ನೈಲ್ ಆರ್ಟ ಟು ಮೆನ್ಸ್ ಹಾರ್ಟ್?

ನೈಲ್ ಆರ್ಟ ಟು ಮೆನ್ಸ್ ಹಾರ್ಟ್?

(Picture courtesy from wikipedia: http://en.wikipedia.org/wiki/Nail_art )

 

ಹೃದಯಕ್ಕೆ ಲಗ್ಗೆಯಿಡಲು ನೂರೆಂಟು ತರದ ದಾರಿ, ಏನೇನೊ ರಹದಾರಿ. ಪ್ರೇಮವೊ, ಕೆಳೆಯೊ, ಸಲಿಗೆಯ ಸಾಂಗತ್ಯವೊ - ಎಲ್ಲಕು ಲಗ್ಗೆಯಿಡುವ ದಾರಿಗಳು ನೂರೆಂಟು. ಆ ಕಾಲದಿಂದ ಈ ಕಾಲದವರೆಗೂ ತುಡಿತ, ಮಿಡಿತಗಳೆಲ್ಲ ಒಂದೆ ಆದರೂ ಅದನ್ನು ತೆರೆದಿಟ್ಟು ತೋರಿಸುವ, ಅನಾವರಣ ಮಾಡುವ ಬಗೆ ಮಾತ್ರ ಬದಲಾಗುತ್ತಿರುತ್ತದಷ್ಟೆ. ಯುಗಾಂತರಗಳಿಂದಲು ಸುಂದರವಾಗಿ ಕಾಣುವ ತಪನೆ ಹೆಣ್ಣಿಗೆ ಸದಾ ಇದ್ದದ್ದೆ. ಅದಕ್ಕೆಂದೆ ಏನೆಲ್ಲ ತರಹದ ಅಲಂಕಾರ, ವೆಚ್ಚಗಳನ್ನು ಮಾಡಲು ಸಿದ್ದವಿರದ ಹೆಣ್ಣುಗಳೆ ಕಡಿಮೆಯೆನ್ನಬೇಕು. ಅದರಲ್ಲೂ ಪ್ರಾಯದಲ್ಲಿರುವ ಹೆಣ್ಣುಗಳೆಂದರೆ ಇ ತಪನೆ ಕೊಂಚ ಹೆಚ್ಚೆ ಇರುತ್ತದೆ. ಈ ತಪನೆ ಪ್ರತಿ ಪೀಳಿಗೆಯಲ್ಲೂ ಕಂಡುಬರುವ ಸತ್ಯವಾದರೂ ಅದನ್ನು ಪ್ರತಿ ಪೀಳಿಗೆಯೂ ಅದರ ಅನಾವರಣಕ್ಕೆ ಹೊಸ ಹೊಸ ದಾರಿಗಳನ್ನು, ಕ್ರಿಯಾತ್ಮಕ ಅವಿಷ್ಕಾರಗಳನ್ನು ಸಂಶೋಧಿಸಿಕೊಳ್ಳುತ್ತದೆ. ಕೆಲವು ಮುಂದುವರಿದ ದೇಶಗಳಲ್ಲಿ ಈ ಪ್ರಕ್ರಿಯೆಯ ವೇಗ ಹೆಚ್ಚಿದ್ದರೆ ಮತ್ತೆ ಕೆಲವೆಡೆ ಕಡಿಮೆಯಿರಬಹುದು - ಅಷ್ಟೆ ವ್ಯತ್ಯಾಸ. ಸುಂದರವಾಗಿ ಕಾಣುವಾಸೆ ಒಂದು ಆಯಾಮವಾದರೆ, ತನ್ಮೂಲಕ ಆಕರ್ಷಣೆ ಹುಟ್ಟಿಸಿ ಪುರುಷ ಹೃದಯಕ್ಕೆ ಲಗ್ಗೆ ಇಡುವುದು ಮತ್ತೊಂದು ಆಯಾಮ. ಇವೆರಡೂ ಅಲ್ಲದ 'ಪರ್ಸನಾಲಿಟಿ ಸ್ಟೇಟ್ಮೆಂಟ್' ಗಾಗಿ ನಾನಾ ತರಹದ ಕಸರತ್ತು ಮಾಡುವುದು ಮತ್ತೊಂದು ಆಯಾಮ. ಒಟ್ಟಾರೆ, ಹೊಸತಿನ ಹೆಸರಲ್ಲಿ ಹೊಸ ಪೀಳಿಗೆಗೆ 'ಥ್ರಿಲ್' ಅನ್ನು ಹಳೆ ಕಾಲದವರಿಗೆ ಕೆಲವೊಮ್ಮೆ 'ಶಾಕ್' ಅನ್ನು ಏಕ ಕಾಲದಲ್ಲೆ ಕೊಡಬಲ್ಲ ಶಕ್ತಿ ಇದರದು.

ಈಚೆಗೆ ಗಮನಿಸಿದ ಇಂತಹ ಒಂದು ಟ್ರೆಂಡ್ 'ನೈಲ್ ಆರ್ಟ್ಸ್' ಈ ಕಡೆಗಳಲೆಲ್ಲ ಈಗಾಗಲೆ ಸಾಕಷ್ಟು ಪ್ರಚಲಿತವಾಗಿ ಹೆಂಗಳೆಯರ ವಲಯಗಳಲ್ಲಿ ಸುದ್ದಿಯಲ್ಲಿರುವ ಹೊಸ ಫ್ಯಾಷನ್. ಭಾರತಕ್ಕೂ ಇದು ಕಾಲಿಟ್ಟು ಆಗಿರುವಂತೆ ಕಂಡರೂ ಇನ್ನು ಶೈಶವಾವಸ್ಥೆಯಲ್ಲಿರುವಂತಿದೆ. ಇದರ ಬಗ್ಗೆ ಅಷ್ಟಾಗಿ ಗೊತ್ತಿಲ್ಲದ ಪುರುಷರಿಗಾಗಿ ಒಂದು ಪುಟ್ಟ ಟಿಪ್ಪಣಿ - ಹಿಂದೆ ಸುಂದರ ಉಗುರುಗಳಿಗಾಗಿ ಲಲನೆಯರು ನಖಗಳಿಗೆ ಬಣ್ಣ ಹಚ್ಚುವ ಫ್ಯಾಷನ್ ಬಳಸುತ್ತಿದ್ದರು. ಎಲ್ಲಾ ಬೆರಳುಗಳು ಒಂದೆ ಬಣ್ಣದಲ್ಲಿ ಮಿಂಚುವ ಹಾಗೆ. ಎಷ್ಟೊ ಹೆಂಗಸರು ಇದಕ್ಕಾಗೆ ಉಗುರು ಬೆಳೆಸುತ್ತಿದ್ದುದ್ದು ಉಂಟು. ಉದ್ದ ಉಗುರು ಬೆಳೆಯದ ಹೆಣ್ಣು ಮಕ್ಕಳು ಮುಖ ಚಿಕ್ಕದು ಮಾಡಿಕೊಂಡಿದ್ದು ಉಂಟು. ಆದರೆ ಈಗ ಆ ದಿನಗಳೆಲ್ಲ ಮಾಯ ಬಿಡಿ. ಬಣ್ಣ ಹಚ್ಚಿ ಒಂದೆ ತರದಲ್ಲಿ ತಿಂಗಳಾನುಗಟ್ಟಲೆ ಅದರಲ್ಲೆ ಕೊಳೆಯುವ ಅಗತ್ಯವಿಲ್ಲ.. ಬದಲಿಗೆ ಈ ರೆಡಿಮೇಡ್ 'ನೈಲ್ ಆರ್ಟ್' ಕೊಂಡು ಉಗುರ ಮೇಲೆ ಧರಿಸಿದರೆ ಆಯ್ತು. ಸರಿಯಾದ ಸೈಜು, ಬೇಕಾದ ಆಕಾರ, ರೂಪು, ವಿನ್ಯಾಸ ಕೊಂಡು ಬಳೆ ಉಂಗುರ ತೊಟ್ಟುಕೊಂಡ ಹಾಗೆ ಇದನ್ನು ಧರಿಸಿದರಾಯ್ತು. ಬೇಕೆಂದರೆ ದಿನಕ್ಕೊಂದು ಹೊಸತು ವಿನ್ಯಾಸ ಹಾಕಬಹುದು. ಒಂದೆ ದಿನವೆ, ಒಂದೆ ಸಮಯವೆ ಒಂದೊಂದು ಬೆರಳಿಗೆ ಒಂದೊಂದು ಬಣ್ಣ, ವಿನ್ಯಾಸ, ಉದ್ದ ಧರಿಸಿ ಖುಷಿ ಪಡಬಹುದು. ಘೋಡ ಅಪ್ನಾ, ಮೈದಾನ್ ಅಪ್ನಾ....!

ಈ ಹೊಸತಿನ ಫ್ಯಾಶನ್ ಹೊಸ ವಾಣಿಜ್ಯಾವಕಾಶಗಳನ್ನು ಸೃಷ್ಟಿಸಿರುವಂತಿದೆ. ಹೀಗಾಗಿ ಬರಿಯ ಒಂದು ಬಣ್ಣದ ಕೋಟಿಂಗ್ ಬದಲು ತರ ತರ ವಿನ್ಯಾಸ, ನಮೂನೆಯ ಚಿತ್ತಾರಗಳು ಅರಳತೊಡಗಿವೆ. ಜತೆಗೆ ಕಲಾವಿದರಿಗೆ ತಮ್ಮ ಕಲಾಪ್ರದರ್ಶನ ಮಾಡಿಕೊಳ್ಳಲು ಹೊಸತೊಂದು ಕ್ಯಾನ್ವಾಸ್ ದೊರೆತಂತೆ ಆಗಿದೆ. ಈಗಿನ ಅನುಕೂಲವೆಂದರೆ, ಯಾರ ಬೆರಳುಗಳನ್ನು ಹಿಡಿಯುವ ಹಂಗಿಲ್ಲದೆ ಕೃತಕ ನಖಗಳ ಮೇಲೆ ಯಾವಾಗ ಬೇಕೆಂದರಾವಾಗ ಚಿತ್ರ ಬಿಡಿಸಬಹುದು. ಬಗೆ ಬಗೆಯ ಸೈಜುಗಳಲ್ಲಿ ಬಿಡಿಸಬಹುದು. ಒಂದು ವಿನ್ಯಾಸ ಕೆಟ್ಟಿತೆಂದು ಮುಖ ಸಿಂಡರಿಸದೆ ಮತ್ತೊಂದನ್ನು ಎತ್ತಿಕೊಂಡು ಬಿಡಿಸಿದರಾಯ್ತು. ಇನ್ನು ಕೊಳ್ಳುವ ವನಿತೆಯರಿಗೆ ಬಿಡಿ - ಕಣ್ಣಿಗೆ ಕಂಡ, ಮನಸಿಗೆ ಹಿಡಿಸಿದ ಮಾದರಿಯನ್ನು ಪ್ರಾಯೋಗಿಕವಾಗಿ ಧರಿಸಿ ಹೇಗೆ ಕಾಣುವುದೆಂದು ಚೆನ್ನಾಗಿ ಪರಿಶೀಲಿಸಿ, ಕೊನೆಗೆ ನಿಜಕ್ಕೂ ಹಿಡಿಸಿದ ವಿನ್ಯಾಸಕ್ಕೆ ಶರಣಾಗಬಹುದು. ಮೊದಲಿನ ಹಾಗೆ ನಿರ್ಧರಿಸಿದ ಬಣ್ಣದ ಬಾಟಲು ತಂದು ಬ್ರಷ್ ಹಿಡಿದು ಸಹನೆಯಿಂದ ಅಲುಗಾಡದೆ ಕೂತು ನಾಜುಕಿನಿಂದ ಹಚ್ಚಿಕೊಳ್ಳುವ ಅಗತ್ಯವೂ ಇಲ್ಲ.. ಇಲ್ಲೂ ಕಾಸಿಗೆ ತಕ್ಕಂತಹ ಕಜ್ಜಾಯವೂ ಉಂಟು, ವಯೋಮಾನಕೆ ತಕ್ಕ ವೈವಿಧ್ಯಗಳೂ ಉಂಟು.

ಒಟ್ಟಾರೆ ಒಂದೆಡೆ ವೇಗದ ಜೀವನ ನಾಗಲೋಟದಲ್ಲಿ ಓಡಿಸುತಿದ್ದರೆ, ಅದಕ್ಕೆ ಹೊಂದುವ ರೀತಿಯಲ್ಲಿ ಸೌಲಭಭರಿತ ಸಾಮಾಗ್ರಿಗಳು ಬರುತ್ತಾ ಹೋಗುವುದು ಆಧುನಿಕ ನಾಗರೀಕ ಜೀವನದ ವೈಶಿಷ್ಠ್ಯತೆಯೆಂದೆ ಹೇಳಬಹುದು. ಕಾಲಾಯ ತಸ್ಮೈ ನಮಃ :-)

ಈ ಹೊಸತಿನ ಕುರಿತಾದ ಒಂದು ಕವನ : ನೈಲ್ ಆರ್ಟ ಟು ಮೆನ್ಸ್ ಹಾರ್ಟ್?

ಬೆಂಡೆಯಂತ ಚಿಗುರು
ನೀಳ ನಾಜುಕು ಬೆರಳು
ನಖ ಭಾವ ವರ್ಣದಲೆ ಜೀವ
ಉಗುರಿಗು ಬಂತೆ ಕಲಾ ವೈಭವ? ||

ನಖಶಿಖಾಂತ ನಡುಗಿಸುವ
ನೋಟಗಳೆ ಈಟಿ ಶಿವ
ವಿಲವಿಲನಲ್ಲೆ ಒದ್ದಾಡಿದ
ಬಿಡುಗಡೆಗು ಮುನ್ನವೆ ಬಿದ್ದ ||

ಉದ್ದುದ್ದನೆಯ ಶೂರ್ಪನಖ
ಇರುತಿತ್ತು ಇಲ್ಲಿಯತನಕ
ಒಂದೆ ರೂಪ ಒಂದೆ ಗುಣ
ಹತ್ತು ಬೆರಳು ಸಮವಸ್ತ್ರ ಕಣ ||

ಶೂ ಹಚ್ಚಿದಂತೆ ಪಾಲಿಷು
ಮಿರಮಿರ ಮಿಂಚುವ ಬಿರುಸು
ಅರೆಬರೆ ಕೆರೆದಂತಿದ್ದರು ನಡುವೆ
ಹೊಸ ಬಣ್ಣವ ತುಂಬಿಸುವ ಗೊಡವೆ ||

ಅಯ್ಯಪ್ಪ ಈಗಿನ ಕಥೆ ಹೊಸತು
ಉಗುರಿಗೊಂದು ಬಣ್ಣದ ಸುತ್ತು
ಹತ್ತುಗುರಿಗು ಹತ್ತು ಸಮವಸ್ತ್ರ
ಗಂಡ ಸೆಳೆಯಲು ಹೊಸ ಅಸ್ತ್ರ? ||

ಸಾಲದಕ್ಕೆ ಹೊಸ ಚಿತ್ತಾರ ಗಮ
ಮಿಣಮಿಣ ಮಿಂಚುವ ಸಂಭ್ರಮ
ಅಲ್ಲೆ ಹೂವ್ವು ಹಣ್ಣು ಹೆಣ್ಣು ಕಣ್ಣು
ಒಂದೆ ಉಗುರಿಗು ಎಷ್ಟು ಗೋಣು ||

ಉಗುರಿಗೆ ಶೂ ಹಾಕಿದಂತೆ
ಒಂದರ ಮೇಲೆ ಚಿಟ್ಟೆ ಕೂತಂತೆ
ಮತ್ತೊಂದಕೆ ಮರವೆ ಬೆಳೆದಿದೆ
ಇಲ್ಲೊಂದರ ಮೇಲೆ ಮೀನಿಳಿದಿದೆ ||

ಎಷ್ಟೆಲ್ಲ ತರದ ಚಿತ್ತಾರ ಲೀಲೆ
ಮಾಯೆಯ ಮುಸುಕಿಗಿಟ್ಟ ಬಲೆ
ಉಗುರು ಕಲೆ ಪುರುಷ ಕೊಲೆ
ಕೋಲೆ ಬಸವನ ಹಾಗಾಡಿಸಿ ತಲೆ ||

ನೈಲ್ ಆರ್ಟಿನಿಂದ ಮೆನ್ಸ್ ಹಾರ್ಟಿಗೆ
ರಹದಾರಿಯೆ ಈ ಕಲಾ ಸೊಬಗೆ
ಮೆಚ್ಚಿದವರು ಜತೆ ಮೆಚ್ಚದವರು
ಒಮ್ಮೆಗಾದರು ಕಣ್ಹಾಯಿಸದಿಹರು ||

--------------------------------------------
ನಾಗೇಶ ಮೈಸೂರು, ಸಿಂಗಪುರ
--------------------------------------------

 

Comments

Submitted by nageshamysore Wed, 03/12/2014 - 03:01

In reply to by naveengkn

ನಮಸ್ಕಾರ ನವೀನ್, ಇತ್ತೀಚೆಗೆ ತಾನೆ ಸರಿದು ಹೋದ ವಿಶ್ವ ಮಹಿಳಾ ದಿನಕ್ಕೆ ವನಿತೆಯರದೆ ವಸ್ತುವಿರಬೇಕೆಂಬ ಸಾಂಕೇತಿಕ ದೃಷ್ತಿಕೋನದಿಂದ ಮೂಡಿದ ಬರಹ. ನಿರ್ಜೀವವಾಗಿದ್ದೂ ಬೆಳೆಯುವ ಈ ನಖಗಳು ಅತ್ಮರಕ್ಷಣೆಯ ಸಾಧನ, ಸೌಂದರ್ಯ ಪ್ರದರ್ಶನ ಎರಡಕ್ಕೂ 'ಸೈ' ಎನ್ನುವ ವಿಶಿಷ್ಠ ಗುಂಪಿಗೆ ಸೇರಿದ ಲಲಿತಾಂಗಿಯರ ವಿಶೇಷಾಸ್ತ್ರವಲ್ಲವೆ? ಧನ್ಯವಾದಗಳು :-)