ನೋಯ್ಡಾ ಗೋಪುರ ನೆಲಸಮ ; ಅಕ್ರಮಕ್ಕೆ ಗದಾಪ್ರಹಾರ
ಭಾರತದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ೨೦೨೨ರ ಆಗಸ್ಟ್ ೨೮ ಒಂದು ಐತಿಹಾಸಿಕ ದಿನವಾಗಿ ಉಳಿದುಕೊಳ್ಳಲಿದೆ. ದೇಶದ ರಾಜಧಾನಿಗೆ ಸಮೀಪದಲ್ಲಿರುವ ಉತ್ತರ ಪ್ರದೇಶದ ಪ್ರಮುಖ ಕೈಗಾರಿಕಾ ನಗರ ನೋಯ್ಡಾದಲ್ಲಿನ ಬೃಹತ್ ಬಹುಮಹಡಿ ಕಟ್ಟಡ ಭಾನುವಾರ ನೆಲಕ್ಕುರುಳಿತು. ದೆಹಲಿಯ ಕುತುಬ್ ಮಿನಾರ್ ಗಿಂತಲೂ ಹೆಚ್ಚು ಎತ್ತರದ ಈ ಕಟ್ಟಡವನ್ನು ಸ್ಫೋಟಕ ಬಳಸಿ ನೆಲಸಮ ಮಾಡಲಾಯಿತು. ಅಕ್ರಮವಾಗಿ ನಿರ್ಮಾಣ ಮಾಡಿದ ಕಾರಣದಿಂದಾಗಿ ಬೃಹತ್ ಬಹುಮಹಡಿ ಕಟ್ಟಡವೊಂದನ್ನು ಕೆಡವಿ ಹಾಕಿರುವುದು ಭಾರತದ ಇತಿಹಾಸದಲ್ಲೇ ಇದೇ ಮೊದಲು. ಅವಳಿ ಗೋಪುರ ಎಂದೇ ಗುರುತಿಸಲಾಗಿದ್ದ ಈ ಕಟ್ಟಡ ನೆಲಸಮವಾಗಿದ್ದು ಕೇವಲ ಒಂಬತ್ತು ಸೆಕೆಂಡುಗಳಲ್ಲಿ. ಆದರೆ, ವಾಸ್ತವವಾಗಿ ಈ ಅಕ್ರಮ ಕಟ್ಟಡ ಉರುಳಲು ತಗುಲಿದ ಸಮಯ ೧೧ ವರ್ಷ. ಇಷ್ಟೊಂದು ಸುದೀರ್ಘ ಅವಧಿಯ ಕಾನೂನು ಹೋರಾಟದ ನಂತರ, ನೋಯ್ಡಾ ಮೂಲದ ನಿರ್ಮಾಣ ಕಂಪೆನಿ ಸೂಪರ್ ಟೆಕ್ ಲಿಮಿಟೆಡ್ ವಿರುದ್ಧದ ಕಾನೂನು ಸಮರದಲ್ಲಿ ಎಮರಾಲ್ಡ್ ಕೋರ್ಟ್ ಕ್ಯಾಂಪಸ್ ನ ನಿವಾಸಿಗಳಿಗೆ ಕೊನೆಗೂ ಜಯ ದಕ್ಕಿದೆ. ಈ ಮೂಲಕ ನ್ಯಾಯಾಂಗದಲ್ಲಿ ಜನರ ವಿಶ್ವಾಸವರ್ಧನೆಗೂ ಈ ಪ್ರಕರಣ ಸಕಾರಾತ್ಮಕ ಕೊಡುಗೆ ನೀಡುವಂತಾಗಿದೆ.
ಈ ಅಕ್ರಮ ಕಟ್ಟಡ ವಿರುದ್ಧ ನೋಯ್ಡಾದ ಎಮೆರಾಲ್ಡ್ ಕೋರ್ಟ್ ಕ್ಯಾಂಪಸ್ ನಿವಾಸಿಗಳು ನಡೆಸಿದ ಹೋರಾಟ ಅವಿಸ್ಮರಣೀಯ. ಅಪೆಕ್ಸ್ ಮತ್ತು ಕಯೆನಾ ಎಂಬ ಅವಳಿ ಗೋಪುರ ಕಟ್ಟಡಗಳನ್ನು ೨೦೦೯ರಲ್ಲಿ ಸೂಪರ್ ಟೆಕ್ ಲಿಮಿಟೆಡ್ ಕಂಪೆನಿ ನಿರ್ಮಿಸಿತು. ಎಮೆರಾಲ್ಡ್ ಕೋರ್ಟ್ ಕ್ಯಾಂಪಸಿನಲ್ಲಿ ಹಸಿರು ಪ್ರದೇಶಕ್ಕೆ ಮೀಸಲಿಟ್ಟ ಜಾಗದಲ್ಲಿ ಹೆಚ್ಚುವರಿಯಾಗಿ ಈ ಕಟ್ಟಡ ನಿರ್ಮಿಸುತ್ತಿರುವುದನ್ನು ಪ್ರಶ್ನಿಸಿ ಇಲ್ಲಿನ ನಿವಾಸಿಗಳು ಅಲಹಾಬಾದ್ ಹೈಕೋರ್ಟ್ ಗೆ ಮೊರೆ ಹೋದರು. ಈ ಅಕ್ರಮ ಕೆಡವಲು ೨೦೧೪ರಲ್ಲಿ ಹೈಕೋರ್ಟ್ ಆದೇಶ ನೀಡಿದ ನಂತರ ಸೂಪರ್ ಟೆಕ್ ಲಿಮಿಟೆಡ್ ಕಂಪೆನಿಯು ಸುಪ್ರೀಂ ಕೋರ್ಟ್ ಗೆ ಪ್ರಕರಣವನ್ನು ಕೊಂಡೊಯ್ದಿತು. ೨೦೨೧ರ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ಅಂತಿಮವಾಗಿ ತೀರ್ಪು ನೀಡಿ, ತನ್ನ ಸ್ವಂತ ಖರ್ಚಿನಲ್ಲಿ ಹಾಗೂ ನೊಯ್ದಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಕಟ್ಟಡ ಕೆಡವಬೇಕೆಂದು ಕಂಪೆನಿಗೆ ಆದೇಶಿಸಿದ್ದು ಈಗ ಕಾರ್ಯರೂಪಕ್ಕೆ ಬಂದಿದೆ.
ಪ್ರಭಾವ ಮತ್ತು ಹಣಬಲದಿಂದ ಏನಾದರೂ ದಕ್ಕಿಸಿಕೊಳ್ಳಬಹುದು ಎಂದುಕೊಂಡವರಿಗೆ ಈ ಪ್ರಕರಣ ಒಂದು ಪಾಠವಾಗಿದೆ. ಉದ್ಯಾನವನಕ್ಕೆ ಮೀಸಲಿಟ್ಟ ಹಸಿರು ಪ್ರದೇಶದಲ್ಲಿ ನಿರ್ಮಾಣಕ್ಕೆ ಮುಂದಾದ ಕಂಪೆನಿಯ ಜತೆಗೆ ಅಧಿಕಾರಿಗಳು ಶಾಮೀಲಾಗಿರುವುದನ್ನು ಕೋರ್ಟ್ ಎತ್ತಿತೋರಿಸಿದೆ. ಅವಳಿ ಗೋಪುರ ನಿರ್ಮಿಸಲು ನೋಯ್ಡಾ ಪ್ರಾಧಿಕಾರವು ಅನುಮತಿ ನೀಡಿತ್ತು ಎಂದು ಕಂಪೆನಿ ಹೇಳಿಕೊಂಡಿದೆ. ಆದರೆ, ನೋಯ್ಡಾ ಪ್ರಾಧಿಕಾರ ಅನುಮತಿಸಿದ ನಕಾಶೆ ಪ್ರಕಾರ ನಿರ್ಮಾಣ ನಡೆದಿಲ್ಲ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಹಾಗಾದರೆ, ಇಷ್ಟೊಂದು ಬೃಹತ್ ಕಟ್ಟಡ ನಿರ್ಮಾಣವಾಗುವವರೆಗೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರೆ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಈ ಅಕ್ರಮದಲ್ಲಿ ಕೈಜೋಡಿಸಿದ ಅಧಿಕಾರಿಶಾಹಿಯ ಮೇಲೆಯೂ ಹೊಣೆಗಾರಿಕೆ ನಿಗದಿ ಪಡಿಸಿ ಸೂಕ್ತ ಕ್ರಮ ಕೈಗೊಂಡರೆ ಈ ಪ್ರಕರಣಕ್ಕೆ ಇನ್ನಷ್ಟು ನ್ಯಾಯ ಒದಗಿಸಿದಂತಾಗುತ್ತದೆ. ಈ ಕಟ್ಟಡ ಕೆಡವಿದ್ದರಿಂದ ತನಗೆ ೫೦೦ ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಸೂಪರ್ ಟೆಕ್ ಲಿಮಿಟೆಡ್ ಕಂಪೆನಿ ಹೇಳಿದೆ. ಈ ಕಟ್ಟಡವನ್ನು ಕೆಡವುದರ ಬದಲು ಸರ್ಕಾರವೇ ತನ್ನ ಸುಪರ್ದಿಗೆ ತೆಗೆದುಕೊಂಡು ಸಾರ್ವಜನಿಕವಾಗಿ ಸದ್ಭಳಕೆ ಮಾಡಿಕೊಳ್ಳಬಹುದಿತ್ತಲ್ಲವೇ ಎಂಬ ಚಿಂತನೆಗೂ ಈ ಪ್ರಕರಣ ಆಸ್ಪದ ಮಾಡಿಕೊಟ್ಟಿದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೯-೦೮-೨೦೨೨