ನೋಯುವ ಹಲ್ಲಿಗೆ ಹೊರಳುವ ನಾಲಿಗೆ
ಡಾ. ಬಸವರಾಜ ಸಾದರ ಅವರ 'ನೋಯುವ ಹಲ್ಲಿಗೆ ಹೊರಳುವ ನಾಲಿಗೆ' ಕೃತಿಯಲ್ಲಿ ಒಟ್ಟು ನಲವತ್ನಾಲ್ಕು ಲೇಖನಗಳಿವೆ. ಕೃತಿಯ ಶೀರ್ಷಿಕೆಯೇ ರೂಪಕದಲ್ಲಿದೆ. ಹನ್ನೆರಡನೆಯ ಶತಮಾನದ ಶರಣರ ಕ್ರಾಂತಿ ಕನ್ನಡಿಗರ ಪ್ರಜ್ಞೆಯಾಳದಲ್ಲಿ ಸದಾ ಕಾಡುವ ನೋಯುವ ಹಲ್ಲಿನ ನೆನಪು. ಇದು ಕೇವಲ ನಾಸ್ಟಾಲ್ಜಿಯಾ ಮಾದರಿಯ ನೆನಪು ಅಲ್ಲ. ಶ್ರೇಣೀಕೃತ ಸಮಾಜದಲ್ಲಿ ಜಾತಿವ್ಯವಸ್ಥೆ ಇರುವವರೆಗೂ ಆ ನೋವು ತಪ್ಪಿದ್ದಲ್ಲ. ಹಾಗಾಗಿ ಆ ಕ್ರಾಂತಿಯ ನೆನಪು ನೇವರಿಕೆಯ ನಿವಾರಣೆಯ ಹಿತದ ನೆನಪಾಗಿ ಬಿಟ್ಟೆನೆಂದರೂ ಬಿಡದ ಅನುಬಂಧದ ಹೊರಳು ನಾಲಿಗೆಯಾಗಿ ಕಾಡುತ್ತದೆ. ಶೀರ್ಷಿಕೆಗೆ ಅನ್ವರ್ಥವೆಂಬಂತೆ ಇಲ್ಲಿನ ಲೇಖನಗಳಿವೆ. ಹಲವು ಜ್ಞಾನಶಿಸ್ತುಗಳಿಗೆ ಮುಖಾಮುಖಿ ಮಾಡಿದಂತೆ ಹಾಗೂ ಸಮಕಾಲೀನ ಸವಾಲುಗಳಿಗೆ, ಸಮಸ್ಯೆಗಳಿಗೆ ಪರಿಹಾರಕ ಮಾರ್ಗಸೂಚಿಗಳಂತೆ ಇಲ್ಲಿ ಹಲವು ಜನ ಶರಣರ ಚಿಂತನೆಗಳನ್ನು ನಿರೀಕ್ಷೆಗೆ ಒಡ್ಡಲಾಗಿದೆ. ಸಾದರ ಅವರಿಗೆ ವಚನಗಳು ಕೇವಲ ಸಾಹಿತ್ಯದ ರಚನೆಗಳಾಗಿ ಕಂಡಿಲ್ಲ. ಅವು ಪರ್ಯಾಯ ಧರಮದ ಪದ್ಯಗಳಾಗಿ ಪರಿಭಾವನೆಗೆ ದಕ್ಕಿವೆ. ಸಮಸಮಾಜ ನಿರ್ಮಾಣದ ಆಶಯ ಚಿತ್ತಗಳಾಗಿ ಅಮೂಲ್ಯವೆನ್ನಿಸಿವೆ. ಎಂದು ಎಸ್. ಜಿ. ಸಿದ್ಧರಾಮಯ್ಯ ಅವರು ಬೆನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.