ನ್ಯಾಯದ ದಂಡ ನೇರ - ಸಮಾನಾಂತರ ಮತ್ತು ನಿಷ್ಠುರವಾಗಿರಬೇಕು...
ಆ ನ್ಯಾಯದ ದಂಡದ ಪ್ರಕಾರ ಅಮೃತ ಮಹೋತ್ಸವ ಹೆಸರಿನ " ಸಿದ್ದರಾಮೋತ್ಸವ " ಕ್ಕೆ ಇಷ್ಟು ಆಡಂಬರದ ಅವಶ್ಯಕತೆ ಇರಲಿಲ್ಲ. ಅದು ಖಾಸಗಿಯಾಗಿಯೇ ಆಗಿರಲಿ, ಸಾರ್ವಜನಿಕವಾಗಿಯೇ ಆಗಿರಲಿ ಇಂದಿನ ಸಂದರ್ಭದಲ್ಲಿ ಆ ಅದ್ದೂರಿತನ ಬೇಕಿರಲಿಲ್ಲ.
ಹೌದು, ರಾಜಕೀಯವಾಗಿ ಅಥವಾ ಇಂದಿನ ಅಧಿಕಾರ ಕೇಂದ್ರಿತ ಶಕ್ತಿ ಪ್ರದರ್ಶನದ ಸಂದರ್ಭದಲ್ಲಿ ಅಥವಾ ಇತರೆ ಅನೇಕ ರಾಜಕಾರಣಿಗಳ ಈ ರೀತಿಯ ಉತ್ಸವಗಳ ಆಚರಣೆಗಳ ದೃಷ್ಟಿಯಿಂದ ಇದನ್ನು ಸಮರ್ಥಿಸಿಕೊಳ್ಳುವವರಿಗೆ ಉತ್ತರಿಸುವುದು ಕಷ್ಟ.
ಆದರೆ ಸಾಮಾಜಿಕವಾಗಿ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲು ಯಾವುದೇ ಹಿಂಜರಿಕೆ ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಂಡಿತವಾಗಿ ಒಬ್ಬ ದಕ್ಷ ಪ್ರಗತಿಪರ ಮತ್ತು ಶೋಷಿತರ ಪರವಾಗಿ ಧೈರ್ಯವಾಗಿ ಧ್ವನಿ ಎತ್ತುವ ರಾಜಕೀಯ ನಾಯಕರು. ಸಮಾಜವಾದಿ ಹಿನ್ನೆಲೆಯ ಸೂಕ್ಷ್ಮ ರಾಜಕಾರಣಿ. ಈ ಹಂತದಲ್ಲಿ ಅವರ ಜವಾಬ್ದಾರಿ ಇತರರಿಗಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ. ಅದನ್ನು ಸರಿಯಾಗಿ ನಿಭಾಯಿಸದಿದ್ದರೆ ಮುಂದಿನ ದಿನಗಳಲ್ಲಿ ಮೌಲ್ಯಗಳ ಬಗ್ಗೆ ಮಾತನಾಡುವುದು ಕಷ್ಟವಾಗುತ್ತದೆ.
ಏಕೆಂದರೆ ಈ ರೀತಿಯ ಆಚರಣೆಗಳ ಸುತ್ತಾ ಜಾತೀಯತೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರದ ಮೋಹ, ವ್ಯಕ್ತಿ ಪೂಜೆ ಎಲ್ಲವೂ ಬಲಗೊಳ್ಳುತ್ತದೆ. ಇದು ಶಕ್ತಿ ಪ್ರದರ್ಶನದ ಹಳೆಯ ವಿಧಾನ ಮತ್ತು ಮಾಧ್ಯಮಗಳು ಇದನ್ನು ತಿರುಚುತ್ತವೆ. ವಾಸ್ತವವಾಗಿ ಯುವ ಜನಾಂಗ ಸರಳತೆಯ ಪರವಾಗಿ ಮಾತನಾಡತೊಡಗಿದೆ. ಸ್ವಚ್ಛ ಮತ್ತು ಪ್ರಾಮಾಣಿಕತೆಯನ್ನು ಬಯಸತೊಡಗಿದೆ. ಆಡಂಬರದ ಬಗ್ಗೆ ಅಸಹನೆ ಮೂಡುತ್ತಿದೆ. ಇದನ್ನು ಸೂಕ್ತವಾಗಿ ಗಮನಿಸಬೇಕು.
ಸರಳತೆಯ ಹೆಸರಿನಲ್ಲಿ ಮುಖವಾಡಗಳು ಇದರ ಪ್ರಯೋಜನ ಪಡೆಯುತ್ತಿರುವಾಗ ನೈಜ ಸರಳತೆ ನಿಧಾನವಾಗಿಯಾದರೂ ಜನರನ್ನು ತಲುಪುತ್ತದೆ. ನಮ್ಮನ್ನೆಲ್ಲಾ ಆಕ್ರಮಿಸಿಕೊಂಡಿರುವ ಬಹುದೊಡ್ಡ ಕೊಳ್ಳುಬಾಕ ಸಂಸ್ಕೃತಿಯ ಕಾರ್ಪೊರೇಟ್ ಆಡಳಿತಕ್ಕೆ ಅಷ್ಟೇ ದೊಡ್ಡ ಮಟ್ಟದ ಪ್ರತಿರೋಧ ಶಕ್ತಿ ಇರುವುದು ಆಡಂಬರದಲ್ಲಿ ಅಲ್ಲ. ಪ್ರೀತಿ ಮತ್ತು ಸರಳತೆಯಿಂದ ಮಾತ್ರ ಇದು ಸಾಧ್ಯ.
ಕರ್ನಾಟಕದ ಬಜೆಟ್ ಗಾತ್ರ ಸುಮಾರು 2.5 ಲಕ್ಷ ಕೋಟಿ. ಆದರೆ ಭಾರತದ ಕೆಲವು ಉದ್ಯಮಿಗಳು 5-6-7-8 ಲಕ್ಷ ಕೋಟಿಗಳ ವ್ಯವಹಾರ ನಡೆಸುತ್ತಿದ್ದಾರೆ. ಅವರು ಮಾಧ್ಯಮಗಳು ಧಾರ್ಮಿಕ ಸ್ಥಳಗಳು, ಶಿಕ್ಷಣ, ಆರೋಗ್ಯ, ಕೃಷಿ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿದ್ದಾರೆ. ಇಡೀ ಭಾರತದ ಜನಜೀವನವನ್ನು ವ್ಯಾಪಾರೀಕರಣಗೊಳಿಸಿ ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿದ್ದಾರೆ. ಮಾನವೀಯ ಮೌಲ್ಯಗಳನ್ನು ನಾಶ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿರೋಧವನ್ನು ಪ್ರೀತಿ ಸರಳತೆ ಮತ್ತು ಸತ್ಯದ ನೆಲೆಯಲ್ಲಿ ಒಡ್ಡಬೇಕೆ ಹೊರತು ಜಾತಿ ಅಥವಾ ಹಣ ಬಲದಿಂದ ಅಲ್ಲ ಮತ್ತು ಅದು ಸಾಧ್ಯವೂ ಇಲ್ಲ.
ಭಾರತದ ಸ್ವಾತಂತ್ರ್ಯ ಚಳವಳಿ, ಜೆಪಿ ಚಳವಳಿ, ಬಂಡಾಯ ಚಳವಳಿ, ರೈತ ಚಳವಳಿ, ಗೋಕಾಕ್ ಚಳವಳಿ ಮುಂತಾದವು ಹಣ ಮತ್ತು ಜಾತಿ ಕೇಂದ್ರಿತ ಚಳವಳಿಗಳಲ್ಲ. ಅದು ಸಾಮಾನ್ಯ ಜನರ ಸಾಮುದಾಯಿಕ ಪ್ರಜ್ಞೆಯ ಜಾಗೃತ ಚಳವಳಿಗಳು.
ಇದಕ್ಕೆ ಬಲವಾದ ಮತ್ತು ಆಳವಾದ ತಾತ್ವಿಕ ಚಿಂತನೆಗಳ ಮತ್ತು ನಡವಳಿಕೆಗಳ ಬಲ ಬೇಕಾಗುತ್ತದೆ. ಇದಕ್ಕೆ ದೀರ್ಘ ಸಮಯವೂ ಬೇಕಾಗುತ್ತದೆ. ಬಹುಶಃ ಇವತ್ತಿನ ದಿನಗಳು ಆ ಸಂಘರ್ಷಕ್ಕೆ ಒಂದು ಅವಕಾಶ ಸೃಷ್ಟಿಸುತ್ತಿದೆ. ಇಂತಹ ಸಮಯದಲ್ಲಿ ಈ ರೀತಿಯ ಉತ್ಸವಗಳು ಅಡ್ಡಿಯಾಗಬಹುದು. ಇದೇ ಕಾರ್ಯಕ್ರಮವನ್ನು ಸರಳವಾಗಿ ಹಾಗೆಯೇ ಇಡೀ ರಾಜ್ಯಾದ್ಯಂತ ಮತದಾರರ ಜಾಗೃತ ಚಳವಳಿಯಾಗಿ ಮಾರ್ಪಡಿಸಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು.
75 ವಸಂತಗಳ ಒಬ್ಬ ವ್ಯಕ್ತಿಯ ಬದುಕು, ಸುಮಾರು 40 ವರ್ಷಗಳ ರಾಜಕೀಯ ಮತ್ತು ಅಧಿಕಾರ ಕೇಂದ್ರಿತ ಜೀವನ, ಲಕ್ಷಾಂತರ ಜನರ ಪ್ರೀತಿ ಗೌರವ, ಒಂದು ಬೃಹತ್ ರಾಜ್ಯದ ಮುಖ್ಯಮಂತ್ರಿ ಎಲ್ಲವನ್ನೂ ಪಡೆದ ಸಿದ್ದರಾಮಯ್ಯನವರಿಗೆ ತುಂಬು ಹೃದಯದಿಂದ ಅಭಿನಂದನೆಗಳು.
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ