ನೋಡ ಬನ್ನಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ನೋಡ ಬನ್ನಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಕೋರೋನಾ ಮಹಾಮಾರಿ ದೇಶದೆಲ್ಲಡೆ ಪಸರಿಸುತ್ತಿರುವಾಗ, ಹೊರಗಡೆ ಹೋಗುವುದೇ ದುಸ್ತರವಾಗಿರುವಾಗ ಇವನ್ಯಾವನೋ ನೋಡ ಬನ್ನಿ ಉದ್ಯಾನವನ ಎಂದು ಕರೆಯುತ್ತಿರುವವನು ಎಂದು ಹುಬ್ಬೇರಿಸದಿರಿ. ನಮ್ಮ ದೇಶಕ್ಕೆ, ರಾಜ್ಯಕ್ಕೆ ಬಂದ ಕೊರೋನಾ ಕಾರ್ಮೋಡ ಕರಗುತ್ತೆ. ಇದರಲ್ಲಿ ಅನುಮಾನ ಬೇಡ. ನಾವೆಲ್ಲಾ ಮೊದಲಿನ ಜೀವನ ವಿಧಾನಕ್ಕೆ ಮರಳಿದಾಗ ಏನೆಲ್ಲ ನೋಡ ಬಹುದು ಅದಕ್ಕೆ ಒಂದು ಸಣ್ಣ ತಿರುಗಾಟ ಅಷ್ಟೇ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಕರ್ನಾಟಕ ರಾಜ್ಯದಲ್ಲಿದೆ. ಸುಮಾರು ೧೦೪.೨೭ ಚದರ ಕಿ.ಮೀ. ವಿಸ್ತಾರವಿರುವ ಈ ರಾಷ್ಟೀಯ ಉದ್ಯಾನವನದ ಶುಭಾರಂಭವು ೧೯೭೪ರಲ್ಲಾಯಿತು. ಈ ಉದ್ಯಾನವನದ ಸ್ವಲ್ಪ ಭಾಗದಲ್ಲಿ ಜೈವಿಕ (ಬಯೋಲೋಜಿಕಲ್) ಉದ್ಯಾನವನವನ್ನು ನಿರ್ಮಿಸಲಾಗಿದೆ.

ಹಲವಾರು ಕಾರಣಗಳಿಂದ ಬನ್ನೇರುಘಟ್ಟ ಉದ್ಯಾನವನ ಬೇರೆ ರಾಷ್ಟ್ರೀಯ ಉದ್ಯಾನವನಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಇಲ್ಲಿ ಒಂದೇ ಕಡೆ ಪ್ರಾಣಿ ಸಂಗ್ರಹಾಲಯ, ಸಂರಕ್ಷಣಾಲಯಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ಕಾಣ ಬಹುದು. ಇದು ಎಲ್ಲೆಡೆ ನೋಡಲು ಸಿಗಲಾರವು. ವಿವಿಧ ತಳಿಯ ಹಕ್ಕಿಗಳು ಮತ್ತು ಹಲವಾರು ಬಗೆಯ ಪ್ರಾಣಿಗಳು ಇಲ್ಲಿ ಒಂದೇ ಪ್ರದೇಶದಲ್ಲಿ ಕಾಣ ಸಿಗುತ್ತವೆ. ಇಲ್ಲಿಯ ಹುಲಿ ಮತ್ತು ಸಿಂಹದ ಸಫಾರಿಗಳು ತುಂಬಾ ಖ್ಯಾತಿಯನ್ನು ಪಡೆದಿವೆ. ನೀವು ಇಲ್ಲಿನ ಪ್ರದೇಶದಲ್ಲಿ ಜಂಗಲ್ ಸಫಾರಿ ಮಾಡುವಿರಾದರೆ ನಿಮಗೆ ಬೆಂಗಾಲ್ ಹುಲಿ, ಸಿಂಹ, ಚಿರತೆ, ಮುಳ್ಳು ಹಂದಿ, ಖಡ್ಗಮೃಗ, ಆನೆಗಳು, ಚುಕ್ಕಿ ಜಿಂಕೆಗಳು, ಕರಡಿಗಳು ಹಾಗೂ ಅಪರೂಪದ ಬಿಳಿ ಹುಲಿಗಳನ್ನೂ ಕಾಣ ಬಹುದು.

ಇಲ್ಲಿಯ ಸಸ್ಯ ಸಂಪತ್ತು ಅಗಾಧವಾಗಿದ್ದು, ಅಪರೂಪದ ಹೂವಿನ ಪ್ರಭೇದಗಳಿವಿ. ಇವೆಲ್ಲಾ ಅರಳಿ ನಿಂತಾಗ ಅತ್ಯಂತ ಸುಂದರವಾಗಿ ಉದ್ಯಾನವನ ಗೋಚರಿಸುತ್ತದೆ. ಈ ಹೂವುಗಳು ಲಕ್ಷಾಂತರ ಸಂಖ್ಯೆಯ ಚಿಟ್ಟೆಗಳನ್ನು ಮತ್ತು ಜೇನುನೊಣಗಳನ್ನು ಆಕರ್ಷಿಸುತ್ತವೆ. ಇಲ್ಲಿ ಸುಮಾರು ೨೦ಕ್ಕೂ ಮಿಗಿಲಾದ ಚಿಟ್ಟೆಯ ಪ್ರಭೇದಗಳನ್ನು ಕಾಣ ಬಹುದು. ಇದೇ ಕಾರಣದಿಂದ ಇದನ್ನು ಮೊದಲಬಾರಿಗೆ ಚಿಟ್ಟೆಯ ಸಂರಕ್ಷಣಾಲಯ ಎಂದು ಗುರುತಿಸಲಾಗಿದೆ.

ಈಗ ಹೇಳಿ ಇನ್ನಾದರೂ ಪರಿಸ್ಥಿತಿ ತಿಳಿಯಾದಾಗ ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನಕ್ಕೆ ಭೇಟಿ ನೀಡುವಿರಲ್ಲವೇ?

ಚಿತ್ರಗಳು: ಅಂತರ್ಜಾಲ ಕೃಪೆ.

Comments