ನೋಟು ರದ್ದತಿ: ಉದ್ದೇಶ ಮತ್ತು ಅನಪೇಕ್ಷಿತ ಪರಿಣಾಮ (ಭಾಗ ೩) - ಟಿ.ಆರ್.ಭಟ್

Submitted by T R Bhat on Mon, 11/06/2017 - 22:53

ಉಗ್ರಗಾಮಿಗಳು ಮತ್ತು ಅಧಿಕ ಮೌಲ್ಯದ ನೋಟುಗಳು:
ನಮ್ಮ ದೇಶದ ಗಡಿಪ್ರದೇಶದಿಂದ ನಿರಂತರವಾಗಿ ವಿದೇಶೀ ಉಗ್ರಗಾಮಿಗಳ ನುಸುಳುವಿಕೆಯ ಬಗ್ಗೆ  ವರದಿಯಾಗುತ್ತಿವೆ. ಕೆಲವು ರಾಜ್ಯಗಳಲ್ಲಿ ಮಾವೋ ಉಗ್ರಗಾಮಿಗಳ ಹಾವಳಿಗಳ ಬಗ್ಗೆ ವರದಿಗಳು ಬರುತ್ತಿವೆ.. ಈ ತರದ ರಾಷ್ಟ್ರಘಾತಕ ಚಟುವಟಿಕೆಗಳಿಗೆ ಹಣ ಯಾರು ಕೊಡುತ್ತಾರೆ ಮತ್ತು ಎಲ್ಲಿಂದ ಪೂರೈಕೆಯಾಗುತ್ತದೆ ಎಂಬ ಪ್ರಶ್ನೆಗಳು ಆಗಾಗ ಬರುತ್ತಲೇ ಇವೆ. ದೇಶದೊಳಗಿನ ಉಗ್ರಗಾಮಿಗಳು ತಮ್ಮದೇ ಮೂಲಗಳ ಸಹಾಯದಿಂದ ಅಥವಾ ಹಿಂಸೆಯ ಮೂಲಕ ಸಾಚಾ ನೋಟುಗಳನ್ನು ಸಂಗ್ರಹಿಸುವುದು ಗೊತ್ತಿರುವ ವಿಷಯ. ದೇಶದ ಗಡಿಯ ಹೊರಗಿಂದ ಬರುವ ಉಗ್ರಗಾಮಿಗಳಿಗೆ ಹಣ ಎಲ್ಲಿಂದ ಸರಬರಾಜು ಆಗುತ್ತದೆ ಎಂಬ ವಿಷಯದ ಬಗ್ಗೆ ನಿಖರ ಮಾಹಿತಿ ಇಲ್ಲ.
ಆದರೆ ಎರಡೂ ಚಟುವಟಿಕೆಗಳಿಗೆ ಉಪಯೋಗಿಸಲ್ಪಡುವ ಹಣ ಕಳ್ಳ ನೋಟುಗಳಂತೆಯೇ ಒಟ್ಟು ಚಲಾವಣೆಯಲ್ಲಿರುವ ನೋಟುಗಳ ಶೇಕಡಾ ಒಂದಕ್ಕಿಂತಲೂ ಬಹಳ ಕಡಿಮೆ. ಶೇಕಡಾ ವಾರು ಒಂದಕ್ಕಿಂತಲೂ ಎಷ್ಟೋ ಕಡಿಮೆಯಿರುವ ನಕಲಿ ನೋಟುಗಳ ನಿರ್ನಾಮಕ್ಕೆ ೮೬% ದಷ್ಟು ನೋಟುಗಳ ರದ್ದತಿ ಎಷ್ಟು ತಾರ್ಕಿಕ?
 
ನಗದುರಹಿತ ಅರ್ಥವ್ಯವಸ್ಥೆಗೆ ಪ್ರೋತ್ಸಾಹ?
ನವಂಬರ ೮ರ ಹೇಳಿಕೆಯ ತರುವಾಯ, ನೋಟು ರದ್ದತಿಯ ಉದ್ದೇಶಕ್ಕೆ ಹೊಸ ತಿರುವನ್ನು ನೀಡಲಾಯಿತು. ಭಾರತವನ್ನು ’ನಗದುರಹಿತ’ (ಕ್ಯಾಷ್-ಲೆಸ್) ಸಮಾಜವನ್ನಾಗಿಸುವತ್ತ ಇದೊಂದು ದೃಢವಾದ ಹೆಜ್ಜೆ ಎಂಬ ಹೇಳಿಕೆಗಳು ಬರಲು ಆರಂಭವಾದವು. ಅನೇಕ ವ್ಯಾಪಾರೀ ಮತ್ತು ಸೇವಾ ಸಂಸ್ಥೆಗಳು ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತಾ ತಮ್ಮ ಮೂಲಕ ಪಾವತಿಗಳನ್ನು ನಗದುರಹಿತವಾಗಿ ಮಾಡಬಹುದೆಂದು ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ನವಂಬರ ೯ನೇ ದಿನದಂದು ಪ್ರಧಾನಿಯವರ ಭಾವಚಿತ್ರವಿರುವ ಜಾಹೀರಾತುಗಳನ್ನು ಪ್ರಕಟಿಸಿದವು.
ನಗದುರಹಿತ ವ್ಯವಹಾರ ಎಂದರೇನು? ಅತ್ಯಂತ ಸರಳವಾಗಿ ಹೇಳುವುದಿದ್ದರೆ, ಒಂದು ವಸ್ತುವನ್ನು ಖರೀದಿಸಿದಾಗ ಅದಕ್ಕಾಗುವ ಬೆಲೆಯನ್ನು ನಗದಿನ ಬದಲು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಉಪಯೋಗಿಸಿ ಇಲ್ಲವೇ ಮಾರಿದ ಅಂಗಡಿಯ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಪ್ರಕ್ರಿಯೆ. ಇಲ್ಲಿ ಇಬ್ಬರ ನಡುವೆ ವ್ಯವಹಾರದ ಮಾಧ್ಯಮ ಹಣವೇ ಆದರೂ ಅದನ್ನು ಪಾವತಿಸುವ ವಿಧಾನ ಈಗ ಪ್ರಚಲಿತವಾದ ಭಾಷೆಯಲ್ಲಿ ಹೇಳುವುದಾದರೆ ವಿದ್ಯುನ್ಮಾನ ವರ್ಗಾವಣೆಯ (ಇಲೆಕ್ಟ್ರಾನಿಕ್ ಟ್ರಾನ್ಸ್-ಫರ್) ಮುಖಾಂತರ. ಆ ಹಣವನ್ನು ನಿಮ್ಮ ಬ್ಯಾಂಕು ಖಾತೆಯಿಂದ ಅಥವಾ ಒಂದು ಮಧ್ಯವರ್ತಿ ಸಂಸ್ಥೆಯ ಮೂಲಕ ವರ್ಗಾಯಿಸಬಹುದು. ಚೆಕ್ಕುಗಳ ಮೂಲಕವೂ ಪಾವತಿಯನ್ನು ಮಾಡಬಹುದು; ಆದರೆ ನಮ್ಮಲ್ಲಿ ಅವುಗಳನ್ನು ಸ್ವೀಕರಿಸುವಲ್ಲಿ ಅನೇಕ ಅಡ್ಡಿಗಳಿದ್ದು ಚೆಕ್ಕುಗಳು ಜನಪ್ರಿಯವಾಗಿಲ್ಲ.
ಇಲ್ಲಿನ ಮೂಲಪ್ರಶ್ನೆ ಭಾರತದಲ್ಲಿ ಎಷ್ಟರ ಮಟ್ಟಿಗೆ ಹಣದ ವ್ಯವಹಾರಗಳನ್ನು ನಗದುರಹಿತವಾಗಿ ಮಾಡಲು ಸಾಧ್ಯ? ಆ ಮಾಧ್ಯಮವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ದೇಶ ಇನ್ನೂ ಪಕ್ವವಾಗಿದೆಯೇ?
ನಗದುರಹಿತ ವ್ಯವಹಾರಗಳಿಗೆ ಅಗತ್ಯವಾದ ವ್ಯವಸ್ಥೆ ಸಂಕೀರ್ಣವಾದುದು. ಪ್ರತಿಯೊಬ್ಬ ನಾಗರಿಕನಿಗೂ ಬ್ಯಾಂಕುಗಳಲ್ಲಿ ಖಾತೆ ಇರಬೇಕು; ಆ ಖಾತೆಗೆ ನಗದಿನ ಮೂಲಕ ಅಥವಾ ಇತರ ಮಾಧ್ಯಮದ ಮೂಲಕ ಹಣವನ್ನು ಕಾಲಕಾಲಕ್ಕೆ ಜಮಾಯಿಸಬೇಕು. ಖಾತೆಯಿಂದ ಹಣವನ್ನು ಖಾತೆದಾರನೇ ವರ್ಗಾಯಿಸಬೇಕಿದ್ದರೆ ಅದರ ಬಗ್ಗೆ ಸ್ವಲ್ಪವಾದರೂ ತಂತ್ರಜ್ಞಾನದ ಅರಿವು ಬೇಕು; ಅಂತರ್ಜಾಲದ ಮೂಲಕ ವ್ಯವಹರಿಸುವ ವಿಧಾನವನ್ನು ಕಲಿತುಕೊಳ್ಳಬೇಕು; ಮನೆಯಲ್ಲಿ ಕಂಪ್ಯೂಟರ್ ಅಥವಾ ಅದರಲ್ಲಿರುವ ವಿಶೇಷ ಸೌಲಭ್ಯಗಳನ್ನು ಹೊಂದಿದ ಮೊಬೈಲ್ (ಸ್ಮಾರ್ಟ್ ಫೋನ್) ಬೇಕು; ತಡೆರಹಿತ ವಿದ್ಯುತ್ ಬೇಕು.  
ವ್ಯವಹಾರ ನಗದುರಹಿತವಾದರೂ ಅದಕ್ಕೆ ಶುಲ್ಕ ತೆರಬೇಕಾಗುತ್ತದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ಮೇಲೆ ಹೊಸತಾಗಿ ಕಾರ್ಡ್ ನೀಡುವಾಗ ಶುಲ್ಕವಿಲ್ಲದಿದ್ದರೂ ಅದನ್ನು ನವೀಕರಿಸುವಾಗ ಬ್ಯಾಂಕು ಶುಲ್ಕ ವಿಧಿಸುತ್ತದೆ. ಅಂತರ್ಜಾಲದ ಮೂಲಕ ಹಣವನ್ನು ವರ್ಗಾಯಿಸುವಾಗ ಖಾತೆದಾರ ಶುಲ್ಕ ನೀಡಬೇಕು. ಇತ್ತೀಚೆಗಿನ ವರೆಗೆ ಕ್ರೆಡಿಟ್ ಕಾರ್ಡು ಉಪಯೋಗಿಸಿ ವ್ಯಾಪಾರ ಮಾಡುವಾಗ ಅನೇಕ ಅಂಗಡಿಯವರು ಬಿಲ್ ಮೌಲ್ಯದ ಶೇಕಡಾ ೧ ರಿಂದ ೨ರ ತನಕ ಶುಲ್ಕವನ್ನು ಸೇರಿಸಿಯೇ ಬಿಲ್ ಮಾಡುತ್ತಿದ್ದರು. ೨೦೧೭ ಮಾರ್ಚ್ ತಿಂಗಳಿನಿಂದ ಎಟಿಎಂ ಮೂಲಕ ಕೇವಲ ನಾಲ್ಕು ಬಾರಿ ನಿಃಶುಲ್ಕವಾಗಿ ನಗದು ಪಡೆಯಬಹುದು; ಅದಕ್ಕಿಂತ ಹೆಚ್ಚಾದರೆ ಪ್ರತಿ ವ್ಯವಹಾರಕ್ಕೂ ದುಬಾರಿ ಶುಲ್ಕವನ್ನು ವಸೂಲು ಮಾಡಲು ಬ್ಯಾಂಕುಗಳು ಉದ್ದೇಶಿಸಿವೆ.  ಗ್ರಾಹಕ ತನ್ನ ಹಣ ಪಡೆಯಲು ಶುಲ್ಕ ತೆರಬೇಕಾದ ವ್ಯವಸ್ಥೆಗೆ ನಾಂದಿ ಆಗುತ್ತಾ ಇದೆ.
ಮಧ್ಯವರ್ತಿ ಸಂಸ್ಥೆಗಳ ಮೂಲಕ ಪಾವತಿ ಮಾಡುವಾಗ ಬ್ಯಾಂಕಿನಿಂದ ಅಥವಾ ಕ್ರೆಡಿಟ್ ಕಾರ್ಡು ಮುಖಾಂತರ ಹಣ ವರ್ಗಾಯಿಸಿದ್ದಕ್ಕೂ ಶುಲ್ಕ ನೀಡಬೇಕು. ಆ ಸಂಸ್ಥೆಯೂ ಬೇರೆ ಬೇರೆ ರೂಪದಲ್ಲಿ ವಸ್ತು ಖರೀದಿಸುವವನಿಂದ ಅಥವಾ ಮಾರುವವನಿಂದ ಶುಲ್ಕವನ್ನು ವಸೂಲಿ ಮಾಡುತ್ತದೆ. ಯಾವುದೇ ನಗದುರಹಿತ ಪಾವತಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಶುಲ್ಕ ನೀಡಬೇಕಾಗುತ್ತದೆ (ಪಾವತಿ ಸಂಸ್ಥೆಯ ಆದಾಯ ಆ ಮೂಲಕವೇ ಬರಬೇಕಷ್ಟೆ!) ನಗದಿನಲ್ಲಿ ಪಾವತಿ ಮಾಡುವಾಗ ಈ ರೀತಿಯ ಶುಲ್ಕವನ್ನು ನೀಡಬೇಕಾದ ಅಗತ್ಯವಿಲ್ಲ.
ಈಗಾಗಲೇ ಹೇಳಿದಂತೆ ಭಾರತದ ಹಳ್ಳಿ ಮತ್ತು ಅರೆಪಟ್ಟಣಗಳಲ್ಲಿ ಎಷ್ಟು ಮಂದಿಗೆ ಮೂಲಸೌಕರ್ಯ ಲಭ್ಯವಿದೆ? ಎಷ್ಟು ಹಳ್ಳಿಗಳಲ್ಲಿ ಬ್ಯಾಂಕುಗಳಿವೆ? ವಲಸೆ ಮತ್ತು ಗುತ್ತಿಗೆ ಕಾರ್ಮಿಕರಲ್ಲಿ ಎಷ್ಟುಮಂದಿಗೆ ಬ್ಯಾಂಕು ಖಾತೆಗಳಿವೆ? ದೇಶದಲ್ಲಿ ಎಷ್ಟು ಮಂದಿಗೆ ನಗದುರಹಿತ ವ್ಯವಹಾರದ ಬಗ್ಗೆ ಅರಿವು ಇದೆ? ಇರುವ ಸಹಕಾರಿ ಬ್ಯಾಂಕುಗಳು ತಂತ್ರಜ್ಞಾನವನ್ನು ಅಳವಡಿಸುವಷ್ಟು ಮುಂದುವರಿದಿವೆಯೇ?
ಬ್ಯಾಂಕಿಂಗ್ ರಂಗದಲ್ಲಿ ಮೂರು ದಶಕ ಸೇವೆ ಸಲ್ಲಿಸಿದ ನಾನು ಅನೇಕ ಬಾರಿ ಅಂತರ್ಜಾಲದ ಮೂಲಕ ಹಣ ವರ್ಗಾಯಿಸಲು ಹರಸಾಹಸ ಪಟ್ಟಿದ್ದಿದೆ. ದೊಡ್ಡ ಮೊತ್ತದ ಹಣ ಕಳುಹಿಸುವುದಿದ್ದರೆ, ಸಾಂಕೇತಿಕವಾಗಿ ೧೦೦ ರುಪಾಯಿಯನ್ನು ಮೊದಲು ವರ್ಗಾಯಿಸಿ, ಅವರಿಂದ ಸ್ವೀಕೃತಿಯ ಮಾಹಿತಿ ಸಿಕ್ಕಮೇಲೆ ಪೂರ್ತಿ ಹಣವನ್ನು ಕಳುಹಿಸುತ್ತೇನೆ. ತಾಂತ್ರಿಕ ದೋಷವಿದ್ದಾಗ ಅಥವಾ ನಾನು, ಇಲ್ಲವೇ ಅವರು ಕೊಟ್ಟ ವಿವರಗಳಲ್ಲಿ ತಪ್ಪು ಇದ್ದಾಗ ಪೂರ್ತಿ ಹಣವನ್ನು ಒಮ್ಮೆಲೇ ಕಳುಹಿಸಿ ಅವರಿಗೆ ಸಿಗದೆ ಇನ್ಯಾರದೋ ಖಾತೆಗೆ ದುಡ್ಡು ಜಮೆಯಾಗದಿರಲಿ ಎಂದು ಈ ಮುಂಜಾಗರೂಕತೆ! ನಮ್ಮ ಮನೆಗೆ ಬರುವ ಅಂಶಕಾಲಿಕ ಮಹಿಳಾ ಸಹಾಯಕಿಗೆ ಫೆಬ್ರವರಿ ತಿಂಗಳ ಸಂಬಳವನ್ನು ಅವಳ ಬ್ಯಾಂಕು ಖಾತೆಗೆ ಹಾಕುತ್ತೇನೆ ಎಂದಾಗ ಆಕೆ ಅಂದಳು: ’ಅಣ್ಣ, ಬೇಡ, ನನಗೆ ಎಟಿಎಂ ಕಾರ್ಡು ಉಪಯೋಗಿಸಲು ಗೊತ್ತಿಲ್ಲ, ನೀವು ನಗದಿನಲ್ಲೇ ಕೊಡಿ’. ಇಂದಿಗೂ ನಗದು ಪಡೆಯೋಣವೆಂದು ಎಟಿಎಂಗೆ ಹೋದರೆ ಮೊದಲನೇ ಎಟಿಎಂನಲ್ಲಿ ದುಡ್ಡು ಸಿಗುವ ಧೈರ್ಯವಿಲ್ಲ; ಅನೇಕ ಬಾರಿ ಮೂರು ನಾಲ್ಕು ಯಂತ್ರಗಳಲ್ಲಿ ಕಾರ್ಡ್ ಹಾಕಬೇಕಾಗಿ ಬಂದ ಅನುಭವ ನನ್ನದು. ನಾನು ಯಾವತ್ತೂ ಹೋಗುವ ತರಕಾರಿ, ಹಣ್ಣು ಮತ್ತು ಕಿರಾಣಿ ಅಂಗಡಿಯವರಿಗೆ ಮತ್ತು ಇಸ್ತ್ರಿ ಮಾಡುವವನಿಗೆ ನಾನು ನಗದೇ ಕೊಡಬೇಕಾಗುತ್ತದೆ. ಮಂಗಳೂರಿನಂಥಹ ಮಹಾನಗರದಲ್ಲಿ ವರ್ಷಕ್ಕೊಮ್ಮೆ ಕೊಡುವ ಮನೆತೆರಿಗೆ ಮತ್ತು ನೀರಿನ ಬಿಲ್ಲನ್ನೂ ಸರದಿಯಲ್ಲಿ ಕಾದು ನಗದಿನಲ್ಲೇ ಕೊಡಬೇಕು. ಈ ಸಮಸ್ಯೆ ನನ್ನದು ಮಾತ್ರವಲ್ಲ; ನಮ್ಮ ವ್ಯವಸ್ಥೆ ಬಹಳ ಸುಧಾರಿಸಬೇಕು ಎಂಬುದಕ್ಕೆ ಇವು ನಿದರ್ಶನಗಳು.
ಇತ್ತೀಚೆಗಿನ ವರದಿಯಂತೆ ಭಾರತದಲ್ಲಿ ೯೮% ವ್ಯವಹಾರಗಳು ನಗದಿನಲ್ಲೇ ನಡೆಯುತ್ತವೆ. ಚೀನಾದಲ್ಲಿ ಆ ಮಟ್ಟ ೯೦% ದಲ್ಲಿದೆ. ಅಭಿವೃದ್ಧಿ ಹೊಂದಿದ ಅಮೆರಿಕದಲ್ಲಿಯೇ ನಗದುರಹಿತ ಅರ್ಥವ್ಯವಸ್ಥೆ ಇನ್ನೂ ಬಂದಿಲ್ಲ; ಅಲ್ಲಿ ನಗದು ವ್ಯವಹಾರಗಳು ೫೫% ದಷ್ಟು ಇನ್ನೂ ಇದೆ.
ಈ ಹಿನ್ನೆಲೆಯನ್ನು ಗಮನಿಸಿದರೆ ನಮ್ಮ ದೇಶದ ಆರ್ಥಿಕತೆ ಸಂಪೂರ್ಣ ನಗದುರಹಿತವಾಗಲು ಅನೇಕ ವರ್ಷಗಳೇ ಬೇಕು. ನೋಟು ರದ್ದತಿಯ ಮೂಲಕ ಅದನ್ನು ಸಾಧಿಸುವುದೆಂದರೆ ಸದ್ಯಕ್ಕಂತೂ ಅಸಾಧ್ಯ ಮಾತು.
ಇದನ್ನು ಅರ್ಥಮಾಡಿಕೊಂಡೇ ಬಹುಶಃ ಸರಕಾರವು ಕಡಿಮೆ ನಗದು ಉಪಯೋಗಿಸಲು ಈ ಕ್ರಮ ಎಂದು ಕ್ರಮೇಣ ತನ್ನ ಹೇಳಿಕೆಗಳನ್ನು ಬದಲಾಯಿಸಲಾರಂಭಿಸಿತು. (ಇಂಗ್ಲಿಷ್ ನಲ್ಲಿ ಕ್ಯಾಷ್-ಲೆಸ್ ಎಂದು ಆರಂಭವಾಗಿ ಆ ಬಳಿಕ ಅದನ್ನು ಲೆಸ್-ಕ್ಯಾಷ್ ಎಂದು ಬದಲಾಯಿಸಿದ್ದು ಈ ಕಾರಣಕ್ಕೆ.)

ನಷ್ಟದಲ್ಲಿರುವ ಬ್ಯಾಂಕುಗಳು:
ದೇಶದ ಅನೇಕ ಬ್ಯಾಂಕುಗಳು ಕಳೆದ ಎರಡು ವರ್ಷಗಳಲ್ಲಿ ಕೆಟ್ಟ ಸಾಲಗಳಿಂದ ಅಪಾರ ನಷ್ಟ ಅನುಭವಿಸಿವೆ. ೨೦೧೫-೧೬ ರಲ್ಲಿ  ೫೧ ಲಕ್ಷ ಕೋಟಿ ಸಾಲದಲ್ಲಿ ೫ ಲಕ್ಷ ಕೋಟಿಗಿಂತಲೂ ಹೆಚ್ಚು ಕೆಟ್ಟ ಸಾಲಗಳಾಗಿದ್ದವು (ಬಡ್ಡಿ ಬಾರದ ಮತ್ತು ಅಸಲೇ ಸಿಗುವುದು ಅಸಂಭವ ಎನ್ನಲಾದ ಸಾಲಗಳು-ಬ್ಯಾಂಕಿಂಗ್ ಪರಿಭಾಷೆಯಲ್ಲಿ ಅನುತ್ಪಾದಕ ಆಸ್ತಿ ಅಥವಾ ಸಾಲಗಳು- ನಾನ್ ಪರ್-ಫಾರ್ಮಿಂಗ್ ಅಸೆಟ್ಸ್ -ಎನ್-ಪಿ-ಎ); ಸಪ್ಟಂಬರ ೨೦೧೬ ಕ್ಕೆ ಅವು ೬ ಲಕ್ಷ ಕೋಟಿಯ ಹತ್ತಿರ ತಲಪಿದ್ದುವು.  ಅವುಗಳಿಂದಾಗುವ  ನಷ್ಟವನ್ನು ಕಡಿತಗೊಳಿಸಲು ಇರುವ ವಿಭಿನ್ನ ಉಪಾಯಗಳಲ್ಲಿ ಒಂದು ಇನ್ನೂ ಹೆಚ್ಚು ಸಾಲ ಕೊಡುವುದು. ಸಾಲ ನೀಡಲು ಅವುಗಳಿಗೆ ಮೂಲಧನ ಬೇಕು. ಅವುಗಳ ನಷ್ಟ ಭರ್ತಿಮಾಡಿ ಪುನಃ ಸಾಲ ಕೊಡಲು, ಸರಕಾರ ಸುಮಾರು ೧.೮ ಲಕ್ಷ ರುಪಾಯಿಗಳ ಬಂಡವಾಳವನ್ನು ಕೊಡಮಾಡಬೇಕು. ಅದರ ಬದಲು ಕಡಿಮೆ ಬಡ್ಡಿ ತೆರಬೇಕಾದ ಉಳಿತಾಯ ಖಾತೆ ಮತ್ತು ಬಡ್ಡಿಯೇ ನೀಡಬೇಕಿಲ್ಲದ ಚಾಲ್ತಿಖಾತೆಗಳಿಗೆ ಗ್ರಾಹಕರಿಂದ ಹಣ ಬಂದರೆ ಆ ಠೇವಣಿಗಳನ್ನು ಹೊಸ ಸಾಲ ನೀಡಲು ವಿನಿಯೋಗಿಸಿಕೊಳ್ಳಬಹುದು. ಈ ಮಾರ್ಗವನ್ನು ಅನುಸರಿಸಿ ಬ್ಯಾಂಕುಗಳ ವ್ಯವಹಾರವನ್ನು ಕುದುರಿಸಬಹುದು ಎಂಬುದು ಕಣ್ಣಿಗೆ ಗೋಚರವಾಗದ ಉದ್ದೇಶ ಎಂದೂ ಬ್ಯಾಂಕಿಂಗ್ ರಂಗದ ತಜ್ಞರ ಅಭಿಪ್ರಾಯ. ೨೦೧೪-೧೬ರಲ್ಲಿ ಬ್ಯಾಂಕು ಠೇವಣಿಗಳು ಶೇಕಡಾ ೧೦ರಷ್ಟು ಕೂಡಾ ಹೆಚ್ಚಿರಲಿಲ್ಲ; ಆದರೆ ೨೦೧೬-೧೭ರಲ್ಲಿ ಅವುಗಳ ವೃದ್ಧಿ ಶೇಕಡಾ ೧೫ಕ್ಕಿಂತಲೂ ಹೆಚ್ಚಾಗುವ ಮುನ್ಸೂಚನೆಗಳಿವೆ.

ಅಪೇಕ್ಷಿತದ ಬದಲು ಅನಿರೀಕ್ಷಿತ ಪರಿಣಾಮ:
ಅಮೆರಿಕಾದ ಖ್ಯಾತ ಸಮಾಜ ಶಾಸ್ತ್ರಜ್ಞ ರಾಬರ್ಟ್ ಮೆರ್ಟನ್ ೧೯೩೬ರಲ್ಲಿ ಅಧಿಕಾರಿ ವರ್ಗದ ಒಂದು ನಿರ್ಧಾರ ವಿವಿಧ ರೀತಿಯ ಅನುದ್ದೇಶಿತ ಪರಿಣಾಮಗಳನ್ನು ಸಮಾಜದ ಮೇಲೆ ಉಂಟುಮಾಡಬಹುದು ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಅಂಥಹ ಘಟನೆ ಸಂಭವಿಸಿದರೆ ಅದರಿಂದ ಸಂಕಷ್ಟಕ್ಕೀಡಾಗುವವರು ಮೂರನೇಯವರು.
ಕೇಂದ್ರ ಸರಕಾರದ ಆಯ-ವ್ಯಯ ಪತ್ರದ ಪೂರ್ವಭಾವಿಯಾಗಿ ಕೇಂದ್ರ ಹಣಕಾಸು ಸಚಿವಾಲಯ ಸಂಸತ್ತಿನಲ್ಲಿ ೨೦೧೬-೧೭ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿತ್ತು. ಅದರ ಮೂರನೇ ಅಧ್ಯಾಯದಲ್ಲಿ ಎರಡು ಪ್ರಮುಖ ಹೇಳಿಕೆಗಳಿವೆ. ಒಂದು, ನೋಟುರದ್ದತಿಯಿಂದ ಉದ್ಯೋಗ ನಷ್ಟ, ಕೃಷಿ ಆದಾಯದಲ್ಲಿ ಕುಸಿತ, ನಗದು ವ್ಯವಹಾರವನ್ನೇ ಅವಲಂಬಿಸಿರುವ ಅಸಂಘಟಿತವಲಯದ ಚಟುವಟಿಕೆಗಳಿಗೆ ಹೊಡೆತ ಮುಂತಾದುವುಗಳ ಬಗ್ಗೆ ವರದಿಗಳು ಬಂದಿವೆ. ಎರಡು, ಅಕ್ರಮ ವ್ಯವಹಾರಗಳು, ಕಾಳಧನ, ಮತ್ತು ಹಣರೂಪದ ಉಳಿತಾಯ ಪ್ರವೃತ್ತಿ- ಇವುಗಳ ಮೇಲೆ ನೋಟು ರದ್ದತಿಯಿಂದಾದ ಪ್ರಭಾವವನ್ನು ತಿಳಿಯಲು ಕೆಲವೇ ವರ್ಷಗಳು ಬೇಕಾಗಬಹುದು. ಸರಕಾರದ  ಈ ಹೇಳಿಕೆಯೇ ನೋಟುರದ್ದತಿಯ ಪರಿಣಾಮಗಳ ಬಗ್ಗೆ ಕನ್ನಡಿ ಹಿಡಿದಂತಿದೆ.
ಅಕ್ರಮ ಸಂಪತ್ತನ್ನು ಹೊರ ಹಾಕುವುದು ಮತ್ತು ಕಳ್ಳ ನೋಟು ಚಲಾವಣೆ ಹಾಗೂ ಉಗ್ರಗಾಮಿ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ನೋಟು ರದ್ದತಿಯ ಘೋಷಿತ ಉದ್ದೇಶಗಳು; ಅವುಗಳ ಅಗತ್ಯದ ಬಗ್ಗೆಎರಡು ಮಾತಿಲ್ಲ. ಆದರೆ ಈ ನಿರ್ಧಾರದಿಂದ ಯಾವುದು ಆಗಬೇಕೋ ಅದನ್ನು ಸಾಧಿಸಲಾಗದೆ, ಸಮಾಜದ ಎಲ್ಲಾ ವರ್ಗಗಳ ಮೇಲೆ ಆಗಿರುವ ದುಷ್ಪರಿಣಾಮಗಳು ಮಾತ್ರ ಅನಿರೀಕ್ಷಿತ. ಕೇಂದ್ರ ಸರಕಾರ ಮತ್ತು ಅರ್ಥವ್ಯವಸ್ಥೆಯ ರಕ್ಷಣೆಯ ಜವಾಬ್ದಾರಿ ಯನ್ನು ಹೊಂದಿದ ರಿಸರ್ವ್ ಬ್ಯಾಂಕು ಸಾಕಷ್ಟು ಸಮಾಲೋಚನೆ ನಡೆಸದೆ  ಕೈಗೊಂಡ ಕ್ರಮದಿಂದ ಆಘಾತಕ್ಕೆ ಬಲಿಯಾದ ಅರ್ಥವ್ಯವಸ್ಥೆ, ಚೇತರಿಸಿಕೊಳ್ಳಲು ಮತ್ತು ಏಟು ತಿಂದ ದೇಶದ ಜನಸಾಮಾನ್ಯರು ತಮ್ಮ ಕಾಲಿನಲ್ಲಿ ನಿಲ್ಲಲು ಬಹಳ ಸಮಯವೇ ಬೇಕಾಗಬಹುದು.