ನೌಕರಿಗೆ ಸ್ವವಿವರಕ್ಕಿಂತ ಫೇಸ್ಬುಕ್ ಚಟುವಟಿಕೆಯನ್ನೇ ಪರಿಗಣಿಸುವ ಜಾಯಮಾನ ಹೆಚ್ಚಿದೆ!
ಮೊಬೈಲ್ ದತ್ತಾಂಶ ಸೇವೆಗಳಿಗೆ ಗುಣಮಟ್ಟ ನಿಗದಿ:ಟ್ರಾಯ್ ಪ್ರಯತ್ನ
ದಿನದಿಂದ ದಿನಕ್ಕೆ ಜನರು ಇಂಟರ್ನೆಟ್ ಸಂಪರ್ಕಗಳಿಗೆ ಮೊಬೈಲ್ ಫೋನು ಬಳಸುವುದು ಹೆಚ್ಚುತ್ತಿದೆ.ಸ್ಥಿರ ದೂರವಾಣಿಗಳನ್ನು ಬಳಸಿ ಇಂಟರ್ನೆಟ್ ಬ್ರಾಡ್ಬ್ಯಾಂಡ್ ಪದೆಯುವುದು ದುಬಾರಿ,ಮಾತ್ರವಲ್ಲ ಪ್ರಯಾಣದ ವೇಳೆ ಅದನ್ನು ಬಳಸುವಂತಿಲ್ಲ.ಆದರೆ,ಸ್ಮಾರ್ಟ್ಫೋನು ಇದ್ದರೆ,ಅದರ ಮೂಲಕ ಇಂಟರ್ನೆಟ್ ಜಾಲಾಡಬಹುದು.ಲ್ಯಾಪ್ಟಾಪ್,ಟ್ಯಾಬ್ಲೆಟ್ ಮುಂತಾದ ಸಾಧನಗಳಲ್ಲಿಯೂ ಇಂಟರ್ನೆಟ್ ಜಾಲಾಟಕ್ಕೆ,ಮೊಬೈಲ್ ಪೋನನ್ನು ವೈ-ಫೈ ಹಾಟ್ಸ್ಪಾಟ್ ಆಗಿ ಮಾರ್ಪಡಿಸಿ ಬಳಸಬಹುದು.ಆದರೆ ನಮ್ಮಲ್ಲಿನ್ನೂ ಮೊಬೈಲ್ ಸಾಧನಗಳಲ್ಲಿ ಇಂಟರ್ನೆಟ್ ಸೇವೆಯ ಗುಣಮಟ್ಟ ಚೆನ್ನಾಗಿಲ್ಲ.ದೊಡ್ಡ ಕಡತಗಳನ್ನು ಕಳುಹಿಸಲು ಸ್ವೀಕರಿಸಲು ಸಾಧ್ಯವಾಗುವ ವೇಗವೇ ಇರುವುದಿಲ್ಲ.ಈಗಿನ ಚಿತ್ರ,ವಿಡಿಯೋಮಿಶ್ರಿತ ಇಂಟರ್ನೆಟ್ ವೆಬ್ಸೈಟುಗಳನ್ನು ನೋಡಲೂ ಬಹು ಸಮಯ ಹಿಡಿಸುತ್ತದೆ.ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಗುಣಮಟ್ಟದ ದತ್ತಾಂಶ ಸೇವೆಯನ್ನು ನೀಡುವುದು ಮೊಬೈಲ್ ಸೇವಾದಾತೃಗಳ ಕರ್ತವ್ಯವೆಂದು ನಿಗದಿ ಪಡಿಸಲು ಬಯಸಿದೆ.ಗುಣಮಟ್ಟದ ಸೇವೆಯ ಯಾವೆಲ್ಲಾ ಅಂಶಗಳ ಮೂಲಕ ಮಾಡಬಹುದು ಎಂದು ನಿಗದಿಸಲು ಟ್ರಾಯ್ ಪರಿಣತರ ಮತ್ತು ಸೇವಾದತೃಗಳ ಅಭಿಪ್ರಾಯ ಕೇಳಿ ಮುಂದುವರಿಯುತ್ತಿದೆ.ಸುಮಾರು ಒಂಭತ್ತು ಅಂಶಗಳನ್ನು ಒಳಗೊಂಡ ಸೂತ್ರವನ್ನದು ರೂಪಿಸುತ್ತಿದೆ.ಸಂಕೇತ ಲಭ್ಯತೆ,ವೇಗ ಇವು ಇಂತಹ ಗುಣಮಟ್ಟ ನಿಗದಿಯಲ್ಲಿ ಪ್ರಧಾನವಾಗಿ ಪರಿಗಣಿಸಬೇಕಾದ ಅಂಶಗಳು ಎನ್ನುವುದು ಸಾಮಾನ್ಯರಿಗೂ ಸ್ಪಷ್ಟವಾಗುವ ಅಂಶಗಳಾಗಿವೆ.ತ್ರೀಜಿ ಸೇವೆಗಳು ನಗರಗಳಲ್ಲಿ ಲಭ್ಯವಿದ್ದರೂ,ದತ್ತಾಂಶ ಸೇವೆಯ ಗುಣಮಟ್ಟ ಎಲ್ಲಾ ಸಮಯದಲ್ಲೂ ಚೆನ್ನಾಗಿರುವುದಿಲ್ಲ.ಇನ್ನು ಸೇವೆಗಳು ನಗರದ ಎರಡುಮೂರು ಕಿಲೋಮೀಟರ್ ಪರಿಧಿಯಲ್ಲಷ್ಟೇ ಸಿಗುವುದು ಸಾಮಾನ್ಯ.ಇದು ಬದಲಾಗ ಬೇಕಿದೆ.ದುಬಾರಿ ದರ ತೆತ್ತೂ,ಸೇವೆಯ ಗುಣಮಟ್ಟದ ಖಾತರಿ ಇಲ್ಲದಿದ್ದರೆ ಪ್ರಯೋಜನೆವೇನು?
-------------------------------------------------
ನೌಕರಿಗೆ ಸ್ವವಿವರಕ್ಕಿಂತ ಫೇಸ್ಬುಕ್ ಚಟುವಟಿಕೆಯನ್ನೇ ಪರಿಗಣಿಸುವ ಜಾಯಮಾನ ಹೆಚ್ಚಿದೆ!
ಉದ್ಯೋಗಾರ್ಥಿಯು ಸ್ವವಿವರವನ್ನು ಟೈಪಿಸಿಕೊಂಡು ಅದನ್ನು ಕಂಪೆನಿಗಳಿಗೆ ಸಲ್ಲಿಸುವುದು ವಾಡಿಕೆಯಾಗಿತ್ತು.ನಂತರದ ದಿನಗಳಲ್ಲಿ,ಮಿಂಚಂಚೆಯ ಮೂಲಕ ಈ ಸ್ವವಿವರಗಳನ್ನು ಕಳುಹಿಸುವುದು ಹೆಚ್ಚಿದೆ.ಆದರೀಗ ಕಂಪೆನಿಗಳು ನೌಕರಿಗೆ ಅರ್ಜಿ ಸಲ್ಲಿಸುವವರ ವೆಬ್ ಚಟುವಟಿಕೆಗಳನ್ನು ಗಮನಿಸ ಬಯಸುತ್ತಾರೆ.ಅವರ ಹವ್ಯಾಸ,ತೆಗೆದ ಚಿತ್ರಗಳು,ಹಿಡಿದ ವಿಡಿಯೋಗಳು,ಅವರು ಇತರರೊಂದಿಗೆ ಹಂಚಿಕೊಂಡ ಮಾಹಿತಿಗಳು,ಕಡತಗಳು ಇವೆಲ್ಲವೂ ಫೇಸ್ಬುಕ್ ಅಂತಹ ಜಾಲತಾಣಗಳಲ್ಲಿ ಕಾಣಬಹುದಾದ್ದರಿಂದ,ಕಂಪೆನಿಗಳು ಸಾಮಾಜಿಕ ಜಾಲತಾಣಗಳನ್ನೇ ಸ್ವವಿವರಗಳಿಗಿಂತ ಹೆಚ್ಚು ಅವಲಂಬಿಸಬಯಸುತ್ತವೆ.ಫೇಸ್ಬುಕ್ ತಾಣವು ಈ ವೈಖರಿಯ ಲಾಭ ಪಡೆಯಲು,ನೌಕರಿ ವಿನಿಮಯ ಕೇಂದ್ರ ಸೇವೆಯನ್ನು ಒದಗಿಸಲು ಯೋಜಿಸಿದೆ.ಇಲ್ಲಿ ಪ್ರತಿವ್ಯಕ್ತಿಯೂ,ತನ್ನ ಉದ್ಯೋಗ ಸಂಬಂಧಿತ ಚಟುವಟಿಕೆಗಳನ್ನು ತೋರಿಸಬಹುದು,ಸಾಧನೆಗಳನ್ನು ತೋರ್ಪಡಿಸುವ ಚಿತ್ರಗಳು,ವಿಡಿಯೋಗಳನ್ನು,ಮತ್ತು ಮುಖ್ಯಾಂಶಗಳನ್ನು ಒಂದೆಡೆಯೇ ಸಮಗ್ರವಾಗಿ ತೋರಿಸಬಹುದು.ಬರೇ ಪೇಪರ್ ಬಡಾಯಿಗಿಂತ ಹೆಚ್ಚು ನಂಬಿಕೆಗೆ ಅರ್ಹವೂ ಆಗುತ್ತದೆ.
--------------------------------------------------------------------
ಸೌರಶಕ್ತಿ ಬಳಸುವ ಮೊಬೈಲ್ ಫೋನ್
ಮೈಕ್ರೋಮ್ಯಾಕ್ಸ್ ಕಂಪೆನಿಯುX259 ಮತ್ತು X250 ಎನ್ನುವ ಎರಡು ಮಾದರಿಯ ಮೊಬೈಲ್ ಫೊನುಗಳನ್ನು ಬಿಡುಗಡೆ ಮಾಡಿದ್ದು,ಇವುಗಳು ಸೌರಶಕ್ತಿಯನ್ನು ಬಳಸಿ,ಬ್ಯಾಟರಿ ರಿಚಾರ್ಜ್ ಮಾಡಬಹುದಾಗಿದೆ.ಇವುಗಳ ಪೈಕಿ ಎರಡನೆಯದ್ದು,ಸೌರ ಪಾನೆಲ್ ಅನ್ನು ಹೊಂದಿದ್ದು,ಇದರ ಮೂಲಕ ಬ್ಯಾಟರಿ ಚಾರ್ಜ್ ಬೇಗನೆ ಮಾಡಬಹುದು.ವಿದ್ಯುಚ್ಛಕ್ತಿ ಸಂಪರ್ಕವಿಲ್ಲದವರಿಗೆ ಮತ್ತು ಪವರ್ಕಟ್ ಹೆಚ್ಚಿನ ಹೊತ್ತು ಇರುವ ಹಳ್ಳಿಪ್ರದೇಶಗಳಲ್ಲಿ ವಾಸಿಸುವವರಿಗೆ ಈ ಮೊಬೈಲ್ ಪೋನುಗಳು ಹೆಚ್ಚು ಉಪಯೋಗಕ್ಕೆ ಬರಬಹುದು.ಬೆಲೆ ಎರಡೂವರೆ ಸಾವಿರ ರೂಪಾಯಿನ ಆಸುಪಾಸಿನಲ್ಲಿದೆ.
--------------------------------------------------
ಕಾಲಕ್ಕೆ ತಕ್ಕ ಕೋಲ!
ಹಿಂದೆಲ್ಲಾ ಎಸ್ಟಿಡಿ ಅಥವಾ ಐಎಸ್ಟಿಡಿ ಕರೆಗಳನ್ನು ಮಾಡಲು,ರಸ್ತೆ ಬದಿಯ ಫೋನ್ ಬೂತುಗಳನ್ನು ಅವಲಂಬಿಸುವವರ ಸಂಖ್ಯೆ ಹೆಚ್ಚಿತ್ತು.ಮೊಬೈಲ್ ಕರೆಗಳು ಜನಪ್ರಿಯವಾದ ನಂತರ ಅವುಗಳತ್ತ ಹಾಯುವವರ ಸಂಖ್ಯೆ ಇಳಿಯುತ್ತಾ ಬಂತು.ಈಗ ಅಂತಹ ಫೋನು ಬೂತುಗಳು,ನಾಣ್ಯ ಬಳಸಿ ಫೋನು ಮಾಡುವವರೇ ಇಲ್ಲವೆನ್ನಬೇಕು.ನ್ಯೂಯಾರ್ಕ್ ನಗರದಲ್ಲಿಯೂ ಪೇಫೋನು ಬೂತುಗಳು ಹನ್ನೆರಡು ಸಾವಿರದಷ್ಟಿವೆ.ಒಂದು ಕಾಲದಲ್ಲಿ ಇಲ್ಲಿನ ಸುಮಾರು ಎಂಟು ದಶಲಕ್ಷದಷ್ಟು ಜನಸಂಖ್ಯೆಗೆ ಇವು ಸಂಪರ್ಕ ಕೊಂಡಿಯಾಗಿದ್ದುವು.ಈಗ ಅವು ಮೂಲೆಗುಂಪಾಗಿವೆ.ಅವುಗಳನ್ನು ಉಚಿತ ವೈ-ಫೈ ಬಿಂದುಗಳಾಗಿಸಿ,ಅವುಗಳ ಮುನ್ನೂರು ಅಡಿ ಪರಿಧಿಯಲ್ಲಿ ಇಂಟರ್ನೆಟ್ ಜಾಲಾಟಕ್ಕೆ ಸಾಧ್ಯವಾಗಿಸುವ ಮೂಲಕ,ಹಳೆಯ ಬೂತುಗಳು ಮತ್ತೆ ಬಳಕೆಗೆ ಬರುವಂತೆ ಮಾಡುವ ಪ್ರಸ್ತಾಪ ಇದೆ.ಪ್ರಾಯೋಗಿಕವಾಗಿ,ಸುಮಾರು ಇಪ್ಪತ್ತು ಪೇಪೋನು ಬೂತುಗಳೀಗ ವೈ-ಫೈ ಹಾಟ್ಸ್ಪಾಟುಗಳಾಗಿವೆ.ಜನರೀಗ ಅವುಗಳ ಸುತ್ತ,ತಮ್ಮ ಸಾಧನಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಪಡೆಯಲು ಬಳಸುವ ಮೂಲಕ ಪೇಪೋನು ಬೂತುಗಳು ಮತ್ತೆ ಜನಸಂದಣಿಯನ್ನಾಕರ್ಷಿಸುತ್ತಿವೆ.
----------------------------------------------------------------------------------
ಇಲ್ಲದ್ದನ್ನು ಇಷ್ಟಪಡುವವರು!
ಪೇಸ್ಬುಕ್ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳು ಪ್ರದರ್ಶಿತವಾಗಿರುತ್ತವೆ.ಒಂದು ಕಂಪೆನಿಯ ಯಾವುದೋ ಸಾಧನವನ್ನು ಬಳಕೆದಾರ ಇಷ್ಟಪಟ್ಟರೆ,ಆತ ಅದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ,ಅದು ತನಗಿಷ್ಟ ಎಂದು ಹೇಳಿಕೊಂಡು,ತನ್ನ ಬಳಗದವರ ಗಮನವನ್ನು ಅದರತ್ತ ಸೆಳೆಯಬಹುದು.ಜಾಹೀರಾತುದಾರರಿಗೆ ಸಿಕ್ಕ ಮೆಚ್ಚುಗೆಯ ಆಧಾರದ ಮೇಲೆ ಅವರಿಗೆ ಜಾಹೀರಾತಿನ ದರ ನಿಗದಿಯಾಗುವುದಿದೆ.ಹೀಗೆ ಕಂಪೆನಿಯೊಂದು ತನ್ನ ಸಾಧನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದವರ ಕಡೆ ಗಮನ ಹರಿಸಿದಾಗ,ಅವರುಗಳು ಕಪೋಲಕಲ್ಪಿತ ವ್ಯಕ್ತಿಗಳು ಎನ್ನುವುದು ಬೆಳಕಿಗೆ ಬಂತು.ಹದಿನಾರು-ಇಪ್ಪತ್ತು ವರ್ಷದವರೂ,ತಾವು ದೊಡ್ಡ ಕಂಪೆನಿಯ ಉದ್ಯೋಗಿಗಳು ಎಂದು ಹೇಳಿಕೊಂಡಿದ್ದರು.ಮಾತ್ರವಲ್ಲ,ಹೆಚ್ಚಿನವರು ಫಿಲಿಫೈನ್ಸ್,ಈಜಿಪ್ಟ್ ದೇಶಗಳವರು ಎನ್ನುವುದು ಕಂಡು ಬಂತು.ಬಿಬಿಸಿ ಇದನ್ನು ತಿಳಿದ ಬಳಿಕ ಆಸ್ತಿತ್ವದಲ್ಲೇ ಇಲ್ಲದ ಕಂಪೆನಿಯ ಉತ್ಪನ್ನಗಳ ಬಗ್ಗೆ ಜಾಹೀರಾತು ನೀಡಿ ನೋಡಿದಾಗಲೂ,ಈ ಈಜಿಪ್ಟ್-ಪಿಲಿಫೈನ್ಸ್ ಮೂಲದ "ವ್ಯಕ್ತಿ"ಗಳು ಈ ಆಸ್ತಿತ್ವದಲ್ಲಿಲ್ಲದ ವಸ್ತುಗಳನ್ನು ಮೆಚ್ಚಿಕೊಂಡದ್ದು ಗೊತ್ತಾಯಿತು.ಉತ್ಪನ್ನಗಳನ್ನು ಬಳಸಿ,ಅವುಗಳನ್ನು ಇಷ್ಟಪಟ್ಟು ಮೆಚ್ಚುಗೆ ವ್ಯಕ್ತಪಡಿಸುವ ಬದಲು,ಸುಮ್ಮನೇ ಮೆಚ್ಚುಗೆ ವ್ಯಕ್ತಪಡಿಸುವವರ ಸಂಖ್ಯೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿದೆ ಎನ್ನುವುದು ವ್ಯಕ್ತವಾಯಿತು.ಫೇಸ್ಬುಕ್ ಇಂತಹ ಬಳಕೆದಾರರನ್ನು,ಕಂಡು ಹಿಡಿಯಲು ಪ್ರಯತ್ನಿಸುತ್ತದಾದರೂ,ಹೆಚ್ಚು ಯಶಸ್ಸು ಕಂಡಿಲ್ಲ.ಅಕ್ಷರ,ಅಂಕಿಗಳನ್ನು ವಿಶಿಷ್ಟ ವಿನ್ಯಾಸದಲ್ಲಿ ತೋರಿಸಿ,ಅದನ್ನು ಲಾಗಿನ್ ಆಗುವಾಗ ಟೈಪಿಸಲು ಹೇಳುವುದು ಇಂತಹ ಸುಳ್ಳು ಬಳಕೆದಾರರನ್ನು ಕಂಪ್ಯೂಟರ್ ಪ್ರೊಗ್ರಾಮುಗಳು ಹುಟ್ಟು ಹಾಕುವುದನ್ನು ತಡೆಯಲೋಸುಗವೇ ಆಗಿದೆ.
--------------------------------
ಜನರನ್ನು ಸದಾ ಲಭ್ಯವಾಗಿಸುವ ತಂತ್ರಜ್ಞಾನ
ವ್ಯಕ್ತಿ ರಜೆಯಲ್ಲಿದ್ದರೂ,ಅಥವಾ ಕಚೇರಿಯಲ್ಲಿದ್ದರೂ ಆತನ ಸಲಹೆ,ಸೂಚನೆಗಳು ಕೆಲಸದ ಸ್ಥಳದಲ್ಲಿ ಲಭ್ಯವಾಗಿಸುವಲ್ಲಿ ಮೊಬೈಲ್ ಅಂತಹ ಸಾಧನಗಳ ಪಾತ್ರ ಹಿರಿದು.ರಜೆಯಲ್ಲಿದ್ದಾಗಲೂ ನಾವು ನಮ್ಮ ಮಿಂಚಂಚೆಯನ್ನು ಅರೆಗಳಿಗೆಗೊಮ್ಮೆ ಪರಿಶೀಲಿಸುತ್ತಾ,ವ್ಯಸ್ತರಾಗುತ್ತೇವೆ.ಕುಟುಂಬದವರ ಜತೆ ರಜಾಕಾಲದಲ್ಲಿ ಪ್ರವಾಸ ಮಾಡುವವರೂ ಸಾಧನಗಳನ್ನು ಸ್ವಿಚಾಫ್ ಮಾಡರು-ಬಂದ ಮಿಂಚಂಚೆಗಳಿಗೆ ಅಗತ್ಯವಿರಲಿ ಇಲ್ಲದಿರಲಿ,ತಕ್ಷಣ ಪ್ರತಿಕ್ರಿಯಿಸುವುದು,ಬಂದ ಕರೆಗಳನ್ನೆಲ್ಲಾ ಸ್ವೀಕರಿಸಿ,ತಾವು ದಿನದುದ್ದಕ್ಕೂ-ವರ್ಷಪೂರ್ತಿ ಲಭ್ಯರು ಎಂದು ಸಂತೋಷ ಪಡುವ ಪ್ರವೃತ್ತಿ ಹೆಚ್ಚಿದೆ.ಆದರೆ ಹೀಗೆ ಮಾಡಿದರೆ,ರಜಾದ ಮಜಾ ಸವಿಯಲು ಬರುತ್ತದೆಯೋ ಎನ್ನುವುದೇ ಪ್ರಶ್ನೆ.ರಜೆಯಲ್ಲೂ ಕೆಲಸದ ಬಗ್ಗೆ ತಲೆ ಕೆಡಿಸ್ಕೊಳ್ಳುತ್ತಿದ್ದರೆ,ರಜೆಗೂ ಕೆಲಸದ ದಿನಕ್ಕೂ ಏನು ವ್ಯತ್ಯಾಸವಿದೆ?ಹೀಗೆ ಸದಾ ಲಭ್ಯತೆ ಅಗತ್ಯವೇ ಎನ್ನುವುದನ್ನು ಪ್ರತಿ ವ್ಯಕ್ತಿಯೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.ತಾನಿಲ್ಲದೆ ಪ್ರಪಂಚ ನಡೆಯದು ಎನ್ನುವ ಸುಬ್ಬಕ್ಕನ ಕೋಳಿ ಪ್ರವೃತ್ತಿಯಿಂದ ನಾವು ಹೊರಬರಬೇಕಿದೆ ಅಲ್ಲವೇ?
UDAYAVANI
("ಉದಯವಾಣಿ"ಯ ಈ ಅಂಕಣ ಬರಹಗಳು http://ashok567.blogspot.com/ ಬ್ಲಾಗಿನಲ್ಲಿ ಲಭ್ಯವಿವೆ.)
*ಅಶೋಕ್ಕುಮಾರ್ ಎ