ನ್ಯಾನೋ ಕಥೆ - ತೊರೆದು ಹೋದವಳು
ಅಮ್ಮ, ಮಗ, ಸೊಸೆ, ಮೊಮ್ಮಗನಿದ್ದ ಚಿಕ್ಕ ಚೊಕ್ಕ ಕುಟುಂಬ. ತನ್ನ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಗೆಳತಿಯ ಮಾತುಕೇಳಿ, ನಿತ್ಯವೂ ಸೊಸೆ ಬೇರೆ ಮನೆ ಮಾಡೋಣ ಎಂದು ಗಂಡನಲ್ಲಿ ಹೇಳುತ್ತಿದ್ದಳು. ಅತ್ತೆಯನ್ನು ಯಾವಾಗಲೂ ಕೂಲಿಯಾಳಿನಂತೆ ನೋಡುತ್ತಿದ್ದಳು. ಅತ್ತೆ ಸಾವಿತ್ರಮ್ಮ ಸೊಸೆ ರಮಾಳ ಎಲ್ಲಾ ದಿನನಿತ್ಯದ ಆಗುಹೋಗುಗಳನ್ನು ಗಮನಿಸುತ್ತಿದ್ದರು. ಅಗಲಿದ ತನ್ನ ಪತಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದರು.
ಒಂದು ದಿನ ಮಗನ ಹತ್ತಿರ ಸೊಸೆ 'ಈ ನಿಮ್ಮ ಹಳೇ ಕುರ್ಚಿ, ಈ ಮನೆಯಲ್ಲಿ ಇನ್ನೆಷ್ಟು ದಿನ ಇರಬಹುದು' ಎಂದು ಹೇಳುವುದನ್ನು ಕೇಳಿದರು. ಮಗ ಪಟ್ ಅಂತ ಸೊಸೆಯ ಕೆನ್ನೆಗೆ ಬಾರಿಸಿದ ಶಬ್ದ ಕೇಳಿಸಿತು. ಸಾವಿತ್ರಮ್ಮ ಮನಸ್ಸಿನಲ್ಲಿಯೇ ಒಂದು ತೀರ್ಮಾನ ಮಾಡಿದರು.
ಮರುದಿನ ಅಮ್ಮಾ ಎಂದು ಕರೆಯುತ್ತಾ ಒಳಗೆ ಬಂದ ಮಗನಿಗೆ ಅಮ್ಮ ಕಾಣಲಿಲ್ಲ, ಬದಲಿಗೆ ಒಂದು ಬಿಳಿಯ ಕಾಗದ ಮಂಚದ ಮೇಲೆ ಕಂಡಿತು. ಬಿಡಿಸಿ ಓದಿದ ಮಗ, ಅಮ್ಮಾ ಎನ್ನುತ್ತಾ ಕುಸಿದು ಕುಳಿತ. ಸೊಸೆ ಬಂದವಳು ಕಾಗದದಲ್ಲಿ ಬರೆದ ಅಕ್ಷರಗಳನ್ನು ನೋಡಿದಾಗ ಕಂಡದ್ದು, ಹತ್ತಿರವಿರುವ ಆಶ್ರಮಕ್ಕೆ ಹೋಗುತ್ತೇನೆ. ನನ್ನ ಭೇಟಿಗೆ ಯಾರೂ ಬರಬಾರದು ಎಂಬುದಾಗಿ. ಪತ್ನಿಯ ಕಡೆಗೆ ನಿಂತು ತಾಯಿಯನ್ನು ಕಡೆಗಣಿಸಿದ್ದಕ್ಕೆ, ಅಮ್ಮ ನಮ್ಮನೆಲ್ಲ ತೊರೆದು ಹೋದವಳು ಇನ್ನೆಂದೂ ಬರಲಾರಳು, ಅಯ್ಯೋ ವಿಧಿಯೇ, ದೇವರು ನನಗೆ ಸರಿಯಾದ ಶಿಕ್ಷೆ ಕೊಟ್ಟ ಎಂದು ಕಣ್ಣೀರು ಹಾಕಿದ.
-ರತ್ನಾ ಭಟ್ ತಲಂಜೇರಿ