ನೋಟ್ ಬುಕ್

ಮಕ್ಕಳಿಗಾಗಿ ಪುಸ್ತಕಗಳು ಬರುವುದು ಅಪರೂಪವೇ ಆಗಿರುವ ಸಮಯದಲ್ಲಿ ಡಾ. ಕೆ.ಶಿವಲಿಂಗಪ್ಪ ಹಂದಿಹಾಳು ಇವರು ಮಕ್ಕಳ ಕಥಾ ಸಂಕಲನ ‘ನೋಟ್ ಬುಕ್’ ಹೊರತಂದಿದ್ದಾರೆ. ಈ ಕಥಾ ಸಂಕಲನಕ್ಕೆ ತಮ್ಮ ಅನಿಸಿಕೆಗಳನ್ನು ಬರೆದ್ದಾರೆ ಕಿರಣ್ ಭಟ್. ಅವರು ತಮ್ಮ ಅನಿಸಿಕೆಯಲ್ಲಿ “ಬಹುಷ: ನಾವು ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ. ಸದಾನಂದನೆಂಬ ಕಿಲಾಡಿ ಹುಡುಗನೊಬ್ಬ ಒಂದು ದಿನ ವಿಶೇಷ ವಸ್ತುವೊಂದನ್ನು ತಂದ. ಗೋಲಾಕರದ ಸಣ್ಣ ವಿಕ್ಸ್ ಆಕಾರದ ಡಬ್ಬಿಯದು.ಅದಕ್ಕೆ ಮುಚ್ಚಲು ಮುಚ್ಚಿತ್ತು. ಗೆಳೆಯರಿಗೆ ತೋರಿಸಿಯೂ ತೋರಿಸಿದವ ಹಾಗೆ ಡಬ್ಬ ಹಿಡಿದುಕೊಂಡು ಡೌಲಿನಿಂದ ಒಡಾಡುತ್ತಿದ್ದ. ನಮಗೆಲ್ಲ ಅಪರಿಮಿತ ಕುತೂಹಲ. ಕೊನೆಗೂ ಸಂಜೆ ಶಾಲೆ ಬಿಟ್ಟ ಮೇಲೆ ಆ ಡಬ್ಬಿಯ ರಹಸ್ಯ ಬಯಲಾಯ್ತು. ಸಂಜೆ ಆಪ್ತ ಗೆಳೆಯರ ಸಮ್ಮುಖದಲ್ಲಿ ಡಬ್ಬಿಯ ಮುಚ್ಚಳ ತೆಗೆಯಲಾಯಿತು. ಒಂಥರಾ ಕಪ್ಪು ಅಂಟಿನಂಥಾ ವಸ್ತು ತುಂಬಿದ ಡಬ್ಬಿ ಅದು. ಅದನ್ನ ' ಅಂಜನ' ಅಂತ ಹೇಳ್ತಾರೆ ಅಂತ ಸದಾನಂದ ಹೇಳುತ್ತಿದ್ದ. ಅದರಲ್ಲಿ ಕಣ್ಣಿಟ್ಟು ನೋಡಿದರೆ ಕೋರಿಕೊಂಡದ್ದೆಲ್ಲ ಕಾಣುತ್ತದಂತೆ. ಹಾಗಂತ ಎಲ್ಲರಿಗೂ ಕಾಣೋದಿಲ್ಲ. ಅಂಥಂಥವರಿಗೆ ಮಾತ್ರ. ಸ್ವತ: ಸದಾನಂದನಿಗೂ ಏನೂ ಕಾಣುತ್ತಿರಲಿಲ್ಲ. ನನಗೂ ಒಬ್ಬೊ'ಬ್ಬರಾಗಿ ನೋಡುತ್ತ ಹೋದೆವು. ಕೊನೆಗೂ ಹರಿ ಎಂಬ ಹುಡುಗ ' ನನಗೆ ಕಾಣ್ತದೆ' ಅಂತ ಚೀರಿದ. ನಮ್ಮಪ್ಪ ಎಲ್ಲಿದಾರೆ' ಅಂತ ಕೇಳಿದರೆ ' ಪೇಟೇಲಿ' ಅಂದ. ಸದಾನ ಅಣ್ಣ ಏನು ಮಾಡುತ್ತಿದ್ದಾನೆ ಅಂತ ಕೇಳಿದರೆ 'ಸೈಕಲ್ ಹೊಡೀತಿದಾನೆ' ಎಂದ. ಕೊನೆಗೆ ಸೈಮನ್ ತನ್ನ 'ವೈರಿ' ಜಾನ್ ಏನು ಮಾಡಿತ್ತಿದ್ದಾನೆ ಎಂತ ಕೇಳಿದಾಕ್ಷಣ ಹರಿ ಜೋರಾಗಿ ನಗತೊಡಗಿದ. 'ಯಾಕೋ ಎಂತಾ ಆಯ್ತೋ' ಅಂದ್ರೆ, ಜಾನ್ ಎಲ್ಲಾ ಬಿಚ್ಕೊಂಡು ಸ್ನಾನ ಮಾಡತಿದಾನೆ. ಎಲ್ಲ ಕಾಣತದೆ' ಅಂತ ಗಹಗಹಿಸತೊಡಗಿದ. ಅಷ್ಟೇ ಹೊತ್ತಿಗೆ ನಮ್ಮ ಸೈನ್ಸ್ ಮಾಸ್ತರು ಬಂದು ಅದೆಲ್ಲ ಬೋಗಸ್ ಅಂತ ಹೇಳಿ, ಲೆಕ್ಚರ್ ಕೊಟ್ಟು ಹೋದ ಮೇಲೆ ಹರಿ ಸುಳ್ಳುತನವೂ ಬಯಲಾಗಿ, 'ಅಂಜನ' ದ ಡಬ್ಬಿಯೂ ಬರೀ ತಗಡು ಡಬ್ಬಿಯಾಯಿತು.
ಎಲ್ಲರ ಬಾಲ್ಯದಲ್ಲೂ ಇಂಥ ಫ್ಯಾಂಟಸಿಯ ಘಟನೆಗಳು ನಡೆದೇ ಇರುತ್ತವೆ. ಇಂಥ ಭ್ರಮೆಯ ಎಳೆಯೊಂದನ್ನು ಸುಮಾ ಎಂಬ ಹುಡುಗಿಯ ವಾಸ್ತವಿಕ ಬದುಕಿನ ಕಥೆಯ ಜೊತೆ ಕಸಿ ಮಾಡುವದರ ಮೂಲಕ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು 'ನೋಟ್ ಬುಕ್'ಎನ್ನುವ ಮಕ್ಕಳ ಕಥೆಯೊಂದನ್ನು ಕಟ್ಟುತ್ತಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ 'ನೋಟ್ ಬುಕ್' ಮಕ್ಕಳ ಕಥಾಸಂಕಲನದ ಹೆಸರೂ 'ನೋಟ್ ಬುಕ್'.
ತನ್ನ ಕನಸುಗಳನ್ನೆಲ್ಲ ನೋಟ್ ಬುಕ್ ನ ಕೊನೆಯ ಪುಟಗಳಲ್ಲಿ ಬರೆದಿಡುತ್ತಿರುವ ಹುಡುಗಿ ಸುಮಾ. ಅಚ್ಚರಿಯೆಂಬಂತೆ ಸೈಕಲ್ ನ ವಿಷಯದಲ್ಲಾಗಲೀ, ಶೂಗಳ ವಿಷಯದಲ್ಲಾಗಲೀ ಆಕೆ ಬರೆದಿಟ್ಟ ಕನಸುಗಳು ನನಸಾಗುವ ಚಮತ್ಕಾರಗಳೂ ಘಟಿಸಿವೆ. ಆಸೆಗಳನ್ನೆಲ್ಲ ಕೊನೇ ಪುಟದಲ್ಲಿ ಬರೆದು ಎಲ್ಲ ಕನಸುಗಗಳನ್ನೂ ನನಸಾಗಿಸಿಕೊಳ್ಳುತ್ತಿದ್ದ ಸುಮಾ ಇಂದು ಮಾತ್ರ ಖಗೋಳಶಾಸ್ತ್ರದ ಪ್ರಾಜೆಕ್ಟ್ ಒಂದರ ವಿಷಯದಲ್ಲಿ ಆಕೆಯನ್ನು ತೀವ್ರವಾಗಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ವೀರೇಶ್ ಸರ್ ಕುರಿತು ಬರೆಯುವಾಗ ಮಾತ್ರ ' ನೀನು ಅವರಿಗೆ ಶಾಪ ಕೊಡು' ಎಂದು ಬರೆದಿದ್ದಾಳೆ. ಮುಂದೊಂದು ದಿನ ʼಇಸ್ರೋʼ ನಲ್ಲಿ ಆಕೆಯ ಪ್ರಾಜಕ್ಟ್ ಗೆ ಬಹುಮಾನ ಬಂದು, ಅದೇ ಸಂತೋಷದಲ್ಲಿ ಕೊನೆಯ ಪುಟ ತೆರೆದರೆ ಅಲ್ಲಿ ವಿರೇಶ್ ಸರ್ ಅಕ್ಷರಗಳು....
' .....ಹಿಂದೆ ನಾನು ಸಂಶೋಧನೆಯಲ್ಲಿ ವಿಫಲಗೊಂಡ ವಿಷಯದಲ್ಲಿಯೇ ನೀನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವೆ.......ಇದಕ್ಕಾಗಿ ನಾನು ನಿನಗೆ ಅನೇಕ ಬಾರಿ ಕಷ್ಟಗಳನ್ನು ನೀಡಿದ್ದೇನೆ. ಆದರೆ ಅವೆಲ್ಲವೂ ನಿನ್ನೊಳಗಿನ ಪ್ರತಿಭೆಯನ್ನು ನಾನು ಸಾಣೆ ಹಿಡಿಯಲು ಮಾಡಿದ ತಂತ್ರಗಳೇ.....ಥ್ಯಾಂಕ್ಯೂ ಮಗಳೇʼ ಹೀಗೆ ನೋಟ್ ಬುಕ್ ನ ಕೊನೆಯ ಪುಟದಲ್ಲೇ ವೀರೇಶ್ ಸರ್ ರ ಅಕ್ಷರಗಳು ಕಾಣಿಸಿಕೊಳ್ಳುವದರ ಮೂಲಕ ಆ ಹುಡುಗಿಯ ಬದುಕಲ್ಲಿ ಅದುವರೆಗೂ ನಡೆದ ಚಮತ್ಕಾರಗಳಿಗೊಂದು ತಾರ್ಕಿಕ ಅಂತ್ಯವೂ ದೊರೆಯುತ್ತದೆ.
ಇಂಥ ಸುಮಾರು ಎಂಟು ಕಥೆಗಳು 'ನೋಟ್ ಬುಕ್ ನ ಪುಟಗಳಲ್ಲಿವೆ. ಇವುಗಳಲ್ಲಿ ನೋಟಬುಕ್ ಎನ್ನುವ ಕಥೆಯೂ ಸೇರಿದಂತೆ ಮೂರ್ನಾಲ್ಕು ನೀಳ್ಗತೆಗಳು. ಬರಹಗಾರರು ಶಿಕ್ಷಕರಾಗಿದ್ದುದರಿಂದಲೋ ಏನೋ ಕಥೆಗಳ ಕ್ಯಾನವಾಸ್ ಬಹುಭಾಗ ಶಾಲೆಗಳ ಆವರಣದಲ್ಲೇ ಹರವಿಕೊಂಡಿದೆ. ಒಂದಿಲ್ಲೊಂದು ರೀತಿಯಲ್ಲಿ ಕಥೆಗಳಲ್ಲಿ ಮಕ್ಕಳು ಮತ್ತು ಶಾಲೆ ತಳಕು ಹಾಕಿಕೊಂಡಿವೆ. ಮತ್ತು ಆ ಕಾರಣಕ್ಕಾಗಿಯೇ ಅವು ಜೀವನಾನುಭವದ ಸಾರವನ್ನೆಲ್ಲ ತುಂಬಿಕೊಂಡು ಜೀವಂತವಾಗಿವೆ. ಮಕ್ಕಳ ಬದುಕಿನ ಖುಷಿಯ ಭಾಗವೇ ಆಗಿರುವ ನಿಸರ್ಗವೂ ಕಥೆಗಳ ತುಂಬ ತುಂಬಿಕೊಂಡು ತಂಪು ಕೊಡುತ್ತದೆ. ಮಕ್ಕಳ ಕನಸುಗಳಿಗೂ ಇಲ್ಲಿ ಪ್ರಮುಖ ಸ್ಥಾನವಿದೆ. ಆದರೆ ಎಲ್ಲ ಕನಸುಗಳ ದಾರಿಯಲ್ಲೂ ಬದುಕಿನ ವಾಸ್ತವ ಮುಖಾಮುಖಿಯಾಗುತ್ತದೆ. 'ಹೊಸ ಬಟ್ಟೆ' ಯ ಖುಶಿ ಎನ್ನುವ ಹುಡುಗಿ ಹೊಸ ಲಂಗದ ಕನಸು ಕಾಣುತ್ತಲೇ ವಾಸ್ತವವನ್ನು ಒಪ್ಪಿಕೊಂಡರೆ, 'ಲೈಟು ಕಂಬ' ದ ಬಡ್ಯೆಗ ವಾಸ್ತವಕ್ಕೆ ಸಡ್ಡು ಹೊಡೆದು ತಕ್ಕ ಕನಸಾದ ವಿಮಾನ ವನ್ನು ತಾನೇ ತಯಾರಿಸಿ ಜನರ ಶಹಬ್ಬಾಸ್ ಗಳಿಸುತ್ತಾನೆ. 'ಮಳೆಬಿಲ್ಲು' ಮತ್ತು 'ಕೂಸುಮೋಡ' ದಂಥ ಕಥೆಗಳು ಮತ್ತೆ ಮತ್ತೆ ಮಕ್ಕಳನ್ನು ನಿಸರ್ಗದ ತೆಕ್ಕೆಗೆ ಒಯ್ಯುತ್ತವೆ.
ಕಥೆಗಳು ಬಹುಪಾಲು ಗ್ರಾಮೀಣ ಪರಿಸರದಲ್ಲೇ ಮೈದಳೆದವು. ಒಂದೆರಡು ಕಥೆಗಳಲ್ಲಂತೂ ಬಳ್ಳಾರಿಯ ಹಳ್ಳಿಯ ಗಾಳಿಯೊಂದಿಗೆ ಭಾಷೆಯ ಬನಿಯೂ ಸೇರಿಕೊಂಡಿದೆ. ಕನ್ನಡದ ಮಕ್ಕಳ ಕಥಾಲೋಕ ಫ್ಯಾಂಟಸಿಯ, ಜಾನಪದ ಕಥೆಗಳಾಚೆ ಹರಡಿಕೊಳ್ಳುತ್ತಿದೆ. ಮಕ್ಕಳಿಗೆ ನೀತಿ ಹೇಳುವ, ಉಪದೇಶ ಮಾಡುವ ಕಥೆಗಳಿಗಿಂತ ಭಿನ್ನವಾಗಿ ಅವರದೇ ಲೋಕದ ಕಥೆಗಳನ್ನು ಮಕ್ಕಳಿಗೆ ಹೇಳಲು ಮಕ್ಕಳ ಸಾಹಿತಿಗಳು ಪ್ರಯತ್ನಿಸುತ್ತಿದ್ದಾರೆ. ಡಾ. ಶಿವಲಿಂಗಪ್ಪ ಹಂದಿಹಾಳು ಇಂಥ ಕೆಲವು ಕಥೆಗಳನ್ನು ' ನೋಟಬುಕ್' ನಲ್ಲಿ ಬರೆದುಕೊಟ್ಟಿದ್ದಾರೆ. ಒಂದಕ್ಕಿಂತ ಒಂದು ಚಂದ ಕಥೆಗಳಿವೆ. ಮಕ್ಕಳು ಇಷ್ಟಪಡುವ ಬಣ್ಣಗಳು, ಚಿತ್ರಗಳು ಇಡಿಯ ನೋಟಬುಕ್ ತುಂಬ ಇವೆ. ಚಂದದ ವಿನ್ಯಾಸವಿದೆ. ಅವರು ಇನ್ನೂ ತಾಂತ್ರಿಕವಾಗಿ ಇನ್ನೂ ಎರಡು ಹೆಜ್ಜೆ ಮುಂದೆ ಹೋಗಿದ್ದಾರೆ. ಬಹುಷ: ಕನ್ನಡದಕ್ಕೆ ಅಪರೂಪವೆಸಿಬಹುದಾದ 'ನೋಡುಕಥೆ' ಗಳನ್ನು ಪುಸ್ತಕದಲ್ಲಿ ಅಳವಡಿಸಿದ್ದಾರೆ. ಕಥೆಯಲ್ಲೇ ಇರುವ ಕ್ಯೂ ಆರ್ ಕೋಡ್ ಬಳಸಿ ಕಥೆಗಳ ಓದಿನ ವಿಡಿಯೋ ನೋಡಬಹುದು. ರಂಗಭೂಮಿಯ ಹಿನ್ನೆಲೆಯ ಕಲಾವಿದರು ತುಂಬ ಚೆನ್ನಾಗಿ ಕಥೆಗಳನ್ನು ಓದಿದ್ದಾರೆ. ಆಧುನಿಕ ಮಕ್ಕಳ ಸಾಹಿತ್ಯದ ಹಾದಿಯ ಮುಂಪಥಿಕರಾದ ಆನಂದ್ ಪಾಟೀಲರು ಇಂದಿನ ಕನ್ನಡ ಮಕ್ಕಳ ಸಾಹಿತ್ಯದ ಸ್ಥಿತಿಗತಿ ಗಳನ್ನು ವಿಶ್ಲೇಷಿಸುತ್ತಲೇ ಪುಸ್ತಕದ ಕುರಿತ ವಿವರವಾದ ಹಿನ್ನುಡಿ ಬರೆದಿದ್ದಾರೆ. ಬೆನ್ನಿನ ಪುಟದಲ್ಲಿ ಕೇಶವ ಮಳಗಿಯವರ ಬರಹವಿದೆ.
ಸುಮಾರು ಎರಡು ದಶಕಗಳ ಹಿಂದಿನ ಮಾತು. ' ಚಿಂತನ ಪುಸ್ತಕ ಮಳಿಗೆ' ಯ ನಾವು ಬಸ್ಸುಗಳಲ್ಲಿ ಪುಸ್ತಕ ಮಾರುತ್ತಿದ್ದ ದಿನಗಳು. ಕೆಲವು ಬಾರಿ ಮಕ್ಕಳ ಪುಸ್ತಕಗಳನ್ನು ಒಯ್ಯುತ್ತಿದ್ದೆವು. ಅವುಗಳ ಬೆಲೆ ಸುಮಾರಿಗೆ ಹತ್ತು ರೂಪಾಯಿ ಇರುತ್ತಿತ್ತು. ಇಂಥ ಪುಸ್ತಕಗಳನ್ನು ಕೊಳ್ಳುತ್ತಿದ್ದವರು ಹೆಚ್ಚಾಗಿ ಗ್ರಾಮೀಣ ಮಹಿಳೆಯರು. ಮನೆಗೆ ಕೊಂಡೊಯ್ದು ಮಕ್ಕಳಿಗೆ ಕೊಡಬೇಕೆಂಬ ಆಸೆ ಅವರಿಗಿದ್ದರೂ ಹತ್ತು ರೂಪಾಯಿ ಕೊಡುವುದೂ ಅವರಿಗೆ ಕಷ್ಟವಾಗುತ್ತಿತ್ತು. ಆ ಕಾರಣಕ್ಕಾಗಿ ನಾವೇ ಒಂದು ಮಕ್ಕಳ ನಾಟಕ, ಮೂರು ಕಥೆ, ಕೆಲವು ಹಾಡುಗಳನ್ನು ಸೇರಿಸಿ ' ಆಡು ಬಾ; ಹಾಡು ಬಾ' ಎನುವ ಕಿರು ಪುಸ್ತಕ ತಂದೆವು. ಅದೇ ಮಹಿಳೆಯರು ಖುಶಿ ಖುಶಿಯಿಂದ ಪುಸ್ತಕ ಕೊಳ್ಳುವಂತಾಯಿತು.
ಮಕ್ಕಳ ಸಾಹಿತ್ಯ ಮಕ್ಕಳನ್ನ ಮುಟ್ಟಬೇಕು ಆಂತಾದರೆ ಮೊದಲು ಪಾಲಕರ ಕೈಗೆ ಎಟುಕಬೇಕು. ಮಕ್ಕಳಿಗೆ ಬೇರೆಯೇ ಅನುಭವ ನೀಡಬಲ್ಲ ಇಂಥ ಪುಸ್ತಕಗಳನ್ನು ಪ್ರಕಾಶಿಸಲು ದೊಡ್ಡ ದೊಡ್ಡ ಪ್ರಕಾಶಕರು ಮುಂದೆ ಬರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಗಳು ಪ್ರಕಟವಾದಾಗ ಬೆಲೆಯೂ ಕಡಿಮೆಯಾಗಿ ಹೆಚ್ಚು ಹೆಚ್ಚು ಮಕ್ಕಳಿಗೆ ಪುಸ್ತಕಗಳು ತಲುಪಲು ಸಾಧ್ಯ.” ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ. ಅನಂದ ಪಾಟೀಲ ‘ಇಲ್ಲಿನ ಎಲ್ಲ ಕತೆಗಳಲ್ಲಿ ಮೇಲು ನೋಟಕ್ಕೆ ಕಾಣುವಂತೆ ಎಲ್ಲೆಲ್ಲೂ ಬಾಲ್ಯವೇ ಹರಡಿಕೊಂಡಿದೆ. ಬಾಲ್ಯದ ಸಮಯದಲ್ಲಿ ಮನುಷ್ಯ ಜೀವಿ ಕಟ್ಟಿಕೊಳ್ಳುವ ಮುಗ್ಧ ಕನಸುಗಳು, ತಳೆಯುವ ಕುತೂಹಲಗಳು, ಸ್ವಚ್ಛಂದಗಳು, ಜೊತೆಗೆ ಅವಕ್ಕೆ ಅರ್ಥವಾಗದೆ ಅಂಟಿಕೊಂಡೇ ಬರುವ ವಾಸ್ತವದ ಬೇಸರಗಳು, ನೋವುಗಳು ಇಲ್ಲಿ ವಿಶೇಷವಾಗಿ ಹರಡಿಕೊಂಡಿವೆ. ಗ್ರಾಮೀಣ, ಬಡ ಮಕ್ಕಳೇ ಇಲ್ಲಿನ ಎಲ್ಲ ಕತೆಗಳಲ್ಲಿ ಕಾಣಸಿಗುತ್ತಾರೆ. ಒಂದಿಷ್ಟು ಅನುಕೂಲತೆಗಳಿರುವ ಮಕ್ಕಳ ಜೊತೆಗೆ ತುಸು ತುಸುವಿಗೂ ಪಡಬಾರದ ಕಷ್ಟಪಡುವ, ತಾನು ಕಾಣುವ ಕನಸನ್ನೇ ಅರ್ಧಕ್ಕೆ ನಿಲ್ಲಿಸಿಕೊಂಡು ಬಿಡುವ ಮಕ್ಕಳ ಚಿತ್ರಗಳು ಇಲ್ಲಿ ಸಾಮಾನ್ಯವಾಗಿ ಕತೆಗಳಿಗೆ ತೆರೆದುಕೊಂಡಿವೆ. ಅದರಲ್ಲೂ ಬಳ್ಳಾರಿ ಭಾಗದ ಮಕ್ಕಳ ಜಗತ್ತು ಇದು ಎನ್ನುವಂತೆ ಅಲ್ಲಿನದೇ ಪರಿಸರದಲ್ಲಿ ಅರಳಿದ ಕತೆಗಳು ಇವಾಗಿವೆ. ಈಗಾಗಲೇ ಹೇಳಿದಂತೆ ಓದುವ ಮಗುವಿಗೆ ಏನನ್ನೋ ಉಪದೇಶವೋ, ನೀತಿಯ ಮಾತನ್ನೋ ಹೇಳಲು ಕಟ್ಟಿಕೊಂಡ ಚೌಕಟ್ಟುಗಳಲ್ಲ ಇವು. ಬದಲಿಗೆ, ಸುತ್ತಲಿನ ವಾತಾವರಣದ ಅನುಭವಗಳೇ ಮೈತಳೆದುಕೊಂಡು ರೂಪುಗೊಂಡವು. ಹಾಗಾಗಿ ಈ ಕತೆಗಳ ಓದು ಎನ್ನುವುದು ಕೇವಲ ಪಾಠದ ಓದಾಗದೆ ಅದೇ ಒಂದು ಅನುಭವವಾಗಿ ಬಿಡುತ್ತದೆ, ಆಗಬೇಕಾದ್ದೇ ಅದು’ ಎಂದು ಪ್ರಶಂಸಿಸಿದ್ದಾರೆ.
ಶಿವಲಿಂಗಪ್ಪ ಈ ಕತೆಗಳನ್ನು ಬಹು ತಾಳ್ಮೆಯಿಂದ, ಹೆಚ್ಚು ಹೆಚ್ಚು ಕಲಾತ್ಮಕವಾಗುವಂತೆ ಮುಂದಿರಿಸುವಲ್ಲಿ ಶೃದ್ಧೆಯಿಂದ ತೊಡಗಿಕೊಂಡಿರುವುದು ಎದ್ದು ಕಾಣುತ್ತದೆ. ಈ ಕತೆಗಳು ದೀರ್ಘವಾಗಿ ಹರಡಿಕೊಂಡಿವೆ. ಆಡುಮಾತಿನ ಬನಿಯನ್ನು ಬಲು ಅಗತ್ಯವಾಗಿ ಬಳಸಿಕೊಂಡಿವೆ. ಸುತ್ತಲಿನ ಪರಿಸರವನ್ನು ಕೈಗೆ ಅಂಟುವಂತೆ ದಟ್ಟವವಾಗಿಸಿಕೊಂಡುದು ಎಲ್ಲವೂ ಈ ಕತೆಗಳು ಸಹಜವಾಗಿ ಅರಳುವುದಕ್ಕೆ ತಕ್ಕ ಮೈಯನ್ನು ಒದಗಿಸಿವೆ. ಇಲ್ಲಿನ ಮಣ್ಣಿನ ಮಕ್ಕಳ ನಿತ್ಯದ ದನಿ ಗಟ್ಟಿಯಾಗಿ ಕೇಳಿದೆ. ಜೊತೆಗೆ ಈ ಬಗೆಯ ಕತೆಗಳನ್ನು ಕಲಾತ್ಮಕವಾಗಿಸುವಲ್ಲಿ ಭಾಷೆಯನ್ನು ದುಡಿಸಿಕೊಂಡಿರುವ ಬಗೆ ಆಕರ್ಷಿಸುತ್ತದೆ. ಅದೂ ಮಕ್ಕಳ ಮನೋಲೋಕಕ್ಕೆ ತಕ್ಕುದಾಗಿ ತನ್ನನ್ನು ಕಂಡುಕೊಂಡಿರುವುದು ಇನ್ನೊಂದು ಮಗ್ಗಲಾಗಿದೆ’ ಎಂದೂ ಶ್ಲಾಘಿಸಿದ್ದಾರೆ.