ನ್ಯಾಯದಾನದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪಾತ್ರ (ಭಾಗ 1)

ನ್ಯಾಯದಾನದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪಾತ್ರ (ಭಾಗ 1)

ದಾನಗಳಲ್ಲಿ ಸರ್ವ ಶ್ರೇಷ್ಠವಾದ ದಾನವೆಂದರೆ ನ್ಯಾಯದಾನ. ನ್ಯಾಯದಾನವು ಎಲ್ಲಾ ದಾನಗಳಿಗೂ ಗುರು ಸ್ಥಾನದಲ್ಲಿರುವ ಮತ್ತು ಅದು ತಂದೆಯ ಹೃದಯ ವೈಶಾಲ್ಯತೆಯನ್ನೂ, ತಾಯಿಯ ನಿರ್ಮಲ ಪ್ರೀತಿಯನ್ನೂ ತನ್ನ ಮೈಯ್ಯ ಗಂಧವಾಗಿ ಹೊಂದಿರುವ ಸರ್ವ ಶ್ರೇಷ್ಠವಾದ ಧರ್ಮಕಾರ್ಯವಾಗಿದೆ. ಮಿಕ್ಕೆಲ್ಲಾ ದಾನಗಳಲ್ಲಿ ನ್ಯಾಯ ಬದ್ದತೆ, ನ್ಯಾಯಪರತೆ, ನ್ಯಾಯ ನಿಷ್ಠೂರತೆ ಇದ್ದಾಗ ಮಾತ್ರ ಅವುಗಳೂ ಶ್ರೇಷ್ಠ ಅನ್ನಿಸಿಕೊಂಡು ಸಾತ್ವಿಕವೂ, ನಾಗರಿಕ ಸಮಾಜಕ್ಕೆ ಸಹ್ಯವೂ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತವೆ. ನ್ಯಾಯವಿಲ್ಲದ, ನ್ಯಾಯಕ್ಕೆ ಶರಣು ಹೋಗದ ಯಾವ ದಾನವೂ ಲೋಕಮಾನ್ಯವಲ್ಲ. ಮನುಷ್ಯ ವರ್ಗಕ್ಕೆ ಹೇಳಿಸಿದ್ದಲ್ಲ. ಅದರಿಂದ ಪುಣ್ಯಪ್ರಾಪ್ತಿಯೂ ಸಾಧ್ಯವಿಲ್ಲ. ಶುದ್ಧ ಹಾಗೂ ಪವಿತ್ರವಾದ ನ್ಯಾಯದಾನದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡು ಜೀವನವನ್ನು ಆ ಮಹಾಯಜ್ಙಕ್ಕೆ ಅರ್ಪಿಸಿಕೊಂಡವರು ಬೇರೆ ಯಾವುದೇ ಪುಣ್ಯ ಕಾರ್ಯವನ್ನೋ, ಧರ್ಮ ಕಾರ್ಯವನ್ನೋ ಮಾಡುವ ಅಗತ್ಯವಾಗಲೀ ಅನಿವಾರ್ಯತೆಯಾಗಲೀ ಇರುವುದಿಲ್ಲ. ಅಂತವರ ಜೀವನವು ಅಪ್ಪಟ ಚಿನ್ನದಂತೆ ಹೊಳೆಯುವುದರಲ್ಲಿ ಸಂಶಯವಿಲ್ಲ. 

ರಾಮಾಯಣದಲ್ಲಿ ಜನಕರಾಜನು ರಾಜಋಷಿ ಅಂತ ಕರೆಸಿಕೊಂಡದ್ದು ತನ್ನ ಪ್ರಾಮಾಣಿಕವಾದ ಮತ್ತು ಪರಿಶುದ್ಧವಾದ ನ್ಯಾಯದಾನದಿಂದಾಗಿ ಎಂಬುದು ಜಗಜ್ಜನಿತ. ಆತ ನ್ಯಾಯದಾನ ಮಾಡುವಾಗ ಮತ್ತು ವಿವಾದಗಳ ಕುರಿತಾಗಿ ತೀರ್ಮಾನವನ್ನು ಕೈಗೊಳ್ಳುವಾಗ ತನ್ನ ಬಲಗಾಲನ್ನು ಅಗ್ನಿಕುಂಡದಲ್ಲಿರಿಸಿ ಚಿಂತನಾ ಮಗ್ನನಾಗಿ ನ್ಯಾಯದಾನ ಮಾಡುತ್ತಿದ್ದನಂತೆ. ಒಂದು ವೇಳೆ ತಾನು ಕೊಡುವ ತೀರ್ಪು ಯಾವುದೇ ಕಾರಣಕ್ಕೆ ಅಶುದ್ಧ ಮನಸ್ಸಿನ ಫಲವಾಗಿದ್ದಲ್ಲಿ ತನ್ನ ಬಲಗಾಲು ಅಗ್ನಿಯಲ್ಲಿ ಸುಟ್ಟು ಬಸ್ಮವಾಗಲಿ ಎಂದು ಸಂಕಲ್ಪಬದ್ಧನಾಗಿಯೂ ನ್ಯಾಯದಾನವೆಂಬ ಮಹಾಯಜ್ಞಕ್ಕೆ ಧೀಕ್ಷಾಬದ್ಧನಾಗಿಯೂ ಕುಳಿತುಕೊಳ್ಳುತ್ತಿದ್ದನಂತೆ. ಒಂದು ಬಾರಿಯೂ ಕೂಡಾ ಅತನ ಬಲಗಾಲನ್ನು ಅಗ್ನಿ ಸುಟ್ಟಿರಲಿಲ್ಲ. ಆದುದರಿಂದ ಪ್ರತಿಯೊಬ್ಬ ನ್ಯಾಯಾಧೀಶನಿಗೂ, ನ್ಯಾಯವಾದಿಗೂ ಜನಕರಾಜ ಮಾದರಿಯಾಗಬೇಕು. ಆಗ ನ್ಯಾಯಾಂಗ ವ್ಯವಸ್ಥೆ ತನ್ನ ಗೌರವವನ್ನು ಉಳಿಸಿಕೊಂಡು ಜನರ ಹೃದಯಲ್ಲಿ ಅತ್ಯುನ್ನತವಾದ ಸ್ಥಾನವನ್ನು ಪಡೆಯುವುದರಲ್ಲಿ ಸಂಶಯವಿಲ್ಲ. ಜನಕರಾಜನ ನಂತರ ಅವತಾರ ಪುರುಷ ಶ್ರೀರಾಮ ಜನಕರಾಜನ ಮಾರ್ಗದಲ್ಲಿಯೇ ನಡೆದು ‘ರಾಮರಾಜ್ಯ’ ಎಂಬ ಮನುಕುಲಕ್ಕೆ ಆದರ್ಶಪ್ರಾಯವಾದ ಸುಂದರ ರಾಜ್ಯದ ತನ್ನದೇ ಪರಿಕಲ್ಪನೆಯ ನೀತಿ ನಿಯಮಗಳನ್ನು ನೀಡಿದ್ದು ಇಂದಿಗೂ ಮನೆಮಾತಾಗಿರುವುದು ಸತ್ಯ ಸಂಗತಿ.  ಒಳ್ಳೆಯದೆಂಬುದು ಚಿರಕಾಲ ಉಳಿಯುತ್ತದೆ ಮತ್ತು ಚಿರಕಾಲ ಪಾಲಿಸಲ್ಪಡುತ್ತದೆ ಎಂಬುದಕ್ಕೆ ‘ರಾಮರಾಜ್ಯ’ ಎಂಬ ಪರಿಕಲ್ಪನೆಯೇ ನಿದರ್ಶನ. ಆ ಪರಿಕಲ್ಪನೆಯ ಬೆನ್ನೆಲುಬೇ ಪ್ರಾಮಾಣಿಕ ಮತ್ತು ಪರಿಶುದ್ಧವಾದ ನ್ಯಾಯದಾನ ಎಂಬುದನ್ನು ಓದುಗರು ಅರ್ಥಮಾಡಿಕೊಳ್ಳಲಿ ಎಂಬುದು ಲೇಖಕನ ಆಶಯ.   

ನಿಜವಾದ ನ್ಯಾಯದಾನದ ಪ್ರಕ್ರಿಯೆ ಆರಂಭವಾಗುವುದು ವಕೀಲರ ಕಚೇರಿಗಳಲ್ಲಿಯೇ ಹೊರತು ನ್ಯಾಯಾಲಯಗಳಲ್ಲಿ ಅಲ್ಲ. ನ್ಯಾಯಾಲಯವು ವಕೀಲರ ಕಚೇರಿಯಲ್ಲಿ ಆರಂಭಗೊಳ್ಳುವ ನ್ಯಾಯದಾನದ ಪ್ರಕ್ರಿಯೆಯ ಮುಂದುವರಿದ ಹಾಗೂ ಅಂತಿಮ ಭಾಗವೇ ಆಗಿರುತ್ತದೆ.  ಅದು ಅಂತಿಮ ಭಾಗವಾಗಿರುವುದರಿಂದಲೇ ಫೈನಲ್ ಪಂದ್ಯಾಟದಂತೆ ಅದಕ್ಕೆ ಹೆಚ್ಚು ಮೌಲ್ಯವು ಪ್ರಾಪ್ತವಾಗಿರುವುದು.  ಪ್ರತಿಯೊಬ್ಬ ನ್ಯಾಯವಾದಿಯೂ ತನ್ನಲ್ಲಿಗೆ ಬರುವ ಕಕ್ಷಿಗಾರರಿಗೆ ನ್ಯಾಯವೊದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಯೇ ಮಾಡಿರುತ್ತಾನೆ. ಆ ಪ್ರಯತ್ನಗಳೆಲ್ಲಾ ಫಲಕೊಡದೆ ಹಳ್ಳ ಹಿಡಿದಾಗಲೇ ನ್ಯಾಯಾಲಯಗಳ ಮೇಟ್ಟಿಲೇರುವ ಸಲಹೆಯನ್ನು ಕಕ್ಷಿಗಾಗರಿಗೆ ಸಹೃದಯಿ ನ್ಯಾಯವಾದಿ ಅನಿವಾರ್ಯವಾಗಿ ಮಾಡುತ್ತಾನೆ. ಹಾಗೆ ಮಾಡುವುದು  ಕಕ್ಷಿಗಾರರ ಹಿತದೃಷ್ಟಿಯಿಂದಲೂ, ನ್ಯಾಯದೃಷ್ಟಿಯಿಂದಲೂ ನ್ಯಾಯವಾದಿಗೆ ಧರ್ಮವೇ ಆಗಿದೆ. ಗಂಗೆಯಲ್ಲಿ ಸ್ನಾನ ಮಾಡಿ ಸುಚಿರ್ಭೂತನಾಗಿ ಮಡಿಯುಟ್ಟು ಕಾಶಿಯ ವಿಶ್ವನಾಥನ ದೇಗುಲವನ್ನು ಪ್ರವೇಶಿಸುವ ಶಿವ ಭಕ್ತನಂತೆ ಕಕ್ಷಿಗಾರ ವಕೀಲರ ಕಚೇರಿಯೆಂಬ ಗಂಗೆಯಲ್ಲಿ ಮಿಂದು ನ್ಯಾಯಾಲಯವನ್ನು ಪ್ರವೇಶಿಸುತ್ತಾನೆ. ನ್ಯಾಯ ಪಡೆಯುವ ಏಕೈಕ ಉದ್ದೇಶದಿಂದ ನ್ಯಾಯಾಲಯಗಳ ಮೆಟ್ಟಿಲೇರುವ ನ್ಯಾಯದೇವತೆಯ ಪರಮ ಭಕ್ತರೇ ಕಕ್ಷಿಗಾರರು. ಹಾಗಿರುವಾಗ ಕಕ್ಷಿಗಾರರಾಗಲಿ, ವಕೀಲರುಗಳಾಗಲಿ, ಕೊನೆಯಲ್ಲಿ ಉನ್ನತ ಸ್ಥಾನದಲ್ಲಿ ಕುಳಿತಿರುವ ನ್ಯಾಯಾಧೀಶರೇ ಆಗಲಿ ಅವರೆಲ್ಲರ ಮನಸ್ಸು ತುಡಿಯುವುದು ಶುದ್ಧವಾದ, ಪವಿತ್ರವಾದ ನ್ಯಾಯಕ್ಕಾಗಿಯೇ ಹೊರತು ಬೇರೆ ಇನ್ಯಾವುದೋ ಗಳಿಕೆಗಾಗಿ ಅಲ್ಲ ಅಂತ ತಿಳಿದು ಯೋಚಿಸಿ ಹೆಜ್ಜೆಯಿಡಬೇಕಾಗಿರುವುದು ಅನಿವಾರ್ಯ.  ಆ ನಿಟ್ಟಿನಲ್ಲಿ ಎದೆಯೊಳಗೂ ಹೊರಗೂ ಒಂದಷ್ಟು ಬದಲಾವಣೆಗಳನ್ನು ತಂದುಕೊಳ್ಳಬೇಕಾದ ಅನಿವಾರ್ಯತೆ, ಅವಶ್ಯಕತೆ ನಿಜವಾಗಿಯೂ ಇದೆ ಎಂಬುದು ಪ್ರಸ್ತುತ ವಿದ್ಯಾಮಾನವನ್ನು ಅವಲೋಕಿಸಿದಾಗ ತಿಳಿದವರಿಗೆ ವೇದ್ಯವಾಗುತ್ತದೆ. ಆ ಬಗ್ಗೆ ಹೆಚ್ಚಿನ ವಿವರಣೆಯನ್ನು ಕೊಟ್ಟು ತಿಳಿಯಾಗಿರುವ ಸರೋವರಕ್ಕೆ ಕಲ್ಲು ಹೊಡೆದು ಸರೋವರದ ನೀರನ್ನು ಪೂರ್ತಿ ಕೆಸರಾಗಿಸಲು ನನ್ನ ಮನಸ್ಸು ಕೇಳುತ್ತಿಲ್ಲ. 

(ಇನ್ನೂ ಇದೆ)

-“ಮೌನಮುಖಿ” (ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ, ಉಡುಪಿ)

ಚಿತ್ರ ಕೃಪೆ: ಇಂಟರ್ನೆಟ್ ತಾಣ