ನೇರಳೆ ಮರ

ನೇರಳೆ ಮರ

ಪುಸ್ತಕದ ಲೇಖಕ/ಕವಿಯ ಹೆಸರು
ಕೇಶವ ಮಳಗಿ
ಪ್ರಕಾಶಕರು
ಕಥನ, ನಾಗರಭಾವಿ, ಬೆಂಗಳೂರು
ಪುಸ್ತಕದ ಬೆಲೆ
ರೂ. 60/-

ತಮ್ಮ ಕಾವ್ಯಾತ್ಮಕ ಭಾಷೆಯ ಮೂಲಕ ಸಮುದಾಯಗಳ ಅತ್ಯಂತ ಖಾಸಗಿ ಹಾಗೂ ಸಾರ್ವಜನಿಕವಾದ ಸಂಕೀರ್ಣ ಅನುಭವಗಳನ್ನು ದಾಖಲಿಸುತ್ತ ಬಂದವರು ಕೇಶವ ಮಳಗಿ. ಅವರ ಹೊಸ ಬಗೆಯ 26 ಕಥನಗಳು ಇದರಲ್ಲಿವೆ.

ಎಂಬತ್ತರ ದಶಕದಲ್ಲಿ ಬರೆಯಲು ಶುರುವಿಟ್ಟ ಲೇಖಕರಲ್ಲಿ ಕೇಶವ ಮಳಗಿ ಅವರದು ವಿಭಿನ್ನ ಕಥನ ಮಾರ್ಗ. 1963ರಲ್ಲಿ ಜನಿಸಿದ ಇವರು ವಿಜಾಪುರ, ಬಾಗಿಲುಕೋಟೆ, ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಗಳ ಭಾಷೆ ಹಾಗೂ ಸಂಸ್ಕೃತಿಗಳ ಬನಿಯನ್ನು ತಮ್ಮ ಬರಹದಲ್ಲಿ ಇಳಿಸಿದ್ದಾರೆ. ಹೊಸ ಬಗೆಯ ಅಭಿವ್ಯಕ್ತಿ ಶೈಲಿ, ವಸ್ತು ನಿರೂಪಣೆಯಿಂದಾಗಿ ಇವರ ಕಥನ ಗಮನಾರ್ಹ.

ಪುಸ್ತಕದ ಆರಂಭದಲ್ಲಿ ಕೇಶವ ಮಳಗಿ ಹೇಳಿಕೊಂಡಿರುವ ಮಾತುಗಳು: "ಸುಮಾರು ನಲ್ವತ್ತು ವರ್ಷಗಳಿಂದ ನನ್ನೊಳಗೆ ಬುಗುರಿಯಂತೆ ನಿದ್ರಿಸುತ್ತಿದ್ದ ರೂಪಕ, ಭಾವ ನುಡಿ, ವಿಚಾರ, ಚಿತ್ರಗಳ ಲೋಕವನ್ನು ಓದುಗರು ಮುಂದಿನ ಪುಟಗಳಲ್ಲಿ ಎದುರುಗೊಳ್ಳುವರು. ಇಲ್ಲಿ ಚಿತ್ರಿಸಲಾದ ಜಗತ್ತಿನ ಬಣ್ಣದ ನೆರಳು ನನ್ನ ಕಥೆಗಳಲ್ಲಿ ಆಗೀಗ ಹಾದು ಹೋಗಿರಬಹುದಾದರೂ ಇಲ್ಲಿನ ಬಹುತೇಕ ಕಥನಗಳು ನನ್ನ ಈ ವರೆಗಿನ ಬರವಣಿಗೆಯ ಚೌಕಟ್ಟಿನ ಆಚೆಯೇ ಉಳಿದಂಥವು. ಇದಕ್ಕೆ ಕಾರಣ: ಇವುಗಳಲ್ಲಿ ಕಥನ, ಕಾವ್ಯ, ಲಾಲಿತ್ಯದ ಅಂಶವಿದ್ದರೂ ಅವಕ್ಕೊಂದು ಸ್ವರೂಪ ಕಲ್ಪಿಸುವ ಅವಕಾಶ ದೊರಕಿರಲಿಲ್ಲ ಎನ್ನುವುದೇ ಆಗಿದೆ. ಹಾಗೆಂದೇ, ಬಿಸಿಲು ಸೀಮೆಯ ಸುಡು ಬಯಲಿನಲಿ ಹಾದು ಹೋದ ತಿಳಿ ಗಾಳಿಯಂತಹ ಈ ಅನುಭವಗಳನ್ನು ಹೊಸ ಕಥನ ಕ್ರಮದ ಮೂಲಕ ಕಟ್ಟಲು ಪ್ರಯತ್ನಿಸಿರುವೆ.”

"ನೇರಳೆ ಮರದ ನೆರಳು" ಎಂಬ ಮೊದಲ ಕಥನದ ಆಯ್ದ ಭಾಗ ಹೀಗಿದೆ: “ರೇಣಿಗುಂಟ-ಗುಂಟೂರಿನ ಪ್ಯಾಸಿಂಜರ್ ರೈಲಿನಲ್ಲಿ ….. ತೂಕಡಿಕೆಗೆ ಜಾರಿದ ಕಥೆಗಾರನಿಗೆ ಎಚ್ಚರವಾದುದು ಎಳೆಯ ಹೆಣ್ಣಿನ ದನಿ ಕೇಳಿ: ನೀಲದಣ್ಣೋ... ಹಣ್ಣಿನ ಬುಟ್ಟಿ ಹೊತ್ತು ತಂದ ಹುಡುಗಿಯನ್ನು ಕಂಡು ಕಥೆಗಾರ ಒಂದು ಕ್ಷಣ ಅಪ್ರತಿಭನಾದ. ಆ ಹುಡುಗಿ ಮತ್ತು ಕಥೆಗಾರನ ನಡುವೆ ವಿವರಿಸಲಾಗದ ಎಳೆಯೊಂದು ಬೆಸೆದುಕೊಂಡಿತ್ತು. ವಯಸ್ಸಾದ ತನ್ನ ಅಜ್ಜಿಯೊಂದಿಗೆ ಬದುಕುತ್ತಿರುವ ಈ ಹುಡುಗಿ ಬೇಂಡರವಾಡಿಯವಳು. ಏನೂ ಅರಿಯದ ಚಿಕ್ಕ ಹುಡುಗಿಗೆ ಮರುಳು ಮಾಡಿ, ಹುಲುಗಿಯ ಜೋಗತಿಯೊಬ್ಬಳು ಮುಂಬಯಿಗೆ ಕರೆದೊಯ್ದು ಮಾರಿದ್ದಳು. ಮೊಮ್ಮಗಳು ಅಲ್ಲಿ ಕೆಲಸ ಮಾಡುತ್ತಿದ್ದಾಳೆಂದು ನಂಬಿಸಿ ಅಜ್ಜಿಗೆ ಐನೂರು ಕೊಟ್ಟು ಕೈ ತೊಳೆದುಕೊಂಡಿದ್ದಳು. ಕಥೆಗಾರನಿಗೆ ಈ ವಿಷಯ ಹೇಗೋ ತಿಳಿದು, ಅಜ್ಜಿಯ ಬಳಿಯಿದ್ದ ಲಾಲಬತ್ತಿ ಎಂಬ ಅಸ್ಪಷ್ಟ ವಿಳಾಸ ಹಿಡಿದು ಪತ್ರಿಕೆಗಳಲ್ಲಿ ಬರೆಸಿ, ಮೂರು ತಿಂಗಳ ಪೊಲೀಸರ ಸತತ ಕಾರ್ಯಾಚರಣೆಯ ಅನಂತರ ಹುಡುಗಿ ಮತ್ತೆ ಅಜ್ಜಿಯನ್ನು ಸೇರುವಂತೆ ಮಾಡಿದ್ದ. ಆದರೆ ಇದರಿಂದ ಅವರಿಬ್ಬರಿಗೂ ಸಂತೋಷವಾಗಿರಲಿಲ್ಲ.

ಮನುಷ್ಯರನ್ನು ಸರಕುಗಳಂತೆ ಮಾರುವ ದಂಧೆ ಸಮಾಜಕ್ಕೇನೋ ಕೆಡುಕೇ. ಆದರೆ ಅದರಲ್ಲಿಯೇ ಬದುಕು ಹುಡುಕಿ ಹೊರಟವರ ಹೊಟ್ಟೆಗೆ ಕಲ್ಲು ಹಾಕುವುದೆಂದರೆ? ಆ ಹುಡುಗಿ ತನ್ನ ಕಣ್ಣು ತಪ್ಪಿಸಿ ಹೋಗುತ್ತಿರುವುದನ್ನು ಅರಿತ ಕಥೆಗಾರ ಕರೆದು, ಮಾತನಾಡಿಸುತ್ತಾನೆ. “ಇಲ್ಲೊಂದಿಟು ಹಣ್ಣು ಹಾಕು" ಎಂದು ಬೊಗಸೆ ಒಡ್ಡುತ್ತಾನೆ. ಸುರಿದ ಹಣ್ಣಿನ ಬೆಲೆಯಾಗಿ ದೊಡ್ಡ ನೋಟೋಂದನ್ನು ನೀಡಲು ಹೋದಾಗ ಚಿಲ್ಲರಿಲ್ಲೇಳು ಸಾರ್ - ಇತಗೋ, ಅನ್ನುತ್ತಾಳೆ ಆ ಹುಡುಗಿ. ಇರ್ಲೆಳಂಗೆ ಇಕ್ಕೊ ಅಂದ ಕಥೆಗಾರನಿಗೆ - ಐಯ್ - ಬಿಡು ಸಾರ್, ಮೈ ಮಾರಿದ ರೊಕ್ಕಾನೇ ಉಳಿಸಿಗಣಾಕ ಆಗಲಿಲ್ಲ. ಅಲ್ಲಿದ್ರ ಹೆಂಗೋ ಎರಡು ಹೊತ್ತು ಕೂಳರ ಸಿಗತಿತ್ತು. ಇಲ್ಲಿ ಕರ್ಕಂಬಂದು ಬಲು ಬೇಶ್ ಮಾಡಿಗ್ಯೇಳು. ನಿನ ನೋಟೇನು ದಿನಾ ನಮ - ಹೊಟ್ಟಿಗೆ ಹಾಕತದ, ಹ್ಯಂಗ? ಎನ್ನುತ್ತ ನಡೆದು ಹೋಗಿಬಿಡುತ್ತಾಳೆ.

ತೀವ್ರವಾಗಿ ಅಸ್ವಸ್ಥಗೊಳ್ಳುವ ಕಥೆಗಾರ ಹೊಸ ಬದುಕು ಸಿಗಲಿ ಎಂದು ಕಾಮಾಟಿಪುರದಿಂದ ಇಲ್ಲಿಗೆ ಕರೆತಂದ ಹುಡುಗಿಯ ಮಾತಿನ ಅರ್ಥವೇನು? ಎಂಬ ಚಿಂತೆಗೆ ಬೀಳುತ್ತಾನೆ. ತನ್ನ ಬಯಲು ಸೀಮೆಯ ಇಂತಹ ಹುಡುಗಿಯರ ಬದುಕು ಕಟ್ಟುವವರು ಯಾರೂ ಇಲ್ಲವೇ ಎಂದು ಕಳವಳಕ್ಕೆ ಒಳಗಾಗುತ್ತಾನೆ…."

ಎರಡನೆಯ ಕಥನ “ಜಗದ ಪುಸ್ತಕಗಳೆಲ್ಲ ನನಗಿರಲಿ ಗೆಳೆಯ!" ಎಂಬುದು "ತೀರ ಸಂಕೋಚದ, ಅನಾಕರ್ಷಣೀಯ, ಅತಿ ಸಾಮಾನ್ಯ ಹುಡುಗನೊಬ್ಬ ನಿಜವಾದ ಬರಹಗಾರನಾಗಿ ಬೆಳೆಯುವ ಬಗೆ”ಯನ್ನು ಚಿತ್ರಿಸುತ್ತದೆ. ಇದು “ಅಂಥ ಅವಮಾನದ ಕ್ಷಣವನ್ನು ಭಾಷೆಯಲ್ಲಿ ಹಿಡಿದಿಡಬಲ್ಲ ಅಕ್ಷರಗಳಿನ್ನೂ ಆವಿಷ್ಕಾರಗೊಳ್ಳಲಿಲ್ಲ” ಎಂದು ಶುರುವಾಗಿ, ತನ್ನ ಬಾಲ್ಯದಲ್ಲಿ, ಶಾಲೆಯಲ್ಲಿ ಅನುಭವಿಸಿದ ಹಲವಾರು ಅವಮಾನದ ಘಟನೆಗಳನ್ನು ದಾಖಲಿಸುತ್ತದೆ: "ಹೀಗೆ ಮೈಯನೆಲ್ಲ ಒಂದು ಹಳೆಯ ಕರವಸ್ತ್ರದಂತೆ ಹಿಂಡಿಕೊಳ್ಳಬೇಕಾಗುವ ಪರಿಸ್ಥಿತಿಗೆ ಕಾರಣ: ತನ್ನ ಸರೀಕರಂತೆ ಗರಿಗರಿ ಬಟ್ಟೆ ತೊಡಲು ಸಾಧ್ಯವಾಗದಿರುವುದು; ಕಾಲದ ಫ್ಯಾಶನ್ನಿಗೆ ತಕ್ಕಂತೆ ಕಾಲಿಗೆ ಚಪ್ಪಲಿ, ಅಂಗಿಯ ಮುಂದಿನ ಕಿಸೆಯಲ್ಲಿ ಸಿಕ್ಕಿಸಿಕೊಳ್ಳಲು ಹೊಸ ಪೆನ್ನು, ಕಾಸು ಬಿಷ್ಟಾಕಿ ಕಂಡದ್ದನ್ನು ಕೊಂಡು ಖುಷಿಯಾಗಿರಲು ಆಗದಿರುವುದು ಮತ್ತು ಇದರಿಂದಾಗಿಯೇ ಸುಟ್ಟು ಕರಕಾಗುವುದು." ಇದು ಎಲ್ಲಿಯ ವರೆಗೆಂದರೆ, “ಲೇ, ನಾಳೆ ಆಯಿತವಾರ. ಅಕ್ಕಿನೇನಿ ಪಿಚ್ಚರಿಗೆ ಹೋಗತೇವಿ ಬರತೀಗ್ಯ, ಎಂದು ಕೇಳುತ್ತಾರೆಂದು ಶನಿವಾರ ಶಾಲೆಗೆ ಚಕ್ಕರ್ ಹಾಕುವುದು.”

“ಇವೆಲ್ಲದರಿಂದ ಮುಕ್ತಿಯೆಂದರೆ ಇಂಥ ಮಿಂಡ್ರಿಗುಳ್ಳಿಗಳು ಕಟ್ಟಿದ ಗೋಡೆಗೆ ಗುದ್ದಿಗುದ್ದಿ ಕಿಂಡಿ ಕೊರೆದು ಪಾರಾಗುವುದು.” ಅದನ್ನು ಆಗುಮಾಡುವುದು ಹೇಗೆಂದು ಚಿಂತಿಸುತ್ತ ಒಂಟಿಯಾಗಿ ಓಡಾಡತೊಡಗುವ ಈ ಬಗೆಯ ಹುಡುಗರಿಗೆ “ಅಕ್ಷರ ಲೋಕ" ತೆರೆದುಕೊಳ್ಳುತ್ತದೆ ಎಂದು ವಿವರಿಸುತ್ತಾರೆ ಲೇಖಕರು: "ಯಾರೊಂದಿಗೂ ಬೆರೆಯಲಾಗದ ಸಂಕೋಚ ಮತ್ತು ಒಂಟಿತನಗಳು ಮರೆಯಾಗಿ ಗಂಟೆಗಟ್ಟಲೆ ಅಕ್ಷರಗಳು ಬಿಚ್ಚಿಡುವ ಪಾತ್ರದೊಂದಿಗೆ ತನ್ಮಯನಾಗಿ ಮಾತಾಡುತ್ತ, ಆ ಪಾತ್ರಗಳ ಹೆಗಲ ಮೇಲೆ ಕೈ ಹಾಕಿ, ಮೈ ಸವರುತ್ತ ಸುಖಿಸುವ ಕಲೆಯನ್ನು ಹೇಳಿಕೊಡುತ್ತವೆ." ಅಂತೂ "ಊರಿನ ಗ್ರಂಥಾಲಯದಲ್ಲಿ ಹಳೆಯ ವಾಸನೆ ಸೂಸುತ್ತ ಕೂತ ನೂರಾರು ಪುಸ್ತಕಗಳಿಗೆ ಒಬ್ಬ ಓದುಗ ಸಿಕ್ಕುತ್ತಾನೆ. ಅವು ಆ ಹುಡುಗನನ್ನು ಆತನ ಗೆಳೆಯರಾರೂ ಕಾಣದ ಜಗತ್ತಿಗೆ ಕರೆದೊಯ್ಯುತ್ತವೆ…" ಪುಸ್ತಕಗಳಿಂದಾಗಿ ಅಂತಹ ಹುಡುಗನಲ್ಲಾಗುವ ಪರಿವರ್ತನೆಗಳನ್ನು ರೂಪಕಗಳ ಮೂಲಕ ಕಟ್ಟಿಕೊಡುತ್ತಾರೆ ಲೇಖಕರು. “ಆದರೂ ದುಃಖವಾಗಲಿ; ಕಹಿಯಾಗಲಿ ಇಲ್ಲ ನನಗೆ. ಬಾಲ್ಯದಲಿ ಬಯಲಿಂದ ಪಲಾಯನ ಮಾಡಿದಂತೆ ಪುಸ್ತಕಗಳ ಪ್ರಪಂಚದಿಂದ ನಾನು ನಿರ್ಗಮಿಸಲಾರೆ. ಈ ಜಗತ್ತಿನಲ್ಲಿರುವ ಎಲ್ಲ ಒಳ್ಳೆಯ ಪುಸ್ತಕಗಳೂ ನನಗಿರಲಿ ಗೆಳೆಯ. ಏಕೆಂದರೆ….. ಈ ಪಾಶಾಣ ಬಂಡೆಗಳ ಬಿರುಕಲ್ಲಿಯೂ ಗರಿಕೆ ಚಿಗುರಿಸುವುದು ಹೇಗೆಂದು ಅವಷ್ಟೇ ಕಲಿಸಿಕೊಡಬಲ್ಲವು…." ಎಂದು ಮುಗಿಸುತ್ತಾರೆ.

“ಅರೆ ಅರೆ… ಅರೆರೆರೆರೆ ಗಿಲಿಗಿಲಿ ಎಕ್ಕಾ!” ಎಂಬುದು ಹಳ್ಳಿಯ ಜೂಜಿನ ಅಡ್ದೆಯ ಕಥನ. "ಮೂವರು ಸಂಗಾತಿಗಳು” ಕಥನದಲ್ಲಿ ತೆರೆದುಕೊಂಡಿದೆ ಸಂತೆಗೆ ಹೊರಟಿರುವ ಮುದುಕವ್ವ, ಈಕೆ ಮತ್ತು ಆಕೆಯ ಅಂತರಂಗದ ಮಾತುಕತೆ. ಎರಡು ವರುಷ ಮುಂಚೆ ಗಂಡ ಸತ್ತಿರುವ ಈಕೆಗೆ ಮುದುಕವ್ವನ ಆದೇಶ: “ಕುಣಿಯೋ ವಯಸ್ಸು. ಅಂವಾ ಹೋದಾ ಅಂತಾ ಮನಸ್ಸು-ಮೈ ಕೇಳ್ತಾವೇನು? ಜಲ್ದಿ, ಯಾರ್ನರ ಗಂಟು ಹಾಕ್ಕೋ…"

ಈ ಪುಸ್ತಕದ ಕೊನೆಯ ಬರಹ "ನನ್ನ ಬರಹ; ನನ್ನ ನೋಟ". ಇದರಲ್ಲಿ “ಆಯ್ಕೆ ಆಕಸ್ಮಿಕವಾಗಿದ್ದರೂ ಬೇಗ ನಾನು ಬರಹಗಾರನಲ್ಲದೆ ಬೇರೇನೂ ಆಗಲಾರೆ; ಉಳಿದುದೇನೂ ನನಗೆ ತಿಳಿದಿಲ್ಲ ಎಂದು ಅರಿತೆ” ಎಂದು ನಿವೇದಿಸಿಕೊಂಡಿದ್ದಾರೆ. ಕೊನೆಯಲ್ಲಿ “ವರ್ತಮಾನದ ಇತಿಹಾಸ ದಾಖಲಿಸುವ ಮತ್ತು ಸೃಷ್ಟಿಸುವ ಕೆಲಸ ನಿರಂತರ. ಸಾಹಿತ್ಯದ ಮೂಲಕ ಅದನ್ನು ಸಾಧಿಸಬೇಕೆಂಬ ಆಶಯವೇ ನನ್ನ ಬರಹದ ಮೂಲ ಉದ್ದೇಶ" ಎಂದು ಸ್ಪಷ್ಟ ಪಡಿಸಿದ್ದಾರೆ.