ನೈಸರ್ಗಿಕ ಸಹಜ ಕೃಷಿಯ ಸ್ವ-ಅನುಭವದ ರಸ ಸಾರ


ನಾವು ನಮ್ಮ ಭೂಮಿಗೆ ರಾಸಾಯನಿಕ ಗೊಬ್ಬರಗಳನ್ನು ಸುರಿದೂ ಸುರಿದು ಅದರ ಸಾರವನ್ನು ಹಾಳು ಮಾಡಿದ್ದೇವೆ. ರೈತ ಮಿತ್ರರಾದ ಎರೆಹುಳುಗಳ ಸಂಖ್ಯೆ ಕ್ಷೀಣಿಸಿದೆ. ಕೀಟನಾಶಕಗಳನ್ನು ಸಿಂಪಡಿಸಿ ತಿನ್ನುವ ಆಹಾರವನ್ನೂ ವಿಷಯುಕ್ತ ಮಾಡಿದ್ದೇವೆ. ಬೆಳೆಯುತ್ತಿರುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಮ್ಮಿಯಾಗುತ್ತಿದೆ. ಹೀಗೇ ಮುಂದುವರೆದರೆ ನಮ್ಮ ಭೂಮಿ, ನಮ್ಮ ಭವಿಷ್ಯ ಅಂಧಕಾರದಲ್ಲಿ ಬೀಳುವುದು ನೂರು ಶೇಕಡಾ ಸತ್ಯ. ಹಾಗಾದರೆ ಇದಕ್ಕೆ ಪರಿಹಾರವೇನು? ನೈಸರ್ಗಿಕ ಕೃಷಿಯೇ ಇದಕ್ಕೆ ಇರುವ ಪರಿಹಾರವೆನ್ನುತ್ತಾರೆ ಹಲವಾರು ಮಂದಿ.
ನೈಸರ್ಗಿಕ ಕೃಷಿಯ ಕುರಿತಾದ ಒಂದು ಸಮಾವೇಶ ಗುಜರಾತ್ ರಾಜ್ಯದಲ್ಲಿ ಇತ್ತೀಚೆಗೆ (೧೬ ಡಿಸೆಂಬರ್, ೨೦೨೧) ಜರುಗಿತು. ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಷಾ, ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಪಟೇಲ್ ಮುಂತಾದವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿದ್ದ ಈ ಸಮಾವೇಶದಲ್ಲಿ ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವೃತ ಅವರು ನೈಸರ್ಗಿಕ ಕೃಷಿಯ ಬಗ್ಗೆ ತಮ್ಮ ಸ್ವಂತ ಅನುಭವವನ್ನು ತೆರೆದಿಟ್ಟರು. ತಮ್ಮ ಸ್ವಂತ ಕೃಷಿ ಅನುಭವ, ರಾಸಾಯನಿಕ ಬಿಟ್ಟು ಸಾವಯವ ಕೃಷಿಯತ್ತ ಹೊರಳಿದ ಬಗ್ಗೆ ಅವರ ಮಾತುಗಳಲ್ಲೇ ಕೇಳುವ…
ನಾನು ಮೊದಲಿಗೆ ದೇಶದ ಲಕ್ಷಾಂತರ ಕೃಷಿಕ ಮಿತ್ರರಿಗೆ ನಮಿಸಿ, ನನ್ನ ಮಾತುಗಳನ್ನು ಪ್ರಾರಂಭಿಸಲು ಇಚ್ಛಿಸುತ್ತೇನೆ. ಇತ್ತೀಚೆಗೆ ಡಿಸೆಂಬರ್ ೧೩ ರಂದು ಕಾಶಿ ವಿಶ್ವನಾಥ ಮಂದಿರದ ಪುನಃ ನಿರ್ಮಾಣದ ಉದ್ಘಾಟನಾ ಸಮಾರಂಭದಂದು ನಮ್ಮ ಪ್ರಧಾನಿಯವರು ದೇಶದ ಜನತೆಯಲ್ಲಿ ಮೂರು ಸಂಗತಿಗಳನ್ನು ಕೇಳಿಕೊಂಡಿದ್ದರು. ಮೊದಲನೆಯದ್ದು ಸ್ವಚ್ಛತೆ, ಎರಡನೆಯದ್ದು ಸೃಜನ ಶೀಲತೆ ಹಾಗೂ ಮೂರನೆಯದ್ದು ಆತ್ಮನಿರ್ಭರ ಭಾರತ. ಈ ಮಾತುಗಳಿಗಾಗಿ ನಾನು ನಮ್ಮ ಪ್ರಧಾನ ಮಂತ್ರಿಯವರಿಗೆ ಕೃಷಿಕರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ. ಪ್ರಧಾನ ಮಂತ್ರಿಯವರು ನಮ್ಮ ಜೊತೆ ಈಗಾಗಲೇ ಹಂಚಿಕೊಂಡ ನೈಸರ್ಗಿಕ ಕೃಷಿ ಅಥವಾ ಸಾವಯವ ಸಹಜ ಕೃಷಿಯ ಅಳವಡಿಕೆಯ ಬಗ್ಗೆ ನಾವೆಲ್ಲಾ ಗಂಭೀರವಾಗಿ ಚಿಂತನೆ ಹಾಗೂ ಸಂಕಲ್ಪ ಮಾಡಲೇಬೇಕಾಗಿದೆ.
ನಾನು ಒಬ್ಬ ಶಿಕ್ಷಕ ಹಾಗೂ ಕೃಷಿಕನಾಗಿರುವುದರಿಂದ ನನಗೆ ನಮ್ಮ ದೇಶದ ರೈತರ ಸಮಸ್ಯೆ ಚೆನ್ನಾಗಿ ಅರ್ಥವಾಗುತ್ತದೆ. ನಾನು ಸಣ್ಣವನಿದ್ದಾಗ ಹೊಲದಲ್ಲಿ ನೇಗಿಲು ಹಿಡಿದು ದುಡಿದ ನೆನಪು ನನ್ನಲ್ಲಿ ಇನ್ನೂ ಹಸಿರಾಗಿದೆ. ದನ, ಎಮ್ಮೆಗಳನ್ನು ಸಾಕಿ ಹೈನುಗಾರಿಕೆಯನ್ನೂ ಮಾಡಿದ್ದೇನೆ. ಕೃಷಿ ಮಾಡುವ ಹುಮ್ಮಸ್ಸು ನನಗೆ ಆಗಲೂ ಇತ್ತು ಈಗಲೂ ಇದೆ. ಕೃಷಿಯಲ್ಲಿ ನಾನು ಕಂಡುಕೊಂಡ ಒಂದಷ್ಟು ಅನುಭವಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲು ನನಗೆ ಬಹಳ ಆನಂದವಾಗುತ್ತಿದೆ. ನನ್ನ ಹೊಲದಲ್ಲಿರುವ ವಿಷಯವೇ ಭಾರತದಾದ್ಯಂತ ಇರುವ ಎಲ್ಲಾ ಹೊಲಗಳಲ್ಲಿದೆ. ಆದುದರಿಂದ ನಾನು ಹೇಳುವ ವಿಷಯ ಬಹಳಷ್ಟು ಮಂದಿಗೆ ಪ್ರಯೋಜನಕಾರಿಯಾದೀತು. ಇದರಿಂದಾಗಿ ಕೆಲವು ಮಂದಿ ಕೃಷಿಕರಾದರೂ ರಾಸಾಯನಿಕದ ಬಳಕೆಯಿಂದ ಹೊರಬಂದು ನೈಸರ್ಗಿಕ ಕೃಷಿಯತ್ತ ಒಲವು ತೋರಿಸಲಿ ಎಂಬುದೇ ನನ್ನ ಆಶಯ.
ಹರಿಯಾಣದ ನಮ್ಮ ಗುರುಕುಲ ಕುರುಕ್ಷೇತ್ರ ವಿದ್ಯಾಸಂಸ್ಥೆಯಲ್ಲಿ ನಾನು ೩೫ ವರ್ಷ ಪ್ರಧಾನ ಆಚಾರ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಆ ಸಮಯ ಸುಮಾರು ಒಂದು ಸಾವಿರದ ಐದು ನೂರು ಮಕ್ಕಳಿಗೆ ಆಹಾರ (ಊಟ) ನೀಡುವ ಜವಾಬ್ದಾರಿಯಿತ್ತು. ಅದಕ್ಕಾಗಿ ನಮ್ಮ ೨೦೦ ಎಕರೆ ಭೂಮಿಯನ್ನು ಬಳಸಲಾಗುತ್ತಿತ್ತು. ಈ ೨೦೦ ಎಕರೆಯಲ್ಲಿ ೯೦ ಎಕರೆಯ ಜವಾಬ್ದಾರಿಯನ್ನು ನಾವು ನೋಡಿಕೊಳ್ಳುತ್ತಿದ್ದೆವು. ಉಳಿದ ಜಾಗವನ್ನು ನಾವು ಹತ್ತಿರದ ಕೃಷಿಕರಿಗೆ ಒಪ್ಪಂದದ (ಲೀಸ್) ಆಧಾರದಲ್ಲಿ ನೀಡಿದ್ದೆವು. ನಮ್ಮ ೯೦ ಎಕರೆ ಜಮೀನಿನಲ್ಲಿ ಗೋಧಿ, ಭತ್ತ, ಧಾನ್ಯ, ತರಕಾರಿಗಳನ್ನು ಬೆಳೆದು ಮಕ್ಕಳ ಉಟೋಪಚಾರಕ್ಕೆ ಬಳಸಲಾಗುತ್ತಿತ್ತು. ಒಂದು ದಿನ ನಡೆದ ಘಟನೆ ನನ್ನ ಕೃಷಿ ಜೀವನವನ್ನೇ ಬದಲಾಯಿಸಿತು.
ಆ ದಿನ ನಮ್ಮ ಜಮೀನಿನಲ್ಲಿ ಕೀಟನಾಶಕ ಸಿಂಪಡನೆ ನಡೆಯುತ್ತಿತ್ತು. ಹೀಗೆ ಸಿಂಪರಣೆ ಮಾಡುತ್ತಿದ್ದ ಓರ್ವ ವ್ಯಕ್ತಿ ಈ ಕೀಟನಾಶಕದ ಪ್ರಭಾವಕ್ಕೆ ಒಳಗಾಗಿ ತಲೆ ಸುತ್ತು ಬಂದು ಬಿದ್ದು ಬಿಟ್ಟಿದ್ದ. ಅವನನ್ನು ಆಸ್ಪತ್ರೆಗೆ ದಾಖಲು ಮಾಡಿ ಮೂರು ನಾಲ್ಕು ದಿನಗಳ ನಂತರ ಚೇತರಿಸಿಕೊಂಡ. ನಾನು ಈ ಘಟನೆಯ ಬಗ್ಗೆ ಆಲೋಚನೆ ಮಾಡಿದೆ. ಒಂದು ದಿನದ ಕೀಟನಾಶಕ ಸಿಂಪರಣೆಯ ಪ್ರಭಾವದಿಂದ ಒಬ್ಬ ಅಸ್ವಸ್ಥನಾದ. ಅದೇ ನಾವು ಹಾಗೂ ನಮ್ಮ ಮಕ್ಕಳು ನಿರಂತರವಾಗಿ ಇದೇ ಕೀಟನಾಶಕವನ್ನು ಸಿಂಪಡಿಸಿದ ಆಹಾರ ವಸ್ತುಗಳನ್ನು (ಅಕ್ಕಿ, ಗೋಧಿ, ಧಾನ್ಯಗಳು, ತರಕಾರಿ, ಹಣ್ಣುಗಳು ಇತ್ಯಾದಿ) ವರ್ಷವಿಡೀ ತಿಂದು ಅದೆಷ್ಟು ಅನಾರೋಗ್ಯ ಪೀಡಿತರಾಗಿರಬಹುದು. ಭವಿಷ್ಯದಲ್ಲಿ ಇನ್ನೆಷ್ಟು ಕಷ್ಟಗಳು ಬಂದಾವು? . ಇದನ್ನು ಯೋಚನೆ ಮಾಡಿದ ನಾನು ನನ್ನ ಸಮೀಪದ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಗಳ ವಿಜ್ಞಾನಿಗಳನ್ನು ಸಂಪರ್ಕಿಸಿದೆ. ಅವರು ನೈಸರ್ಗಿಕ ಕೃಷಿ ಅಥವಾ ಸಾವಯವ ಕೃಷಿ ಮಾಡುವಂತೆ ನನಗೆ ಸಲಹೆ ನೀಡಿದರು.
ನಾನು ಕೂಡಲೇ ನನ್ನ ಹೊಲಕ್ಕೆ ಬಂದು ಮಣ್ಣನ್ನು ಪರೀಕ್ಷಿಸಿ, ಸಾವಯವ ಕೃಷಿ ಮಾಡುವತ್ತ ಗಮನ ಹರಿಸಿದೆ. ಮಣ್ಣಿನಲ್ಲಿ ಎರೆಹುಳುಗಳ ಸಂಖ್ಯೆಗಳನ್ನು ವೃದ್ಧಿಸುವ ಬಗ್ಗೆ ಯೋಜನೆಗಳನ್ನು ಹಾಕಿಕೊಂಡೆ. ಮೊದಲ ವರ್ಷ ನಾನು ಐದು ಎಕರೆ ಹೊಲದಲ್ಲಿ ಸಾವಯವ ಕೃಷಿ ಪ್ರಯೋಗ ಮಾಡಿದೆ. ಆ ವರ್ಷ ನನಗೆ ಏನೂ ಉತ್ಪತ್ತಿ ಬರಲಿಲ್ಲ. ಮುಂದಿನ ವರ್ಷ ೫೦ ಶೇಕಡಾ ಉತ್ಪತ್ತಿಯಾಯಿತು. ಮೂರನೇ ವರ್ಷ ೮೦ ಶೇಕಡಾ ಉತ್ಪಾದನೆಯಾಯಿತು. ನಾನು ಯೋಚಿಸಿದೆ. ನಾನಾದರೆ ದೊಡ್ದ ಕೃಷಿಕ, ಈ ಹಿಂದಿನ ಎರಡು ವರ್ಷಗಳ ನಷ್ಟವನ್ನು ಸಹಿಸಿಕೊಳ್ಳಬಲ್ಲೆ. ಆದರೆ ಸಣ್ಣ ಕೃಷಿಕರು ಹೇಗೆ ಈ ನಷ್ಟವನ್ನು ಭರಿಸಬಲ್ಲರು? ಈ ಕೃಷಿ ಪದ್ಧತಿಯಿಂದಾಗಿ ನನ್ನ ಖರ್ಚು ವೆಚ್ಚಗಳೂ ಅಧಿಕವಾದವು, ಉತ್ಪಾದನೆ ಕುಸಿತವಾಯಿತು. ಸಾವಯವ ಕೃಷಿಯತ್ತ ಹೊರಳಲು ಬಯಸಿದ್ದ ನನಗೆ ಇದರಿಂದ ಚಿಂತೆಗಳು ಹೆಚ್ಚಾದವು.
ಅದೇ ಸಮಯ ನನಗೆ ‘ಶೂನ್ಯ ಬಂಡವಾಳ' ಕೃಷಿ ತಜ್ಞ ಸುಭಾಷ್ ಪಾಳೇಕರ್ ಅವರ ಸಂಪರ್ಕವಾಯಿತು. ಅವರಿಂದ ನಾನು ಸಹಜವಾದ ನೈಸರ್ಗಿಕ ಕೃಷಿಯನ್ನು ಪರಿಣಾಮಕಾರಿಯಾಗಿ ಹೇಗೆ ಪ್ರಯೋಗಿಸಬಹುದು ಎಂಬುದಾಗಿ ಕಲಿತುಕೊಂಡೆ. ಐದು ದಿನ ಕಾಲ ಅವರ ಕೃಷಿ ಪ್ರಯೋಗಗಳ ಬಗ್ಗೆ ಶಿಬಿರವನ್ನು ಏರ್ಪಡಿಸಿ ಅವರಿಂದ ಬಹಳಷ್ಟು ಕಲಿತುಕೊಂಡೆ. ಕೂಡಲೇ ನಾನು ಸುಭಾಷ್ ಪಾಳೇಕರ್ ಅವರ ಕೃಷಿ ಕ್ರಮವನ್ನು ನನ್ನ ಜಮೀನಿನಲ್ಲಿ ಅಳವಡಿಸಿದೆ. ಆ ವರ್ಷದ ಫಲಿತಾಂಶ ಬಹಳ ಆಶ್ಚರ್ಯಕರವಾಗಿತ್ತು. ನಾನು ರಾಸಾಯನಿಕ ಬಳಸಿ ಮಾಡುತ್ತಿದ್ದಷ್ಟೇ ಇಳುವರಿ ನೈಸರ್ಗಿಕ ಕೃಷಿಯಲ್ಲೂ ಬಂದಿತ್ತು. ಮುಂದಿನ ವರ್ಷ ಅದಕ್ಕಿಂತಲೂ ಅಧಿಕ ಇಳುವರಿ ಬಂತು. ನಾನು ಹತ್ತು ಎಕರೆಗೆ ನನ್ನ ಕೃಷಿಯನ್ನು ವಿಸ್ತರಿಸಿದೆ. ಹೀಗೇ ಮುಂದುವರೆಸಿ ನನ್ನ ಪಾಲಿನ ೯೦ ಎಕರೆ ಜಮೀನಿನಲ್ಲಿ ನೈಸರ್ಗಿಕ ಕೃಷಿ ಬಳಕೆ ಪ್ರಾರಂಭಿಸಿದೆ. ಇಳುವರಿಯೂ ಅಧಿಕವಾಗತೊಡಗಿತು.
ಇದೇ ಸಮಯದಲ್ಲಿ ಇನ್ನೊಂದು ಘಟನೆ ನನಗಾಯಿತು. ನಾನು ಲೀಸ್ ಆಧಾರದಲ್ಲಿ ನೀಡಿದ್ದ ೧೧೦ ಎಕರೆ ಜಮೀನಿನ ಸಾಗುವಳಿದಾರರು ಆ ಭೂಮಿಯಲ್ಲಿ ಏನೂ ಬೆಳೆಯಲು ಸಾಧ್ಯವಿಲ್ಲ, ಅದು ಬಂಜರು ಭೂಮಿಯಾಗಿದೆ ಎಂದು ಕಾರಣ ಹೇಳಿ ಒಪ್ಪಂದವನ್ನು ಕೊನೆಗೊಳಿಸಿದರು. ನನ್ನ ಚಿಂತೆ ಇನ್ನಷ್ಟು ಅಧಿಕವಾಯಿತು. ನಾನು ಅವರಿಗೆ ಭೂಮಿ ಹಸ್ತಾಂತರ ಮಾಡುವಾಗ ಅದರಲ್ಲಿ ಉತ್ತಮ ಬೆಳೆ ಬರುತ್ತಿತ್ತು. ಹಲವಾರು ವರ್ಷಗಳ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಭೂಮಿ ಬಂಜರಾಗಿ ಹೋಗಿತ್ತು. ನಾನು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಹರಿ ಓಂ ರವರನ್ನು ಸಂಪರ್ಕಿಸಿದಾಗ ಅವರು ಆ ಭೂಮಿಯ ಮಣ್ಣು ಪರೀಕ್ಷೆ ಮಾಡಿ ನೋಡುವ ಎಂದು ತಿಳಿಸಿದರು. ಹಲವಾರು ಮಣ್ಣಿನ ಮಾದರಿಗಳನ್ನು ಪರಿಶೀಲಿಸಿದ ಬಳಿಕ ಅವರು ಹೇಳಿದರು ಮಣ್ಣಿನಲ್ಲಿ ಇಂಗಾಲ ಹಾಗೂ ಇನ್ನಿತರ ಪೋಷಕಾಂಶಗಳು ಕಮ್ಮಿಯಾಗಿವೆ. ನಿರಂತರ ಯೂರಿಯಾ ಬಳಕೆಯಿಂದ ಭೂಮಿ ಬಂಜರಾಗಿದೆ ಎನ್ನುವ ಮಾತು ನನಗೆ ತಿಳಿಯಿತು. ಹೀಗೇ ಮುಂದುವರೆದರೆ ನನ್ನ ಭೂಮಿ ಮಾತ್ರವಲ್ಲ, ಇಡೀ ದೇಶದ ಪರಿಸ್ಥಿತಿಯೂ ಹೀಗೇ ಆಗುವುದಲ್ಲಾ, ನನ್ನ ಭೂಮಿಯಲ್ಲಿ ಯಥೇಚ್ಛವಾಗಿದ್ದ ಎರೆಹುಳುಗಳು ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಇನ್ನಷ್ಟು ಆಳಕ್ಕೆ ಹೋಗಿದ್ದವು. ಬಹಳಷ್ಟು ಉಪಕಾರಿ ಕೀಟಗಳು ಹಾಗೂ ಹುಳಗಳು ಸತ್ತೇ ಹೋಗಿದ್ದವು.
ಈ ವಿಷಯವನ್ನು ನಾನು ವಿಜ್ಞಾನಿ ಡಾ. ಹರಿ ಓಂ ಜೊತೆಗೆ ಚರ್ಚಿಸಿದಾಗ ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತ ಪಡಿಸಿದರು. ನಾನು ಅಲ್ಲಿ ನನ್ನ ಉಳಿದ ೯೦ ಎಕರೆಯಲ್ಲಿ ಮಾಡುತ್ತಿದ್ದ ನೈಸರ್ಗಿಕ ಕೃಷಿ ವಿಧಾನವನ್ನೇ ಉಳಿದ ನೂರು ಎಕರೆ ಜಮೀನಿನಲ್ಲಿ ಬಳಸಲು ತೀರ್ಮಾನ ಮಾಡಿದೆ. ೨೦೧೭ರ ಎಪ್ರಿಲ್ ತಿಂಗಳಲ್ಲಿ ರೈತರು ಜಮೀನು ಬಿಟ್ಟರು, ನಾನು ಜೂನ್ ತಿಂಗಳಲ್ಲಿ ಇಡೀ ಜಮೀನಿಗೆ ‘ಜೀವಾಮೃತ' ವನ್ನು ಸಿಂಪಡಿಸಿದೆ. ಧಾನ್ಯವನ್ನು ಬೆಳೆದೆ. ಅದಕ್ಕೂ ಜೀವಾಮೃತವನ್ನು ನೀಡಿದೆ. ಎರಡೇ ತಿಂಗಳಲ್ಲಿ ನನಗೆ ಉತ್ತಮ ಫಲಿತಾಂಶ ಕಂಡು ಬಂತು. ಉತ್ತಮ ಇಳುವರಿ ಬಂತು. ಮುಂದಿನ ವರ್ಷವೂ ನಾನು ಇದೇ ಪ್ರಯೋಗ ಮಾಡಿದೆ. ಜೀವಾಮೃತ ಸಿಂಪರಣೆಯಿಂದ ನನಗೆ ಸುಮಾರು ೩೨ ಟನ್ ಇಳುವರಿ ಬಂತು. ಇದರಿಂದ ಡಾ. ಹರಿ ಓಂ ಆಶ್ಚರ್ಯ ಚಕಿತರಾದರು. ಭೂಮಿಯಲ್ಲಿ ಇಂಗಾಲದ ಅಂಶ ಅಧಿಕವಾಗಿತ್ತು. ಆದ್ದರಿಂದ ಬೆಳೆಯೂ ಚೆನ್ನಾಗಿ ಬಂತು. ಅವರು ಮತ್ತೊಮ್ಮೆ ನನ್ನ ಹೊಲಕ್ಕೆ ಅನೇಕ ವಿಜ್ಞಾನಿಗಳನ್ನು ಕರೆಯಿಸಿ ಮತ್ತೆ ಪರೀಕ್ಷೆ ಮಾಡಿದರು. ಫಲಿತಾಂಶ ಆಶ್ಚರ್ಯ ಚಕಿತವಾಗಿತ್ತು. ನನ್ನ ಹೊಲದಲ್ಲಿ ಇಂಗಾಲದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿತ್ತು. ಮಣ್ಣಿನಲ್ಲಿರುವ ಜೀವಾಣುಗಳ ಸಂಖ್ಯೆ, ಎರೆಹುಳುಗಳ ಸಂಖ್ಯೆ ಅಧಿಕವಾಗಿತ್ತು. ಜೀವಾಮೃತದಿಂದ ನನಗೆ ಒಂದೇ ವರ್ಷದಲ್ಲಿ ಅಚ್ಚರಿದಾಯಕ ಫಲಿತಾಂಶ ಕಂಡು ಬಂತು.
ಕೃಷಿ ವಿಶ್ವ ವಿದ್ಯಾನಿಲಯದ ಮೈಕ್ರೋ ಬಯೋಲಜಿಯ ಖ್ಯಾತ ಪ್ರೊಫೆಸರ್ ಡಾ. ಬಲ್ಜೀತ್ ಸಾರಂಗ್ ಅವರು ಅಮೇರಿಕಾ, ಇಂಗ್ಲೆಂಡ್ ಹಾಗೂ ಜರ್ಮನಿ ದೇಶದ ಖ್ಯಾತ ವಿಜ್ಞಾನಿಗಳ ಜೊತೆ ಕೆಲಸ ಮಾಡಿದ್ದಾರೆ. ಅವರನ್ನು ನಾನು ಸಂಪರ್ಕಿಸಿದಾಗ ಅವರು ತಮ್ಮ ತಂಡದೊಂದಿಗೆ ನಮ್ಮ ಹೊಲಕ್ಕೆ ಬಂದು ನಾನು ಜೀವಾಮೃತಕ್ಕೆ ಬಳಸುವ ವಸ್ತುಗಳನ್ನು ಪ್ರಯೋಗಕ್ಕೆ ತೆಗೆದುಕೊಂಡರು. ಇದರ ಜೊತೆಗೆ ದೇಶೀಯ ದನ, ಎಮ್ಮೆ, ವಿದೇಶಿ ಹಸು ಇವುಗಳ ಮಲ ಮೂತ್ರದ ಸ್ಯಾಂಪಲ್ ತೆಗೆದುಕೊಂಡು ಪ್ರಯೋಗ ಮಾಡಿದಾಗ, ದೇಶೀಯ ದನದ ಸೆಗಣಿ ಒಂದು ಗ್ರಾಂನಲ್ಲಿ ಮೂರು ಸಾವಿರ ಕೋಟಿಗೂ ಅಧಿಕ ಜೀವಾಣುಗಳು ಇವೆ. ಇದರಿಂದ ತಯಾರಿಸುವ ಜೀವಾಮೃತ ಬಹಳ ಫಲಕಾರಿಯಾಗುತ್ತದೆ ಎಂದು ತಿಳಿದು ಬಂತು.
ನಿಮಗೆಲ್ಲಾ ಸುಭಾಷ್ ಪಾಳೇಕರ್ ಅವರ ಕೃಷಿ ಕ್ರಮದ ‘ಜೀವಾಮೃತ’ವನ್ನು ಹೇಗೆ ತಯಾರಿಸುತ್ತಾರೆ ಎಂಬ ಕುತೂಹಲವಿರಬಹುದಲ್ಲವೇ? ನಾನು ಹೇಳುತ್ತೇನೆ ಕೇಳಿ. ೨೦೦ ಲೀಟರ್ ಸಾಮರ್ಥ್ಯದ ಒಂದು ಡ್ರಮ್ ತೆಗೆದುಕೊಳ್ಳಿ. ಅದರಲ್ಲಿ ೧೮೦ ಲೀಟರ್ ನೀರು ತುಂಬಿಸಿ ನೆರಳಿನಲ್ಲಿ ಇಡಿ. ನಂತರ ಒಂದುವರೆಯಿಂದ ಎರಡು ಕೆಜಿಯಷ್ಟು ಬೆಲ್ಲ, ಒಂದರಿಂದ ಎರಡು ಕೆಜಿಯಷ್ಟು ಯಾವುದೇ ಧಾನ್ಯದ ಹಿಟ್ಟು, ಒಂದು ಮುಷ್ಟಿಯಷ್ಟು ಮಣ್ಣು, ಹತ್ತು ಕೆಜಿಯಷ್ಟು ದೇಸೀ ದನದ ಸೆಗಣಿ ಗೊಬ್ಬರ, ೮ ಲೀಟರ್ ನಷ್ಟು ಗೋಮೂತ್ರ ಇವನ್ನೆಲ್ಲಾ ನೀರಿನಲ್ಲಿ ಮಿಶ್ರಣ ಮಾಡಬೇಕು. ನೀವೊಮ್ಮೆ ಆಲೋಚನೆ ಮಾಡಿನೋಡಿ, ಒಂದು ಗ್ರಾಂ ದೇಸೀ ದನದ ಗೊಬ್ಬರದಲ್ಲಿ ಮೂರು ಸಾವಿರ ಕೋಟಿ ಜೀವಾಣುಗಳು ಇರುವುದಾದರೆ ಹತ್ತು ಕೆಜಿ ಗೊಬ್ಬರದಲ್ಲಿ ಎಷ್ಟಿರಬಹುದು? ಈ ಜೀವಾಣು ಭರಿತ ಸೆಗಣಿ ಗೊಬ್ಬರವನ್ನು ಧಾನ್ಯದ ಹಿಟ್ಟು ಹಾಗೂ ಬೆಲ್ಲದ ಜೊತೆ ಮಿಶ್ರಮಾಡಿದಾಗ ಅವುಗಳಿಗೆ ಬೆಳೆಯಲು ಬೇಕಾದ ಪ್ರೋಟೀನ್ ಸಿಗುತ್ತದೆ. ಮಣ್ಣಿನಲ್ಲಿರುವ ಜೀವಾಣುಗಳ ಜೊತೆ ಸೇರಿ ಕೆಲವೇ ಗಂಟೆಗಳಲ್ಲಿ ಇವುಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗುತ್ತದೆ. ಈ ಜೀವಾಣುಗಳು ವಾತಾವರಣದಲ್ಲಿರುವ ಸಾರಜನಕವನ್ನು ಗಿಡಗಳ ಬೇರುಗಳಿಗೆ ಉಣಿಸುವಲ್ಲಿ ನೆರವಾಗುತ್ತದೆ. ಈ ಕಾರಣದಿಂದ ಗಿಡಗಳು ಬಹಳ ಸೊಗಸಾಗಿ ಬೆಳವಣಿಗೆಯಾಗುತ್ತವೆ. ಭೂಮಿಯಲ್ಲಿರುವ ಮ್ಯಾಂಗನೀಸ್, ಸತು, ರಂಜಕ ಮುಂತಾದ ಅಂಶಗಳು ಗಿಡಗಳಿಗೆ ತಲುಪುವಲ್ಲಿ ಜೀವಾಮೃತ ಸಹಾಯ ಮಾಡುತ್ತದೆ.
ಇವುಗಳೆಲ್ಲದರ ಜೊತೆಗೆ ಎರೆಹುಳುಗಳ ಸಂಖ್ಯೆಯೂ ವೃದ್ಧಿಸುವಲ್ಲಿ ಜೀವಾಮೃತ ಬಹಳ ಸಹಕಾರಿಯಾಗಿರುತ್ತದೆ. ಜೀವಾಮೃತ ಒಂದು ನೈಸರ್ಗಿಕ ರಸಾಯನಿಕ ರಹಿತ ಪದಾರ್ಥವಾಗಿರುವುದರಿಂದ ಎರೆಹುಳುಗಳು ಸಾವನ್ನಪ್ಪುವುದಿಲ್ಲ. ಒಂದು ಎರೆಹುಳು ಭೂಮಿಯ ಒಳಗೆ ಹೋಗಿ, ಹೊರ ಬರುವಾಗ ಒಂದು ದಾರಿಯನ್ನು ನಿರ್ಮಿಸುತ್ತದೆ. ಹೀಗೆ ಹಲವಾರು ಸಲ ಮಾಡುವುದರಿಂದ ಭೂಮಿ ಸಡಿಲವಾಗಿ ಭೂಮಿಗೆ ಆಮ್ಲಜನಕ ಚೆನ್ನಾಗಿ ಸಿಗುತ್ತದೆ. ಅದಕ್ಕೇ ಹೇಳುವುದು ಎರೆಹುಳು ರೈತನ ಮಿತ್ರ ಎಂದು. ದೇಸೀ ಎರೆಹುಳುಗಳು ಮಣ್ಣು, ಗೊಬ್ಬರ ಮುಂತಾದುವುಗಳನ್ನು ಚೆನ್ನಾಗಿ ತಿನ್ನುತ್ತವೆ ಮತ್ತು ಯಾವುದೇ ಪ್ರತಿಕೂಲ ವಾತಾವರಣದಲ್ಲಿ ಬದುಕುತ್ತವೆ. ಆದರೆ ವಿದೇಶೀ ಎರೆಹುಳುಗಳು ಎಲ್ಲಾ ವಾತಾವರಣದಲ್ಲಿ ಬದುಕುವುದಿಲ್ಲ ಮತ್ತು ಮಣ್ಣು ತಿನ್ನುವುದಿಲ್ಲ. ಕೇವಲ ಗೊಬ್ಬರ ತಿನ್ನುತ್ತದೆ. ಎರೆಹುಳು ತಿಂದು ಹೊರ ಹಾಕಿದ ಗೊಬ್ಬರ ಬಹಳ ಫಲವತ್ತಾಗಿರುತ್ತದೆ. ಆದುದರಿಂದ ದೇಸೀ ಎರೆಹುಳು ಎಲ್ಲಕ್ಕೂ ಶ್ರೇಷ್ಟ.
ಈ ಎರೆಹುಳುಗಳು ಮಾಡಿದ ತೂತುಗಳಲ್ಲಿ ಮಳೆಯ ನೀರು ಸಹಜವಾಗಿಯೇ ಭೂಮಿಯ ಒಳಗೆ ಇಳಿಯುತ್ತದೆ. ಒಂದು ರೀತಿಯಲ್ಲಿ ಅಂತರ್ಜಲ ವೃದ್ಧಿಗೂ ಸಹಕಾರಿಯಾಗುತ್ತದೆ. ಮತ್ತೊಂದು ಉಪಾಯ ಮಲ್ಚಿಂಗ್ ವಿಧಾನದ ಉಪಯೋಗ. ನಿರುಪಯುಕ್ತ ಹುಲ್ಲನ್ನು ನಾನು ಉರಿಸಲು ಹೋಗುವುದಿಲ್ಲ. ಈ ರೀತಿ ಉರಿಸುವುದರಿಂದ ಈಗಾಗಲೇ ದೆಹಲಿಯಲ್ಲಿ ಬಹಳ ಸಮಸ್ಯೆಯಾಗಿರುವುದು ನಿಮಗೆ ತಿಳಿದೇ ಇದೆ. ನಾನು ನನ್ನ ಜಮೀನಿನ ಹಾಗೂ ನನ್ನ ಹತ್ತಿರದ ಜಮೀನಿನಲ್ಲಿರುವ ನಿರುಪಯುಕ್ತ ಹುಲ್ಲನ್ನು ಉರಿಸದೇ ಭೂಮಿಯ ಮೇಲೆ ಹರಡಿಬಿಡುತ್ತೇವೆ. ಇದರಿಂದ ನನ್ನ ಭೂಮಿ ಬಿಸಿಯಾಗುವುದಿಲ್ಲ. ಭೂಮಿಯ ಮೇಲಿನ ತೇವಾಂಶ ಆವಿಯಾಗುವುದಿಲ್ಲ. ಇದರಿಂದಾಗಿ ಭೂಮಿಯ ಫಲವತ್ತತೆ ಅಧಿಕವಾಗುತ್ತದೆ. ಎರೆಹುಳುಗಳು ಹಗಲಿನಲ್ಲಿ ಮಣ್ಣಿನಿಂದ ಮೇಲೆ ಬರುವುದಿಲ್ಲ ಏಕೆಂದರೆ ಹೊರ ಬಂದಾಗ ಅವುಗಳನ್ನು ಹಕ್ಕಿಗಳು ಹಿಡಿದು ತಿನ್ನುತ್ತವೆ. ಅದೇ ಈ ಹುಲ್ಲುಗಳನ್ನು ಭೂಮಿ ಮೇಲೆ ಹರಡಿದಾಗ ಅವುಗಳಿಗೆ ಹಿತಕರವಾದ ವಾತಾವರಣ ದೊರೆತು ಅವುಗಳು ಹಗಲಿನಲ್ಲೂ ಮಣ್ಣಿನಲ್ಲಿ ಸಂಚಾರ ಶುರು ಮಾಡುತ್ತವೆ. ಹೀಗೆ ಹಗಲೂ ರಾತ್ರಿ ಸಂಚಾರ ಮಾಡುವುದರಿಂದ ಭೂಮಿ ಇನ್ನಷ್ಟು ಫಲವತ್ತಾಗುತ್ತದೆ. ಈ ಹರಡಿದ್ದ ಹುಲ್ಲು ಮಣ್ಣಿನಲ್ಲಿರುವ ಜೀವಾಣುಗಳಿಗೆ ನೈಸರ್ಗಿಕ ಆಹಾರವಾಗಿ ಸಿಗುತ್ತದೆ. ಅದರಿಂದ ಜೀವಾಣುಗಳ ಸಂಖ್ಯೆ ಇನ್ನಷ್ಟು ಅಧಿಕವಾಗುತ್ತದೆ.
ನಾನು ಈ ವಿಚಾರದಲ್ಲಿ ಒಂದು ಪುಸ್ತಕ ಬರೆದಿದ್ದೇನೆ. ಇಲ್ಲಿ ವಿವರವಾಗಿ ಹೇಳಲಾಗದ ಹಲವಾರು ವಿಷಯಗಳನ್ನು ಆ ಪುಸ್ತಕದಲ್ಲಿ ನೀಡಿದ್ದೇನೆ. ನೀವು ನನ್ನ ಜಾಲತಾಣದಲ್ಲಿ ಅದನ್ನು ಓದಿಕೊಳ್ಳ ಬಹುದು. ನನಗೆ ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳು ನೀಡಿದ ಜವಾಬ್ದಾರಿಯನ್ನು ಎರಡು ವರ್ಷ ಹರಿಯಾಣದಲ್ಲಿ ನಿರ್ವಹಣೆ ಮಾಡಿದ್ದೇನೆ. ಈಗ ಗುಜರಾತ್ ರಾಜ್ಯದಲ್ಲಿ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ನನ್ನ ಕೆಲಸದಲ್ಲಿ ಹಲವರು ಮಂದಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ನನಗೆ ಸಹಕಾರ ನೀಡಿದ್ದಾರೆ. ಗುಜರಾತ್ ನಲ್ಲಿ ಒಂದು ಜಿಲ್ಲೆಯನ್ನು ಈಗಾಗಲೇ ನೈಸರ್ಗಿಕ ಕೃಷಿಯ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ನೈಸರ್ಗಿಕ ಕೃಷಿಯಿಂದ ನಿಮ್ಮ ಆರೋಗ್ಯ ಉತ್ತಮವಾಗುತ್ತದೆ. ನಿಮ್ಮ ಮಕ್ಕಳ ಭವಿಷ್ಯ ಸುಧಾರಿಸುತ್ತದೆ. ದೇಶೀಯ ದನಗಳ ಮಲ ಮೂತ್ರ ಮಾತ್ರ ಬಳಸಿ, ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ನನ್ನ ಭಾಷಣದ ಕೊನೆಯಲ್ಲಿ ನಾನು ಹೇಳುವುದಿಷ್ಟೇ, ನನ್ನ ಜಮೀನಿನಲ್ಲಿ ನಾನು ನೈಸರ್ಗಿಕ ಕೃಷಿ ಮಾಡಿರುವುದರಿಂದ ನನ್ನ ಭೂಮಿಯ ಫಲವತ್ತತೆ ಅಧಿಕಗೊಂಡಿದೆ, ಅದೇ ರೀತಿ ನನ್ನ ಖರ್ಚು ವೆಚ್ಚ ಕಮ್ಮಿಯಾಗಿ ಆದಾಯವೂ ಅಧಿಕವಾಗಿದೆ. ನನಗೆ ಒಂದು ಎಕರೆಗೆ ಒಂದು ಸಾವಿರ ರೂ ವೆಚ್ಚವಾದರೆ ರಸಾಯನಿಕ ಗೊಬ್ಬರ ಬಳಸುವವನಿಗೆ ೧೩-೧೪ ಸಾವಿರ ವೆಚ್ಚವಾಗಿದೆ. ನನ್ನ ಜಮೀನಿನಲ್ಲಿರುವ ಜೀವಾಣುಗಳ ಸಂಖ್ಯೆಯೂ ಅಧಿಕವಾಗಿದೆ. ನಾನು ಎಲ್ಲರಿಗೂ ಹೇಳುವುದಿಷ್ಟೇ. ಎಲ್ಲರೂ ನೈಸರ್ಗಿಕ ಕೃಷಿಯತ್ತ ಗಮನ ಹರಿಸಿ, ನಮ್ಮ ಭೂಮಿಯ ಫಲವತ್ತತೆಯೂ ಉಳಿಯುವುದು, ಅದರ ಜೊತೆಗೆ ಉತ್ಪಾದನೆಯೂ ಅಧಿಕವಾಗುವುದು. ಈ ರೀತಿ ಸಹಜ ಕೃಷಿ ಪದ್ಧತಿ ಅಳವಡಿಸಿಕೊಂಡು ಭೂಮಿ ತಾಯಿಯನ್ನು ವಿಷಮುಕ್ತ ಮಾಡೋಣ. ದೇಶವನ್ನು ಬಲಿಷ್ಟಗೊಳಿಸೋಣ.
***
ಇದು ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವೃತ ಅವರ ಮುತ್ತಿನಂತಹ ಅನುಭವದ ಮಾತುಗಳು. ನಮ್ಮ ಕೃಷಿಕರೂ ಈ ಬಗ್ಗೆ ಈಗಾಗಲೇ ಆಸಕ್ತಿ ಹೊಂದಿ ಸಹಜ ಕೃಷಿ ಮಾಡುತ್ತಿದ್ದಾರೆ. ಇನ್ನಷ್ಟು ಮಂದಿ ಈ ರೀತಿಯ ಕೃಷಿ ಕ್ರಮ ಅಳವಡಿಸಿಕೊಳ್ಳಲಿ ಎಂಬುದೇ ಈ ಲೇಖನದ ಆಶಯ.
ಚಿತ್ರದಲ್ಲಿ: ೧. ಜೀವಾಮೃತ ತಯಾರಿಕೆ ಹಾಗೂ ೨. ರಾಜ್ಯಪಾಲ ಆಚಾರ್ಯ ದೇವವೃತ
ಚಿತ್ರ ಕೃಪೆ: ಅಂತರ್ಜಾಲ ತಾಣ