ನೈಸರ್ಗಿಕ ಅನಿಲ ಹೊಸ ತಂತ್ರಜ್ಞಾನ
ಇವತ್ತು ದೊಡ್ಡ ದೊಡ್ಡ ನಗರಗಳಲ್ಲಿ ಜೈವಿಕ ತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ವಿಲೇವಾರಿಯೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಜೈವಿಕ ತ್ಯಾಜ್ಯ ಅತ್ಯಂತ ವೇಗವಾಗಿ ಕೊಳೆತು, ನೈಸರ್ಗಿಕ ಅನಿಲವನ್ನು ಉತ್ಪಾದಿಸುವ ಎರಡು ಹೊಸ ಬ್ಯಾಕ್ಟೀರಿಯಾಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ಎರಡು ಹಂತಗಳಲ್ಲಿ ಬ್ಯಾಕ್ಟೀರಿಯಾಗಳಿಂದ ರಾಸಾಯನಿಕ ಕ್ರಿಯೆ ನಡೆದು ಅತ್ಯಂತ ವೇಗವಾಗಿ ನೈಸರ್ಗಿಕ ಅನಿಲ ಬಿಡುಗಡೆಯಾಗುವ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನದಲ್ಲಿ ಸುಮಾರು ೩ ಟನ್ ಆಹಾರ ತ್ಯಾಜ್ಯದಿಂದ ೨೫ ಮನೆಗಳಿಗೆ ಒಂದು ದಿನಕ್ಕೆ ಬೇಕಾಗುವ ‘ಶಕ್ತಿ'ಯನ್ನು ಉತ್ಪಾದಿಸಬಹುದು !
‘ಒಬ್ಬರ ಪಾಲಿನ ಕಸ, ಇನ್ನೊಬ್ಬರಿಗೆ ರಸ' ಎನ್ನುವಂತೆ ಇಂದು ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಯಾರಿಗೂ ಬೇಡವಾದ ಆಹಾರ ತ್ಯಾಜ್ಯದಿಂದ ವಿದ್ಯುತ್ತನ್ನು ಉತ್ಪಾದಿಸುವ ಯಂತ್ರವನ್ನು ಕಂಡುಹಿಡಿದಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ಮನೆಯ ತ್ಯಾಜ್ಯ ಬಳಸಿ ನಿಮಗೆ ಬೇಕಾದ ವಿದ್ಯುತ್ತನ್ನು ನೀವೇ ತಯಾರಿಸಿಕೊಳ್ಳಬಹುದು.
ಹೊಸ ತಂತ್ರಜ್ಞಾನ: ಜೈವಿಕ ತ್ಯಾಜ್ಯಗಳಿಂದ ಅನಿಲವನ್ನು ಉತ್ಪಾದಿಸುವ ವಿಧಾನ ಹೊಸದೇನಲ್ಲ. ಆದರೆ ಈ ವಿಧಾನವನ್ನು ಈಗ ನವೀಕರಿಸಲಾಗಿದೆ. ಹಳೆಯ ವಿಧಾನದಲ್ಲಿ ಎಲ್ಲಾ ಜೈವಿಕ ತ್ಯಾಜ್ಯ ವಸ್ತುಗಳನ್ನೂ ಒಂದೇ ಹೊಂಡದಲ್ಲಿ ಹಾಕಿ, ಎರಡೂ ಬಗೆಯ ಬ್ಯಾಕ್ಟೀರಿಯಾಗಳು ಅದೇ ಟ್ಯಾಂಕ್ ನಲ್ಲಿ ಜೈವಿಕ ವಸ್ತುವನ್ನು ಕೊಳೆಯುವಂತೆ ಮಾಡಿ ನೈಸರ್ಗಿಕ ಅನಿಲವನ್ನು ಬಿಡುಗಡೆ ಮಾಡುತ್ತವೆ. ಹೀಗೆ ಬಿಡುಗಡೆಯಾದ ನೈಸರ್ಗಿಕ ಅನಿಲ ತುಂಬಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಈಗಿನ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನದಲ್ಲಿ ಎರಡು ಬೇರೆ ಬೇರೆ ಟ್ಯಾಂಕ್ ಗಳಲ್ಲಿ ಬೇರೆ ಬೇರೆಯಾದ ಎರಡು ವಿಭಿನ್ನ ಬ್ಯಾಕ್ಟೀರಿಯಾಗಳನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲಾಗುತ್ತದೆ. ಇದರಿಂದ ನೈಸರ್ಗಿಕ ಅನಿಲದ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ. ಈ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವನ್ನು “ಪುಟ್ಟ ಬಾಲಕನೊಬ್ಬ ಪ್ರೌಢನಾದಂತೆ" ಎಂದು ವಿಜ್ಞಾನಿಗಳು ಉದ್ಗರಿಸಿದ್ದಾರೆ.
ಭವಿಷ್ಯದ ಶಕ್ತಿಯ ಮೂಲ: ಸಣ್ಣ ಪ್ರಮಾಣದಲ್ಲಿ ನಡೆಸಿದ ಈ ಸಂಶೋಧನೆಯಲ್ಲಿ ಮೂರು ಟನ್ ತ್ಯಾಜ್ಯದಿಂದ ೨೫ ಮನೆಗಳಿಗೆ ಒಂದು ದಿನಕ್ಕಾಗುವಷ್ಟು ಶಕ್ತಿಯನ್ನು ಉತ್ಪಾದಿಸಿದರೂ ಇದರ ಮುಂದಿನ ಗುರಿ ಇಡೀ ದೊಡ್ಡ ನಗರಕ್ಕೆ ಬೇಕಾಗುವ ಒಟ್ಟು ಶಕ್ತಿಯ ಉತ್ಪಾದನೆಯೇ ಆಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಈ ರೀತಿ ಶಕ್ತಿಯ ಉತ್ಪಾದನೆಯ ತಂತ್ರಜ್ಞಾನವನ್ನು ಕ್ಯಾಲಿಫೋರ್ನಿಯಾ, ವಿಸ್ಕಾನ್ಸಿನ್ ಹಾಗೂ ಮಿನ್ನಿಸೋಟಾದಂತಹ ದೊಡ್ದ ನಗರಗಳಲ್ಲಿ ಬಳಸಲು ಯೋಚನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ರೀತಿಯ ಶಕ್ತಿಯ ಉತ್ಪಾದನೆ ಪೆಟ್ರೋಲಿಯಂಗೆ ಒಂದು ಪರ್ಯಾಯ ಶಕ್ತಿಯ ಮೂಲವಾಗಬಹುದು. ಇದೊಂದು ಕೈಗಾರಿಕೆಗಳಿಗೆ ಪರಿಸರಕ್ಕೆ ಹಾಗೂ ಬಳಕೆದಾರರಿಗೆ ಅತ್ಯಂತ ಹರ್ಷ ತರುವ ಸುದ್ದಿಯಾಗಿದೆ.
ಸಂಶೋಧನೆಯ ಹಿನ್ನಲೆ: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ತಂತ್ರಜ್ಞರು, ಆಮ್ಲಜನಕವಿಲ್ಲದೆ ಬೆಳೆದು ಜೈವಿಕ ತ್ಯಾಜ್ಯವನ್ನು ಕೊಳೆಯುವಂತೆ ಮಾಡುವ ಸೂಕ್ಸ್ಮಾಣು ಜೀವಿ ಬ್ಯಾಕ್ಟೀರಿಯಾಗಳನ್ನು ಈ ತಂತ್ರಜ್ಞಾನದಲ್ಲಿ ಬಳಸಿಕೊಂಡಿದ್ದಾರೆ. ಈ ಬ್ಯಾಕ್ಟೀರಿಯಾಗಳು ಯಾವುದೇ ಘನ ಜೈವಿಕ ತ್ಯಾಜ್ಯವನ್ನು ವಿದ್ಯುತ್ತನ್ನಾಗಿ ಪರಿವರ್ತಿಸುತ್ತವೆ. ಅನೇಕ ದೊಡ್ದ ನಗರಗಳಲ್ಲಿರುವ ದೊಡ್ದ ದೊಡ್ದ ಹೋಟೇಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಅಪಾರ ಪ್ರಮಾಣದ ಜೈವಿಕ ತ್ಯಾಜ್ಯ ವಿಲೇವಾರಿಯಾಗುತ್ತದೆ. ಈ ಎಲ್ಲ ತ್ಯಾಜ್ಯಗಳನ್ನು ಈ ಹೊಸ ತಂತ್ರಜ್ಞಾನವನ್ನು ಬಳಸಿ ವಿದ್ಯುತ್ ಉತ್ಪಾದಿಸಿದರೆ ಅದು ಇಡೀ ನಗರದ ವಿದ್ಯುತ್ ಅವಶ್ಯಕತೆಯನ್ನು ಪೂರೈಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕೆಲಸ ಮಾಡುವ ರೀತಿ: ಈ ವಿಧಾನದಲ್ಲಿ ನಗರಗಳಲ್ಲಿ ಸಂಗ್ರಹಿಸಿದ ಜೈವಿಕ ತ್ಯಾಜ್ಯಗಳನ್ನು ಕಡಿಮೆ ಆಮ್ಲಜನಕವಿರುವ ಟ್ಯಾಂಕ್ ಗಳಲ್ಲಿ ಸಂಗ್ರಹಿಸಿ ಈ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುವಂತೆ ನೋಡಿಕೊಳ್ಳಲಾಗುತ್ತದೆ. ಇದನ್ನೇ “ಅನೆರೋಬಿಕ್ ಜೀರ್ಣಕ್ರಿಯೆ" ಎಂದು ಕರೆಯುತ್ತಾರೆ. ಇದರಿಂದ ಜೈವಿಕ ಆಹಾರ ಬಹುಬೇಗ ವಿಭಜನೆಗೊಂಡು ನೈಸರ್ಗಿಕ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾಗಳು ಕಾರ್ಬೋಹೈಡ್ರೇಟ್ ಗಳನ್ನು ಸರಳವಾದ ಸಕ್ಕರೆ, ಅಮೈನೋ ಆಮ್ಲ ಹಾಗೂ ಕೊಬ್ಬುಗಳನ್ನಾಗಿ ಪರಿವರ್ತಿಸುತ್ತವೆ. ಎರಡನೇ ಟ್ಯಾಂಕ್ ಗಳಲ್ಲಿರುವ ಇನ್ನೊಂದು ರೀತಿಯ ಬ್ಯಾಕ್ಟೀರಿಯಾಗಳು ಇವುಗಳನ್ನು ಜಲಜನಕ ಅನಿಲ, ಇಂಗಾಲದ ಡೈ ಆಕ್ಸೈಡ್ ಮತ್ತು ಅಸಿಟಿಕ್ ಆಸಿಡ್ ಗಳಾಗಿ ಪರಿವರ್ತಿಸುತ್ತವೆ. ಈ ವಸ್ತುಗಳಿಂದ ಆಲ್ಕೋಹಾಲ್ ಬಿಡುಗಡೆಯಾಗುತ್ತದೆ. ಮೂರನೇ ಹಂತದಲ್ಲಿ ಇನ್ನೊಂದು ಬಗೆಯ ಬ್ಯಾಕ್ಟೀರಿಯಾಗಳು ಈ ವಸ್ತುಗಳನ್ನು ಸಂಯೋಜನೆಗೊಳಿಸಿ ಮೀಥೇನ್ ಮತ್ತು ಇಂಗಾಲದ ಡೈಆಕ್ಷೈಡ್ ಗಳನ್ನು ಬಿಡುಗಡೆ ಮಾಡುತ್ತವೆ. ಈ ಪ್ರಕ್ರಿಯೆಯಲ್ಲಿ ಶೇಕಡಾ ೬೦ ರಿಂದ ೮೦ ರಷ್ಟು ಮಿಥೇನ್ ಉತ್ಪಾದಿಸಲ್ಪಡುತ್ತದೆ. ಇದೇ ನಮಗೆ ಬೇಕಾದ ಶಕ್ತಿಯ ಮೂಲ ಇಂಧನ “ನೈಸರ್ಗಿಕ ಅನಿಲ" ಈ ರೀತಿ ಉತ್ಪಾದಿಸಿದ ಮೀಥೇನ್ ಅನಿಲದಿಂದ ಉಷ್ಣ ಎಂಜಿನ್ ಗಳನ್ನು ಬಳಸಿ ಬೇಕಾಗುವ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ.
ನಗರಗಳ ಭವಿಷ್ಯದ ಇಂಧನ: ಇಂದು ನವೀಕರಿಸಬಹುದಾದ ಶಕ್ತಿಯ ಮೂಲಗಳಾದ ಗಾಳಿ, ಸೌರಶಕ್ತಿ ಮತ್ತು ಜೈವಿಕ ತ್ಯಾಜ್ಯಗಳಿಂದ ಶೇಕಡ ೨೦ರಷ್ಟು (ಶೇ ೧೦೦ರಷ್ಟು ಅವಶ್ಯಕತೆಯಲ್ಲಿ) ಉತ್ಪಾದನೆಯ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಒಂದು ಟನ್ ಜೈವಿಕ ತ್ಯಾಜ್ಯದಿಂದ ೧೮ ಮನೆಗಳಿಗೆ ಒಂದು ದಿನಕ್ಕೆ ಬೇಕಾಗುವ ವಿದ್ಯುತ್ತನ್ನು ಉತ್ಪಾದಿಸಲು ಸಾಧ್ಯವಾಗಿದೆ.
ಇಂದು ಅಗಾಧವಾಗಿ ಬೆಳೆಯುತ್ತಿರುವ ಬೆಂಗಳೂರಿನಂತಹ ನಗರಗಳಲ್ಲಿ ಅಪಾರವಾದ ಜೈವಿಕ ತ್ಯಾಜ್ಯ ಬಿಡುಗಡೆಯಾಗುತ್ತಿದೆ. ಇದರ ನಿರ್ವಹಣೆ ಮತ್ತು ವಿಲೇವಾರಿ ಮಹಾನಗರ ಪಾಲಿಕೆಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇಂತಹ ಕಸವನ್ನು ಬಳಸಿ ಮೇಲಿನ ತಂತ್ರಜ್ಞಾನದಿಂದ ವಿದ್ಯುತ್ ಅನ್ನು ಉತ್ಪಾದಿಸಿದರೆ ಬೆಂಗಳೂರು ನಗರಕ್ಕೆ ಬೇಕಾಗುವ ಒಟ್ಟು ವಿದ್ಯುತ್ ನಲ್ಲಿ ಶೇಕಡ ೧೦ ರಿಂದ ೨೦ರಷ್ಟು ವಿದ್ಯುತ್ ಅನ್ನು ಉತ್ಪಾದಿಸಿ ಶಕ್ತಿಯ ಕೊರತೆಯನ್ನು ನೀಗಿಸಬಹುದು.
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ