ನೊಬೆಲ್ ಪ್ರಶಸ್ತಿ ಘೋಷಣೆಯ ವಾರ....
ಮನಸ್ಸುಗಳು ಸ್ವಲ್ಪ ಅತ್ತ ಕಡೆಯೂ ಹರಿಯಲಿ ಮತ್ತು ಅರಿಯಲಿ. ಸದ್ಯಕ್ಕೆ ಮಾನವ ಜಗತ್ತಿನ ಸಾಧನೆಯ ಶಿಖರವನ್ನು ಗುರುತಿಸಿ ಪ್ರೋತ್ಸಾಹಿಸುವ ಅತ್ಯುನ್ನತ ಪ್ರಶಸ್ತಿ ಎಂದರೆ ಅದು ಸ್ವೀಡನ್ ದೇಶದಿಂದ ರಾಯಲ್ ಸ್ವೀಡಿಷ್ ಅಕಾಡೆಮಿ ಪ್ರಕಟಿಸುವ ನೊಬೆಲ್ ಪ್ರಶಸ್ತಿ.
ನೊಬೆಲ್ ಯಾರು? ಆ ಪ್ರಶಸ್ತಿಯನ್ನು ಪ್ರಾರಂಭಿಸಿದ್ದು ಯಾರು - ಯಾವಾಗ - ಏಕೆ? ಯಾವ ಯಾವ ವಿಭಾಗದಲ್ಲಿ ಪ್ರಶಸ್ತಿ ನೀಡುತ್ತಾರೆ? ಅದರ ಮೊತ್ತ ಎಷ್ಟು? ಇಲ್ಲಿಯವರೆಗೂ ಯಾರಿಗೆಲ್ಲಾ ಸಂದಿದೆ? ಮುಂತಾದ ಎಲ್ಲಾ ವಿಷಯಗಳನ್ನು ಆಸಕ್ತರು ಗೂಗಲ್ ಸರ್ಚ್ ಮತ್ತು ವಿಕಿಪೀಡಿಯದಲ್ಲಿ ಮಾಹಿತಿ ಸಂಗ್ರಹಿಸಬಹುದು. ಆದರೆ ಮಾನವ ಕುಲದ ಈ ಕ್ಷಣದ ಸಮಾಜದಲ್ಲಿ ಕೆಲವು ಕ್ಷೇತ್ರದ ಅತ್ಯುತ್ತಮ ಸಾಧನೆಗೆ ಪ್ರಶಸ್ತಿ ಸ್ವೀಕರಿಸುವ ಸಾರ್ಥಕ ಭಾವ ಎಷ್ಟು ಮಹತ್ವದ್ದು ಮತ್ತು ರೋಮಾಂಚಕಾರಿಯಾದದ್ದು ಎಂಬ ಭಾವನೆಯ ಸುತ್ತ ಒಂದು ನೋಟ.
ಯಶಸ್ಸು ಎಂದರೇನು ಎಂಬುದು ಬಹು ಆಯಾಮದ ಚರ್ಚಾ ವಿಷಯ. ನಿರ್ದಿಷ್ಟ ಉತ್ತರ ಕಷ್ಟವಾಗಬಹುದು ಮತ್ತು ಅದು ವೈಯಕ್ತಿಕ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ಆದರೆ ಸಾಮಾನ್ಯವಾಗಿ ನಾಗರಿಕ ಸಮಾಜದಲ್ಲಿ ಯಶಸ್ಸು ಎಂದರೆ ಪ್ರಖ್ಯಾತಿ ಅಥವಾ ಜನಪ್ರಿಯತೆ ಎಂದು ಕರೆಯಬಹುದು. ಅದು ಹಣವೋ, ಅಧಿಕಾರವೋ, ಪ್ರಶಸ್ತಿಯೋ, ಸಾಧನೆಯೋ ಏನೇ ಆಗಿರಬಹುದು. ಈಗಿನ ಸುಮಾರು 750 ಕೋಟಿ ಜನರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಗೌರವವೇ ಒಂದು ದೊಡ್ಡ ಯಶಸ್ಸು ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ....
ನೊಬೆಲ್ ವಿಶ್ವದ ಅಂತಹ ಒಂದು ಮೇರು ಪ್ರಶಸ್ತಿ. ವಿಜ್ಞಾನ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಬಹುತೇಕ ನಿಷ್ಪಕ್ಷಪಾತ ಎಂದೇ ಹೆಸರಾಗಿದೆ. ಶಾಂತಿ ಪ್ರಶಸ್ತಿಗಳು ಮಾತ್ರ ಕೆಲವೊಮ್ಮೆ ಒಂದಷ್ಟು ವಾದ ವಿವಾದಗಳಿಗೆ ಒಳಗಾಗಿವೆ. ಮಕ್ಕಳಲ್ಲಿ ನೊಬೆಲ್ ಪ್ರಶಸ್ತಿಯ ಕನಸು ಚಿಗುರುವಂತೆ ಮಾಡುವ ಜವಾಬ್ದಾರಿ ಪೋಷಕರು ಮಾಡಬೇಕು. ಮಕ್ಕಳ ಮನಸ್ಸು ಅರಳುವ ಸಮಯದಲ್ಲಿ ಅವರ ಕಲ್ಪನಾ ಲೋಕ ಊಹೆಗೆ ನಿಲುಕದ್ದು ಮತ್ತು ಮುಗ್ದವಾದದ್ದು. ಅದು ಎಷ್ಟು ದೂರಕ್ಕೆ ಸಹ ಸಾಗಬಹುದು. ಒಮ್ಮೆ ಮನಸ್ಸು ಬಲಿಯುತ್ತಾ ಹೋದರೆ, ಈ ಸಮಾಜದ ಅನುಭವಕ್ಕೆ ಸಿಲುಕಿದರೆ ನಮ್ಮಲ್ಲಿ ವಾಸ್ತವ ಪ್ರಜ್ಞೆ ಜಾಗೃತವಾಗಿ ಬಹುತೇಕರು ಸಾಪ್ಟ್ ವೇರ್ ಸಂಬಳದ ಜೈಲಿನೊಳಗೆ ಬಂಧಿಯಾಗುತ್ತಾರೆ. ಕಾರು ಮನೆ ಮಕ್ಕಳು ವಿದೇಶ ಪ್ರವಾಸ ಸಂಬಂಧಿಗಳು ಮತ್ತು ಸ್ನೇಹಿತರ ಹೊಗಳಿಕೆಯ ಹೊನ್ನ ಶೂಲಕ್ಕೆ ಏರುತ್ತಾರೆ. ಅಷ್ಟರಲ್ಲಿ ಅನಾರೋಗ್ಯ ಕಾಡಲಾರಂಭಿಸುತ್ತದೆ.
ಬದುಕು ಅದಕ್ಕಿಂತ ವಿಶಾಲ ಅರ್ಥ, ಅನುಭವ ಮತ್ತು ಸವಾಲುಗಳನ್ನು ಹೊಂದಿದೆ. ಹೌದು ಎಲ್ಲರಿಗೂ ನೊಬೆಲ್ ಪ್ರಶಸ್ತಿ ಸಿಗುವುದಿಲ್ಲ. ಆದರೆ ಆ ದಿಕ್ಕಿನ ಪ್ರಯಾಣವೇ ನಮ್ಮ ಜೀವನದ ಒಟ್ಟು ಗುಣಮಟ್ಟವನ್ನು ಮೇಲ್ದರ್ಜೆಗೇರಿಸುತ್ತದೆ. ಹುಟ್ಟುವ ಎಲ್ಲಾ ಮನುಷ್ಯರಲ್ಲಿ ಪ್ರತಿಭೆಯ ಒಬ್ಬ ಸಾಧಕ ಅಡಗಿರುತ್ತಾನೆ. ದುರಾದೃಷ್ಟವಶಾತ್ ಅನೇಕ ಕಾರಣಗಳಿಂದ ಪರಿಸ್ಥಿತಿ ಅದು ಅರಳಲು ಅವಕಾಶವೇ ಸಿಗುವುದಿಲ್ಲ. ಆದರೆ ಇತ್ತೀಚಿನ ಆಧುನಿಕ ಕಾಲದಲ್ಲಿ ಒಂದಷ್ಟು ಜನರಿಗೆ ಸಾಧನೆಯ ಅವಕಾಶದ ಬಾಗಿಲು ಮುಕ್ತವಾಗುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳದೆ ತಪ್ಪು ಆಯ್ಕೆಗಳು ನಡೆಯುತ್ತಿರುವುದು ಬೇಸರದ ಸಂಗತಿ. ಸ್ಪರ್ಧೆಗಳು ಏಕಮುಖವಾಗಿದೆ. ಅದನ್ನು ಸರ್ವತೋಮುಖ ಬೆಳವಣಿಗೆಗೆ ಮುಕ್ತವಾಗಿಸಬೇಕು..
ನಾರ್ವೆಯ ಜಾನ್ ಪೋಸ್ : ಈ ಬಾರಿಯ ಸಾಹಿತ್ಯದ ನೊಬೆಲ್ ಘೋಷಿಸಲಾಗಿದೆ. ಎಂದಿನಂತೆ ಅಕ್ಷರಗಳಲ್ಲಿ - ಭಾವನೆಗಳಲ್ಲಿ ಶೋಷಿತರ ಧ್ವನಿಯಾಗಿದ್ದಕ್ಕೆ ಈ ಪ್ರಶಸ್ತಿ ಎನ್ನುವ ಅರ್ಥದಲ್ಲಿ ಇವರನ್ನು ಹೆಸರಿಸಲಾಗಿದೆ. ಇಲ್ಲದವರ ನೋವಿನ ಧ್ವನಿಗೆ ಹೆಚ್ಚಾಗಿ ನೊಬೆಲ್ ಪ್ರಶಸ್ತಿ ಸಿಗುತ್ತದೆ. ಕಾರಣ. ಸಾವು ನೋವುಗಳ ಆತಂಕ ಸೃಷ್ಟಿಸುವ ಕ್ರಿಯಾತ್ಮಕ ಸಾಹಿತ್ಯ. ಇದು ಮನುಷ್ಯರಲ್ಲಿ ಸನ್ನಿವೇಶಗಳಲ್ಲಿ ತೀವ್ರವಾಗಿ ಹೊರಬರುತ್ತದೆ ಎಂದು ಯೋಚಿಸತೊಡಗಿದಾಗ...
ಈ ಭಾವನೆಗಳು ಸಾಮಾನ್ಯವಾಗಿ ಅಭಿವ್ಯಕ್ತಿ ಗೊಳ್ಳುವುದು ಸಾಹಿತ್ಯ ಸಂಗೀತ ಸಿನಿಮಾ ಚಿತ್ರಕಲೆ ಮುಂತಾದ ಲಲಿತಕಲಾ ಮಾಧ್ಯಮಗಳ ಮುಖಾಂತರ, ಅದನ್ನೇ ಮಾನದಂಡವಾಗಿ ಇಟ್ಟುಕೊಂಡು… ಬದುಕು ಆತಂಕ, ಅನಿಶ್ಚಿತತೆಯ, ಸಾವಿನ ಭಯದ, ಶೋಷಣೆ, ಅಸಹಾಯಕತೆಯ ಸಮಯದಲ್ಲಿ ಈ ಪ್ರಜ್ಞೆಗಳು ಹೆಚ್ಚು ಜಾಗೃತವಾಗುತ್ತವೆ. ಇದು ಕೇವಲ ಭಾರತಕ್ಕೆ ಅಥವಾ ಈಗಿನ ವಾತಾವರಣಕ್ಕೆ ಮಾತ್ರ ಸೀಮಿತವಲ್ಲ, ವಿಶ್ವದ ಎಲ್ಲಾ ನಾಗರಿಕತೆಗಳ ಎಲ್ಲಾ ದೇಶಗಳ ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ.
ಮಧ್ಯಕಾಲೀನ ಯೂರೋಪಿಯನ್ ದೇಶಗಳಲ್ಲಿ ನಡೆಯುತ್ತಿದ್ದ ರಕ್ತಪಾತದ ಸಂದರ್ಭದಲ್ಲಿ ಸೃಷ್ಟಿಯಾದ ಚಿತ್ರಕಲೆ - ಸಾಹಿತ್ಯ ಮಾನವ ಪ್ರಾಣಿಯ ನೋವನ್ನು ಅಂತಿಮ ಹಂತಕ್ಕೆ ಕೊಂಡೊಯ್ಯುತ್ತದೆ. ಮನುಷ್ಯ ಜೀವವೊಂದು ಎದುರಿಸಬಹುದಾದ ಎಲ್ಲಾ ತವಕ ತಲ್ಲಣಗಳು ಅಷ್ಟೊಂದು ಆಳವಾಗಿ ಹಿಡಿದಿಡುತ್ತವೆ. ನೋವು ಮರೆಯಲು ನಲಿವು ಆ ನಲಿವಿನಲ್ಲಿ ನೋವಿನದೇ ಅಥವಾ ಸಾವಿನದೇ ಛಾಯೆ. ಚಾರ್ಲಿ ಚಾಪ್ಲಿನ್ ಅವರ ಸಿನಿಮಾಗಳು ಹಾಸ್ಯ ಮತ್ತು ನೋವಿನ ಎರಡು ಮುಖಗಳನ್ನು ಮನಮುಟ್ಟುವಂತೆ ಚಿತ್ರಿಸುತ್ತವೆ. ಅವೆರಡೂ ಅವರ ಚಿತ್ರಗಳಲ್ಲಿ ಜೊತೆಯಾಗುವುದು ಈ ಕ್ಷಣಕ್ಕೂ ಹಾಸ್ಯದೊಂದಿಗೆ ವಿಷಾದ ಮೂಡಿಸುತ್ತದೆ. ಚಾಪ್ಲಿನ್ ಹೇಳಿದರು ಎನ್ನಲಾದ " ಮಳೆಯಲ್ಲಿ ನೆನೆಯುತ್ತಾ ನಡೆಯುವುದು ನನಗೆ ಹೆಚ್ಚು ಖುಷಿ ಮತ್ತು ಸ್ವಾತಂತ್ರ್ಯ ನೀಡುತ್ತದೆ. ಏಕೆಂದರೆ ಮಳೆಯ ಹನಿಗಳ ನಡುವೆ ನನ್ನ ಕಣ್ಣೀರು ಯಾರಿಗೂ ಕಾಣುವುದಿಲ್ಲ " ನೋವನ್ನು ವರ್ಣಿಸಲು ಎಷ್ಟೊಂದು ಅರ್ಥಪೂರ್ಣ ಮಾತುಗಳು. ಹಾಗೆಯೇ ವಾಲೆಂಟೈನ್ ತನ್ನ ಸೆರೆವಾಸದಲ್ಲಿ ಪ್ರಿಯಕರನಿಗಾಗಿ ಬರೆದ ಆ ಪ್ರೇಮ ಪತ್ರಗಳು ಇಂದಿಗೂ ಯುವ ಪ್ರೇಮಿಗಳ ಎದೆಯಲ್ಲಿ ಕಿಚ್ಚು ಹಚ್ಚುತ್ತದೆ.
ಆಫ್ರಿಕಾದ ಕಡು ಬಡತನ ಹಸಿವು ಅಜ್ಞಾನ ವರ್ಣಬೇಧ ತಾರತಮ್ಯ ಅಲ್ಲಿನ ಶ್ರೇಷ್ಠ ಸಾಹಿತ್ಯ ರಚನೆಯ ಮೂಲ ಕಾರಣವಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಅಲ್ಲಿಗೆ ದಾಳಿ ಇಟ್ಟು ಮತಾಂತರ ಮಾಡಿ ಜನರಲ್ಲಿ ಬಿತ್ತಿದ ದೈವಿಕ ಪ್ರಜ್ಞೆ ಮತ್ತು ಅದು ಉಂಟುಮಾಡಿದ ಸಾಮಾಜಿಕ ಆರ್ಥಿಕ ವೈಪರೀತ್ಯಗಳು ಒಬ್ಬ ವೈಚಾರಿಕ ಚಿಂತಕರಾದ ಬಿಷಪ್ ಡೆಸ್ಮಂಡ್ ಟುಟು ಅವರ ಮಾತಿನಲ್ಲಿ ಮೂಡಿದ ವ್ಯಂಗ್ಯ ಎಷ್ಟೊಂದು ಅದ್ಬುತ ಗಮನಿಸಿ. ಬ್ರಿಟೀಷರನ್ನು ಕುರಿತು " ನೀವು ಆಫ್ರಿಕಾ ನೆಲದಲ್ಲಿ ಕಾಲಿಟ್ಟಾಗ ನಿಮ್ಮ ಬಳಿ ಬೈಬಲ್ ಇತ್ತು. ನಮ್ಮ ಬಳಿ ಜಮೀನಿತ್ತು. ಈಗ ನಮ್ಮ ಬಳಿ ಬೈಬಲ್ ಇದೆ. ನಮ್ಮ ಜಮೀನು ನಿಮ್ಮ ಬಳಿ ಇದೆ " ಎಂತಹ ಅದ್ಭುತ ಹಾಸ್ಯ ಮತ್ತು ವ್ಯಂಗ್ಯ. ಆದರೆ ಅದರ ಆಳದಲ್ಲಿ ಇರುವುದು ವಿಷಾದನೀಯ ನೋವು.
ಫ್ರೆಂಚ್ ಕ್ರಾಂತಿಯ ಆಸುಪಾಸು, ರಷ್ಯನ್ ಕ್ರಾಂತಿ, ಎರಡು ವಿಶ್ವ ಮಹಾಯುದ್ಧದ ನಂತರದಲ್ಲಿ, ಜಪಾನ್ ಮೇಲಿನ ಅಣು ಬಾಂಬಿನ ದಾಳಿಯ ನಂತರ ಈ ರೀತಿಯ ಮನಕಲಕುವ ಕಲಾಭಿವ್ಯಕ್ತಿ ಹೆಚ್ಚು ಹೆಚ್ಚು ರಚಿಸಲ್ಪಟ್ಟಿದೆ. ಮನುಷ್ಯ ಸಂಬಂಧಗಳು, ಬದುಕಿನ ನಶ್ವರತೆ ವಿವರಿಸುವಾಗ ತನಗರಿವಿಲ್ಲದೆ ಮೂಡುವ ಭಾವನೆಗಳ ವ್ಯಕ್ತಪಡಿಸುವಿಕೆ ಮನೋಜ್ಞವಾಗಿರುತ್ತದೆ. ತನ್ನ ಅರಿವಿನ ಆಳದಲ್ಲಿ ನಡೆಯುವ ಹಿಂಸೆಯ ರೂಪ ಮನುಷ್ಯರಲ್ಲಿ ಅಚ್ಚಳಿಯದೆ ಉಳಿದು ವಿವಿಧ ರೂಪದಲ್ಲಿ ಪ್ರಕಟವಾಗುತ್ತದೆ.
ಮಧ್ಯಪ್ರಾಚ್ಯದ ರಕ್ತ ಸಿಕ್ತ ಯುದ್ಧಗಳ ಸನ್ನಿವೇಶದಲ್ಲಿ ಗಿಬ್ರಾನ್, ರೂಮಿ, ಗಾಲಿಬ್ ಗಳಂತ ತತ್ವಜ್ಞಾನಿಗಳು ಜನ್ಮ ತಾಳುತ್ತಾರೆ. ಪ್ರೀತಿ ಪ್ರೇಮ ವಿರಹ ಸೇರಿ ಬದುಕಿನ ಅಂತಃ ಸತ್ವವನ್ನೇ ತೆರದಿಡುತ್ತಾರೆ. ಗಾಡ ವಿಷಾದದ ಛಾಯೆ ಅವರ ಪ್ರತಿ ಅಕ್ಷರಗಳಲ್ಲೂ ಕಾಣಬಹುದು. ಹಾಗೆಯೇ ಅತ್ಯಂತ ಸಾಂಪ್ರದಾಯಿಕ ಇಸ್ಲಾಮಿಕ್ ದೇಶ ಇರಾನಿನಲ್ಲಿ ಮಾನವ ಪ್ರೀತಿಯ ಅಮೋಘ ಸಿನಿಮಾಗಳು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಣಬಹುದು. ಬ್ರಿಟನ್ನಿನ ಕೈಗಾರಿಕೀಕರಣದ ಸಂದರ್ಭದಲ್ಲಿ ಕಾರ್ಮಿಕರ ಭೀಕರ ಶೋಷಣಾ ವ್ಯವಸ್ಥೆಯ ವಿರುದ್ಧ ಕಾರ್ಲ್ ಮಾರ್ಕ್ಸ್ ತರದವರು ಒಂದು ಸಿದ್ದಾಂತವನ್ನೇ ಮಂಡಿಸುತ್ತಾರೆ.
ವಿಯೆಟ್ನಾಂ ಯುದ್ಧ, ಚೀನಾದ ದೌರ್ಜನ್ಯ ಕಾರಿ ವಾತಾವರಣದಲ್ಲಿ ಸಹ ಭಾವನೆಗಳು ಮುಕ್ತವಾಗಿ ತೆರೆದುಕೊಳ್ಳುತ್ತವೆ. ಬಹಳ ಹಿಂದೆ ಚೀನಾದ ನೆಲದಲ್ಲಿ ಕನ್ಫ್ಯೂಷಿಯಸ್ ಲಾವೋತ್ಸೆ ಮುಂತಾದ ತತ್ವಜ್ಞಾನಿಗಳು ಬದುಕಿನ ಸಾರವನ್ನು ತೆರೆದಿಡುತ್ತಾರೆ. ಭಾರತದಲ್ಲಿ ಕ್ರಿಸ್ತ ಪೂರ್ವದ ಕಾಲದಲ್ಲಿ ಗೌತಮ ಬುದ್ದರು ದೇಹ ಮತ್ತು ಮನಸ್ಸಿನ ದಂಡನೆಯಿಂದ ಮನುಷ್ಯನನ್ನು ದಿನನಿತ್ಯ ಕಾಡುವ ಸಾವು ನೋವು ಬದುಕಿನ ತಳಮಳಕ್ಕೆ ಜ್ಞಾನೋದಯ ರೂಪದ ಉತ್ತರವೂ, ಮಹಾವೀರರ ಅಹಿಂಸೆಯ ತತ್ವವೂ, ಬಸವಣ್ಣನವರ ಅಸಮಾನತೆಯ ವಿರುದ್ದದ ಪ್ರತಿಭಟನೆಯೂ, ಅಂಬೇಡ್ಕರ್ ಅವರ ಶೋಷಣೆಯ ವಿರುದ್ಧ ಹೋರಾಟವೂ ಆಗಿನ ಸಾಮಾಜಿಕ ಅಭದ್ರತೆಯ ಸಂದರ್ಭಗಳಲ್ಲಿ ಮೂಡುವ ಗಾಡ ಪ್ರಭಾವಕ್ಕೆ ಸಾಕ್ಷಿಯಾಗಿದೆ.
ಅದರಲ್ಲೂ ಜಾಗತೀಕರಣದ ನಂತರ ಹುಟ್ಟಿದ ಯುವ ಸಮುದಾಯ ಆಧುನಿಕ, ಸ್ಪರ್ಧಾತ್ಮಕ, ವೇಗದ ಜೀವನಶೈಲಿಯಿಂದ ತನ್ನ ಇರುವಿಕೆಯನ್ನೇ ಮರೆತಂತಾಗಿದೆ. ಕೊಳ್ಳುಬಾಕ ಸಂಸ್ಕೃತಿ ಸೃಷ್ಟಿಸಿದ ಹಣದ ದಾಹದಿಂದ ಹಗಲು ರಾತ್ರಿಗಳ ವ್ಯತ್ಯಾಸವೇ ಮರೆತು ಹೋಗಿದೆ. ವಿದೇಶ ಮತ್ತು ನಗರಗಳು ಅವರನ್ನು ಸಂಪೂರ್ಣ ಆಕರ್ಷಣೆಗೆ ಒಳಪಡಿಸಿವೆ. ಬದುಕೆಂದರೆ ಹಣ ಮಾತ್ರ ಎಂಬ ಭ್ರಮೆಗೆ ತಳ್ಳಿದೆ. ಇಂತಹ ಸಂದರ್ಭಗಳಲ್ಲಿ ಕನಿಷ್ಠ ನೊಬೆಲ್ ಪ್ರಶಸ್ತಿಯ ಬಗ್ಗೆ ಮಕ್ಕಳ ಬಳಿ ಮಾತನಾಡುತ್ತಾ ಅವರ ಗಮನ ಸೆಳೆಯುವ ಪ್ರಯತ್ನ ಅವರ ಭವಿಷ್ಯದ ದೃಷ್ಟಿಯಿಂದ ಮಹತ್ವದ ಘಟ್ಟವಾಗಬಹುದು. ಇದು ನನ್ನ ಗ್ರಹಿಕೆಗೆ ನಿಲುಕಿದ ಸಣ್ಣ ಸರಳ ಅಭಿಪ್ರಾಯ.
-ವಿವೇಕಾನಂದ ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ