ನ್ಯಾನೊ ಕತೆಗಳು( ಭಾಗ ಆರು)
ದೇವ ಜನ್ಮ ಮಂದಿರದ ಭೂಮಿಯ ವಿವಾದದ ಬಗ್ಗೆ ಐತಿಹಾಸಿಕ ತೀರ್ಪೊಂದು ದೇಶದ ಸರ್ವೊಚ್ಚ ನ್ಯಾಯಾಲಯ ನೀಡುವುದರಲ್ಲಿತ್ತು.ಅದರ ಬಗ್ಗೆ ಚಾನೆಲ್ಲೊಂದರಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಸಹನೆ ಕಳೆದುಕೊಂಡ ಪ್ರೇಕ್ಷಕನೊಬ್ಬ ರಾಜಕೀಯ ಪಕ್ಷದ ನಾಯಕಿಯೊಬ್ಬಳನ್ನ 'ವಿದೇಶಿ ಏಜೆಂಟ್' ' ಎಂದು ಬಯ್ದ.ಪೋಲಿಸರು ಕೂಡಲೇ ಅವನನ್ನು ಬಂಧಿಸಿದರು.ಅಷ್ಟರಲ್ಲಿ .ದೇವ ಭೂಮಿಯ ಬಹುಭಾಗವನ್ನು ಬಹುಸಂಖ್ಯಾತರಿಗೂ,ಅಲ್ಪಭಾಗವನ್ನು ಅಲ್ಪಸಂಖ್ಯಾತರಿಗೂಕೊಡಬೇಕೆಂದು ನ್ಯಾಯಾಲಯದ ತೀರ್ಪು ಬಂದಿತು.ಸರ್ವೋಚ್ಚ ನ್ಯಾಯಾಲಯದ ತೀರ್ಪು ಭಾರಿ ಮೋಸವೆಂದು ,ನ್ಯಾಯಾಲಯವೇ ಹಣ ತಿಂದಿದೆ ಎಂಬರ್ಥದಲ್ಲಿ ಆ ನಾಯಕಿ ಟಿವಿಯಲ್ಲಿ ಹೇಳಿಕೆ ನೀಡಿದಳು.ಸಂವಿಧಾನ ನಮಗೆ ಕೊಟ್ಟಿರುವ ವಾಕ್ ಸ್ವಾತಂತ್ರ್ಯವನ್ನು ಆಕೆ ಸದುಪಯೋಗ ಮಾಡಿದಳೆಂದು ಚಾನೆಲ್ಲಿನ ನಿರೂಪಕರು ಆಕೆಯನ್ನು ಕೊಂಡಾಡಿದರು
*****************************************************************************************************************************
ವೇಶ್ಯಾವಾಟಿಕೆಯ ಕತೆಯಾಧಾರಿತ ಚಲನ ಚಿತ್ರದಲ್ಲಿ ಮಹಿಳೆಯನ್ನು ಬಹಳ ಕೆಳಮಟ್ಟದಲ್ಲಿ ಚಿತ್ರಿಸಲಾಗಿದೆ ಎಂದು ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿದವು.ಕ್ಷಮೆಯಾಚಿಸಿದ ನಿರ್ದೇಶಕ,ಮುಂದಿನ ಸಿನಿಮಾದಲ್ಲಿ ಸುಧಾರಿಸಿಕೊಳ್ಳುವುದಾಗಿ ಭರವಸೆ ನೀಡಿ ಹೊಸ ಸಿನಿಮಾ ಮಾಡಿದ.ವಿದ್ಯಾವಂತಮಹಿಳೆಯೊಬ್ಬಳು ,ಗಂಡ ಎಷ್ಟೇ ಹೊಡೆದರೂ,ವೇಶ್ಯಾಗೃಹಕ್ಕೆ ಹೋದರೂ,ವರದಕ್ಷಿಣೆಗಾಗಿ ಆಕೆಯನ್ನೇ ಸುಟ್ಟರೂ, ಪತಿಗೆ ಪತ್ನಿ ಯಾವತ್ತಿದ್ದರೂ ದಾಸಿಯಾಗಿರಬೇಕು ಎಂಬ ಸಾರಾಂಶದ ಚಿತ್ರವನ್ನು ಹೆಂಗಳೆಯರು ಕಣ್ಣೀರಿಟ್ಟು ನೋಡಿದರು.ನಿರ್ದೇಶಕ ತನ್ನ ತಪ್ಪನ್ನು ತಿದ್ದಿಕೊಂಡಿದ್ದಕ್ಕೆ ಸಂಘಟನೆಗಳು ಮೆಚ್ಚುಗೆ ಸೂಚಿಸಿದವು.
******************************************************************************************************************************
ದೇಶಭಕ್ತನ ಜೀವನವನ್ನಾಧರಿಸಿ ನಿರ್ದೇಶಕನೊಬ್ಬ ಸಿನಿಮಾ ಮಾಡಿದ.ಚಿತ್ರಮಂದಿರಗಳ ಬಳಿ ಜನ ಸುಳಿಯಲೇ ಇಲ್ಲ.ನಿರ್ಮಾಪಕನಿಗಾದ ನಷ್ಟ ತುಂಬಿಕೊಡಲು ನಿರ್ದೇಶಕ,ಕ್ಯಾಬರೇ ನರ್ತಕಿಯೂಬ್ಬಳ ಜೀವನಾಧಾರಿತ ಚಿತ್ರ ಮಾಡಿದ.ವಯಸ್ಕರ ಚಿತ್ರವಾದರೂ,ಸಿನಿಮಾ ಸೂಪರ್ ಹಿಟ್ ಆಯಿತು.ನಿರ್ಮಾಪಕನ ಜೋಳಿಗೆ ತುಂಬಿತು.ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ನಿರ್ದೇಶಕನಿಗೆ ದೊರೆಯಿತು.
******************************************************************************************************************************
ಅತ್ಯಂತ ಕಳಪೆ ಆಡಳಿತ ನಡೆಸುತ್ತಿದ್ದ ಪಕ್ಷವೊಂದು ಹೇಗಪ್ಪಾ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಎಂದು ತಲೆಕೆಡಿಸಿಕೊಂಡಿತ್ತು.ಅಷ್ಟರಲ್ಲಿ ಪಕ್ಕದ ಭಯೋತ್ಪಾದಕ ರಾಷ್ಟ್ರ ದಾಳಿ ಮಾಡಿತು.ಆಡಳಿತಾರೂಢ ಪಕ್ಷ ಪಕ್ಕದ ರಾಷ್ಟ್ರದ ಮೇಲೆ ಯುದ್ಧ ಘೋಷಿಸಿ ಯುದ್ಧದಲ್ಲಿ ಹಿಮ್ಮೆಟ್ಟಿಸಿ,ಅದು ಆಕ್ರಮಿಸಿದ ಪ್ರದೇಶಗಳನ್ನು ಮರಳಿ ಗೆದ್ದುಕೊಂಡಿತು.ಜನರ ವಿಶ್ವಾಸಗಳಿಸಿ ಮರಳಿ ಅಧಿಕಾರಕ್ಕೆ ಬಂತು.ತಾವು ಹೇಳಿದ ಸಮಯಕ್ಕೆ ಸರಿಯಾಗಿ ದಾಳಿ ನಡೆಸಿದ ಭಯೋತ್ಪಾಧಕ ರಾಷ್ಟ್ರಕ್ಕೆ ವಂದನೆಗಳನ್ನು ತಿಳಿಸಿ,ಪರವಾನಗಿಯಿಲ್ಲದೇ ಗಡಿಯೊಳಗೆ ನುಸುಳಿದ ಆ ದೇಶದ ಪ್ರಜೆಗಳನ್ನು,ತನ್ನ ದೇಶದ ಪ್ರಜೆಗಳನ್ನಾಗಿ ಮಾಡಿಕೊಂಡಿತು.