿಯಬೇಕು ಎನ್ನುವುದೇ ನವೀನ್ ಸೂರಿಂಜೆಯವರ ಈ ಪುಸ್ತಕದ ಒಟ್ಟು ತಾತ್ಪರ್ಯ. ಈಗ ನಡೆಯುತ್ತಿರುವ ಘಟನಾವಳಿಗಳ ನಿಜವಾದ ಸಂತ್ರಸ್ತರು ಯಾರು, ಲಾಭಧಾರಿಗಳು ಯಾರು ಎಂಬುದನ್ನು ತಣ್ಣನೆ ಕುಳಿತು ಯೋಚಿಸುವುದರ ಜೊತೆಗೆ ವೈಕಂ ಚಳವಳಿಯಂತಹ ಚಳವಳಿಯ ಬಗ್ಗೆಯೂ ಓದಬೇಕು. ಅಂದು ಹಿಂದೂ ಸಮಾಜದಲ್ಲಿ ಅಸ್ಪಶ್ಯತೆ ಮತ್ತು ಜಾತಿ ತಾರತಮ್ಯದ ವಿರುದ್ಧ ತಿರುವಾಂಕೂರ್‍ನಲ್ಲಿ ವೈಕಂ ಚಳುವಳಿ ನಡೆದಿತ್ತು. ಈ ಚಳುವಳಿ ಕೇವಲ ಹಿಂದುಳಿದ ವರ್ಗ ಮತ್ತು ದಲಿತರ ಪರವಾಗಿರಲಿಲ್ಲ. ಮೇಲ್ವರ್ಗದ ಶೂದ್ರರ ಪರವಾಗಿಯೂ ಆಗಿತ್ತು. ಸ್ವಾಮೀ ವಿವೇಕಾನಂದರಿಂದ ಹುಚ್ಚಾಸ್ಪತ್ರೆ ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ತಿರುವಾಂಕೂರು ಜಾತಿ ವ್ಯವಸ್ಥೆಗೆ ಹೆಸರಾಗಿತ್ತು. ಕೊಟ್ಟಾಯಂನ ವೈಕೋಮ್‍ನಲ್ಲಿರುವ ಮಹಾದೇವ ದೇವಾಲಯ ಮಾತ್ರವಲ್ಲ, ಅದರ ಸುತ್ತಲಿನ ರಸ್ತೆಯಲ್ಲೂ ಶೂದ್ರರು ಸಂಚರಿಸಬಾರದು ಎಂಬ ನಿಯಮವಿತ್ತು. ಹಂದಿ, ನರಿ, ನಾಯಿ ಓಡಾಡಬಹುದಾಗಿದ್ದ ದೇವಸ್ಥಾನದ ಸುತ್ತಲಿನ ರಸ್ತೆಯನ್ನು ಕೇವಲ ದಲಿತರು ಮತ್ತು ಹಿಂದುಳಿದ ವರ್ಗ ಮಾತ್ರವಲ್ಲ, ಮೇಲ್ವರ್ಗದ ಶೂದ್ರರೂ ಬಳಸುವಂತಿರಲಿಲ್ಲ. ಇದರ ವಿರುದ್ಧದ ಚಳುವಳಿಯೇ ವೈಕಂ ಚಳುವಳಿ ಎಂದು ಪ್ರಸಿದ್ಧಿಯಾಗಿ, ಜಯಗಳಿಸಿ ಎಲ್ಲೆಡೆಗೆ ವಿಸ್ತರಿಸಿ ಕೊನೆಗೆ ಮೇಲ್ವರ್ಗದ ಶೂದ್ರರೂ ಸೇರಿದಂತೆ ಎಲ್ಲಾ ಜನಸಮುದಾಯಗಳಿಗೂ ದೇವಸ್ಥಾನ ಪ್ರವೇಶದ ಹಕ್ಕು ನೀಡಲಾಯ್ತು. ಈ ರೀತಿ ಧರ್ಮ ದೌರ್ಜನ್ಯಕ್ಕೆ ಒಳಗಾದ ಸಮುದಾಯಗಳು ಮತ್ತೆ ಕೋಮುವಾದಕ್ಕೆ ಒಳಗಾಗಿ ಅವನತಿ ಹೊಂದಬೇಕೇ ಎಂಬುದನ್ನು ಎಲ್ಲಾ ಶೂದ್ರರು, ದಲಿತರು ಯೋಚಿಸಬೇಕಿದೆ. ಇಂತದ್ದೇ ವಿಚಾರಗಳನ್ನು ತನ್ನೆದುರು, ತನ್ನೂರಲ್ಲಿ ನಡೆದ ಘಟನೆಗಳನ್ನು ಉದಾಹರಣೆಯಾಗಿ ಕೊಟ್ಟು ನವೀನ್ ಸೂರಿಂಜೆಯವರು ಪುಸ್ತಕದಲ್ಲಿ ಹೇಳುತ್ತಾ ಹೋಗುತ್ತಾರೆ.

ಒಂದೆಡೆಯಲ್ಲಿ ದಲಿತ, ಹಿಂದುಳಿದ ಯುವಕರನ್ನು ಬಳಸಿಕೊಂಡ ಮೇಲ್ವರ್ಗದ ಮತಾಂಧರು, ಮತ್ತೊಂದೆಡೆ ಮತಾಂಧರಾಗಿರುವ ಪೊಲೀಸರು. ಕೇಸರಿ ಮತ್ತು ಕೆಲ ಖಾಕಿ ಮತಾಂಧರು ಜಂಟಿಯಾಗಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿದ್ದಾರೆ. `ನೇತ್ರಾವತಿಯಲ್ಲಿ ನೆತ್ತರು’ ಎಂಬ ಈ ಪುಸ್ತಕದಲ್ಲಿ ಕೋಮುಗಲಭೆಗಳ ಆಳ-ಅಗಲ, ನೈತಿಕ ಪೊಲೀಸುಗಿರಿಯ ದೌರ್ಜನ್ಯ, ಕ್ರೂರ ಪೊಲೀಸರ ಪಕ್ಷಪಾತತನ ಮತ್ತು ಕೋಮುಗಲಭೆಗಳಲ್ಲಿ ಭಾಗಿದಾರಿತನವನ್ನು ಒಂದೊಂದು ಲೇಖನದಲ್ಲಿ ನವೀನ್ ಸೂರಿಂಜೆಯವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಂವಿಧಾನಬದ್ಧ ಸ್ವಸ್ಥ ಸಮಾಜದ ಆಶಯ ಹೊಂದಿರುವ ನಾಗರಿಕರು, ಸರ್ಕಾರಿ ಅಧಿಕಾರಿಗಳು ಓದಲೇಬೇಕಾದ ಪುಸ್ತಕವಿದು.”