ನ್ಯಾನೋ ಕಥೆ - *ನೆರವು*
ನಿವೃತ್ತಿಯ ಅಂಚಲ್ಲಿದ್ದ ನನಗೆ, ಶಾಲೆಗೆ ಬಂದವರಾರೆಂದು ಗುರುತಿಸಲು ಕಷ್ಟವಾಯಿತು. ಕಾಲುಗಳಿಗೆ ನಮಸ್ಕರಿಸಿದ ವ್ಯಕ್ತಿಯನ್ನು ಕುಳಿತುಕೊಳ್ಳಲು ಹೇಳಿದೆ. 'ಗುರುತು ಸಿಗಲಿಲ್ಲವೇ? ನಾನು ದಿನೇಶ್' ಎಂದ. ಮುಖವನ್ನೇ ನೋಡಿದಾಗ 'ನನ್ನಮ್ಮ ಅಂದು ಆತ್ಮಹತ್ಯೆ ಮಾಡಿಕೊಂಡಾಗ, ನೀವು ಇನ್ನು ಮುಂದಿನ ನಿನ್ನ ವಿದ್ಯಾಭ್ಯಾಸದ ಹೊಣೆ ನನ್ನದೆಂದು ಹೇಳಿ, ನನಗೆ ಶಿಕ್ಷಕ ತರಬೇತಿಯವರೆಗೆ ಸಹಾಯ ಮಾಡಿದವರು.ಈಗ ನನಗೆ ಸರಕಾರಿ ಕೆಲಸ ಸಿಕ್ಕಿದೆ. ಅಂದು ನೀವು ಸಹೃದಯತೆಯಿಂದ ನನಗೆ *ನೆರವು* ನೀಡಿದ ಕಾರಣ, ನಾನಿಂದು ಸಮಾಜದಲ್ಲಿ ತಲೆಯೆತ್ತಿ ಓಡಾಡುತ್ತಿರುವೆ, ಸ್ವಲ್ಪವಾದರೂ ನಿಮ್ಮ ಋಣ ತೀರಿಸೋಣವೆಂದು ಬಂದಿರುವೆ' ಎಂದು ಹೇಳಿ ಐವತ್ತು ಸಾವಿರದ ಹಣದ ಕಟ್ಟನ್ನು ನೀಡಿದ. 'ಶಾಲೆಯಲ್ಲಿ ಕುಡಿಯುವ ನೀರಿಗಾಗಿ ತೋಡುತ್ತಿರುವ ಬಾವಿಗೆ ಹಣದ ಅವಶ್ಯಕತೆ ಇದೆ ಮಗ 'ಎಂದು ನಾನು ಹೇಳಿದಾಗ, ಧನ್ಯತಾಭಾವ ಆತನ ಮೊಗದಲ್ಲಿ ಕಂಡೆ, ನನಗರಿವಿಲ್ಲದೆ ಕಣ್ಣಂಚು ಒದ್ದೆಯಾಯಿತು.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪ್ರೆ: ಇಂಟರ್ನೆಟ್