ನೋಟ್ – ರದ್ದತಿ

ನೋಟ್ – ರದ್ದತಿ

    ಹೆಚ್ಚಿನ  ಮುಖಬೆಲೆಯ ನೋಟ್ – ರದ್ದತಿಯ  ಮೋದಿಯ ನಿರ್ಧಾರದಿಂದ  ನನಗಂತೂ ಹಾಲು ಕುಡಿದಷ್ಟು ಸಂತಸವಾಯ್ತು. ಸಾಮಾನ್ಯ ಜನರಿಗೆ ಸ್ವಲ್ಪ ದಿನ  ತೊಂದರೆಯಾದರೂ, ದೂರಗಾಮಿಯಾಗಿ ಈ ದಿಟ್ಟ ನಿರ್ಧಾರ ಭಾರತ ದೇಶಕ್ಕೆ  ಒಳಿತನ್ನುಂಟು  ಮಾಡುವಂಥದು ಅಂತ ನನ್ನ ಬಲವಾದ ನಂಬಿಕೆ. ಇದು ಕಾಳಧ‌ನದ  ಬುಡಕ್ಕೇ ಕೈ ಹಾಕುವುದರಿಂದ, ಈ ನಿರ್ಧಾರದಿಂದ ಮೋದಿ ಬೆಂಕಿಯೊಡನೆ ಸರಸಕ್ಕೆ  ಕೈ ಹಾಕಿದ್ದಾರೆ- ಹಾಕಿ ಸೈ ಎನಿಸಿಕೊಂಡಿದ್ದಾರೆ.  ಈ ನಿರ್ಧಾರದ  ಪರ-ವಿರೋಧ‌  ಚರ್ಚೆಗಳು ಕಾವೇರಿರುವುದಂತೂ ನಿಜ.  ಮೋದಿ ಏನು ಮಾಡಿದರೂ ಸರಿ ಎಂದು ದೇಶಭಕ್ತಿಯ ಗುರಾಣಿಯನ್ನಿಟ್ಟುಕೊಂಡು ಮಾತಾಡುವ  ಬಿ.ಜೆ.ಪಿ.ಯವರನ್ನು, ಹಾಗೂ,  ಮೋದಿ ಏನು ಮಾಡಿದರೂ ತಪ್ಪು ಹಾಗೂ ಅದರಲ್ಲಿ ತಪ್ಪನ್ನೇ ಹುಡುಕುವ ಪ್ರತಿಪಕ್ಷದವರನ್ನು, ಹಾಗೂ  ಅವರ ಅರ್ಥರಹಿತ  ಹಳಹಳಿಕೆಗಳನ್ನು ಬದಿಗಿಟ್ಟು, ರಾಜಕೀಯೇತರ, ಸಾಮಾನ್ಯ ಜನರ ವಾದಗಳನ್ನು ನಾನಿಲ್ಲಿ ಮಂದಿಡ ಬಯಸುತ್ತೇನೆ.
 "ನಿಜವಾದ ಕಾಳಧ‌ನಿಕರಿಗೆ ಇದರಿಂದ ತೊಂದರೆ ಆಗುತ್ತಿಲ್ಲ.  ಜನ ಸಾಮಾನ್ಯರಷ್ಟೇ ತೊಂದರೆಗೀಡಾಗಿದ್ದಾರೆ. ಯಾಕೆ ಅಂದ್ರೆ, ಕಾಳಧ‌ನಿಕರು  ಕಾಳಧ‌ನವನ್ನು ಹಣವಾಗಿ  ಇಟ್ಟಿರೋಲ್ಲ, ಬದಲಾಗಿ ಚಿನ್ನ ಮತ್ತು ಭೂಮಿಯಲ್ಲಿ  ಇಟ್ಟಿರುತ್ತಾರೆ."
        ನಿಜ, ಇದು  ಅಸತ್ಯವಲ್ಲ – ಆದರೆ  ಅರ್ಧ‌ ಸತ್ಯ.  ಜನಸಾಮಾನ್ಯರ ಬವಣೆಗಳು ನಮಗೆ ಎದ್ದು ಕಾಣುತ್ತಿದೆ.  ಹಾಗಾಗಿ ನಾವು ಹತಾಶರಾಗಿದ್ದೇವೆ.  ಆದರೆ, ಹಣ, ಚಿನ್ನ ಯಾ ಭೂಮಿ –ಯಾವುದೇ ರೀತಿಯಲ್ಲಿಟ್ಟಿದ್ದರೂ, ಕಾಳಧ‌ನಿಕರ ನಿದ್ದೆ ಹಾರಿ ಹೋಗಿರೋದಂತೂ ನಿಜ.  ಇದು ಎದ್ದು ಕಾಣದ ಸತ್ಯ.  ಅಷ್ಟಕ್ಕೂ ಮೋದಿಯ ಈ ಯತ್ನ ಕೇವಲ ಆರಂಭ ಅಷ್ಟೇ.  ಇದರ ಮುಂದುವರೆದ ಭಾಗವಾದ ಕೆಲ ಕ್ರಮಗಳಿಂದ  ಕಾಳಧ‌ನದ ಮೂಲದವರೆಗೆ  ಹೋಗುವುದು ಅಸಾಧ‌್ಯವೇನಲ್ಲ. ಹಾಗಾಗಿ, ಈ  ಕ್ರಮದಿಂದ  ಒಮ್ಮೆಗೇ ಕಾಳಧ‌ನದ ಮೂಲೋತ್ಪಾಟನೆಯಾದೀತೆಂಬ ಭ್ರಮೆ  ಬೇಡ.  ಆದರೆ, ಕಾಳಧ‌ನದ ವಿರುದ್ಧದ  ಸಮರದ ಮೊದಲ ಹೆಜ್ಜೆಯಂತೂ ಹೌದು.  ನೋಟ್ ರದ್ದತಿಯ  ಈ ಕ್ರಮ, ಲೆಕ್ಕಕ್ಕೆ  ಸಿಗದ ಹಣವನ್ನು  ಲೆಕ್ಕಕ್ಕೆ ತರುವ ಒಂದು ಯತ್ನ ಅಷ್ಟೇ.  ಇದರಿಂದ ಮೊದಲಿಗೆ, ಚುನಾವಣೆಗಳಲ್ಲಿ ನೀರಿನಂತೆ ಹರಿಯುತ್ತಿದ್ದ  ಹಣದ ಹರಿವಿಗೆ ಕಡಿವಾಣ ಬೀಳುತ್ತದೆ.  ಎರಡನೆಯದಾಗಿ, ಈಗ ಚಲಾವಣೆಯಲ್ಲಿದ್ದ ಹೆಚ್ಚಿನ  ಮುಖಬೆಲೆಯ ನೋಟುಗಳಲ್ಲಿ  ಬಹು ಭಾಗ  ಖೋಟಾ ನೋಟುಗಳಾಗಿದ್ದು, ಅದಕ್ಕೂ  ಕಡಿವಾಣ ಬಿದ್ದಂತಾಗುತ್ತದೆ.  ಈ ಖೋಟಾನೋಟಿನ ದಂಧೆಯು ಭಯೋತ್ಪಾದಕರ  ಮುಖ್ಯ ಧ‌ನಮೂಲವಾಗಿದೆ.   ಹಾಗಾಗಿ ನೋಟ್ ರದ್ದತಿಯ ಕ್ರಮವು ಭಯೋತ್ಪಾದಕರ ಆದಾಯಕ್ಕೇ ಕತ್ತರಿ ಹಾಕುವುದರಿಂದ‌ ಭಯೋತ್ಪಾದನೆಯೂ ಒಂದಿಷ್ಟು  ತಹಬಂದಿಗೆ  ಬರುವುದು ಸುಳ್ಳಲ್ಲ. ಮೋದಿಯ  ಉಪಕ್ರಮದ‌ ಉದ್ದಿಶ್ಯ‌, ಕಾಳಧ‌ನದ ಕಡಿವಾಣಕ್ಕಿಂತ, ಭಯೋತ್ಪಾದನೆಯ ಬೆನ್ನು ಮೂಳೆ  ಮುರಿಯುವುದೇ ಮುಖ್ಯವಾಗಿದ್ದೀತು ಅಂತ ಅನ್ನಲೂ  ಅಡ್ಡಿಯಿಲ್ಲ. ನವೆಂಬರ್ 8ರ ನಂತರ ಕಾಶ್ಮೀರದಲ್ಲಿ ಕಲ್ಲು ತೂರಾಟ ಕಡಿಮೆಯಾಗಿರುವುದು ಕಾಕತಾಳೀಯವಂತೂ ಅಲ್ಲ !
ನಿಜ, ಕಾಳಧ‌ನಿಕರು ರಂಗೋಲಿ ಕೆಳಗೆ ತೂರುವ ಯತ್ನ ಮಾಡಿ  ಧ‌ನಪರಿವರ್ತನೆಗೆ ಮುಂದಾಗುತ್ತಿದ್ದಾರೆ. ಅದಕ್ಕಾಗಿ ಅವರು ಸಾಕಷ್ಟು ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಬಡವರ ಗುರುತಿನ ಚೀಟಿಗಳು ಈಗ ಅವರಿಗೆ `ಕಮಿಷನ್'  ಒದಗಿಸುತ್ತಿದೆ.  ಆದರೆ, ಈ ಎಲ್ಲ ಕ್ರಮಗಳಿಂದ, ಒಂದು 20% ಕಾಳಧ‌ನ  ಬಿಳಿಯಾದೀತೇ ಹೊರತು, ಉಳಿದ 80% ನಗಣ್ಯವಾದೀತಲ್ಲ – ಅಷ್ಟು ಸಾಕು, ದೇಶದ ಒಳಿತಿಗೆ. ಚಿನ್ನ, ಭೂಮಿಯಲ್ಲಿ ಕಾಳಧ‌ನವಿಟ್ಟವರು, ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ `ಪ್ರಜಾಪ್ರಭುತ್ವ'ದ  ಅಣಕವನ್ನಂತೂ  ಸದ್ಯದ ಪರಿಸ್ಥಿತಿಯಲ್ಲಿ ಮಾಡಲಾಗುವುದಿಲ್ಲವಲ್ಲಾ – ಅಷ್ಟು ಸಾಕು. ನಾನಂತೂ  ಅಲ್ಪ ತೃಪ್ತ‌.
ಜನ ಸಾಮಾನ್ಯರ  ಪರಿಪಾಟಲು ಅಷ್ಟಿಷ್ಟಲ್ಲ, ನಿಜ. ಆದರೆ,  ಈ ಉಪಕ್ರಮದ ಕಾರ್ಯಕಾರಣ‌ ಯಾ ಮುಖ್ಯ‌ ಉದ್ದೇಶ‌ ಬಹು ದೊಡ್ಡದು.  ದೇಶದ ಅಭಿವೃದ್ಧಿಗೆ  ಇದು ಅತ್ಯಗತ್ಯವಾಗಿ  ಬೇಕಾಗಿತ್ತು.  ಕಾಳಧ‌ನ,  ಭಯೋತ್ಪಾದಕರಿಗೆ ಧ‌ನಮೂಲ, ಖೋಟಾನೋಟು  ಹಾವಳಿ ಮುಂತಾದ ಪಿಡುಗುಗಳು ಯಾವುದೇ ದೇಶದ ಅಭಿವೃದ್ಧಿಗೆ  ಮಾರಕ.  ಅಂಥ ಮಾರಕಗಳಿಗೆ ಮಾರಕಾಸ್ತ್ರ  ಬೀಸಿದಾಗ  ದೇಶಕ್ಕೆ  ಒಳಿತಾದೀತು.  ದೇಶದ ಒಳಿತಿಗಾಗಿ ನಾವು ಇಷ್ಟೂ ಸಹಿಸಲಾರೆವೇ?  ಈ ಕ್ರಮದಿಂದ  ಧ‌ನ-ಮದ-ಬಲದ ರಾಜಕಾರಣ ತಗ್ಗೀತು.  ಇದು ಒಳ್ಳೆಯ  ಆಳ್ವಿಕೆಗೆ  ಪೂರಕ.  ಭಯೋತ್ಪಾದನೆ   ತಗ್ಗೀತು.  ಖೋಟಾನೋಟಿನ  ಭಯ ಇಳಿದೀತು. ಹೇಳಿ, ಇದು ಬೇಡವೇ ? ಇಂಜೆಕ್ಷಿನ್ನಿನ ನೋವಿನ ಭಯದಿಂದ ಇಂಜೆಕ್ಷನ್ ತೆಗೆದುಕೊಳ್ಳದಿದ್ದಲ್ಲಿ ರೋಗ ಗುಣವಾದೀತೇ ?  ನೋಟು ರದ್ದತಿಯಿಂದ `ಇಷ್ಟೊಂದು'  ಅನುಭವಿಸುವುದಕ್ಕಿಂತ, ಈಗಿನ ಭ್ರಷ್ಟಾಚಾರ ಹಾಗೂ ಕೆಟ್ಟ ರಾಜಕಾರಣದ ಕೊಚ್ಚೆಯಲ್ಲಿಯೇ ನೆಮ್ಮದಿಯಿಂದಿರುತ್ತೇವೆಂಬ ಸಿನಿಕತನವೇಕೆ? ಈ ಕ್ರಮದಿಂದ ತಕ್ಷಣ ಸ್ವರ್ಗ ಧ‌ರೆಗೆ ಇಳಿದುಬಿಡುತ್ತೇಂತಲ್ಲ - ಪಿಡುಗುಗಳು  ಸ್ವಲ್ಪವಾದರೂ ತಗ್ಗೀತೆಂಬ ಆಶಾವಾದ. ಭ್ರಷ್ಟಾಚಾರದಿಂದ  ಬೇಸತ್ತು ಜನಸಾಮಾನ್ಯರೇ ಮೋದಿಯ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ನಾನಂತೂ ಆಶಾವಾದಿ. ನೀವು?
"ತಕ್ಕ ವ್ಯವಸ್ಥೆ ಮಾಡದೇ  ದಿಢೀರ್  ನಿರ್ಧಾರ ಬೇಡವಿತ್ತು"
    ಸೂಕ್ತ ವ್ಯವಸ್ಥೆ ಮಾಡಿ  ಈ ನಿರ್ಧಾರ  ಕೈಗೊಂಡಿದ್ದಲ್ಲಿ, ಸರ್ಕಾರದ ಈ `ನಡೆ' ಯನ್ನು  ಮುಂಚೆಯೇ ಆಘ್ರಾಣಿಸಿ, ಜಾಣ ಕಾಳಧ‌ನಿಕರು ತಮ್ಮಲ್ಲಿನ‌ ಕಾಳಧ‌ನವನ್ನು ಸಂಪೂರ್ಣ ಬಿಳಿಯಾಗಿಸಿ ಮತ್ತೆ ತಮ್ಮಲ್ಲಿಯೇ  `ಬಂಧಿ' ಯಾಗಿಸುತ್ತಿದ್ದರು.  ಕೆಲ `ನರರೋಗ'ಗಳಿಗೆ  ಶಾಕ್ ಟ್ರೀಟ್‍ಮೆಂಟೇ ಗತಿ ಎನ್ನುವಂತೆ, ಈ ನಿರ್ಧಾರ  ದಿಢೀರ್  ಆಗಿದ್ದರಷ್ಟೇ ಕಾರ್ಯಸಾಧ‌ನೆಯಾಗುವುದು. Of course, ಎರಡು ಸಾವಿರದ  ನೋಟಿನ ಬದಲು ಐನೂರರ ನೋಟನ್ನೇ  ಸುಧಾರಿತ ವಿನ್ಯಾಸದಲ್ಲಿ ಮೊದಲೇ ತಯಾರಿಸಿಟ್ಟುಕೊಂಡು, ಈ ನಿರ್ಧಾರ ಕೈಗೊಂಡಿದ್ದರೆ, ಜನಗಳಿಗೆ ಇಷ್ಟು ತೊಂದರೆಯಾಗುತ್ತಿರಲಿಲ್ಲ ಅನ್ನುವುದು  ನನ್ನ ಭಾವನೆ.
ನೋಟು ವಿನಿಮಯಕ್ಕೆ ನಿಯಂತ್ರಣವನ್ನು ಜನರು ತಪ್ಪು ತಿಳಿದಿದ್ದಾರೆ. ನೋಟು ವಿನಿಮಯಕ್ಕೆ ಮಾತ್ರ ನಿಯಂತ್ರಣವೇ ಹೊರತು, ನಿಮ್ಮ ಖಾತೆಗೆ ಜಮೆ ಮಾಡಲು  ನಿಯಂತ್ರಣವಿಲ್ಲ. ಹಣ ಹಿಂಪಡೆಯಲು ವಿಧಿಸಿದ‌ ನಿಯಂತ್ರಣದಿಂದ ನಮ್ಮ ಸಹಜ ಜೀವನ ಶೈಲಿಗೇನೂ ಅಡ್ಡಿಯಿಲ್ಲ.  ಖಾತೆ ಹೊಂದಿರಲಾರದವರು ಪರಿಪಾಟಲಿಗೀಡಾಗುತ್ತಿದ್ದಾರೆ. ಅದಕ್ಕೇ  ತಾನೇ ಸರ್ಕಾರ ಜನ-ಧ‌ನ ಖಾತೆ ತೆರೆಯಲು  ಪ್ರೋತ್ಸಾಹಿಸಿದ್ದು. ಆಗ ಖಾತೆ ತೆರೆಯದೇ ಈಗ ಹುಯಿಲೆಬ್ಬಿಸುವುದು ಯಾವ ಜಾಣತನ?
ಇದರ ಜೊತೆಗೆ, ಕೆಲವರಿಂದ ಜನರಿಗೆ  ತಪ್ಪು ಮಾಹಿತಿ ರವಾನೆ-  ಖಾತೆಗೆ ಹಣ ಹಾಕಿದರೆ ತೆರಿಗೆ ಅಂತ.  ನಿಮ್ಮ ಹಣಕ್ಕೆ  ನಿಮ್ಮಲ್ಲಿ ಸರಿಯಾದ ಲೆಕ್ಕ ಇದ್ದರೆ, ನಿಮ್ಮ ಖಾತೆಗೆ  50 ಕೋಟಿ ರೂ. ಜಮೆ ಮಾಡಿದರೂ ನಿಮಗೆ ಭಯ ಬೇಡ.  ಇದು ಗೊತ್ತಿಲ್ಲದೇ ಜನ ನೋಟು ವಿನಿಮಯಕ್ಕೇ ಮೊರೆ ಹೊಕ್ಕು ಬೇಡದ ಕಷ್ಟಕ್ಕೆ ಬೀಳುತ್ತಿದ್ದಾರೆ. ಇವೆಲ್ಲ ರಾಜಕೀಯದವರ  ಕುತಂತ್ರ.  ಅವರು ಜನರನ್ನು  ಉದ್ರೇಕಿಸಿಯೇ ತಮ್ಮ ಬೇಳೆ  ಬೇಯಿಸಿಕೊಳ್ಳುತ್ತಾರೆ. ನಾವೂ ಕಾಳಧ‌ನಿಕರಿಗೆ ಧ‌ನ ಪರಿವರ್ತನೆಗೆ  ಸಹಾಯ ಮಾಡಬಾರದಷ್ಟೇ.
ಸಾಕಷ್ಟು  ಆರ್ಥಿಕ  ತಜ್ಞರ  ಪ್ರಕಾರ, ಈ ಕ್ರಮದಲ್ಲಿ  ಆದ ವೆಚ್ಚಕ್ಕೆ ಹೋಲಿಸಿದಲ್ಲಿ ಆಗುವ ಲಾಭ ಕಡಿಮೆ.  ನೋಟ್ ರದ್ದತಿ  ಕ್ರಮದಲ್ಲಿಯೇ  ನಿಂತರೆ, ಅವರುಗಳ ಮಾತು ನಿಜ.  ಮುಂದೂ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಂಡಲ್ಲಿ  ನಮ್ಮ ನಿಜವಾದ  ಆಶಯ ಪೂರೈಸುವುದರಲ್ಲಿ ಸಂಶಯವಿಲ್ಲ.  ಆಗ ಈ ಕ್ರಮದ ಲಾಭ ಅರಿವಿಗೆ  ಬರುತ್ತದೆ.  ಹಣದ ವಹಿವಾಟಿನ ಮೇಲೆ ಬಿಗಿಯಾದ  ನಿಗಾ ಹಾಗೂ `ನಗದಿಲ್ಲದ'  cash less ವಹಿವಾಟಿಗೆ ನಮ್ಮ ಆರ್ಥಿಕತೆ  ತೆರೆದುಕೊಂಡಲ್ಲಿ ಕಾಳಧ‌ನ ತಂತಾನೇ  ಮಾಯವಾಗುತ್ತದೆ.
ಲೆಕ್ಕಕ್ಕೆ ಈವರೆಗೆ ಸಿಗದಿದ್ದ ಹಣ, ಈಗ ಲೆಕ್ಕಕ್ಕೆ  ಸಿಕ್ಕರೆ ಬರುವ ಹಣದ ಒಳಹರಿವು, ದೇಶದ ಅಭಿವೃದ್ಧಿಗೆ ಪೂರಕ.  ಅಭಿವೃದ್ಧಿಯ ಕೆಲಸಗಳಿಗೆ  ಜಾಸ್ತಿ ಹಣ  ಖರ್ಚು ಮಾಡಬಹುದು.  ಬ್ಯಾಂಕುಗಳು  ಜನರಿಗೆ ಜಾಸ್ತಿ  ಸಾಲ ವ್ಯವಸ್ಥೆ ಮಾಡಬಹುದು.  ಒಟ್ಟಾರೆ ದೇಶದ ಆರ್ಥಿಕತೆಯ ಚೈತನ್ಯ  ಬಲಗೊಳ್ಳುತ್ತದೆ.  `ಆರ್ಥಿಕ ಹಿಂಜರಿತ' ದ ವಾದದಿಂದ  ಭಾರತ ಮೈಕೊಡವಿ ಏಳಲು ಸಾಧ‌್ಯವಾಗುತ್ತದೆ.
ಮೋದಿಯ ನೋಟು ರದ್ದತಿಯ ವಿರುದ್ಧ ಇರುವವರ ವಾದ ತಪ್ಪು ಅಂತ ನಾನು ಇಲ್ಲಿ ಹೇಳುತ್ತಿಲ್ಲ.  ಇದರಿಂದ ಯಾವ ಒಳಿತೂ ಆಗದು  ಅನ್ನುವ ಸಿನಿಕತನ ಬಿಡಿ ಅಂತಷ್ಟೇ ನನ್ನ ಕೋರಿಕೆ. ಇದೊಂದು ಅಪರೂಪದ ಪ್ರಾಮಾಣಿಕ ಯತ್ನ‌ ಹಾಗೂ ಈ ಯತ್ನಕ್ಕೆ ಅಡ್ಡಗಾಲಾಗುವುದು ಬೇಡ ಅನ್ನುವುದಷ್ಟೇ ನನ್ನ ಮನವಿ.
----