ನೊಂದವರ ಆಶಾಕಿರಣ - ಮದರ್ ತೆರೇಸಾ

ನೊಂದವರ ಆಶಾಕಿರಣ - ಮದರ್ ತೆರೇಸಾ

೨೬--೦೮--೧೯೧೦ ರಂದು ಜಗದ ಬೆಳಕನ್ನು ಕಂಡ ಬಾಲೆ ಆಗ್ನೇಸೇ ಗೋನಕ್ಸೆ ಬೋಜಕ್ಸಿ, ಬೆಳೆದಂತೆಲ್ಲ ಮನದಲ್ಲಿ ಮೂಡಿದ ಚಿತ್ರಣಗಳು ದೀನದಲಿತರ, ಬಡವರ ಸೇವೆ ಮಾಡಬೇಕೆಂಬ ಉತ್ಕಟ ಆಸೆ. ಕೇವಲ ೧೨ ವರ್ಷವಿದ್ದಾಗ ಧಾರ್ಮಿಕ ಸೇವೆಗೆ ಪ್ರವೇಶಿಸಿದ ಇವರು, ತನ್ನ ಬದುಕನ್ನು ಸಮಾಜಕ್ಕೆ ಮೀಸಲಿಟ್ಟ 'ಮಹಾ ಮಾನವತಾವಾದಿ' ದೀಕ್ಷೆಯನ್ನು ಸ್ವೀಕರಿಸಿ ಡಾರ್ಜ್ ಲಿಂಗ್ ನಲ್ಲಿ ಸೇವಾ ತರಬೇತಿಗೆ ಸೇರಿದರು. ಮುಂದೆ ೧೯೩೭ರಲ್ಲಿ  ದೀಕ್ಷಾ ಪ್ರತಿಜ್ಞೆ ಕೈಗೊಂಡು ರೋಮನ್ ಕ್ಯಥೋಲಿಕ್ ನನ್ ಆಗಿ, ಅಧ್ಯಾಪಿಕೆಯಾದರು. ಯಾಕೋ ಅದು ಅಷ್ಟು ಹಿಡಿಸದೆ 'ಮಿಷನರೀಸ್ ಆಫ್ ಚಾರಿಟಿ' ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಕೊಲ್ಕತ್ತಾದಲ್ಲಿ ಸ್ಥಾಪಿಸಿದರು.

ಈ ಸಂಸ್ಥೆ ಯ ಮಾರ್ಗದರ್ಶಿಯಾಗಿ ಕಾರ್ಯಾಚರಣೆ ಆರಂಭಿಸಿದ ಇವರು ಮದರ್ ತೆರೇಸಾ ಆಗಿ  ತನ್ನ ಜೀವನವನ್ನು ಅನಾಥರಿಗೆ, ವೃದ್ಧರಿಗೆ, ಬಡವರಿಗೆ, ಮಕ್ಕಳಿಗಾಗಿ ಮೀಸಲಿಟ್ಟ ಮಹಾಚೇತನ. ಉಳ್ಳವರಿಗಾಗಿ ಎಲ್ಲರೂ ಸಿಹಿಗೆ ಸಕ್ಕರೆ ಮುತ್ತುವಂತೆ ಬರುತ್ತಾರೆ .ಆದರೆ ರೋಗಿಗಳ, ಪರಿತ್ಯಕ್ತ ಜೀವಗಳ, ಕ್ಷಯ, ಹೆಚ್.ಐ.ವಿ(ಏಡ್ಸ್)ರೋಗಿಗಳ, ಕುಷ್ಠ ರೋಗಿಗಳ, ಕೊಳಚೆ ಪ್ರದೇಶದ ಜನರ ಯೋಗಕ್ಷೇಮ ವಿಚಾರಿಸಲು ಯಾರೂ ಇಲ್ಲ, ಅಂಥವರ ಸೇವೆಯನ್ನು ಮಾಡಲು ಟೊಂಕಕಟ್ಟಿ ನಿಂತರು.'ಬಡವರಲ್ಲಿ ನಾನೂ ಒಬ್ಬಳು' ತಿಳಿದ ಇವರು ವಿಶ್ವ ಮಾನ್ಯರಾದರು.

ಪ್ರೀತಿಯ ಸೆಲೆಗೆಂದೂ ಕೊರತೆ ಮಾಡಿದವರಲ್ಲ. ಮರಣ ಸಂಕಟ ಹಂತದವರ ಸೇವೆ ಪರಮಭಾಗ್ಯವೆಂದು ತಿಳಿದವರು. ಕೌಟುಂಬಿಕ ಆಪ್ತಸಲಹಾ ಕೇಂದ್ರಗಳನ್ನು ತೆರೆದು, ನೊಂದವರಿಗೆ ಸಾಂತ್ವನ ನೀಡುವುದು, ಅನಾಥಾಶ್ರಮ ‌ಸ್ಥಾಪನೆ, ಸಮಾಜದ ಉಪೇಕ್ಷೆಗೆ ಒಳಗಾದವರಿಗೆ ತಾಯಿಯಾಗಿ ನಿಂತು ಸೇವೆ, ಪರಿಸರದ ಬಡವರಿಗೆ ನ್ಯಾಯ ನೀತಿ ತತ್ವಗಳ ಸಾರವನ್ನು ಉಣಬಡಿಸಿದ ದಿವ್ಯಶಕ್ತಿಯಾದರು.

ವಂಚನೆ, ಮೋಸ, ಕಪಟಕ್ಕೆ ಒಳಗಾದವರನ್ನು ಪ್ರೀತಿಸಿ, ತಿಳಿಹೇಳಿ ಸರಿದಾರಿಗೆ ತಂದರು. ಜಾತಿ, ಧರ್ಮ, ಬಡವ ನೋಡದೆ ಮನುಷ್ಯ ಜಾತಿ ಎಂಬುದನ್ನು ಪರಿಗಣಿಸಿದ ಮಹಾತಾಯಿ. ಇವರ ನೈತಿಕಮೌಲ್ಯಗಳ ಸೇವೆ, ಮಾತೃಹೃದಯ, ಆರ್ದ್ರತೆ ಗುರುತಿಸಿ ವಿಶ್ವಮಟ್ಟದಲ್ಲಿ 'ನೊಬೆಲ್ ಪ್ರಶಸ್ತಿ' ಯನ್ನು ನೀಡಿ ಗೌರವಿಸಿದರು.

ಮಾನವತಾವಾದಿಯಾದ ಇವರಿಗೆ ಭಾರತ ಸರಕಾರ ಪದ್ಮಶ್ರೀ, ಭಾರತ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಶಾಂತಿಗಾಗಿ ನೀಡಲಾಗುವ ಪ್ರತಿಷ್ಟಿತ ನೋಬೆಲ್ ಪ್ರಶಸ್ತಿಯೂ ಇವರಿಗೆ ಲಭಿಸಿದೆ. ವಾತ್ಸಲ್ಯ, ಮಮಕಾರದ ಸಾಕಾರ ಮೂರುತಿ ತೆರೇಸಾ ಅವರಿಗೆ ಬೆಸ್ಟ್ ತೆರೇಸಾ ಆಫ್ ಕಲ್ಕತ್ತಾ ನೀಡಿ ಗೌರವಿಸಿದರು. ಅಮೇರಿಕಾದ ಗೌರವ ಪ್ರಜೆಯಾದರು.

ಇವರ ಕೆಲವು ನಿಲುವುಗಳನ್ನು ವಿರೋಧಿಸುತ್ತಿದ್ದವರು ಬಹಳ ಜನರಿದ್ದರು. ಯಾವುದಕ್ಕೂ ಜಗ್ಗದೆ ಹಿಂದೆ ತಿರುಗಿ ನೋಡದೆ ಮುಂದೆ ಹೋದ ತಾಯಿ'ಬಡವರ ಪಾಲಿನ ಆಶಾಕಿರಣ 'ವಾದರು. ಒಬ್ಬಂಟಿತನ ಘೋರ ಶಾಪದಂತೆ, ಪ್ರೀತಿ ತೋರಿಸಬೇಕೆಂದರು. ಪ್ರೀತಿ, ವಿಶ್ವಾಸ ಪ್ರತಿಯೊಬ್ಬರಿಗೂ ನೀಡಿ. ಕುಟುಂಬವನ್ನು ಪ್ರೀತಿಸಿರೆಂದರು.

ಗರ್ಭಪಾತದ ವಿರುದ್ಧ ನಿಲುವು ತಾಳಿದ್ದಕ್ಕೆ, ಶುದ್ಧಿಸ್ನಾನ ಮಾಡಿಸಿ ಚರ್ಚ್ ಗೆ ಸೇರಿಸಿದ್ದಕ್ಕೆ ಸಾಕಷ್ಟು ಜನರು ಇವರ ವಿರುದ್ಧ ಪಿತೂರಿ ಮಾಡಿದವರೂ ಇದ್ದಾರೆ.'ಎಲ್ಲವೂ ದೈವ ನಿರ್ಣಯ' ಎಂದು ಕಾಯಾ ವಾಚಾ ಮನಸಾ ಕೆಲಸ ಮಾಡಿದ ಮಹಾಚೇತನ ೫--೦೯--೧೯೯೭ರಂದು ತಮ್ಮ ಸೇವೆಯ ಕೊನೇ ಉಸಿರನ್ನು ತ್ಯಜಿಸಿದರು. ಜನ್ಮ ದಿನದ ಈ ಸುಸಂದರ್ಭದಲ್ಲಿ ನೊಂದವರ ಆಶಾಕಿರಣವಾದ ತೆರೇಸಾರಿಗೊಂದು ಹೃದಯಪೂರ್ವಕ ನಮನ

(ಸಂಗ್ರಹ: ವಿವಿಧ ಮೂಲಗಳಿಂದ)

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ