ನೈಕುಲಿ ಎಂಬ ಗಿಡ ನೋಡಿರುವಿರಾ?

ನೈಕುಲಿ ಎಂಬ ಗಿಡ ನೋಡಿರುವಿರಾ?

ನಾವು ವಾಸಿಸುವ ಪರಿಸರದಲ್ಲಿ ನಮಗೆ ತಿಳಿಯದ ನೂರಾರು ಗಿಡ ಮರಗಳಿವೆ. ಕೆಲವೊಮ್ಮೆ ಪುಸ್ತಕದಲ್ಲೋ, ಟಿವಿಯಲ್ಲೋ ಕೆಲವು ಸಸ್ಯಗಳ ಬಗ್ಗೆ ತಿಳಿಸಿದಾಗ, ‘ಓ ಇದಾ, ಇದು ನಮ್ಮ ಮನೆಯ ಹಿಂದುಗಡೆಯೇ ಇದೆಯಲ್ಲಾ, ಇದರಿಂದ ಇಷ್ಟೆಲ್ಲಾ ಉಪಕಾರವಿದೆಯಾ? ಗೊತ್ತೇ ಇರಲಿಲ್ಲ.’ ಎನ್ನುತ್ತೇವೆ ನಾವು. ಅಂತಹ ಹಲವಾರು ಸಸ್ಯ ಜಾತಿಗಳು ಇವೆ. ನಮ್ಮ ಹಿರಿಯರು ನೆಟ್ಟ ಗಿಡಗಳು ಮರವಾಗುವಾಗ ಅವರು ಬದುಕಿರುವುದಿಲ್ಲ. ಆ ಕಾರಣದಿಂದ ಕೆಲವು ಸಲ ಅವರು ನೆಟ್ಟ ಸಸ್ಯ ಯಾವುದು? ಎಂಬ ಅರಿವು ಈಗಿನ ಜನಾಂಗಕ್ಕೆ ತಿಳಿದಿರುವುದಿಲ್ಲ. ನಮ್ಮ ಸುತ್ತ ಮುತ್ತಲಿನ ಸಸ್ಯ ಸಂಪತ್ತಿನ ಪರಿಚಯ ಮಾಡಿಕೊಳ್ಳುವುದು ಬಹಳ ಅವಶ್ಯ. 

ಹಲವಾರು ಸಸ್ಯಗಳು ಔಷಧಿಯ ಗುಣಗಳನ್ನು ಹೊಂದಿರುತ್ತವೆ. ಆದರೆ ನಮಗೆ ಅದರ ಅದ್ಭುತ ಗುಣಗಳ ಅರಿವು ಇರುವುದಿಲ್ಲ. ಆದರೆ ಈಗ ಬಹಳಷ್ಟು ಮಂದಿ ಆಯುರ್ವೇದದ ಬಗ್ಗೆ, ನಾಟಿ ಮದ್ದುಗಳ, ಅಜ್ಜಿ ಮದ್ದುಗಳ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. ಅಂತಹ ಒಂದು ಅಪರೂಪದ ಸಸ್ಯ ನೈಕುಲಿ ಅಥವಾ ಬೆಂಡುಗ.

Santalaceae (ಸಂತಾಲೇಸಿಯೇ) ಕುಟುಂಬಕ್ಕೆ ಸೇರಿದ ನೈಕುಲಿಯ ವೈಜ್ಞಾನಿಕ ಹೆಸರು Scleropyrum pentandrum. (ಸಿಲೆರೋಪಿರಮ್ ಪೆಂಟಡ್ರಮ್) ಎಂದಾಗಿದೆ. ಕನ್ನಡದಲ್ಲಿ ಬೆಂಡುಗ, ಬೊಡ್ಲಿಗೆ ಹಲ್ಲು, ಬೊಡ್ಲಿಗ ಎಂಬ ಹೆಸರುಗಳಿದ್ದರೆ, ಮಲಯಾಳಂನಲ್ಲಿ ಇರುಮುಳ್ಳಿ ಎಂದು ಕರೆಯುತ್ತಾರೆ. ಇಂಗ್ಲೀಷ್ ನಲ್ಲಿ ಇದನ್ನು Hard Pear Tree ಅಥವಾ Thorny Castor ಎಂದು ಕರೆಯುತ್ತಾರೆ. ಈ ಸಸ್ಯ ಒಂದು ರೀತಿಯಲ್ಲಿ ಪರಾವಲಂಬಿ ಸಸ್ಯ. ಈ ಸಸ್ಯದ ಬೇರುಗಳು ಬೇರೆ ಸಸ್ಯ ಅಥವಾ ಮರದ ಬೇರಿನಿಂದ ಆಹಾರವನ್ನು ಪಡೆದುಕೊಳ್ಳುತ್ತದೆ. ಆದರೆ ಬದನಿಕೆಯಂತೆ ಮರದ ಮೇಲೆ ಬೆಳೆಯದೇ ಭೂಮಿಯಲ್ಲೇ ಬೆಳೆಯುತ್ತದೆ.

ಸುಮಾರು ಆರೇಳು ಮೀಟರುಗಳಷ್ಟು ಎತ್ತರಕ್ಕೆ ಬೆಳೆಯುವ ತೀಕ್ಷ್ಣ ಮುಳ್ಳುಗಳುಳ್ಳ ಈ ಸಸ್ಯದ ಚಿಗುರೆಲೆಗಳು ಬಹಳ ಆಕರ್ಷಕವಾಗಿರುತ್ತವೆ. ಚಿಗುರೆಲೆಗಳು ತಿಳಿ ಕೆಂಪು ಬಣ್ಣದಲ್ಲಿ ಇದ್ದು ನೋಡಲು ಸುಂದರ. ಬೆಳೆದ ಎಲೆಯ ಮೇಲ್ಭಾಗ ಸ್ವಲ್ಪ ಹೊಳೆಯುವಂತಿರುತ್ತದೆ. ಕಾಂಡದಿಂದಲೇ ಹೂವಿನ ಗೊಂಚಲು ಹೊರಗೆ ಬರುತ್ತದೆ. ಈ ಗೊಂಚಲಿನಲ್ಲಿ ಹಲವಾರು ಸಣ್ಣ ಸಣ್ಣ ಹೂವುಗಳಿರುತ್ತವೆ. ಹಲವಾರು ಹೂವುಗಳು ಸೇರಿ ಒಂದು ಗೊಂಚಲು ಆಗುತ್ತದೆ. ಹೂವು ಅರಳುವಾಗ ಐದು ಪಕಳೆಯ ಹೂವಾಗಿರುತ್ತದೆ. ಹೂವುಗಳು ಅರಳಿದಾಗ ತೀಕ್ಷ್ಣವಾದ ಪರಿಮಳ ಅಥವಾ ವಾಸನೆ ಇರುವುದಿಲ್ಲ. 

ಹೂವು ಪರಾಗಸ್ಪರ್ಷವಾದ ಬಳಿಕ ಅದರಲ್ಲಿ ಸುಂದರ ಬುಗರಿಯಾಕೃತಿಯ ಕಾಯಿಗಳು ಬಿಡುತ್ತವೆ. ಈ ಕಾಯಿಗಳು ಪಿಯರ್ಸ್ ಹಣ್ಣಿನ ಆಕಾರದಲ್ಲಿ ಇರುತ್ತವೆ. ಕಾಯಿಯಾಗಿರುವಾಗ ಹಸಿರಾಗಿದ್ದು ಹಣ್ಣಾಗುವಾಗ ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ಹಣ್ಣನ್ನು ಕತ್ತರಿಸಿದಾಗ ತಿಳಿ ಕೆಂಪು ಬಣ್ಣ ಇರುತ್ತದೆ (ಚಿತ್ರದಲ್ಲಿ ಗಮನಿಸಿ). ಆಹಾರವಾಗಿ ಬಳಸುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಹಲವಾರು ಮಂದಿ ಹಿರಿಯರಿಗೆ ತಮ್ಮ ಬಾಲ್ಯದಲ್ಲಿ ಇದರ ಎಳೆಯ ಕಾಯಿಯನ್ನು ಕೊಯ್ದು ಒಣಗಿಸಿ ಬುಗರಿ ಆಡುತಿದ್ದುದುದರ ನೆನಪು ಇರಬಹುದು.

ಕರಾವಳಿಯುದ್ದಕ್ಕೂ ಅಲ್ಲಲ್ಲಿ ಕಾಣಸಿಗುವ ಈ ಸಸ್ಯಕ್ಕೆ ತುಳುನಾಡಿನಲ್ಲಿ ನಾಯಿ ಕೂಲಿ ಅಥವಾ ನೈಕುಲಿ ಎಂದು ಕರೆಯುತ್ತಾರೆ. ತುಳು ಭಾಷೆಯಲ್ಲಿ ಕೂಲಿ ಎಂದರೆ ಹಲ್ಲು ಎಂದರ್ಥ. ನಾಯಿಯ ಹಲ್ಲಿನಂತೆ ಮೊಣಚಾದ ಹಲ್ಲು (ಮುಳ್ಳು) ಗಳನ್ನು ಹೊಂದಿರುವುದರಿಂದಲೂ, ಇದರ ಎಳೆಯ ಚಿಗುರನ್ನು ಸುಣ್ಣದೊಂದಿಗೆ ತೇದು ನಾಯಿ ಕಡಿತದ ಗಾಯಕ್ಕೆ ಹಚ್ಚುವುದರಿಂದಲೂ ಹಾಗೂ ಇದರ ಬೀಜದ ಎಣ್ಣೆಯೂ ನಾಯಿ ಕಡಿತಕ್ಕೆ ಔಷಧವಾಗಿ ಬಳಕೆಯಾಗುತಿದ್ದುದರಿಂದಲೂ "ನಾಯಿಕೂಲಿ" ಎಂಬ ಹೆಸರು ಅನ್ವರ್ಥವಾಗಿ ಬಂದಿರಬಹುದು. ನೈಕುಲಿ ಕಾಯಿಯ ಎಣ್ಣೆಯನ್ನು ತಲೆಗೆ ಹಚ್ಚಿದರೆ ದೃಷ್ಟಿಯೂ ತೀಕ್ಷ್ಣವಾಗಿ ಹಗಲಲ್ಲೂ ನಕ್ಷತ್ರಗಳನ್ನು ಕಾಣಬಹುದು ಎಂಬ ಮಾತಿದೆ.

ತೆಂಗಿನ ಮರ, ಎಣ್ಣೆಗಳು ಇಲ್ಲದ ಅಥವಾ ದುರ್ಲಭವಾಗಿದ್ದ ಕಾಲದಲ್ಲಿ ಆಗಿನ ಜನರು ನಾಣಿಲ್, ನೈಕುಲಿ, ಹೊನ್ನೆ, ಹೆಬ್ಬಲಸು ಮುಂತಾದ ಮರಗಳ ಬೀಜಗಳಿಂದ ಎಣ್ಣೆ ತೆಗೆದು ಬಳಸುತಿದ್ದರು. ನಾಣಿಲ್ ಮತ್ತು ನೈಕುಲಿಯ ಎಣ್ಣೆಯಲ್ಲಿ ಮಾಡಿದ ದೋಸೆ ಬಹಳ ಪರಿಮಳ ಎನ್ನುವುದು ಹಿರಿಯರ ನೆನಪು.

ಚಿತ್ರದಲ್ಲಿ: ೧. ನೈಕುಲಿಯ ಕಾಯಿಗಳು, ೨. ನೈಕುಲಿಯ ಹೂವು, ೩, ನೈಕುಲಿ ಸಸ್ಯದ ಮುಳ್ಳುಗಳು ೪. ನೈಕುಲಿಯ ಕಾಯಿಯನ್ನು ಕತ್ತರಿಸಿದಾಗ

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ